ಮದುವೆಗಳು ಮಧುಮಕ್ಕಳು

ಈ ಇಪ್ಪತ್ತೈದರ ಆಜುಬಾಜಿನ ವಯಸ್ಸೇ ಹಾಗೆ.., ಓರಗೆಯವರ, ಗೆಳೆಯರ ಮದುವೆಗಳ ಸುಗ್ಗಿ. ಗೆಳೆತನದ ಮರ್ಜಿಗೆ ಸಿಕ್ಕು ಮದುವೆಗಳಿಗೆ ಹೋಗಲೇಬೇಕು ಅನ್ನುವ ಕಟ್ಟುಪಾಡುಗಳು ಇಲ್ಲದೇ ಹೋದರು, ಮದುವೆ ಅನ್ನೋ ಹೆಸರಲ್ಲಿ ಒಟ್ಟಿಗೆ ಸೇರುವ ವಿವಿಧ ಗೆಳೆಯರ ಸಲುವಾಗಿ(ಮತ್ತು ಮತ್ತೊಂದು ಕಾರಣಕ್ಕಾಗಿ ) ಮದುವೆಗಳಿಗೆ ಹೋಗಲೇಬೇಕಾಗುತ್ತದೆ. ಸ್ವಲ್ಪ ಹೊತ್ತು, ಮದುವೆ ಸುತ್ತು,

ಪೋಷಾಕು ಪಕ್ಕದ ಮನೆಯ ಗೆಳೆಯನ ಮದುವೆ. ರಾತ್ರಿಯಿಡಿ ಪ್ರಯಾಣ ಮಾಡಿ, ಬೆಳಗಾಗೆ ಊರಿಗೆ ಬಂದರೆ, ಮನೆಯಲ್ಲಿ ಯಾರೂ ಇಲ್ಲ. ಎಲ್ಲರೂ ಅದಾಗಲೇ ಮದುವೆಗೆ ಹೋಗಿದ್ದರು. ನಾನೂ ಹೊರಟು ನಿಂತು, ಬಟ್ಟೆ ಗೆ ಇಸ್ತ್ರೀ ಹಾಕಲು ಹೋದೆ. ಕಾದಿದ್ದ ಐರನ್ ಬಾಕ್ಸು, ಇಕ್ಕುತ್ತಿದ್ದಂತೆ, ಬಟ್ಟೆ ಬುಸ್ಸೆಂದು ಬಾಕ್ಸಿಗೆ ಮೆತ್ತಿಕೊಂತು.ಬಟ್ಟೆ ಮಟಾಷ್. ಕೈಗೆ ಸಿಕ್ಕ ಟಿ ಷರ್ಟು, ಪ್ಯಾಂಟು ಹಾಕಿ ಕನ್ನಡಿ ಮುಂದೆ ನಿಂತೆ. ಸೂಪರ್, ಬೊಂಬಾಟ್ ಅಂತೇನೂ ಅನ್ನಿಸದಿದ್ದರೂ...,ಬೇಜಾನ್ ಆಗೋಯ್ತು ಇವು ಅಂತಲಾದರೂ ಅನ್ನಿಸುವಂತಿತ್ತು.

ಮದುವೆ ಸಮಾರಂಭದಲ್ಲಿ ಸಂಬಂಧಿಗಳು, ಗೆಳೆಯರು ಹೀನಾಮಾನವಾಗಿ ರೇಗಿಸಿದರು. " ನಿನ್ನ ಯಾರಾದ್ರು ಇಂಜಿನಿಯರ್ ಅಂತಾರ...? ಮದುವೆಗೆ ಹಿಂಗಾ ಬರೋದು" .. ಇತ್ಯಾದಿ .. ಇನ್ನು ಮುಂತಾದವುಗಳು. ಅಯ್ಯೋ, ಕನ್ನಡಿ ಮುಂದೆ ನಿಂತಾಗ ಇವರಿಗೆ ಅನ್ನಿಸುವಂತೆ ನನಗೇಕೆ ಇವು 'ಸರಿ ಇಲ್ಲ', ಅಂತ ಅನ್ನಿಸಲೇ ಇಲ್ಲ. ಅರ್ಥ ಆಗಲಿಲ್ಲ.

ನನ್ನನ್ನು ನೋಡುತ್ತಿದ್ದಂತೆ ಅಮ್ಮ ಕರುಣಾಜನಕವಾಗಿ ಕೇಳಿದಳು  "ಏನಪ್ಪಾ ಹಿಂಗ್ ಬಂದಿದಿಯಾ...?" ನನಗೂ ತಾಳ್ಮೆ ಅಲ್ಲಾ, ತಲೆ ಕೆಟ್ಟು ಹೋಯ್ತು.

" ಮಮ್ಮಿ, ನಾನು ನಿನ್ನ ಮಗ ಅಂತ ಯಾರಿಗೂ ಹೇಳೋದಕ್ಕೆ ಹೋಗ್ ಬೇಡ... ಸಮಸ್ಯೇನೆ ಇರಲ್ಲ. "ನಿಷ್ಟುರವಾಗಿ ಹೇಳಿ ಹೊರಬಂದೆ.

ಕೆಟ್ಟದಾಗಿ ಇರಬೇಕು ಅನ್ನೋ ಜಿದ್ದು ಖಂಡಿತ ಇಲ್ಲ.  ಚೆನ್ನಾಗಿ ಕಾಣಬೇಕು ಅಂತೆಲ್ಲಾ ಇದೆ. ಆದರೂ ಕೆಲವೊಮ್ಮೆ , ಈ ಪ್ರಿಯಾರಿಟಿಗಳು, ಏನು ಅನ್ನೋದು ಅರ್ಥ ಆಗೋದಿಲ್ಲ. ಯಾರು ಯಾರನ್ನಾದರೂ ಮದ್ವೆ ಆಗಲಿ. ಆದರೆ ಆ ಮದುವೆಗೆ ಹೋದಾಗ ನಿಮ್ಮ ಪೋಷಾಕು, ಅದ್ಭುತವಾಗಿರಬೇಕು.

* ನಿಶ್ಚಿತಾರ್ಥ * ಕಾಲೇಜಿನಲ್ಲಿ ಜೊತೆಯಾಗಿ ಓದಿದ್ದ ಗೆಳೆತಿಯೊಬ್ಬಳು, ಆಲ್ ಆಫ್ ಸಡನ್ -" ಹಾಯ್" ಅಂತ ಮೆಸೇಜಿಸಿದಳು.ಬಹಳ ಅಪರೂಪಕ್ಕೆ ಬಂದ ಹಾಯ್ ಗೆ ಪ್ರತಿಯಾಗಿ ಅಂತದೇ "ಹಾಯ್" ಕಳಿಸಿದೆ. ಮುಂದಿನದ್ದು ನಿರೀಕ್ಷಿಸಿದಂತೆ " ಹೌ ಆರ್ ಯು ..?"  ಈ ಪ್ರಶ್ನೆಯನ್ನ ಅದೆಷ್ಟು ಜನ ಸಾಂಧರ್ಬಿಕವಾಗಿ ಫಿಲ್ಲರ್ ಗಳಂತೆ ಬಳಸುತ್ತಾರೆ ಮತ್ತು ಇನ್ನೆಷ್ಟು ಜನ ಮೀನ್ ಮಾಡ್ತಾರೆ ಅನ್ನೋದು ಸಣ್ಣ ಡೌಟು.

"ಐ ಯಾಮ್ ಫೈನ್" ಅನ್ನುವ ಬದಲಾಗಿ, "ಏನು ವಿಷಯ...?" ಅಂತ ಕಳಿಸಿದೆ. "ಏನಾದ್ರು ವಿಷಯ ಇರ್ಲೇಬೇಕಾ ...?" ಅಂದಳು. "ಹಂಗೆಲ್ಲಾ, ಸುಮ್ ಸುಮ್ಮನೆ... ಕಷ್ಟ ಸುಖ ಮಾತಾಡೋದಕ್ಕೆ .. ಮೆಸೇಜು ಮಾಡಲ್ವಲ್ಲ, ತಾವುಗಳು "ಅಂದೆ. "ಹಿ ಹಿ ಹಿ... ನನ್ನ ಎಂಗೇಜುಮೆಂಟು ಫಿಕ್ಸು ಆಗದೆ. ನೀನು ಬರ್ಲೇಬೇಕು..."  "ಅಯ್ಯೋ, ಕಂಗ್ರಾಜುಲೇಷನ್ನು."ನಿಶ್ಚಿತಾರ್ಥವನ್ನು, ಪ್ರಿಪರೇಟರಿ ಪರೀಕ್ಷೆ ರೀತಿ ಆಡಂಬರವಾಗಿಸುವ ಮನುಷ್ಯ ಪ್ರಯತ್ನದ ವಿರುದ್ಧ ಸಣ್ಣ ಧ್ವನಿ ಇದೆ. ಗೆಳೆಯ ರವಿಗೆ ಇದರ ವೈಜ್ನಾನಿಕ ಕಾರಣ ಏನಿರಬಹುದು ಎಂದು ಕೇಳಿದ್ದಕ್ಕೆ ಹೇಳುವನು. 

" ಮದುವೆ ೧೦೦% ಪಕ್ಕಾ ಅನ್ನೋ ಫೀಲಿಂಗು ಇಬ್ಬರ ಮನೆಯವರಿಗೂ ಬರಲಿ ಅಂತ, ಎಂಗೇಜುಮೆಂಟು ಜೋರಾಗಿ ಮಾಡ್ತಾರೆ. ಊರವರಿಗೆಲ್ಲಾ ಕರೆದು ಟಾಂ ಟಾಮಿಸಿರೋದ್ರಿಂದ..., ಹೆಚ್ಚು ಕಮ್ಮಿ ಏನೇ ಆದರೂ ಮದುವೆ ನಡೆಯಲೇಬೇಕು ಅನ್ನೋ ಎಮೋಶನಲ್ ಲಾಕಿಂಗು, " ಅಂದ.

ಸಂಭ್ರಮಕ್ಕೊಂದು ನೆಪ ಇದ್ರೆ ಸಾಕು. ಅದರಲ್ಲಿ ಇದೂ ಕೂಡ ಒಂದು ಅಂತ ಆದರೆ ಸಂತೋಷ. ಆದರೆ ಎಲ್ಲದಕ್ಕೂ ಒಂದು ಸ್ಟಾಂಡರ್ಡ್ ಸೆಟ್ ಮಾಡಿ, ಎಲ್ಲಾ ವರ್ಗದವರಿಗೂ ಅನಿವಾರ್ಯವಾಗಿ ಹೇರುವುದು ಸಮಸ್ಯೆ,.

ಗೆಳೆಯ ನಂದಿ - "ನಾವುಗಳೆಲ್ಲಾ, ಈ ಹುಡಿಗೀರಿಗೆ ಯಾವಾಗ ನೆನಪಾಗದಿದ್ರೂ...,  ಈ ಮದ್ವೆ ಫಿಕ್ಸು ಆಗ್ತಿದ್ದಂಗೆ ಅವರ ಜೀವನದಲ್ಲಿ ಬಂದು ಹೋಗಿರೋ ಎಲ್ಲಾ ಹುಡುಗ್ರು ... ನೆನಪಾಗಿ .  ಎಂಗೇಜುಮೆಂಟಿಗೂ ಬನ್ನಿ , ಮದುವೆಗೂ ಬನ್ನಿ ಅಂತಾರೆ ," ಅಂದ.  ಅವನ ಮಾತಿನಲ್ಲಿನ ಹತಾಶೆಯನ್ನು ಅಪಹಾಸ್ಯ ಮಾಡಬಹುದಾದರೂ..., ಅವನ ಕೋಟ್ಸುಗಳನ್ನು ಅಲ್ಲಗೆಳೆಯುವಂತಿರಲಿಲ್ಲ.

* ಸಾಮೂಹಿಕ ವಿವಾಹ; Being simple needs complicated explanations * ಅಮ್ಮನ ಕಾಲ್, ರಿಸೀವ್ ಮಾಡುತ್ತಿದ್ದಂತೆ ಕೇಳಿದಳು, ' ಏನೋ, .? ಅದು.. ಇಷ್ಟು ಗಲಾಟೆ ಕೇಳಿಸ್ತಾ ಇದೆ. ಎಲ್ಲೋ ಇದಿಯ..?'  'ಮನೆ ಒಳಗೇ ಇದ್ದೇನೆ ಮಮ್ಮಿ.. ನಮ್ಮ ಏರಿಯಾದಲ್ಲಿ..., ಮನುಷ್ಯರುಗಳು ಸೇರಿಕೊಂಡು ದೇವರ ಮದುವೆ ನಡೆಸುತ್ತಿರುವರು. ರೋಡು ಫುಲ್ಲು ಲೈಟು, ಮೈಕು, ಸಾಂಗುಗಳು, ಆದಕಾರಣ ಇಷ್ಟು ಗಲಾಟೆ ಕೆಳುಸ್ತಾ ಇದೆ.'

'ಏನೋ.. ಹಂಗಂದ್ರೆ ..?' ಅಂದಾಗ  'ತಿರುಪತಿನಲ್ಲಿ ಮಲಗಿದ್ದ ದೇವರನ್ನು ಹೊತ್ತು ತಂದು,
ಬಲವಂತವಾಗಿ "ಶ್ರೀನಿವಾಸ ಕಲ್ಯಾಣ" ನಡೆಸುತ್ತಿರುವರು.ಸಾಲದ್ದಕ್ಕೆ ವೈಕುಂಠದ ಬಾಗಿಲುಗಳನ್ನ, ನಮ್ಮ ಆಟದ ಮೈದಾನದಲ್ಲಿ ಮರುಸೃಷ್ಟಿ ಮಾಡಿರುವರು' ಎಂದೆ.

'ಅಯ್ಯೋ, ಮೊದಲೇ ಹೇಳಿದ್ದಿದ್ದರೆ...,  ನಾನೂ ಬರ್ತಾ ಇದ್ದೆನಲ್ಲ. ಶ್ರೀನಿವಾಸ ಕಲ್ಯಾಣ
ನೋಡುವ ಭಾಗ್ಯ ತಪ್ಪಿ ಹೋಯ್ತು.'

' ಎಂಥಾ ಭಾಗ್ಯ, ಬರತ್ತೆ ಮಮ್ಮಿ.. ಕೋಟಿಗಟ್ಟಲೇ ಖರ್ಚು ಮಾಡಿ ದೇವರಿಗೆ ಮದುವೆ ಮಾಡಿಸುವ
ಬದಲು, ಇದೇ ದುಡ್ಡಲ್ಲಿ ಸಾಮೂಹಿಕ ವಿವಾಹ ನಡೆಸಿದ್ದೇ ಆದರೆ, ಒಂದಷ್ಟು ಕುಟುಂಬಗಳಿಗೆ ತಮ್ಮ ಬಿಗ್ಗು ಬಿಗ್ಗು ಎಕಾನಮಿ ಬ್ಯಾರಿಯರ್ ಜಂಪ್ ಮಾಡೋದಕ್ಕೆ ಸಹಾಯ ಆಗ್ತಿತ್ತು ' ಎಂದಿನ ಲೋಕೋದ್ಧಾರಕ ಶೈಲಿಯಲ್ಲಿ ಹೇಳಿದೆ.

'ಒಬ್ಬ ಮನುಷ್ಯ, ತಾನು ಹುಟ್ಟಿ , ಬೆಳೆದು, ಪ್ರೌಢಾವಸ್ಥೆಗೆ ಬಂದ ಮೇಲೂ ಕೂಡ..,ಆತ
ಪುಗಸಟ್ಟೆಯಾಗಿ ಮದುವೆಯಾಗಬೇಕು ಅಂತ ಬಯಸ್ತಾನೆ ಅಂದ್ರೆ, ಯಾವ ಸೌಭಾಗ್ಯಕ್ಕೆ ಆತ ಮುಂದೆ ಜೀವಿಸಬೇಕು. ಮನ್ಷಂಗೆ ಛಲ ಇರ್ಬೇಕು. ತಾನೂ ಕೂಡ ಎಲ್ಲರ ಹಂಗೆ ಚೆನ್ನಾಗಿ ಬದುಕಬೇಕು.. ಅಂತ ಹಠ ಕಟ್ಟಿ ಬದುಕಬೇಕು. '

'ಎಲ್ಲರೂ ಒಬ್ಬರ ಮುಂದೆ ಒಬ್ಬರು ಬದುಕೋದಲ್ಲ, ಒಬ್ಬರ ಜೊತೆಗೆ ಒಬ್ಬರು ಬದುಕಬೇಕು.
ಸಿಂಪಲ್ ಆಗಿ ಇರೋದಕ್ಕೆ ಅರ್ಥಾನೆ ಇಲ್ವಾ ..?' 

' ಸಿಂಪಲ್ ಆಗಿರ್ತೇನೆ,  ಸಿಂಪಲ್ ಆಗಿರ್ತೇನೆ ಅಂತನ್ನುತ್ತಾ...,ಧಾರಿದ್ರ್ಯವನ್ನ
ಹೊತ್ತು ತಿರುಗೋದು..., ಕೈಲಾಗದವರ ಮಾತುಗಳು. ಅಂಥವರನ್ನ ಸಮಾಜ ತನ್ನ ಮುಖ್ಯವಾಹಿನಿಯಲ್ಲಿ ಬದುಕೋದಕ್ಕೆ ಬಿಡೋದಿಲ್ಲ... '

ತಲೆ ಕೆಟ್ಟು ಹೋಯ್ತು... ಅಮ್ಮನ ಕೌಂಟರ್ ಗಳೇ ಹಾಗೆ..,  ನನ್ನ ತರ್ಕದ ಮೂಲಧಾತುವನ್ನೇ ಕಸಿದುಕೊಂಡು ದಿಕ್ಕುತಪ್ಪಿಸುವಳು. ಹಾಗಂತ, ಅವಳ ಮಾತುಗಳಿಗೆ.., ಒಪ್ಪಿಗೆಯನ್ನಂತೂ ನೀಡಲಾರೆ.

ಬಾಯಿ ತೆಗೆದರೆ ಸಾಕು, ಧರ್ಮಸ್ಥಳುಕ್ಕೋಗಿ.. ಸಾಮೂಹಿಕ ವಿವಾಹ ಆಗ್ತೇನೆ ಅಂತ ಹೇಳುತ್ತಿದ್ದ ಗೆಳೆಯ ರವಿಗೆ ನಮ್ಮ ಸಂಭಾಷಣೆಯನ್ನು ಕೇಳಿಸಿದೆ.  ಅದಕ್ಕವನು  ' ಅವರು ಹೇಳೋದು ಕೂಡ ಸರೀನೆ. ಯಾಕಂದ್ರೆ ಅವರು ಎಲ್ಲರ ರೀತಿ ಯೋಚ್ನೆ ಮಾಡ್ತಿದಾರೆ.
ಆದರ್ಶವಾಗಿ ಬದುಕಿದಾಗ ಮಾತ್ರ ಅದರ ಸುಖ, ರುಚಿ, ಅರ್ಥ ಆಗೋದು. Being Simple needs complicated explanations.. ' ಅಂದ.

ರಿಸೆಪ್ಷನ್ನು ಮತ್ತು ಸ್ಟೇಜು ಸ್ಟೇಜಿನ ಮೇಲೆ... ಮರ್ಕ್ಯೂರಿ ಲೈಟಿನ ನಿಷ್ಕಾರುಣ್ಯ ನೋಟಕ್ಕೆ, ಸದಾ ತುಟಿ ಎಳೆದ ಮಂದಹಾಸವನ್ನು ಕಾಯ್ದುಕೊಂಡು, ಮುಂಬರುವ ಅತಿಥಿಗಳಿಗೆ ಕೈ ಮುಂದಕ್ಕೇ ಹಿಡಿದು ನಿಂತಿದ್ದ ನವ ವಧು ವರರ ಸ್ಥಿತಿಯನ್ನು ನೋಡಿ ನಂದಿ ಹೇಳಿದ

" ಈ ಥರ ಎಲ್ಲಾ.. ನಿಲ್ಲೋದಕ್ಕೆ ನನಗೆ ಆಗೊಲ್ಲಪ್ಪ. ನನ್ನ ಮದ್ವೆಗೆ , ಸರ್ಯಾಗಿ ಗಾಂಜಾ ಹೊಡ್ಕೊಂಡ್ ಬರ್ತೇನೆ.  ಮದ್ವೆ ಹೆಂಗ್ ಸುರುವಾಗಿ, ಹೆಂಗ್ ಮುಗಿದ್ ಹೋಯ್ತು ಅನ್ನೋದೆ ಗೊತ್ತಾಗಬಾರದು. ಅಮಲು ಇಳಿಯೋದ್ರೊಳಗೆ, ಮದ್ವೆನೂ ಮುಗಿದುಬಿಡಬೇಕು" ಅಂದ.

ಗೆಳೆಯನಿಗೆ ವಿಷ್ ಮಾಡಲು, ನಾವೂ ಅದೇ ಸ್ಟೇಜಿನ ಮೇಲೆ ಹೋದೆವು. "ನನ್ನ ಮದ್ವೆ ಗೆ, ನೀವು ಬಂದಿದ್ದು ತುಂಬಾ ಖುಷಿ ಆಯ್ತು." ಅಂದ.

"ಹೋ, ಹೌದಾ....? " ಸರ್ಕಾಸ್ಟಿಕ್ ಆಗಿ ಹೇಳಿದ ನಂದಿ. ಮೊನ್ನೆ ಮೊನ್ನೆ ವರೆಗೂ ತಮ್ಮಂತೆ ಆದರ್ಶವಾದಿಯಾಗಿದ್ದ ಗೆಳೆಯನೊಬ್ಬ, ಈಗ ಎಲ್ಲರ ರೀತಿ " ನೀವು ಬಂದದ್ದು ಸಂತೋಷ ಆಯ್ತು...." ಅಂತ ಬಯಾಟ್ ಮಾಡಿ ಹೇಳುತ್ತಿದ್ದುದು ನಂದಿಗೆ ರೇಜಿಗೆ ಹತ್ತಿಸಿತು. ತುಂಬು ಮನಸಿನ ಹಾರ್ಧಿಕ ಶುಭಾಷಯಗಳನ್ನು ಅರ್ಧ ಹೇಳುವ ಮೊದಲೇ..., ಫೋಟೋದವನು ' ಸೈಡಿಗೆ ಬನ್ನಿ ' ,' ಸೈಡಿಗೆ ಬನ್ನಿ ' ಫೋಟೋ ಹಿಡಿಬೇಕು. ಅಂದ

ಫೋಟೋ ಹಿಡಿದ ಮೇಲಾದರೂ ವಿಷ್ ಮಾಡೋಣ ಅಂತ ಹೋದ್ರೆ, ವೀಡಿಯೋದವನದ್ದು ಇನ್ನು ಮುಗಿದಿರಲಿಲ್ಲ.

''ಸ್ಟಿಲ್ ಫೋಟೋಗೆ ಸ್ಟಿಲ್ ಆಗಿ ನಿಲ್ಲೋದು ಸರಿ, ಆದರೆ ವೀಡಿಯೋಗೆ ಯಾಕೆ..? ಸ್ಟಿಲ್
ಆಗಿ ನಿಲ್ಲಬೇಕು...? "ಅಂತ ಕೇಳ್ದ ನಂದಿ. ಅಷ್ಟರಲ್ಲಿ ವೀಡಿಯೋದವನದ್ದು ಹಿಡಿದು ಆಗಿತ್ತು. ಬಾಯಲ್ಲಿ ಉಳಿದಿದ್ದ ಇನ್ನರ್ಧ ವಿಷಸ್ ಕಂಪ್ಲೀಟ್ ಮಾಡೋಣವೆಂದು ವಾಪಾಸ್ ತಿರುಗಿದರೆ, ಅಲ್ಲಿ ಮುಂದಿನ ಬ್ಯಾಚು ಬಂದುಬಿಟ್ಟಿತ್ತು.

ವರ ಗೆಳೆಯ ದೂರದಿಂದಲೇ... " ಊಟ ಮಾಡ್ಕೊಂಡೇ ಹೋಗ್ಬೇಕು ..." ಅಂದ. ಅದಕ್ಕಂತಲೇ ಬಂದವರಿಗೆ ನಗೂನು ಬಂತು. ಆದರೂ 'ಊಟ ಮಾಡ್ಕಂಡೇ ಹೋಗ್ಬೇಕು...' ಅನ್ನೋದನ್ನೇ ಎಲ್ಲರಿಗೂ ಹೇಳುತ್ತಿದ್ದವನ ಮೇಲೆ ಕರುಣೆಯೂ ಬಂತು.

ಪರಿಸಮಾಪ್ತಿ ಮದುವೆ ಮಾತುಕಥೆಗಳು ಮುಗಿದ ಮೇಲೆ ನಂದಿ ಹೇಳಿದ " ಮೊದ್ಲು ಈ ಪ್ರಪಂಚ ನೋಡಿ ನಗೋದನ್ನ ಸ್ವಲ್ಪ ಕಮ್ಮಿ ಮಾಡಬೇಕು."

" ಯಾಕೆ..? " ಅಂದರೆ

" ನಾವು ಯಾವುದನ್ನೆಲ್ಲಾ ನೋಡಿ , ಹೀಯಾಳಿಸಿ ನಕ್ಕಿರ್ತೇವೋ, ಮುಂದೆ ಅದೇ ಬದುಕು ನಮಗೆ ಸಿಕ್ಕಾಗ, ಇಡೀ ಪ್ರಪಂಚ ನಮ್ಮನ್ನ ನೋಡಿ ನಗ್ತಾ ಇದೀಯೇನೋ ಅಂತ ಒಳಗೊಳಗೆ ಫೀಲ್ ಆಗುತ್ತೆ. "

" ಮುಂದಿನದ್ದು ಮುಂದೆ ನೋಡ್ಕೋಳೋಣ, ಈಗಂತೂ ನಗೋದನ್ನ ನಿಲ್ಲಿಸಬಾರ್ದು. ಪ್ರಪಂಚಾನೆ ಸರಿ ಇಲ್ಲ ಅಂತ ನಕ್ಕುಬಿಡೋಣ " ಅಂದಾಗ ಎಲ್ಲೆಲ್ಲೋ ಎಲ್ಲಾ ಸಿನಾರಿಯೋಗಳು ಕಣ್ಮುಂದೆ ಬಂದು ನಗುವೊಂದು ರಮ್ಮನೆ ಅಪ್ಪಳಿಸಿತು.

Read more posts on fun
ಕನಸೂರು, ನನ್ನೆಲ್ಲಾ ಕೌತುಕಗಳ ಜೋಳಿಗೆ, ಬರಹಗಳಿಗೆ ದೀವಿಗೆ. ಕಥೆ, ಕವನ ಅಥವಾ ಯಕಃಶ್ಚಿತ್ ಅನ್ನಿಸುವ ಬರವಣಿಗೆಗಳಿರಬಹುದು. ತೋಚಿದ್ದು; ಗೀಚಿದ್ದು;

ಓದುಗನ ಸಹಾನುಭೂತಿ ಮತ್ತು ಪ್ರೀತಿ ಇಲ್ಲದಿದ್ದರೆ, ಬರೆದದ್ದನ್ನು ಹಂಚಿಕೊಳ್ಳೋದಕ್ಕೂ ಭಯ ಆಗತ್ತೆ. ನಿಮ್ಮ ಈ ಓದಿನ ಆಯ್ಕೆಯನ್ನು ಗೌರವಿಸುತ್ತೇನೆ. Thank you :)