ರಾತ್ರಿ ಸರಿ ಸುಮಾರು ಒಂಬತ್ತು ವರೆಯಾಗಿತ್ತು. ಬಾರ್ ನ ಹುಡುಗ ಸೊಳ್ಳೆ ಬತ್ತಿಗೆ ಬೆಂಕಿ
ಹಚ್ಚಿ  ಟೇಬಲ್ಲಿನ ಕಾಲಿನ ಪಕ್ಕದಲ್ಲಿ ಇಟ್ಟನು. ಇಷ್ಟು ವಿಶಾಲವಾದ ಕತ್ತಲ ಹುಲ್ಲು
ಹಾಸಿನ ಮೇಲೆ, ಈ ಪುಟ್ಟ ಸೊಳ್ಳೆ ಬತ್ತಿಯು ಯಾವ ವಿಧದ ಕೆಲಸ ಮಾಡಬಹುದೆಂಬ ಆಲೋಚನೆಯೊಂದು
ಸುಳಿದು ಅಚ್ಚರಿಯಾಯ್ತು. ಬದುಕಿನ ಸತ್ವ ಹೀರುವಷ್ಟು ನೋವು ಎದೆಯೊಳಗಿರುವಾಗ, ತೊಟ್ಟು
ರಕ್ತ ಹೀರುವ ಸೊಳ್ಳೆಯು ಗೌಣವೆನಿಸಿತು.

ಮನುಷ್ಯರು ಅಡ್ಡಾಡುತ್ತಿದ್ದಾರೆ ಎಂಬುದನ್ನಷ್ಟೇ ತಿಳಿಯಲು ಬೇಕಾದಷ್ಟಿದ್ದ ಮಬ್ಬು
ಕತ್ತಲಿನ ಬೆಳಕು. ಒಂದೊಂದು ಟೇಬಲ್ಲಿನ ನಡುವೆ, ಕುಡುಕನ ಆತ್ಮವಿಮರ್ಶೆ ಮತ್ತು ಹತಾಶೆಯ
ಗಟ್ಟಿಧ್ವನಿ ಕೇಳಬಾರದಷ್ಟು ಅಂತರ. ನಾನು ಇದೇ ಮೊದಲಲ್ಲ, ಕುಡಿಯುತ್ತಿದ್ದುದು. ಆದರೆ
ಬಾರ್ ನಲ್ಲಿ, ಸಾರ್ವಜನಿಕವಾಗಿ, ಗೆಳೆಯನೋರ್ವನ ಮುಂದೆ ಕುಡಿಯಲು ಬಂದಿದ್ದು ಇದೇ
ಮೊದಲು.

ಆಲ್ಕೋಹಾಲ್ ಕಂಡರೆ ಭಯ ನನಗೆ. ಅದು ಜೀವ ತೆಗೆಯುತ್ತದೆ ಎಂಬುದಕ್ಕಲ್ಲ. ನನ್ನನ್ನೆಲ್ಲಿ
ಬೆತ್ತಲು ಮಾಡಿ ಬಿಡುತ್ತದೆ ಅನ್ನೋ ಭಯ. ಅದೇ ಕಾರಣಕ್ಕೆ, ಮನೆಯ ಒಳಗೆ, ಒಳಗಿಂದ ಬೀಗ
ಜಡಿದುಕೊಂಡು, ಕೀಲಿಯನ್ನು ಬಚ್ಚಿಟ್ಟು ಕುಡಿಯುತ್ತಿದ್ದುದು. ಏನೇ ಆದರೂ, ಏನೇ ಮಾಡಿದರೂ
ಅಲ್ಲಿ ನಾನು ಮತ್ತು ನಾನೊಬ್ಬನೇ. ಮತ್ತೊಬ್ಬರ ಮುಂದೆ ಅಸಹಾಯಕನಂತೆ ನನ್ನನ್ನು
ಬಿಂಬಿಸಿಕೊಳ್ಳುವುದಿದೆಯಲ್ಲಾ, ಅದರಷ್ಟು ಯಾತನೆ ಮತ್ತೊಂದಿಲ್ಲ.

ಈ ಬಾರಿ ಗೆಳೆಯ ಸೀನ ಜೊತೆ ಸಿಕ್ಕಿದ್ದ. ಅವನು ನನ್ನ ಆತ್ಮೀಯ ಗೆಳೆಯ. ಸತ್ತು; ಸತ್ತು;
ನನ್ನ ಜೊತೆ ಬದುಕಿರುವ ಮಿತ್ರ. ಧೈರ್ಯ ಮಾಡಿ ಬಂದಿದ್ದೆ.


'ಸೀನ!!,  ಅವಳ ಗಂಡಂಗೆ ಅವಳು ಬರಿ ಹೆಡ್ತಿ. ನಂಗೆ ಅವ್ಳು ದೇವ್ತೆ. ಈ ನಾಸ್ತಿಕನ
ದೇವ್ತೆ.  ದೇವತೆಯನ್ನ ಯಾರಾದ್ರು ಮದ್ವೆ ಮಾಡ್ಕಳಕಾಗತ್ತ. ? ಗುಡಿ ಒಳಗಿಟ್ಟು ಪೂಜಿಸ
ಬೇಕು. ಮತ್ತು ಗುಡಿ ಹೊರಗ್ ಕುತ್ಕೊಂಡು, ಒಳಗ್ ಎಣ್ಣೆ ಬಿಟ್ಕಂಡು ಸ್ತುತಿ ಮಾಡಬೇಕು.
ನಿನ್ನ ನೋಡಕ್ ಮುಂಚೆನು ಲೈಫು ಬೊಂಬಾಟಾಗಿತ್ತು; ನಿನ್ನ ನೋಡುದ್ ಮ್ಯಾಲೆ ಚೇಂಜ್ ಆಗಿದ್ದು, ಸೌಂಧರ್ಯದ ಪರಿಕಲ್ಪನೆ; ಈಗ್ಲೂ ಸುಂದ್ರ ಅನ್ಸೋದು, ನಿನ್ನ ಬರಿ ಕಲ್ಪನೆ '
 .. 
ಅದೇನೋss ಮಾತು ಕಥೆಗಳೆಲ್ಲವೂ ಕಾನ್ಷಿಯಸ್ ಮೆಮೋರಿಯಲ್ಲಿ, ಸಬ್-ಕಾನ್ಷಿಯಸ್ ಆಗಿ
ರೆಕಾರ್ಡ್ ಆಗುತ್ತಿದ್ದವು. ನೋವು ಎಂಬ ಪ್ರಚ್ಛನ್ನ ಶಕ್ತಿಯು, ತೊದಲು ಮಾತುಗಳ
ಚಲನಶಕ್ತಿಯಾಗಿ ಹೊರ ಹೊಮ್ಮುತ್ತಿದ್ದ ಕ್ಷಣ.

'ಅಯ್ಯಯ್ಯಾ. ಪ್ರಪಂಚದಲ್ಲಿ ಇರೋದು ಒಬ್ಬಳೇ ಹುಡುಗಿ, ಅನ್ನೋ ಹಂಗಾಡಬೇಡ. ಹತ್ರಲ್ಲಿ
ಹನ್ನೊಂದನೇ ಫಿಗರ್ '  ಸೀನ ಗೊಣಗುಟ್ಟಿದ.

' ನಿನಗ್ ಮಾತ್ರ ಅಲ್ಲಾ ಮಗ. ಕಟ್ಟಿ ಕೊಂಡಿರೋ ಆ ಅವನಿಗೂ ಅವ್ಳು ಹತ್ರಲ್ಲಿ ಹನ್ನೊಂದನೇ
ಫಿಗರ್. ಆದ್ರೆ ನನಗೆ ಅವ್ಳು;  ನನ್ನೊಳಗಿದ್ದದ್ದು, ಅವಳು ಒಬ್ಳೆ ಗೆಳಿಯಾ. ಹೊರಟು
ಬಿಟ್ಳು ಪೆದ್ದಿ; ಬುದ್ದಿ ಇಲ್ಲ. ನಮ್ಮ ಸಂಬಂಧಕ್ಕೊಂದು ಹೆಸ್ರು ಬೇಕು ಅಂತ
ಕೇಳ್ತಿದ್ದೆ. ಕೊನೆಗೂ ಅದಕ್ಕೊಂದು ಕ್ಲಾರಿಟಿ ಅಂತ ಸಿಗಲಿಲ್ಲ. ನನ್ನ ಆಳೋದಕ್ಕೆ. ಅವಳೇ
ಸರಿ ಅಂದುಕೊಂಡಿದ್ದೆ. ಆದರೆ ಒಂದಿನ 'ನನ್ನ ಮದ್ವೆ ' ಅಂದಳು. ಅದು ಗೊತ್ತಿದ್ದ
ವಿಷಯಾನೇ.? ಆದರೆ. ಅಷ್ಟು ಬೇಗ ಎಲ್ಲವೂ ಮುಗಿದು ಹೋಗತ್ತೆ ಅಂತ ಗೊತ್ತಿರಲಿಲ್ಲ.
ನಿಷ್ಠುರವಾಗಿ ಎಲ್ಲಾ ಬಾಗಿಲುಗಳನ್ನೂ ಮುಚ್ಚಿ ಬೀಗ ಜಡಿದು ಬಿಟ್ಟಳು.  ಪ್ರೀತಿ ಬಗ್ಗೆ
ಉದ್ದುದ್ದ ಭಾಷಣ ಮಾಡ್ತಿದ್ದೆ. ಸಿಕ್ಕದೆ ಇದ್ರೂ; ಒಬ್ಬ ಒಳ್ಳೇ ಫ್ರೆಂಡ್ ಆಗಿರ್ತೀನಿ
ಅಂತ ಕಥೆ ಹೊಡಿತಿದ್ದೆ. ಆದರೆ ಅದ್ಯಾಕೋ ಅವಳ ಮದ್ವೆ ಆಂತಿದ್ದಂಗೆ ಇದೆಲ್ಲ ಬ್ಯಾಡ, ಅವಳೂ
ಬ್ಯಾಡ, ಅನ್ಸೋಕೆ ಶುರುವಾಯ್ತು. ಒಂದು ವಸ್ತು ಸ್ವತಂತ್ರವಾಗಿದ್ದರೆ ಪ್ರೀತಿ ಪ್ರೇಮ
ಕನಸು ಮತ್ತು ಕವಿತೆ. ಅದು ಮತ್ತೊಂದಕ್ಕೆ ತಗಲಾಕ್ಕೊಂಡ್ರೆ ದೂರ, ಬಾಳ ದೂರ ಇರ್ಬೇಕು
ಅನ್ಸತ್ತೆ. ಮೊದ್ಲು ಗುರುತಿಲ್ದೇ ಇರೋ ಕನವರಿಕೆಗಳ ಜೊತೆಗೆ ಬೇಕು ಅಂತ ಸಾಯ್ತಿವಿ.
ಈಗ ನೋಡು ಮರೀಬೇಕು ಅಂತ ಒದ್ದಾಡ್ತೀವಿ. ' 
ಫಿಲಾಸಫಿ ಅನ್ನೋದು ಪುಂಖಾನುಪುಂಖವಾಗಿ ಹೊರ ಬರುತ್ತಿತ್ತು.   ಇದು ಸುಮಾರು ವರ್ಷಗಳ
ಹಿಂದಿನ ಲವ್ವು. ಲವ್ವಾಗಿದ್ದೂ ಕೂಡ, ಸಿನಿಮಾಗಳಲ್ಲಿ ಆಗೋ ರೀತಿ.


ಬ್ರಹ್ಮ ರಥೋತ್ಸವದ ಸಮಯ. ಉತ್ಸವ ಮೂರ್ತಿಯನ್ನ, ರಥದ ಮೇಲಿಟ್ಟ ತಕ್ಷಣ, ಎಲ್ಲರೂ ಚಪ್ಪಾಳೆ
ಹೊಡೆದು, ಎಳೆಯಲು ರಥಕ್ಕೆ ಕಟ್ಟಿದ್ದ ಕಬ್ಬಿಣದ ಸರಳುಗಳಿಗೆ ಕೈ ಹಾಕಿದರು. ನನ್ನ
ಎದುರಿಗೆ ಇದ್ದ ಮತ್ತೊಂದು ಸರಳನ್ನು ಮುಟ್ಟಿ ಹಿಡಿದಿದ್ದವಳು ಇವಳು. ಮೊದಲನೆ ಸಾರಿ
ನೋಡಿದ್ದು ಹೀಗೆಯೇ..! ಕೈವಾರವನ್ನ ಮೂಗಿನ ಮೇಲಿಟ್ಟು ಒಂದು ಸರ್ಕಲ್ ಎಳೆದು ಬಂದಂತಿದ್ದ
ದುಂಡಾದ ಮುಖ. ನನ್ನ ಗೆಳೆಯರ ಕ್ರೌಡ್ ನಿಂದ ಮೆತ್ತಗೆ ದೂರ ಸರಿದು ಬಂದು, ಅವಳನ್ನು
ಹಿಂಬಾಲಿಸಿದೆ. ಹಿಂಬಾಲಿಸುವಿಕೆ; ಇಶ್ಟು ಧೀರ್ಘಾವಧಿಗೆ ಮುಂದುವರೆಯುತ್ತದೆಂದು
ಎಣಿಸಿರಲಿಲ್ಲ. ಒಮ್ಮೆ ಆಕ್ಸಿಡೆಂಟಲ್ ಆಗಿ ಪ್ರಪೋಸ್ ಮಾಡಿ; ರಿಜೆಕ್ಟೂ ಆಗಿದ್ದರೂ ಕೂಡ;
ಅವಳಿಗಿನ್ನೂ ಮದ್ವೆ ಆಗಿಲ್ವಲ್ಲ; ನಮ್ಗೆ ಇನ್ನ ಚಾನ್ಸ್ ಇದೆ ಅನ್ನೋ ಮೊಂಡು ವಾದ.
ಅದಕ್ಕೆ ಸ್ನೇಹದ ಶಾರ್ಟ್ ಕಟ್ ಬೇರೆ.

'ಅದೇನೋಪ; ನಮಗೆ ಯಾರನ್ನ ನೋಡಿದ್ರು, ಇದುವರ್ಗೂ ಈ ಥರ ಫೀಲಿಂಗ್ ಬಂದಿಲ್ಲ. ಫಿಗರ್
ಮಸ್ತಾಗಿದ್ರೆ, ಜಾತ್ರೆನಲ್ಲೇ ಒಂದಷ್ಟು ದೂರ ಫಾಲೋ ಮಾಡಿ, ಕಣ್ ತಂಪು ಮಾಡಿಕೊಳ್ಳಬೇಕು.
ಅದನ್ನ ಬಿಟ್ಟು ಈ ರೀತಿ ಹುಚ್ಚನಂತೆ ಅಲೆಯೋದು; ಮೆಂಟ್ಲು ; ಮೆಂಟ್ಲು ನೀನು ' ಅಂದಿದ್ದ
ಸೀನ. ಅವನ ಮಾತನ್ನ ಅವತ್ತೆ ಕೇಳಿದ್ದಿದ್ದರೆ, ಇಶ್ಟು ವರ್ಷಗಳ ಮೇಲೆ; ಅವನ ಮುಂದೇ
ಕುಳಿತು, ಮತ್ತೆ ಉಗಿಸಿಕೊಳ್ಳುವ ಪ್ರಮೇಯ ಬರುತ್ತಿರಲಿಲ್ಲ.


'ಹೋಗ್ಲಿ ಬಿಡು. ಅವಳು ಬಲಗಾಲು ಅಲ್ಲ, ಎರಡೂ ಕಾಲು ಒಟ್ಟಿಗೆ ಇಟ್ಟು. ಜಂಪ್ ಮಾಡಿ,
ನಿನ್ನ ಜೀವನದೊಳಗೆ ಬಂದಿದ್ರೂ ಇಬ್ಬರ ಜೀವನಾನು ಚಿತ್ರಾನ್ನ ಆಗ್ತಿತ್ತು. ಆದದ್ದೆಲ್ಲಾ
ಒಳ್ಳೇದಕ್ಕೆ. ಆಗ್ತಾ ಇರೋದೆಲ್ಲ ಒಳ್ಳೇದಕ್ಕೆ. ಆಗೋದೆಲ್ಲಾ ಒಳ್ಳೇದಕ್ಕೆ. ' ಸೀನ ಏನೋ
ಬುದ್ಧಿ ಹೇಳುವಂತೆ ಹೇಳಿದ.

'ಹಹಹ ಹೌದಾ..? ಆದರೆ ಪ್ರತಿಯೊಬ್ಬರು ಅದನ್ನ, ತಮ್ಮ ಒಳ್ಳೇದಕ್ಕೆ' ಅಂತಾನೆ ಯಾಕೆ
ಅಂದ್ಕೋತಾರೆ. ? '

' ಹಂಗಾದ್ರೆ. ಆದದ್ದೆಲ್ಲಾ ಒಳ್ಳೇದಕ್ಕೆ ಅನ್ನೋದು, ಅವಳ perspective ನಲ್ಲಿ ಸತ್ಯ
ಬಿಡು. '  ಸೀನನ ಕೌಂಟರ್ ಗಳೇ ಹಾಗೆ. ಕಾಮೆಡಿಯಾಗಿದ್ದರೂ; ಕಟುವಾಗಿರುತ್ತವೆ.

'ಪಾಪಿ ಹೃದಯ ಕಣೋ. ಅಪರೂಪಕ್ಕೆ, ಏನನ್ನಾದರು ಬೇಕು ಅಂತ ಆಸೆ ಪಡತ್ತೆ. ಯೋಗ ಇರಲ್ಲ.
ದಾರಿಯಲಿ ನಡೆವಾಗ ಸಿಕ್ಕ ಜೊತೆಗಾತಿಗೆ ನಾ ಕೇಳಲಿಲ್ಲ. ನೀ ನನಗೆ ಏನಾಗಬೇಕೆಂದು. ? ಉಳಿದ ದಾರಿಯನ ಒಬ್ಬನಿಗೆ ಬಿಟ್ಟು ಹೊರಟಾಗ ಕೇಳಲೇ? ನಿಜವಾಗಲು ನೀ ನನಗೆ ಏನಾಗಬೇಕು ಇಂದು. '

'ಅಯ್ಯಯ್ಯ. ಟಾರ್ಚರ್ ಕೊಡಬೇಡ ಮಾರಾಯ. ಬಾಯ್ ತುಂಬಾ ಒಂದು ಸಾರಿ ಚನ್ನಾಗ್ ಬೈದು ಬಿಟ್ಟು
ಬಿಡು. '

'ಯಾಕ್ ಬಯ್ಯೋಣ. ನನ್ನ ಪಾಲಿಗೆ ಇಲ್ಲ ಅಂತಲಾ. ? ಸುಖವಿರಲಿ; ಖುಸಿಯಿರಲಿ; ನಗುವಿರಲಿ; ನಿನ್ನ ಬಾಳಿನಲಿ. ಏನಿರಲಿ; ಇರದಿರಲಿ; ಒಲವಿರಲಿ; ತಬ್ಬುವ ಅವನ ತೋಳಿನಲಿ. '

' ಹಾಕ್ ಥೂ; ಉಗಿ ಮೊಕಕ್ಕೆ. ಅವಳ ಚಂದದ ಬಗ್ಗೆ ನೀನೇನ್ ಹೇಳೋದು ಪಿಂಡ. Definite ಆಗಿ
ಚೆನ್ನಾಗೇ ಇರ್ತಾಳೆ. ಯಾಕಂದ್ರೆ, ನಿನ್ನ ಜೊತೆನಲ್ಲಿ ಅಲ್ಲ ತಾನೆ ಅವಳಿರೋದು. ಬಾಯ್ತುಂಬ
ಒಂದ್ ಸಾರಿ ಬಯ್ದು, ಮರೆತು ಬಿಡೋ ಅಂದರೆ. ನಾಟ್ಕ ಆಡ್ತೀಯ. ಜೀವನ ಸುಂದರವಾಗಿರಬೇಕು
ಅಂದ್ರೆ ಎರಡು ರೂಲ್ಸುಗಳನ್ನ ನೆನಪಲ್ಲಿ ಇಟ್ಕೋ. ಮೊದನೆಯದು ನಮ್ಮ ಲಿಮಿಟ್ ಗಳನ್ನ
ಕ್ಲೀಯರ್ ಆಗಿ ಅರ್ಥ ಮಾಡ್ಕೋಬೇಕು. ಎರಡನೆಯದು ಆ ಲಿಮಿಟ್ ಒಳಗೆ ನಮ್ಮನ್ನ ಬಿಟ್ರೆ
ಯಾರಿಲ್ಲ ಅನ್ನೋ ತರ ರಾಯಲ್ ಆಗಿ ಇದ್ದು ಬಿಡಬೇಕು. '

' ಆದ್ರೆ ನನ್ನ ಕಣ್ಣಿಗೆ ಅವಳನ್ನ ಬಿಟ್ಟರೆ, ನೀ ಹೇಳೋ ಈ ಯಾವ ಲಿಮಿಟ್ಟು ಕಾಣುಸ್ತಾ
ಇರಲಿಲ್ಲ. ತೀವ್ರವಾಗಿ ಪ್ರೀತ್ಸೋದು ಗೊತ್ತಿತ್ತು. ಅಷ್ಟೇ..? ಭಯ ಆಗುತ್ತೆ ಗೆಳೆಯ.
ಒಂದು ಕಡೆ ನಮ್ಮನ್ನ ತುಂಬಾ ಹಚ್ಚಿಕೊಂಡವರ ಪ್ರೀತಿಗೆ, ನಾವು ನಿಜವಾಗಲೂ ಅರ್ಹರಾ ಅನ್ನೋ
ಭಯ. ಇನ್ನೊಂದು ಕಡೆ, ನಾವು ಇನ್ನೊಬ್ಬರನ್ನ ಮತ್ತೆ ಇಷ್ಟ ಪಡ್ತೀವಾ ಅನ್ನೋ ಭಯ. ಆಗಲ್ಲ
ಲೇ!! ಮುಗೀತು ಅಷ್ಟೇ. ಮುಂದಿನದ್ದೆಲ್ಲಾ ಮೆಕಾನಿಕಲ್. ನಡಿಬೇಕಲ್ಲ ಅಂತ ನಡೆದು ಹೋಗತ್ತೆ
ಅಷ್ಟೆ . ಆ ದಿನ ಕಂಡೆ; ಒಲವಿನ ಅಮೃತ, ಹಿಡಿದು ಬಂದಿದ್ದ ಮೋಹಿನಿಯನ್ನು. ರಕ್ಕಸನಾಗಿರಲಿಲ್ಲ; ಆದರೂ ಹೋಗಿ, ಕೂಡಲಿಲ್ಲ ಆ ದೇವಲೋಕದ ಹಿಂಡನ್ನು. '

'ಅಪ್ಪಿ ತಪ್ಪಿ ನಿನ್ನ ಬಾಯಿಗೆ ಆ ಅಮೃತ ಬಿದ್ದಿದ್ದರೂ. ಕೊನೆಗೆ ಡ್ಯಾನ್ಸು ಮಾಡಿ
ಕಕ್ಕಬೇಕಿತ್ತು. ಅರ್ಥ ಮಾಡ್ಕೋ. ಪಿಚರ್ ಬಿಟ್ಟು ತುಂಬಾ ಹೊತ್ತಾಗಿದೆ. ಥಿಯೇಟರ್ ನಿಂದ
ಹೊರಡೋದು ಬಿಟ್ಟು, ಅಲ್ಲೇ ಏನ್ ಮಾಡ್ತಾ ಇದೀಯ. ? ಗಾಯಗಳದ್ದು ಕಲೆ ಮಾತ್ರ
ಉಳುಸ್ಕೋಬೇಕು. ಕೆರೆದು ಸಫ್ಟಿಕ್ ಮಾಡ್ಕೊ ಬಾರದು ಮಗ '

'ಸ್ವಲ್ಪ ಟೈಮ್ ಬೇಕಾಗತ್ತೆ ಗೆಳೆಯ. ಸ್ವಲ್ಪ ಟೈಮ್ ಬೇಕಾಗುತ್ತೆ. ಗ್ಯಾಸ್ ಬಿಟ್ಟು
ಎಷ್ಟೇ ಹೊತ್ತಾಗಿದ್ರೂ; ಅದರ ಸ್ಮೆಲ್ ಹೊರಟು ಹೋಗಿದ್ರೂ; ಮುಚ್ಚಿದ ಮೂಗನ್ನು
 ತೆಗೆಯೋದಕ್ಕೆ ಟೈಮ್ ಬೇಕಾಗುತ್ತೆ. ಒಬ್ಬರು ನಮ್ಮ ಲೈಫ್ ಇಂದ ಔಟ್ ಆಫ್ ಫೋಕಸ್ ಅಂತ
ಗೊತ್ತಾದ ಮೇಲೂ, ಅದನ್ನ ಒಪ್ಪಿಕೊಳ್ಳೋದಕ್ಕೆ ಟೈಮ್ ಬೇಕಾಗತ್ತೆ. ಕೈ ಕೈ ಹಿಡ್ಕೊಂಡು
ಲಲ್ಲೆ ಹೊಡದರಶ್ಟೇ ಫೀಲಿಂಗ್ಸಾ...?  ಇವು ಭಾವನೆಗಳು.

ಯಾವುದೋ ಮಳೆನಲ್ಲಿ; ಇನ್ಯಾವುದೋ ಚಳಿನಲ್ಲಿ; ಆ ಬೆಟ್ಟದ ಮೇಲೆ; ಆ ಸಂತೇಲಿ; ಆ ಟ್ರಾಫಿಕ್ಕಲ್ಲಿ; ಹೊತ್ತಿಲ್ಲ ಗೊತ್ತಿಲ್ಲ ನೆನಪಾಗ್ತಾಳೆ. ಮೊದಲು ಅವಳು ಒಬ್ಬಳೇ ಸ್ವತಂತ್ರವಾಗಿ, ಸ್ವಚ್ಚಂದವಾಗಿ ಕಾಣಿಸ್ತಾ ಇದ್ದಳು. ಈಗ ಆಸಿಗ್ನಲ್ ನಲ್ಲಿ ಸ್ವಲ್ಪ ನಾಯ್ಸು ಮಾರಾಯ. ನನ್ನ ಬೇಜಾರಿಗೆ ಕಾರಣ ಏನೋ ಇರತ್ತೆ; ಸೈಲೆಂಟಾಗಿ ಇರೋದನ್ನೇ, ಅಡ್ವಾಂಟೇಜ್ ತಗೋಂಡು ಅಷ್ಟೇ ಸೈಲೆಂಟಾಗಿ ಮೈಮೇಲೆ ಬಂದು ಬಿಟ್ಟಿರ್ತಾಳೆ. ಬಂದಿದ್ದು ಗೊತ್ತೇ ಆಗಿರಲ್ಲ. ಯಾವುದೋ ವಿಷಯಕ್ಕೆ ಖುಷಿ ಆಗಿರ್ತೇನೆ. ಆ ಹೊತ್ತಲ್ಲಿ, ನನ್ನ ಹತ್ರಾನು ಹೇಳೋ ಅಂತಾಳೇ. ನಾ ಕಟ್ಟೋ ಪುಟ್ಟ ಪುಟ್ಟ ಫ್ಯಾಂಟಸಿ ಲೋಕದಲ್ಲಿ, ಅವಳದ್ದು ಯಾವಾಗಲೂ ಲೀಡ್ ರೋಲ್ ಇರತ್ತೆ. ಸ್ವಲ್ಪಾನು ನಾಚಿಕೆ ಇಲ್ಲದೆ. ಈ ರೀತಿ ಎಲ್ಲ ಹೇಳಿಕೊಳ್ಳೋ, ಈ ಒಳ ಮುಚ್ಚುಗನ ಮನಸ್ಸಿನ ಮಾತು ಅವಳು. ನಾನು ಎಷ್ಟೇ ಪ್ರಿಟೆಂಡ್ ಮಾಡಿಕೊಂಡ್ರು, ನನ್ನ ಬಿಗ್ಗೆಸ್ಟು ವೀಕ್-ನೆಸ್ ಅವಳು. ನನ್ನ ಪಾಲಿಗೆ ಹೆಣ್ಣು ಅಂದ್ರೆ ಅವಳೇ. ಅವ್ಳು ನಕ್ಕರೂ ಚಂದ. ಮುಖ ಊದಿಸಿಕೊಂಡು ಗುಮ್ ಅಂತ ಇದ್ರೂ ಚಂದ. ಯಾರಿಗಾದ್ರೂ ಮುಖದ ಮೇಲೆ ರಪ್ ಅಂತ ಕೊಟ್ರೂ ಚಂದ.    **ಹೆಣ್ಣು ಮಾಯೆ ಅಲ್ವೋ...... ಅವಳು ಮಾಯೆ**  '

' ಹೊಡಿಬೇಕಿರೋದು ನಿನಗಲ್ಲ. ಈ ಪಿಚರ್ ತೆಗೆಯೋರಿಗೆ ಕೆರ ಕಳ್ಕೊಂಡ್ ಹೊಡೀಬೇಕು.
ಪ್ರಪಂಚದಲ್ಲಿ ಇಲ್ಲದೇ ಇರೋದನ್ನೆಲ್ಲಾ, ಇದೆ ಅನ್ನೋ ತರ ವಿಜೃಂಭಣೆ ಮಾಡಿ ತೋರಿಸಿ,
subconscious ಆಗಿ ಒಂದಷ್ಟು ಲವ್ವು, ರೊಮಾನ್ಸು ಅನ್ನೋ ರಬ್ಬಿಷ್ ನ ತಲೆ ಒಳಗೆ ಬಿಟ್ಟು
ಬಿಡ್ತಾರೆ. ಭ್ರಮೆ ಭ್ರಮೆ ಭ್ರಮೆ '

' ಭ್ರಮೆನೋ; ಕಲ್ಪನೇನೊ; ಅಥವಾ ಬರಿ ಆಸೆಗಳೋ.  ಆದರೆ ನನ್ನ ಪುಟ್ಟ ಪುಟ್ಟ ಖುಷಿಗಳಿಗೆ
ಅವ್ಳು ಕಾರಣ ಆಗಿದ್ಳು. ಯಾವಾಗಲು ಚನ್ನಾಗಿರ್ಬೇಕು.'

' ಅವಳು ಚೆನ್ನಾಗೇ ಇರ್ತಾಳೆ. ಸರಿಯಾಗ್ ಬೇಕಿರೋದು ನೀನು. ಎಲ್ಲಾ ರೀತಿ ಇಂದಾನು,
ಅವ್ಳು ನಿನಗಿಂತ ತುಂಬಾ ಮುಂದೆ ಇನ್ನೆಲ್ಲೋ ಇದಾಳೆ. In fact ಪ್ರಪಂಚದಲ್ಲಿ ಇರೋ
ಮುಕ್ಕಾಲು ವಾಸಿ ಜನ ನಿನ್ನ ಬಿಟ್ಟು ತುಂಬಾ ಮುಂದೆ ಹೋಗಿದಾರೆ. ನೀನು ವೈಟ್ ಅಂಡ್
ಬ್ಲಾಕ್ ಜಮಾನದಲ್ಲಿ ಹುಟ್ಟಬೇಕಿತ್ತು. ಅಪ್ಪಿ ತಪ್ಪಿ ಕಲರ್-ಫುಲ್ ಡಿಕೇಡ್ ನಲ್ಲಿ
ಹುಟ್ಟುಬಿಟ್ಟಿದ್ದೀಯ. ಆದರೂ ನಿನ್ನ ಅವಶ್ಯಕತೆ, ಅವಳಿಗೆ ಒಂದು ಕಾರಣಕ್ಕೆ ಬೀಳಬಹುದು.
ಹುಟ್ಟಿದ ಮಗೂಗೆ ಯಾವನೋ ಶಾಸ್ತ್ರಿ 'ದೆ ದೊ ಚ ಚಿ ' ಅಂತ ಅಕ್ಷರಗಳನ್ನ ಕೊಟ್ಟಿರ್ತಾನೆ.
ಒಂದು ಒಳ್ಳೇ ಹೆಸರು ರೆಫರ್ ಮಾಡು ಅಂತ, ನಿನ್ನ ಹತ್ರ ಅವ್ಳು ಕೇಳಬಹುದು.' ಅಪಹಾಸ್ಯದ
ನಗುವೊಂದು ಆ ಕಡೆಯಿಂದ ಬಂತು.

' ನೀನೂ. ಯಾರನ್ನಾದ್ರು ಮನಸಾರೆ ಇಷ್ಟ ಪಡು. ಗೊತ್ತಾಗತ್ತೆ. '

' I mean it. ಕುಡಿದು ಬಿಟ್ಟಿದೀನಿ ಅಂತ, ಈ ಥರ ಕಲರ್ ಕಲರ್ ಕಾಗೆ ಹಾರಿಸೋದಾ..?
ಎಲ್ಲರೂ ಅವರವರ ಯೋಗ್ಯತೆಗೆ ಅನುಸಾರವಾಗಿ ಒಂದೊಂದು ಚಾನ್ಸು ತಗೋಬೇಕು ಅಂತ ನೋಡ್ತಾರೆ.
ಕೆಲವರಿಗೆ ದಕ್ಕತ್ತೆ. ಇನ್ನು ಕೆಲವರಿಗೆ ದಕ್ಕಲ್ಲ. ಚಾಪ್ಟರ್ ಕ್ಲೋಸ್. ಇಲ್ಲಿ ಯಾರು
ಯಾರನ್ನ ಡಿಸರ್ವ್ ಮಾಡ್ತಾರೆ ಅಥವಾ ಮಾಡಲ್ಲ ಅನ್ನೋ ಪ್ರಶ್ನೇನೆ ಬರಲ್ಲ. ಒಬ್ಬಳಿಗೆ
ಕೊಟ್ಟು ಕಳೆದುಕೊಂಡೆ ಅನ್ನೋದಕ್ಕೆ, ಪ್ರೀತಿ ಅಂದ್ರೆ ಹುಂಡಿಗೆ ಹಾಕಿರೋ ಕಾಸು ಅಲ್ಲ.
ಪ್ರೀತಿ ಅನ್ನೋದು ಒಂದು ಭಾವ ಫೀಲಿಂಗ್ ಅಷ್ಟೇ. ಸುತ್ತ ನಮ್ಮ ಪ್ರೀತಿಯನ್ನ expect
ಮಾಡೋರು, ನಮ್ಮ ಬರಿದೆ ಟೈಮ್ ಗೋಸ್ಕರ ಕಾಯ್ತಾ ಇರ್ತಾರೆ. ಅವರಿಗೆ ಆ ಟೈಮ್ ಕೊಡಬೇಕು.
ಇನ್ನು ಸಿಂಪಲ್ ಆಗಿ ಹೇಳೋದಾದ್ರೆ, ಪ್ರೀತಿ ಒಂದು ಮಾಸ್ಕು . ಅದಕ್ಕೆ  ಸ್ವತಂತ್ರವಾದ
ಅಸ್ತಿತ್ವ ಅನ್ನೋದು ಇಲ್ಲ. ಸದಾ ಕೈನಲ್ಲಿ ಸಾಕಾಗುವಷ್ಟು ಈ ಥರದ ಪ್ರೀತಿಯ ಮುಖವಾಡಗಳನ್ನ
ಇಟ್ಟುಕೊಂಡಿರಬೇಕು. ನಾವು ಯಾರ ಜೊತೆ ಇರ್ತೇವೊ, ಅವರ ಮುಖಕ್ಕೆ  ಹಾಕಿಬಿಡಬೇಕು. '

' ಯೊಪ್ಪ!! ಚಪ್ಪಾಳೆ. ಅದಕ್ಕೆ ಮಗ ಹೇಳೋದು ಫ್ರೆಂಡು ಅನ್ನೋರು ಇರ್ಬೇಕು ಲೈಫಲ್ಲಿ.
ಸತ್ತಾಗ ಅತ್ತೋರೆಲ್ಲಾ ಸತ್ತವಗೆ ಸ್ವಂತವೆ. ಸೋತು ಮಂಡಿ ಮ್ಯಾಲೆ ತಾಕುಂತಾಗ ಬೆನ್ನಿಗೆ ಗುದ್ದುವ ಗೆಳೆಯ ಅನ್ಯನೆ..? ನೀನು ಸಿಂಪ್ಲಿ ಗ್ರೇಟ್ ದೋಸ್ತ '

'ಥೂ. ಥ್,  ಮುಚ್ಚು ಬಾಯಿ ಡ್ರಮಾಟಿಸ್ಟು. ಈ ತರ ನಾಟಕಗಳೇ ಇಷ್ಟ ಆಗಲ್ಲ.  ಮದುವೆಯಾಗಿರೋ
ಸುಸಂಸ್ಕೃತ ಭಾರತೀಯ ನಾರಿಯ ಬಗ್ಗೆ, ಈ ಹೊತ್ತಲ್ಲಿ ಮಾತಾಡ್ತಾ ಇದಿಯಾ.. ತಪ್ಪು
ಅನಿಸ್ತಿಲ್ವಾ..? ಅನೈತಿಕತೆ ಅನಿಸ್ತಿಲ್ವಾ.?'

' ಕಟ್ಟಿರೋದು ತಾಳಿ. ಮಂತ್ರಿಸಿರೋ ನಿಂಬೆ ಹಣ್ಣು ಅಲ್ವಲ್ಲಾ. ಯಾಕಂದ್ರೆ, ಅದನ್ನ
ಕಟ್ಟಿದ ತಕ್ಷಣ ಪವಾಡಗಳು ನಡೆದು, ಭಾವನೆಗಳೆಲ್ಲಾ ಬದಲಾಗೊದಕ್ಕೆ.  ಶ್ರೀದೇವಿ ಬಗ್ಗೆನು
ಮಾತಾಡ್ತೀವಿ, ಮೋನಿಕ ಬೆಲ್ಲುಸಿ ಬಗ್ಗೆನೂ ಮಾತಾಡ್ತೀವಿ. ಅವರಿಗೆ ನಮ್ಮಜ್ಜಿ ವಯಸ್ಸು.
ಅವರೇನು ನಮಗೆ ಸಿಕ್ತಾರ. ಆದರೂ ಮಾತಾಡಲ್ವಾ. ಹಂಗೆ ಇದೂನು ಒಂದು ಫ್ಯಾಂಟಸಿ ಸ್ಟೋರಿ
ಅಂದುಕೊಂಡು ಮಾತಾಡಬೇಕು.'

' ಅಯ್ಯಯ್ಯಾ!! ಹೊರಗ್ ಬಾ ಮಗ. ಯಾವಾಗ ಫೋನ್ ಮಾಡುದ್ರು, ರಿಸೀವ್ ಮಾಡಿ,  ನನ್ನ ಕೈಲಿ
ಉಗಿಸಿಕೊಳ್ಳೋದಕ್ಕೆ ಅಂತ ಇರೋದು ನೀನೊಬ್ಬ ಫ್ರೆಂಡು. ನೀನೂ ಸತ್ತೋಗ್ ಬುಟ್ರೆ. ಸಾವನ್ನು
ಹೆದರಿಸೋ ಅಷ್ಟು ಮೀಟ್ರು ನಿನಗಿಲ್ಲ. ಆದರೂ ಸ್ಟ್ರೋಕ್ ಏನಾದ್ರು ಬಂದು, ನ್ಯಾಚುರಲ್
ಡೆತ್ ಆಗಿಬುಟ್ರೆ ಅಂತ ಭಯ. ಸತ್ರೂ ಒಂದೊಳ್ಳೇ ರೀಸನ್ ಗೆ ಸಾಯಬೇಕಪ್ಪ. ಹುಡುಗಿ ನೆಪಕ್ಕೆ
ಜೀವ ಹೋಯ್ತು ಅಂದ್ರೆ, ಅದನ್ನ ಯಾರ ಹತ್ರಾನಾದ್ರು ಹೇಳಿಕೊಳ್ಳೋದಕ್ಕೂ ನಾಚಿಕೆ ಆಗತ್ತೆ.
ಒಂಥರ ಕಾಮೆಡಿ ಅನ್ಸತ್ತೆ '

' ನಾನ್ ಯಾವಾಗ ಸಾಯ್ತೀನಿ ಅಂತ ಹೇಳ್ದೆ ಲಾ. ಕಳ್-ನನ್ಮಗನೇ!! ಎಲ್ಲಾ ಸೇರಿಕೊಂಡು ವೀಕ್
ಮೈಂಡುಗಳನ್ನ exploit ಮಾಡ್ತೀರ. ಹೆದರಿಸ್ತೀರ. ' ಅಂದೆ.

ಬೇಡ; ಬೇಡ; ಅಂದುಕೊಂಡೇ ಬೆತ್ತಲಾಗಿಬಿಟ್ಟಿದ್ದೆ. ಬಾಗಿಲು ಹಾಕಿಕೊಂಡು ಕೀಲಿ ಬಚ್ಚಿಡುವ
ಕೆಲಸ ಅಂದಿಗೆ ಕೊನೆಯಾಗಿತ್ತು.