ಸ್ನೇಹಿತನ ಮದುವೆಗೆಂದು ಮೈಸೂರಿಗೆ ಹೋದವರು,
ಒಂದು ಗಿಫ್ಟನ್ನು ಕೊಡುವ ಕನಿಷ್ಟ ಸೌಜನ್ಯವನ್ನು ತೋರದಿದ್ದರೂ,
ರಿಸಪ್ಷನ್ನಿನಲ್ಲಿ ಸ್ಟೇಜಿನ ಮೇಲೆ ನಮ್ಮಗಳ ದಂತಪಂಕ್ತಿಗಳೆಲ್ಲವೂ ತೋರುವಂತೆ
ಫೋಟೋ ಮತ್ತು ವೀಡಿಯೋದವರಿಗೆ ಪೋಸು ಕೊಟ್ಟು,
ಮದುವೆಯ ಮಹದಡುಗೆಯನ್ನು ಮನಸಾರೆ  ಉಂಡು,
ಬೆಟ್ಟ-ಗಿಟ್ಟ ಸುತ್ತಿಕೊಂಡು,
ವಾಪಾಸು ಬೆಂಗಳೂರಿನ ಕಡೆಗೆ ಹೊರಟಾಗ ರಾತ್ರಿ ೯ ಘಂಟೆ.
ಜೊತೆಯಲ್ಲಿ ಅಭಿ, ಶೈಲು ಮತ್ತು ಕೀರ್ತನ.

ಮಂಡ್ಯ ದಾಟಿದ ಮೇಲೆ, ಸೂಸು ಗೆಂದು  ಹೈವೇ.. ಬದಿಯಲ್ಲಿ ಬೈಕುಗಳನು ನಿಲ್ಲಿಸಿ,
ಗಾಳಿಗೆ ಹಾರಿಸುವಾಗ..,ಮರೆತದ್ದು ನೆನಪಿಸಿಕೊಂಡವನಂತೆ, ಹೊಟ್ಟೆ ಸವರಿಕೊಳ್ಳುತ್ತಾ..
"ಯಾಕೋ.. ಹೊಟ್ಟೆ ಹಾಳಾಗಿದೆ ಮಗ" ಅಂತಂದ ಅಭಿ

'ಹೊಟ್ಟೆ ಹಾಳಾಗಿದೆ' ಎಂಬ ಒಕ್ಕಣೆಯು, ಬೇಡದ ಹೊತ್ತಲ್ಲಿ,
ಬರಬರಾದ್ದು ಬರುವಂತಾದಾಗ ಮೂಡುವ ನಾಯ್ಸು.

ಮುಂದೆ ಯಾವುದಾದರೂ ಸಾರ್ವಜನಿಕ ಶೌಚಾಲಯಕ್ಕೆ ಹೋಗುವಿಯಂತೆ ಎಂದಾಗ,
' CCD ಗೆ ಹೋಗೋಣ '  ಎಂದುತ್ತರಿಸಿದ ಅಭಿ.
CCD ಅಂದರೆ, ಯಾವುದೋ ಹೈಟೆಕ್ ಶೌಚಾಲಯಕ್ಕಿರುವ ಅಬ್ರಿವೇಷನ್ನೋ, ಏನೋ ಅಂದುಕೊಂಡು
' ವಾಟ್ ಈಸ್ CCD ..? ' ಎಂದು ಕೇಳಿದ್ದಕ್ಕೆ,
' ಅಷ್ಟು ಗೊತ್ತಿಲ್ಲವಾ...? CCD ಅಂದರೆ ಕೆಫೆ ಕಾಫಿ ಡೆ ' ಅಂದ.

' ಹಂಗಾದ್ರೆ ಅದು KKD ಎಂದಾಗಬೇಕಿತ್ತಲ್ಲವೇ..? ' ಎನ್ನುತ್ತಾ  ತಲೆ
ಕೆರೆದುಕೊಳ್ಳುವಾಗ,  ಹೈವೇ ನಲ್ಲಿ ಇದ್ದ ದೊಡ್ಡದಾದ ಫ್ಲೆಕ್ಸಿನಲ್ಲಿ ... ಸಮೋಸ ಮತ್ತು
ಕಾಫಿ ಚಿತ್ರದ ಜೊತೆಗೆ
'ಕೋಂಬೊ ೪೯ ರೂಪಾಯಿಗಳು'  ಎಂಬುದಾಗಿ ಬರೆದಿದ್ದುದು,
ಕಾಫಿ ಡೇ ಕಡೆಗೆ ಹೋಗುವ ದಿಢೀರ್ ನಿರ್ಧಾರವನ್ನು, ಮತ್ತಷ್ಟು ಹಿತಕರವೆನ್ನಿಸಿತು.

ಕಾಫಿ ಡೇ ಒಳ್ಗೆ ಹೋಗುತ್ತಿದ್ದಂತೆ,
ಅಭಿ 'ವಾಷ್ ರೂಮ್' ಯಾನೆ 'ಶೌಚಾಲಯ' ದ ಕಡೆಗೆ ನಡೆದ.
ಆಕಳಿಕೆ, ತೂಕಡಿಕೆಯಂತೆ ಇದೂ ಕೂಡ ವೈರಲ್ ಆಗಿದ್ದರಿಂದಲೋ ಏನೋ...
ಶೈಲು ಕೂಡ ಅಭಿ ನಡೆದು ಹೋದ ದಾರಿಯನ್ನೇ ಹಿಡಿದ.
ನಾನು ಮತ್ತು ಕೀರ್ತನ ಮೆತ್ತನೆಯ ದೊಡ್ಡ ಹಾಸಿನ ಮೇಲೆ, ಸಣ್ಣ ದೇಹವನ್ನು ಆದಷ್ಟು ಚೆಲ್ಲಿ
ಕುಳಿತೆವು.

ಹೋದ ಮಿತ್ರರು ಹೋದ ರೀತಿಯಲ್ಲೇ ವಾಪಾಸು ಬಂದರು.  
ಕೆಳಗಿನಿಂದ ನೀರನ್ನು ಪಂಪು ಮಾಡುವ ಸಲುವಾಗಿ, ಟಾಯ್ಲೆಟ್ಟಿಗೆ ಹದಿನೈದು ನಿಮಿಷಗಳ
ಬ್ರೇಕು ನೀಡಿ, ಅದರ ಕಾವಲಿಗೆ ಒಬ್ಬನನ್ನು ನಿಲ್ಲಿಸಿದ್ದರಂತೆ. ಪಾಪ ಮೂತ್ರದ ಮನೆಯ
ಬಾಗಿಲು ಬಡಿದು ಬಂದ ಮೇಲೆ, ಒತ್ತಡ ಮತ್ತು ತೀವ್ರತೆ ಹೆಚ್ಚಾಗಿ ... ಕುಂತಲ್ಲಿಯೇ
ತುಣುಪುಣು ಕುಣಿಯುತಿದ್ದರು.

ಇಂತಹಾ ಸು-ಸಂದರ್ಭದಲ್ಲಿ ನಾನು ಓದಿದ್ದ 'Killer Brands' ಎಂಬ ಪುಸ್ತಕದಲ್ಲಿ 
'ಕಾಫಿ-ಡೆ' ಕುರಿತಾಗಿ ಪ್ರಸ್ತಾಪಿಸಿದ್ದ ಕೆಲವು ವಿಚಾರಗಳನ್ನು ಹೇಳಿಕೊಳ್ಳುವ
ಮನಸ್ಸಾಯಿತು.
" A lot can happen over coffee " ಅನ್ನೋದು ' ಕಾಫಿ ಡೇ' ಯ ಟ್ಯಾಗ್ ಲೈನು.
ಈ ಟ್ಯಾಗ್ ಲೈನ್ ಮತ್ತು ಅದರ ಹಿಂದಿರುವ ಸೃಜನಾತ್ಮಕ ಬ್ರಾಂಡಿಗ್ ಕಲ್ಪನೆ
ಅಪೂರ್ವವಾದದ್ದು.
ಅಂದರೆ ಇಲ್ಲಿ ಕಾಫಿ ಅನ್ನೋದು ನೆಪ ಮಾತ್ರ. ಅದು ತನ್ನದೇ ಆದ ಕಲ್ಚರು
ಸೃಷ್ಟಿಸಿಕೊಂಡಿದೆ.
 ಡ್ರಿಂಕಿಂಗು ಮತ್ತು ಈಟಿಂಗು ಜೊತೆಗೆ consumer ಗಳ ಪಾಸಿಬಿಲಿಟಿಗಳನ್ನ ಮತ್ತೊಂದು
ಲೆವೆಲ್ ಗೆ   ಕೊಂಡೊಯ್ದ ಶ್ರೇಯ " A lot can happen over coffee " ಗೆ ...
ಸಲ್ಲುತ್ತದೆ.

ಇಂತದ್ದನ್ನೆಲ್ಲಾ ಆ ಬುಕ್ಕಲ್ಲಿ ಬರೆದಿದ್ರು .

" ಕಾಫಿ ಡೇ ..  created a new set of consumers...you know."
ಎಂದು ಹೇಳುತ್ತಾ, ನನ್ನ ಸೆನ್ಸಾಫ್ ಪ್ರಸೆನ್ಸಿಗೆ, ಶ್ಲಾಘನೆಯನ್ನು ನಿರೀಕ್ಷಿಸುತ್ತಾ
..   ಅವರತ್ತ ನೋಡಿದೆ.
ಕೀರ್ತನ  -
"ಯಾ ಯಾ It has created a new set of consumers"
ಎಂದು ವಿಡಂಬನಾತ್ಮಕವಾಗಿ ನಗುತ್ತಾ "ಹಾಟ್ ಸೀಟ್" ಮೇಲೆ ಕುಳಿತಿದ್ದ ಅಭಿ ಶೈಲುವಿನ
ಕಡೆಗೆ ಬೊಟ್ಟು ಮಾಡಿ ತೋರಿಸಿದ.

ಅವರು ಅವನ ಜೋಕಿಗೆ ನಗುವ ಸ್ಥಿತಿಯಲ್ಲೂ ಇರಲಿಲ್ಲ ಮತ್ತು ನನ್ನ ಕಥೆಗೆ ತಲೆದೂಗುವ
ಸ್ಥಿತಿಯಲ್ಲೂ ಇರಲಿಲ್ಲ.


' ಕಿಲ್ಲರ್ ಬ್ರಾಂಡ್'  ಎಂಬ ಮ್ಯಾನೇಜ್-ಮೆಂಟ್ ಕುರಿತಾದ ಇಂಗ್ಲೀಷು ಪುಸ್ತಕವನ್ನು
ಓದಿದುದರ ಹಿಂದೆಯೂ
 ಒಂದು ದುರಂತ ಇತಿಹಾಸವಿತ್ತು. 
 
ಡಿಗ್ರಿ ಮುಗಿದು ಸುಮಾರು ಎರಡು ವರುಷಗಳ ತರುವಾಯ,
ಮಿತ್ರರೆಲ್ಲಾ ಒಂದು ಕಡೆ ಬೃಹತ್ ಸಭೆ ಸೇರಿದ್ದೆವು.
ಸಭೆಯು, ಗೆಳೆಯ ಅಭಿ ಸಾರಥ್ಯದಲ್ಲಿ ನಡೆಯುತ್ತಿತ್ತು.

" ನಾವುಗಳು ಜೀವನದಲ್ಲಿ ಏನಾದರು ಮಾಡಲೇಬೇಕು. " ಅಂದಾಗ
ಕೋರಸ್ ನಲ್ಲಿ " ಹೌದು ಹೌದು ಮಾಡಲೇಬೇಕು."

" ನಮ್ಮ ಹತ್ರ ಇರೋ  ಟ್ಯಾಲೆಂಟನ್ನ ನಾವು ತೋರಿಸಲೇ ಬೇಕು." ಅಂದಾಗ
ಅದೇ ಕೋರಸ್ ನಲ್ಲಿ  "ಹೌದು ಹೌದು ಟ್ಯಾಲೆಂಟನ್ನ ತೋರಿಸಲೇಬೇಕು.."

"ಸೋ...  ಈಗ ಎಲ್ಲಿಂದ ಶುರು ಮಾಡಬೇಕು ...? " ಅಂದಾಗ...

"ಹೌದಲ್ವಾ..? ಎಲ್ಲಿಂದ ಶುರು ಮಾಡಬೇಕು..? "

ಮುಂದೆ ಅಭಿ ತನ್ನ ತಲೆಯೊಳಗಿದ್ದ   'ಕಿಲ್ಲರ್ ಆಪ್' ಕಲ್ಪನೆಯನ್ನು ಹೊರಹಾಕಿದ.

" ನಾವು ಫೇಸ್-ಬುಕ್ ತರದ್ದು ಒಂದು ಮಾಡಬೇಕು.
ಫೇಸ್ಬುಕ್ ತರದ್ದು ಅಂದ್ರೆ ಮತ್ತೊಂದು 'ಸೋಷಿಯಲ್ ನೆಟ್-ವರ್ಕಿಂಗ್' ಸೈಟ್ ಅಲ್ಲ.
ಫೇಸ್ಬುಕ್ ತರದ್ದು ಒಂದು "ಕಿಲ್ಲರ್ ಅಪ್ಲಿಕೇಷನ್" ಮಾಡಬೇಕು.
ಆ ಥರಾನೆ ಮಾರ್ಕೇಟ್ ನ ಸೀಳಿಕೊಂಡು ಹೋಗಿ ಸೆನ್ಸೇಷನ್ ಕ್ರಿಯೇಟ್ ಮಾಡಬೇಕು.
'ರೇಡಿಯೋ' ಹೆಸರಿಗೆ ಸಮಾನಾಂತರವಾಗಿ ಫಿಲಿಪ್ಸ್ ಪದವನ್ನ ಬಳಸ್ತಿದ್ರಂತೆ.
ವಾಕ್-ಮ್ಯಾನ್ ಅನ್ನೋದು ಸೋನಿ ಕಂಪನಿಯ ಒಂದು ಪ್ರಾಡಕ್ಟಿನ ಹೆಸರಾಗಿ ಉಳಿದಿಲ್ಲ,
' ಸ್ಕೈಪ್'  ಇರಬಹುದು,  ಟ್ವಿಟರ್ ಇರಬಹುದು ಅಥವಾ  ಮತ್ತೇನೆ ಇರಬಹುದು..,
 ' ಔಟ್ ಆಫ್ ದಿ ಬಾಕ್ಸ್' ಯೋಚಿಸಿದಾಗ ಮಾತ್ರ ಸೃಷ್ಟಿಯಾದಂತವು. "

" ಯಾವುದೇ ಒಂದು ಪ್ರಾಡಕ್ಟಿಗೆ  ಅಥವಾ ಸಾಫ್ಟ್-ವೇರ್ ಅಪ್ಲಿಕೇಷನ್ ಗೆ...
"ಕಿಲ್ಲರ್ ಆಪ್" ಅನ್ನೋ ಟೈಟಲ್ ಬರಬೇಕು ಅಂದರೆ ...
ಆ - ಅದಕ್ಕೆ ಏನೇನೆಲ್ಲಾ ಗುಣವಿಶೇಷಣಗಳು ಇರಬೇಕಾಗುತ್ತದೆ ..? "
ಎಂದು ಹೇಳಿ ಒಂದು ಕ್ಷಣ ಸುಮ್ಮನಾದ..
 ಇನ್ನು ತುಂಬಾನೆ ಹೇಳಿ ಕೊನೆಗೆ ಕೊಂಚ ಪಾಸ್ ಕೊಟ್ಟ ಮೇಲೆಯೇ....
ಅವನ ಕೊನೆಯ ಮಾತು ಪ್ರಶ್ನೆ  ಎಂಬುದಾಗಿಯೂ ಮತ್ತು ಅದಕ್ಕೆ ಅವನು ಉತ್ತರವನ್ನು
ನಿರೀಕ್ಷಿಸುತ್ತಿದ್ದಾನೆ ಎಂಬುದಾಗಿಯೂ ಅರ್ಥವಾಗಿದ್ದು.
 
ಸೋ ಐಡಿಯಾ ಹೆಂಗಿರಬೇಕು ಅಂದರೆ ...
ಯುನಿಕ್ ಆಗಿರಬೇಕು,  ಚೆನ್ನಾಗಿರಬೇಕು.

ಡ್ಯಾಷ್...  ಡ್ಯಾಷ್...  ಡ್ಯಾಷ್...
ಮಿಷನ್ ಸ್ಟಾರ್ಟೆಡ್

' ಅದು ಹೆಂಗೆ ಕೆಲವು ಐಡಿಯಾಗಳು ಕಿಲ್ಲರ್-ಆಪ್ ಗಳಾಗಿ ಬದಲಾಗಿ ಲೋಕವನ್ನೇ
ನಿಬ್ಬೆರಗಾಗಿಸುತ್ತವೆ ಮತ್ತು
ಇನ್ನು ಕೆಲವು ... ಗೆಲ್ಲುವ  ಚೈತನ್ಯವಿದ್ದರೂ , ಸತತ ಪ್ರಯತ್ನಗಳು  ಇದ್ದಾಗಿಯೂ ಕೂಡ

"ಕಿಲ್ಲರ್ ಆಪ್" ಆಗುವಲ್ಲಿ ವಿಫಲಗೊಂಡು ..
ಮಾರ್ಕೆಟ್ ರೇಸ್ ನಲ್ಲಿ ಹಿಂದುಳಿದು,
ಕೊನೆಗೆ .. ಯಾರ ಗಮನಕ್ಕೂ ಬಾರದ ರೀತಿಯಲ್ಲಿ ಅಂತರ್ಧಾನವಾಗುತ್ತವೆ... '
ಎಂಬುದಾಗಿ ಎಲ್ಲರೂ ತಮ್ಮ ತಮ್ಮ ಜೀವನಾನುಭವಕ್ಕೆ  ನಿಲುಕಿದ ಘಟನೆಗಳು,
ಸನ್ನಿವೇಶಗಳನ್ನು ಆಧಾರವಾಗಿಟ್ಟುಕೊಂಡು...,  ಅದ್ಭುತ ಅಭಿಪ್ರಾಯಗಳ  ಧೀರ್ಘ ವರದಿಯನ್ನು
ಸಿದ್ಧಪಡಿಸಿದರು.

ಅಂತೂ ಕೊನೆಗೆ  ' ಏನೋ  ಒಂದು ಮಾಡಬೇಕು ' ಅನ್ನೋ ನಿರ್ಧಾರಕ್ಕೆ ಬರಲಾಯಿತು.
ಅದು ' ಕಿಲ್ಲರ್ ಆಪ್ ' ಆಗುತ್ತೆ ಅನ್ನೋ ಧೈರ್ಯದಲ್ಲಿ ,
ಮತ್ತು ಅದನ್ನು  ' ಕಿಲ್ಲರ್ ಆಪ್ ' ಮಾಡಲೇಬೇಕು ಎನ್ನುವ ಧೃಡ ಸಂಕಲ್ಪದಿಂದಲಿ,
 ಖಾಸಗಿಯಾಗಿ ಮತ್ತು ಸಾಮೂಹಿಕವಾಗಿ ಕೆಲ್ಸಗಳನ್ನೂ ಶುರುಮಾಡಿದೆವು.
 
ನಾಗ-ದೋಷ, ಖುಜ-ದೋಷದ ತರ ಯಾರಿಗೂ ಸ್ತ್ರೀ-ದೋಷ,  ಇರದಿದ್ದರಿಂದ
ತಲೆ ಮೊಸ್ರು ಮಾಡ್ಕೋಳೋಕು ಲೈಫಲ್ಲಿ ಹೊಸದಾಗಿ ಒಂದು ' ಛಾನ್ಸು' ಸಿಕ್ಕಿತ್ತು.
ಹೊಸ ಹೊಸ ತಂತ್ರಜ್ನಾನಗಳಿಗೆ, ಹೊಸ ಹೊಸ ಅವಕಾಶಗಳಿಗೆ ಮುಕ್ತವಾಗಿ ತೆರೆದುಕೊಂಡೆವು. 
 ಕಲ್ಪನೆಗಳು ಕನಸುಗಳು ಐಡಿಯಾಗಳು ಲಂಗುಲಗಾಮಿಲ್ಲದೇ ತನ್ನಿಷ್ಟ ಬಂದ
ದಿಕ್ಕಿನೆಡೆಗೆ ಓಡುತ್ತಿದ್ದವು.
ಪ್ರೊಜೆಕ್ಟರ್ರೆ ಇಲ್ಲದೆ, ಖಾಲಿ ಗೋಡೆ ಮೇಲೆ ಕಲರ್ ಕಲರ್ ಕನಸುಗಳು ಡಾಲರ್
ಲೆಕ್ಕದಲ್ಲಿ.. ಕಾಣುತ್ತಿದ್ದವು. 
' ಐಡಿಯಾಗಳು ತುಂಬಾನೆ  ಹಂಚಿ ಹೋದರೆ, ಅವುಗಳು ಡೈಲೂಟ್ ಆಗ್ತವೆ.
ಆದಕಾರಣ .. ನಮ್ಮ 'ಪ್ರಾಜೆಕ್ಟ್  XYZ' ಒಂದು ಹಂತಕ್ಕೆ ಬರುವವರೆಗಾದರೂ ..
ಮೂರನೆಯವರೊಂದಿಗೆ ಹಂಚಿಕೊಳ್ಳಬಾರದೆಂದೂ, ಇಂಥದ್ದೊಂದು ಕಾನ್ಫಿಡೆನ್ಷಿಯಾಲಿಟಿಯನ್ನು
ಮೇಂಟೇನ್ ಮಾಡಬೇಕೆಂದು'
 ಕರಾರು ವಿಧಿಸಿದಾಗ ..
' ಅಬ್ಬಾ ನಾವು ಎಂಥದೋ ಭಯಂಕರವಾದುದನ್ನೇ ಮಾಡುತ್ತಿರಬೇಕು....
ಎಂಬುದಾದ 'ಭ್ರಮೆ'ಯೊಂದು ಆವರಿಸಿಕೊಂಡು ಒಳಗೊಳಗೆ ಕಚಗುಳಿ ಇಟ್ಟಂತಾಗುತ್ತಿತ್ತು.
( ದುರಂತ ಅಂದ್ರೆ ಈ ಥರಾನೆ ಭಯಂಕರವಾದುದನ್ನು ತಲೆಯಲ್ಲಿ ಇಟ್ಟುಕೊಂಡು,
ಶತಾಯಗತಾಯ ಪ್ರಯತ್ನಿಸುತ್ತಿದ್ದ ವಿವಿಧ ಗೆಳೆಯರ ಬಳಗಗಳು ಆ ಆನಂತರ ಬೆಳಕಿಗೆ
ಬಂದವಾದರೂ...
ಅವರೂ ನಮ್ಮಂತೆ ಕಾನ್ಫಿಡೆನ್ಷಿಯಾಲಿಟಿಯ ಹೆಸರಲ್ಲಿ, ಕೆಲಸ ಹೊಗೆ ಹಾಕುಸ್ಕೋಳೋವರ್ಗು,
 ತಮ್ಮ ಪ್ರಯತ್ನಗಳ  ಬಗ್ಗೆ  ಹೊರಗಡೆ ಉಸಿರೆತ್ತಿರಲಿಲ್ಲ.)

ನಮ್ಮ ಸಭೆಯಲ್ಲಿ ಲಾಭದ ಹಂಚಿಕೆಯ ಕುರಿತಾಗಿಯೂ ಚರ್ಚೆಗಳು ನಡೆಯುತ್ತಿದ್ದವು.
' ಎಲ್ಲದರಲ್ಲೂ ಕ್ಲಾರಿಟಿ ಇರಬೇಕು . ದೊಡ್ಡ ಮೊತ್ತದ ಹಣ ಹರಿದುಬರುವಾಗ
ಹಂಚಿಕೊಳ್ಳುವಲ್ಲಿ ಸಮಸ್ಯೆ ಯಾಗಬಾರದು '
ಎಂಬ ವಾದಗಳು ಸೀಮಂತಕ್ಕೆ ಹೋದವರು,
ಹುಟ್ಟೋ ಮಗುವಿಗೆ ಸ್ವೆಟರ್ ಗಿಫ್ಟು ಕೊಡಲು ಅಂಗಡಿಯವನ ಜೊತೆ ನಿಂತು ಬಾರ್ಗೇನು
ಮಾಡುತ್ತಿರುವಂತೆ ಕಂಡರೂ ..,
 ಈಗ ಅಂದುಕೊಂಡಷ್ಟು ಕಾಮೆಡಿಯಾಗಿ, ಆಗ ಅನಿಸುತ್ತಿರಲಿಲ್ಲ.

ಗೆಳೆಯ ಜೋಬಿಯಂತೂ... ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ,
' ತನಗೆ ಯಾವುದೇ ವಿಧವಾದ ಲಾಭವು ಬೇಡವೆಂದೂ,
ಕೇವಲ ಹವ್ಯಾಸಕ್ಕೆಂದು ನಮ್ಮ ಈ ಮಹತ್ಕಾರ್ಯದಲ್ಲಿ,
ಸಹಭಾಗಿಯಾಗಿ, ಸಹಕರಿಸುವುದಾಗಿಯೂ '  ಹೇಳಿ...  ನಮ್ಮನ್ನೆಲ್ಲಾ ಬೆಚ್ಚಿಬೀಳಿಸಿದ.
ಹಹಹಾ...  ಒಂದು ಷೇರ್ ಕಮ್ಮಿ ಆದಂಗಾಯ್ತು.

ನಮ್ಮಗಳ ಈ 'ಬಯಲು ನಾಟಕ' ಬಹಳ ದಿನಗಳು ನಡೆಯಲಿಲ್ಲ.
ಜೀವನವು ತನ್ನ ಕಬಂದ ಬಾಹುಗಳಿಂದ ನಮ್ಮನ್ನೆಲ್ಲಾ ಅಪ್ಪಿಕೊಂಡು,
ತನ್ನಿಷ್ಟ ಬಂದ ದಿಕ್ಕಿಗೆ ಎತ್ತಿ ಎಸೆಯಿತು.
ಡಿಚ್ಚುಡು ಡಂಪುಡು ಕ್ವಿಟ್ಟುಡು


ಶ್ರೀ ಶೈಲು ಮತ್ತು ಶ್ರೀ ಅಭಿ ..
ತಮ್ಮ ಇತಿಮಿತಿಗೆ ಮೀರಿದ್ದ ಅನೈಚ್ಚಿಕ ಸ್ನಾಯುಗಳ ಅಣತಿಯನ್ನು ಪಾಲಿಸಿದ ನಂತರ ನಮ್ಮನ್ನು
ಕೂಡಿಕೊಂಡರು.

ಬಿಲ್ಲಿಂಗ್ ಮಾಡಲು ಎದ್ದು ಹೋಗಿ, ೪೯ ರೂಪಾಯಿಗೆ ಸಿಗುವ ' ಸಮೋಸ +  ಕಾಫಿ '  ಯ combo
ಕೇಳಿದ್ದಕ್ಕೆ,
' ಅದೆಲ್ಲಾ ಇಲ್ಲ ಕ್ಯಾಪಚಿನೋ starts from ೮೦ ರುಪೀಸ್ ' ಅಂದ ಅಂಗಡಿಯವನು.
' ಸುಮ್ಮನೆ ಸುಮ್ಮನೆ, ಹೈವೇಗಳಲ್ಲಿ ಅಷ್ಟು ದೊಡ್ಡ ಬೋರ್ಡು ಹಾಕಿ
ಕಮ್ಮಿ ರೇಟಿಂದು ತೋರಿಸಿ, ಒಳಗೆ ಬಂದ ಮೇಲೆ ಅದಿಲ್ಲ, ಇನ್ನೊಂದಿದೆ  ಅನ್ನೋದು ಎಷ್ಟು
ನ್ಯಾಯ..? '
ಎಂಬುದಾಗಿ ಜಿದ್ದು ಮಾಡಿದೆನಾದ್ರೂ...
ಕೊನೆಗೆ ನಾಕು ಕ್ಯಾಪಚಿನೋ ಪಡೆದು ಹೋಗಬೇಕಾಯಿತು.

ಅಂಗಡಿಯವನ ಜೊತೆ ಜಗಳವಾಡಿದ್ದನ್ನ ವಿವರಿಸಿದ್ದಕ್ಕೆ,
 ' ಅದರಲ್ಲಿ ವಿಶೇಷವಾದದ್ದು ಏನೂ ಇಲ್ಲವೆಂದು,
ಜಸ್ಟ್ ೮೦ ರುಪೀಸ್ ತಾನೇ..? '
ಅನ್ನುವಂತಿತ್ತು ಮಿತ್ರರ ಕೊಂಕು ನೋಟ.
ನನಗೂ ಸಖತ್ ಕೋಪ ಬಂತು.
ಎಲ್ಲರೂ exact ಆಗಿ ಅವರವರ ೮೦ ರೂಪಾಯಿ ಷೇರ್ ಕೊಟ್ಟರಷ್ಟೇ ಎದ್ದು ಬರುವುದಾಗಿಯೂ,
ಇಲ್ಲವಾದಲ್ಲಿ ಇಲ್ಲೇ ಕೂರುವುದಾಗಿಯೂ ಹಠ ಹಿಡಿದು ಕುಳಿತೆ.
ಕೋಪವನ್ನು ಹಿಂಗಾದರೂ ಹೊರ ಹಾಕಲೇಬೇಕಿತ್ತು.
ಎಲ್ಲರ ಹತ್ತಿರ ಹಣ ಪಡೆದು, ಕಾಫಿ ಡೇ ಗೆ ಬೆನ್ನು ಮಾಡಿ ಹೊರಡುವಾಗ,

" ಲೋ  ೨-೩ ರೂಪಾಯಿ ಕೆಲಸಕ್ಕೆ, ಮುನ್ನೂರ ಇಪ್ಪತ್ತು ರೂಪಾಯಿ, ಪ್ಲಸ್ಸು ಸರ್ವೀಸ್
ಟ್ಯಾಕ್ಸು ಕಕ್ಕಬೇಕಾಯ್ತಲ್ರೋ...? "  
ಅಂದದ್ದಕ್ಕೆ ಸುಮ್ನೆ ನಗ್ತಾರಪ್ಪ ಹುಡುಗ್ರು.