ಮಲ್ಲಿಗೆ ವಾಸನೆಗೆ ಉಲ್ಟಿ ಆದದ್ದು

ನಾನಾಗ ಎಂಟು ವರ್ಷದವನಿದ್ದೆ. ಹಿಂದಿನ ದಿನ ಚಿಕ್ಕೆರೆಯಲ್ಲಿ ಗಣಪತಿ ಮುಳುಗಿಸಲು ಹೋಗಿ, ಮಳೆಯಲ್ಲಿ ನೆನೆದು ಶೀತ, ಜ್ವರ ಬಂದಿತ್ತು. ನನ್ನ ಚಿಕ್ಕಮ್ಮ, ನನ್ನನ್ನು ತುದಿಪೇಟೆ ಆಸ್ಪತ್ರೆಗೆ ಅಂತ ಕರೆದೊಯ್ದಳು.

ಆಸ್ಪತ್ರೆ ಅಂದ್ರೆ ಭಯ ಅದರಲ್ಲೂ ಸೂಜಿ ಹಿಡಿದು ನಿಲ್ಲುವ ಡಾಕ್ಟರುಗಳು ಭಯಾನಕವಾಗಿ ಕಾಣಿಸುತ್ತಿದ್ದರು. ಡಾಕ್ಟರು ನನ್ನನ್ನು ನೋಡುವ ಮೊದಲೇ 'ನನಗೆ ಸೂಜಿ ಬೇಡ ಮಾತ್ರೆ ಸಾಕು' ಅಂತ ವಿನಯವಾಗಿ ಪ್ರಾರ್ಥಿಸುತ್ತಿದ್ದೆ. ಅಪ್ಪಿ ತಪ್ಪಿ ಅವರು ಸೂಜಿ ಹಾಕಲೇ.. ಬೇಕೆಂದರೆ, ಇಬ್ಬರು ನರ್ಸುಗಳು ಮತ್ತು ಚಿಕ್ಕಮ್ಮ ನನ್ನ ಕೈಕಾಲುಗಳನ್ನು ಬಿಗಿಯಾಗಿ ಹಿಡಿದು ಮಲಗಿಸಬೇಕಾಗಿತ್ತು. 'ಉಸಿರು ಬಿಗಿ ಹಿಡ್ಕೋಬೇಡ ಸೂಜಿ, ಒಳಗೆ ಮುರಿದು ಹೋಗಿಬಿಡತ್ತೆ.' ಅಂತ ಡಾಕ್ಟರು ಎಚ್ಚರಿಕೆ ಕೊಡುವರು. ಆದರೂ ಸೂಜಿಯ ಮೊನೆ ಚರ್ಮವನ್ನು ಸ್ಪರ್ಷಿಸುವುದರೊಳಗಾಗಿ ಉಸಿರು ತಂತಾನೆ ಕಟ್ಟಿಕೊಂಡು ಬಿಡುತ್ತಿತ್ತು. ಒದ್ದಾಡುವ ಏಟಿಗೆ, ಏನಾದರೂ ಅನಾಹುತವಾಗುತ್ತಿತ್ತು. ಬಹುಷಃ ಜೀವನದಲ್ಲಿ ನೋವು ಸಹಿಸಿಕೊಳ್ಳುವ ಮೊಟ್ಟ ಮೊದಲ ಅನುಭವ ಪಡೆದದ್ದು, ಮೊದಲ ಬಾರಿಗೆ ಗಲಾಟೆ ಮಾಡದೆ ಶಾಂತವಾಗಿ ಸೂಜಿ ಚುಚ್ಚಿಸಿಕೊಂಡ ದಿನವೇ ಇರಬೇಕು.

ನಾನು ಮತ್ತು ಚಿಕ್ಕಮ್ಮ, ಆಸ್ಪತ್ರೆಯಲ್ಲಿ ಸಾಲಿನಲ್ಲಿ.. ನಿಂತಿದ್ದೆವು. ನನ್ನ ಮುಂದೆ ನಿಂತ ಹೆಂಗಸೊಂದು, ತಲೆ ತುಂಬಾ ಮಲ್ಲಿಗೆ ಹೂವು ಮುಡಿದು ಬಂದಿತ್ತು. ಕೆಲವೊಮ್ಮೆ, ಕೆಲವು ಸುಗಂಧಗಳು ಎಷ್ಟು ಹಿಂಸೆ ಕೊಡುತ್ತವೆ ಎಂಬುದನ್ನು ಪರಿಣಾಮಕಾರಿಯಾಗಿ ವಿವರಿಸುವುದು ಸಾಧ್ಯವಿಲ್ಲ. ಆ ಮಲ್ಲಿಗೆ ಹೂವಿನ ವಾಸನೆಗೆ ತಲೆ ತಿರುಗಲು ಪ್ರಾರಂಭಿಸಿತು. ಆದರೂ ಅದನ್ನು ಹೇಳಿಕೊಳ್ಳುವಂತಿಲ್ಲ. ನಮ್ಮ ಸರತಿಗಾಗಿ ಕಾಯುತ್ತಾ ನಿಂತೆ. ಆ ವಾಸನೆಯಿಂದ ತಲೆ ನೋವು ಹೆಚ್ಚುತ್ತಾ ಹೋಗಿ, ಹೊಟ್ಟೆ ತೊಳಸಲು ಪ್ರಾರಂಭಿಸಿತು. ಅರ್ಧ ಗಂಟೆಯ ಕಾದಿದ ನಂತರ, ಇನ್ನೇನು ಮಲ್ಲಿಗೆ ಮುಡಿದ ಆವಮ್ಮ ಡಾಕ್ಟರ ಬಳಿಗೆ ಹೋಗಬೇಕು ಅನ್ನುವಷ್ಟರಲ್ಲಿ, ಆವಮ್ಮನ ಮೇಲೆ ಮತ್ತು ರೂಮಿನ ತುಂಬಾ 'ಬಕ್ ಬಕ್' ಅಂತ ಕಕ್ಕಿಬಿಟ್ಟೆ. ಡಾಕ್ಟರು ಹೊರಗೆ ಬರುವಷ್ಟರಲ್ಲಿ, ನಾನು ನನ್ನ ಚಿಕ್ಕಮ್ಮ ಆಸ್ಪತ್ರೆಯಿಂದ ಓಟ ಕಿತ್ತೆವು.

ಅಲ್ಲಿ ಓಡಲು ಶುರು ಮಾಡಿದವರು, ಆಸ್ಪತ್ರೆಯ ಪೌಳಿ ದಾಟುವವರೆಗೂ ನಿಲ್ಲಲಿಲ್ಲ. ಹೊರಗೆ ಬಂದ ಮೇಲೆ, ನಗಲು ಪ್ರಾರಂಭಿಸಿದೆವು. " ನೋಡು ತಿರುಗಿ ಹೋದ್ರೆ ನಮ್ಮನ್ನ ಹಿಡ್ಕೋತಾರೆ.. ಈಗ ಸೀದಾ ಮನೆಗೆ ಹೋಗೋಣ" ಅಂದಳು. ನನಗೂ ಅದೇ ಬೇಕಿತ್ತು. ಆಸ್ಪತ್ರೆಯೇ ಇಲ್ಲದೆ ಜ್ವರ ಹೊರಟು ಹೋಯ್ತು. ಆವತ್ತಿನಿಂದ ಆ ಆಸ್ಪತ್ರೆಯ ಕಡೆಗೆ ತಲೆ ಹಾಕಲಿಲ್ಲ. ಭಯ ಎಲ್ಲಿ ಹಿಡ್ಕೊಂಡ್ ಬಿಡ್ತಾರೋ ಅಂತ. :-)

Read more posts on childhood
ಕನಸೂರು, ನನ್ನೆಲ್ಲಾ ಕೌತುಕಗಳ ಜೋಳಿಗೆ, ಬರಹಗಳಿಗೆ ದೀವಿಗೆ. ಕಥೆ, ಕವನ ಅಥವಾ ಯಕಃಶ್ಚಿತ್ ಅನ್ನಿಸುವ ಬರವಣಿಗೆಗಳಿರಬಹುದು. ತೋಚಿದ್ದು; ಗೀಚಿದ್ದು;

ಓದುಗನ ಸಹಾನುಭೂತಿ ಮತ್ತು ಪ್ರೀತಿ ಇಲ್ಲದಿದ್ದರೆ, ಬರೆದದ್ದನ್ನು ಹಂಚಿಕೊಳ್ಳೋದಕ್ಕೂ ಭಯ ಆಗತ್ತೆ. ನಿಮ್ಮ ಈ ಓದಿನ ಆಯ್ಕೆಯನ್ನು ಗೌರವಿಸುತ್ತೇನೆ. Thank you :)