ಕಪ್ಪು ಗುಲಾಬಿ

ಅದೊಂದು ಗೋವಾದ ಪ್ರೈವೇಟ್ ಬೀಚು. ಮಲೈಮಾ ಕಂಪನಿಯಿಂದ, ಸಹೋದ್ಯೋಗಿಗಳೆಲ್ಲಾ ಮೂರು ದಿನಗಳ ಪ್ರವಾಸಕ್ಕೆಂದು ಹೋಗಿದ್ದರು. ಗೆಳೆಯರ ಗುಂಪು ನೀರಿಗಿಳಿದು ಆಡುತ್ತಿದ್ದರು. ಅಲೆಯಿಂದ ದೂರದಲ್ಲಿ. ಮರಳಿನ ದಿಬ್ಬದ ಮೇಲೆ ಗೂಡು ಕಟ್ಟುತ್ತಾ ಒಂಟಿಯಾಗಿ ಕುಳಿತಿದ್ದಳು ರಾಧ.

ನೀರಿನಿಂದ ಹೊರ ಬಂದು ವಿನೋದ, ರಾಧಾಳ ಬಳಿ ಕುಳಿತ. ‘ಏನಿದು ತಾಜಾ ಮಹಲ ಅಥವಾ ರಾಧ ಮಂಟಪಾನ. ?’ ಅವಳು ಕಟ್ಟುತ್ತಿದ್ದ ಗೂಡಿಗೆ ಹಿಂಬದಿಯಿಂದ ತೂತು ಕೊರೆಯುತ್ತಾ ಕೇಳಿದ.

‘ ಎರಡೂ ಅಲ್ಲ ’ ಎನ್ನುತ್ತಾ ಮೆತ್ತಗೆ ಕೈ ಹೊರ ತೆಗೆದಳು. ಗೂಡು ಬೀಳಲಿಲ್ಲ. ‘ವಿನು ಒಂದು ವಾಕ್ ಹೋಗಿ ಬರೋಣ. ಬಂದು ಹೋಗೋ ಅಲೆಗಳ ಹಸಿ ಮರಳಿನ ಮೇಲೆ ಹೆಜ್ಜೆ ಗುರುತು ಬಿಡುತ್ತಾ ನಡೆಯೋದು ಚೆನ್ನಾಗಿರತ್ತೆ’

ವಿನು ನಗುತ್ತಾ ‘ಸುಂದರವಾದ ಹುಡುಗಿ, ಸೂರ್ಯಾಸ್ತ ಆಗೋ ಹೊತ್ತಲ್ಲಿ, ಸಮುದ್ರದ ದಡದಲ್ಲಿ ಹೆಜ್ಜೆ ಗುರುತು ಬಿಡೋದಕ್ಕೆ ಕರೆದರೆ ಬರಲ್ಲ ಅಂತ ಹ್ಯಾಗೆ ಹೇಳಲಿ. ನಡೆ ಹೋಗೋಣ’ ಅಂದ. ಇಬ್ಬರೂ ಎದ್ದು ಹೊರಟರು.

ಎದುರಿಗೆ ಬರುತ್ತಿದ್ದ ಬಿಕಿನಿ ಸುಂದರಿಯನ್ನು ಬಾಯಿ ಬಿಟ್ಟುಕೊಂಡು ನೋಡುತ್ತಿದ್ದ ವಿನೋದನ ಕಾಲರ್ ಹಿಡಿದು ಜಗ್ಗಿ ಹೇಳಿದಳು ‘ ನೀನು ತುಂಬಾ ಕೆಟ್ಟು ಹೋಗ್ತಾ ಇದಿಯ ಕಣೋ ’.

‘ಯಾಕೆ. ? ನಾನೇನ್ ಮಾಡಿದೆ. ?’ ಎಂದದ್ದಕ್ಕೆ ‘ಹುಡುಗೀರನ್ನೇ ನೋಡದೆ ಇರೋನ ತರಹ, ಆ ಅವಳನ್ನ ಬಾಯಿ ಬಿಟ್ಟುಕೊಂಡು ನೋಡ್ತೀಯಲ್ಲ ಅದಕ್ಕೆ. ?’ ಅವನ ತಲೆಗೆ ಮೊಟಕಿದಳು.

‘ಅದಕ್ಕೇನೀಗ, ಸುಂದರವಾಗಿರೋದು ವಸ್ತುನೆ ಆಗಲಿ, ಹುಡುಗಿನೆ ಆಗಲಿ ತನ್ಮಯತೆ ಇಂದ ನೋಡ್ತೇನೆ. ಅದನ್ನ ಬಿಟ್ಟು ಅವರಿಗೆ ಗೊತ್ತೇ ಆಗದೆ ಇರೋ ಹಂಗೆ, ನೋಡಿಯು ನೋಡದಂಗೆ. ನಿಮ್ಮ ತರ ಓರೆ-ಗಣ್ಣು ಮೋರೆ-ಗಣ್ಣು ಮಾಡ್ಕೊಂಡು ನೋಡಕ್ ಬರಲ್ಲ’

‘ನಾನೇನು ಹಂಗೆಲ್ಲ ನೋಡಲ್ಲ’ ತಣ್ಣಗೆ ಹೇಳಿದಳು. ‘ಜನರಲ್ ಆಗಿ ಹುಡುಗಿಯರ ಬಗ್ಗೆ ಹೇಳ್ದೆ ನಿನ್ನ ಬಗ್ಗೆ ಅಲ್ಲ’ ಎಂದನು. ‘ ನಿನಗೇನೊ ಗೊತ್ತು ಹುಡುಗೀರ ಬಗ್ಗೆ , ಜನರಲ್-ಲ್ ಆಗಿ ಹೇಳೋದಕ್ಕೆ ’ ಎಳೆದು ಕೇಳಿದಳು.

‘ ನನಗೇನೂ ಗೊತ್ತಿಲ್ಲ. ಆದರೆ ಒಂದು ಸಂಶೋಧನೆ ಪ್ರಕಾರ ಹುಡುಗಿಯರಿಗೆ ವೀವಿಂಗ್ ಆಂಗಲ್ ಜಾಸ್ತಿ ಇದೆಯಂತೆ. ನೂರ ಅರವತ್ತು ಡಿಗ್ರಿ ಕ್ಲಿಯರ್ ವಿಶನ್ ಇದ್ರೆ, ಇನ್ನು ನಲವತ್ತು ಡಿಗ್ರಿ ಪ್ಸೂಡೋ ಕವರೇಜ್ ಇರುತ್ತಂತೆ. ಹಿಂದೆ-ಪಕ್ಕದಲ್ಲಿ ಬರ್ತಾ ಇರೋರನ್ನ ಕೂಡ, ತಲೆ ತಿರುಗಿಸದೇ ಗಮನಿಸೋ, ಗುರುತು ಹಿಡಿಯೋ ಸಾಮರ್ಥ್ಯ ಇರುತ್ತಂತೆ. ಅದಕ್ಕೆ ನೀವು ಯಾರನ್ನ ನೋಡಿದ್ರು, ಅದು ಅವರಿಗೆ ಗೊತ್ತಾಗಲ್ಲ. ’

‘ಯಾವ ರೀಸರ್ಚು ಆ ತರಹ ಹೇಳಿದ್ದು. ’

‘ಬ್ಯಾಚುಲರ್ ಹುಡುಗರ ಲ್ಯಾಬಲ್ಲಿ ಇಂತಹ ಥೀಸಿಸ್ ಗಳು ತುಂಬಾನೆ ಪಬ್ಲಿಷ್ ಆಗ್ತಾ ಇರುತ್ವೆ. ಆದರೆ ಇಂತವನ್ನ ಯುನಿವರ್ಸಿಟಿಗಳು ಒಪ್ಪಿಕೊಳ್ಳೋದಿಲ್ಲ. ’

‘ನಿನ್ನ ಮೊಕ. ಎಲ್ಲಾ ಸುಳ್ಳು . ಹಂಗೆಲ್ಲ ಏನೂ ಇಲ್ಲ. ನಿಮ್ಮ ಖುಷಿಗೆ ನೀವು ಹಂಗೆಲ್ಲಾ ಅಂದ್ಕೊತೀರ. ಹುಡುಗಿ ನೋಡದೆ ಇದ್ದರೂ ನೋಡಿದ್ಲು ಅನ್ನೋ ಫೀಲ್ ಬೇಕಲ್ಲಾ. ’

‘ಇದು ತಪ್ಪು ಕಲ್ಪನೆ ಅಂತೀಯ. ? ಎಲ್ಲಿ ಹಂಗಾದ್ರೆ ನೀನು ಮುಂದೆ ಹೋಗು. ನಾನು ಹಿಂದೆ ಹಿಂದೆ ಬರ್ತೇನೆ. ಈಗಲೇ ಟೆಸ್ಟು ಮಾಡಿ ಸರ್ಟಿಫೈ ಮಾಡಿ ಬಿಡೋಣ. ’ ಅವಳ ಹಿಂದಕ್ಕೆ ಹೋಗುತ್ತಾ ಹೇಳಿದ.

‘ಬೇಡಪ್ಪ, ನೀನು ಜಗಮೊಂಡ. ಅಕಸ್ಮಾತ್ ಸೋತ್ರೆ. ನಿನಗೆ ಸರಿಯಾಗಿ ಕಣ್ಣೇ ಕಾಣ್ಸಲ್ಲ ಅಂತ ಹೇಳಿ ಹಾರಿಕೊಳ್ತಿಯ. ’ ಎಂದಳು. ಇಬ್ಬರೂ ಸುಮ್ಮನಾದರು. ಆದರು ಅವಳು ತನ್ನ ಕಣ್ಣು ಗುಡ್ಡೆಗಳನ್ನು ಅಂಚಿಗೆ ದೂಡುತ್ತಾ ತನ್ನ ಭುಜದ ನೇರಕ್ಕೆ ಇರುವುದನ್ನು ಗಮನಿಸಲು ಪ್ರಯತ್ನಿಸುತ್ತಿದ್ದಳು. ಅವಳ ಸೋಲದ ಕಣ್ಣುಗಳನ್ನು ನೋಡಿ ಅವನು ನಗಲು ಪ್ರಾರಂಭಿಸಿದ. ಮುಷ್ಠಿ ಬಿಗಿ ಮಾಡಿ ಅವನ ಬೆನ್ನಿನ ಮೇಲೊಂದು ಹೊಡೆದಳು.


‘ ತುಂಬಾ ವರುಷಗಳಿಂದ ಒಂದು ಗುಲಾಬಿ ಗಿಡ ಬೆಳೆಸ್ತಾ ಇದ್ದೆ. ಮೊನ್ನೆ ಪುಟ್ಟದಾಗಿ ಒಂದು ಬಡ್ ನಿಂದ ಮೊಗ್ಗು ಬಂತು. ಕೊನೆಗೂ ಒಂದು ಹೂವು ಬಿಡ್ತಲ್ಲಾ ಅಂತ ತುಂಬಾನೇ ಖುಷಿ ಆಯ್ತು ಆದರೆ ನನ್ನ ಹಣೆ ಬರಹ ಚೆನ್ನಾಗಿರಲಿಲ್ಲ. ಬಂದಿದ್ದು ಕೆಂಪು ಗುಲಾಬಿ ಅಲ್ಲ. ಕಪ್ಪು ಗುಲಾಬಿ.’ ವಿನೋದ ಹೇಳುತ್ತಾ ಹೋದ.

‘ ಕಪ್ಪು ಗುಲಾಬಿ ತುಂಬಾನೆ ಸ್ಪೆಷಲ್ ರೋಜ್ ಅಂತೆ. ಒಳ್ಳೆಯದಲ್ವಾ.’ ಕೇಳಿದಳು ರಾಧ.

‘ ಹಾ ಅದು ಸ್ಪೆಷಲ್ ನಾನು ಬಯಸಿದ್ದು ಕಪ್ಪು ಗುಲಾಬಿ ಅಲ್ವಲ್ಲಾ. ? ’ ಎಂದ. ಅವಳಿಗದು ಅರ್ಥವಾಗಲಿಲ್ಲ. ಇಬ್ಬರ ಮಧ್ಯೆ ಮೌನ ಆವರಿಸಿತು. ತಣ್ಣನೆಯ ಗಾಳಿ ಸುಯ್ಯೋ ಎಂದು ಬೀಸುತ್ತಿತ್ತು. ಕೆಳಗಿಳಿದು ಬರುತ್ತಿದ್ದ ಸೂರ್ಯ ಕಡಲು ಸಮೀಪಿಸುತ್ತಿದ್ದಂತೆ ತನ್ನ ಕಿರಣಗಳ ಅಗಾಧ ಬಾಹುಗಳನ್ನು ಒಳಗೆ ಎಳೆದು ಕೊಳ್ಳುತ್ತಾ ಕೆಂಪಗಾಗುತ್ತಿದ್ದ.

‘ನಮ್ಮ ಮನೇಲಿ ನನ್ನ ಮದುವೆ ಮಾಡ್ತಾ ಇದಾರೆ. ’ ಆವರಿಸಿದ್ದ ಮೌನಕ್ಕೊಂದು ಡಿ ಟಿ ಎಸ್ ಎಫೆಕ್ಟು ಕೊಟ್ಟು ಹೇಳಿದಳು. ‘ಹೇಯ್ ಕಂಗ್ರಾಟ್ಸು’ ಎಂದ. ಸೂರ್ಯ ಮುಳುಗುವ ಧಾವಂತದಲ್ಲಿದ್ದ. ‘ನಂಗೆ ಈಗ್ಲೆ ಮದ್ವೆ ಬೇಡ ಅಂತ ಇದೀನಿ. ಆದರೆ ಇಬ್ಬರು ಹುಡುಗರು ಬಂದು ನೋಡ್ಕೊಂಡು ಹೋಗಿದಾರೆ. ಫೇಸ್ ಬುಕ್ಕಲ್ಲಿ ಮುಖ ನೋಡಿ ಸೀದಾ ಮನೆಗೆ ಬಂದಿದ್ರು ಹೆಣ್ಣು ಕೇಳೋದಕ್ಕೆ. ’ ಎಂದಳು.

‘ಹೌದಾ, ಮನೆಗ್ ಬಂದು ನಿನ್ನ ನೇರವಾಗಿ ನೋಡಿ ಹೋಗಿದ್ದಾರೆ ತಾನೆ. ಯೋಚನೆ ಬೇಡ ಮತ್ತೆ ಅವರು ನಿನ್ನ ಮನೆ ಇರೋ ಏರಿಯಾ ಕಡೆಗೂ ತಲೆ ಹಾಕಲ್ಲ. ನೀನು ಆರಾಮಾಗಿ ಇರಬಹುದು. ’ ವಿನೋದ ಛೇಡಿಸಿದ.

‘ತಮಾಷೆ ನಿನಗೆ ಕಿಂಡಲ್ ಮಾಡ್ತೀಯ. ನಾನು ಹೋಗ್ತೇನೆ. ’ ಎನ್ನುತ್ತಾ ಅವಳ ಕಾಲ ಬಳಿಗೆ ಬರುತ್ತಿದ್ದ ಅಲೆಯಿಂದ ದೂರ ಓಡಿದಳು. ಅಲೆ ಹಿಂದಕ್ಕೆ ಹೋದಂತೆ ಮತ್ತೆ ವಾಪಾಸಾಗಿ ಹಿಂದೆ ಅಳಿಸಿ ಹೋಗಿರುವ ಹೆಜ್ಜೆ ಗುರುತುಗಳ ಕಡೆಗೆ ನೋಡಿದಳು.

‘ಸರಿ ಹಂಗಾದ್ರೆ ನಿನ್ನ ನೋಡೋಕೆ ಬಂದಿದ್ದ ಇಬ್ಬರು ಮಧುಮಕ್ಕಳು ಹ್ಯಾಗಿದಾರೆ. ?’

‘ನೋಡೋದಕ್ಕೆ ಇಬ್ಬರೂ ಚೆನ್ನಾಗಿದಾರೆ. ನಿನಗಿಂತಾನು. ’ ಸ್ವಲ್ಪ್ ಪಾಜ್ ಕೊಟ್ಟು .. ‘ಸೊಫೆಸ್ಟಿಕೆಟೆಡ್ ಫ್ಯಾಮಿಲಿ. ಒಬ್ಬನ ಪ್ಯಾಕೇಜು ವರುಷಕ್ಕೆ 8 ಲಕ್ಷ, ಮತ್ತೊಬ್ಬನದ್ದು ವರುಷಕ್ಕೆ ಹತ್ತು ವರೆ ಲಕ್ಷ ಅಂತೆ ’ ಎಂದಳು.

‘ದೇವುಡಾ ಮದು ಮಕ್ಳನ್ನ ಮೊಬೈಲ್ ಫೋನ್ ಖರೀದಿಗಿಂತಾನು ಕೇವಲ ಮಾಡಿ ಹಾಕಿ ಬಿಟ್ಯಲ್ಲಪ್ಪಾ. ಪ್ರೈಸ್ ಟ್ಯಾಗ್ ಅಂಟಿಸಿ ಮಾತಾಡ್ತಾರೆ ಜನ. ’ ಮೇಲೆ ನೋಡುತ್ತಾ ಹೇಳಿ ಅವಳ ಕಡೆಗೆ ನೋಡಿದ ‘ ಮನೆಯವರು ಮಾತಾಡ್ತಾ ಇದ್ದ ಶೈಲಿನಲ್ಲೇ ಹೇಳ್ದೆ ಅಷ್ಟೇ. ದಿಢೀರ್ ಅಂತ ಲೈಫಲ್ ಕಾಣ್ಸೋ ಹುಡುಗನಿಗೆ ಏನಂತ ವಿಶೇಷಣ ಇಟ್ಟು ಕರೆಯಲಿ.’ ವಿನೋದನ ವಿನೋದಕ್ಕೆ ಸಮಜಾಯಿಷಿ ನೀಡಿದಳು.

‘ ಸರಿ ಹಂಗಾದ್ರೆ ಅವರಿಬ್ಬರಲ್ಲಿ ನಿನ್ನ ಚಾಯ್ಸು ಯಾವುದು. ? ಯಾವುದು ಓ ಕೆ ಆಗಿದೆ. ?’ ಕೇಳಿದ. ಅವನ ಪ್ರಶ್ನೆಯಲ್ಲಿದ್ದ ಕುತೂಹಲ ಅವಳ ಗಮನಕ್ಕೆ ಬರಲಿಲ್ಲ.

‘ಅದರಲ್ಲಿ ಕನ್-ಫ್ಯೂಸ್ ಆಗೋ ಮಾತೆ ಇಲ್ಲ. of course ಹತ್ತು ವರೆ ಹುಡುಗ’ ಕಡ್ಡಿ ತುಂಡು ಮಾಡಿದಂತೆ ಹೇಳಿದಳು.

‘ ಇನ್ನು ಸ್ವಲ್ಪ ದಿನ ತಡ್ಕೊಳೆ ಇದಕ್ಕಿಂತ ಜಾಸ್ತಿ ಸಂಬಳ ಇರೋನು ಸಿಗಬಹುದು ಅಥವಾ ಇವನಿಗೆ ಸಂಬಳ ಜಾಸ್ತಿ ಆಗಬಹುದು. ’ ವಿನೋದ ಹಂಗಿಸುವ ಧನಿಯಲ್ಲಿ ಹೇಳಿದ. ‘ಏನು ಕಿಂಡಲ್ಲಾ? ’ ಎನ್ನುತ್ತಾ ಅವನನ್ನೊಮ್ಮೆ ಗುರ್ರನೆ ನೋಡಿದಳು

‘ ನೀನು ಹೇಳೋ ರೀತಿ, ಇದರಲ್ಲಿ ಕಮರ್ಷಿಯಲ್ ಆಗಿರೋದು ಏನೂ ಇಲ್ಲ. ತುಂಬಾ ಸಿಂಪಲ್ ಸ್ಟ್ರೇಟ್. ನೋಡೋದಕ್ಕೆ ಸುಮಾರಾಗಿದ್ದು ಇಬ್ಬರಲ್ಲಿ ಯಾರೇ ಆದರೂ ನಡೆಯತ್ತೆ ಅಂತ ಆದಾಗ ಕಡಿಮೆ ಅನುಕೂಲತೆ ಇರೋ ಕಡೆ ಯಾಕ್ ಹೋಗಬೇಕು.. ?’ ಪ್ರಶ್ನಾರ್ಥಕವಾಗಿ ನೋಡಿದಳು. ‘ ಪಾಯಿಂಟ್ ಟು ಬಿ ನೋಟೆಡ್ ನಾನೂ ಒಪ್ತೇನೆ. ’ ಎಂದ. ‘ ಹಳ್ಳಿ ಕಡೆ ಆದ್ರೆ, ಹುಡುಗನ ಮನೇಲಿ ಜಮೀನು ಎಷ್ಟು ಇದೆ ಅಂತ ನೋಡ್ತಾರೆ. ಸಿಟಿನಲ್ಲಾದ್ರೆ, ಸ್ವಂತ ಮನೆ ಇದಿಯಾ ಸೈಟು ಇದಿಯಾ ಅಂತ ನೋಡ್ತಾರೆ. ಗೊರ್ಮೆಂಟು ಕೆಲಸ ಇದ್ರೆ, ಜೀವನಕ್ಕೆ ಮೋಸ ಇಲ್ಲ ಅಂತಾರೆ ಪ್ರೈವೇಟ್ ಆದ್ರೆ, ಸಿಕ್ಕ ಷ್ಟು ದಿನ ಎಷ್ಟು ದುಡ್ಡು ಮಾಡಬಹುದು ಅಂತ ಲೆಕ್ಕ ಹಾಕ್ತಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಒಳ್ಳೆ ಕ್ವಾಲಿಫಿಕೆಶನ್ ಇದ್ದೀಯ ಅಂತ ನೋಡ್ತಾರೆ. ಮದುವೆ ಅಂದ್ರೆ ಸುಮ್ಮನೇನ ಸೆಕ್ಯುರಿಟಿ ಫೀಲಿಂಗ್ ಬರಬೇಕು ತಾನೇ. ’ ಮತ್ತದೇ ಪ್ರಶ್ನಾರ್ಥಕ ಭಾವದಿಂದ ವಿನೋದನ ಕಡೆಗೆ ನೋಡಿದಳು. ವಿನೋದ ಅವಳ ನಿರ್ಧಾರಕ್ಕೆ ಸಮರ್ಥನೆ ಕೇಳಿರಲಿಲ್ಲ. ಆದರು ತನ್ನ ಸಮಾಧಾನಕ್ಕೆ ಒಪ್ಪಿಸುತ್ತಿದ್ದಳು. ಈಗ ವಿನೋದನ ವರಸೆ ಪ್ರಾರಂಭವಾಯ್ತು.

‘ಆರ್ಥಿಕ ಭದ್ರತೆ, ಸಾಮಾಜಿಕ ಭದ್ರತೆ ಜೊತೆಗೆ compromise ಆದ ಮೇಲೆ ಗಂಡಿಗೆ ಮತ್ತು ಹೆಣ್ಣಿಗೆ ಒಂದು ಅಸ್ತಿತ್ವ ಅಂತ ಬರತ್ತೆ. ಅದಕ್ಕಿಂತ ಮುಂಚೆ ಅವರು ಮಾತಾಡೋದು ಕೂಡ ಧರ್ಮ-ಬಾಹಿರ. ಇದಾದ ಮೇಲೆ ಸಮಾಜ ಸಮಾನ ವೇದಿಕೆ ಅಂತ ಕೊಡುತ್ತೆ. ಅಷ್ಟರಲ್ಲಿ ಒಬ್ಬರಿಗೊಬ್ಬರು ಅರ್ಥ ಆಗೋದಕ್ಕೆ ಶುರು ಮಾಡ್ತಾರೆ. ತುಂಬಾನೆ ಅರ್ಥಾನು ಆಗ್ತಾರೆ. ಭೂಮಿ ಮೇಲಿರೋ ಪವಿತ್ರ ಸಂಬಂಧಗಳನ್ನೆಲ್ಲಾ ಸಾಕ್ಷಿಯಾಗಿ ಇಟ್ಟುಕೊಂಡು ಸಪ್ತಪದಿ ತುಳಿತಾರೆ. ಆತ್ಮಸಾಕ್ಷಿ ಒಂದನ್ನು ಬಿಟ್ಟು. ಅಷ್ಟೆ. ತಾನೆ. ? ಅಷ್ಟು ದಿನ ಅಪ್ಪ-ಅಮ್ಮ ಕೂತಿದ್ದ ಸೀಟಿನ ಮಧ್ಯೆ ಬೆಚ್ಚಗೆ ಕುಳಿತು ಜರ್ನಿ ಮಾಡ್ತಾ ಇದ್ದವರು ಮುಂದಿನ ಸೀಟಲ್ಲಿ ವಿಂಡೋ ಪಕ್ಕ ಒಬ್ಬರೇ ಹೋಗಿ ಕುತ್ಕೊತಾರೆ. ಇನ್ನು ಉಳಿದಿರೋ ಜರ್ನಿಗೆ ಪಕ್ಕದ ಖಾಲಿ ಸೀಟಿನಲ್ಲಿ ಕೂರೋದಕ್ಕೆ ಒಂದು ಜೀವ ಬೇಕು. ಕೆಲವರಿಗೆ ಆಪ್ಷನ್ ಗಳು ಇರುತ್ವೆ. ಇನ್ನು ಕೆಲವರಿಗೆ ಯಾರಾದ್ರು ಕೂತರೆ ಸಾಕಪ್ಪ ಅನ್ನೋ ಅಸಹಾಯಕ ಪರಿಸ್ತಿತಿ. ಯಾಕೋ ಎಲ್ಲರೂ ನಾಟಕ ಮಾಡ್ಕೊಂಡು ಜರ್ನಿ ಮಾಡ್ತಾ ಇದಾರೆ ಅನ್ಸತ್ತೆ. ಒಬ್ಬರ ಜೊತೆ ತಮ್ಮ ಇಡಿ ಜೀವನವನ್ನು ಹಂಚಿಕೊಳ್ಳೋದು ಅಂದ್ರೆ ಇಷ್ಟು ಕೇವಲ ಆಗೋಯ್ತಾ. ? ಸೋತಾಗ ಅಂಗೈ ಮೇಲಿಡುವ ಆ ಬೆಚ್ಚನೆಯ ಸ್ಪರ್ಶ, ಗೆದ್ದಾಗ ಹೇಳಿಕೊಳ್ಳಬೇಕು ಅನ್ನಿಸೋ ಆ ಮೊದಲ ಜೀವ, ನಿನಗೋಸ್ಕರ ಅಂತಾನೆ ಈ ಬದುಕು ಅನ್ನೋ ಆ ಸಮರ್ಪಣಾ ಭಾವ ಪ್ರೀತಿ ಅಂದ್ರೆ. ’ ವಿನೋದನ ಉದ್ದನೆಯ ಮಾತುಗಳನ್ನು ಮಧ್ಯದಲ್ಲಿಯೇ ತುಂಡರಿಸುತ್ತಾ ರಾಧ ಹೇಳಿದಳು

‘ಮೊದಲನೆಯಾದಾಗಿ ಒಬ್ಬರಿಗೊಸ್ಕರ ಒಬ್ಬರು ಬದುಕಬೇಕು ಅನ್ನೋದೇ ದೊಡ್ಡ ಮಿಥ್. ಎಲ್ಲರೂ ಅವರಿಗೋಸ್ಕರ ಬದುಕ್ತಾರೆ. ಅವರಿಗೊಸ್ಕರಾನೆ ಬದುಕಬೇಕು. ತಾವು ಸೋತಾಗ ತಮ್ಮಲ್ಲೇ ಸಾಂತ್ವಾನ ಕಂಡುಕೊಳ್ಳಬೇಕು. ನಾವು ಗೆದ್ದಾಗ ಎಲ್ಲರಿಗಿಂತ ಮೊದಲು ನಾವು ಅದನ್ನ ಸಂಭ್ರಮಿಸಬೇಕು. ಇದನ್ನೆಲ್ಲಾ ಹೊರಗಿಂದ ಯಾರೋ ಮಾಡಬೇಕು ಅಂತ ಕಾಯೋದಾಗಲಿ ಅಥವಾ ಇಂತವನ್ನೆಲ್ಲಾ ಹೊರಗಿನವರಿಗೆ ಮಾಡಬೇಕು ಅಂತ ತುದಿಗಾಲಲ್ಲಿ ನಿಲ್ಲೋ ದೊಡ್ಡತನ ಆಗಲಿ ಫೂಲಿಶ್ ನೆಸ್ ಅಂತ ಅನ್ಸತ್ತೆ. ಸಾಂತ್ವಾನ ಹೇಳೋ ಬಾಯಿಗಳು ಜಾಸ್ತಿ ಆದಷ್ಟು ನಾವೆಷ್ಟು ದುರ್ಬಲರು ಅನ್ನೋದು ಗೊತ್ತಾಗ್ತಾ ಹೋಗತ್ತೆ. ಅಸಹ್ಯ ಆಗತ್ತೆ. ಕೊನೆ ಪಕ್ಷ ನಮ್ಮ ಮೇಲೆ ನಾವು ಸಂಪೂರ್ಣ ಹಕ್ಕುದಾರರು ಆಗಿರಬೇಕು. ಆ ಅಧಿಕಾರವನ್ನೂ ಪ್ರೀತಿ ಪ್ರೇಮ ಕಾಳಜಿ ಅನ್ನೋ ಹೆಸರಲ್ಲಿ ಮತ್ತೊಬ್ಬರಿಗೆ ಕೊಟ್ರೆ ನಾವು ನಿರುದ್ಯೋಗಿ ಗಳಾಗಿ ಬಿಡ್ತೇವೆ. ಹೊಸ ಹುಡುಗ ಬರೋದ್ರಿಂದ, ಹೊಸ ಹುಡುಗಿ ಬರೋದ್ರಿಂದ ಒಬ್ಬರ ಜೀವನದಲ್ಲಿ ಪವಾಡಗಳು ನಡೆದು ಬಿಡತ್ತೆ ಅಂತೆಲ್ಲಾ ಅಂದುಕೊಳ್ಳೋದು ಮೂರ್ಖತನ ಯಾವತ್ತಿನದ್ದೋ ಗ್ರೂಪ್ ಫೋಟೋದಲ್ಲಿ ನಗ್ತಾ ನಗ್ತಾ ಪೋಸು ಕೊಡುತ್ತಿರುವ ಒಬ್ಬನನ್ನು, ಅದೇ ಫೋಟೋದಲ್ಲಿರುವ ಮತ್ತೊಬ್ಬನ ಬಗ್ಗೆ ಇವತ್ತು ವಿಚಾರಿಸು. ? ಏನೂ ಗೊತ್ತಿಲ್ಲ ಅಂತಾನೆ. ಟಚ್ ನಲ್ಲಿ ಇಲ್ಲ ಅಂತಾನೆ. ಸಮಯ ಅಂದ್ರೆ ಹಾಗೇನೆ ಸಂಬಂಧಗಳು ಅಂದರೆ ಹಾಗೇನೆ. ಒಬ್ಬರ ಮುಖ ನೋಡಿಕೊಂಡು ಒಬ್ಬರು ಇರಬೇಕಾದ ಪರಿಸ್ಥಿತಿ ಇದ್ದಾಗ ಅನಿವಾರ್ಯತೆಗೆ ಅವಶ್ಯಕತೆಗೆ ಅಂತ ಸೃಷ್ಟಿ ಆಗುತ್ವೆ. ಗ್ರೂಪ್ - ಫೋಟೋ ನಲ್ಲಿ ಹಲ್ಲು ಕಿರೀತ ಪೋಸು ಕೊಟ್ಟ ಮಾತ್ರಕ್ಕೆ ಅವರು ಒಬ್ಬರಿಗೊಬ್ಬರು ಆತ್ಮೀಯರು ಅಂತ ತಿಳಿದುಕೊಳ್ಳೋದು ತಪ್ಪು. ಕ್ಯಾಮರ ನೋಡಿದ ತಕ್ಷಣ ಸ್ಮೈಲ್ ಕೊಡೋದು ಅಭ್ಯಾಸ ಅಷ್ಟೇ. ಈಗ ಸೃಷ್ಟಿ ಆಗ್ತಾ ಇರೋ ಈ ಗಂಡ ಅನ್ನೋ ಹೊಸ ಸಂಬಂಧ ಕೂಡ ಅಷ್ಟೇ. ನನ್ನ ಜೀವನದಲ್ಲಿ ಬರ್ತಾ ಇರೋ ಈ ಹೊಸ ವ್ಯಕ್ತಿಯನ್ನ ಅಷ್ಟೇ ಆದರದಿಂದ ಬರ ಮಾಡಿಕೊಳ್ತೇನೆ. ನನ್ನ ಅಪ್ಪ ಅಮ್ಮನ ರೀತಿ ನನ್ನ ತಂಗಿ ಅಣ್ಣನ ರೀತಿ ನನ್ನ ಜೀವನದಲ್ಲಿ ನನಗೆ ಪಾಲು ಕೇಳಿರುವ ಅಷ್ಟೂ ಕ್ರಿಯೇಚರ್ ಗಳ ರೀತಿ. ಆದರೆ ಇಲ್ಲ-ಸಲ್ಲದ ಹಳೆ ನೆನಪುಗಳ ಹ್ಯಾಂಗ್ ಓವರ್ ಆಗಲಿ ಹಾಗಿರಬೇಕು ಹೀಗಿರಬೇಕು ಅನ್ನೋ ಹೊಸ ಕನಸುಗಳ ಬ್ಲಾಕ್-ಮೇಲ್ ಆಗಲಿ ಇಲ್ಲ. ಇದೂ ಕೂಡ ಜೀವನದ ಒಂದು ಭಾಗ ಅಷ್ಟೇ. ಭಾವನಾತ್ಮಕವಾಗಿ ತುಂಬಾ ಹೈಪ್ ಕೊಡುವ ಅವಶ್ಯಕತೆ ಇಲ್ಲ.’

ಈಗ ವಿನೋದ ಏನೂ ಮಾತನಾಡಲಿಲ್ಲ. ಒಳಗೇ ಏನನ್ನೋ ಗೊಣಗುತ್ತಾ ತಲೆ ಆಚೀಚೆ ಆಡಿಸುತ್ತಿದ್ದ. ಬೆಳಕು ಮೆಲ್ಲಗೆ ಖಾಲಿಯಾಗಿತ್ತುತ್ತು. ಮಾತುಗಳೂ ಕೂಡ. ಒಂದಷ್ಟು ದೂರ ಸಾಗಿದ ಮೇಲೆ ಇಬ್ಬರೂ ಅದೇ ದಾರಿಯಲ್ಲಿ ವಾಪಾಸು ಬರಲಾರಂಭಿಸಿದರು. ತುಂಬಾ ಮಾತು ಆಡಿದ ಮೇಲೆ ಮೂಡುವ ಇಂತಹ ವಿಶೇಷ ಮೌನವು ಖಗ್ರಾಸ ಸೂರ್ಯ ಗ್ರಹಣದಂತೆ ಎರಡು ಕ್ಷಣ ಆತ್ಮ ವಿಮರ್ಶೆ ಮಾಡಿಕೊಳ್ಳಲು ಜಗತ್ತಿಗೆ ನೆರಳು ತೋರಿಸುವಂತೆ. ವಿನೋದನೇ ಕೇಳಿದ ‘ ಹಂಗಾದ್ರೆ ಈ ಪ್ರೀತಿ, ಮದುವೆ, ವಿಷ್ ಲಿಸ್ಟುಗಳು ಇದರಲ್ಲೆಲ್ಲಾ ವಿಶೇಷತೆ ಇಲ್ಲ ಅಂತೀಯ. ? ಒಂದು ರಾಂಗ್ ಸೆಲೆಕ್ಷನ್ ಜೀವನ-ಶೈಲಿಯನ್ನೇ, ಕನಸುಗಳನ್ನೇ ಕೊಂದು ಹಾಕಿ ಬಿಡೋದಿಲ್ವೆ. ?’

‘ ಇವತ್ತಿನವರೆಗೂ ನಾವು ಹ್ಯಾಗಿರ್ತೆವೋ ಮುಂದೇನು ಹಾಗೆ ಇರ್ತೇವೆ. ನಾವು ನಾವಾಗಿಯೇ ಇದ್ರೆ ಪ್ರೀತಿ-ಕಾಳಜಿ ಹೆಸರಲ್ಲಿ ನಮ್ಮನ್ನ ಯಾರೋ influence ಮಾಡೋದಕ್ಕೆ ಬಿಡದೇ ಇದ್ರೆ. ನಮ್ಮ ಹಾಗೆ ನಾವು ಇರೋದಕ್ಕೆ ಸ್ವಲ್ಪ ಸ್ಪೇಸ್ ಮಾಡ್ಕೋಬೇಕು. ಅದನ್ನ ಯಾರೂ ಮಾಡಿ ಕೊಡಲ್ಲ ನಾವೇ ಮಾಡ್ಕೊಬೇಕು. “ ಎಂದಳು. ” ಇಷ್ಟೊಂದು ಕ್ಯಾಲು -ಕ್ಲೇಟೆಡ್ ಆಗಿ. ಪ್ಲೇನ್ ಆಗಿ ಇರತ್ತಾ. ಲೈಫು ? ’

‘ ofcourse ನಾವು ಸಿಂಪಲ್, ಸ್ಟ್ರೇಟ್ ಆಗಿ ಇದ್ರೆ ’

‘ ಹಂಗಾದ್ರೆ ಹಳೆ ನೆನಪುಗಳು ಕಳೆದು ಹೋಗಿರೋ ಸಂಬಂಧಗಳು ಕಾಣೆಯಾಗಿರೋ ಪಾತ್ರಗಳು ಕಾಡೋದಿಲ್ವಾ. ? ’ ಮುಗ್ಧವಾಗಿ ಕೇಳಿದ.

‘ ಮರೆವು ಅನ್ನೋದು ದೌರ್ಬಲ್ಯ ಅಲ್ಲ, ಅದೇ ನಮ್ಮ Strength. ಹೊಸ ಹೊಸದನ್ನು ಮೊದಲನೇ ಸಾರಿ ಅನುಭವಿಸೋದಕ್ಕೆ ನಮ್ಮ ಹತ್ರ ಸಾಕಷ್ಟು ಸಮಯ ಇಲ್ಲ. ಹೀಗಿರೋವಾಗ ನೆನಪುಗಳ ಮೆಲುಕುಗಳಲ್ಲಿ ಸಮಯ ಹಾಳು ಮಾಡೋದಾ. ? ಅನುಭವಗಳು ಅನ್ನೋದು ತಾಜಾ ಹಣ್ಣುಗಳ ರೀತಿ ಹುಳಿಯಾಗಿರತ್ತೋ, ಸಿಹಿಯಾಗಿರತ್ತೋ ರುಚಿ ಅಂತೂ ಇರತ್ತೆ. ಅದನ್ನ ಅನುಭವಿಸೋದು ಬಿಟ್ಟು , ಒಂದಾನೊಂದು ಕಾಲದ ನೆನಪುಗಳ ಹಂಗಲ್ಲಿ ಬಿದ್ರೆ ಹಣ್ಣುಗಳು ಕೊಳೆತು ಹೋಗುತ್ವೆ’. ‘ ಎಂದಳು.

ಇಬ್ಬರೂ ಹೊರಟಿದ್ದ ಜಾಗಕ್ಕೆ ಪುನಃ ತಲುಪಿದರು. ಸಂಪೂರ್ಣ ಕಪ್ಪು ಕತ್ತಲು ಆವರಿಸಿತ್ತು. ವಿನೋದ ಹೇಳಿದ ಕಪ್ಪು ಗುಲಾಬಿ ಕಥೆ ಅವಳಿಗೆ ಅರ್ಥವಾಗಿತ್ತು. ಏನೆಂದು ವಿಚಾರಿಸುವಷ್ಟರಲ್ಲಿ ಗೆಳೆಯರು ಮುತ್ತಿಕೊಂಡರು.

Read more posts on story
ಕನಸೂರು, ನನ್ನೆಲ್ಲಾ ಕೌತುಕಗಳ ಜೋಳಿಗೆ, ಬರಹಗಳಿಗೆ ದೀವಿಗೆ. ಕಥೆ, ಕವನ ಅಥವಾ ಯಕಃಶ್ಚಿತ್ ಅನ್ನಿಸುವ ಬರವಣಿಗೆಗಳಿರಬಹುದು. ತೋಚಿದ್ದು; ಗೀಚಿದ್ದು;

ಓದುಗನ ಸಹಾನುಭೂತಿ ಮತ್ತು ಪ್ರೀತಿ ಇಲ್ಲದಿದ್ದರೆ, ಬರೆದದ್ದನ್ನು ಹಂಚಿಕೊಳ್ಳೋದಕ್ಕೂ ಭಯ ಆಗತ್ತೆ. ನಿಮ್ಮ ಈ ಓದಿನ ಆಯ್ಕೆಯನ್ನು ಗೌರವಿಸುತ್ತೇನೆ. Thank you :)