ಮನಸ್ಸು ಎರಡನೇ ಸಾರಿ ವಾರ್ನ್ ಮಾಡ್ತು : ‘ ಬೇಡ ಮಗ ಕೆರ ಕಳ್ಕೊಂಡು ಹೊಡಿತಾಳೆ. ’

‘ನೋಡೋಣ ಬಿಡು. ಯಾರಿಗಾದ್ರೂ ಏನನ್ನಾದ್ರೂ ಹೇಳಬೇಕು ಅಂತಿದ್ರೆ, ಹೇಳಿಬಿಡಬೇಕು.
ಲೈಫಲ್ಲಿ ರಿಗ್ರೆಟ್ ಇರಬಾರದು. ನಾನೇನು ಅವಳಿಗೆ i love you ಅಂತ ಹೇಳ್ತಾ ಇಲ್ವಲ್ಲಾ.
ಒಳ್ಳೇದು ಕೆಟ್ಟದ್ದು ಅಂತ ತಾಳ-ಮೇಳ ನೋಡ್ತಾ ಇದ್ರೆ… ಲೂಸರ್ ಆಗಿ ಬಿಡ್ತೇನೆ’

ಹಂಗಾದ್ರೆ ಹೇಳೋದಾದರೂ ಏನು…? ಏನಿಲ್ಲ, ‘ You are Beautiful ’ ಅನ್ನೋದು.
ಹೆಚ್ಚು ಕಮ್ಮಿ!! ಏನ್ ಹೇಳೋದಕ್ಕೆ ಸಾಧ್ಯ..?

ತುಂಬಾ ಸುಂದರವಾಗಿ ಕಾಣ್ತಾಳೆ. infact ಸುಂದರವಾಗೀನೆ ಇದಾಳೆ. ಯಾವತ್ತೋ ಒಂದಿನ
ಎದುರಿಗೆ ಕಾಣಿಸಿಕೊಂಡು, ಸುಯ್ಯಂತ ಹೊರಟು ಹೋಗಿದ್ರೆ, ‘ಅಬ್ಬಾ!! ಏನ್ ಹುಡ್ಗಿ’ ಅಂತ
ಅಂದು ಸುಮ್ಮನಾಗಿ ಬಿಡಬಹುದಿತ್ತು. ಆದರೆ ಅವಳು ದಿನಾ ನಾಲಕ್ಕು ವರೆಗೆ ಸರಿಯಾಗಿ,
ಕೆಫೆಟೇರಿಯಾದಲ್ಲಿ ಕಾಣಿಸಿಕೊಳ್ತಾಳೆ. ಅಲ್ಲಿ ಇಬ್ಬರು ದಡಿಯ ಬಾಡಿ-ಗಾರ್ಡ್ ಗಳು
ಅವಳಿಗೋಸ್ಕರ ಕಾಯ್ತಾ ಇರ್ತಾರೆ. ಆ ಅಂಥವಳು ಕಾಫಿ ಕುಡಿಯೋವರೆಗೂ, ‘ಒನ್ ಓ ಕ್ಲಾಕ್ ‘
ಡೈರೆಕ್ಷನ್ ಗೆ ಚೇರ್ ಎಳೆದು, ಕೂತು ಅವಳನ್ನ ನೋಡ್ತೇನೆ. ಖುಷಿ ಅಂತೂ ಆಗತ್ತೆ. ತಾನು
ಇಷ್ಟು ಸುಂದರವಾಗಿರೋದು ಗೊತ್ತಿರಬಹುದು. ಆದರೆ ಅದನ್ನ, ಅವಳಿಗೆ ಅಷ್ಟೇ ಸುಂದರವಾಗಿ
ಯಾರೂ ಹೇಳಿರಬಾರದು. ಹಂಗೆ ಹೇಳಬೇಕು. ಹೇಳಲಿಲ್ಲ ಅಂದ್ರೆ ಹೇಳಬಹುದಿತ್ತಲ್ಲಾ, ಅನ್ನೋ
ಗುಂಗು ಗುಂಗಾಗಿಯೇ ಇದ್ದುಬಿಡತ್ತೆ.

ಸರಿ, ಹೇಳೋದಾದ್ರೂ ಏನು. ಅದೇ ಅಂದುಕೊಂಡಾಗಿದೆಯಲ್ಲ ‘You are Beautiful >>>>
You are one of the most beautiful girl, I had ever seen in my life.
Thanks for being beautiful. Thank you so much for making my day. ’

ಈ ಡಬ್ಬ ಇಂಗ್ಲೀಷು ಬೇಕಾ..? ಇರ್ಲಿ


ಮರುದಿನ, ODC(Offshore Development Center) ಇಂದ ಕೆಫೆಟೇರಿಯಾಗೆ ಹೋಗಿ, ಎಂದಿನಂತೆ
ಚೇರು ಎಳೆದುಕೊಂಡು ಕುಳಿತೆ. ಅವಳು ಬರುವಾಗ ಹೇಳೋಣ ಅಂದುಕೊಂಡೆನಾದರೂ… ‘ಬೇಡ!! ಬೇಡ!!
ಹೋಗೋವಾಗ ಹೇಳೋಣ’ ಅನ್ನಿಸ್ತು. ಅಯ್ಯಾ ಇದೇ ರೀತಿ ಎಷ್ಟು ದಿನ ಅಂದುಕೊಂಡಿಲ್ಲ. ಬರುವಾಗ
ಅಥವಾ ಹೋಗುವಾಗ ಅನ್ನೋ ಮನಸ್ಸಿನ excuse ಗಳ ಮಧ್ಯೆ ಅವಳು ಹೋಗಿಯೇ ಬಿಟ್ಟಿರ್ತಾಳೆ.
ಇದಕ್ಕೆ ಧೈರ್ಯ ಬೇಕು ಅನ್ನಿಸ್ತು. ಮ್ಯಾನೇಜರ್ ಹತ್ರ ಒಂದ್ ವೀಕ್ ರಜ ಕೇಳೋವಾಗ್ಲು
ಇಷ್ಟು ಭಯ ಆಗಿರ್ಲಿಲ್ಲ.

ಅವಳು ಹೊರಟಳು. ಇವತ್ತು ಬಿಟ್ಟರೆ, ಯಾವತ್ತೂ ಇಲ್ಲ ಅನ್ನಿಸ್ತು. ಹಿಂಬಾಲಿಸಿಕೊಂಡು
ಹೋದೆ. ಆ ಬಾಡಿಗಾರ್ಡುಗಳು ಅವಳನ್ನು ಬಿಟ್ಟು ದೂರ ಹೋಗುವ ಲಕ್ಷಣಗಳು ಕಾಣಿಸಲೇ ಇಲ್ಲ.
‘excuse me’ ಅಂದುಬಿಟ್ಟೆ. ಬಾಡಿ ಗಾರ್ಡುಗಳನ್ನು ಬಿಟ್ಟು. ಆಕೆ ಎರಡು ಹೆಜ್ಜೆ ಹಿಂದೆ
ಬಂದಳು.

ಹೇಳಬೇಕು ಅಂದುಕೊಂಡಿದ್ದನ್ನೆಲ್ಲಾ ಒಂದೇ ಗುಕ್ಕಿಗೆ(ಗುಟಿಕಿಗೆ)ಹೇಳಿದೆ. ಎರಡು ಕಂಗಳ
ದೃಷ್ಟಿ, ಮೂಗಿನ ನೇರಕ್ಕೆ ಹಾದು ಹೊರಬಂದಿತ್ತು. ಅದನ್ನ ಮುನಿಸು ಅನ್ನಬಹುದು ಅಥವಾ
ಆಗಿರುವ ಅಲ್ಪ ಸ್ವಲ್ಪ ಖುಷಿಯನ್ನ ತೋರಿಸಿಕೊಳ್ಳದೇ ಇರೋ ಮುಖಸ್ಥಿತಿ ಅನ್ನಬಹುದು.
ಸರಿಯಾಗಿ ಗೊತ್ತಾಗಲಿಲ್ಲ. ಅಗೇನ್ ಹೇಳ್ದೆ

‘you are beautiful. ’

ಅವಳ ತೋರಿಕೆಯ ಕೋಪ, ಮುಂದುವರೆಲಿಲ್ಲ. ಬಾಯಿ ಬಿಗಿ ಹಿಡಿಯಲೂ ಆಗದೆ, ಹೊಡೆದು ಬಂತೊಂದು
ನಗು. ನಕ್ಕಳು. ನಗ್ತಾನೆ ಇದ್ದಳು. ಅದರಲ್ಲಿ ನಗೋ ಅಂತದ್ದು ಏನಿತ್ತೋ, ಗೊತ್ತಾಗಲಿಲ್ಲ.
ಕಾಮೆಡಿ ಆಗೋಯ್ತು ನಮ್ ಲೈಫು. ಯು ಟರ್ನ್ ಮಾಡಿ, ತಿರುಗಿಯೂ ನೋಡದೆ ಹೊರಟುಬಿಟ್ಟೆ.
ಒಂದಷ್ಟು ದೂರ ಹೋದ ಮೇಲೆ ಮತ್ತೆ ವಾಪಾಸಾದೆ.

‘ಆ ದೇವರು ಯಾವುದೇ ಚೌಕಾಸಿ ಮಾಡದೆ, ನಿನ್ನನ್ನ ಇಷ್ಟು ಸುಂದರವಾಗಿ ಸೃಷ್ಟಿ ಮಾಡಿ
ಕಳಿಸಿದ್ದಾನೆ. ಆದರೆ ನಿನ್ನ ಅಪ್ಪ ಅಮ್ಮ, ನಿನಗೆ ಅಷ್ಟೇ ಸುಂದರವಾದ ಹೆಸರನ್ನ ಹುಡುಕಿ
ಇಟ್ಟಿರ್ತಾರೆ ಅನ್ನೋದನ್ನ, ನಾನು ನಂಬೋದಿಲ್ಲ. ಆದರೂ ಏನಾದರೂ ಒಂದು ಇರಲೇಬೇಕಲ್ಲ. ’
ಇಷ್ಟು ಹೇಳಿ ಅವಳ ಮುಖ ನೋಡುತ್ತಾ ನಿಂತೆ. ಇದು script ನಲ್ಲಿ ಇರಲಿಲ್ಲ.

ಪ್ರಶ್ನಾರ್ಥಕ ಭಾವದಲ್ಲಿ‌ ‘ಅದೇನ್ ಕೇಳ್ತದಿಯೋ. ಮಗನೆ’ ಅನ್ನುವಂತೆ ನೋಡಿದಳು.

‘ನಿನ್ನ ಹೆಸರು’ ಅಂದೆ

ಸ್ವಲ್ಪ ಪಾಜ್ ಕೊಟ್ಟು ‘ಹರಿಣಿ ’ ಅಂದಳು.

ಅವಳ ಧ್ವನಿಯಿಂದ ಮೊದಲನೇ ಸಾರಿ ಬಂದ ಶಬ್ಧ. ಅದು ನನಗಾಗಿ ಬಂದದ್ದು . ಹರಿಣಿ ಅಂದರೆ
ಹೆಣ್ಣು ಜಿಂಕೆ. ಅಲ್ಲ ಅದು ಹರಿಣ. ಏನೋ ಒಂದು. ಮತ್ತೆ ಯು ಟರ್ನ್. ಮುಖ ಮೂತಿ ನೋಡದೆ.
ಓಡಿದ್ದಾಯ್ತು.


ಎರಡು ದಿನಗಳ ಮೇಲೆ ಮತ್ತೆ ಸಿಕ್ಕಳು. ಅಂದ್ರೆ ಅವಳಿಗೆ ನಾನು ಸಿಕ್ಕೆ. ‘Who are you’
ಅಂದಳು. ನಿನ್ನ ಹೆಸರು ಏನು ಅಂತ ಕೇಳಿದ್ದಿದ್ದರೆ ‘ನನ್ನ ಹೆಸರು ಚೇತನ’ ಅಂತ ಸಲೀಸಾಗಿ
ಹೇಳಿಬಿಡುತ್ತಿದ್ದೆ. ಆದರೆ ಈ ‘Who are you’ ಅನ್ನೋದು ನನಗೆ ನಾನೇ ತುಂಬಾ ಸಾರಿ
ಕೇಳಿಕೊಂಡು ಮುಜುಗರಕ್ಕೆ ಒಳಗಾದ ಪ್ರಶ್ನೆ. ಅದಕ್ಕೆ ನನ್ನ ಬಳಿ ಈಗಲೂ ಉತ್ತರವಿಲ್ಲ.
ನನ್ನ ನಿಶ್ಯಬ್ಧವನ್ನು ಸಹಿಸಲಾಗದೇ ಅವಳೇ ಮುಂದುವರೆದಳು -

‘ನಿನ್ ಹೆಸರೇನು..? ಅಂತ ಕೇಳಿದ್ರು; ಯಾರು ನೀ.. ಅಂತಲೂ ಹೇಳ್ದೆ ಓಡಿಬಿಟ್ಟೆ ’

ಮುಚ್-ಕೊಂಡು ಹೆಸರು ಹೇಳಬಹುದಿತ್ತು. ಆದರೂ ಪಂಚ್ ಗಳು - ‘ತಾಜ್ ಮಹಲ್ ನೋಡೋದಕ್ಕೆ
ಹೋದವರ ಹೆಸರು, visitors directory ನಲ್ಲಿ ಸಾವಿರ ಇರತ್ತೆ. ಅದನ್ನ ಕಟ್ಟಿಕೊಂಡು
ತಾಜ್ ಮಹಲ್ ಗೆ ಏನಾಗಬೇಕು.’ ಅಂದೆ. ಎಶ್ಟೋ ಸಾರಿ ನನ್ನ ಮಾತುಗಳು; ನನಗೇ ಸರಿಯಾಗಿ ಅರ್ಥ
ಆಗಿರಲ್ಲ. ಆದರೆ ಅವಳು ಬಹಳ ಬೇಗ ಕ್ಯಾಚ್ ಮಾಡಿದ್ಲು. ಪಟಾರ್ ಅನ್ನೋ ನಗು.
ನಗುತ್ತಿದ್ದಳು. ನಗ್ತಾನೆ ಇದ್ದಳು.

‘By any chance, Do you love me. ? ’ ಪ್ರಶ್ನಾರ್ಥಕ ಭಾವದಲ್ಲಿ ಕೇಳಿದರೂ,
ಅಂತದ್ದೆಲ್ಲ ಇದ್ರೆ, ಸೀ. ನೆ ಇಲ್ಲ ಅನ್ನೋ ಹಂಗಿತ್ತು ಟೋನು. Obviously ಅದು
ಕೇಳಬೇಕಾದ ಪ್ರಶ್ನೆಯೇ.. ನಾನೂ ಕ್ಲಾರಿಫೈ ಮಾಡಿದೆ.

‘ಇಲ್ಲ ನನಗೆ ಮಾತ್ರ ಅಲ್ಲ. ನಿನ್ನ ಲವ್ ಮಾಡೋದಕ್ಕೆ ಆಗಲಿ ಅಥವಾ ಮದುವೆ ಆಗೋದಕ್ಕೆ
ಆಗಲಿ; ಯಾರಿಗೂ ಅರ್ಹತೆ ಇಲ್ಲ. ’

‘ವಾಟ್ ಈಸ್ ರಾಂಗ್ ವಿಥ್ ಮಿ ’ ಅಂದಳು. ಅದಕ್ಕೆ ಹೇಳೋದು; ಸುತ್ತಿ ಬಳಸಿ ಮಾತಾಡಬಾರದು
ಅಂತ. ವಿವರವಾಗಿ ಹೇಳಿಲ್ಲ ಅಂದ್ರೆ, ಇವಳಿಗೆ ಅರ್ಥ ಆಗಲ್ಲ ಅನ್ನಿಸ್ತು.

‘ನನ್ನ ಮಾತಿನ ಅರ್ಥ; ನೀನು ಪ್ರಿನ್ಸಸ್ ರಾಜಕುಮಾರಿ ಅಂತ. ಆ ಬ್ರಹ್ಮ ನಿನ್ನನ್ನ ಸೃಷ್ಟಿ
ಮಾಡಿರೋದೆ ನಗಾಡ್ಕೊಂಡು, ಓಡಾಡ್ಕೊಂಡು ಖುಷ್ ಖುಷಿಯಾಗಿ ಇರಲಿ ಅಂತ. ಅಷ್ಟೇ!!. ಯಾರಿಗೋ
ಕುತ್ತಿಗೆ ಕೊಟ್ಟು, ಸಂಸಾರ ಮಾಡೋದು; ಮಕ್ಕಳನ್ನ ಹೇರೋದು; ಫ್ಯಾಮಿಲಿ; ಕರ್ಮಕಾಂಡಗಳು.
ಇದು ನ್ಯಾಯವಾಗಿಯೇ ಇರಬಹುದು. ಆದರೆ ನಿನ್ನನ್ನ ಆ ರೀತಿ imagine ಮಾಡ್ಕೊಳೋದು ಕಷ್ಟ
ಆಗತ್ತೆ. ಡಿಸ್ನಿ ಲೋಕ ಅನ್ನೋದೇನಾದ್ರು ಇದ್ದರೆ, ಸ್ಪೀಡ್ ಪೋಸ್ಟಲ್ಲಿ ಕಳಿಬಹುದಿತ್ತು.
ನೀನು ಅಲ್ಲಿ ಸಲ್ಲುವವಳು. ’ ನನ್ನ ಮೊದಲ ಸಾಲಿನಿಂದಲೇ ಅವಳು ನಗೋದಕ್ಕೆ
ಪ್ರಾರಂಭಿಸಿದ್ದಳು. ಮತ್ತೆ ಶೇಪ್ ಔಟು.


ಆ ಕೆಫಿಟೇರಿಯಾದ ಆಚೆ; ಅವಳ ಪ್ರಪಂಚ ಏನಿದೆಯೋ ನನಗೆ ಗೊತ್ತಿರಲಿಲ್ಲ. ಹಾಗೇನೆ, ನನ್ನ
ಪ್ರಪಂಚ ಏನು ಅನ್ನೋದು; ಅವಳಿಗೂ ಗೊತ್ತಿರಲಿಲ್ಲ. ದಿನದ ಈ ಹತ್ತು-ಹದಿನೈದು ಅಥವಾ
ಇಪ್ಪತ್ತು ನಿಮಿಷಗಳು ಅಪ್ಯಾಯಮಾನ ಅನ್ನಿಸುತ್ತಿದ್ದವು.

‘ನಿನ್ನ waist ಸೈಜು ಥರ್ಟಿನಾ? ’ ಅಂತ ಕೇಳಿದಳು.

‘ಹೌದು!! ಸ್ಟಾರ್ಟಿಂಗ್ ನಂಬರ್ ಅದು ಅನ್ಸತ್ತೆ. ಯಾಕ್ ಕೇಳ್ದೆ ? ‘ಅಂದೆ. ಅದಕ್ಕವಳು
ಪ್ಯಾಂಟಿನ ಹಿಂಬದಿ ತೋರಿದಳು. ಹೊಸ ಜೀನ್ಸು ಪ್ಯಾಂಟಿಗೆ, ಅಂಟಿಸಿದ್ದ 30 ಸ್ಟಿಕ್ಕರ್
ಹಾಗೇ ಇತ್ತು. ಯಾರೂ ಗಮನಿಸಿರಲಿಲ್ಲವೋ ಅಥವಾ ಗಮನಿಸಿದರೂ ನನಗೆ ಹೇಳಿರಲಿಲ್ಲವೋ.ಇವಳು
ಅದಕ್ಕೂ ನಗ್ತಾನೆ ಇದ್ದಳು. ಅದರಲ್ಲಿ ನಗೋ ಅಂತಾದ್ದು ಇತ್ತು.

‘ ನೀನು ನಗೋದು ಅಷ್ಟು ಜೋರಾಗಿ ಕೇಳುಸ್ತಾ ಇದ್ದರೂ ಕೂಡ, ನೋಡೋದಕ್ಕೆ ಸ್ಲೋ
ಮೋಷನ್ನಲ್ಲಿ; ಇನ್ನೂ ನಗ್ತಾನೆ ಇದಿಯ ಅನ್ನಿಸ್ತಿದೆ. ಆಡಿಯೋ ಮತ್ತು ವೀಡಿಯೋ ಸಿಂಕ್
ಆಗ್ತಿಲ್ಲ. ನನ್ನ ಕಾನ್ಷಿಯಸ್ಸೇ ಆಚೆ -ಈಚೆ ಆಗಿದಿಯಾ ಅಥವಾ ನೀನು ನಗೋದೆ ಹೀಗೆನಾ …? ’

‘I am not weird. ’ ಅಂದಳು.

‘ವಿಯರ್ಡ್ ಅಂತಲ್ಲ. ಅದೇನೊ ವಿಚಿತ್ರ. ಸರಿ!! ಇನ್ನೊಂದು ಸಾರಿ ನಗು. ನಿನ್ನ ಆ ಬಾಡಿ
ಗಾರ್ಡ್ ಗಳಿಗೂ ಕೇಳ್ತೇನೆ. ಅವರಿಗೂ ನನಗೆ ಅನ್ನಿಸಿದ ಹಂಗೆ ಅನ್ನಿಸಿಲ್ಲ ಅಂದರೆ,
ನನ್ನಲ್ಲೇ ಏನೋ ಸಮಸ್ಯೆ ಇರ್ಬೇಕು. ’

‘ ನೀನೂ ಸರಿಯಾಗಿಯೇ ಇದಿಯಾ. ಮತ್ತೆ ಅವರು ನನ್ನ ಫ್ರೆಂಡ್ಸ್, body-guards ಗಳಲ್ಲ ’
ಅಂದಳು ಸ್ವಲ್ಪ ಕೋಪದಲ್ಲಿ. ಆದರೂ ಆ ನನ್ ಮಕ್ಳು body-guards ಗಳ ರೀತಿನೇ ಕಾಣ್ತಾ
ಇದ್ದರು. ಬಲಗಡೆ ಒಬ್ಬ, ಎಡಗಡೆ ಒಬ್ಬ. ಇವಳು ಹೋದಕಡೆಗೆ ಕುರ್ಚಿ ಎಳೆಯೋದು; ಟಿಶ್ಯೂ
ಪೇಪರ್ ತರೋದು; ಆರ್ಡರ್ ಮಾಡೋದು. ಪಾಪ ಒಳ್ಳೆಯವರೇ ಇರಬೇಕು. ಆದರೆ ಅವರ ಡ್ರೆಸ್ ಗಳು,
ಕುತ್ತಿಗೆಯಲ್ಲಿ ಟೈ…. ಅಯ್ಯೋ ಕೈಗೊಂದು ಮಿಷನ್ ಗನ್ ಕೊಟ್ರೆ, ಥೇಟು ಸೆಕ್ಯುರಿಟಿ
ಏಜೆಂಟ್ ಗಳೇ. ಹೌದೌದು ಪ್ರಿನ್ಸಸ್ ಗೆ ಇದೆಲ್ಲಾ ಇರಬೇಕಾದದ್ದೇ. ಆದರೆ ಅದೇನೊ
ಗೊತ್ತಿಲ್ಲ; ನನ್ನ ಮಾತು ಪ್ರಾರಂಭ ಆಗ್ತಿದ್ದಂಗೆ, ಅವಳು ನಗೋದಕ್ಕೆ ಶುರು ಮಾಡ್ತಾಳೆ.
ಅದೇನು ಖುಷಿಗೆ ನಗ್ತಾಳೋ, ಹಾಸ್ಯಕ್ಕೆ ನಗ್ತಾಳೋ ಅಥವಾ ನನ್ನನ್ನೇ ಅಪಹಾಸ್ಯ ಮಾಡಿ
ನಗ್ತಾಳೋ.

ನಾನಂತೂ ಫುಲ್ ಎನರ್ಜಿ ತಗೋಂಡು, ಫ್ರಾಂಕಾಗಿ ಹತ್ತಿಸ್ತಿದ್ದೆ. i am lucky ಅನ್ಸತ್ತೆ.
ನಗೂನು ಬರತ್ತೆ. ‘
ಒಂದ್ ಸಾರಿ ಯಾರನ್ನೋ ನೋಡಿದ್ದಕ್ಕೆ, ‘ಹಮ್ ಮ್‌ ಪರವಾಗಿಲ್ಲ. ಬೇರೆ ಬೇರೆಯವರನ್ನು
ಕೆಟ್ಟ ದೄಷ್ಟಿ ಇಟ್ಟು ನೋಡ್ತಿಯ ‘ಅಂದಳು. ನನ್ನ ವಿಷಯದಲ್ಲಿ ಅದೆಂತ ಪೊಸೆಸಿವ್ ನೆಸ್
ಇರೋದಕ್ಕೆ ಸಾಧ್ಯ. ನಾನೊಬ್ಬ ಅಲ್ಪ.

‘ಕೆಟ್ಟ ದೃಷ್ಟಿ ಅಲ್ಲ, ಒಳ್ಳೆ ದೃಷ್ಟಿ ಇಟ್ಟು ನೋಡಿದೆ. ’ ಅಂದೆ.

‘ ಒಟ್ನಲ್ಲಿ ದೃಷ್ಟಿ ಇಟ್ಟು ನೋಡಿದೆ. ’ ಅಂದಳು.

‘ಅಯ್ಯೊ ರಸ್ತೆನಲ್ಲಿ ಸಿಗೋ ದೇವರಿಗೆಲ್ಲಾ, ಎಷ್ಟೇ ನಮಸ್ಕಾರ ಮಾಡಿದ್ರು, ಹಣ್ಣು ಕಾಯಿ
ಹೊಡೆಸೋದು, ಮನೆದೇವರಿಗೆ ತಾನೆ …. ? ’ ಡೈಲಾಗ್ ಏನೋ ಹೊಡೆದೆ. ಆದರೆ ಅದನ್ನ ಅವಳಿಗೆ
ಅರ್ಥ ಮಾಡಿಸೋದ್ರಲ್ಲಿ ಸಾಕಾಗ್ ಹೋಯ್ತು. ಆದರೂ ಸಧ್ಯಕ್ಕೆ ನನ್ನ ಮನದೇವ್ರು ಆಗಿದ್ದಳು
ಅವಳು. ಅವಳನ್ನ ಏಂಜಲ್ ಅನ್ನಬೇಕೋ ಅಥವಾ ನನ್ನ ಅಸ್ತಿತ್ವವನ್ನೇ ‘ಬರಿ ಕನಸು’ ಅಂತ
ಡಿಕ್ಲೇರ್ ಮಾಡಿ, ನಿಶ್ಚಿಂತೆಯಿಂದ ಇದ್ದು ಬಿಡಬೇಕೋ ಗೊತ್ತಾಗ್ತಾ ಇರ್ಲಿಲ್ಲ. ’


‘ ಹೆಣ್ಣಿನ ಸೌಂಧರ್ಯವನ್ನ ಹೊಗಳಬರದು, ಹೊಗಳಬಾರದು, ಹೊಗಳೋಕಾಗದು, ಹೊಗಳಿತೀರದು…

ಆದರೂ ಸ್ವಲ್ಪಾನು ಪಾರ್ಷಿಯಾಲಿಟಿ ಮಾಡದೇ, ಪ್ರಪಂಚದ ಮನಮೋಹಕ ವಸ್ತುಗಳನ್ನ,
ಸೃಷ್ಟಿಗಳನ್ನ ನಿಮ್ಮ ಮುಸುಡಿಗಳ ಜೊತೆ ತಗಲಾಕುತ್ತಲೇ ಬಂದಿದ್ದೇವೆ.

ಅದೇನು ಸೌಂಧರ್ಯ ಅನ್ನೋದು ನಿಮ್ಮಿಂದ ಪ್ರಾರಂಭ ಆಗಿ, ಪ್ರಕೃತಿಯಲ್ಲಿ ಲೀನವಾಗುತ್ತೋ,
ಅಥವಾ ಪ್ರಕೃತಿಯಿಂದ ಮೊದಲುಗೊಂಡು ನಿಮ್ಮ ಕಣ್ಣುಗಳಲ್ಲಿ ಕೊನೆಯಾಗುತ್ತೋ, ಅಥವಾ ನೀವೇ
ಪ್ರಕೃತಿನೋ .?

ಗಂಡಿನ ರಸಿಕತೆ ಅನ್ನೋದನ್ನ, ಕಬ್ಬಿನ ಜಲ್ಲೆ ತರ ಅರೆದು ಅರೆದು ಹೊಗಳಿ, ಬರೆಸಿದ್ದೀರಿ.

ಇನ್ನು ನಿನ್ನನ್ನು ವರ್ಣಿಸೋದಕ್ಕೆ ಹೇಗೆ ಮೊದಲಿಡಲಿ

‘ ಜಿರಾಫೆ ನೆಕ್ಕು ಒಂಟೆ ನೆಕ್ಕು ಅಂತ ಯಾರಾದ್ರು ನಿನ್ನನ್ನ ರೇಗಿಸಿದ್ರೆ, ಖುಷಿ ಪಡು.
ಭುಜದೊಳಗೆ ಹುದುಗಿ ಹೋಗಿರೋದಕ್ಕಿಂತ, ಇಷ್ಟು ಹೊರಗಿರೋದು. ಹಾಯ್ ಅದರ ಚಂದಾನೆ ಚಂದ.
ನಿನ್ನ ಎತ್ತರಕ್ಕೆ ಹೇಳಿ ಮಾಡಿಸಿದಂಗಿದೆ ಭುಜ. ನಿನ್ನ ಕೂದಲುಗಳಿಗೂ ಒಳ್ಳೆ ಸ್ಪೇಸ್.`

‘ ನಿನ್ನ ಕೆನ್ನೆಗೆ ಗುಳಿಗಳು ಇಲ್ಲದೆ ಇರಬಹುದು. ಆದರೆ ಹಾವಭಾವದ ಮಧ್ಯೆ ಗಲ್ಲ ತಂತಾನೆ
ಹಿಂಡಿಕೊಂಡು; ಮಧ್ಯೆ ಒಂದು ಸಣ್ಣ ಕೊರಕಲು ಮೂಡತ್ತಲ್ಲ; ಹುಚ್ಚು ಹಿಡಿಸುವಂತಿದೆ. `

‘ ಹಲ್ಲುಗಳು ಆರ್ಡರ್ ನಲ್ಲಿದ್ದರೆ ದಾಳಿಂಬೆ ಬೀಜಗಳು ಜೋಡಿಸಿಟ್ಟಂತಿವೆ ಅಂತಾರೆ. ಅದೇನೆ
ಇರ್ಲಿ. ಅಪ್ಪಿತಪ್ಪಿ ತಪ್ಪಾಗಿ ಮೇಲೆ ಬೆಳೆದಿರೋ, ಆ ಒಂದೇ ಒಂದು ಅಡಿಷನಲ್ ಕೋರೆಹಲ್ಲು.
ಅಬ್ಬಬ್ಬಾ!! ನೀ ನಗೋವರೆಗೂ ರೆಪ್ಪೆ ಬಡಿಯದ ಹಾಗೆ ಕಾಯುವಂತೆ ಮಾಡತ್ತೆ. ಹಾಗಂತ ಪದೆ ಪದೆ
ನೀನು ನಗಬೇಕು ಅಂತಲೂ ಇಲ್ಲ. ಬಯ್ಯೋದಕ್ಕೆ ಬಾಯಿ ತೆಗೆದರೂ ಸಾಕು.’

‘ ದಪ್ಪಗಿದ್ದು, ಗುಡ್ಡೆ ಹೊರಬರುವಂತಿರೋ ಪ್ರಜ್ವಲ ಕಣ್ಣುಗಳಿಲ್ಲ. ಪರವಾಗಿಲ್ಲ.
ತೆಗೆದಷ್ಟೇ ಮೆತ್ತಗೆ, ಹಾಸಿಗೆ ಮೇಲಿಂದ ಮೈಮುರಿದು ಏಳುವಂತೆ ತೆರೆದುಕೊಳ್ಳುವ ಸೋಮಾರಿ
ರೆಪ್ಪೆಗಳು. ಒಳಗಿರೋದು ಕಪ್ಪೆಚಿಪ್ಪು ಮಧ್ಯದ ಎರಡು ಮುತ್ತುಗಳು ಅಂತ ಹೇಳಬಹುದಾ.? ಇಲ್ಲ
ಬೇಡ. ಅವನ್ನ ಹೊಗಳೋದಕ್ಕೆ, ಕಲ್ಮಶಕಳೆದಿರೋ ಹಾಲು ಹಲ್ಲಿನ ಪುಟ್ಟ ಮಗುವಿಗೆ ಕನ್ನಡ
ಕಲಿಸಬೇಕು. ಅದು ಹೇಳೋದನ್ನ ಕೇಳಿ ಹೇಳಬೇಕು. ಆದರೂ ಕಣ್ಣಿನ ಕೆಳಗಿರೋ ಆ ಊದಿದಂತಹ
ಗುರುತು. ಏನನ್ನಬೇಕು ಅದನ್ನ ಗೊತ್ತಿಲ್ಲ. ಮಲಗಿ ಎದ್ದಾಗ ಮಾತ್ರ ಇರತ್ತೆ ಅದು. ಆದರೆ
ನಿನಗದು ನ್ಯಾಚುರಲ್ ಆಗಿನೇ ಯಾವಾಗಲೂ ಉಳಿದುಬಿಟ್ಟಿದೆ. ಅಷ್ಟು ದಪ್ಪ ಕಾಡಿಗೆ
ಹಚ್ಚಬೇಡವೆ ಹುಡುಗಿ. ಅದನ್ನ ನಿನ್ನ ಕಣ್ಣಿಂದ ಬೇರ್ಪಡಿಸಬೇಡ. ನಿನ್ನ ಕಣ್ಣಿಗೆ ಸೇರಿದ
ಪ್ರಾಪರ್ಟಿ ಅದು.

‘ ನುಣುಪಾದ ಮುಖದ ಮೇಲೆ ಅಲ್ಲೋ ಇಲ್ಲೋ ಒಂದು ಸಣ್ಣ ಮಚ್ಚೆನಾದರೂ ಕಾಣಸಿಗಬಹುದಾ ಅಂತ
ತುಂಬಾ ದಿನ ಹುಡುಕಿದ್ದೇನೆ. ಆದರೆ ಮಚ್ಚೆ ಇರಲಿ, ಒಂದು ಸಣ್ಣ ಕಲೆ ಕೂಡ ಕಾಣಿಸಲಿಲ್ಲ.
ಪರವಾಗಿಲ್ಲ. ’

‘ ನಿನ್ನ ಬಣ್ಣ ಬಿಳಿ, ಎಣ್ಣೆಗೆಂಪು, ಕೆಂದು ಅಂತೆಲ್ಲ ಹೇಳೋದಿಲ್ಲ. ಅದು ನಿನ್ನದೇ
ಬಣ್ಣ. ನಿನ್ನ ಸೌಂಧರ್ಯಕ್ಕೊಂದು ಹೆಸರು ಸಿಕ್ಕ ದಿನ, ಆ ಬಣ್ಣದ ಹೆಸರನ್ನೂ ಹೇಳ್ತೇನೆ. ’

‘ ಚೆನ್ನಾಗಿರೋ ಮೂಗನ್ನೆಲ್ಲಾ, ಸಂಪಿಗೆ ಮೂಗು ಅಂತಾರೆ. ಅದೇನೋ ನನಗೂ ಗೊತ್ತಿಲ್ಲ. ಆದರೆ
ಮೂಗುತಿ ಹಾಕೋ ಹೆಸರಲ್ಲಿ, ಆ ನುಣುಪಿನ ಮೇಲೆ ಬಾವಿ ಮಾತ್ರ ತೊಡಬೇಡ. ಯಾವ ಮುತ್ತಿಗೂ,
ಹರಳಿಗೂ ನಿನ್ನ ನೋಯಿಸುವ ಅಧಿಕಾರ ಇಲ್ಲ. ’

‘ ಏನೋ ಏನೇ ಇರಲಿ. ನಿನ್ನ ನೋಡಿದ ಯಾವೊಬ್ಬ ಅರಸಿಕನಾದರೂ ಮೊದಲು ಗಮನಿಸೋದು, ಆ ನಿನ್ನ
ತುಟಿಗಳನ್ನ. ಅಲ್ಲ ಆ ತುಟಿಯ ಎರಡು ಕೊನೆಗಳನ್ನ, ಎರಡೂ ಎಂಡಲ್ಲಿ ಸ್ವಲ್ಪ ಎಳೆದಿದ್ದಾರೆ
ಅನ್ನೋ ಹಂಗಿದೆ. ತುಂಬಾ ಚಂದ ಇದೆ.’

‘ಒಬ್ಬ ಆರ್ಟಿಸ್ಟು ಚಿತ್ರ ಬರೆಯೋವಾಗ ಸಾಮಾನ್ಯವಾಗಿ ಕಣ್ಗಳಿಂದ ಶುರು ಮಾಡ್ತಾನಂತೆ.
ಮೊದಲು ಆ ಕಂಗಳಿಗೆ ಜೀವತುಂಬಿ, ಆಮೇಲೆ ಅದರ ಭಾವಕ್ಕೆ ತಕ್ಕಂತೆ ಉಳಿದದ್ದು
ಚಿತ್ರಿತವಾಗುತ್ತಾ ಹೋಗತ್ತಂತೆ. ಯಾರೋ ಹೇಳಿದ್ದು. ಕೊನೆಗೆ ಹೆಚ್ಚು ಕಮ್ಮಿ ಆದ್ರೆ
ಬದಲಿಸೋದು ಆ ಕಣ್ಗಳನ್ನೇ. ಆದರೆ ನನ್ನ ಪ್ರಕಾರ; ನಿನ್ನನ್ನು ತಿದ್ದುವಾಗ ಆ ದೇವರು
ಮೊದಲು ಎಲ್ಲವನ್ನೂ ಒಪ್ಪವಾಗಿ ಮಾಡಿದ್ದಾನೆ. ಕೊನೆಗೆ ದೃಷ್ಟಿ ಆಗದೇ ಇರಲಿ ಅಂತ ಆ
ತುಟಿಗಳ ಕೊನೆಯನ್ನ ಹಂಗೇ ಚೂಪು ಮಾಡಿ ಮುಕ್ಕು ಮಾಡಿದಂತಿದೆ. ಆದರೆ ಅವನ ಲೆಕ್ಕಾಚಾರ
ತಲೆಕೆಳಗಾಗಿರೋದೆ ಅಲ್ಲಿ. ಒಟ್ಟು ಸೌಂಧರ್ಯವನ್ನ ಅಲ್ಲೇ ಇಟ್ಟ ಹಂಗಾಗಿದೆ. ಈ ತರದ
ತುಟಿಗಳು ತುಂಬಾ ಅಪರೂಪ. ಇದ್ದವರು ಮಾತ್ರ ಗುರುತಿಸಿಕೊಳ್ಳೋದು ಆ ತುಟಿಗಳಿಂದಲೇ. ನೋಡಿದ
ತಕ್ಷಣ ಫುಲ್ ಖುಷಿ ಆಗಿ ಬಿಡತ್ತೆ.’

ಇಷ್ಟು ಹೇಳಿ ಸ್ವಲ್ಪ ಸುಮ್ಮನಾದೆ; ಇನ್ನೂ ಹೇಳುವನಿದ್ದೆ. ಆದರೆ ಮೌನ!! ಅನ್ನೋದಕ್ಕೆ
ಕ್ಲಾರಿಟಿ ಇರೋದಿಲ್ಲ. ಅವಳ ಮೌನವನ್ನ; ತೆಗೆದು ಬಾರಿಸ್ತಾಳಾ ಅಂತ ಅರ್ಥ ಮಾಡ್ಕೋಬೇಕಾ
ಅಥವಾ ಗೊತ್ತಾಗಲಿಲ್ಲ.

‘I am pleased ’ ಅಂದಳು

‘No You must be Proud ’ ಅಂದೆ.

‘ಒಂದು ಕ್ಷಣ ಆ ಸೌಂಧರ್ಯದ ಗತ್ತು ಕಾಣಿಸಿ ಮಾಯ ಆಯ್ತು. ಸುಯ್ಯ ಸುಯ್ಯ ಸುಯ್ಯ ಅಂತ ಗಾಳಿ
ಬೀಸಿ ನಿಂತ ಮೇಲೆ ದಬದಬದಬ ಮಳೆ ಸುರಿಯುತ್ತಲ್ಲ ಅಂತಹಾ ಸಂತೃಪ್ತಿಯ ಭಾವ ಅವಳ ಮುಖದಲ್ಲಿ.
ಕನ್ನಡಿ ಇಲ್ಲದೇನೆ ತನ್ನ ಇಡೀ ದೇಹರಾಶಿಯನ್ನ ಅಹಮ್ಮಿನ ಭಾವದಲ್ಲಿ ಉಸಿರೆಳೆಯುತ್ತಾ
ನೋಡಿಕೊಂಡಂತೆ. ಅವಳಲ್ಲಿ ಉಂಟಾದ ಆ ಸಣ್ಣ ಸಂಚಲನವನ್ನು ನೋಡಿದಾಗ, ನನ್ನ ಇಡೀ
ಜೀವಮಾನವನ್ನೇ, ಈ ಒಂದು ಕ್ಷಣಕ್ಕಾಗಿ ಜೀವಿಸಿದ್ದೆನಾ ಅನ್ನಿಸ್ತು. ’ ನಾನು total ಆಗಿ
ಹೇಗಿದ್ದೇನೆ ‘ ಅಂತಲೇ ಬಾಯಿ ಬಿಟ್ಟು ಕೇಳಿದಾಗ, ಇಷ್ಟೆಲ್ಲಾ ಹೇಳದೆ ಇರಲಾಗಲಿಲ್ಲ.

‘ ಹರಿಣಿ!! You are awesome. ’ ಅಂದೆ, ಕೊನೆಗೆ.

‘You are jobless ’ ಅಂತನ್ನುತ್ತಾ, ಬಿಸಿಲಿಗೆ ಕೊಡೆ ಅಗಲಿಸಿದಳು. ಸಂಜೆ ಐದರ ಬಿಸಿಲು
ಮುಖ ಸುಡುವಂತಿತ್ತು. ‘ಪ್ರಾಣ ಇಲ್ಲದೆ, ದೇಹ ಉಸಿರಾಡತ್ತಾ. ’ ಸಾರಿ… ‘ಬೆಂಕಿ ಇಲ್ಲದೆ
ಹೊಗೆ ಆಡತ್ತಾ..?’ ಅವಳು ಇರೋದು ಹೀಗೆಯೇ; ಅಪ್ರತಿಮ ಸುಂದರಿ. ಅದಕ್ಕಲ್ಲವೆ,
ವರ್ಣಿಸಬೇಕು ಅಂದುಕೊಳ್ಳುತ್ತಿದ್ದಂತೆ, ಪದಗಳು ಗ್ರಾವಿಟಿ ಗೆ ಸಿಕ್ಕಂತೆ ತತ್ತರ
ಬಿತ್ತರಾಗಿ ಬೀಳುತ್ತವೆ.


ಅದು; ಅವಳು ಅಲ್ಲಿಂದ ಹೊರಟು ಹೋಗಲು ಕೊನೆಯ ದಿನವಾಗಿತ್ತು. ನನ್ನ ಕೈಲಿ ಎರಡು ಫೋಲ್ಡೆಡ್
ಲೆಟರ್ ಇತ್ತು. ‘ಲವ್ ಲೆಟರಾ? ’ ಅಂತ ಕೇಳಿದಳು, ನಗುತ್ತಾ..

‘ಈ ಮೊದಲೇ ಹೇಳಿದ್ನಲ್ಲ. ಅದನ್ನ ನಿನಗೆ ಕೊಡೋದಕ್ಕೆ ಯಾರಿಗೂ… ಮೂರು-ಕಾಸಿನ ಯೋಗ್ಯತೆ
ಇಲ್ಲ ಅಂತ.’

‘ಶಟ್ ಆಪ್ ’ ಅಂತ ಚೀರಿದಳು. ಹುಬ್ಬೇರಿಸಿ ಆ ಲೆಟರ್ ಗಳು ಏನಂತ ಸಂಜ್ನೆ ಮಾಡಿ ಕೇಳಿದಳು.

‘ಸ್ವಪ್ನ ಸುಂದರಿಯೊಬ್ಬಳು ಕನಸಲ್ಲಿ ಬಂದು, ‘ you must be a poet ‘ ಅಂತ ಆರ್ಡರ್
ಮಾಡೋ ರೀತಿನಲ್ಲಿ ಆಶೀರ್ವಾದ ಮಾಡಿದ್ದಳು. ಅವಳು ತಮಾಷೆಗೆ ಕವಿ ಅಂದ ಮೇಲೂ, ಒಂದು ಕವಿತೆ
ಬರೆದು, ಒಂದರ ಮೇಲೊಂದು ಕೂತಿರೋ ಕೋರೆ ಹಲ್ಲು, ಕಣ್ ತುಂಬಾ ಕಾಣೋ ರೀತಿ, ಒಂದು wild
Smile ತಗೋಳ್ದೇ ಇದ್ದರೆ, ನಾನೊಬ್ಬ ಬದುಕಿರೋದು ವೇಸ್ಟು ಅಂತ ಅನ್ನಿಸ್ತು. ಅದಕ್ಕೆ ಈ
ಕವಿತೆ. ’

‘ ನೋಡಬಹುದಾ ’ ಅಂತ ಆತುರವಾಗಿ ಲೆಟರ್ ಪಡೆಯಲು ಮುಂದಾದಳು.
ಯಾಕೋ ತೋರಿಸುವ ಮನಸಾಗಲಿಲ್ಲ. ‘ಇವತ್ತು ಬೇಡ ನಾಳೆ ತೋರಿಸ್ತೇನೆ’ ಅಂದೆ. ತುಂಬಾ ಇಷ್ಟ
ಪಟ್ಟು ಬರೆದಿರುವ ಕವಿತೆ. ವರುಷಗಟ್ಟಲೆ ಎದೆಯಲ್ಲಿ ಕೊಳೆ ಹಾಕಿ ಬಿದ್ದಿದ್ದುವು;
ಅದೆಶ್ಟೋ ಭಾವಗಳು. ಒಂದೆರಡು ದಿನದ ಮಟ್ಟಿಗೆ ಹಾಳೆಯ ಮೇಲೂ ಇದ್ದೂ, ತಂಗಳಾಗಲಿ. ಅದು
ಮೂಡಿದ ರಭಸಕ್ಕೇ… ನನ್ನನ್ನ ನಾನು ಸಂಭಾಳಿಸಲಾಗಿಲ್ಲ. ಇನ್ನು; ಅದಕ್ಕೆ ಅವಳ ಸ್ಪಂದನ
ದಿಢೀರ್ ಅಂತ ಸಿಕ್ಕರೆ, ಸತ್ತೇ ಹೋಗ್ತೇನೆ, ಅನ್ನಿಸ್ತು.

‘ you must be a poet ‘ ಅಂತ ಒಮ್ಮೆ ಅವಳೇ ಹೇಳಿದ್ದನ್ನ ಇಷ್ಟು ಸೀರಿಯಸ್ ಆಗಿ
ತಗೋಂಡು; ಥೂ… ಕೊಟ್ಟಿರೋ ಪ್ರಶಸ್ತಿಗಿಂತ, ಆದನ್ನ ಈಸ್ಕೋಳೋವಾಗ ತೆಗೆದ ಆ ಫೋಟೋ ಫ್ರೇಮ್
ನ ಒರೆಸಿ ಒರೆಸಿ ಇಡ್ತೇವೆ. ಬಿರುದು, ಸಮ್ಮಾನಗಳಿಗಿಂತ ಕೊಟ್ಟವರು ಮುಖ್ಯ ಆಗಿರ್ತಾರಲ್ಲ,
ಹಾಗೆ. ನನಗೆ ಇವಳ ಕಾಂಪ್ಲಿಮೆಂಟು ಹತ್ತಿರ ಅನ್ನಿಸ್ತು. ಬರೆದೆ; ಬರೆದೆ; ಬರೆದೆ; ತಾನು
ಎಷ್ಟು ಸ್ಪೆಷಲ್ ಅನ್ನೋದು ಅವಳಿಗಷ್ಟೇ ಕಾಣಬೇಕು. ಅಷ್ಟು ಸುಂದರವಾಗಿ ನಾನದನ್ನ ಅವಳಿಗೆ
ಕೊನೆಯದಾಗಿ ಹೇಳಬೇಕು. ’


ಅವಳು ಬರಲ್ಲ ಅಂದುಕೊಂಡಿದ್ದೆ. ಬಂದಳು. ಕವಿತೆ ಒಡೆದು ತೆರೆಯಲು ಮುಂದಾದಳು. ಪುನಃ
ತಡೆದೆ .

‘Wait, ಅದರಲ್ಲೇನಿದೆ ಹೇಳ್ತೇನೆ. ನಾ ಅಂದುಕೊಂಡ ಏರಿಳಿತದಲ್ಲೇ ಪ್ರಪಂಚಕ್ಕೆ ಈ ಕವಿತೆ
ತೆರೆದುಕೊಳ್ಳಬೇಕು. ಅದನ್ನ ಹೇಳೋವಾಗ ಧ್ವನಿ ನಡುಗಬಹುದು, ತಪ್ಪು ತಿಳೀಬೇಡ.’

‘ ಉಸಿರು ಧನಿಪೆಟ್ಟಿಗೆಯಲ್ಲಿ modulate ಆಗೋವಾಗ, ಮನಸ್ಸು ಶಬ್ಧಗಳನ್ನ ಬಿಟ್ಟು
ಭಾವಗಳನ್ನ ಚೇಸ್ ಮಾಡ್ತಿರತ್ತೆ. ನೀನು ಸೂಕ್ಷ್ಮವಾಗಿ ಆಲಿಸಿದರೆ, ಆ vibration ಗಳನ್ನೂ
ಕೇಳಿಸಿಕೊಳ್ಳಬಹುದು.’

‘ ಯಾವ ರಾಗದಲ್ಲಿ ಹೇಳಬೇಕು ಅನ್ನೋದನ್ನ, ನನ್ನ ಕರ್ಕಶ ಉಸಿರು ನಿರ್ಧಾರ ಮಾಡತ್ತೆ.
ಎಲ್ಲೆಲ್ಲಿ ನಿಲ್ಲಿಸಿ ಮುಂದಕ್ಕೆ ಹೋಗಬೇಕು ಅನ್ನೋದನ್ನ, ನಿನ್ನ ಆ ಸೋಮಾರಿ ಕಣ್
ರೆಪ್ಪೆಗಳು ನಿರ್ಧರಿಸುತ್ತವೆ. ’

‘ ಇದು ನಿನಗಾಗಿ ಬರೆದ ಕವಿತೆ. ನಾ ಬರೆದ ಕವಿತೆ. ’

‘OK!! OK!! ಇನ್ನೊಂದು. ಕೈನಲ್ಲಿರೋದೇನು. ’ ಕೈಗೆ ಮೈಸೂರ್ ಪಾಕ್ ಕೊಟ್ಟರೂ,
ಮುಚ್ಚಿಟ್ಟ ಡಬ್ಬಿಯಲ್ಲಿ ಮತ್ತೆ ಏನಿರಬಹುದು ಅಂತ ಹುಡುಕುವ ಎಳೆ
ಹುಡುಗಿಯದ್ದಿದ್ದಂತಿತ್ತು, ಆ ಮುಖ.

‘ಎರಡೂ ಹಾಳೆನಲ್ಲೂ ಅದೇ ಕವಿತೆ ಇದೆ. ಒಂದು ಬೈಯರ್ ಕಾಪಿ, ಇನ್ನೊಂದು ಬ್ಯಾಂಕ್ ಕಾಪಿ
ತರ.’ ಅಂದೆ. ಅವಳಿಗೆ ಅರ್ಥ ಆಗಲಿಲ್ಲ. explain ಮಾಡ್ಲೇಬೇಕಾಯ್ತು.

‘ ನನ್ನದೊಂದು ಚಿಕ್ಕ ವಿಷ್ ಇದೆ. ತುಂಬಾನೆ ಪುಟ್ಟ ಆಸೆ. ಈ ಎರಡೂ ಹಾಳೆಗಳ ಮೇಲೂ ಇಬ್ಬರೂ
ಸಹಿ ಮಾಡೋಣ. ನಿನ್ನ ಕಾಪಿ, ಮನೆಗೆ ಹೋದ ಮೇಲೆ ಹರಿದು ಬಿಸಾಡು. But I preserve my
copy. ಎಲ್ಲಿವರೆಗೂ ಅಂದ್ರೆ, ಗೊತ್ತಿಲ್ಲ. ಯಾರಾದ್ರು ‘ನಶೆ’ ಅಂದ್ರೆ ಏನು. ?
‘stoned’ ಅಂದ್ರೆ ಏನು. ? ಅಂತ ಕೇಳಿದ್ರೆ, ಇದನ್ನ ತೋರಿಸಬೇಕು. ನಿನ್ನದು raw beauty
ನನ್ನದು ಅಂತಹದ್ದೇ ಒಂದು raw ಕವಿತೆ. ’

‘ನೀನು ಇಷ್ಟು, ಅಗ್ರೆಸ್ಸೀವ್ ಆಗಬೇಡ. ಯಾರಾದ್ರು ಹೊಗಳಿದರೆ ಖಂಡಿತ ಖುಷಿ ಆಗತ್ತೆ.
ಆದರೆ, ನಿನ್ನನ್ನ ಜನ ಹುಚ್ಚ ಅಂತಾರೆ ’

‘Being, happy mad for happy girl, is fine. ’ ಅಂದೆ.

ಕವಿತೆ ಕೇಳಿದ ಮೇಲೆ, ಅವಳು ಯಾವುದರ ಮೇಲೂ ಸಹಿ ಮಾಡಲಿಲ್ಲ. ಆ ಎರಡೂ ಕಾಪಿಗಳ ಮೇಲೆ,
ನನ್ನ ಸಹಿ ಹಾಕಿಸಿಕೊಂಡು, ಎರಡನ್ನೂ ಈಸ್ಕೊಂಡಳು. ’

ಕೇಳಿದ್ದಕ್ಕೆ - ‘ ಈ ಕವಿತೆ; ನಾನು ಕೊಂಡುಕೊಳ್ಳಲು ಆಗದೇ ಇರೋ ದುಬಾರಿ ಕನ್ನಡಿ. ‘
ಅಂದಳು, ಸಹವಾಸದೋಷದಿಂದ.

‘ ಇದು ಅಮೂಲ್ಯ ಉಡುಗೊರೆ ಇದನ್ನ ನನ್ನ ಹತ್ತಿರ ಇಟ್ಟುಕೊಂಡಿರ್ತೇನೆ. ನಿನಗಿದು ಬೇಡ.
ನಿನ್ನ excitement ಗೆ ಮಾತ್ರ ನಾನು ಸೀಮಿತ ಆಗಬೇಕು. ನಾನು ಯಾರಿಗೂ ನೆನಪಾಗಿ
ಕಾಡಬಾರದು. ನನ್ನ ಪಳಯುಳಿಕೆಗಳು ನಿನ್ನ ಹತ್ರ ಉಳಿಬಾರದು. ’ ಅಂದಳು.

ನೆನಪಿಸಿಕೊಂಡರೂ ಅವಳದು ಇಂಥದೇ ಪಿಕ್ಚರ್ ಅನ್ನೋದು ಮನದಲ್ಲಿ ಮೂಡೋದಿಲ್ಲ. ಅವಳ ಸಾವಿರ
ಚೇತನಗಳಲ್ಲಿ, ಯಾವುದಂತ ಸೆರೆಹಿಡಿಯಲಿ. ಅವಳ ಸೌಂಧರ್ಯದ ಕವಲುಗಳನ್ನ ಕೂಡಿ ಹಾಕೋದಕ್ಕೆ,
ಎರಡು ರಸಿಕ ಕಣ್ಣುಗಳು ಬೇಕು. ಆ ಸೌಂಧರ್ಯಕ್ಕೆ ಸೋತ ಕಣ್ಣುಗಳಿಗೆ, ಕಲ್ಪನೆಗಳ ರೆಕ್ಕೆ
ಮೂಡಬೇಕು. ಅಲ್ಲಿಂದಾನೆ, ತಾನು ಕಂಡ ವಿಸ್ಮಯವನ್ನ ಆ ಕಣ್ಗಳು ತನ್ನ ಒಡೆಯನ ಅಭಿವ್ಯಕ್ತಿ
ಮಾಧ್ಯಮದ ಮೂಲಕ ಪ್ರಪಂಚಕ್ಕೆ ಹಂಚಬೇಕು. ಸೌಂದರ್ಯ; ಸೌಂದರ್ಯ ಅಂದ್ರೆ ನಶೆಯ ನೆರಳು.
ಹಿಂದಲೆಯ ಭಾರ. ಇಲ್ಲಿ ಎಲ್ಲರೂ ಎಚ್ಚರವಾಗಿರ್ತಾರೆ. ಹಾಗಂತ ಅಂದುಕೊಂಡಿರ್ತಾರೆ.