ಕ್ರಿಸ್-ಮಸ್ ರಜೆಗೆ ಅಂತ ಊರಿಗೆ ಹೋಗಿದ್ದೆ. ಒಟ್ಟು ನಾಲ್ಕು ರಜಾ ದಿನಗಳು ಒಟ್ಟಿಗೆ
 ಸಿಕ್ಕಿದ್ದವು.  ಅಪ್ಪನ ಹಳೇ ಸುಜುಕಿ ಬೈಕು ಹತ್ತಿ ಸಿಟಿ ಸುತ್ತಿಕೊಂಡು ಬರೋಣ ಅಂತ
 ಹೊರಟೆ.   ಮಂತ್ರಿಮಂಡಲದ ದೊಡ್ಡ-ದೊಡ್ಡ ತಿಮಿಂಗಿಲಗಳಿಗೆ ಶಿವಮೊಗ್ಗ ತವರೂರು
ಆಗಿದ್ದರಿಂದಲೋ ಏನೋ,  ನಗರದ ಸಂಪೂರ್ಣ ಜೀರ್ಣೋದ್ಧಾರ ಕೆಲಸ ನಡೆಯುತ್ತಿತ್ತು.   ಯಾವ
ರಸ್ತೆಯಲ್ಲಿ ಬೈಕು ಓಡಿಸಿದರೂ,  ರಸ್ತೆ ದಿಢೀರನೆ ಅಂತ್ಯಗೊಂಡು " ಕಾಮಗಾರಿ
ನಡೆಯುತ್ತಿದೆ " ಎಂಬ ನಾಮಫಲಕ ಕಾಣಿಸುತ್ತಿತ್ತು.

ಗಾಂಧಿ ಬಜಾರಿನ ಬಳಿ ಬೈಕು ನಿಲ್ಲಿಸುತ್ತಿರುವಾಗ,  ಸ್ಕೂಟಿಯೊಂದು ಸರ್ರನೆ ಹೋದಂತಾಯಿತು.
 ಸ್ಕೂಟಿಯ  ಮೇಲಿದ್ದ ಪರಿಚಿತ ಮುಖ, ನನ್ನ ಶಾಲಾ ದಿನಗಳ ಗೆಳತಿ ಶ್ರೀವಿದ್ಯಾ  ಎಂದು
ಗುರುತಿಸುವುದು  ಕಷ್ಟವಾಗಲಿಲ್ಲ.

ಬೈಕ್ ಸ್ಟಾರ್ಟ್ ಮಾಡಿದವನೇ ಅವಳು ಹೋದ ದಿಕ್ಕಿನ ಕಡೆಗೆ  ಹೊರಟೆ. ಬಹಳಷ್ಟು ದೂರ
ಸಾಗಿಬಿಟ್ಟಿದ್ದಳು.  ತುಂಗಾ ನದಿ ಸೇತುವೆಯ ಮೇಲೆ ಸ್ಕೂಟಿಯನ್ನು  ಸಮೀಪಿಸಿದಾಗ ಅದರ
ಮಿರರ್ ನಲ್ಲಿ ಅವಳ ಮುಖ ಸ್ಪಷ್ಟವಾಗಿ ಕಾಣಿಸುತ್ತಿತ್ತು.   ಡೌಟೇ ಇಲ್ಲ ಅವಳೇ
ಶ್ರೀವಿದ್ಯಾ ಕೊನೆಯ ಬಾರಿ ಅಂದರೆ ಐದು ವರುಷಗಳ ಹಿಂದೆ  ಗುಡ್ಡೆಕಲ್ಲು ಜಾತ್ರೆಯಲ್ಲಿ
ನೋಡಿದ್ದಲ್ಲವೇ.

ರಾತ್ರಿ ಒಂಭತ್ತೋ,  ಹತ್ತೋ ಆಗಿತ್ತು.  ಸಿ-ಇ-ಟಿ ಕೋಚಿಂಗ್ ಕ್ಲಾಸು ಮುಗಿಸಿಕೊಂಡು,
 ಜಾತ್ರೆ ನೋಡಲು ಗುಡ್ಡೇ  ಕಲ್ಲಿಗೆ ಹೋಗಿದ್ದೆ.  ಜಾತ್ರೆಯಲ್ಲಿ, ಹಳೆ ಶಿಲಾಯುಗದ
ಪಳಯುಳಿಕೆಗಳಂತಿದ್ದ  ತೂಗುಯ್ಯಾಲೆಯನ್ನು ಇಬ್ಬರು ದಾಂಡಿಗರು ಗರಗರನೆ
ಸುತ್ತಿಸುತ್ತಿದ್ದರು.  ಆ  ತೊಟ್ಟಿಲುಗಳಲ್ಲಿ ಕುಳಿತಿದ್ದವರೆಲ್ಲಾ " ಹಾ ಹೂ ಅಯ್ಯಯ್ಯೋ
" ಎಂದು ಚೀರುತ್ತಿದ್ದರು.   ಅದೇನು ಗಾಬರಿಯಿಂದ ಕೂಗುತ್ತಿದ್ದರೋ ಅಥವಾ ಖುಷಿಯಿಂದ
ಕಿರುಚಿಕೊಳ್ಳುತ್ತಿದ್ದರೋ  ಗೊತ್ತಾಗುತ್ತಿರಲಿಲ್ಲ.  ಅಷ್ಟೋಂದು ವೇಗವಾಗಿ
ಸುತ್ತುತ್ತಿದ್ದ ವರ್ಟಿಕಲ್  ತೂಗುಯ್ಯಾಲೆಯಲಿ ಏನೂ ಆಗದವಳಂತೆ ಪಟ್ಟಿಯನ್ನು
ಹಿಡಿದುಕೊಂಡು,  ಗಾಳಿಗೆ ಮುಖ ಚಾಚಿ  ಕುಳಿತಿದ್ದಳು ಇವಳು.

" ಹೋಯ್ ಎಂಥದೆ ಅದು ಹೆದರಿಕೆ ಆಗಲ್ವಾ. ?"ಅಂಥ ಕೇಳಿದ್ದಕ್ಕೆ ಉಯ್ಯಾಲೆಯಲಿ ಆಟವಾಡುವ
ಒಂದೇ ಉದ್ದೇಶದಿಂದ ಜಾತ್ರೆಗಳಿಗೆ ಬರುವುದಾಗಿ ಹೇಳಿದಳು.  ತನ್ನ ಎರಡನೆಯ ಉಯ್ಯಾಲೆಯ
ಸುತ್ತಿಗೆ ನನ್ನನ್ನೂ ಕರೆದಾಗ, 'ಅಮ್ಮಾ  ತಾಯಿ ದುಡ್ಡು ಕೊಟ್ಟು ತಲೆ-ಸುತ್ತು
ಬರಿಸುಕೊಳ್ಳುವ ಹುಚ್ಚು ನನಗಿಲ್ಲ. ಸ್ವಲ್ಪಾನು  ಸೇಫ್ಟಿ  ಇಲ್ಲ. ನನಗೆ ತಲೆ ಚಕ್ಕರ್
ಹೊಡಿಯತ್ತೆ. ಅದಕ್ಕಿಂತ ಹೆಚ್ಚಾಗಿ ಭಯ ಆಗತ್ತೆ. ' ಅಂದೆ.

'ಅಯ್ಯೋ ಹೆದರ್-ಪುಕ್ಲ.  ಜೀವದ ಮೇಲೆ ಅಷ್ಟೋಂದು ಭಯಾನ. ? ನೀ ಯಾವಾಗ್ಲೋ
ದೊಡ್ಡವನಾಗೋದು ..? ' ಎಂದು ಮೂದಲಿಸಿದಳು.

' ಜೀವದ ಮೇಲೆ ಭಯ ಇಲ್ಲ,  ಪ್ರೀತಿ' ಎಂದೆ.  ನನ್ನ ಧೈರ್ಯ ಪ್ರದರ್ಶಿಸಲು ಹೋಗಿ,
 ಅಯ್ಯಯ್ಯೋ ಎಂದು ಕಿರುಚಿಕೊಂಡು ಮಾನ ಹರಾಜು ಹಾಕಿಸಿಕೊಳುವುದಕ್ಕಿಂತ ಸುಮ್ಮನಿರುವುದೇ
ಲೇಸು ಎನಿಸಿತ್ತು.

ಅವಳೆ ಅದೇ ಡೋಂಟ್ ಕೇರ್ ಮುಖ. ಓವರ್-ಟೇಕ್ ಮಾಡಿದವನೇ ಸ್ವಲ್ಪ ದೂರ ಹೋಗಿ ಬೈಕು
 ನಿಲ್ಲಿಸಿದೆ.  ಬೈಕಿನಿಂದ ಇಳಿದು ಟ್ರಾಫಿಕ್ ಪ್ಯಾದೆಯಂತೆ ಅವಳ ಸ್ಕೂಟಿಗೆ ಅಡ್ಡಲಾಗಿ
ಕೈ  ಮಾಡುತ್ತಾ ನನ್ನ ಅಷ್ಟೂ ದಂತಗಳು ಕಾಣುವಂತೆ ನಗುತ್ತಾ ನಿಂತೆ.  ನನ್ನ ಮೂತಿ ಗುರುತು
 ಸಿಗುವುದು ಸ್ವಲ್ಪ ತಡವಾಗಿದ್ದರೂ, ಅವಳ ಕೈಲಿ ಉಗಿಸಿಕೊಳ್ಳುವ ಸಾಧ್ಯತೆ ಇತ್ತು.
 ಸ್ಕೂಟಿ ನಿಲ್ಲಿಸಿದವಳೇ ಅಚ್ಚರಿಯಿಂದ ಕಣ್ಣು ಅರಳಿಸಿದಳು.  ಪರಿಚಿತರನ್ನು ಸಂಧಿಸಿದಾಗ
 ಮೊದಲು ಅವರ ಕಣ್ಣುಗಳನ್ನು ನೋಡಬೇಕು.  ಅವುಗಳು ಯಾವತ್ತೂ ಸುಳ್ಳು ಹೇಳುವುದಿಲ್ಲ.

"ಹೆ ಹೇ ಚೇತು, ಹೆಂಗಿದ್ದೀಯೋ.  ಎಲ್ಲೋ ಹೋಗಿದ್ದೆ.  ಪತ್ತೇನೆ ಇಲ್ಲ. ?"

' ಹ್ಹಿ ಹ್ಹಿ ಹ್ಹಿ ಅದು ಮೊದ್ಲು ಮೈಸೂರಲ್ಲಿ ಇಂಜಿನಿಯರ್ ಓದ್ತಿದ್ನಾ.  ಆಮೇಲೆ
ಚೆನೈ, ಈಗ ಬೆಂಗ್ಳೂರು, ರಜ ಊರು '  ಏನೇನೊ ಹೇಳುತ್ತಿದ್ದೆ.

' ನೀ ಎಲ್ಲಿಗೆ ಹೋದ್ರು ಬದಲಾಗಲ್ಲ ಬಿಡು.' ಅಂದಳು ನಗುತ್ತಾ. ಅದನ್ನು ಹೊಗಳಿಕೆ
ಅಂದುಕೊಳ್ಳಬೇಕೊ, ತೆಗಳಿಕೆ ಅಂದುಕೊಳ್ಳಬೇಕೊ. ಕೆಟ್ಟ ಕನ್-ಫ್ಯೂಷನ್ನು.

' ಇಲ್ಲಿ ರಸ್ತೆಯಲ್ಲಿ ನಿಂತು ಮಾತಾಡೋದು  ಬೇಡ.  ಇನ್ನೊಂದು ಸ್ವಲ್ಪ ದೂರ ಹೋದ್ರೆ ನಮ್ಮ
ಮನೆ ಸಿಗುತ್ತೆ.  ನನ್ನ ಸ್ಕೂಟಿ ಫಾಲೋ  ಮಾಡ್ಕೋಂಡ್ ಬಾ. " ಎನ್ನುತ್ತಾ ನನ್ನ
ಪ್ರತಿಕ್ರಿಯೆಗೂ ಕಾಯದೇ ಸ್ಕೂಟಿ ಸ್ಟಾರ್ಟ್  ಮಾಡಿ ಹೊರಡಲು ಅನುವಾದಳು. ನಾನೂ
ನೋಡುತ್ತಿದ್ದವನು ಹಾಗೆಯೇ ನಿಂತಿದ್ದೆ.  "ಹೋಯ್ ಎಂಥದೋ ಯೋಚನೆ ಮಾಡ್ತಾ ಇದ್ದೀಯ.  ಗಾಡಿ
ಫಾಲೋ ಮಾಡಿಕೊಂಡು ಬಾ. " ಎಂದು ಹೊರಟುಬಿಟ್ಟಳು.  "ನೀನೂ ಕೂಡ ಬದಲಾಗಿಲ್ಲ " ಎಂದೆ.
 ಅವಳಿಗದು ಕೇಳಿಸಲಿಲ್ಲ.   ಅವಳದು ಕೇಳುವ ವಂಶ ಅಲ್ಲ.  ಹೇಳುವ ವಂಶ.  ಅವಳ ಆಜ್ನೆಯಂತೆ
ಹಿಂಬಾಲಿಸಿದೆನಾದರೂ  Actual ಆಗಿ ಅವಳ ಮನೆ ಅಲ್ಲಿರೋದು ನನಗೆ ಮೊದಲೇ ಗೊತ್ತಿತ್ತು.

ಅದೊಂದು ಶುರುಪುರ ಎಂಬ ಊರು.  ನಗರಕ್ಕೆ ಅಂಟಿಕೊಂಡಿದ್ದರೂ ತುಂಗಾನದಿಯ ಸಲುವಾಗಿ
ಸಿಟಿಯಿಂದ ಬೇರ್ಪಟ್ಟಿತ್ತು.   ದೊಡ್ಡ  ಮನೆ.  ಹೊರಗೊಂದು ರಾಜ್-ದೂತ್ ಬುಲೆಟ್
ನಿಂತಿತ್ತು.  ಮನೆಯ ಒಂದು ಪಾರ್ಶ್ವದಲ್ಲಿ ' ಮೇಘನ  ಕಂಪ್ಯೂಟರ್ ಎಂಜುಕೇಷನ್ಸ್‍  ' ಎಂಬ
ಬೋರ್ಡು ನೇತು ಹಾಕಿದ್ದರು.  ಬಸವರಾಜ್ ಕೋರಿಮಠ, ಲ್ಯಾಂಡ್-ಲಾರ್ಡ್ ಎಂಬ ನಾಮಫಲಕವನ್ನು
ಕಾಂಪೌಂಡಿಗೆ ಜಡಿದಿದ್ದರು.

ತನ್ನ ಅಮ್ಮನಿಗೆ ಪರಿಚಯಿಸಿದಳು. ಬೆಂಗಳೂರಿನಲ್ಲಿ  ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ
ಸಾಫ್ಟ್-ವೇರು ಎಂಜಿನೀಯರ್ ಕೆಲಸ  ಮಾಡುತ್ತಿರುವುದಾಗಿಯು,  ತಕ್ಕಮಟ್ಟಿಗೆ ಸಂಬಳ
ಬರುತ್ತಿರುವುದಾಗಿಯೂ ಹೇಳಿದೆ.

' ಇವನ ಮುಖದಲ್ಲಿ ಸರಸ್ವತಿ ಕಳೆ ಇದೆ.  " ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
 ನನ್ನನ್ನು ಸಂಕೋಚದ ಮುದ್ದೆಯನ್ನಾಗಿಸಿದ ಅವರ ಹೊಗಳಿಕೆಗೆ ಏನೆಂದು
ಪ್ರತಿಕ್ರಿಯಿಸಬೇಕೆಂದು ತಿಳಿಯದೆ ಒದ್ದಾಡುತ್ತಿದ್ದೆ.  ಸುಮ್ಮ ಸುಮ್ಮನೆ ಹೊಗಳುವರ
ಮುಂದೆ, ಸುಮ್ಮನಿದ್ದರೂ ಮಾಡೆಸ್ಟು ಅಂದುಕೊಳ್ಳುವರು. ತತ್ತಕ್ಷಣ ಬಂತೊಂದು ಉತ್ತರ - '
ಹೊಗಳಿದ್ದು ಸಾಕು.  ಕುಡಿಯೋಕೆ ಏನಾದ್ರು ಕೊಡು. ' ವಿದ್ಯಾ ಅಮ್ಮನಿಗೆ ಆರ್ಡರ್
ಮಾಡಿದಳು.

' ಹೇಳಪ್ಪಾ ಏನು ನಿನ್ನ ಸಮಾಚಾರ.  ಓದೋದು ಬಿಟ್ಟು,  ಬೇರೆ ಏನಾದ್ರು ಮಾಡಿದ್ಯಾ
ಲೈಫಲ್ಲಿ. " ಕೇಳಿದಳು.  ಇನ್ನೂ  ಅದೇ ಕಮಾಂಡಿಂಗ್ ನೇಚರ್.  ಬದಲಾಗುವಾ ಛಾನ್ಸೇ ಇಲ್ಲ.
 ಮೊದಲ ಬಾರಿಗೆ ಇವಳನ್ನು ನೋಡಿದರೆ  ಸೊಕ್ಕಿನ ಹುಡುಗಿ ಎಂದು ನಿರ್ಧರಿಸಿ ಬಿಡಬಹುದು.
 ಆದರೆ ಯಾರಿಗೂ ಕೇರ್ ಮಾಡದೆ,  ತನ್ನ  ಮನಸ್ಸಿಗೆ ತೋಚಿದಂತೆ ಬದುಕುವ ಸ್ವಾಭಿಮಾನಿ
ಹುಡುಗಿ.  ಲುಕ್ಕು ಕಠಿಣ.  ಆದರೆ ಬೈ ಹಾರ್ಟ್  ತುಂಬಾನೆ ಸೆನ್ಸಿಟೀವ್.  ತನ್ನವರನ್ನು
ಎಂದೂ ಬಿಟ್ಟುಕೊಡದ ಜಗಳಗಂಟಿ.

' ಹೇ ಅದ್ಯಾರೊ ನಿನ್ನ ಹೆಸರು ಹೇಳ್ಕೊಂಡು ಫೋನು ಮಾಡಿದ್ರಪ್ಪ. ಏನೇನೊ ಹೇಳ್ತಿದ್ವು.
ಮತ್ತೆ  ಯಾರಿಗೂ ಫೋನ್ ಮಾಡಿರಬಾರದು, ಆ ರೀತಿ ಉಗಿದಿದ್ದೀನಿ " ಎಂದಳು.  ಮಿತ್ರ
ದ್ರೋಹಿಗಳು.  ನನ್ನ ಹೆಸರನ್ನು ಈ ರೀತಿಯಾಗಿಯೂ ಅಪಮೌಲ್ಯ ಮಾಡಬಹುದು ಎಂದು
ತೋರಿಸಿಕೊಟ್ಟಿದ್ದರು.   ಈ ವಿಷಯ ನನಗೂ ಗೊತ್ತಿತ್ತು.  ಯಾಕಂದ್ರೆ ನಾನೂ ಕೂಡ ನನ್ನ
ಹೆಸರು ಹೇಳಿಕೊಂಡು ಒಮ್ಮೆ  ಫೋನ್ ಮಾಡಿ ಮಾತನಾಡಿಸಲು ಪ್ರಯತ್ನಿಸಿದ್ದೆ.  ಆದರೆ ನಾನು
ನಾನೆ ಅಲ್ಲ ಎಂದಾಗ,  ನಾನು ಯಾರು ಎಂಬ ಪ್ರಶ್ನೆ ನನ್ನಲ್ಲೇ ಉದ್ಭವವಾಗಿತ್ತು.  ನಾನು
ನಾನೇ ಎಂದುಕೊಂಡು ಫೋನು ಮಾಡಿದ ವಿಚಾರವನ್ನು ಹೇಳಬೇಕೆಂದುಕೊಂಡೆ.  ಆದರೆ ಹೇಳಲಿಲ್ಲ.

ಯಾರಾದರೂ ಸಿಕ್ಕಾಗ ಓದು, ಕೆಲಸ ಮುಂತಾದವುಗಳ ಬಗ್ಗೆ ಪ್ರಸ್ತಾಪಿಸಬಾರದು ಎಂದು ಎಷ್ಟು
ಅಂದುಕೊಂಡರು ಮಾತುಗಳ ಮಧ್ಯೆ ಬಂದು ಬಿಡುತ್ತವೆ.  ಕೇಳಿದ್ದಕ್ಕೆ 
' ಬಿ. ಕಾಮ್ ಮುಗೀತು.  ಈಗ ಕರೆಸ್ಪಾಂಡೆನ್ಸ್‍ ನಲ್ಲಿ ಎಮ್. ಕಾಮ್ ಮಾಡ್ತಾ ಇದೀನಿ.
ನನಗೆ ಪುನಃ ಕಾಲೇಜಿಗೆಲ್ಲಾ ಹೋಗೋದು ಇಷ್ಟ ಇಲ್ಲ.   ತಾಸುಗಟ್ಟಳೆ ಕುಳಿತು ಲೆಕ್ಚರ್
ಕೇಳಬೇಕಂದ್ರೆ ಹಿಂಸೆ ಆಗತ್ತೆ.  ಏನೋ ಒಂದು ಮಾಸ್ಟರ್  ಡಿಗ್ರಿ ಇರಲಿ ಅಂತ
ಕರೆಸ್ಪಾಂಡೆನ್ಸ್-ನಲ್ಲಿ ಎಮ್. ಕಾಮ್ ಮಾಡ್ತಾ ಇದೀನಿ' ಎಂದಳು.

' ಸ್ಕೂಲಿನಲ್ಲಿ ಮೊದಲ ಬೆಂಚಿನಲ್ಲಿಯೇ ಕುಳಿತು ನಿದ್ದೆ ಮಾಡುತ್ತಿದ್ದ ಸೋಮಾರಿ ಅಲ್ವೇ
ನೀನು" ಎಂದೆ.

' ಹಾ ಅದೇ ಮೊದಲ ಬೆಂಚಲ್ಲಿ ಕೂತು, ಸಿಕ್ಕಾಪಟ್ಟೆ ಪ್ರಶ್ನೆಗಳನ್ನ ಕೇಳುತ್ತಾ,
ಶಿಕ್ಷಕರ  ವಿಧೇಯ ವಿದ್ಯಾರ್ಥಿ ಅಗಿದ್ದವನಲ್ಲವೇ ನೀನು" ನಗುತ್ತಾ ಹಳೆಯದನ್ನು
ನೆನಪಿಸಿದಳು.

'ಅದೇನದು ಮನೆಯ ಹೊರಗೆ ಮೇಘನ ಕಂಪ್ಯೂಟರ್ ಎಜುಕೇಷನ್ ಅಂತ ಬೋರ್ಡ್ ಹಾಕಿದ್ರಲ್ಲ.  ಈ
ಮೂಲೆಯಲ್ಲಿ ಯಾರು. ?,  ಕಂಪ್ಯೂಟರ್ ಅಂಗಡಿ ತೆಗೆದಿರೋದು. ? '

' ಕಂಪ್ಯೂಟರ್ ಅಂಗಡಿ ಅಲ್ಲ ಕಣೊ ಅದು. ಗಣಕಯಂತ್ರ್ ಕಲಿಕಾ ಕೇಂದ್ರ.  ಹಾ ಅದು ನಾನೆ
ಓಪನ್ ಮಾಡಿರೋದು.  ಮೇಘನ ನಮ್ಮ ಅಕ್ಕನ ಮಗಳ ಹೆಸರು" ಎಂದಳು.

ನನಗೂ ಕುತೂಹಲ  ಜಾಸ್ತಿ ಆಯ್ತು.  ಪ್ರಶ್ನಿಸುತ್ತಾ ಹೋದೆ.  ' ಎರಡು ವರುಷಗಳಿಂದ, ನಾನು
ಕಂಪ್ಯೂಟರ್ ಕಲಿತಿದ್ದೀನಿ. ಇನ್ನೊಬ್ಬಳು ನನ್ನ  ಫ್ರೆಂಡ್ ಇದಾಳೆ.  ಕಂಪ್ಯೂಟರ್ ನಲ್ಲಿ
ಒಂದು ಬ್ಯಾಚುಲರ್ ಡಿಗ್ರಿ ಮಾಡಿಕೊಂಡಿದ್ದಾಳೆ.   ಇಬ್ಬರೂ ಸೇರಿಕೊಂಡು ಈ ಸೆಂಟರ್ ಓಪನ್
ಮಾಡಿದೀವಿ.  ಡಿಗ್ರಿ ಮುಗಿದ ಮೇಲೆ, ಏನಾದ್ರು  ಡಿಫರೆಂಟ್ ಆಗಿರೋದು ಮಾಡಬೇಕು
ಅನ್ನಿಸ್ತು.  ಹೆಂಗಿದ್ರೂ ಕಂಪ್ಯೂಟರ್ ಬಗ್ಗೆ  ಗೊತ್ತಿತ್ತಲ್ಲ.  ಇಲ್ಲಿ ಸುತ್ತಮುತ್ತ
ಕಾಲೇಜಿಗೆ ಹೋಗ್ತಾ ಇರೋ ಹುಡುಗಿಯರ ಸಪೋರ್ಟ್  ಸಿಗ್ತು.  ಅದಕ್ಕೆ ಒಂದು ಟ್ರೈನಿಂಗ್
ಸೆಂಟರ್ ಓಪನ್ ಮಾಡಿದ್ವಿ.  ಒಟ್ಟು ಮೂರು  ಬ್ಯಾಚ್-ನಿಂದ 50 ಜನ ಬರ್ತಿದಾರೆ. ನನಗೆ ಅರ್ಧ ಮನೆ ಕೊಡು.  ಸ್ಕೂಲು ಮಾಡ್ತೀನಿ ಅಂತ ನಮ್ಮ ಪಪ್ಪಂಗೆ ಕೇಳಿದೆ.  ಅವರೂ  ಹಿಂದೆ
ಮುಂದೆ ನೋಡದೆ ಮುಂದಿನ ಕಾಂಪೌಂಡ್ ಹೊಡೆಸಿ ಗೋಡೆ ಕಟ್ಟಿ ಜಾಗ ಮಾಡಿಕೊಟ್ಟು  ಬಿಟ್ಟರು.
 ಸೆಂಟರ್ ರಿಜಿಸ್ಟರ್ಡ್ ಮಾಡಿಸಿದೆ.  ಬೆಂಗ್ಳೂರಿಂದ ಹೊಸ ಪಿಸಿಗಳು.  ಒಂದಷ್ಟು
 ಸೆಕೆಂಡ್ ಹ್ಯಾಂಡ್ ಪಿಸಿಗಳು ತರಿಸಿದೆ. ಇನ್ನು ಖುದ್ದಾಗಿ ಆಚಾರಿ ಜೊತೆ ಸೇರಿಕೊಂಡು
ನಮ್ಮ  ಆಫೀಸ್‍ನ ನಾವೇ ಕ್ರಾಫ್ಟಿಂಗ್ ಮಾಡಿದ್ವಿ ಗೊತ್ತಾ. ?'  ನಗುತ್ತಾ ಎಲ್ಲವನ್ನೂ
ಹೇಳಿದಳು.

ಖುಷಿಯ ಜೊತೆಗೆ ಆಶ್ಚರ್ಯವನ್ನೂ ಪಡಬೇಕಾದ ವಿಷಯ.  ಆದರೂ ಪ್ರೊಫೆಶನಲ್ ಆಗಿ ತಾನು
 ಕಲಿಯದೇ,  ಡಿಗ್ರಿಗಳು ಇಲ್ಲದೇ,  ಹಿಂಗೆಲ್ಲಾ ಕಲಿಕಾ ಕೇಂದ್ರ ಓಪನ್ ಮಾಡಬಹುದಾ ಎಂಬ
ಆತಂಕ ಹುಟ್ಟಿತು. ಅವಳ ಕಲಿಸುವಿಕೆಯ ವಿಧಾನಗಳನ್ನು ಕೇಳಿದೆ.

'ನಾವೇ ಹೊಸ ರೀತಿಯಲ್ಲಿ ಕೋರ್ಸ್-ಪ್ಲಾನ್ ಮಾಡಿದೀವಿ.   ತುಂಬಾ  ಸರಳವಾದ ಫಾರ್ಮುಲ.
 ಕಂಪ್ಯೂಟರ್ ಅಂದ್ರೆ ಏನೇನೂ ಅಂತಲೂ ಗೊತ್ತಿಲ್ಲದಿದ್ದವರು ಕೂಡ,  ಪಿ. ಸಿ
ಮುಟ್ಟುವುದಕ್ಕೆ ಅಂಜಬಾರದು.  ಕಂಪ್ಯೂಟರ್ ಅಂದ್ರೆ ಏನೋ ಅತಿ ಭಯಂಕರವಾದದ್ದು  ಅಲ್ಲ.
ತಾವೂ ಕೂಡ ತಮ್ಮ ಅವಶ್ಯಕತೆಗಳಿಗೆ ತಕ್ಕಂತೆ ಬಳಸಿಕೊಳ್ಳಬಹುದು ಅನ್ನೋದನ್ನ  ತೋರಿಸಿ
ಕೋಡುವುದು.  ಈ ಎ‍ಕ್ಸ್‍ಪೆರಿಮೆಂಟ್‍ಗೆ ನಮ್ಮ ಪಪ್ಪನ್ನೇ ಮೊದಲ ಬಲಿ ಕೊಟ್ಟದ್ದು.
 ಕಂಪ್ಯೂಟರ್ ನಿಂದ ಏನೇನು ಸಾಧ್ಯಾನೊ ಅವನ್ನೆಲ್ಲಾ ಮಾಡಿಸೋದು.  ಇಲ್ಲಿ  ಸುತ್ತಮುತ್ತ
ಹಳ್ಳಿಯಿಂದೆಲ್ಲಾ ಸ್ಕೂಲು ಕಾಲೇಜು ಹುಡ್ಗೀರು ಬರ್ತಾರೆ.  ಏನೋ  ಮಾಡ್ತಿದೀವಪ್ಪ.
 ನಿಮ್ಮ ಹಾಗೆ ದೊಡ್ಡ ದೊಡ್ಡ ಇಂಜಿನಿಯರುಗಳನ್ನ ತಯಾರು ಮಾಡಕ್ಕಾಗದೇ  ಇದ್ದರೂ, ನಮ್ಮ
ಹತ್ತಿರ ಕಲಿತವರು ಕಂಪ್ಯೂಟರ್ ಅನ್ನು ಇಷ್ಟೇನಾ ಅನ್ನುವ ಮಟ್ಟಿಗಾದರೂ ನೋಡ್ತಾರೆ.'

ಸ್ವಲ್ಪವೂ ಉದ್ವೇಗವಿಲ್ಲದೆ ತನ್ನ ಕೆಲಸವನ್ನೂ, ಅದನ್ನವಳು ಪ್ರೀತಿಸುವ ಬಗೆಯನ್ನೂ
ತಣ್ಣಗೆ ವಿವರಿಸಿದಳು.   'ಗುಡ್-ಗುಡ್.  ಈ ಥರಾ ಸ್ಪಿರಿಟ್ ಇರಬೇಕು.  ಒಳ್ಳೆ
ಆಲೋಚನೆಗಳು. " ಎಂದು ಮೆಚ್ಚುಗೆ ವ್ಯಕ್ತಪಡಿಸಿದೆ.

' ಹೇ ಅವನ ಫೋನ್ ನಂಬರು ಇಸ್ಕೋಳಮ್ಮ,  ನಿನ್ನ ಮದುವೆಗೆ ಕರೆಯುದಕ್ಕೆ ಬೇಕಾಗುತ್ತೆ. ? '
ಅವರಮ್ಮ ಅಡುಗೆ ಮನೆಯಿಂದಲೇ ಕೂಗಿ ಹೇಳಿದರು.  ಅವಳ ಮೇಲೆ ಪ್ರೀತಿ-ಪ್ರೇಮ  ಎಂಬ ಕ್ರೂರ
ಭಾವನೆಗಳೇನು ಇಲ್ಲ.  ಆದರೂ ಓರಗೆಯ ಹೆಣ್ಣುಮಕ್ಕಳ ಮದುವೆಯ ಮಮತೆಯ  ಕರೆಯೋಲೆಯನ್ನು
ಕೇಳಿದಾಗಲೆಲ್ಲ ಸಣ್ಣ ಪ್ರಮಾಣದ ಹೃದಯ ಸ್ತಂಬನ.  
' ಮದುವೆ ಮಾಡಬೇಕು ಅಂತ ಭಾರಿ ತಯಾರಿ ನಡೆಸ್ತಾ ಇದಾರೆ.  ಮೊನ್ನೆ ಒಬ್ಬ  ಹುಡುಗ ಬಂದು
ನೋಡಿ ಹೋದ.  ನನಗಿಂತ ಹತ್ತು ವರ್ಷ ದೊಡ್ಡವನು.  ಆಗಲ್ಲ ಅಂದು ಬಿಟ್ಟೆ.  ಇಲ್ಲಿ
 ಪ್ರಶ್ನೆ ವಯಸ್ಸಿನದ್ದಲ್ಲ.  ನಮ್ಮ ಆಸಕ್ತಿ, ಅಭಿರುಚಿಗಳದ್ದು.   ಕಷ್ಟ ಆಗುತ್ತಪ್ಪ.
 ನಾವು ಅವರ ಮೇಲೆ ಭಕ್ತಿ, ಗೌರವ ಇಟ್ಟುಕೊಳ್ಳುವುದು.   ಅವರು ನಮ್ಮ ಬಗ್ಗೆ ಅತಿಯಾದ
ಕಾಳಜಿ, ಪ್ರೀತಿ ಇಟ್ಟುಕೊಳ್ಳುವುದು.  ಇವೆಲ್ಲಾ ಯಾಕೆ ಬೇಕು. ಒಬ್ಬರನ್ನೊಬ್ಬರು
ಸಮಾನವಾಗಿ, ವಿಶ್ವಾಸದಿಂದ ಕಂಡರೆ ಸಾಕು '

ಕಡ್ಡಿ ಮುರಿದಂತೆ ತನ್ನ  ನಿರ್ಧಾರಗಳನ್ನು ತಿಳಿಸುತ್ತಿದ್ದವಳನ್ನು ಕಂಡು
ಅಚ್ಚರಿಯಾಯ್ತು.    ' ನಿನ್ನ ತಲೆಯಲ್ಲಿ ಯಾರಾದ್ರು ಇರುವರ.  ಅಂದ್ರೆ ಇನ್
ಪರ್ಟಿಕ್ಯುಲರ್ ಇವನು  ಆಗಿದ್ರೆ ನಿನ್ನ ಲೈಫು ಚೆನ್ನಾಗಿರುತ್ತೆ ಅನ್ನೋ ಆಸೆ ಆಕಾಂಕ್ಷೆ
ಏನಾದ್ರು ಇದಿಯಾ. ? '  ಎಂದು ಕೇಳಿದೆ.  ಬಹುಷಃ ಮದುವೆ ಮಾಡಲು ಗಂಡು ಹುಡುಕುತ್ತಿರುವ
ಮನೆಯಲ್ಲಿ  ಹುಡುಗಿಗೆ ಕೇಳಬಹುದಾದ ಅತ್ಯಂತ ಅನಾಗರಿಕ ಪ್ರಶ್ನೆ ಇದು ಎಂದೆನಿಸಿತು.

ನಗುತ್ತಾ ಹೇಳಿದಳು. "ಈ  ವಿಷಯದಲ್ಲಿ ನನಗೆ ಅಷ್ಟು ಫ್ಯಾಂಟಸಿಗಳಿಲ್ಲ.  ಇದರ ಸಂಪೂರ್ಣ
ಜವಾಬ್ದಾರಿಯನ್ನ ನಮ್ಮ  ಪಪ್ಪ-ಮಮ್ಮಂಗೆ ಕೊಟ್ಟು ಬಿಟ್ಟಿದ್ದೇನೆ.  ಪ್ರಪಂಚದ ದಿ
ಬೆಸ್ಟ್‍ ಪೇರೆಂಟ್ಸ್‍ ಅವರು. ನನ್ನ ಬಗ್ಗೆ ಅವರಿಗೆ ಎಲ್ಲಾ ಗೊತ್ತು. ಒಳ್ಳೇದನ್ನೆ
ಹುಡುಕ್ತಾರೆ ಅನ್ನೋ ನಂಬಿಕೆ. ಈ  ವಿಷಯದಲ್ಲಿ ಅವರು ಸಂಪೂರ್ಣ ಸ್ವತಂತ್ರರು. '

ಚಂಡಿ ಹೆಣ್ಣುಮಗಳಿಗೆ ಜನುಮ ನೀಡಿದ್ದೂ ಅಲ್ಲದೆ,  ಅವಳು ಬೇಕಾದ್ದನ್ನು ಯೋಚಿಸುವ,  
ಸ್ವತಂತ್ರ ವಾತಾವರಣ ನಿರ್ಮಿಸಿರುವ ಅವರ ಮನೆಯವರಿಗೊಂದು ದೊಡ್ಡ ನಮಸ್ಕಾರ ಹಾಕಿ
 ಮನೆಯಿಂದ ಹೊರಬಂದೆ.  ಅವಳೂ ಬಾಗಿಲಿನವರೆಗು ಬಂದಳು.

' ಮತ್ತೆ ಏನು..? ನಿನ್ನ ಫ್ಯೂಚರ್ ಪ್ಲಾನ್ಸು ? " ಎಂದು ಕೇಳಿದಳು.  ನಾನೂ ಯೋಚಿಸಿದೆ.
 ಬಹುಷಃ ಕಂಪನಿಗಳನ್ನು ಬದಲಿಸುತ್ತಾ ಹೆಚ್ಚು-ಹೆಚ್ಚು ಸಂಬಳ ಪಡೆಯುವುದಿರಬಹುದು
ಎನಿಸಿತು.

ಸರಿ ಹೊರಡುವುದಾಗಿ ಹೇಳಿ, ಬೈಕ್ ಸ್ಟಾರ್ಟ್ ಮಾಡಿದೆ. ಎರಡು ಹೆಜ್ಜೆ ಮುಂದಕ್ಕೆ
 ಹೋಗುವುದರೊಳಗಾಗಿ, ಬೈಕಿನ ಹ್ಯಾಂಡಲ್ ತಿರುಗಿಸಲಾಗದೆ ದಬಾರನೆ ಬಿದ್ದೆ.  ನೆಲಕ್ಕೆ
ಬಿದ್ದರೂ  ಬೈಕು ಬರ್ರೋ.  ಎಂದು ಹೊಡೆದುಕೊಳ್ಳುತ್ತಿತ್ತು.   ಅವಳು ಹೊರ ಬಂದವಳೇ
ಬೈಕ್‍ನ ಇಗ್ನಿಷನ್ ಆಫ್ ಮಾಡಿದಳು.  ಸಾವರಿಸಿಕೊಡು ಮೇಲೇಳುವಾಗ  'ನೀ ಯಾವಾಗ್ಲೋ
ದೊಡ್ಡವನಾಗೋದು. ? ಹ್ಯಾಂಡಲ್ ಲಾಕ್ ತೆಗೀದೆ ಬೈಕ್ ಬಿಡ್ತೀಯಲ್ಲ.  ಅಷ್ಟು
ಕಾಮನ್-ಸೆನ್ಸ್‍ ಇಲ್ವಾ ' ಎಂದಳು. ಹಿಂತಿರುಗಿ ನೋಡದೆ ಹೊರಟೆ.