ಯಾವುದರ ಬಾಲ ಹಿಡಿಯಬೇಕು ಅನ್ನೋ ಜಿಜ್ಞಾಸೆ. ​​ಸ್ವತಂತ್ರವಾಗಿ ಯಾವುದನ್ನೂ ಬೆಂಬಲಿಸದಂತಹ ಕಾಲ ಘಟ್ಟವಿದು.

ಮಾತನಾಡುವವರೆಲ್ಲಾ ತಮ್ಮ ಲಾಭಕ್ಕಾಗಿಯೇ ಮಾತನಾಡುವವರಲ್ಲ. ಅಷ್ಟು ಮಾತ್ರಕ್ಕೆ ನೂರಕ್ಕೆ ನೂರರಷ್ಟು ನಿಸ್ವಾರ್ಥಿಗಳು. ವೈಯಕ್ತಿಕವಾಗಿ ಯಾರಿಗೂ.. ಏನೂ ಸಿಗುವುದಿಲ್ಲ. ಆದ್ರೂ ಎಲ್ಲರು ಮಾತನಾಡುವವರೆ. ಒಂದಲ್ಲ ಒಂದು 'ಸಿದ್ಧಾಂತ'ದ ಪಕ್ಷಪಾತಿಗಳು. ಮಾತನಾಡುವ ಮಂದಿಗೆ ಬಾಲಬಡುಕರಾಗಿ ಬೆಂಬಲಕ್ಕೆ ನಿಲ್ಲುವವರಿಗೂ, ಅವರ ವಿರುದ್ಧ ಧ್ರುವಕ್ಕೆ ನಿಂತು ಬೊಬ್ಬೆ ಹೊಡೆಯುವವರಿಗೂ!! ಸಿಗುವಂಥದ್ದು ಏನಿಲ್ಲ. ಆದರೂ ಕಚ್ಚಾಡ್ತೇವೆ. ಯಾರದ್ದೋ ಆವೇಶ ತಮ್ಮದೇ ಎಂಬಂತೆ ಎಗರಾಡುತ್ತೇವೆ. ತಮ್ಮ ತಮ್ಮ ಬುದ್ದಿವಂತಿಕೆ ಪ್ರದರ್ಶಿಸಿ, 'ಸೋಷಿಯಲ್ ಮೀಡಿಯಾದ ಸಿವಿಲೈಸ್ಡ್ ಸಂತರಿಂದ' ವ್ಯಾಲಿಡೇಟ್ ಮಾಡಿಸಿಕೊಳ್ಳುವ ಹುಂಬತನ ಯುವಕರಿಗಿದ್ದರೇ, ವಿಷದ ಬೀಜವನ್ನು ಉತ್ತಿ, ಬಿತ್ತಿ!! ಇವಿಲ್ ಸ್ಪಿರಿಟ್ ಸಾಯದಂತೆ, ವ್ಯವಸ್ಥಿತವಾಗಿ ಬೆಳೆಸುವ ಬುದ್ದಿವಂತರ ದಂಡು ಮತ್ತೊಂದು ಕಡೆ.

ಯಾರು ಒಪ್ಪಿಕೊಳ್ಳಲಿ, ಬಿಡಲಿ. ನಮ್ಮ ದೇಶದಲ್ಲಿ ಮಾತ್ರವಲ್ಲ ಅಸಹನೆ/ ಅಸಹಿಷ್ಣುತೆ ಅನ್ನೋದು ಪ್ರಪಂಚದಾದ್ಯಂತ ತುಂಬಿ ತುಳುಕುತ್ತಿದೆ. ಕ್ಷಮಿಸುವುದನ್ನ ಮರೆಯುತ್ತಿದ್ದೇವೆ. ಅಲಕ್ಷಿಸಿ, ಮುಂದೆ ಹೋಗುವದನ್ನ ಮರೆಯುತ್ತಿದ್ದೇವೆ. ಎಲ್ಲದಕ್ಕೂ!! ಎಲ್ಲರಿಗೂ ರಿಯಾಕ್ಟ್ ಮಾಡೋದು ಅಭ್ಯಾಸ ಆಗಿಬಿಟ್ಟಿದೆ.

ನಾನು ಹಿಂದು, ಬ್ರಾಹ್ಮಣ, ಒಬಿಸಿ, ದಲಿತ, ಮುಸಾಲ್ಮಾನ, ಕನ್ನಡಿಗ, ನಾರ್ಥಿ, ಸೌತಿ, ತುಳು ನಾಡಿಗ, ಮಲೆನಾಡಿಗ, ಗೌಡ್ರು, ಭಂಟ್ರು, ಭಾರತೀಯ, ಹುಬ್ಬಳ್ಳಿಯವ, ಏಸಿಯನ್. ಲೆಕ್ಕ ಹಾಕ್ತಾ ಹೋದ್ರೆ, ಒಬ್ಬೊಬ್ಬರೂ ನೂರು ಇಂಡಿಪೆಂಡೆಂಟ್ ಟೈಟಲ್ ಹೆಗಲಿಗೇರಿಸಿಕೊಂಡು ಅಗಾಧವಾಗಿ ಹೆಮ್ಮೆ ಪಡಬಹುದು. ಇಂತಹ ನನ್ನದು, ನನ್ನೋರು, ನಮ್ಮ ಜನ!! ಅಂತ ... ಹೆಮ್ಮೆ ಪಡುವ ಮನಸ್ಸುಗಳೊಳಗೆ, ಬಂದು ಕೂತುಕೊಳ್ಳುತ್ತಿರುವುದೇ 'ಡೇಂಜರಸ್ ಅಂಧಾನುಕರಣೆ'.

ಈ ಅಂಧಾನುಕರಣೆ ಅದೆಷ್ಟು ಪವರ್-ಫುಲ್ ಆಗಿರುತ್ತದೆ ಅಂದರೆ, ಇಶ್ಟು ವರುಷಗಳ ನಮ್ಮ ಜೀವನಾನುಭವಕ್ಕೂ, ಕಿಮ್ಮತ್ತು ಬೆಲೆ ಕೊಡದೆ, ಕ್ರೌಡ್ ಜೊತೆ ಕ್ಯಾರೀಡ್ ಅವೇ ಆಗ್ತೇವೆ. ಯೋಚ್ನೇನೆ ಮಾಡಲ್ಲ.

ಘಟನೆ ಯಾವುದೇ ಇರಲಿ, ಮಾತುಗಳು ಏನೇ ಇರಲಿ, ಸನ್ನಿವೇಶ ಎಂಥದೇ ಇರಲಿ!! ಅದನ್ನ ಎಕ್ಸ್-ಕ್ಲೂಸೀವ್ ಆಗಿ ನೋಡಬೇಕು, ವಿಚಾರ ಮಾಡಬೇಕು ಅನ್ನೋ ಕನಿಷ್ಟ ಪರಿಜ್ಞಾನವೂ ಮರೆತುಹೋಗುತ್ತದೆ.

ಸಾವಿರದಷ್ಟು ಸತ್ಯಗಳು ಕಾಮನ್ ಸೆನ್ಸ್ ಇರೋ ಕಣ್ಣುಗಳ ಮುಂದೆಯೇ ಕಾಣಿಸುತ್ತಿರುತ್ತದೆ. ಅದನ್ನ ಯೋಚಿಸದೇ!! ಒಳಾರ್ಥ, ಗೂಡಾರ್ಥ, ತಮಗೆ ಬೇಕಾದಂಥ ಅರ್ಥಗಳನ್ನು ಹುಡುಕಿ ತೆಗೆದು ಪ್ರೊಜೆಕ್ಟ್ ಮಾಡಿ ಹಲ್ಲಾ ಮಚಾವೋ!! ಕಣ್ಣಮುಂದೆ ಇರುವ ನೇರಾನೇರ ಫ್ಯಾಕ್ಟ್ ಗಳನ್ನ ಗ್ರಹಿಸಲಾಗದಷ್ಟು ದಡ್ಡರೇನಲ್ಲ ನಾವು. ಜಾಣ ಕುರುಡು ಅಷ್ಟೇ.

ನಮಗ್ಯಾರಿಗೂ ನಮ್ಮ ಹೆಮ್ಮೆಯ ಟೈಟಲ್ ಗಳನ್ನು ಬಿಟ್ಟುಕೊಡುವುದಕ್ಕೆ ಮನಸ್ಸಿಲ್ಲ. ತಾವು ಸೇರಿಕೊಂಡಿರುವ ಜಾತಿವಾರು, ಬಾಷಾವಾರು, ಧರ್ಮಾವಾರು ಸರ್ಕಲ್ ಗಳಿಗೆ ಮುಜುಗರ ಮಾಡದಂತೆ.. ಹುಷಾರಾಗುವ ಅತಿ ಬುಧ್ಧಿವಂತರು. ಅಥವಾ ಕಮಿಟ್ ಆಗಿರುವ ಗುಂಪಿನ ಬಗೆಗಿನ ಸ್ವಾಮಿನಿಷ್ಠೆ.

' ಪೂರ್ಣಚಂದ್ರ ತೇಜಸ್ವಿ ' ಅವರು ಒಂದು ಕಡೆ ಹೇಳ್ತಾರೆ, ಕಳೆದ ಶತಮಾನವೆಲ್ಲಾ ರಾಜಕೀಯ ಹುಂಬತನಕ್ಕೆ ಬಲಿಯಾಗಿ ಮಹಾಯುದ್ದಗಳು ನಡೆದು ಹೋದವು . ಈಗ ಆ ಜವಾಬ್ದಾರಿಯನ್ನ ' ಧಾರ್ಮಿಕ ಮೂಲಭೂತವಾದ ' ಹೊತ್ತುಕೊಂಡಿದೆ.

ಅವರು ಹೇಳಿದ್ದು ಸತ್ಯ ಅನ್ನಿಸ್ತಿದೆ. ಧಾರ್ಮಿಕ ಮೂಲಭೂತವಾದ ಅನ್ನೋದು, ಮೊದಲನೆಯದ್ದಕ್ಕಿಂತ ಸಾವಿರ ಪಟ್ಟು ಅಪಾಯಕಾರಿ. ನಮ್ಮ ಒಂದೊಂದು ಆವೇಶಗಳೂ, ಅತಾರ್ಕಿಕ ವರ್ತನೆಗಳು, ಧರ್ಮ!! ದೇಶ!! ಭಾಷೆ!! ಬಗೆಗಿನ ಒಬ್ಸೆಷನ್ ಗಳು, ಪ್ರೈಮ್-ಟೈಮ್ ಸುದ್ದಿಗೆ ಅಂತ ಹುಟ್ಟಿಕೊಳ್ಳುವ ಒಂದೊಂದು ಕಾಂಟ್ರವರ್ಸಿಗಳು.. ಇವೆಲ್ಲವೂ ಇಗ್ನೋರ್ ಮಾಡುವಷ್ಟು ಸಿಲ್ಲಿ ಮಿಸ್ಟೀಕ್ ಗಳಂತೂ ಅಲ್ಲ. ಯಾರು ಗೆದ್ದರೂ!! ಯಾರು ಸೋತರು!! ಮನುಷ್ಯತ್ವಕ್ಕೆ ಹಾನಿಯಾಗುತ್ತಿದೆ. ಇಡೀ ವಿಶ್ವವೇ, ಯಾವೊಂದು ಜೀವಿಗಳೂ ಜೀವಿಸಲಾರದಷ್ಟು ಹದೆಗೆಡುತ್ತಿದೆ. ಬದುಕಿಗೆ ಭರವಸೆಯೂ ಇಲ್ಲದೆ, ಜೀವಕ್ಕೆ ಶುರಿಟಿಯೂ ಇಲ್ಲದೆ, ಅಬ್ಬಾಪೇರಿಗಳಾಗಿ ಅಲೆಯಬೇಕಾಗಬಹುದು. ಎಚ್ಚೆತ್ತುಕೊಳ್ಳಬೇಕಿದೆ.

ಅದು ಜಾತಿಯಾಗಲಿ, ದೇಶವಾಗಲೀ, ಭಾಷೆಯಾಗಲಿ, ನಮ್ಮ ನಮ್ಮ ಪಕ್ಷಗಳನ್ನು ನಾವು ಬಿಡುವವರಲ್ಲ. ಸಿದ್ಧಾಂತಗಳು ಮೈಗಂಟಿಕೊಂಡಿರುವ ಅಚ್ಚೆಯಂತೆ ಕೂತಿದೆ. ಅವರವರ ಮನೆಯಲ್ಲಿ, ಅವರವರು ಕೂಡಿಕೊಂಡಾಗ ಬೇಕಾದ್ದು ಆಚರಿಸಿ. ಎರಡು ಸಂಪೂರ್ಣ ಭಿನ್ನ ಸಂಸ್ಕೃತಿಗಳು ಬಯಲಲ್ಲಿ ಮುಖಾಮುಖಿ ಯಾಗುವ ಕ್ಷಣಗಳು ಬಂದಾಗ, ಒಬ್ಬರಿಗೊಬ್ಬರು ಅನುಸರಿಸಿಕೊಂಡು ಹೋಗುವ ಜಾಣ್ಮೆ ಕಲಿಯಬೇಕಿದೆ. ಅವೇ ತಾನೇ ಇದಕ್ಕೆ ಮೊದಲಿಂದಲೂ ನಡ್ಕ ಬಂದಿರದು. ಸುಮ್ನೆ ಜಿದ್ದು ಮಾಡೋದ್ರಲ್ಲಿ ಅರ್ಥವಿಲ್ಲ. ಇವತ್ತು!! ಈ ದಿನ, ನಾವು-ನೀವು ಡಿಗ್ನಿಫೈಡ್ ಆಗಿ ತಲೆ ಎತ್ತಿ ಬದ್ಕಬೇಕಿದೆ. ಅವಮಾನಿಸಬೇಡಿ.

ಬದುಕಿರುವ, ನಮ್ಮ ಹಿರಿಯರು ಮಾಡಿರುವ ತಪ್ಪುಗಳನ್ನೇ ಸಮರ್ಥಿಸಿಕೊಳ್ಳಬೇಕಾಗಿರುವ ದರ್ದು ನಮಗಿಲ್ಲ. ಹೀಗಿರುವಾಗ, ಹಿಂದೆ ಯಾವನೋ!! ಯಾರೋ ಮಾಡಿದ ತಪ್ಪುಗಳನ್ನು, ಸರಿಗಳನ್ನು ಹಿಡ್ಕಂಡು ಒಡೆದಾಡೋದರಲ್ಲಿ ಹುರುಳಿಲ್ಲ. ಕೆದಕುತ್ತಾ ಹೋದಂತೆ ಗಾಯ ಕೀವಾಗಿ, ದೊಡ್ಡದಾಗಿ .. ಕತ್ತರಿಸುವ ಮಟ್ಟಕ್ಕೆ ಹಾಳಾಗುತ್ತದೆ.

ನಮ್ಮ ಪೊಲಿಟಿಕಲ್ ವೀವ್ ಯಾವುದೇ ಇರಲಿ, ರಿಲೀಜಿಯಸ್ ವೀವ್ ಯಾವುದೇ ಇರಲಿ.. ಎಲ್ಲದಕ್ಕೂ ಒಂದು ಮಾನವೀಯತೆಯ ಸ್ಪರ್ಷ ಇರಲಿ.