ಮನುvಕೃತಿ

" ಹೌದು!!, ನಾನು ರಾಗಿ ಹಿಟ್ಟಿನ ಬದಲಾಗಿ ಕೊಂಡುಕೊಂಡವನೆ ಇರಬೇಕು"    ಏಳು ವರ್ಷದ ಎಳೆ ಮೈಯ ಮೇಲೆ ಮೂಡಿದ್ದ ಬಾಸುಂಡೆಯನ್ನೊಮ್ಮೆ ನೋಡಿಕೊಳ್ಳುತ್ತಾ ಮನು ಗೊಣಗಿದ. ಇಪ್ಪತ್ತೈದು ಪೈಸೆ ಕದ್ದು ,  ಶೆಟ್ಟರ ಅಂಗಡಿಯಲ್ಲಿ ಲಾಟರಿ ಆಡಿ,  ಪ್ಲಾಸ್ಟಿಕ್ ಉಂಗುರವೊಂದನ್ನು ಗೆದ್ದು ತಂದ. ಬೆರಳಿನಲ್ಲಿ ಮಿಂಚುತ್ತಿದ್ದ ಉಂಗುರದಿಂದಾಗಿ, ತಂದೆಯ ಬಳಿಯೇ ಸಿಕ್ಕಿಬಿದ್ದು,  ಭಯ ದಿಗಿಲಿನಲ್ಲಿ ಎಲ್ಲವನ್ನೂ ಅನಾಮತ್ತಾಗಿ ಒಪ್ಪಿಕೊಂಡ.     

"ಲೇ. ! ನೋಡೆ ನಿನ್ನ ಮಗ ಮನೆ ಉದ್ಧಾರ ಮಾಡೊ ಕೆಲಸ ಮಾಡಿದ್ದಾನೆ.  ದುಡ್ಡು ಕದ್ದಿರೋದು ಅಲ್ಲದೆ,  ಲಾಟರಿ ಆಡಿ ಉಂಗುರ ಗೆದ್ದು ತಂದ್ದಿದ್ದಾನೆ".  ಅಬ್ಬರಿಸುತ್ತಾ ಕೊಟ್ಟಿಗೆಯ ಮೂಲೆಯಲ್ಲಿದ್ದ ಜೋಳದ ದಂಟಿನಿಂದ ಹೋರಿಗೆ ಬಾರಿಸುವಂತೆ ಹೊಡೆದರು.  ಇದ್ದಕ್ಕಿದ್ದಂತೆ ನಡೆದ ಬೆಳವಣಿಗೆಗಳಿಂದ ಚೇತರಿಸಿಕೊಳ್ಳುವಷ್ಟರಲ್ಲಿ ಮನು ಅಪ್ಪನ ಕೋಪಕ್ಕೆ ತುತ್ತಾಗಿದ್ದ.

"ಆಸ್ಪತ್ರೆಯಲ್ಲಿ ನಿನ್ನನ್ನು ರಾಗಿಹಿಟ್ಟಿಗೋಸ್ಕರ ಮಾರಿ ಹೋದರು ನಿನ್ನ ಅಪ್ಪ, ಆಮ್ಮ. ಅಯ್ಯೋ ಪಾಪ! ಎಂದು ಸಾಕಿಕೊಂಡಿದ್ದೇವೆ " ಎಂದು ತಮಾಷೆಗಾಗಿ ಹೇಳುತ್ತಿದ್ದ ಅಜ್ಜಿಯ ಮಾತುಗಳು ಮತ್ತೆ ಮತ್ತೆ ನೆನಪಾದವು.  ಮನೆಯವರು ಯಾವ ವಿಷಯವಾಗಿ ದಂಡಿಸಲು ಮುಂದಾದಾಗಲೂ.. ಈ ಮಾತುಗಳು ನೆನಪಾಗಿ ಕಾಡುತ್ತಿದ್ದವು.   

"ಅಂದು ಚಿಕ್ಕೆರೆಯಲ್ಲಿ ಎರೆಮಣ್ಣಿನ ಗಣೇಶನನ್ನು ಮುಳುಗಿಸಲು ಹೋಗಿದ್ದಕ್ಕೆ ಮನೆಯವರೆಲ್ಲಾ ತಲೆಗೊಂದರಂತೆ ಏಟು ಕೊಟ್ಟಿದ್ದರು.  ನೀರಿನಲ್ಲಿ ಮುಳುಗಿ ಸತ್ತು ಹೋಗಿ ಬಿಡುತ್ತಿದ್ದೆನಂತೆ.  ಪ್ರೀತಿನೂ ಇಲ್ಲ,  ಮಣ್ಣೂ ಇಲ್ಲಾ.  ಈ ಹಾಳದವರಿಗೆ ಹೊಡೆಯಲು, ಬೈಯ್ಯಲು ಒಂದು ನೆಪ ಬೇಕು ಅಷ್ಟೆ".    ಮನೆಯವರ ಕುಯುಕ್ತಿಗೆ ತಾನು ಬಲಿಪಶುವಾಗಿದ್ದೇನೆಂದು ಕೊರಗಿದ.   ಪ್ರತಿಬಾರಿ ದಂಡಿಸಿದಾಗಲು ತಿರಸ್ಕಾರ ಭಾವನೆ ಭಲವಾಗುತ್ತಿತ್ತು.    

" ಇರಲಿ-ಇರಲಿ ನಾನೂ ಕೂಡ, ಒಂದು ದಿನ ದೊಡ್ಡವರಂತೆ ದೊಡ್ಡವನಾಗುತ್ತೇನೆ.  ಆಗ ಎಲ್ಲರನ್ನೂ ಒಂದು ಕೈ ನೋಡಿಕೊಂಡರಾಯ್ತು" ಎಂದುಕೊಳ್ಳುವನು.  ಆಗ ಅವನ ಕಲ್ಪನೆಯ ಹುಚ್ಚು  ಪ್ರಪಂಚದ ಬಾಗಿಲು ತೆರೆದುಕೊಳ್ಳುವುದು. ಅಲ್ಲಿ ದೃಢಕಾಯನಾದ ವ್ಯಕ್ತಿಯೊಬ್ಬ ಕೌ ಬಾಯ್ ಟೋಪಿಯಲ್ಲಿ, ಕುದುರೆ ಸವಾರಿ ಮಾಡಿಕೊಂಡು ಬಂದು, ತನ್ನ ಅಪ್ಪ-ಅಮ್ಮ ನನ್ನು ಸುತ್ತುವರಿದು ಉದ್ದನೆಯ ಚಾವಟಿಯಿಂದ ಚಟಾರ್-ಪಟಾರ್ ಎಂದು ದಂಡಿಸುವನು. ಟೊಪ್ಪಿಯ ಮರೆಯಿಂದ ಆ ಯುವಕನ ಮುಖ ಕಂಡು ಅದು ತಾನೇ, ಎಂಬ ಸುದ್ದಿಯು ತಿಳಿದಾಕ್ಷಣ 'ಅಬ್ಬಬ್ಬಾ' ಎಂದು ಅಪಾರ ಸಂತೋಷಪಡುವನು.  ಮೈ ಮೇಲೆ ಎರೆ ಉಳುವಿನಂತೆ ಮೂಡಿದ್ದ ಬಾಸುಂಡೆಯ ಮಧ್ಯೆಯು ಈ ಭಾವನೆ ಹಿತವಾಗಿತ್ತು.   

Read more posts on general
ಕನಸೂರು, ನನ್ನೆಲ್ಲಾ ಕೌತುಕಗಳ ಜೋಳಿಗೆ, ಬರಹಗಳಿಗೆ ದೀವಿಗೆ. ಕಥೆ, ಕವನ ಅಥವಾ ಯಕಃಶ್ಚಿತ್ ಅನ್ನಿಸುವ ಬರವಣಿಗೆಗಳಿರಬಹುದು. ತೋಚಿದ್ದು; ಗೀಚಿದ್ದು;

ಓದುಗನ ಸಹಾನುಭೂತಿ ಮತ್ತು ಪ್ರೀತಿ ಇಲ್ಲದಿದ್ದರೆ, ಬರೆದದ್ದನ್ನು ಹಂಚಿಕೊಳ್ಳೋದಕ್ಕೂ ಭಯ ಆಗತ್ತೆ. ನಿಮ್ಮ ಈ ಓದಿನ ಆಯ್ಕೆಯನ್ನು ಗೌರವಿಸುತ್ತೇನೆ. Thank you :)