GKVK ಕ್ಯಾಂಪಸ್ ಖಾಲಿ ರೋಡಲ್ಲಿ, ಬೈಕ್ ಓಡಿಸಿಕೊಂಡು ಜೋರ್ ಬರ್ತಿದ್ದೆ, ಆಫೀಸ್ ಕಡೆಗೆ
.
 ಇಷ್ಟು ದಪ್ಪದ ಕಾಡ್ ಜೇನು ಎಡಗಾಲ್ ದು, ರೈಟ್ ಇಂದ ಎರಡನೇ ಬೆರಳಿಗೆ ಸರಿಯಾಗಿ ಕಚ್ತು.
ಅದು ಜೇನು ಅಂತ ಗೊತ್ತಾಗ್ತಿದ್ದಂಗೆ,  ಉರೀತಾ ಇದ್ದ  ಕಾಲು ಕೊಡವೋದಕ್ಕೆ ಶುರು
ಮಾಡ್ದೆ.ಗಾಬರಿ ಮಾಡ್ಕೊಂಡು ಬೀಳೋದೊಂದು ಬಾಕಿ. ಹಂಗೂ ಬೀಳ್ತಾ ಇದ್ದ ಬೈಕು ನೆಟ್ಟಗೆ
ಮಾಡ್ಕಂಡು, ನಿಲ್ಲಿಸಿದೆ.

ಕಸದ ತೊಟ್ಟಿಯೊಳಗೆ ಮುಕ್ಕುತ್ತಿದ್ದ ಮೂರು ಕಂತ್ರಿ ನಾಯಿಗಳು, ನಾನು ಬೈಕು ನಿಲ್ಲಿಸಿದ
ರೀತಿಯಿಂದ ಅಪಾರ್ಥ ಮಾಡಿಕೊಂಡವೋ ಏನೋ..?
ಒಟ್ಟೊಟ್ಟಿಗೆ ಆ ಮೂರೂ ಕಂತ್ರಿ ನಾಯಿಗಳು ಅಟ್ಟಿಸಿಕೊಂಡು ಬರೋದಕ್ಕೆ ಶುರು ಮಾಡಿದವು.
ಜೇನು ಇನ್ನ ಕಾಲಿನ ಮೇಲೇ ಇತ್ತು. ಅಯ್ಯಯ್ಯೋ ಬೇಡ ಕಥೆ…
ಆ ನಾಯಿಗಳ ಸರಹದ್ದಿನಿಂದ ಒಂದೇ ಉಸಿರಿಗೆ ದೂರ ಬಂದು ನಿಲ್ಲಿಸಿದೆ. ಜೇನು ಕೊಡಲಿಯಾಕಾರದ
ಮುಳ್ಳು ಬಿಟ್ಟು, ಹಾರಿತು. ಅದರ ಶಿಟ್ಟು ಸೇರಿತ್ತು.

ಉರಿ ಉರಿ ಪಾದ ಊದಿಕೊಳ್ತು.
ಆಫಿಸಿನಲ್ಲಿ ಕುಂಟುವಾಗ, ನನ್ನ ಕಥೆ ಹೇಳಿದರೆ..  ಜೋಕ್ ಕೇಳಿದ ಹಂಗೆ ನಗ್ತಾರೆ.
“Dog chasing part is a good one.”         ಅಂತ ಕಾಂಪ್ಲಿಮೆಂಟು.
ಆದರೂ ಜೇನನ್ನು ಅದು ಯಾವ ಕವಿ ಮೊದಲನೇ ಸಾರಿ, ರೊಮ್ಯಾಂಟಿಕ್ ಆಗಿ ನೋಡಿದನೋ ಗೊತ್ತಿಲ್ಲ.
ಇಷ್ಟು ಹಾರಿಬಲ್ ಹುಳು ಇದು.
ಚಿಕ್ಕವನಿದ್ದಾಗ ನನ್ನ ಗೆಳೆಯ ಹೇಳ್ತಾ ಇದ್ದ, ‘ಜೇನಿಗೆ ಕಲ್ಲು ಹೊಡೆದರೆ… ಹೊಡೆದವರನ್ನೇ
ಅಟ್ಟಿಸಿಕೊಂಡು ಬಂದು ಕಚ್ಚತ್ತೆ’ ಅಂತ.
‘ ಅದಕ್ಕೆ ನಾನೇ ಹೊಡೆದದ್ದು ಅಂತ ಹೆಂಗ್ ಗೊತ್ತಾಗತ್ತೆ ’ ಎಂದು ಕೇಳಿದ್ದಕ್ಕೆ..ಸ್ವಲ್ಪ
confuse ಆಗಿ
“ಹೊಡೆದ ಕಲ್ಲನ್ನು ಮೂಸಿ ನೋಡಿಬಿಟ್ಟು , ಅದು ಯಾರು ಹೊಡೆದದ್ದು ಅಂತ
ಕಂಡುಹಿಡಿಯತ್ತೆ .”       ಅಂತ ಹೇಳ್ದ..
ಎಲ್ಲಾ ಮೋಸ ಇದು… ನಾನು ಯಾವ ಜೇನಿಗೂ ಕಲ್ಲು ಹೊಡೆದಿರಲಿಲ್ಲ.
ಕಚ್ಚಿದ ಒಂದು ಜೇನು, ಸಂಜೆ ಆದ್ರೂ ಇನ್ನೂ ಕಾಲು ಉರಿಸುತ್ತಿದೆ ಅಂದ್ರೆ, ಜೇನಿನ ದಾಳಿಗೆ
ಒಳಗಾದವರ ಬಗ್ಗೆ ಕನಿಕರ ಪಡಲೇ ಬೇಕು.
ಮತ್ತು ಜೇನನ್ನು ಎಲ್ಲಾ ರೀತಿಯಿಂದಲೂ, ರೋಮಾನ್ಸಿನ ವರ್ಣನೆಗೆ ಬಳಸೋದನ್ನ
ನಿಲ್ಲಿಸಬೇಕಾಗಿ ಸವಿನಯ ಪ್ರಾರ್ಥನೆ.

***** 1 ****

ಎರಡನೇ ದಿನಕ್ಕೆ ಕಾಲಿಟ್ಟರೂ, ಜೇನು ಕಚ್ಚಿದ್ದ ಕಾಲಿನ ಬಾವು ಕಮ್ಮಿಯಾಗಲೇ ಇಲ್ಲ. ನಮ್ಮ
ಫ್ಯಾಮಿಲಿ ತಜ್ಞರಾದ ‘ರವಿ ಡಾಕ್ಟ್ರು’ ಹತ್ರ ಹೋದೆ. ಅವರ ಕೈಗುಣ ಮತ್ತು  ಬದಲಾಗದ
ನಮ್ಮ ಮೈಗುಣದ ಹಗ್ಗಜಗ್ಗಾಟಗಳ ಫಲವಾಗಿ, ದಶಕಗಳಿಂದಲೂ ನಮ್ಮ ಪ್ಯಾಮಿಲಿ ತಜ್ನರಾಗಿರುವುದು
‘ರವಿ ಡಾಕ್ಟರ’ ದುರ್ದೈವ.
ಮಧ್ಯಾಹ್ನದ ಹೊತ್ತಿಗೆ ಪೇಶೆಂಟುಗಳೆಲ್ಲಾ ಖಾಲಿಯಾದ ಮೇಲೆ, ಕ್ಲೀನಿಕ್ ಒಳಗೆ ಹೋದೆ.
ನನ್ನನ್ನು ನೋಡಿದವರೇ ಪುನಃ ಕರ್ಟನ್ ಸರಿಸಿ, ಆಚೆ ನೋಡಿದರು.
“ಹೋ!! ಒಬ್ಬನೇ ಬಂದು ಬಿಟ್ಟಿದಿಯಾ..? ”   ಅಂತ ವಿಡಂಬನಾತ್ಮಕ ನಗೆ ನಕ್ಕು,
ಹುಬ್ಬೇರಿಸಿದರು.
“ಜೇನು!! ಕಚ್ಚಿದೆ ಸಾರ್ “  ಅಂದೆ.
ಮಡಚಿದ ಸೆತಸ್ಕೋಪ್  ನಿಂದ ಅಂಡಿಗೆ ಭಾರಿಸಿ, “ಅಲ್ಲಾ ಕಚ್ಚಿರೋದು ” ಅಂದರು.
“ಇಲ್ಲಾ ಸಾರ್!! ಕಾಲಿಗೆ ” ಅಂದೆ. ಅದಕ್ಕೆ
“  ಒಂದು ಜೇನು ಕಚ್ಚಿದ್ದಕ್ಕೆಲ್ಲಾ, ಟ್ರೀಟ್-ಮೆಂಟು ಕೊಡಬೇಕು ಅಂದ್ರೆ, ತುಂಬಾ ಖೇದಕರ
ಆಗುತ್ತೆ ..”
“ಪ್ರಪಂಚದ ಮೊದಲನೇ ಡಾಕ್ಟರು ಸಾರ್ ನೀವು, ಬಂದ ಪೇಶೆಂಟ್ ನ ಈ ರೀತಿ ’ಯಾಕ್ ಬಂದೆ..  ’
   ಅನ್ನೋ ಟೋನ್ ನಲ್ಲಿ ಕೇಳೋದು. “
” ಮತ್ತೇನೋ!! ನನ್ನ ಡಿಗ್ರಿಗೆ, ಇಪ್ಪತ್ತು ವರ್ಷಗಳ ಸರ್ವೀಸಿಗೆ ಸ್ವಲ್ಪನಾದ್ರು,
ಮರ್ಯಾದೆ ಬೇಡ.. ಒಂದು ಜೇನಿಗೆ…  ” ಅಂತನ್ನುತ್ತಾ ಊದಿದ್ದ ಪಾದದ ಮೇಲೆ ಟಪ್ ಅಂತ
ಕೊಟ್ಟರು.
” ನಿಮ್ಮಮ್ಮ!!  ಸರ್ಜನ್ ಸ್ಪೆಷಲಿಸ್ಟು…, ಇದಕ್ಕೇನು ಮಾಡಲಿಲ್ವಾ …? ”

“ಮಾಡದೇ ಇರ್ತಾರ!! ಗಂಧದ ತುಂಡು ತಂದು, ತೇದು  ಕಾಲಿಗೆ ಹಚ್ಚಿದರು. ಆಮೇಲೇನೆ ಕಾಲು,
ಜಾಸ್ತಿ ಊದಿದ್ದು ”

ಊದಿದ್ದ ಕಾಲನ್ನು ದಿಟ್ಟಿಸಿ ನೋಡುತ್ತಾ “ಇದು ಜೇನಲ್ಲ, ಹಾವು!! ಹಾವು ಕಚ್ಚಿರೋದು.”

” ಚಾನ್ಸೇ ಇಲ್ಲ. ಜೇನೆ ಕಚ್ಚಿರೋದು. ಮುಳ್ಲಿತ್ತು ಸಾರ್, ಕಚ್ಚಿದ ಜಾಗದಲ್ಲಿ “

” ಈಗೆಲ್ಲಾ ಮುಳ್ಳು ಬಿಡೋ ಹಾವುಗಳೂ ಬಂದಿವೆ, ಗೊತ್ತಿಲ್ವಾ ನಿನಗೆ ..?”

“ಇರಬಹುದೇನೋ!! ಆದರೇ ಒಂದೇ ಮುಳ್ಳು ಇತ್ತು. ಸೋ ಹಾವಾಗಿದ್ರೆ ಎರಡು ಇರಬೇಕಿತ್ತು. “

“ಆ ಹಾವಿಗೆ ಒಂದು ಹಲ್ಲು ಮುರಿದು ಹೋಗಿತ್ತು ಅನ್ಸತ್ತೆ…” ಅಂತನ್ನುತ್ತಾ ಸಿರಿಂಜು
ಎತ್ತಿಕೊಂಡರು.
” ಇಲ್ಲ!! ಹಾವಲ್ಲ ಅದು ಜೇನು.” ಅಂದೆ

” ಪುಕ್ಲ ಪುಕ್ಲ ” ಅಂತನ್ನುತ್ತಾ ಧನಸ್ಸನ್ನು ಹೆಗಲಿಗೇರಿಸುವಂತೆ, ಸಿರಿಂಜನ್ನು
ಮೇಲೆತ್ತಿ, ಔಷಧಿ ಎಳೆದುಕೊಂಡರು. ” ಇಷ್ಟರಲ್ಲಿ ಡಾಕ್ಟರ್ ಆಗಿ ಬಿಡ್ತಿದ್ದೆ…  ನನ್ನ
ಪೇಷೇಂಟ್ ಒಬ್ಬ, ಡಾಕ್ಟರ್ ಆಗ್ತಿದ್ದಾನೆ, ಅಂತ ನನ್ನ ಹೆಂಡತಿ ಹತ್ತಿರ ಹೇಳಿದ್ದೆ.
 ವಾಪಾಸ್ ಓಡಿಬಂದು,  ನನ್ನ ಮರ್ಯಾದೆ ತೆಗೆದುಬಿಟ್ಟೆ ನೀನು.”  ಅಂತನ್ನುತ್ತಾ ಬೇಕಂತಲೇ
ಜೋರಾಗಿ ಚಚ್ಚಿದರು.

” ಡಾಕ್ಟರ್ ಅಂದ್ರೆ ಸಾಮಾನ್ಯಾನ..?  ಡಿವೈನ್ ಜಾಬ್ ಸಾರ್. ಅವಕಾಶ ಸಿಕ್ಕ ಮಾತ್ರಕ್ಕೆ
ಅದನ್ನ ಎಲ್ಲರೂ ಮಾಡೋದಕ್ಕಾಗುತ್ತಾ…? ”

” ನಾಟಕ ಆಡ್ತಿಯ. ಪುಕ್ಲ ನೀನು, ಧೈರ್ಯ ಇಲ್ಲ ಅಂತ ಹೇಳು.. ಹಿಂಗೆ ಹೆದರುತ್ತಾ ಇದ್ದರೆ,
ಲೈಫಲ್ಲಿ ಏನೂ ಮಾಡಕ್ಕಾಗಲ್ಲ… ” ಅಂದರು.

ಥೂ ಕಾಮೆಡಿಯಾಗಿ ಹೇಳಿದ್ರು, ಶ್ಯಾನೆ ಬೇಜಾರಾಗೋಯ್ತು.
ಮನೆಗೆ ಬಂದ ಮೇಲೆ , ಸಂಜೆ ಒಳಗೆ ಬಾವು ಕಮ್ಮಿ ಆಯ್ತು.
ಛೇ!! ನ್ಯಾಚುರಲ್ ಆಗಿನೇ ಕಮ್ಮಿ ಆಯ್ತು ಅನ್ಸತ್ತೆ.
ಅನ್ಯಾಯವಾಗಿ ಡಾಕ್ಟರ ಸೂಜಿಗೆ, ಬೈಗಳಕ್ಕೆ ಬಲಿಯಾಗಿಬಿಟ್ಟೆ.