'ಸ್ಕಂದಗಿರಿ' ಗೆ ಚಾರಣಕ್ಕೆಂದು ಹೊರಟಾಗ, ರಾತ್ರಿ ಹನ್ನೊಂದು ದಾಟಿತ್ತು. ಹೋಗುವಾಗ
ಇದ್ದದ್ದು ಒಟ್ಟು ಏಳು ಜನ ಮತ್ತು ನಾಲ್ಕು ಬೈಕು. ನಮ್ಮಲ್ಲಿ ಅತ್ಯಂತ ಸುಳ್ಳುಗಾರನೆಂದು
ಹೆಸರಾದವನು ಶ್ರೀ. ಎಲ್ಲಾ ಗೊತ್ತು ಎಂದು ಎಲ್ಲರನ್ನು ಕರೆದುಕೊಂಡು ಹೋಗಿ,
ನಡುದಾರಿಯಲ್ಲಿ ಕೈ ಚೆಲ್ಲಿಬಿಡುವುದೇ ಹೆಚ್ಚು.  ಸ್ಕಂದಗಿರಿಯದ್ದೂ ಹೆಚ್ಚು ಕಮ್ಮಿ ಅದೇ
ಸ್ಥಿತಿ.

ಬೆಂಗಳೂರಿನಿಂದ ದೇವನಹಳ್ಳಿ-ಚಿಕ್ಕಬಳ್ಳಾಪುರ ಮಾರ್ಗದ ಬದಲಾಗಿ, ಯಲಹಂಕದೊಳಗಿಂದ ಹಳ್ಳಿ
ಹಳ್ಳಿಗಳನ್ನು ಬಳಸುತ್ತಾ ಸಾಗಿದೆವು. ತಾನು ಈ ಹಿಂದೆ ಹಲವಾರು ಬಾರಿ ಹೋಗಿರುವುದಾಗಿ
ಶ್ರೀ ಹೇಳಿಕೊಳ್ಳುವನಾದರೂ, ಆ ಹೇಳಿಕೊಳ್ಳುವಿಕೆಯಲ್ಲಿಯೇ ಕಪಟತೆ ಕಾಣಿಸುತ್ತಿತ್ತು.
ಆದರೂ ಜಡ, ನಿರ್ವಿಕಾರ, ನಿರ್ಲಿಪ್ತ, ನಿರ್ವೀರ್ಯ ಟೆಕ್ಕಿ ಸಮುದಾಯಕ್ಕೆ ಏನಾದರೊಂದು
ಮಾಡಲು ಒಂದು ಸಣ್ಣ ಪುಶ್ ಬೇಕು. ಇಲ್ಲಾಂದ್ರೆ ಹೊರಡೋದಕ್ಕೆ ಮನಸ್ಸು ಬರೋದಿಲ್ಲ.

ಮೊದಲು ಹಳ್ಳಿಗಳ ಮಧ್ಯೆ ಕಳೆದು ಹೋದೆವು. ಕತ್ತಲಲ್ಲಿ, ಹಳ್ಳಿ ರಸ್ತೆಗಳಲ್ಲಿ ಲೆಫ್ಟು
ರೈಟು ಗಳು ಸ್ಪಷ್ಟವಾಗಿ ಕಾಣಿಸುತ್ತಿದುದೇ ಕಷ್ಟಸಾಧ್ಯ. ಅಂತಾದ್ರಲ್ಲಿ  ಮಾರ್ಗ ಸೂಚಿ
ಸೈನ್ ಬೋರ್ಡುಗಳನ್ನು ಎಲ್ಲಿಂದ ಹುಡುಕುವುದು. ತಡರಾತ್ರಿ ಆಗುವ ಹೊತ್ತಿಗೆ ಸರಿಯಾಗಿ
ಸ್ಕಂದಗಿರಿ ಮಾರ್ಗ gps ನಲ್ಲಿ ಟ್ರೇಸ್ ಆಯ್ತು. ಅದರ ಬಾಲ ಹಿಡಿದು ಹೊರಟೆವು. ಆನಂತರ
ತಗಲಾಕ್ಕೊಂಡಿದ್ದು ನಾಲ್ಕು ಬೀಟ್ ಪೋಲೀಸುಗಳ ಕೈಲಿ. ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್
ಗಳನ್ನು ಇಟ್ಟವರು ನಮ್ಮನ್ನೆಲ್ಲಾ ರಸ್ತೆಯ ಮೇಲೆಯೇ ಸುತ್ತಿವರೆದರು. ಕಗ್ಗತ್ತಲ ಬೆತ್ತಲೆ
ರಸ್ತೆಯಲ್ಲಿ ನಮಗೆ ನೀವು, ನಿಮಗೆ ನಾವು ಎನ್ನುವಂತೆ... ಪೋಲೀಸರು ಮತ್ತು ನಮ್ಮನ್ನು
ಬಿಟ್ಟು ಬೇರಾರೂ ಇಲ್ಲ.

ಅವರು ಕಷ್ಟ ಸುಖ ಮಾತನಾಡುವ ನೆಪದಲ್ಲಿ, ಎಲ್ಲರ ಬ್ಯಾಗುಗಳ ಮೇಲೆಯೂ ಕೋಲಿನಿಂದ ಹೊಡೆದು
ಹೊಡೆದು ನೋಡುವರು. ಅವರ ಹುಡುಕಾಟವು ಬಿಯರ್ ಬಾಟ್ಲಿಗೆಂದು, ಗೊತ್ತಿತ್ತು. ಬಿಯರ್
ಬಾಟ್ಲಿಗಳು ಸಿಕ್ಕರೆ,  ಸೀಜ್ ಮಾಡುತ್ತಿದ್ದರೋ..? ಅಥವಾ ಮಧ್ಯರಾತ್ರಿ ಮಧ್ಯಪಾನ
ಸಂವಿಧಾನಕ್ಕೆ ವಿರುದ್ಧವಾದದ್ದು ಎಂದು ಇನ್ನಷ್ಟು ಹೆದರಿಸಿ, ಬೆದರಿಸಿ ಒಂದೆರಡು ಹೆಚ್ಚು
ಗಾಂಧಿ ನೋಟುಗಳಿಗೆ ಕೈ ಹಾಕುತ್ತಿದ್ದರೋ..? ಗೊತ್ತಿಲ್ಲ. ಅವರ ದುರಾದೃಷ್ಟಕ್ಕೆ,
ನಮ್ಮಲ್ಲಿ ಯಾರ ಬಳಿಯೂ, ಧೂಮಪಾನ.., ಮದ್ಯಪಾನದಂತಹ ಕಲಬೆರಕೆಗಳು ಇರಲಿಲ್ಲ.  ಬದಲಾಗಿ
ಸೇಬು, ಒಣ ದ್ರಾಕ್ಷಿ, ಗೋಡಂಬಿ, ಗ್ಲುಕೋಸ್ ಪಟ್ಟಣ ಸಿಕ್ಕಿತು.

ಅಪ್ಪಿ ತಪ್ಪಿಯೂ ನಾವ್ಯಾರೂ ನಮ್ಮನ್ನು ಸಾಫ್ಟ್-ವೇರ್ ಇಂಜಿನಿಯರುಗಳೆಂದು
ಪರಿಚಯಿಸಿಕೊಳ್ಳಲಿಲ್ಲ. ಬದಲಾಗಿ, ಬೇರೆ ಊರುಗಳಿಂದ ಇಲ್ಲಿಗೆ ಬಂದು, ಇಂಜಿನಿಯರಿಂಗ್
ಓದುತ್ತಿರುವ ವಿದ್ಯಾರ್ಥಿಗಳೆಂದು ಹೇಳಿಕೊಂಡೆವು. ನಮ್ಮನ್ನು ವಿದ್ಯಾರ್ಥಿಗಳೆಂದು
ತಟಕ್ಕನೆ ಒಪ್ಪಿಕೊಂಡರು. ಅವರಿಗೆ ದೊರೆತಿದ್ದ ಸೇಬು, ದ್ರಾಕ್ಷಿ, ಗೋಡಂಬಿಗಳು ನಮ್ಮ
ಇಮೇಜ್ ಅನ್ನು ಅತ್ಯಂತ ಹೀನಾಯ ಮಟ್ಟಕ್ಕೆ ಒಳ್ಳೆಯವರನ್ನಾಗಿಸಿತ್ತು.  ಆದರೂ ... ಮುಂದೆ
ಹೋಗಲು ಬಿಡಲೊಲ್ಲರು.

'ನಿಮ್ಮ ಅಪ್ಪ-ಅಮ್ಮಂಗೆ ಫೋನ್ ಮಾಡಿ ಕೊಡ್ರಿ...? ಅವರು ಪರ್ಮೀಷನ್ ಕೊಟ್ರೆ..,
ನಿಮ್ಮನ್ನ ಮುಂದೆ ಬಿಡ್ತೇವೆ..?'

'ಮುಂದೆ ಏನಾದ್ರು ಹೆಚ್ಚು ಕಮ್ಮಿ ಆದ್ರೆ ಯಾರು ಹೊಣೆ..?' ಇತ್ಯಾದಿ ಇನ್ನು ಮುಂತಾದ
ಲೋಕಾಭಿರಾಮದ ಜೊತೆಗೆ

' ನಡೀರಿ ಮನೆಗೆ ವಾಪಾಸ್ '  ಅಂದಾಗ ... ಅಭಿ ಸೀದಾ ಬೈಕಿನ ಬಳಿ ನಡೆದವನೇ ..

' ನಡಿರಲೋ ನಡಿರೋ .. ಯಾವನಿಗೆ ಬೇಕು ಈ ಪೋಲೀಸಿನವರ ಸವಾಸ ' ಎಂದು ಗೊಣಗಿದನು.ಇಂತಹ
ಸಂದರ್ಭದಲ್ಲಿ ಶ್ರೀ ತನ್ನ ಸುಳ್ಳಿನ ಕಂತೆ(ಕಥೆ)ಗಳನ್ನು ಶುರುವಚ್ಚಿಕೊಂಡ.

' ಇವತ್ತು ಮುಂಜಾನೆ ಪಾಟೀಲ್ ಪುಟ್ಟಪ್ಪ ಅವರಿಂದ ಮಠದಲ್ಲಿ ಪ್ರವಚನ ಇದೆ. ಅದನ್ನ
ಕೇಳೋದಕ್ಕೆ ನಾವೆಲ್ರೂ ರಾತ್ರೀನೇ ಹೊರಟು ಬಂದಿದ್ದೇವೆ' ಅಂದ

ಎಲ್ಲರೂ ಒಂದು ಕ್ಷಣ ದಂಗಾದೆವು.  ಪೋಲೀಸರು ಪಾಟೀಲ ಪುಟ್ಟಪ್ಪನವರ ಪ್ರವಚನದ ಬಗ್ಗೆ
ಕ್ರಾಸ್ ಕೊಶ್ಚನ್ ಗಳನ್ನು ಕೇಳುತ್ತಾ ಹೋದರು. ಅವರು ಕೇಳಿದ್ದಕ್ಕೆಲ್ಲಾ... ಶ್ರೀ ತಟಪಟ
ಅಂತ ಒಂದಕ್ಕೊಂದು ಸೇರಿಸಿಕೊಂಡು ಹೇಳುತ್ತಾ ಹೋದ.
'ಲೋ!! ಸಾಕು ಸುಮ್ಕೆ  ಇರೋ.. ಹೇಳ್ತಿರೋದೆಲ್ಲಾ ಸುಳ್ಳು ಅಂತ ಗೊತ್ತಾದ್ರೆ, ಅಂಡಿನ
ಮೇಲೆ ನಾಲ್ಕು ಬಾರಿಸ್ತಾರೆ.' ಅನ್ನೋ ಎಚ್ಚರಿಕೆಯ ಸಂದೇಶ ಬಂದರೂ ಶ್ರೀ ಕಥೆ
ಹೇಳುವುದರಲ್ಲಿ ತನ್ಮಯನಾಗಿದ್ದ. ಮತ್ತು ಪೋಲೀಸಿನವರೂ ವಿವರಣೆಗಳನ್ನು ಕೇಳುವುದರಲ್ಲಿ
ತಲ್ಲೀನರಾಗಿದ್ದರು. ದುರಂತ ಅಂದ್ರೆ ಯಾವ ಪುಟ್ಟಪ್ಪ..? ಅನ್ನೋದು ಪೋಲೀಸಿನವರಿಗೂ
ಗೊತ್ತಿಲ್ಲ. ಅವರ ಬಗ್ಗೆ ಹೇಳುತ್ತಿದ್ದ ಶ್ರೀಗು ಗೊತ್ತಿಲ್ಲ. ಅವನು ಹೇಳುತ್ತಿದ್ದುದು
ಶುದ್ಧ ಸುಳ್ಳು ಎಂಬುದಾಗಿಯೂ, ನಾವುಗಳು ಸ್ಕಂದಗಿರಿಗೆ ಚಾರಣಕ್ಕೆಂದೇ ಹೊರಟವರು
ಎಂಬುದಾಗಿಯೂ ಪೋಲೀಸಿನವರಿಗೆ ಗೊತ್ತು. ಮತ್ತು ಅದು ನಮಗೂ ಗೊತ್ತಿರುವ ಸಂಗತಿ ಎಂಬುದು,
ಅವರಿಗೂ ಗೊತ್ತು. ಆದರೂ 'ಗಟ್ಟಿಯಾಗಿ ಸುಳ್ಳು ' ಎಂದು ಯಾರೂ ಹೇಳುತ್ತಿಲ್ಲ.

ಹೀಗೂ ನಗುನಗುತ್ತಾ ಸುಳ್ಳನ್ನು ಸತ್ಯದಂತೆ ಹೇಳಿ, ಸುಳ್ಳಿಗೆ ಕಟಿಬದ್ದರಾಗಿ ನಿಂತು
ಸಾಧಿಸುವುದು ಒಂದು ಕಲೆಯೇ.

ಮುಂದೇನಾಗಬಹುದು ಎಂಬುದು ಖಚಿತವಾಗಿ ತಿಳಿದಿರಲಿಲ್ಲವಾದರೂ..,  ಸ್ವಲ್ಪ ಹೊತ್ತು ಕಾದರೇ
ಏನೋ ಒಂದು ಆಗಬಹುದು ಅನ್ನೋ ಆಶಾವಾದ.

" ಗಲಾಟೆ ಮಾಡದೇ.. ಸೈಲೆಂಟ್ ಆಗಿ ಹೋಗಬೇಕು. ಮುಂದೆ ಎಲ್ಲಾದರೂ ರಸ್ತೆ ಮೇಲೆ
ಬೈಕುಗಳನ್ನು ನಿಲ್ಲಿಸಿದ್ರೆ ... ಸೀದಾ ಸ್ಟೇಷನ್ ಗೆ ಎಳ್ಕೋಂಡ್ ಹೋಗ್ತೇವೆ.
ಗೊತ್ತಾಯ್ತಾ..? ನಡೀರಿ ಇಲ್ಲಿಂದ "
ಅಂತೂ ಪೋಲೀಸರು ಬ್ಯಾರಿಕೇಡ್ ಎಳೆದು ದಾರಿ ಮಾಡಿಕೊಟ್ಟರು.

ಸ್ಕಂದಗಿರಿ ಪರ್ವತದ ಬುಡಕ್ಕೆ ಸಮೀಪಿಸುತ್ತಿದ್ದಂತೆಯೇ ಒಂದು ಹಳ್ಳಿ ಸಿಕ್ಕಿತು. ಆ
ಹಳ್ಳಿಯ ರಸ್ತೆಗಳಲ್ಲೆಲ್ಲಾ .. ಬ್ಯಾಟರಿ(ಟಾರ್ಚು) ಅಡ್ಡ ಹಿಡಿದು.., ಕೈ
ತೋರಿಸುತ್ತಿದ್ದರು. ಇಷ್ಟೋಂದ್ ಜನ ಒಟ್ಟೊಟ್ಟಿಗೆ ಲಿಫ್ಟ್  ಕೇಳುತ್ತಿದ್ದುದು
ವಿಚಿತ್ರವೆನಿಸಿತಾದರೂ... ಅವರೆಲ್ಲಾ ಪರ್ವತ ಹತ್ತೋದಕ್ಕೆ ದಾರಿ ತೋರಿಸುವ
ಅನ್-ಅಫೀಷಿಯಲ್ ಲೋಕಲ್ ಗೈಡುಗಳು ಎಂಬುದು ನಂತರ ತಿಳಿಯಿತು.

"ನಾನು ಮೂರು ಸಾರಿ ಹೋಗಿ ಬಂದಿದ್ದೇನೆ. ಗೈಡು ಬೇಡ. ಏನು ಬೇಡ. ನಾನೇ ಗೈಡ್ ಮಾಡ್ತೇನೆ"
ಅಂದನು ಶ್ರೀ. ಯಾರಿಗೂ ನಂಬಿಕೆಯಿಲ್ಲ. ಸಮದಾರಿಯಲ್ಲಿ ದಾರಿತಪ್ಪಿಸುವ ಚೈತನ್ಯವಿರುವವನು
ಬೆಟ್ಟದ ಕತ್ತಲು ದಾರಿಯನ್ನು ಬೆಳದಿಂಗಳ ಬೆಳಕಲ್ಲಿ ಹತ್ತಿಸಿಯಾನೇ ಎಂಬ ಅಳುಕು
ಮೂಡಿದ್ದಂತು ಸತ್ಯ. ಆದರೂ ದೇವರ ಮೇಲೆ, ಅಪ್ಪ-ಅಮ್ಮಂದಿರ ಪುಣ್ಯಾಫಲಗಳ ಮೇಲೆ ಭಾರ ಹಾಕಿ,
ಅವನನ್ನು ಹಿಂಬಾಲಿಸಿದೆವು.

ನಮ್ಮ ಗುಂಪಿನಲ್ಲಿ ಅತ್ಯಂತ ಕ್ರೇಜಿ ಫೆಲೋ ಅಂದ್ರೆ ಅತೀತ್. ಆತನಿಗಿರುವ ಅಪಾರ ಎನರ್ಜಿ
ನೋಡಿ, ಜಲಸಿ ಬರ್ತದೆ ನಮಗೆ. ದಡದಡದಡ ಸಿಕ್ಕಸಿಕ್ಕ ಕಡೆ ಹೋಗುವನು. 'ಹೇ ಮ್ಯಾನ್ ಐ
ಫೌಂಡ್ ದ ವೇ' ಎನ್ನುತ್ತಾ ಮತ್ತಷ್ಟು ದೂರ ಹೋಗಿ ನಿಂತು .. 'ಡೋಂಟ್ ಕಮ್. ದಿಸ್ ಈಸ್
ನಾಟ್ ದ ವೇ!!' ಎನ್ನುವನು. ಒಂದೇ ಬೆಟ್ಟವನ್ನು ನೂರಾರು ಬಾರಿ ಹತ್ತಿ ಇಳಿದು ಹತ್ತಿ
ಇಳಿದು ಹತ್ತುವನು. 'ಲೋ ಸುಮ್ಕೆ ನಮ್ಮ ಜೊತೆ ಬಾ ಗುರು' ಅಂದರೂ ಕೇಳಲೊಲ್ಲನು.

ಅಂತೂ ಅಂದುಕೊಂಡಂತೆ ಶ್ರೀ ಬೆಟ್ಟದ ಮೇಲೆ ನಮ್ಮ ದಾರಿ ತಪ್ಪಿಸಿದ. ರಾತ್ರಿ ಮೂರು ಘಂಟೆ.
ಕಾಲು ದಾರಿ ಬಿಟ್ಟು ಬಹಳಷ್ಟು ಅಡ್ಡ ದಾರಿಗಳನ್ನು ಬಳಸಿ ಬೆಟ್ಟದ ಮತ್ತೊಂದು ಮಗ್ಗುಲಿಗೆ
ಬಂದು ಅಸಹಾಯಕರಾಗಿ, ಒಂದು ಬೃಹತ್ ಬಂಡೆಯ ಮೇಲೆ ಬಿದ್ದಿದ್ದೆವು. ಒಂದಷ್ಟು ದೂರದಲ್ಲಿ
ಟಾರ್ಚ್ ಬೆಳಕುಗಳ ಮಿಣಿ ಮಿಣಿ ಓಡಾಟ ಮಾತ್ರ ಕಾಣಿಸುತ್ತಿತ್ತು.

' ಈಗಂತೂ ದಾರಿ ಹುಡ್ಕೋದಕ್ಕೆ ಆಗೋದಿಲ್ಲ. ಸುತ್ತೆಲ್ಲಾ ಬರಿ ಪೊದೆ ಇದೆ. ಬೆಳ್ಗೆ ವರೆಗೂ
ಇದೇ ಬಂಡೆಯ ಮೇಲೆ ಮಲಗಿ ಹರಟುವುದೆಂದು ಮಾತಾಯಿತು.'
ಬೆಳದಿಂಗಳ ಚಂದ್ರ ಸೊಗಸಾಗಿ ಕಾಣುತ್ತಿದ್ದ. ತಣ್ಣನೆಯ ಗಾಳಿ, ಕುತ್ತಿಗೆಯ ಮೇಲೆ
ಹರಿಯುತ್ತಿದ್ದ ಬೆವರು ಹನಿಗಳ ಮೂಲಕ ಸುಯ್ಯನೆ ಹಾದು ಹೋಗುವಾಗ ತಂಪೆನಿಸುತ್ತಿತ್ತು.
ದೂರದಲ್ಲಿ ಮಲಗಿದ್ದ ಬೆಂಗಳೂರು.. ಸುಖ ನಿದ್ರೆಯಲ್ಲಿತ್ತು. ಹೊತ್ತು ಮೀರುತ್ತಿತ್ತು.

ಎಲ್ಲದನ್ನೂ, ಎಲ್ಲರನ್ನೂ ಬಿಟ್ಟು  ಒಮ್ಮೊಮ್ಮೆ ಕಳೆದುಹೋಗಬೇಕು.

'ನಾವು ಯಾವಾಗಲು..., ಗುರಿಯನ್ನು ಸಂಭ್ರಮಿಸಬಾರದು. ಅದನ್ನು ಮುಟ್ಟಲು ಹೋಗುವಾಗಿನ
ಜರ್ನಿ!! ಪ್ರಯಾಣ!! ವನ್ನು ಆನಂದಿಸಬೇಕು...' ಎಂಬುದು ಸೋತವರ ನುಡಿಮುತ್ತುಗಳಾಗಿದ್ದವು.
ಜನಗಳೆಲ್ಲಾ ಓಡಾಡಿ ನಿರ್ಮಿಸಿರುವ ದಾರಿಯಲ್ಲಿ ಹೋಗಿದ್ದರೆ, ಅದು ಸೀದಾ ಬೆಟ್ಟದ ತುದಿಗೆ
ಕರೆದುಕೊಂಡು ಹೋಗುತ್ತಿತ್ತು. ನಾವು ಬಹುಷಃ ಸೌದೆ ಕಡಿಯುವವರ ಕಳ್ಳ ಮಾರ್ಗಗಳಲ್ಲಿ
ಸಾಗಿ.., ಬಂಧಿಯಾಗಿದ್ದೆವು.

ಅತೀತ್ ಎಲ್ಲಿಂದಲೋ ಓಡಿಬಂದವನು ... "ಮ್ಯಾನ್ ಐ ಫೌಂಡ್ ದ ವೇ!! ಐ ಫೌಂಡ್ ದ ವೇ ..."
ಎಂದ. ದೂರದಲ್ಲಿದ್ದ ಚಾರಣಿಗರ ಗುಂಪಿನ ಬೆಳಕಿನ, ಜಾಡು ಹಿಡಿದು ಹೋಗಿ..., ಕಾಲುದಾರಿ
ಇದ್ದ ಸ್ಥಳವನ್ನು ಪತ್ತೆ ಮಾಡಿದ್ದ.
ಎದ್ದು ಹೊರಟೆವು. ಮುಳ್ಳಿನ ಪೊದೆಗಳ ಮೂಲಕ ಒಬ್ಬೊಬ್ಬರನ್ನೇ ದಾಟಿಸಬೇಕಾಯಿತು. ಬೆಳಕು
ಹರಿಯುವುದರ ಒಳಗಾಗಿ, ಬೆಟ್ಟದ ತುದಿಯನ್ನು ತಲುಪಬೇಕು. ಸೂರ್ಯೋದಯದ ಸಂಭ್ರಮವನ್ನು
ನೋಡಬೇಕು. ಕೇಕೆ ಹಾಕಬೇಕು. ಇದಕ್ಕೆಲ್ಲಾ ಎಲ್ಲಿಯೂ ಸ್ಟಾಪ್ ಕೊಡದ ರೀತಿಯಲ್ಲಿ ಸರಸರನೆ
ಬೆಟ್ಟ ಹತ್ತಬೇಕು.  ಒಬ್ಬರಿಗೊಬ್ಬರು ಆಸರೆಯಾಗುತ್ತಾ.. ಬೆಳಕು ಬಿಟ್ಟುಕೊಂಡು
ಬೆಟ್ಟವನ್ನು ಏರಿದೆವು.

ಸ್ಕಂದಗಿರಿ ಮೇಲೆ ಅಕ್ಷರಷಃ ಸಾವಿರದಷ್ಟು ಚಾರಣಿಗರು. 'ಅಯ್ಯಯ್ಯೋ!! ಇಷ್ಟೋಂದ್ ಜನ
ಇದಾರೆ ಇಲ್ಲಿ. ಪೋಲೀಸ್ರು ಅಷ್ಟೋತ್ ಪಂಚಾಯ್ತಿ ಮಾಡುದ್ರು. ಅವರು ಪ್ರಶ್ನೆ ಮಾಡಿದ
ವರಸೆಗೆ, ನಾವ್ ಯಾವ್ದೋ ಕಾನೂನು ಬಾಹಿರ ಕೆಲ್ಸಾನೆ ಮಾಡ್ತಿದೀವಿ
ಅನ್ನಿಸಿಬಿಟ್ಟಿತ್ತು'.

ಸರಿಯಾಗಿ ಬೆಟ್ಟದ ತುದಿ ತಲುಪಿದಾಗ ನೀಲಿ ಬಣ್ಣದ ಬೆಳಕು ಮೆಲ್ಲಗೆ ಪಸರಿಸುತ್ತಿತ್ತು.
ಚುಕ್ಕಿಗಳು ಒಂದೊಂದೇ ಮಾಯವಾಗುತ್ತಿದ್ದವು. ನಿಂತವರನ್ನು!! ದಬ್ಬಿ ಬೀಳಿಸುವಷ್ಟರ
ಮಟ್ಟಿಗೆ ಗಾಳಿ ಬುರ್ರೆಂದು ಬೋರ್ಗರೆಯುತ್ತಿತ್ತು.
ಟೈಟಾನಿಕ್ ಸ್ಟೈಲಲ್ಲಿ ಕೈ ಎತ್ತಿ ನಿಂತೆವು. ಗೆಲುವಿನ ಕೇಕೆ; ಹೊಗೆ ರೀತಿಯಲ್ಲಿ
ಮೋಡಗಳು, ಕಾಲಿನ ಅಡಿಯಲ್ಲಿ. ನಮಗೆ ಅನುಕೂಲಕರವಾಗುವಷ್ಟು ಜಾಗವನ್ನು ಮಾಡಿಕೊಂಡು...
ಗುಂಪಾಗಿ ಕುಳಿತೆವು.

ಸೂರ್ಯ ಬಂದ. ಬೆಂಕಿ ಕಡ್ಡಿ ತಗೋಂಡು ಆಗಸದ ಚಾವಣಿಗೆ ಬೆಂಕಿ ಹಚ್ಚುವಂತೆ ಬಂದ. ಅವನ
ಸ್ಪರ್ಷದಿಂದ ಪೂರ್ವ ದಿಕ್ಕೆಲ್ಲಾ ದಗದಗನೆ ಹೊತ್ತಿ ಉರಿಯುವಂತೆ ಕೆಂಪಾಯ್ತು.  ಆ
ಕ್ಷಣಗಳನ್ನು ಅನುಭವಿಸಬೇಕು ಅಷ್ಟೇ.. ನಮ್ಮ ದಣಿವೆಲ್ಲಾ ಕರಗಿ ಹೋಗುವ ಸಾರ್ಥಕದ ಕ್ಷಣವೇ
ಸೂರ್ಯೋದಯ.

"ಹೇ!! ಮ್ಯಾನ್!! ಸನ್ ಈಸ್ ಲುಕಿಂಗ್ ಅಟ್ ಅಜ್!! " ಅತೀತ್ ಚಿಕ್ಕ ಹುಡುಗನಂತೆ
ಅಚ್ಚರಿಯಿಂದ ಹೇಳಿದ್ದು ಇನ್ನೂ ಗುಯ್ ಗುಡುತ್ತಿದೆ.


ನಡು ಜಾರಿದ, ತಡ ರಾತ್ರಿಯಲಿ.
ಕೊನೆ ಮುರಿದ, ಬೆಣ್ಣೆಶಶಿ ಬೆಳ್ಕಿನಲಿ.
ಕಾತುರವಿತ್ತು ಕಾಣಬೇಕು,
ಕಾಲಡಿಯ ಮೋಡವನೆತ್ತಿ.

ಹತ್ತಿ; ಇಳಿದು; ತೇಗಿ; ಅಂತೂ
ತಲುಪಿ ಸ್ಕಂದಗಿರಿಯ ನೆತ್ತಿ.

ಆಗಸದ ಚಾವಣಿಗೆ ಬೆಂಕಿಯ ಹಚ್ಚಿ,
ಇಬ್ಬನಿಯ ಕರಗಿಸುತಲಿ,
ಪೋಲಿದರ್ಶನ ಕೊಡುತ ರವಿ ಬಂದ
ಪಾರದರ್ಶಕ ರವಿಕೆಯಂತಿದ್ದ,
ತಿಳಿ ನೀಲಿ ಮೋಡದಡಿಯಿಂದ.