ಕುಡಿಯುವ ನೀರು ತರಲು ಕೆಳಗಿನ ಮನೆಯಲ್ಲಿ ವಾಸವಾಗಿದ್ದ ಓನರ್ ಅಂಕಲ್ ಮನೆಗೆ
ಹೋಗಬೇಕಿತ್ತು. ಗೆಳೆಯ ಮಂಗಳೂರು ಜಾಕಿ 'ಹೇ ನೀನೆ ಹೋಗು ಮಾರಾಯಾ. ಅಂಕಲ್ ತುಂಬಾ
ಚೊರಿತಾರೆ. ಎಂಥ ಮಾತಾಡ್ತಾರೆ ತಿಳಿಯೋದೆ ಇಲ್ಲ. ನನಗೆ ಕಿವಿ ಕಮ್ಮಿ, ತಲೆ ದೂರ '
ಎಂದ.

ನಮ್ಮ ಓನರ್ ಅಂಕಲ್ ಮಾತಿನ ಮಳೆ ಸುರಿಯಲಾರಂಭಿಸಿದರೆ ಅದು ನಿಲ್ಲುವುದಿಲ್ಲ, ಎಂಬುದೇ
ಎಲ್ಲರಿಗೂ ಅವರ ಮೇಲಿದ್ದ ಗೌರವ ಮತ್ತು ಭಯ. ಮಕ್ಕಳು ಬಹುದೂರದ ಊರಿನಲ್ಲಿದ್ದು ಒಂಟಿಯಾಗಿ
ನಿವೃತ್ತ ಕಾಲ ಕಳೆಯುವ ಅಪ್ಪ-ಅಮ್ಮಂದಿರ ಯಾತನೆ ಇದು. ಸಮಸ್ಯೆಗಳೇ ಇಲ್ಲದೆ ಇರುವುದು ಇವರ
ಸಮಸ್ಯೆ. ಅದಕ್ಕಾಗಿಯೇ ಮದುವೆಯಾಗುವ ಮುಂಚೆ ಗಂಡು-ಹೆಣ್ಣಿನ ಜಾತಕದ ಜೊತೆಗೆ ಅವರಿಬ್ಬರ
ನಡುವೆ ಕಮ್ಯೂನಿಕೇಷನ್ ಸ್ಕಿಲ್ ಹೊಂದಿಕೆಯಾಗುತ್ತದೆಯೋ ನೋಡಬೇಕು. ಬಹುಷಃ ಈ ಬಿದ್ದು
ಹೋಗುವ ವಯಸ್ಸಿನಲ್ಲಿ ಮಾತುಕಥೆ ತುಂಬಾ ಉಪಯೋಗಕ್ಕೆ ಬರುತ್ತದೆ.

ನನ್ನದೇ ಸರದಿಯೆಂದು ನಿರ್ಧಾರವಾಗಿ ಅಂಕಲ್ ಮನೆಯ ಬಾಗಿಲು ತಟ್ಟಬೇಕಾಯಿತು. ಕುಶಲ-ಕ್ಷೇಮ
ವಿನಿಮಯಗಳನ್ನು ಮಂದಹಾಸಕ್ಕೇ ಸೀಮಿತಗೊಳಿಸಿದೆ. ಆಂಟಿ ನೀರನ್ನು ತಂದು ಕೊಟ್ಟ ತಕ್ಷಣ
ಮನೆಯಿಂದ ಹೊರ ಬೀಳಲು ಅನುವಾದೆ. ಸುಮ್ಮನೆ ಹೋಗುವುದನ್ನು ಬಿಟ್ಟು ಮಾತಿಗೆಂದು
ಕೇಳಿದೆ.

'ಏನು ಅಂಕಲ್ ತಲೆ ಗುಂಡು ಹೊಡಿಸಿಬಿಟ್ಟಿದೀರಾ. ಯಾವ ದೇವಸ್ಥಾನ. ? '

'when science stops explaining things religion comes into picture. '

ಅಂದ್ರು. ನಿಮಗೇನಾದ್ರು ಯಾಕೆ ಹೇಳಿದ್ರು ಅಂತ ಅರ್ಥ ಆಯ್ತಾ. ? ನಮ್ಮ ಅಂಕಲ್ ಹಂಗೆ
ಅಂಗಡಿ ಶೆಟ್ಟರು ಇದ್ದಹಂಗೆ. ನಾವು ಕೇಳಿದ್ದು ಇಲ್ಲಾ ಅಂದ್ರೆ ಅವರ ಹತ್ತಿರ ಇರೋದು
ಕೊಡ್ತಾರೆ.

'ಹೌದು ಅಂಕಲ್ ನೀವು ಹೇಳಿದ್ದು ಕರೆಕ್ಟು '

'ಇವೆಲ್ಲಾ ಒಂದು ನಂಬಿಕೆ ಅಷ್ಟೆ ಕೆಲವೊಂದು ವಿಷಯಗಳನ್ನ ನಾವು ಯಾಕೆ. ? ಏನು. ? ಅಂತ
ಪ್ರಶ್ನೆ ಮಾಡಬಾರದು. ಭಕ್ತಿಯಿಂದ ದೇವರಿಗೆ ಸಮರ್ಪಿಸಿಕೊಂಡುಬಿಡಬೇಕು. ' ಬಹುಶಃ ಬೇಡರ
ಕಣ್ಣಪ್ಪ ದೇವರಿಗೆ ಕಣ್ಣು ಕಿತ್ತು ಕೊಟ್ಟಾಗಲು ಇಷ್ಟು ಹೆಮ್ಮೆ ಪಟ್ಟಿರಲಿಕ್ಕಿಲ್ಲ. ಬರಿ
ಕೂದಲು ಕೊಟ್ಟಿರೋದಕ್ಕೆ ಹಿಂಗಾಡ್ತಿದಾರೆ.

'ಅಯ್ಯೋ ಕೂದಲು ತಾನೆ ಕೊಟ್ಟಿರೋದು ಬಿಡಿ ಅಂಕಲ್. ಅವೇನು ಗರಿಕೆ ಗಿಡ ಬೆಳೆದಂಗೆ
ಬೆಳೆದುಬಿಡ್ತಾವೆ. '

'ಛೇ ಛೇ ನಾವು ದೇವರಿಗೆ ಏನ್ ಕೋಟ್ವಿ ಅನ್ನೋದಕ್ಕಿಂತ, ಯಾವ ಭಾವದಲ್ಲಿ ಕೊಟ್ವಿ ಅನ್ನೋದು
ಇಂಪಾರ್ಟೆಂಟು. ತಿರುಪತಿಗೆ ಹೋದ್ರೆ ವಿತ್ ಕೂದಲು ದೇವರ ದರ್ಶನ ಮಾಡಬೇಕು ಅಂತ
ಅನ್ನಿಸೋದೆ ಇಲ್ಲ. ' ಮನೆ ಬಾಡಿಗೆ ಕೊಟ್ಟಿದಾರೆ ಅನ್ನೋ ಒಂದೇ ಕಾರಣಕ್ಕೆ ಇಷ್ಟೆಲ್ಲಾ
ಹಿಂಸೆ ಕೊಡಬಹುದಾ.

' ಅಂಕಲ್ ತಿರುಪತಿನಲ್ಲಿ ಎರಡು ಸೆಂಕೆಂಡ್-ಗಿಂತ ಜಾಸ್ತಿ ದೇವರಿಗೆ ನಮ್ಮನ್ನು ನೋಡುವ
ಭಾಗ್ಯ ಸಿಗಲ್ಲ. ಅಂತಹದ್ರಲ್ಲಿ ತಿರುಪತಿ ತಿಮ್ಮ್ಮಪ್ಪನಿಗೆ ಭಕ್ತರ ತಲೆನಲ್ಲಿ ಕೂದಲು
ಇದಿಯಾ ಗುಂಡು ಹೊಡೆಸಿದಾರ ಅಂತ ಹೆಂಗ್ ಗೊತಾಗುತ್ತೆ. '

' ya ya you are right . ಅಲ್ಲಿ ದೇವರನ್ನ ನೋಡುವುದಕ್ಕೆ ಮಾತ್ರ ಅಲ್ಲ. ಹುಂಡಿಗೆ
ಕಾಸು ಹಾಕೋದಕ್ಕು ಕ್ಯೂ ನಲ್ಲಿ ನಿಲ್ಲಬೇಕು . ಹಾ ಹಾ.. ಆದರೂ ರೆಡ್ಡಿಯಂತಹ
ರಾಜಕಾರಣಿಗಳು ದಾನವಾಗಿ ಕೊಟ್ಟಿರೋ ವಜ್ರದ ಕಿರೀಟವನ್ನ ದೇವಸ್ಥಾನದವರು ವಾಪಾಸ್ ಕೊಟ್ಟು
ಬಿಡಬೇಕು. ಏನಂತೀರ . ? ಪಾಪದ ದುಡ್ಡು ದೇವರಿಗೆ ಸೇರುವುದಿಲ್ಲ' ಸಖತ್ತಾಗಿ ಟ್ರಾಪ್
ಆದೆ. ಕರಪ್ಷನ್ನು ಅಣ್ಣ ಹಜಾರೆ, ಆದ್ಯಾತ್ಮ ಎಲ್ಲೆಲ್ಲೋ ಸುತ್ತಿಸಿ ಬಿಡುವರು. ನಾನೂ
ಮಾತಿಗೆ ನಿಂತರೆ ದಿನವಿಡೀ ಅವರನ್ನು ಮಾತನಾಡಿಸಿ ಬಿಡಬಲ್ಲೆ.

'ಪಾಪದ ದುಡ್ಡನ್ನೆಲ್ಲಾ ಭಕ್ತಾದಿಗಳಿಗೆ ಹಿಂದಿರುಗಿಸುತ್ತಾ ಹೋದರೆ, ದೇವಸ್ಥಾನದ
ಟ್ರೆಷರ್ರು ಖಾಲಿ ಆಗಿಬಿಡುತ್ತೆ ಅಂಕಲ್ . ಅದೂ ಅಲ್ಲದೆ ಶ್ರೀನಿವಾಸ ಕಲ್ಯಾಣಕ್ಕೆ
ಕುಬೇರನ ಹತ್ತಿರ ಮಾಡಿರೊ ಸಾಲ ತೀರೋದಾದ್ರು ಹೆಂಗೆ. ?'

'ಹಾ ಹಾ Good Joke. But reality ಚೇತನ್. ಬರಿ ರಾಜಕಾರಿಣಗಳು ಮಾತ್ರ ಅಲ್ಲ.
ದೇವರುಗಳು ಕೂಡ ನಾವು ಬದುಕುವ ರೀತಿಯನ್ನ, ನಂಬಿಕೆಗಳನ್ನ ಫುಲ್ಲು complicated
ಮಾಡಿಬಿಟ್ಟಿದಾವೆ.' ನಮ್ಮ ಅಂಕಲ್ ಇರೋದೆ ಹಾಗೆ ಸ್ವಲ್ಪ ಹೊತ್ತು ದೇವರು-ಮೂಲಭೂತ
ನಂಬಿಕೆಗಳ ಪರವಾಗಿ ಇರ್ತಾರೆ ಮಾತನಾಡುತ್ತಾ ಕ್ರಾಂತಿಕಾರಿಗಳಾಗಿ ಬದಲಾಗಿ ಬಿಡುತ್ತಾರೆ.

'complicate ಮಾಡಿರೋದು ದೇವರುಗಳಲ್ಲ ಅಂಕಲ್ ದೇವರ ರಾಯಭಾರಿಗಳಂತಿರುವ ಪೌರೋಹಿತ್ಯ
ನಡೆಸೋರು. ಇದುವರೆಗೂ ಯಾವ ಅಂಧನಂಬಿಕೆಗಳು ಬಲವಾದ ಹೋರಾಟ ಇಲ್ಲದೆ ತಣ್ಣಗಾಗಿವೆ ಹೇಳಿ. ?
ಕೈಯಲ್ಲಿ ಪವರ್ ಇದ್ರೆ, ತಾವು ಮಾಡ್ತಿರೋದು ದೌರ್ಜನ್ಯ ಅನ್ನೋ ಅರಿವು ಇದ್ದರೂ. , ನಡೆಯೋ
ಅಷ್ಟು ದಿನ ನಡೀಲಿ ಅಂತ ಸುಮ್ಮನಿರ್ತಾರೆ. ' ಈ ಬಾರಿ ಶೆಟ್ಟರು ನನ್ನ ಮೈಮೇಲೆ ಬಂದವನಂತೆ
ಮಾತನಾಡಿದೆ.

'ಏನೋಂದ್ರೆ ಪಾಪ ಆ ಹುಡುಗನಿಗೆ ಏನೋ ಕೆಲಸ ಇತ್ತು ಕಾಣಿಸತ್ತೆ. ಹೋಗಲಿ ಬಿಡಿ' ಎಂದರು.
ಕೊನೆಗೂ ಆಂಟಿ ನನ್ನ ಮೇಲೆ ಕರುಣೆ ತೋರಿಸಿದರು. 'ಅಯ್ಯೋ ಪರವಾಗಿಲ್ಲ ಬಿಡಿ ಆಂಟಿ. ನನಗೂ
ಮಾತನಾಡೋದಕ್ಕೆ ಖುಷಿಯಾಗುತ್ತೆ. ಆದರೆ ಮೇಲೆ ಫ್ರೆಂಡ್ ಗಳು ನೀರು ತರೋದನ್ನೇ ಕಾಯ್ತಾ
ಇದಾರೆ. ' ಅಂದೆ. ಬಿಳ್ಕೊಟ್ಟರು. ಮಾತು
ಆಗಿನ್ನೂ ಶುರುವಾಗಿತ್ತು ಅಷ್ಟೆ ನಮ್ಮ ಅಂಕಲ್ಲು ಶ್ರೀರಾಮ ಮರೆಯಲ್ಲಿ ನಿಂತುಕೊಂಡು
ವಾಲಿಗೆ ಬಾಣ ಹೂಡಿ ಕೊಂದಿದ್ದು ತಪ್ಪಲ್ಲವಾ ಅನ್ನೋ ಪ್ರಶ್ನೆಯನ್ನ ಈ ಬಾರಿ ಯಾಕೋ
ಕೇಳಲಿಲ್ಲ.