ಕವಿತೆಗಳನ್ನು ಮೆಚ್ಚಿ, ಯಾರಾದ್ರು ಬರೆದಾಗ ತುಂಬಾ ಖುಷಿ ಆಗತ್ತೆ. ಆ ರೀತಿ ಉತ್ಸಾಹದಿಂದ
ಬರೆದವರನ್ನ, ಸರಿಯಾಗಿ aknowledge ಮಾಡಕ್ಕಾಗದೇ ಇದ್ರೂ ಕೂಡ, ಅವರುಗಳ ಸಾಲುಗಳು
ಮಾತ್ರ, ನನ್ನ ಖುಷಿಯ ಬುತ್ತಿಯ ತುತ್ತುಗಳಂತಿವೆ.

ಅರೆಘಳಿಗೆಯ ಮನೋಲ್ಲಾಸಕ್ಕೆ ಕಾರಣವಾದ ನನ್ನ ಪದ್ಯಗಳಿಗೂ ಮತ್ತು ಮೆಚ್ಚಿ ಭಾವನೆಗಳಿಗೆ
ಪ್ರತಿಯಾಗಿ ಸ್ಪಂದಿಸಿರುವ ಕಾಮೆಂಟ್ ಕವಿಗಳಿಗೂ ಇಬ್ರಿಗೂ ಥ್ಯಾಂಕ್ಯು. ಕೆಲವು ಕವಿತೆಗಳು
ಮತ್ತು ಕವಿತೆಯ ಭಾವಕ್ಕೆ ಕಾಮೆಂಟ್ ರೂಪದಲ್ಲಿ ಬಂದ ಗೆಳೆಯರ ಪ್ರತಿ ಭಾವಗಳನ್ನು ಇಲ್ಲಿ
ಹಾಕುತ್ತಿರುವೆ. Enjoy :)

ಕನಸೂರ ದಾರಿಯಲಿ

ರೆಪ್ಪೆ ಕೂಡಿದ ಮೇಲೆ,
ತೆರೆದುಕೊಳ್ಳುವ ಮಾಯಾನಗರಿ(ಕನಸು)
ಮೈ ಕೊಡವಿ ಏಳುವ ಪಾತ್ರಗಳು
ಸೂತ್ರ ಹರಿದು ಸಜ್ಜಾಗುವ
ಎಲ್ಲೋ. ನೋಡಿದ ಮುಖಗಳು.

ಕನಸೂರ ದಾರಿಯಲಿ
ಅಂತ್ಯಗಾಣದ ದೃಶ್ಯಗಳು.
ಭ್ರಮೆಯ ಸೂರಿನಡಿಯಲ್ಲಿ
ನನ್ನ ಕೂಡುವ ಜೀವಗಳು.

ಅಲ್ಲೊಂದು ಕಥೆ,
ಕಥೆಯೊಳಗೊಂದು ಉಪಕಥೆ
ಎಚ್ಚರವಾದಾಗಲೆಲ್ಲಾ ಅದಲು ಬದಲಾಗುವ ಪಾತ್ರಗಳು.

ಕನಸುಗಳ ಮೌನ ಮೆರವಣಿಗೆಯಲ್ಲಿ
ಕಲ್ಪನೆಗಳದ್ದೆ ಕಾರು-ಬಾರು
ಅಲ್ಲಿ ನಾನೇ ರಾಜ, ಅವಳೇ ರಾಣಿ,
ನನ್ನ ಬಂಧು-ಮಿತ್ರರೆಲ್ಲಾ ಸೈನಿಕರು.

ಮೊದಮೊದಲು ನನ್ನ ಕವಿತೆಗಳನ್ನು ಮೆಚ್ಚಿ ಪ್ರೋತ್ಸಾಹಿಸುತ್ತಿದ್ದ, ಗೆಳೆಯ ನಿರಂಜನ ಈ
ಕವಿತೆಗೆ ಪ್ರತಿಕ್ರಿಯಿಸಿದ್ದು ಹೀಗೆ.
ಕನಸುಗಳ ಮೌನ ಮೆರವಣಿಗೆಯಲ್ಲಿ ಕಲ್ಪನೆಗಳದ್ದೆ ಕಾರು-ಬಾರು ಅಲ್ಲಿ ನಾನೇ ರಾಜ……. ಅಲ್ಲಿ ನೀ ಪ್ರಣಯರಾಜ, ಪ್ರೇಮಕವಿ. ಅವಳು ನಿನ್ನ ಪದಗುಚ್ಛಗಳಿಗೆ ಮನಸೂರೆಗೊಂಡವಳು. ನಾನು ನಿನ್ನ ಮಿತ್ರ, ನಿನ್ನ ಕನಸಿನ ಕೋಟೆಯ ಕಾವಲುಗಾರ. ನಿನ್ನ ಕನಸಿನ ಲೋಕದೊಳು ತೇಲಿ ಬರುವ ಕವನಗಳ ಹಿಡಿವ ಮೊದಲಿಗನಾಗಬೇಕೆಂಬ ನಿರೀಕ್ಷೆಯಲ್ಲಿರುವ ಸ್ವಾರ್ಥಿ ಸೈನಿಕ ನಾನು.


ಪ್ರೀತಿಯಲಿ ಸೋತವನು, ಸತ್ತವನು

ಕಣ್ಮುಚ್ಚಿದರೆ ಮಾತ್ರ ಕಾಣುವ ಸೊಗಸು.
ಕಲ್ಪನೆಯ ಹುಚ್ಚುಕುದುರೆಯ ಬೆನ್ನೇರಿ,
ಕುಣಿಕುಣಿದು
ನಡುರಾತ್ರಿಯಲೂ ಎದ್ದೆದ್ದು
ಕೈ-ಚಿವುಟಿ ಬಿಕ್ಕಳಿಸಿ
ಮುಂಜಾವಿನ ಕನಸಿಗೂ
ವಾಸ್ತವದ ಪುಕ್ಕ ತೊಡಿಸಿ
ಇರುಳಾಗುವ ತನಕ,
ತನ್ನೆದೆಯ ಮಿಡಿತ ಎಣಿಸಿ.
ಕಣ್ಣುಮುಚ್ಚಲೆಂದೇ ಕತ್ತಲೆಗಾಗಿ
ಕಾಯುವ ಹುಂಬತನ
ಸದಾ ಸೂತಕದ-ಹಡಗಲ್ಲಿ ಇವನ ಪಯಣ.

ಗೆಳೆಯ ರೂಪಿ ಇದಕ್ಕೆ ಹಾಕಿದ್ದ ಕಾಮೆಂಟು :
ಸದಾ ಸೂತಕದ-ಹಡಗಲ್ಲಿ ಇವನ ಪಯಣ……. ಪಯಣಕ್ಕೆ ಹಡಗೇ ಇಲ್ಲ ಎಂಬುವುದು ನನ್ನ ಅಂಬೋಣ


ಇದು ಹೃದಯದ ಹೊತ್ತಿಗೆ, ಮುನ್ನುಡಿ ಬೇಕೆ. ?

ಎಲ್ಲವನ್ನೂ ಹೇಳಿದ್ದೆ
ಒಲವನ್ನು ಬಿಟ್ಟು
ಹೂಗಳೆಲ್ಲವ ಹಾಸಿದ್ದೆ
ರೋಜಾವೊಂದನ್ನು ಬಿಟ್ಟು.
ಪ್ರೇಮಪತ್ರವೆಂದೆ, ಖಾಲಿ ಕಾಗದವ ಕೊಟ್ಟು.
ಒಳಗಿನ ಮೌನಕೆ
ಪದಗಳು ಬಾರದೆ ಹೋಯ್ತು.

ಬಿಚ್ಚಿ ಓದಲು ನಾಚಿ,
ಹಿಂತಿರುಗಿ ಕೊಟ್ಟಳು.
ತಪ್ಪೆನಿಸಿದರೂ ಅಪ್ಪಿ,
ಮೆದು ಮುತ್ತಿಟ್ಟಳು.

ನಾನೇ ಪೆದ್ದು ಅಂದರೆ,
ನನಗಿಂತಲು ಪೆದ್ದು ನನ್ನವಳು.
ಸಂಭವಿಸಿದ ಒಲವಿಗೆ,
ನಿವೇದನೆಯ ಪೀಠಿಕೆ. ?
ಇದು ಹೄದಯದ ಹೊತ್ತಿಗೆ,
ಮುನ್ನುಡಿ ಬೇಕೆ. ?

ಒಲವು ನಿವೇದನೆಯಾಗಲೇ ಇಲ್ಲ.
ಒಲವಿನ ಹೊಸಚಿಲುಮೆ ನಿಲ್ಲಲೂ ಇಲ್ಲ.

ಈ ಕವಿತೆಗೆ ಗೆಳೆಯ ಶಶಿಕಿರಣನ ಕಿರಣಗಳು ಈ ರೀತಿಯದ್ದಾಗಿದ್ದವು.
ಎಲ್ಲವನೂ ಹೇಳುವುದೇ ಪ್ರ್ರಿತಿ ಅಲ್ಲ; ಹೊತ್ತಿಗೆ ಬರೆಯುವುದೇ ದೊಡ್ಡಸ್ತಿಕೆ ಅಲ್ಲ; ಪ್ರೀತಿಯೇ ಆನಂದದ ನಿವೇದನೆ, ಅದಕ್ಯಾಕೆ ಬೇಕು. ಮುನ್ನುಡಿ ಎಂಬ ಆರಂಭ ಒಪ್ಪಿಗೆ ಓಲೈಕೆಯೆಂಬ ಕೊನೆ.
:) ಬಹಳ ಚೆನ್ನಾಗಿದೆ ಲೊ. ನಿನ್ನ ಆ ಮಳೆಯ ಹುಡುಗೀನೆ ನೆನಪಾದಳು. ಕವಿತೆ ಓದಿ.


ಸಾರ್ಥಕ ಸಾವು ಸಿಡಿಲೂ ಬಡಿಯಲಿಲ್ಲ,
ಕಾಳ್ಗಿಚ್ಚೂ ಹತ್ತಲಿಲ್ಲ,
ಅಂಥಾ ವಯಸ್ಸೂ ಆಗಿರಲಿಲ್ಲ,
ನಿಂತ ಮರ ನಿಂತಂತೆ ಒಣಗಿ ಬಿತ್ತು,
ಯಾರೂ ಗಮನಿಸಲೇ ಇಲ್ಲ.

Actually ಈ ಹನಿ ಅಥವಾ ಮಿನಿಕವಿತೆಯನ್ನ ಒಂದು ಸಾರ್ಥಕ ಸಾವಿಗೆ, ಸಮಾನಾಂತರವಾಗಿ
ಬರೆದದ್ದು. ನಮ್ಮ ಮಧ್ಯೆ ಯಾರೋ. ಅದ್ಭುತವಾಗಿ ಜೀವಿಸುತ್ತಾ ಇರ್ತಾರೆ. ಎಲೆ ಮರೆ ಕಾಯಿ
ರೀತಿ ಅವರ ಸಾವಿಗೆ ಅಂಥಾ ಕಾರಣಗಳೇನೂ. ಇರಲ್ಲ ಬದುಕಿದ್ದವರು ಒಂದಿನ ಸಾಯಲೇ ಬೇಕು ಅನ್ನೋ
ಸಿಂಪಲ್ ಕಾರಣಕ್ಕೆ ಅವರ ದೇಹ ಒಂದಿನ ಕೆಲಸ ಮಾಡೋದು ನಿಲ್ಸತ್ತೆ ಈ ಥರದ್ದೊಂದು context
ನಲ್ಲಿ ಕವಿತೆ ಬರೆದದ್ದು. ಇದಕ್ಕೆ ರವಿ ಪ್ರತಿಕ್ರಿಯಿಸಿದ್ದು ಈ ರೀತಿ :
ಪ್ರಾಬಬ್ಲಿ ನೀರು ಸರಿಯಾಗಿ ಹಾಕ್ತಿರ್ಲಿಲ್ಲ ಅಂತ ಅನ್ಸತ್ತೆ ಕಣ್ಲಾ. ಹಹಹಾ.


ಜಾರುವ ಸೆರಗಿನ,
ಲೆಕ್ಕ ತಪ್ಪಿದರೂ
ಇಳಿಬಿದ್ದ ಮುಂಗುರುಳ,
ಬಿಡಿಯಾಗಿ ಎಣಿಸಿದನು.

ರವಿಯ ಪ್ರತಿಕ್ರಿಯೆ: ಅದ್ಯಾವನ್ಲಾ ಅವನು ಗಮಾಡ್ ನನ್ಮಗ ಸೆರಗು ಜಾರೋವಾಗ್ಲು. ಕೂದ್ಲು.
ಏಣಿಸೋ ಅಂತವನು. ನನ್ನ ಎಲ್ಲಾ ಕವಿತೆಗಳನ್ನು ಓದಿ, ಸದಾ ಹಿಂಸಿಸುವ ಇವನ ಒಟ್ಟಾರೆ
ಪ್ರತಿಕ್ರಿಯೆ ಇದು.

ಲೆ ಕೆಸಿ, ನಿದ್ರೆ ಬರ್ತಿದೆ. ನಿನ್ ಕವನ ಓದಿ ಅಂತ ತಪ್ಪು ತಿಳ್ಕೋಬೇಡ ನಾನ್ ಅಷ್ಟು
ಡೈರೆಕ್ಟ್ ಆಗಿ ಹೇಳೋ ಮನ್ಷ ಅಲ್ಲ ಆಲ್ ಆರ್ ಗುಡ್ ಓನ್ಲಿ. ಛೇ not just good
excellent only…. , ಏನ್ ಮಾಡೋದು. ಆದ್ರೂ ನಿದ್ರೆ ಬರ್ತಿದೆ. ನಿನ್ನ ಕವನಗಳಿಂದ
ಅಲ್ಲ. ಮಲ್ಗೋ ಟೈಮ್ ಆಯ್ತು ಅದ್ರಿಂದ.


ಇಶ್ಟೆಲ್ಲಾ ಗೊತ್ತಿರೋರ ಮಧ್ಯೆ ಕೆಲವರು ಇದ್ದಾರೆ. ಅವರನ್ನ Anonymous ಅನ್ನೋ ಒಂದು
ಹೆಸರಿಂದ ಮಾತ್ರ ಗುರುತಿಸಬಲ್ಲೆ. ಆ ಕಾಮೆಂಟ್ ಗಳಂತೂ ಬಹಳಾನೆ ಖುಷಿ ಕೊಟ್ಟಿವೆ.

ಹೇಳು ನೀನೆ ಹೇಳು.

ಏನ. ? ಬರೆಯಲಿ ಗೆಳತಿ,
ಈಗ ನೀನೇ ಹೇಳು,
ಮುದ್ದು ಮುಖದ ಮೇಲೊಂದು
ಸಿಹಿನಗೆಯು ಮೂಡಲು

ನನ್ನ ನೆನಪು ನಿನಗೆ
ಕವಿತೆ ಮುಗಿವರೆಗೆ
ಮಿತಿಯ ನಾ ಅರಿವೆ.
ಈ ಒಂದು ಕ್ಷಣ
ನಿನ್ನ ಖುಷಿಗೆ ನಾ ಆಗಬೇಕು ಕಾರಣ.

ಏನ. ? ಬರೆಯಲಿ ಗೆಳತಿ,
ನೀ. ನೇ. ಹೇಳು.
ಮುದ್ದು ಮುಖದ ಮೇಲೊಂದು
ಸಿಹಿನಗೆಯು ಮೂಡಲು
ಹೇಗಿರಲಿ ಹೇಳು. ?
ನಿನಗಾಗಿ ಬರೆವ
ತುಂಡು ತುಂಡು ಸಾಲುಗಳು

ಓದಿಹೋದ ಮೇಲೂ
ಕಾಡುವಂತ ಭಾವವಿರಲಾ. ?
ಸುಮ್ಮನಿದ್ದಲೆಲ್ಲಾ
ಗುನುಗುವಂತ ಪ್ರಾಸವಿರಲಾ. ?
ಸುಳ್ಳು ಹೋಲಿಕೆಯಾದರು ಸರಿ
ಸುಂದರ ಹೊಗಳಿಕೆ ಇರಲಾ…?
ಈ ಒಂದು ಕ್ಷಣದಿ
ನಿನ್ನ ಮೊಗದ ಮೂಡಣದಿ
ನಗುವಿನ ಸೂರ್ಯ ಉದಯಿಸಲಿ.
ಹೇಳು ಏನ. ? ಬರೆಯಲಿ.

Anonymous ಪ್ರತಿಸ್ಪಂದನೆ:
ಕಾಡುವ ಭಾವದೊಂದಿಗೆ, ಗುನುಗುವ ಪ್ರಾಸವಿರಲಿ. ಸುಂದರ ಹೋಗಳಿಕೆಯೊಂದಿಕೆ, ನಿಜವು ಬೆರೆತಿರಲಿ. ಏನಿರಲಿ ಇರದಿರಲಿ, ನಿನ್ನ ಒಲವಿರಲಿ. ನಗುವಳು ಗೆಳತಿ, ಹೂವಂತೆ ಮುಖವರಳಿ


ಹುಡುಗಾಟದ ಒಲವು, ಸುಳ್ಳು

‘ಅರಿಯಲಿಲ್ಲ, ಬೆರೆಯಲಿಲ್ಲ,
ಸುಳಿದು ನೋಟ ನೆರೆಯಲಿಲ್ಲ’ ,
ಅಂದಮೇಲೆ,
ನಾ ಬಯಸಿದ್ದು ಏಕಂತ?
ಮಾತಿಗೆ ಮಾತಿಲ್ಲ,
ಕಥೆಗೂ ಎಳೆಯಿಲ್ಲ,
ತೊಟ್ಟಿಕ್ಕುವ ಮಾಡಿದು,
ಬೇಕಂತ ಭೂಗತ, ಏಕಾಂತ

ಪೂರ್ಣವಿರಾಮದ ಚುಕ್ಕಿಯನ,
ಒಂದರ ಮುಂದೊಂದು ಇಡುವೆ.
ಚಂದವ ಮಾಡುತ, ಇಟ್ಟ ಚುಕ್ಕಿಯನ,
ಮುಗಿದ ಕಥೆಯನ್ನೇ, ಎಳೆದಾಡುವೆ.

‘ಮರೆತು-ಗಿರಿತು’ ಅನ್ನೋ ಮಾತೆ, ಕಷ್ಟ ಕಣೆ.
ಪೂಸಿ ಹೊಡಿಯಬೇಕಿದೆ, ಪೆದ್ದು ಮನಸನ್ನೆ.
ನೀ ನಡೆದಾಡಿದ, ಈ ಲೋಕ ಸುಳ್ಳು.
ನೀ ಇರೋದೆ, ನನ್ನ ಪಾಲಿನ ಸುಳ್ಳು.
ನೀ ಕಳೆದು ಹೋದದ್ದು,
ಅಯ್ಯೋ ನಗೆಪಾಟಲು ಸುಳ್ಳು.
ನಾ ಹುಡುಕಾಡಿದ,
ಹುಡುಗಾಟದ ಒಲವೇ ಸುಳ್ಳು.
ಹೇಳು ಶುರು ಮಾಡಲಿ,
ಎಲ್ಲಿಂದ.? ಎನ್ನ ಮನದೆನ್ನೆ.
ಕಳೆದುಕೊಳ್ಳಬೇಕಿದೆ, ಸಣ್ಣ ನಂಬಿಕೆಯನ್ನೆ.

ಈ ಕವಿತೆಗೆ Anonymous ಪ್ರತಿಕ್ರಿಯಿಸಿದ ರೀತಿ. ಒಂದೊಂದು ಸಾಲಿಗೂ ಪಟ್-ಪಟ್ ಪಟಾರ್
ಏಟುಗಳು.

ಅರಿಯುವ ಅಗತ್ಯ ಅಪನಂಬಿಕೆಗೆ, ಬೆರೆಯುವ ಅನಿವಾರ್ಯ ಚಪಲತೆಗೆ, ಕನ್ನೋಟ-ಕಳ್ಳಾಟವೆಲ್ಲಾ ಅಪ್ರಭುದ್ದತೆಗೆ ಅಂದಮೇಲೆ, ನೀ ಬಯಸಿದ್ದು ಲೌಕಿಕ ಕಾಮವನ್ನೋ; ನಿರ್ಧರಿಸು ಅಲೌಕಿಕ ಪ್ರೇಮವನ್ನೊ ಒಲವೇ ಸುಳ್ಳೆಂಬುದು ನಿಜವಾದರೆ, ಎಳೆದಾಡದೆ ಮುಗಿಸಿಬಿಡು ಕಥೆಯನ್ನೆ ಅಥವಾ ಶುರುಮಾಡು ಮತ್ತೊಂಮ್ಮೆ ಮೊದಲಿನಿಂದಲೆ, ಕಳೆದುಕೊಳ್ಳದೆ ಈ ಬಾರಿ ಆ ಸಣ್ಣ ನಂಬಿಕೆಯನ್ನೆ:-)


ಕೊನೆಹನಿ

ಪುನಃ ಬೇರೆ ಯಾರನ್ನೋ ಅಲ್ಲ,
ನಿನ್ನ ಕೂಡ ಮತ್ತೆ ಅಷ್ಟು ಪ್ರೀತಿಸಲಾರೆ
ಸಣ್ಣಗಾಗಿದ್ದು ಉದ್ಯಾನದ ಕಾರಂಜಿ ಅಲ್ಲ,
ಸುಮ್ಮನಾಗಿದ್ದು ನನ್ನ ಸ್ಪೂರ್ಥಿಚೇತನ

Anonymous ಮಾತುಗಳು

ಪುನಃ ಅವಳನ್ನೂ ಅಲ್ಲ, ನಿನ್ನ ಕೂಡ ಮತ್ತೆ ಅಷ್ಟು ಪ್ರೀತಿಸಬೇಡ ಸುಮ್ಮನಾಗಿದ್ದು ನಿನ್ನ ಸ್ಪೂರ್ಥಿಚೇತನ ಅಲ್ಲ, ಸಣ್ಣಗಾಗಿದ್ದು 'ನೀನು' ಚೇತನ .:P


ಸಿಕ್ಕೊಮ್ಮೆ ಸೋಲಬೇಕು

ನೆಪಗಳ ಪಟ್ಟಿ ಮಾಡಿರುವೆ
ಮಾತು ಬೆಳೆಸಲು.
ತಾಲೀಮು ನಡೆಸಿರುವೆ
ಸಿಕ್ಕಾಗ ನಗಿಸಲು
ಮತ್ತೊಮ್ಮೆ ಭಾವುಕನಾಗಬೇಕು
ಸಿಕ್ಕೊಮ್ಮೆ ಸೋಲಬೇಕು

Anonymous ಪ್ರತಿಕ್ರಿಯಿಸಿದ ರೀತಿ

ನೆಪಗಳೇಕೆ ಮಾತಿಗೆ, ಮೌನ ಸಾಕು ತಾಲೀಮೇಕೆ ನಗಿಸಲು, ನೀನೆ ಸಾಕು ಮತ್ತೊಮ್ಮೆ ಭಾವುಕನಾಗಲು ಸಿಕ್ಕೊಮ್ಮೆ ಸೋಲಲು.:-)


Anonymous ಜೊತೆಗೆ ಕವಿತೆಗಳ ಜುಗಲುಬಂದಿ ಸಾಗಿದ್ದು ಹೀಗೆ

ಪ್ರತಿ ಕವಿತೆಯ ಕಡೆಯಲ್ಲಿ
ನನ್ನ ಹೆಸರ ಬರೆದರೂ ತಪ್ಪದೆ.
ನಾ ಪರಪಂಚಕ್ಕೆ ಅಪರಿಚಿತನಾಗಿಯೇ ಉಳಿದೆ.
ಕವಿತೆಯಿಂದ ಕವಿತೆಗೆ
ನೀ ಆಪ್ತಳು,
ಚಿರಪರಿಚಿತಳು ಆಗುತ್ತಲೇ ಹೋದೆ.

ಪ್ರತಿ ಕವಿತೆಯಲ್ಲೂ ನಿನ್ನಂತರಂಗವ ತೆರೆದಿಡುತ್ತಾ, ಭಾವನೆಗಳ ಪ್ರವಾಹವ ಹರಿಬಿಡುತ್ತಾ, ಅಪರಿಚಿತ ಪ್ರಪಂಚಕ್ಕೆ ಪರಿಚಿತನಾದೆ. ಚಿರಪರಿಚಿತಳು ಅವಳಾದರೂ , ಓದುಗರ ಆಪ್ತ ನೀನೆ ಅದೆ

ತೆರೆದಿಟ್ಟ ಅಂತರಂಗದಲೂ ಕಂಡವಳು ಅವಳು,
ಹರಿಬಿಟ್ಟ ಭಾವ ಪ್ರವಾಹದಲೂ ಮಿಂದವಳು ಅವಳು,
ಪದಗಳ ಅಂತಃಶಕ್ತಿಯೇ ಅವಳಾಗಿರುವಾಗ,
ಕೊನೆಯಲ್ಲಿ ಬರೆದ ನನ್ನ ಹೆಸರು ಕೇವಲ ನಿಮಿತ್

ತೆರೆದಿಟ್ಟ ಅಂತರಂಗದಲೂ ಅವಳನ್ನು ಕಾಣಿಸಿದವನು ನೀನು, ಹರಿಬಿಟ್ಟ ಭಾವ ಪ್ರವಹದಲೂ ಅವಳನ್ನು ಮೀಸಿದವನು ನೀನು, ಪದಗಳ ಅಂತಃಶಕ್ತಿ ಅವಳಾಗಲು ಕಾರಣ ನೀನಾಗಿರುವಾಗ , ಕೊನೆಯಲ್ಲಿ ಬರೆದ ನಿನ್ನ ಹೆಸರು ಹೇಗಾದೀತು ಕೇವಲ ನಿಮಿತ್ತ ???.:-)

ಬರಿಯ ಕಾವ್ಯದಲಿ ಮೆರೆಸಿದರೆ ಬಂದದ್ದೇನು ಭಾಗ್ಯ ?
ಜೊತೆಯಲಿ ಎರಡು ಹೆಜ್ಜೆ ಹಾಕಿದರೆ ತಿಳಿದೀತು ನಾನಾ ಯೋಗ್ಯ
ಒಲ್ಲದವಳ ಮುಖದಲಿ ನಗು ಮೂಡಿಸಬಹುದಷ್ಟೆ .
ಒಲವನು ಎದೆಯಲಿ ಈ ನಿಮಿತ್ತ ಬಿತ್ತಲಾಗದಷ್ಟೇ

ಜುಗಲುಬಂದಿ ಹೀಗೆ ಉತ್ತರಿಸುತ್ತಾ ಸಾಗಿತ್ತು.