ಕಿಚ್ಚನ ಅಭಿಮಾನ!!

ಟಿವಿನಲ್ಲಿ ಅಣ್ಣಾವರದ್ದು ಸಿನಿಮಾಗಳು ನೋಡುವಾಗ, 'ಛೇ ಈಗಲೇ ಇದನ್ನ ನೋಡಿದರೆ ಇಷ್ಟು ಅಭಿಮಾನದ ಉದ್ವೇಗ ಬರತ್ತಲ್ಲ, ಇನ್ನು ತತ್ಸಮಾನ ಕಾಲದಲ್ಲಿ ಬದುಕಿದ್ದ ಅಭಿಮಾನಿಗಳು ಥಿಯೇಟರಿನಲ್ಲಿ ಕುಳಿತಾಗ ಹೆಂಗೆಲ್ಲಾ ಸಂಭ್ರಮ ಪಟ್ಟಿರಬಹುದು ಅನ್ನೋದನ್ನ ಊಹಿಸಲಾರೆ. 

ನಮ್ಮ ನಮ್ಮ ಜಮಾನದಲ್ಲಿ, ಸಿನಿಮಾದಲ್ಲಿ ನಮಗೊಬ್ಬ ಹೀರೋ ಇರಬೇಕು; ಥಿಯೇಟರ್ ಅನ್ನೋ ಕತ್ತಲ ಲೋಕದಲ್ಲಿ, ಮೈಯೆಲ್ಲಾ ಕಣ್ಣಾಗಿಸಿ ಕೂತಾಗ, ಶಿಳ್ಳೆ ಕರತಾಡನಗಳ ಮಧ್ಯೆ ಧೈತ್ಯಾಕಾರದ ವ್ಯಕ್ತಿ ಜಿಗಿದು ಬರಬೇಕು; ಥಿಯೇಟರಿನಲ್ಲಿದ್ದ ಎ ಸಿ ಯ ಪ್ರಭಾವಕ್ಕೋ ಅಥವಾ ಮೆಚ್ಚಿನ ಹೀರೋ ಬಂದ ಸಂತೋಷಕ್ಕೋ ಗೂಸ್ ಬಂಪಿನ ನಡುಕವೊಂದು ಎದೆಯನ್ನು ನಡುಗಿಸಬೇಕು; ಕೂತಿದ್ದ ಸೀಟು ಅಕಸ್ಮಾತ್ ಹಿಂದಕ್ಕೆ ಜಗ್ಗಿದ್ದರೆ, ಅಂಡನ್ನು ಸ್ಲೈಡ್ ಮಾಡಿ ಮುಂದಕ್ಕೆ ತರಿಸಬೇಕು. ನಮ್ಮ ನಮ್ಮ ಜಮಾನದಲ್ಲಿ, ಸಿನಿಮಾದಲ್ಲಿ ನಮಗೊಬ್ಬ ಹೀರೋ ಬೇಕು. 

ನನ್ನ ಪಾಲಿಗೆ ಹೇಳುವುದಾದರೆ ಕಿಚ್ಚ ಸುದೀಪ ನನ್ನ ಜಮಾನದ ನಾ ಮೆಚ್ಚಿದ ನನ್ನ ಹೀರೋ. ಹಾ ನಿಮ್ಮ ಹೀರೋ ನಿಮಗೆ, ನನ್ನ ಹೀರೋ ನನಗೆ..

ಕಿಚ್ಚ; ಕಿಚ್ಚ; ಕಿಚ್ಚ; ಹೈಟು ಪರ್ಸನಾಲಿಟಿ ಗೆಶ್ಚರ್-ಗಳು.. ಅಬ್ಬಾ ಸುಪರೋ ಸೂಪರು. ಕಿಚ್ಚ ಎಂಬ ಮೇರುಪರ್ವತಕ್ಕೆ ಜ್ವಾಲಾಮುಖಿಯಂತಹ ಕಂಠವಿದೆ. ಬಾವಿಯಲ್ಲಿ ನೀರು ಸೇದುವಾಗ ಬರುವ ರಾಟೆಯ ಕಟ್-ಕಟ್-ಕಟ್ ಸದ್ದಿನಂತೆ, ಕಿಚ್ಚನ ಧ್ವನಿ ಎದೆಯನ್ನು ಗುದ್ದಿ ಒಳಗೆ ಇಳಿಯುತ್ತದೆ. ಅಬ್ಬಬ್ಬಾ ಎಂಥಾ ಕ್ಲಾರಿಟಿ ಎಂಥಾ ಪಿಚ್ಚು ಎಂಥಾ ಶಾರ್ಪು. ಕಿಚ್ಚನ ಬಾಯಲ್ಲಿ ಡೈಲಾಗ್ ಗಳನ್ನು ಕೇಳುವಾಗ ತಲೆ ಕೆಡ್ತಿರತ್ತೆ.

ನಾನು ಸ್ವತಂತ್ರವಾಗಿ ಸಿನಿಮಾವೊಂದನ್ನು (ಕದ್ದು) ನೋಡುವ ಹೊತ್ತಿಗೆ ಆಗಲೇ, ಕಿಚ್ಚ ಹೀರೋ ಆಗಿ ಬಿಟ್ಟಿದ್ದ. ಸಾರಿ ಸ್ಟಾರ್ ಆಗಿಬಿಟ್ಟಿದ್ದ. ಹೀರೋ ಗು ಸ್ಟಾರ್ ಗು ತುಂಬಾನೆ ವ್ಯತ್ಯಾಸ ಇದೆ. ಕಿಚ್ಚ ಈಸ್ ಅ ಸ್ಟಾರ್.

ದ್ವಿತೀಯ ಪಿ-ಯು-ಸಿ; ನಾನು ಅಧಿಕೃತವಾಗಿ ಸಿನಿಮಾರಂಗಕ್ಕೆ  ಅಂದರೆ, ಕದ್ದು ಮುಚ್ಚಿ ಸಿನಿಮಾ ನೋಡೋದಕ್ಕೆ ಪ್ರಾರಂಭ ಮಾಡಿದ್ದು. ಆ ಹೊತ್ತಿನಲ್ಲಿ ಬಂದ ಯಾವ ಭಾಷೆಯ, ಯಾವೊಂದೂ ಸಿನಿಮಾವನ್ನೂ ಬಿಡದೇ ಸೆಕೆಂಡ್ ಶೋನಲ್ಲಿ ನೋಡಿದ್ದೆ. ಸಿನಿಮಾ ವ್ಯಾಮೋಹ ತೀವ್ರವಾಗಿತ್ತು. ಸ್ಪರ್ಷ, ಹುಚ್ಚ, ಕಿಚ್ಚ ಬಂದು ಹೋಗಿತ್ತು. ಮಹಾರಾಜ ನಲ್ಲನ ಹಾವಳಿ ನಡೆದಿತ್ತು. ಅಲ್ಲಿಂದ ಮುಂದೆ ರಿಲೀಸ್ ಆದ ಹೆಚ್ಚು-ಕಮ್ಮಿ ಎಲ್ಲಾ ಕಿಚ್ಚನ ಸಿನಿಮಾಗಳನ್ನು ನೋಡುತ್ತಾ ಬಂದಿದ್ದೇನೆ. 

ಮೊದಲನೇ ಸಾರಿ ಕಿಚ್ಚನನ್ನು ನೇರವಾಗಿ ನೋಡಿದ್ದು, ಮೈಸೂರಿನ ಯುವ ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ. ಅದುವರೆಗೂ ಮಾನಸ ಗಂಗೋತ್ರಿಯ ಓಪನ್ ಥಿಯೇಟರಿನಲ್ಲಿ ಸಿಂಪಲ್-ಡೀಸೆಂಟ್ ಆಗಿ ನಡೆಯುತ್ತಿದ್ದ ಯುವ-ದಸರಾ,  ತನ್ನ ಪಾಪುಲಾರಿಟಿಯನ್ನು ಅರಗಿಸಿಕೊಳ್ಳಲಾಗದೇ ಬೃಹತ್ ಆವರಣಕ್ಕೆ ಸ್ಥಳಾಂತರಗೊಂಡಿತ್ತು. ಆರು ಘಂಟೆಯ ಕಾರ್ಯಕ್ರಮಕ್ಕೆ ಮೂರು ಘಂಟೆಗೆ ಹೋಗಿ, ಜನರಲ್ ಆಡಿಯನ್ಸು ಕುಳಿತುಕೊಳ್ಳುವ ವಿಭಾಗದಲ್ಲಿ ಮುಂದಿನ ಸಾಲಿನಲ್ಲೇ ಸೀಟು ಹಿಡಿದು ಕುಳಿತೆ.  ಕಿಚ್ಚನನ್ನು ಸಾಧ್ಯವಾದಷ್ಟು ಹತ್ತಿರದಿಂದ ಕಾಣಬೇಕು ಎಂಬುದು ನನ್ನ ಆಸೆ ಆಗಿತ್ತು. 

ಬಂದನಾ ಕಿಚ್ಚ ಶ್ಯಾನೆ ಖುಸಿ ಆಗೋಯ್ತು ನೋಡಿ. ದಸರಾ ಸಾಂಸ್ಕೃತಿಕ ಸಮಾರಂಭದ ಉದ್ಘಾಟನ ಸಮಾರಂಭದಲ್ಲಿ ಕಿಚ್ಚ ಹೆಂಗಸರ ಬಾಯಲ್ಲಿ 'ಸೊಂಟದ ವಿಷ್ಯ, ಬ್ಯಾಡವೋ ಶಿಷ್ಯ .. ಸೊಂಟಕಿಂತ ವಾಸಿ ಕಣೋ ಗುಂಡಿನ ದಾಸ್ಯ' ಹಾಡು ಹೇಳಿಸಿ ಎಲ್ಲರೂ ಮುಜುಗರ ಪಟ್ಟುಕೊಳ್ಳುವನಂತೆ ಮಾಡಿದನಾದರೂ 'ಇದು ಯುವ ದಸರಾ ಇಲ್ಲಿ ಯುವ ಮನಸ್ಸು ಇರುವ ಪ್ರೇಕ್ಷಕರು ಮಾತ್ರ ಬರಲು ಸಾಧ್ಯ ' ಎಂಬುದನ್ನು ಸೂಚ್ಯವಾಗಿ ಹೇಳಿದ.

ಕಿಚ್ಚ ಒಬ್ಬ ಅಸಾಧಾರಣ ನಟ ಎಂಬುದು ಎಲ್ಲರಿಗೂ ತಿಳಿದ ವಿಚಾರವೇ ..ಆದರೆ ಭಯಾನಕ ಆಟ್ಟಿಟೂಡ್ ಇರುವಂಥ ಅದ್ಭುತ ಪಾತ್ರವೊಂದರಲ್ಲಿ ಕಿಚ್ಚನನ್ನು ಕಾಣಬೇಕು ಎಂಬುದು ನನ್ನ ಆಸೆಯಾಗಿತ್ತು.  'ಕಾಖಿ' ಹಿಂದಿ ಸಿನಿಮಾ ಬಂದಾಗ ಅದರಲ್ಲಿ ಅಜಯ್ ದೇವಗಣ್ ಮಾಡಿದ್ದ ವಿಲನ್ ರೋಲ್ ನೋಡಿ ಅಬ್ಬಾ ಇದನ್ನ ಕಿಚ್ಚ ಮಾಡಬೇಕು ಅಂದುಕೊಳ್ಳುತ್ತಿದ್ದೆ.  ಡಾರ್ಕ್ ನೈಟ್ ನ ಜೋಕರ್ ನಂತಹ ವಿಕ್ಷಿಪ್ತ ಮನಸ್ತಿಥಿಯ ಪಾತ್ರವೊಂದರಲ್ಲಿ ಕಿಚ್ಚನನ್ನು ಕಾಣಬೇಕು.ಯಾವುದಾದರೂ ಒಳ್ಳೆ ಒಳ್ಳೇ ವಿಷುಯಲ್ಸುಗಳನ್ನು ಕಂಡಾಗ "ಹಾ ಕಿಚ್ಚ ಈ ಪಾತ್ರ ಮಾಡಿದರೆ ಚಚ್ಚಾಡಿ ಬಿಡುತ್ತಿದ್ದ " ಅನಿಸುತ್ತದೆ.

ಕಿಚ್ಚ ಮೊದಲನೇ ಸಾರಿ ನಿರ್ದೇಶನ ಮಾಡಿದ 'ಮೈ ಆಟೋಗ್ರಾಫ್' ಸಿನಿಮಾವನ್ನು ಫಸ್ಟ್ ಡೇ ಫರ್ಸ್ಟ್ ಶೋ ಮೈಸೂರಿನ ಗಾಯತ್ರಿ ಸಿನಿಮಾ ಮಂದಿರದಲ್ಲಿ ಗಾಂಧಿ ಸೀಟಿಗೆ, ಬ್ಲಾಕ್ ಟಿಕೇಟು ಕೊಟ್ಟು ಹೋಗಬೇಕಾದ ದುರ್ದೈವ ಒದಗಿತು. ನೂರ ಎಪ್ಪತ್ತೈದು ದಿನಗಳ ಕಾಲ ಗಾಯತ್ರಿ ಸಿನಿಮಾ ಮಂದಿರದಲ್ಲಿದ್ದಾಗ, ನಾಲ್ಕು ಬಾರಿ ಆ ಸಿನಿಮಾವನ್ನು ನೋಡಿದೆ. ಎಲ್ಲವೂ ಕಿಚ್ಚನ ಅಭಿಮಾನಕ್ಕೆ.  ಶಾಂತಿ ನಿವಾಸ ಆಗಿರಬಹುದು, ಜಸ್ಟು ಮಾತ್ ಮಾತಲ್ಲೇ ಆಗಿರಬಹುದು ಅಥವಾ ಸ್ವಾತಿ ಮುತ್ತೇ ಆಗಿರಬಹುದು. ಕಮರ್ಷಿಯಲಿ ಕಡಿಮೆ ಸುದ್ದಿ ಮಾಡಿದ ಕಿಚ್ಚನ ಸಿನಿಮಾಗಳ ಮೇಲೆ ಒಂದು ಹಿಡಿ ಹೆಚ್ಚು ಪ್ರೀತಿ ನನಗೆ. ಯಾಕಂದ್ರೆ ಅವೆಲ್ಲಾ ಕಿಚ್ಚನ ಸಿನಿಮಾ ಪ್ರೀತಿಯ experimet ಗಳು. 

ಕಿಚ್ಚನ ರಣ್ ಸಿನಿಮಾ ರಿಲೀಸಾದಾಗ ತ್ರಿವೇಂಡ್ರಮ್ ನಲ್ಲಿದ್ದೆ. ಸಿನಿಮಾ ಹೆಂಗಾದ್ರು ಇರಲಿ. ಕಿಚ್ಚ ಅಮಿತಾಬ್ ಬಚ್ಚನ್ ಜೊತೆಗೆ ಅಭಿನಯಿಸಿರೋದು, ಸಿಕ್ಕಾಪಟ್ಟೆ ಹೆಮ್ಮೆಯ ವಿಷಯವಾಗಿದ್ದರಿಂದ ಆಗಿಂದಾಗಲೇ ಅದನ್ನು ನೋಡುವ ತುಡಿತವಿತ್ತು. ಸಂಜೆಯಾಗುತ್ತಿದ್ದಂತೆ ಸುಮಾರು ಹತ್ತು ಹದಿನೈದು ಕನ್ನಡ ಮಿತ್ರರಿಗೆ ಜಾಕ್ ಎತ್ತಿಸಿ,  ತ್ರಿವೇಂಡ್ರಮ್ ನಲ್ಲೇ ಥಿಯೇಟರ್ ಹುಡುಕಿ ಹೋಗಿದ್ದೆ.

ಮಂತ್ರಿ ಮಾಲ್ ನಲ್ಲಿ ಇದ್ದ ಲಾಂಡ್ ಮಾರ್ಕ್ ಮಳಿಗೆಯಲ್ಲಿ ಪುಸ್ತಕಗಳ ಸಾಲಿನಲ್ಲಿ ನನ್ನ ಪಾಡಿಗೆ ನಾ ಪುಸ್ತಕದ ಹುಡುಕಾಟದಲ್ಲಿದ್ದೆ.  ಗೆಳೆಯ ಅಭಿ ಬಂದವನೇ, "ಲೋ ನೋಡೋ ನಿಮ್ ಗುರು ಬಂದಿದಾನೆ." ಅಂದ.  ಆ ಅಂಗಡಿಯೊಳಗೇ ಚಿಕ್ಕದಾಗಿ ಒಂದೈವತ್ತು ಚೇರುಗಳನ್ನು ಹಾಕಿ 'ಮುಂಬೈಸ್ತಾನ್' ಅನ್ನೋ ಆಂಗ್ಲ ಪುಸ್ತಕದ ಕಿರು ಉದ್ಘಾಟನಾ ಸಮಾರಂಭವನ್ನು
ಇಟ್ಟುಕೊಂಡಿದ್ದರು. ಕಣ್ಣಳತೆಯ ದೂರದಲ್ಲಿ ಕಿಚ್ಚ ಸುದೀಪ; ಪುಸ್ತಕ ಬಿಡುಗಡೆಗೆ ಅತಿಥಿ ಆಗಿ ಬಂದಿದ್ದು.  ಯೊಪ್ಪ!! ಮೊದಲಿದ್ದ ಜೋಷ್ ಈಗ ಇರಲಿಲ್ಲ. ಇಲ್ಲಾಂದ್ರೆ ಕಿಚ್ಚ ಅಂತಲಾದರೂ ಕೂಗಿಬಿಡುತ್ತಿದ್ದೆ. ಬಹುಷಃ ಅದು ವಯಸ್ಸಿನ ಜೊತೆಗೆ ಬಂದಂತಹ ಪ್ಸೂಡೋ-ಪ್ರೌಢಿಮೆ ಇರಬಹುದು. ಅದನ್ನ ಡೀಸೆನ್ಸಿ ಅಂತಾನು ಕರೆಯಬಹುದು. ಅಥವಾ ಇನ್ನೇನೋ ಗೊತ್ತಿಲ್ಲ. ದೂರದಲ್ಲಿ ನಿಂತು ಕಿಚ್ಚನನ್ನು ಸುಮ್ಮನೇ ನೋಡಿದೆ. ' ಏನ್ ಆಟ್ಟಿಟೂಡ್ ಗುರು ನಿಂದು ' ಸೂಪರು 

 ಕಿಚ್ಚನ ಅಭಿಮಾನದ ಹೊರತಾಗಿಯೂ .... ಭಾಷೆ, genre, ಮತ್ತು ಹೀರೋಗಳ ಹಂಗಿಲ್ಲದೇ ಸದಭಿರುಚಿಯ ಚಂದ ಸಿನಿಮಾಗಳನ್ನು ಕಾದು ನೋಡುವ ಸಿನಿಮಾಗಳ ಅಭಿಮಾನಿ ನಾನು. 

 ಎನಿ ವೇ .... ಆಲ್ ದಿ ಬೆಸ್ಟು ಕಿಚ್ಚ  (ಸಾಗುವ ಹೆಜ್ಜೆಗೆ ಸವೆಯುವ ಹಾದಿಗೆ ನೆನಪೇ ಬೆಳಕು ಸುಳ್ಳಲ್ಲ )

Read more posts on cinema
ಕನಸೂರು, ನನ್ನೆಲ್ಲಾ ಕೌತುಕಗಳ ಜೋಳಿಗೆ, ಬರಹಗಳಿಗೆ ದೀವಿಗೆ. ಕಥೆ, ಕವನ ಅಥವಾ ಯಕಃಶ್ಚಿತ್ ಅನ್ನಿಸುವ ಬರವಣಿಗೆಗಳಿರಬಹುದು. ತೋಚಿದ್ದು; ಗೀಚಿದ್ದು;

ಓದುಗನ ಸಹಾನುಭೂತಿ ಮತ್ತು ಪ್ರೀತಿ ಇಲ್ಲದಿದ್ದರೆ, ಬರೆದದ್ದನ್ನು ಹಂಚಿಕೊಳ್ಳೋದಕ್ಕೂ ಭಯ ಆಗತ್ತೆ. ನಿಮ್ಮ ಈ ಓದಿನ ಆಯ್ಕೆಯನ್ನು ಗೌರವಿಸುತ್ತೇನೆ. Thank you :)