ನೀ ಬಿಟ್ಟು ಹೋದ ಮೇಲೆ ಬದಲಾಗಿದ್ದು ಬಹಳಷ್ಟು. ಎರಡು ವರುಷಗಳಲ್ಲಿ ಮೂರು
ಮುಖ್ಯಮಂತ್ರಿಗಳು ಬದಲಾದರು. ಸಾರಿ ಕಣೋ, ನಿನಗೆ ಅದರಲ್ಲೆಲ್ಲಾ ಆಸಕ್ತಿ ಇಲ್ಲ. ಸರಿ;
ಪಾರ್ವತಿ ಪರಮೇಶ್ವರ ದಾರಾವಾಹಿಯಲ್ಲಿ ಪಾರ್ವತಿ ಮತ್ತು ಪರಮೇಶ್ವರ ಇಬ್ಬರೂ
ಬದಲಾಗಿದ್ದಾರೆ. ಈಗ ಬಂದಿರೋ ಹೊಸಬರು ಪರವಾಗಿಲ್ಲ. ಇನ್ನು ಪೋಗೋ ನಲ್ಲಿ ಮಿಸ್ಟರ್ ಬೀನ್,
ಟಾಂ ಅಂಡ್ ಜೆರ್ರಿ ಎಪಿಸೋಡುಗಳು ಅವೇ ಹಿಂದೆ ಮುಂದೆ ಹಾಕ್ತಾ ಇರ್ತಾರೆ. ಪ್ರಪಂಚ
ಹೆಂಗಿದಿಯೋ ಹಂಗೇ ಇದೆ. ಜನ ಮಾತ್ರ ಆಗಾಗ 'ಪ್ರಳಯ ಆಗುತ್ತೆ ' 'ಎಲ್ಲರೂ ಒಟ್ಟಿಗೆ
ಸತ್ತೋಗಿ ಬಿಡ್ತೇವೆ ' ಅಂತ ಕಥೆ ಹೊಡಿತಾ ಇರ್ತಾರೆ. ಹೊಸದೇನಿಲ್ಲ. ಮತ್ತೆ ಇನ್ನೇನೂ
ಹೇಳಿಕೊಳ್ಳುವಂತದ್ದಿಲ್ಲ.

ನಾವು ಅಷ್ಟೋಂದು ಆತ್ಮೀಯರಾಗಿ ಇರಲಿಲ್ಲ. ಆದರೂ ನನ್ನ ತುಂಬಾ ಇಷ್ಟ ಪಡ್ತಿದ್ದೆ ಅನ್ನೋದು
ಅರ್ಥ ಆಗೋದಕ್ಕೆ ತಡ ಆಯ್ತು. ಸ್ವಲ್ಪ ಕೊಬ್ಬು ಜಾಸ್ತಿ ಅನ್ಸತ್ತೆ, ನನಗೆ.

ನಾನು ಸ್ಕೂಲು ಸೇರಿಕೊಂಡು ಬುದ್ದಿವಂತ ಆಗ್ತಾ ಹೋದೆ. ನೀನು ಸ್ಕೂಲು ಬಿಟ್ಟು
ದಡ್ಡನಾಗಿಯೆ ಉಳಿದೆ. ನಾನು ಮಾಂಸಖಂಡಗಳನ್ನು ಬೆಳೆಸಿಕೊಂಡು ವಯಸ್ಸಿನ ಜೊತೆ
ಬಲಿಷ್ಟನಾದೆ. ನಿನ್ನ ದೇಹ ಸರಿಯಾಗಿ ಬೆಳೆಯಲೇ ಇಲ್ಲ. ಇಷ್ಟೆಲ್ಲಾ ಇಲ್ಲಗಳ ಮಧ್ಯೆ ನೀನು
ದೊಡ್ಡವನಾದೆ. ನಾನು ಚಿಕ್ಕವನಾದೆ.

ನಮ್ಮ ಮಧ್ಯೆ ಮಾತಾಡಕ್ಕು ಸಮಾನವಾದ ವಿಷಯಗಳು ಇರ್ತಾ ಇರಲಿಲ್ಲ. ಆಡೋದಕ್ಕೆ ಆಟಗಳು ಇರ್ತಾ
ಇರಲಿಲ್ಲ. ಇವುಗಳು ಯಾವು ಇಲ್ಲದೇನು ಎಲ್ಲರೂ ನಿನ್ನ ಜೊತೆ, ಕನೆಕ್ಟೆಡ್ ಆಗಿಯೇ ಇದ್ದರು.
ನಾನು ಇವುಗಳನ್ನೆಲ್ಲಾ ಅರ್ಥ ಮಾಡಿಕೊಳ್ಳುವ ವಯಸ್ಸು ಬಂದಾಗ, ನೀನು ಜೀವನದ ಇನ್ನೊಂದು
ತುದಿಗೆ ಹೋಗಿ ನಿಂತಿದ್ದೆ. ಬರಲಾರದ ತುದಿಗೆ.

ಸ್ವಲ್ಪ ದಿನದ ಹಿಂದೆ ನಮ್ಮ ಜೊತೆ ಯಾರೋ ಇದ್ರು, ಸಡನ್ನಾಗಿ ಅವರು ಮತ್ತೆ ನಮ್ಮ ಮನೆಗೆ
ಬರೋದೆ ಇಲ್ಲ; ನಮ್ಮ ಜೊತೆ ಊಟಾನು ಮಾಡಲ್ಲ; ಮಾತು ಆಡಲ್ಲ; ಫೋನು ಮಾಡಿದ್ರೂ ಅವರು
ಎತ್ತಲ್ಲ; ಅಂದ್ರೆ ಇದನ್ನ ಅರಗಿಸಿಕೊಳ್ಳುವುದಕೆ ತುಂಬಾ ಕಷ್ಟ ಆಗುತ್ತೆ.

ಕೆಲವು ಸಾರಿ ಎಲ್ಲಾ, ನಾ ಮನೆಗೆ ಬಂದಾಗ ನೀ ಯಾವುದಾದ್ರು ಊರಿಗೆ ಹೋಗಿರ್ತಿದ್ದೆ
ಅಲ್ಲವಾ..? ಅಜ್ಜಿ ಮನೆಗೋ, ಆಂಟಿ ಮನೆಗೋ ಹೋಗಿದಿಯ. ಬರ್ತೀಯ ಅಂದುಕೊಂಡು
ಸುಮ್ಮನಿರೋದು.

ಕೊನೆಸಾರಿ ಪಪ್ಪಿ ಕೊಟ್ಟ ನೆನಪು ಇನ್ನು ಹಾಗೆ ಇದೆ. ಮುತ್ತು ಕೊಡುವಾಗ ಮೆತ್ತಗಿದ್ದ
ನಿನ್ನ ಕೆನ್ನೆಗಳು, ಮುದ್ದುಮುದ್ದಾಗಿ ಕಾಣುತ್ತಿದ್ದ ನಿನ್ನ ಮುಖ. ಛೆ!!! ಆ ಸಮಯದಲ್ಲಿ
ನಿನ್ನ ದೇಹದೊಳಗೆ ಜೀವ ಇರಲಿಲ್ಲ ಅನ್ನೋದನ್ನ ಹೇಗಂತ ಒಪ್ಪಿಕೊಳ್ಳೋಣ. ನೆನೆಸಿಕೊಂಡ್ರೆ
ತುಂಬಾ ನೋವಾಗುತ್ತೆ.

ನನ್ನೊಳಗಿನ ಸ್ವಾರ್ಥಿ!! ಈ ನೋವನ್ನು ಬರಿ ಅಂತಾನೆ. ನೋವನ್ನು ಮಾರಾಟದ ಸರಕಾಗಿಸುವ
ವಿಕ್ಷಿಪ್ತ ಜೀವನಶೈಲಿ ಈ ಭಾವಜೀವಿಗಳದ್ದು. ಬರೆಯೋದಕ್ಕೆ ಕೂತರೆ ಒಂದು ದೊಡ್ಡ ಶೂನ್ಯ
ಕಾಣತ್ತೆ. ಆದರೆ ಯಾವುದನ್ನ ಎಷ್ಟು ಬರೆದು ಎಲ್ಲಿಗೆ ನಿಲ್ಲಿಸಬೇಕು ಅನ್ನೋದು
ತಿಳಿಯಲ್ಲ.

ಇವತ್ತಿಗೆ ಸರಿಯಾಗಿ ಎರಡು ವರ್ಷಗಳ ಹಿಂದೆ!! 8-9-2010.... ಇಪ್ಪತ್ತೊಂದು ವರುಷಗಳು
ಹರಿದ ಹೃದಯದ ಜೊತೆ, ಉಸಿರು ಹಿಡಿದು ನಡೆಸಿದ ನಿನ್ನ ಹೋರಾಟ ಮುಗಿದು ಹೋಗಿತ್ತು. 
ಎಷ್ಟು ಬೇಗ ಎರಡು ವರ್ಷ ಆಗೋಯ್ತು.