ಒಂದು ರಾತ್ರಿಗೆ​,​
ಲಾಡ್ಜ್ ಬಾಡಿಗೆ ಎರಡು ಸಾವಿರ ಹೇಳಿದರು. ನಾವು ಒಟ್ಟು ಆರು ಜನರಿದ್ದೆವು.
ನಾನು, ಗೆಳೆಯ ಶೈಲುಗೆ "ನೀನೆ ಕೇಳು ಮಗಾ!! " ಅಂತ ಸನ್ನೆ ಮಾಡಿ ಹೇಳಿದೆ.
ಅವನು ಇಂತಹ ವ್ಯವಹಾರಗಳಲ್ಲಿ ಅತಿ ಬುದ್ಧಿವಂತ.

ಆದರೆ ಶೈಲು ನನ್ನನ್ನೇ ಸಿಕ್ಕಿಸುವ ಹಾಗೆ :
"ನೋಡಿ ಸಾರ್!! ಇವನೇನೊ ಕೇಳ್ತಾ ಇದಾನೆ" ಅಂದ.

" ನೀನೆ ಕೇಳೊ ಲೇ, ನನಗಿವೆಲ್ಲಾ ಕೇಳಕ್ಕೆ ಬರಲ್ಲ " ಅಂದೆ.

ನಾವು ಒಬ್ಬರ ಮೇಲೊಬ್ಬರು ಹಾಕುತ್ತಿದ್ದುದನ್ನು ಕಂಡ ಹೋಟೆಲಿನವನು,

"ಅಯ್ಯೋ!! ಕೇಳ್ರಿ​.​
ಅದರಲ್ಲೇನು. ನಾವೂ ಕೂಡ ನಿಮ್ಮ ವಯಸ್ಸು ದಾಟಿಕೊಂಡೇ ಬಂದಿರೋದು. " ಅಂದ್ರು.

"ಎರಡು ಸಾವ್ರ ಜಾಸ್ತಿ ಆಯ್ತು!! ರೂಮ್ ಬಾಡಿಗೆ ಐನೂರು ಕಮ್ಮಿ ಮಾಡ್ಕಳಿ. ಒಂದು ವರೆ ಸಾವ್ರ ಕೊಡ್ತೀವಿ" ಅಂದೆ.

ಅವನು ನನ್ನಿಂದ ಬೇರೇನನ್ನೋ ನಿರೀಕ್ಷಿಸದ್ದನೋ ಎಂಬಂತೆ ಮಾತನಡುವುದನ್ನೇ ನಿಲ್ಲಿಸಿದ.​ ಮಾತ್ರವಲ್ಲ!! ದಡದಡದಡ ಅಂತ ಇಳಿದು ಹೋದ. ನಮ್ಮ
ಮಾತುಗ​ಳಲ್ಲಿ ಇದ್ದ ದ್ವಂದ್ವಾರ್ಥಗಳು ​ಬಹಳ ಹೊತ್ತಿನವರೆಗೂ ನನಗೆ ಅರ್ಥವೇ ಆಗಿರಲಿಲ್ಲ.


ಇಂಥದ್ದೇ ಇನ್ನೊಂದು ಘಟನೆ ನಂಜನಗೂಡಿನ ಲಾಡ್ಜ್ ಒಂದರಲ್ಲಿ ನಡೆದದ್ದು.
ಬೆಂಗಳೂರಿಂದ ಹೊರಟವರು, ನಂಜನಗೂಡು ತಲುಪಿದಾಗ ಸರಿ ಸುಮಾರು ಹನ್ನೆರಡು ವರೆಯಾಗಿತ್ತು.
ಉಳಿದುಕೊಳ್ಳಲು ಲಾಡ್ಜ್ ಹುಡುಕಾಟದಲ್ಲಿದ್ದೆವು.

ದೇವರ ಹೆಸರಿನ ಅತಿಥಿ ಗೃಹದ ಬಾಗಿಲು ಬಡಿದಾಗ,
ಸಣ್ಣ ಹುಡುಗನೊಬ್ಬ ಕೊಕ್ಕರೆ ತಲೆ ಹಾಕಿದಂತೆ ಸಣ್ಣ ಸಂದಿಯಿಂದ ತಲೆ ಹೊರಹಾಕಿ ಕೇಳಿದ. ಇದೇ ಸಮಯಕ್ಕೆ, ನಮ್ಮ ಹಿಂದೆ ಒಂದು ಜೋಡಿ ಬಂದು ನಿಂತಿತ್ತು.

"ಯಾವ್ದೋ ಐಟಮ್ ಕರ್ಕೊಂಡ್ ಬಂದಿದಾನೆ ನೋಡು. . " ಅಂತ ಗೆಳೆಯ ರವಿ ಹೇಳಿದ. ನಾವು ನಂಬಲಿಲ್ಲ.

ಸರಿ!! ದುಡ್ಡು ಕೊಟ್ಟು, ನಮ್ಮ ಕೀ ಪಡೆದು.. ಲೆಡ್ಜರ್ ನಲ್ಲಿ ವಿವರ ತುಂಬುತ್ತಿದ್ದೆವು.

ನಮ್ಮ ಹಿಂದಿದ್ದ ಜೋಡಿಯು ಕೀ ಪಡೆಯಿತು.
ಕೀ ಮೇಲಿನ ರೂಮ್ ನಂಬರ್ ನೋಡಿದಾಕ್ಷಣ ಆ ಹುಡುಗಿ ಹೇಳಿದ ಒಂದೇ ಮಾತು

"ಅಯ್ಯೋ ನೋರ ಎಂಟನೇ ರೂಮ!! ಅಲ್ಲಿ ಟಿವಿ ನೆ ಸರಿಯಾಗಿ ಬರಲ್ಲ. "

ಒಬ್ಬರನ್ನೊಬ್ಬರು ಕಕ್ಕಾ ಬಿಕ್ಕಿಯಾಗಿ​ ನೋಡಿಕೊಂಡೆವು.

' ಹೇಳ್ಲಿಲ್ಲ ನಾನು, ರೆಗ್ಯುಲರ್ಲಿ ರೆಗ್ಯುಲರ್ ಅನ್ಸತ್ತೆ ​'​ ಅಂದ ರವಿ.


ವಿದ್ಯಾರಣ್ಯಪುರಂ ಇಂದ ITPL ಗೆ ಹೋಗಿ ಬರಲು, ದಿನವೂ ವೋಲ್ವೋ ಪಾಸ್ ಮಾಡಿಸುತ್ತಿದ್ದೆ. ಸುಮಾರು ಮೂರು ತಾಸುಗಳ ಈ ಅನಾದಿ ಪಯಣಕ್ಕಾಗಿ ಮೂರ್ನಾಕು ಬಸ್ ಗಳನ್ನು ಬದಲಿಸಬೇಕಾಗಿತ್ತು.

ವೋಲ್ವೋ ಹೊರತಾಗಿ, ಮಾಮೂಲಿ ಬಸ್ ಹತ್ತುವಾಗೆಲ್ಲಾ ಮತ್ತೆ ಮತ್ತೆ 'ಟಿಕೆಟ್ ತೆಗೆದುಕೊಳ್ಳುವ ' ವಿಚಾರ ಪಿರಿ ಪಿರಿ ಮೂಡಿಸುತ್ತಿತ್ತು.

ಹೀಗೆ ಸುಮಾರು ಒಂದು ತಿಂಗಳು ಓಡಾಡಿದ್ದಾಗಿತ್ತು.

ಒಂದು ರಾತ್ರಿ, ಊಟ ಮಾಡುವಾಗ.. ಮಾತಿನ ನಡುವೆ ನನ್ನ ಹತಾಶೆಯನ್ನು ಹೊರ ಹಾಕಿದೆ.

" ಅಲ್ಲಾ!! ಗುರು. ವೋಲ್ವೋ ಪಾಸ್ ಮಾಡಿಸಿದ ಮೇಲೆ, ಜನರಲ್ ಬಸ್ ಗಳಲ್ಲಿಯೂ ಓಡಾಡೋದಕ್ಕೆ ಬಿಡಬೇಕಪ್ಪ. ಸ್ವಲ್ಪನೂ ತಲೆ ಇಲ್ಲ ಇವರಿಗೆ. ಅಷ್ಟೊಂದ್ ದುಡ್ಡು ಕೊಟ್ಟಿರ್ತೀವಿ, ಮತ್ತೆ ಜನರಲ್ ಬಸ್ ಗಳಲ್ಲಿಯೂ ಟಿಕೇಟ್ ತಗಳದು ಅಂದ್ರೆ ಹೆಂಗೆ ..?" ಅಂದೆ.

ನನ್ನ ಬಿಟ್ಟಿ ಸಲಹೆಯು ಎಲ್ಲರಿಗೂ ಇಷ್ಟ ಆಗಿರಬಹುದೆಂದು ತಿಳಿದಿದ್ದೆ. ಆದರೆ ನನ್ನ ಬಗ್ಗೆ ತುಂಬಾ ಗೊತ್ತಿರುವ ಸ್ನೇಹಿತರು, ಉಲ್ಡಾಡಿಕೊಂಡು ನಗೋದಕ್ಕೆ ಶುರು ಮಾಡಿದರು.

ಗೆಳೆಯ ಜೋಬಿ, ಬಂದವನೇ .. ವೋಲ್ವೋ ಡೈಲಿ ಪಾಸ್ ಹಿಂಬದಿಯಲ್ಲಿ ಬರೆದಿದ್ದನ್ನು ಕಣ್ಣ ಮುಂದೆ ಹಿಡಿದ.
ಅದರಲ್ಲಿ ಸ್ಪಷ್ಟವಾಗಿ ಬರೆದಿತ್ತು.

"ವೋಲ್ವೋ ಹೊರತಾಗಿಯೂ, ಎಲ್ಲಾ ಕೆಳದರ್ಜೆಯ ವಾಹನಗಳಲ್ಲೂ ಓಡಾಡ ಬಹುದೆಂದು. "

"ಥೂ ಎಂಥಾ ಸಾವುದು ಮಾರಾಯ " ಅಮಾಯಕರನ್ನ ಹಿಂಗೆಲ್ಲಾ ಕಾಡಿಸೋದ. ಅನ್ಯಾಯವಾಗಿ ಇಷ್ಟು ದಿನ ಟಿಕೇಟ್ ಮಾಡಿಸಿಕೊಂಡು ಓಡಾಡಿದ್ದಾಗಿತ್ತು.


ಇಂಥದ್ದೇ ಬಸ್ಸಿನ ಅನುಭವ ಮತ್ತೊಂದಿದೆ.

ಶಿವಮೊಗ್ಗದಿಂದ ಬೆಂಗಳೂರಿಗೆ ಇನ್ನೂರ ಅರವತ್ನಾಕು ರೂಪಾಯಿ. ಕಂಡಕ್ಟರು ಚೇಂಜು ಕೊಡುತ್ತಿರಲಿಲ್ಲ. ಬದಲಾಗಿ ಚೀಟಿ ಹಿಂದೆ ಬರೆದುಕೊಡುತ್ತಿದ್ದ.
ಹಲವಾರು ಬಾರಿ ಚೇಂಜು ಪಡೆಯೋದನ್ನ ಮರೆತು, ಕಂಡಕ್ಟರುಗಳ ವಿವಿದೋದ್ಧೇಶ ಯೋಜನೆಗಳಿಗೆ ಧಾರೆ ಎರೆದಿದ್ದಿದೆ. ಇದರಿಂದ ಬೇಸರಗೊಂಡಿದ್ದವನು, ಪ್ರತಿ ಸಾರಿ ಕರೆಕ್ಟ್ ಚೇಂಜ್ ಕೊಟ್ಟು ಟಿಕೇಟು ಪಡೆಯುತ್ತಿದ್ದೆ.

ಸಾಧಾರಣವಾಗಿ ನನ್ನ ಸೋದರ ಸಂಬಂಧಿ ಗೆಳೆಯ(ಕಜಿನ್), ಪ್ರತಿ ಬಾರಿ ಪ್ರಯಾಣಕ್ಕೆ ಕೂಡಿಕೊಳ್ಳುತ್ತಿದ್ದ.

ನನ್ನ ಕಜಿನ್ ಇನ್ನೂರೊ - ಮುನ್ನೋರೋ ಕೊಡುತ್ತಿದ್ದ. ಉಳಿದದ್ದನ್ನು ಕರೆಕ್ಟ್ ಲೆಕ್ಕ ಹಾಕಿ ಕೊಟ್ಟು ಟಿಕೇಟ್ ಪಡೆಯುತ್ತಿದ್ದೆ.

264 + 264 ಅಂದ್ರೆ 628​ . ಎರಡು ರೂಪಾಯಿ ಹೋದರು ಪರವಾಗಿಲ್ಲ ಅಂತ ಆರುನೂರ ಮೂವತ್ತು ಕೊಡುತ್ತಿದ್ದೆ.

ಒಂದು ಸಾರಿ, ನನ್ನ ಮುಂದಿದ್ದ ಮುದುಕನೊಬ್ಬ ಕಂಡಕ್ಟರಿಗೆ,
"ಸಾರ್!! ಹತ್ತು ರೂಪಾಯಿ ಜಾಸ್ತಿ ಕೊಟ್ಟಿದಿರ. " ಅಂತ ವಾಪಾಸ್ ಕೊಟ್ಟ.

"ಅಬ್ಬಾ!! ಎಂಥಾ ಜನ. ಈ ಕಾಲದಲ್ಲೂ " ಅಂತ ಖುಷಿ ಪಟ್ಟೆ.

ಈ ಘಟನೆಯಿಂದ ನನ್ನ ಮನಸ್ಸಲ್ಲಿ ಒಂದು ವಿಧವಾದ ತಳಮಳ ಶುರುವಾಯ್ತು. ಹೌದು!! ಎಲ್ಲೋ ಏನೋ ಯಡವಟ್ಟಾಗಿದೆ ಅನ್ನಿಸುತ್ತಿತ್ತು.
ರಾತ್ರಿ ಹೊತ್ತಲ್ಲಿ , ಪ್ರಯಾಣದ ಮಧ್ಯೆ ಎಚ್ಚರವಾದಲೆಲ್ಲಾ ಅಸಾಧ್ಯವಾದ ಗಣಿತವೊಂದು ತಲೆ ಹೊಕ್ಕು ತಿನ್ನುತ್ತಿತ್ತು.

ಬೆಳಗಿನ ಜಾವ, ಜಾಲಳ್ಳಿ ಕ್ರಾಸ್ ದಾಟಿ..​ ನನ್ನ ಸ್ಟಾಪು ಯಶವಂತ ಪುರದ ಕಡೆಗೆ ಹೊರಡಬೇಕು. "ಟಕ್" ಅಂತ ಹೊಳೆಯಿತು.

ಇನ್ನೂರ ಅರವತ್ನಾಕು, ಇನ್ನೂರ ಅರವತ್ನಾಕು ಐನೂರ ಇಪ್ಪತ್ತೆಂಟಲ್ವಾ..? ನಾನು ಆರುನೂರ ಇಪ್ಪತ್ತೆಂಟು ಕೊಟ್ಟಿದ್ದೇನೆ.

​ದಿಢೀರ್ ಅಂತ ಹೊರಟೆ. ಕಂಡಕ್ಟರ್ ಡೈವರಾಗಿ ಬದಲಾಗಿದ್ದ. ನಾನು ಅವನ ಬಳಿ ಹೋಗಿ,

"ಸಾರ್!! ನೂರು ರೂಪಾಯಿ ಜಾಸ್ತಿ ಕೊಟ್ಟುಬಿಟ್ಟಿದ್ದೇನೆ. " ಲೆಕ್ಕವನ್ನು ಧೈನ್ಯವಾಗಿ ಹೇಳಿದೆ.

ಅದಕ್ಕವನು ಸ್ವಲ್ಪವೂ ವಿಚಲಿತಗೊಳ್ಳದೇ.. " ಹೋ ಹೌದ!! ಅದು ಆಡಿಟಿಂಗ್ ಮಾಡಬೇಕು. ಅಲ್ಲಿವರೆಗೂ ಗೊತ್ತಾಗಲ್ಲ. " ಅಂತ ಕ್ಯಾಷಿನ ಬ್ಯಾಗು ತೋರಿಸಿದ. ಅವನ ಮುಖದಲ್ಲೊಂದು ವ್ಯಂಗ್ಯ ನಗೆ ಇತ್ತು. ಆ ಬ್ಯಾಗಿನಲ್ಲಿ ನನ್ನ ಅನಾಥ ನೂರರ ನೋಟು ಹುಡುಕುವುದು ಸಾಧ್ಯವಿರಲಿಲ್ಲ. ಅದು ಕಂಡಕ್ಟರಿಗೂ ಸ್ಪಷ್ಟವಾಗಿ ತಿಳಿದಿತ್ತು.

ಇಷ್ಟು ದಿವಸಗಳಲ್ಲಿ ಒಬ್ಬರೂ, ಆ ನೂರನ್ನು ವಾಪಾಸ್ ಮಾಡುವ ಗೋಜಿಗೆ ಹೋಗಿರಲಿಲ್ಲ. ​ಸಾವುದು ಮಾರಾಯ!!