ಅವಳು ಇದ್ದದ್ದು ಹಾಗೆಯೇ!! ಸೊಕ್ಕಿನ ಕೋಗಿಲೆಯ ಹಾಗೆ. ಆ ಕೋಗಿಲೆಯ ಕಂಠಕ್ಕೆ ತೂಗದ
ತಲೆಗಳಿಲ್ಲ, ಮಣಿಯದ ಮನಗಳೂ ಇಲ್ಲ.

ಹೆಸರು ಪೂರ್ವಿ!! ಮನೆಯವರು ಪ್ರೀತಿಯಿಂದ ಇಟ್ಟ ಹೆಸರು. ಹಾಡೋದಕ್ಕೆ ಅಂತಲೇ ಹುಟ್ಟಿದವಳು.

ಹಾಡಲು ಕುಂತರೆ, ಅವಳು ಸಂಧಿಸುತ್ತಿದ್ದುದು ಕರ್ಣಗಳನ್ನಲ್ಲ, ತೊಯ್ದು ಹೋಗುತ್ತಿದ್ದ ಆತ್ಮಗಳನ್ನು.
ಹಾಡುವವಳ ತನ್ಮಯತೆಯನ್ನು, ಅವಳು ಅದನ್ನು ಅನುಭವಿಸುವ ಸೊಬಗನ್ನು ನೋಡಲು, ಕಲಾರಸಿಕರು
ಹಾತೊರೆಯುವರು.

ಸೊಕ್ಕಿನ ಕಂಠದಿಂದ ಬರುತ್ತಿದ್ದ ಧ್ವನಿಯೂ, ಹೃದಯ ಕಿತ್ತು ಬಂದಂತೆ. ಅವಳ ಸಹಜ ಮಾತಿನಲ್ಲೂ, ದೂರಬೆಟ್ಟದ ದೇವಸ್ಥಾನದ ಗಂಟೆ ಹೊಡೆದಂತೆ.
ಕೊರಳಿನ ಮಾಧುರ್ಯಯು ಹೆಣ್ಣಿನ ಸೌಂಧರ್ಯದ ಜೊತೆ ಬೆರೆತು, ಅಮಲಿನ ಅಲೆಗಳನ್ನು ಸೃಷ್ಟಿಸುತ್ತಿತ್ತು.

ಹುಟ್ಟು ಒಮ್ಮೆಯಾದರೆ ಸಾವು ಸಾವಿರ ಬಾರಿ. ತನ್ನ ಹಾಡಿನ ಉಚ್ಛ ಸ್ಥಾಯಿಯಲ್ಲಿ ಹಾಡುವಾಗಲೆಲ್ಲಾ, ಸಾವಿನ ಮನೆಯ ಕಾಲಿಂಗ್ ಬೆಲ್ ಬಡಿದು ಬರುತ್ತಿದ್ದಳು.
ಅಂತಹಾ ಮೇರು ಪ್ರತಿಭೆ ಅವಳದು.

ಜನಪ್ರಿಯತೆಯ ಕೊಬ್ಬು ತಲೆಗೇರಿದೆ ಎಂದು ಮೂದಲಿಸಿದರು ಓರಗೆಯವರು. ಆರಾಧಿಸುವ
ಅಭಿಮಾನಿಗಳು ಪ್ರೀತಿಯಿಂದ ‘ಸೊಕ್ಕಿನ ಕೋಗಿಲೆ’ ಅಂತಲೇ ಕರೆದರು. ‘ನಾನು ನಾನಾಗಿಯೇ ಇರಬೇಕೆಂದರೆ, ಸ್ವಲ್ಪ ಅಹಮ್ಮು ಮೈಗೂಡಿಸಿಕೊಳ್ಳಬೇಕು. ವಿಧೇಯತೆಯ
ಕೂಸಾದರೆ, ಅಭಿಮಾನದ ಅಲೆಯಲ್ಲಿ ಕೊಚ್ಚಿಹೋಗಬೇಕಾಗುತ್ತದೆ. ’

ಪೂರ್ವಿಯ ಅಂತಃಕರಣವಿದು. ಸಂಗೀತದ ಸಾಂಗತ್ಯದ ಜೊತೆಗೆ, ಅವಳದ್ದು, ಒಂಟಿ ಜೀವನ.

ತನ್ನ ಒಂಟಿತನವನ್ನೊಮ್ಮೆ ಪ್ರಶ್ನಿಸಿಕೊಳ್ಳುವಳು -
‘ ನಾಲ್ಕು ಗೋಡೆಗಳ ನಡುವೆ ನಾನು ಒಬ್ಬಂಟಿ ಅಂತನ್ನಿಸುವುದಿಲ್ಲ. ನಿಜವಾದ ಒಂಟಿತನ ಕಾಡುವುದು ಒಲ್ಲದ ಜನಗಳ ನಡುವಿದ್ದಾಗ.
ಸುತ್ತಲೂ ನೋಡಿದರೆ - ನಾನೊಬ್ಬಳು ಒಂಟಿ ಹೌದು. ನನ್ನ ಕಣ್ಣಿಗೆ ಕಾಣುವ ಈ ಅಗಾಧ ಪ್ರಪಂಚವೆಲ್ಲಾ ಗುಂಪು ಕಟ್ಟಿರುವ ಒಬ್ಬಂಟಿಗಳದು.
ಸುಮ್ಮನಿದ್ದಾಗಲು, ನಾ ಸುಮ್ಮನಿರೋದಿಲ್ಲ. ಎಲ್ಲರ ಜೊತೆ ಕೂಗು ಹಾಕಿ ಹರಟುವಾಗ, ಒಂದೊಂದು ಮಾತುಗಳಲ್ಲಿ, ಒಬ್ಬೊಬ್ಬರೂ ಒಂಟಿತನದ ಜೊತೆಗೆ ಜಿದ್ದಿಗೆ
ಬಿದ್ದು ಹೋರಾಡುವುದು ಕಾಣಿಸುತ್ತದೆ. ಬಹಶಃ ಕಾಲದ ಜೊತೆಗೆ ಅನಾವರಣಕೊಳ್ಳುತ್ತಾ ಹೋಗೋದು ನಮ್ಮ ಒಂಟಿತನ. ಕಮ್ಯೂನಿಕೇಷನ್ ಸ್ಕಿಲ್ ಅಲ್ಲಾ!! ’

ಸಂಗೀತದ ಜೊತೆಗೆ ಅವಳದ್ದು, ಮೊದಲ ಮದುವೆಯಾಗಿ ಹೋಗಿತ್ತು. ಸಂಗೀತದ ತೀವ್ರತೆಯನ್ನು
ಅನುಭವಿಸಿದವಳಿಗೆ, ಸಂಬಂಧಗಳಲ್ಲಿಯೂ ಅಂತಹುದೇ ಉತ್ಕಟತೆಯ ಹೆಬ್ಬಯಕೆ.

‘ ನಾವು ಯಾರಿಗೆ..? ಹೆಚ್ಚು ಅರ್ಥ ಆಗಬೇಕು ಅಂತ ಆಸೆ ಪಡುತ್ತೀವೆಯೊ, ಅಂಥವರನ್ನ ಮನದ ಒಳಗೆ ಬಿಟ್ಟುಕೊಳ್ಳಬೇಕು.
ನಾಲಗೆಯ ಬಾಗಿಲಲ್ಲೇ ನಿಲ್ಲಿಸಿ ಕಳಿಸುವುದಾದರೆ. ಸಂಬಂಧವೇಕೆ ಬೇಕು..?
ಆ ಸಂಬಂಧಕ್ಕೂ ಒಂದು ವ್ಯರ್ಥ ಹೆಸರೇಕೆ ಬೇಕು. ಏನೇ ಇದ್ದರೂ. ಎಲ್ಲದೂ ತೀವ್ರವಾಗಿರಬೇಕು.
ಹಚ್ಚಿಕೊಂಡರೂ!! ಮೆಚ್ಚಿಕೊಂಡರೂ!! ಅದೂ ಕೂಡ ಸಿಕ್ಕಾಪಟ್ಟೆ. ಪ್ರೇಮ ಅಂದ್ರೆ ಉತ್ಕಟಪ್ರೇಮ.
ಚೂರು-ಪಾರು ಇಲ್ಲ’ ಎನ್ನುವಳು.

ಒಂದು ಬಲು ದೊಡ್ಡ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ.
ಸೆಲೆಬ್ರಿಟಿ ಆಕರ್ಷಣೆಗಾಗಿ ಪೂರ್ವಿಯನ್ನು ಆಹ್ವಾನಿಸಲಾಯ್ತು.
ಕೂತಲ್ಲಿ, ನಿಂತಲ್ಲಿ ಹಲ್ಲು ಕಿರಿಯುವುದರಿಂದ ತುಟಿಯ ಸ್ನಾಯುಗಳು ಬಿಗಿಯುತ್ತವೇ ಎಂದು ಅರಿತಿದ್ದವಳು, ಚೈತನ್ಯವಿಲ್ಲದ ನಗುವನ್ನು ತೋರುವ
ಬದಲು, ಬಾಯೊಳಗೆ ಅದುಮಿದ್ದಳು.

ಅಭಿಮಾನಿಗಳ ಪ್ರೀತಿಯ ಮೇರೆಗೆ ಹಾಡಿದಳು. ದೊಡ್ಡತನದ ದೊಡ್ಡ ಸಮಾರಂಭದಲ್ಲಿ, ಅವಳ ಧ್ವನಿ ಜೀವವಾಯುವಿನಂತೆ ಪ್ರವಹಿಸಿತು.

ಕಾರ್ಯಕ್ರಮದ ಕೊನೆಯಲ್ಲಿ, ಸಂಘಟಕನೊಬ್ಬ ಕಟುವಾಗಿ ನುಡಿದನು.
‘ ನಿಮಗೆ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ದುಡ್ಡು ಕೊಡುವುದಲ್ಲದೇ, ನಗುವುದಕ್ಕೂ
ಹೆಚ್ಚಿನ ಹಣವನ್ನೇನಾದರೂ ಕೊಡಬೇಕೆ..? ’

ಎಲ್ಲರ ಮುಂದೆಯೂ, ಅವನ ಕಪಾಳಕ್ಕೊಂದು ಕೊಟ್ಟಳು. ಮನೆಗೆ ಬಂದು ಹಾಸಿಗೆಯ ಮೇಲೆ ಮಕಾಡೆ ಬಿದ್ದಳು.
ಮಣ್ಣಿನ ಬಣ್ಣದ ಬೈಂಡ್ ಮಾಡಿದ್ದ, ತನ್ನ ಡೈರಿಯನ್ನು ತೆಗೆದು ಬರೆಯುತ್ತಾ ಹೋದಳು.

‘ ಎಲ್ಲರೂ ಬೆರಳು ಮಾಡುವಂತೆ, ನಿಜವಾಗಿಯೂ ನಾನು ಬದಲಾಗುತ್ತಲೇ ಇದ್ದೇನಾ. ?
ಬದಲಾಗೋದು ಅಂದ್ರೆ ಏನು..?
ಕಾಲದ ಜೊತೆ ಜನಗಳು ಬದಲಾಗ್ತಾರಾ ಅಥವಾ ಬದಲಾಗೋದು ಆ ಜನಗಳ ಮೇಲಿನ ನಮ್ಮ ಅಭಿಪ್ರಾಯ
ಮಾತ್ರಾವಾ..?
ಇಲ್ಲ!! ಬದಲಾದ ನಮ್ಮತನಕ್ಕೆ ಹೊಂದದ ಒಟ್ಟು ಸಮೂಹವನ್ನೇ ಧಿಕ್ಕರಿಸುತ್ತೇವೆ. ಬಿಟ್ಟು ಬಾಳುತ್ತೇವೆ.
ಆದರೆ!! ನಾನು ಬದಲಾಗಿಲ್ಲ. ನನ್ನೊಳಗಿರುವ ತುಂಟತನ ಮತ್ತು ನಾನು!! ಈಗಲೂ ಹಾಗೆಯೇ ಇದ್ದೇನೆ.

ಸ್ಕೂಲ್ ಬಸ್ಸು ಹತ್ತುವಾಗ, ಅಮ್ಮನ ಕೈ ಬಿಡುವ ಪುಟ್ಟ ಮಕ್ಕಳನ್ನು ನೋಡಿ ಆನಂದಿಸಿದ್ದೇನೆ.
ರಸ್ತೆ ಬದಿಯಲ್ಲಿ ಶಾಯರಿ ಹೇಳುತ್ತಾ ಗೋಲ್-ಗುಪ್ಪ ಮಾರುವ, ಆ ಹುಡುಗನಿಂದ ಪಡೆದ
ಗೋಲ್-ಗುಪ್ಪವನ್ನು, ಬಾಯಿ ತುಂಬಿಕೊಂಡು ಆಸ್ವಾಧಿಸುತ್ತೇನೆ.
ನಾನು ನಗಬಲ್ಲೆ;
ನಾನು ಹರಟಬಲ್ಲೆ;
ನಾನು ಪ್ರೀತಿಸಬಲ್ಲೆ;
ನನ್ನನ್ನು ಅರಗಿಸಿಕೊಳ್ಳುವನಿಗೆ ನನ್ನ ಹೆಣ್ತನವನ್ನು ಧಾರೆ ಎರೆಯಬಲ್ಲೇ.’

ಪೂರ್ವಿಯು ಕೆಲಕಾಲ ಸಾರ್ವಜನಿಕ ಸಮಾರಂಭಗಳಿಂದ ದೂರ ಉಳಿದಳು. ಮುಳುಗುವ ಸೂರ್ಯನ ನೋಡುತ್ತಾ!! ಕಾಲ ಕಳೆಯುತ್ತಿದ್ದಳು.
ಮತ್ತೊಂದು ದಿಕ್ಕಿನಿಂದ ಸೂರ್ಯ ಉದಯಿಸುತ್ತಿದ್ದ.


ಸಾವಿರ ಜನರು ಸೇರಿದ್ದ ಬಹುದೊಡ್ಡ ಸಂಗೀತ ಸಮಾರಂಭ.
ಪೂರ್ವಿಯು ಸಾಧಾರಣ ಶ್ರೋತೃ.
ವೇದಿಕೆಯ ಮೇಲೆ, ಎಲ್ಲಾ ಸಂಗೀತ ಸಾಧನಗಳನ್ನು ಭಾರಿಸುವುದನ್ನು ಕ್ಷಣಕಾಲ ಮುಗುಮ್ಮಾಗಿಸಿದರು. ಬಿಲ್ಡಪ್ಪು!!
ಎರಡು ಕ್ಷಣ ನಿಶ್ಯಬ್ದ. ನಿಶ್ಯಬ್ದವನ್ನು ಬೇದಿಸಿಕೊಂಡು ಬಂದದ್ದು ಕೊಳಲಿನ ಸದ್ದು.
ಉಸಿರು ಬೆರಳುಗಳ ಕೊಳಲಿನ ಜಾದುವಿಗೆ, ಪೂರ್ವಿ ತನ್ನನ್ನು ತಾನು ಸಂಪೂರ್ಣವಾಗಿ ಅರ್ಪಿಸಿಕೊಂಡಳು.

ಕೆಲವು ಸದ್ದುಗಳೇ ಹಾಗೆ. ಎಲ್ಲಿ ಅನಾಹುತ ಸೃಷ್ಟಿಸುತ್ತವೇ..? ಎಂಬುದರ ಅಂದಾಜು, ನುಡಿಸುವವನಿಗೇ ತಿಳಿದಿರುವುದಿಲ್ಲ.

ಕೊಳಲು ನುಡಿಸಿದವನ ಹೆಸರು, ಹರಿಯೋದಯ ಮಿತ್ರ. ಚಿಗುರು ಮೀಸೆಯ ಯುವಕ.
ಮಿತ್ರ!! ಪೂರ್ವಿಯ ಕಂಠದ ಆರಾಧಕನೂ ಹೌದು. ಅವಳ ಅಹಮ್ಮಿನ ಬಗ್ಗೆ ತಿಳಿದವನಿಗೆ, ಸ್ವಲ್ಪ ಮಟ್ಟಿನ
ನಿರ್ಲಕ್ಷ್ಯದ ಭಾವನೆ ಇತ್ತು. ಪೂರ್ವಿಯು ಮಿತ್ರನಿಗಿಂತ ಎರಡು ವರ್ಷ ಹಿರಿಯವಳು.
ಕಲೆಯ ನೆಲೆಯಲ್ಲಿ ಇಬ್ಬರ ಸ್ನೇಹವು ಕುದುರಿತು.

ಪೂರ್ವಿಯ ಸಂಘಕ್ಕೆ ಹಾತೊರೆಯುತ್ತಿದ್ದ ಬಹಳಷ್ಟು ಗಂಡಸರ ನಡುವೆ, ಕೊಳಲಿನ ಮಾಂತ್ರಿಕ
ಮಿತ್ರ ಕೊಂಚ ಬೇರೆಯಾಗಿ ನಿಂತ. ಅವಳು ಸೋತಳು. ಯಾವುದಕ್ಕೆ ಎಂಬ ಪ್ರಶ್ನೆಗೆ ಅವಳಲ್ಲಿಯೇ
ಉತ್ತರವಿಲ್ಲ.
ಅಗಾಧ ಬಾಹುವಿನ, ಅವನ ಸೌಂಧರ್ಯಕ್ಕಾ. ?
ಮಂತ್ರ ಮುಗ್ಧವಾಗಿಸುವ ಆ ಕೊಳಲಿನ ವಳ್ಳೆಗಾ. ?
ಅಥವಾ ಸೋತಿದ್ದು ‘ತನ್ನ ಬಗೆಗಿದ್ದ ಅವನ ನಿರ್ಲಕ್ಷ್ಯಕ್ಕಾ. ?

ಮಿತ್ರ, ಹಸನ್ಮುಖಿ. ಜೀವನದ ಬಗೆಗಿನ ಮಿತ್ರನ ನಿಲುವು, ಪೂರ್ವಿಯದ್ದಕ್ಕಿಂತ ಭಿನ್ನ.
ಪೂರ್ವಿಗೆ ಕಲೆಯೇ ಜೀವನ. ಮಿತ್ರನಿಗೆ ಕೊಳಲು ಜೀವನದ ಭಾಗ.

ಒಂಟಿತನವನ್ನು ಅಪ್ಪಿ ಬೆಳೆದ ಪೂರ್ವಿಗೆ, ಬದಲಾಗುವ ಜನಗಳ ನಡುವಳಿಕೆ ರೇಜಿಗೆ ತರಿಸುತ್ತಿತ್ತು.
ಮಿತ್ರ ಸಂಘಜೀವಿ!! ಇಬ್ಬರಲ್ಲಿಯೂ ಪ್ರೇಮಾಂಕುರವಾಯಿತು.

ಯಾರಿಗೂ ಕಾಣದ ಪೂರ್ವಿಯ ಅಸಹಾಯಕತೆ; ಅವಳ ಚಂಚಲತೆ; ಪ್ರೀತಿಯ ಉತ್ಕಟತೆ; ಮಿತ್ರನಿಗೆ
ಕಾಣಿಸುತ್ತಿತ್ತು. ಹೊರ ಪ್ರಪಂಚಕ್ಕೆ ಕುಡಿದ ಕುದುರೆಯಂತೆ ಅನಿಸುವ ಪೂರ್ವಿ, ಮಿತ್ರನ
ಪ್ರೀತಿಯ ಬಾಹುಗಳಡಿಯಲ್ಲಿ ಎಳೆ ಮಗುವಿನಂತಾಗುವಳು.

ವೈರುಧ್ಯಗಳ ನಡುವೆ ಅವರನ್ನು ಬಂಧಿಸಿದ್ದು, ಕಲೆಯಿಂದ ಪ್ರಾರಂಭಗೊಂಡ ಪ್ರೀತಿ.

ಅವರು ಬೆರೆತರು.
ಸಂಗೀತದ ನೊಗಕ್ಕೆ ಹೆಗಲು ಕೊಟ್ಟು ದೇಶ-ವಿದೇಶಗಳನ್ನು ಸುತ್ತಿದರು.
ಕಲಾರಸಿಕರ ಸಂಗೀತದಾಹವನ್ನು ತಣಿಸಿದರು. ಅವನ ಕೊಳಲಿಗೆ, ಅವಳ ಕಂಠದ ಉಬ್ಬುತಗ್ಗುಗಳು ನರ್ತಿಸುತ್ತಿದ್ದವು.

ಅವರು ಬೆರೆತರು;
ಪ್ರಪಂಚದ ಅಣತಿಗಳನ್ನು ಗಾಳಿಗೆ ತೂರಿದರು;
ಹಾರ ಬದಲಿಸಿದರು.
ಒಂದಾದರು.

ಅಪ್ಪಿಕೊಂಡು, ಎದೆಯ ಮೇಲೆ ಕಿವಿ ಇಟ್ಟು ಪಿಸುಗುಡುವಳು
‘ ಕೊನೆವರೆಗೂ ಈ ಹುಚ್ಚಿಯನ್ನ ಹಿಂಗೇ ಪ್ರೀತಿಸ್ತೀನಿ ಅನ್ನು.. ’

ಏನೂ ಹೇಳದೆ!! ಹಣೆಯ ಮೇಲೆ ಮುತ್ತಿಟ್ಟನು. ಪ್ರೀತಿಯ ಪ್ರಮಾಣದಂತೆ.

‘ you completed me ’ ಅಂದಳು.

‘i need you completely ’ ಎನ್ನುತ್ತಾ ಅಪ್ಪುಗೆಯನ್ನು ಬಿಗಿ ಮಾಡಿದನು.

‘ನನಗೆ ಸಿಟ್ಟು ಮೂಗಿನ ತುದಿನಲ್ಲೇ ಇರತ್ತೆ. ’ ಮೂಗನ್ನೇ
ಎದೆಗೆ ತೀಡಿದಳು.

‘ನಾನು, ತುಂಬಾನೆ ಇಷ್ಟ ಪಟ್ಟಿದ್ದು, ನಿನ್ನ ಆ ತುದಿ ಬಾಗಿದ ಮೂಗನ್ನೇ ಪೂರ್ವಿ.
ಅದೊಂದನ್ನ ನನಗೆ ಬಿಟ್ಟುಬಿಡು. ನಾ ನೋಡಿಕೊಳ್ತೇನೆ. ’ ಎಂದನು.

ಪೂರ್ವಿ ನಾಚಿದಳು ‘ ಅದು ಹಾಗಲ್ಲ, ನಾನು ಕೋಪಿ-ಪಾಪಿ ಅಂದ್ರೆ ಕೋಪ ಜಾಸ್ತಿ
ಜೀವನ ಪೂರ್ತಿಯಾಗಿ ಆಗುವಷ್ಟು ಸಾರಿಯನ್ನ, ಈಗಲೇ ಕೇಳ್ತಿದ್ದೇನೆ. ಮುಂದೆ ನೀನದನ್ನ expect ಮಾಡಬಾರದು.
ಆಯ್ತಾ. ? ’. ಸಾರಿ, ಸಾರಿ ಎಂಬುದಾಗಿ ಹೇಳುತ್ತಾ ಹೋದಳು.
ಮುಖವು, ಒಂದಿಂಚಿನಷ್ಟು ಮುಂದಕ್ಕೆ ಬಂದಿತ್ತು. ಆಯ್ತೆಂದು ತಲೆಯಾಡಿಸಿದ.

‘ಮುದ್ದು ಮುಖಕ್ಕೆ ಪೆದ್ದುತನ ತುಂಬಾ ಒಪ್ಪುತ್ತೆ.
ಅದನ್ನ ಒಂದು ಕ್ಷಣ ಹಾಗೆ ಇಟ್ಕೋ. ಪದೆ ಪದೆ ಸಿಗಲ್ಲ ನನಗದು. ನಾ ನೋಡಬೇಕು.’
ಮುಖದ ಮೇಲಿನ ನಾಚಿಕೆಯನ್ನು, ಅವನ ಎದೆಯೊಳಗೆ ಅಡಗಿಸಿದಳು.
ಉಸಿರ ಬಿಸಿಗೆ, ಅವರ ಎದೆ ಬಲೂನಿನಂತಾಗಿ ಆಗಸದಲ್ಲಿ ತೇಲುತ್ತಿತ್ತು.

ಪ್ರೀತಿಯಿಂದ ತಂದ ವಜ್ರದುಂಗರವನ್ನು ಹಿಡಿದು,
‘ಪೂರ್ವಿ ನೀನು ನನ್ನ ಬಾಳಸಂಗಾತಿ' ಎಂದನು.
‘ನಾನು ನಿನ್ನ ಆತ್ಮ ಸಂಗೀತ ' ಎಂದಳು.

' ನಾನು ನಿನ್ನ ಗೆಳತಿ; ನನ್ನ ದಿಕ್ಕು ತಪ್ಪಿದ ದೋಣಿ, ಹುಟ್ಟು ಹಾಕದೆಯೇ ತೀರ ಸೇರುತ್ತಿದೆ’ -
ಅವಳ ಕಣ್ಣುಗಳು ಹನಿಗೂಡುತ್ತಿದ್ದವು. ಉಂಗುರವನ್ನು ಬೆರಳಿಗೆ ತೊಡಿಸಿ, ಪುನಃ ಅಪ್ಪಿಕೊಂಡನು.

‘ತೀರಕ್ಕೆ ಬರೋದೆ ಬೇಡ ಪೂರ್ವಿ. ನಿನ್ನ ದಿಕ್ಕು ತಪ್ಪಿದ ದೋಣಿನಲ್ಲಿ ನಂಗೂ ಸ್ವಲ್ಪ ಜಾಗ ಕೊಡು.
ನೀನು ಹೇಳಿದ ಕಡೆಗೆ, ಹುಟ್ಟು ಹಾಕ್ತೇನೆ. ಕೊನೆವರೆಗೂ.. ಒಟ್ಟಿಗೆ ಇರಬೇಕು ಅಂತಿರೋದು ಬೇಡ.
ಒಟ್ಟಿಗೆ ಇರೋಣ. ಯಾರಿಗೋ ಆದರ್ಶ, ಮತ್ಯಾರಿಗೋ ಮಾದರಿಯಾಗಿಲಿಕ್ಕಲ್ಲ ನಾವು ಬದುಕೋದು.
ನಮಗೋಸ್ಕರ ಬದುಕೋಣ.
ಸತ್ತ ಮೇಲೆ ಹಿಂಬಾಲಿಸುವ ಸಾಧನೆಯ ಬಂಗಾರದ ಹೆಜ್ಜೆ ಗುರುತುಗಳನ್ನು ಸಂಪಾಧಿಸೋದಕ್ಕಿಂತ, ನಾವು ಇರುವವರೆಗೂ ನೆರಳು ಕೊಡುವ ಪುಟ್ಟ ಗುಡಿಸಲು ಕಟ್ಟಿಕೊಳ್ಳೋಣ. ’

ವಸಂತಗಳು ಉರುಳಿದವು. ಸಮಯದ ಜೊತೆಗೆ ಅವರು ಒಬ್ಬರಿಗೊಬ್ಬರು ಅರ್ಥವಾಗಬೇಕಾಗಿರುವುದೇನು
ಉಳಿದಿರಲಿಲ್ಲ. ಅವರು ಅವರಂತೆಯೇ ಒಬ್ಬರನ್ನೊಬ್ಬರು ಒಪ್ಪಿದರು.
ನಂಬಿಕೆಗಳ ಬೇರು ಬಲವಾಗಿ ಬೇರೂರಿತು. ಕಾರಣಗಳು ಮತ್ತು ವಿವರಣೆಗಳಿಗೆ ಕಿವಿಗಳು ಕಿವುಡಾದವು.
ಅವರು ನಾಡಿ ಮಿಡಿತದ ಅಣತಿಗೆ ಸ್ಪಂದಿಸುವಷ್ಟು ಬೆರೆತರು. ಸಂಭ್ರಮಿಸಿದರು.


ಮಿತ್ರ ತನ್ನ ಕೈಯನ್ನೊಮ್ಮೆ ಹಿಸುಕಿಕೊಂಡ. ‘ ಅವಳ ಹಠಮಾರಿತನ, ಮಿತಿ ಮೀರಿತ್ತು. ಅದು
ನಮ್ಮಿಬ್ಬರ ನಡುವಿದ್ದಾಗ ಸಹಿಸಿಕೊಂಡೆನು. ಆದರೆ ಸಹ ಕಲಾವಿದನನ್ನು, ವೇದಿಕೆಯ ಮೇಲೆಯೇ ಅಪಮಾನಿಸುವ ಅವಳ ನಡುವಳಿಕೆ ಸಹನೆಯನ್ನು ಕೆಡಿಸಿ ಬಿಟ್ಟಿತು.
ಭಾವನೆಗಳ ಹಂಗಿನಲ್ಲಿ ಬಚ್ಚಿಟ್ಟುಕೊಂಡು, ಜಗತ್ತನ್ನೇ ತುಚ್ಚವಾಗಿ ಕಾಣುವುದೇ?

ಆದರೂ, ನಾ ಹಾಗೆ ಮಾಡಬಾರದಿತ್ತು. ಅದೂ ಕೂಡ ಅದೇ ವೇದಿಕೆಯ ಮೇಲೆ, ಸಾವಿರಾರು ಜನಗಳ ಸಮ್ಮುಖದಲ್ಲಿ.
ಛೇ!! ಅವಳು ಹೇಗೆ ಅನ್ನೋದು ನನಗೆ ಗೊತ್ತಿತ್ತಲ್ಲವೇ. ?
ಪೂರ್ವಿ!! ಶಾಂತ ಸಾಗರದ ಒಡಲಲಿ ಅವಿತಿರುವ ಚಂಡಮಾರುತ ಅನ್ನುವುದು ಗೊತ್ತಿದ್ದೂ, ಒಂದು ಕ್ಷಣ ಸೈರಣೆ ಕಳೆದುಕೊಂಡೆ.’
ಮಿತ್ರ ಕೆನ್ನೆ ಸವರಿಕೊಂಡು, ತನ್ನ ಬಲಗೈಯ ಕಡೆಗೆ ವಿಷಾದದ ನೋಟ ಬೀರಿದ.
ಹಿಂದಕ್ಕೆ ಹೋದ ಅಲೆ ಬರುವುದು ತಡವಾದರೆ, ಅಪ್ಪಳಿಸುವಂತೆ ಬರುತ್ತದೆ ಎಂದು ಅರಿತಿದ್ದವನು, ಎದೆಯನ್ನು
ಬಂಡೆಯಾಗಿಸಿಕೊಂಡು ಕಾಯುತ್ತಿದ್ದ. ಆ ಅಲೆ ತಿರುಗಿ ಬರಲಿಲ್ಲ.


ಪೂರ್ವಿಯು!! ತನ್ನ ಡೈರಿಯ ಪುಟಗಳನ್ನು ತಿರುಗಿಸುತ್ತಾ ಹೋದಳು.
ಮದುವೆಯ ನಂತರದ ಸಂಭ್ರಮದ ದಿನಗಳಲ್ಲಿ ಬರೆದಿದ್ದ ‘ happily married ’ ಎಂಬ ಕೊನೆಯ ಸಾಲುಗಳಾಚೆ ಏನನ್ನೂ
ಬರೆದಿರಲಿಲ್ಲ. ಅವಳ ಒಂಟಿತನವನ್ನು ಭೋಗಿಸುತ್ತಿದ್ದ ಡೈರಿಯು, ಮಿತ್ರನ ಆಗನದ ನಂತರ
ಅನಾಥವಾಗಿತ್ತು. ನಾಲ್ಕು ವಸಂತಗಳು ಸರಿದಿದ್ದವು.

'happily married' ಮೇಲೆ ಪುನಃ ತಿದ್ದಿದಳು. ತಿದ್ದುತ್ತಲೇ ಹೋದಳು.
ಹಾಳೆಯು ಹರಿದು ಹೋಯಿತು. ನಡುಗುತ್ತಿದ್ದ ಕೈಗಳಿಂದ, ಒದ್ದೆಯಾದ ಕಣ್ಗಳನ್ನು ಒರೆಸಿಕೊಂಡಳು. ಬರೆಯುತ್ತಾ ಹೋದಳು.

‘ ಸಾಲಿನಿಂದ ಸಾಲಿಗೆ ಸಂಬಂಧವೇ ಇಲ್ಲದೆ, ಸೋಲುತ್ತಾ ಸಾಗುವ ಸಾವಿನ ಸೊಲ್ಲುಗಳಿವು. ಥೇಟು
ನನ್ನ ರೀತಿ. ಮನಸ್ಸು ಅಜಾಗೃತವಾಗಿದ್ದಾಗಲೂ ಮೂಡುವ vibration ಗಳಿವು. ಅಂದುಕೊಳ್ಳುವ
ಮನಸ್ಸಿಗೂ, ಉರುಳುವ ನಾಲಗೆಗೂ ಹಗ್ಗ ಜಗ್ಗಾಟ ಇರತ್ತಲ್ಲಾ ಹಂಗೆ.

ಅಷ್ಟು ಜನಗಳ ಮುಂದೆ ನನಗೆ ಹೊಡೆದಿದ್ದಕ್ಕೆ ನಿನ್ನ ಮೇಲೆ ಕೋಪ ಇಲ್ಲ ಮಿತ್ರ. ಅದೇ
ಕ್ಷಣದಲ್ಲಿ, ನಿನಗೆ ನಾ ತಿರುಗಿಸಿ ಹೊಡೆದೆ. ನಾನು ಹಾಗೆಯೇ!! ಕೋಪ ಕರಗಿ ಹೋಯ್ತು.
ಆದರೆ ನಿನ್ನ ಜೊತೆ ಬದುಕುವ ಯೋಗ್ಯತೆ, ನನಗಿಲ್ಲ.

ಜೀವನ ಅಂದ್ರೆ ಏನು..?
ಉದ್ದಕ್ಕೂ, ಎಲ್ಲರಿಗೂ ಸ್ವಲ್ಪ ಸ್ವಲ್ಪ ಸುಳಿವುಗಳನ್ನು ಕೊಡುತ್ತಾ.. ತಮ್ಮನ್ನು ಬಿಡಿಸುವಂತೆ ಗೋಗರೆಯುವ ಒಂದು ಒಗಟು.
ಹೌದಾ..?

ನನ್ನ ಒಗಟನ್ನು ಬೇರೆಯವರು ಬಿಡಿಸೋದು ನನಗೆ ಇಷ್ಟ ಇಲ್ಲ. ಎಲ್ಲರ ರೀತಿ ಇರೋದಕ್ಕಾಗಲ್ಲ.
ನಾನ್ಯಾಕೆ ಹೀಗೆ. ? ಅನ್ನೋದು ನನಗೂ ಗೊತ್ತಿಲ್ಲ.

ಬಹುಷಃ ನನ್ನ ಜೊತೆ ಬೆರೆಯುವುದಕ್ಕಿಂತ, ಗುರುತಿಸಿಕೊಳ್ಳೋದಕ್ಕೆ ಹಾತೊರೆಯುವ ಸಮೂಹ ಸೃಷ್ಟಿ ಆಗ್ತಾ
ಇದ್ದಂತೆ, ನಾನು ಎಲ್ಲರನ್ನೂ ಅನುಮಾನದಿಂದ ನೋಡೋದಕ್ಕೆ ಪ್ರಾರಂಭಿಸಿದೆ.

ಸಂಗೀತ, ನನಗೆ ಬೇರೆ ಯಾರಲ್ಲಿಯೂ, ಯಾವುದರಲ್ಲಿಯೂ ರುಚಿ ಇಲ್ಲದಂತೆ ಮಾಡಿತು.
ಅಲ್ಲಿಂದ ನನ್ನ ಭಾವಜಗತ್ತು ಏಕಾಂತವಾಯ್ತು. ಸ್ವಲ್ಪ ಮಟ್ಟಿಗೆ ವಿಕಾರವಾಗುತ್ತಲೂ ಹೋಯ್ತು.
ಅಂಥಹಾ ಒಂದು ಸುಸಂಧರ್ಭದಲ್ಲಿ ನೀನು ಸಿಕ್ಕಿದೆ. ನೀನೆ ಪ್ರಪಂಚ ಆಗಿ ಬಿಟ್ಟೆ.

ಕೆಲವರಿಗೆ ಎಲ್ಲರ ಕಣ್ಣಲ್ಲೂ.. ತಾವು ಒಳ್ಳೆಯವಾರಿಗಿಯೇ ಉಳಿಯೋ ಹವ್ಯಾಸ ಇರತ್ತೆ. ಆತ್ಮವಂಚನೆ ಆದರೂ ಸರಿ ಒಳ್ಳೆಯವರಾಗಿಯೇ ಉಳಿದು ಬಿಡ್ತಾರೆ.

ಅಂಥಾದ್ದೊಂದು ಆಲೋಚನೆ ನನ್ನಲ್ಲೂ ಇತ್ತು. ಅದು ಅಂದ್ರೆ, ನಿನ್ನ ಕಣ್ಣಲ್ಲಿ ಮಾತ್ರ ಒಳ್ಳೆಯವಳಾಗಿ ಉಳಿದು ಹೋಗುವ ಆಸೆ.
ಭಾವನೆಗಳು ಒತ್ತರಿಸಿಕೊಂಡು ಬರದೆ ಹಾಡಿದ್ದೆಲ್ಲವೂ, ಅಕ್ಷರ ಕಲಿವ ಮಕ್ಕಳು ಗೀಚಿದ
ರೇಖೆಗಳಂತೆ. ತುದಿಗಳು ಕೂಡುವುದಿಲ್ಲ. ಶೃತಿಗಳು ಸೇರೋದಿಲ್ಲ.

ನೀ ನನ್ನೊಳಗಿನ ಧನಿ ಮಿತ್ರ. ನನ್ನ ಕಂಠದಿಂದ ಹೊಮ್ಮುತ್ತಿದ್ದ ತರಂಗಗಳು, ನಿನ್ನ ಮೆಚ್ಚಿಸಬೇಕು ಅಂತಲೇ.
ನನಗಾಗಲಿ, ನನ್ನ ಕಂಠಕ್ಕಾಗಲಿ ಯಾವತ್ತೂ ತರತರದ ಪ್ರಶಂಸೆಗಳನ್ನ, ಈ ಪ್ರಪಂಚದಿಂದ ನಿರೀಕ್ಷಿಸಲಿಲ್ಲ.
ಆ ಕ್ಷಣದ ನನ್ನ ಅನುಭವ. ಆ ಕ್ಷಣದ ನಿನ್ನ ಖುಷಿ. ಸದಾಕಾಲ, ನಾನು ಕಾಣ ಬಯಸುವಾ ಮತ್ತು ಕಾಣುವಾ ಆ ನಿನ್ನ ಮೆಚ್ಚುಗೆಯ ಅಹಮ್ಮಿನ ನೋಟ.

ನನಗ್ಗೊತ್ತು!! ನಾನು ಅಂದ್ರೆ ನಿನಗೆ ಪ್ರಾಣ ಅಂತ.
ಪ್ರತಿ ಸಾರಿಯೂ ನನ್ನ ಪರ ವಹಿಸಿಕೊಂಡು ಬರ್ತೀಯ.
ತಪ್ಪು ನನ್ನದೇ ಇದ್ರೂ, ನನಗಾಗಿ ಎಲ್ಲರ ಜೊತೆ ಹೋರಾಡ್ತೀಯ.
ಈ ಸಾರಿ ಮಾತ್ರ ಯಾಕೋ ಹೊಡೆದೆ ? ಈಡಿಯಟ್.

ಸಾಕು ಮಿತ್ರ. ಇನ್ನು ನಾ ನಿನಗೆ ಕಷ್ಟ ಕೊಡಲ್ಲ.
ನನ್ನ ಮರೆತು ಹೋಗೋದಕ್ಕೆ, ನನ್ನ ಬಗ್ಗೆ ಸ್ವಲ್ಪ ತಿರಸ್ಕಾರ ಭಾವನೆ ಬೆಳೆಸಿಕೊ.
ಇಲ್ಲಾ ಅಂದ್ರೆ ನನ್ನ ನೆನಪಲ್ಲೇ ಸತ್ತು ಹೋಗ್ತೀಯ.
ಒಮ್ಮೆ ತಿರಸ್ಕಾರ ಭಾವನೆ ಮೂಡಿತು ಅಂದ್ರೆ, ಆ ತಿರಸ್ಕೃತಳ ಅಸ್ತಿತ್ವ, ಯಾವ ರೂಪದಲ್ಲಿ ಇದ್ದರೂ ಮನಸ್ಸು ನೋಯಿಸೋದಿಲ್ಲ.

ಆಟದಲ್ಲಿ ಗೆಲ್ಲಬೇಕು ಅಂತ ಇದ್ರೆ, ಮುಗಿಯುವ ಕೊನೆ ಕ್ಷಣದವರೆಗೂ, ಕ್ರೀಡಾ ಸ್ಪೂರ್ತಿ ಬಿಡದೆ ಆಡಬೇಕು ಆಲ್ವಾ..?
ಕೈಚೆಲ್ಲಿ, ಮೈದಾನವನ್ನೇ ಬಿಟ್ಟು ಹೊರನಡೆದರೆ ಹೇಗಿರತ್ತೆ..?
ಅಲ್ಲಿ ಸೋಲು ಗೆಲುವಿಗಿಂತ ಹೆಚ್ಚಾಗಿ ಕಾಡುವುದು, ನಮ್ಮ ಫಲಾಯನವಾದಿ ಆಟ್ಟಿಟ್ಯೂಡ್.
ಆ ವಿಷಾದ ಮಾತ್ರ, ಎಲ್ಲಿವರೆಗೂ ನನ್ನ ಹಿಂಬಾಲಿಸತ್ತೋ ಗೊತ್ತಿಲ್ಲ.
ನನ್ನ ಕ್ಷಮಿಸಿ ಬಿಡು ಮಿತ್ರ. ನಿನಗೆ, ಹಂಗ್ ಹೊಡೀ ಬಾರದಿತ್ತು ಕಣೋ. ಮತ್ತೆ!! ನೀ ಯಾಕ್ ಹೊಡಿಬೇಕಿತ್ತು. ?

ನನ್ನ ಮೂಗಿಗೆ, ನಿನ್ನ ಮೇಲೆ ತುಂಬಾ ಕೋಪ ಬರ್ತಿದೆ.
ನಿನಗೆ ‘ಸಾರಿ’ ಹೇಳೋದಕ್ಕೂ ಅವಕಾಶ ಕೊಡಬಾರದು ಅನ್ನೋ ಹಠದಲ್ಲಿ ವಜ್ರದುಂಗುರ ನುಂಗಿದ್ದೇನೆ.
ಆದರೆ, ಈಗ್ಯಾಕೋ ನನಗೆ ಬದುಕಬೇಕು ಅಂತ ಅನ್ನಿಸ್ತಿದೆ. ’

ಬಾಯಿಂದ ಉಕ್ಕಿ ಬರುತ್ತಿದ್ದ ರಕ್ತವು, ಅಕ್ಷರಗಳನ್ನು ಕೆಡಿಸಿತು. ಪೂರ್ವಿ ಹಾಸಿಗೆಯ ಮೇಲೆ ಅಂಗಾತ ಹೊರಳಿದಳು.
ಪುಡಿಯಾಗಿದ್ದ ವಜ್ರದ ಹರಳುಗಳು, ಕರುಳನ್ನು ಕತ್ತರಿಸಲು ಪ್ರಾರಂಭಿಸಿದ್ದವು.