ಕನಸೂರಿಗೆ ೨೨,೦೦೦ ಕ್ಲಿಕ್ಕುಗಳು; ಓದುಗರಾದ ಗೆಳೆಯರಿಗೆ ಮತ್ತು ಗೆಳೆಯರಾದ ಓದುಗರಿಗೆ ಅಭಿನಂದನಾ ಬರಹ

ಅಭಿರುಚಿ ಬೇರೆ ಬೇರೆ ಇರುವ ಗೆಳೆಯರ ಮಧ್ಯೆ ಕುಳಿತು; ಬರೆದು; ಅವರನ್ನು ಓದುವಂತೆ ಗೋಗರಿಯುವುದಿದೆಯಲ್ಲ, ಅದೊಂತರ ವಿಚಿತ್ರ ಅನುಭವ. 

ಫ್ರೆಂಡು ರವಿ ನನ್ನ ಕವಿತೆಗಳ ಹುಟ್ಟು ದ್ವೇಷಿ 'ಮಳೆಯು ಬರುತ್ತಿತ್ತು. ಅವಳು ಬಂದಳು. ದಾವಣಿ ಕೈಲಿ ಹಿಡಿದಳು, ಗೆಜ್ಜೆ ಕಟ್ಟಿದಳು' ಈ ರೀತಿ ಹೇಳುತ್ತಲಿ, ನನ್ನ ಕವಿತೆಗಳ ತೇಜೋವಧೆ ನಡೆಸುವನು. 

' ನೀನು ಒಂದಲ್ಲಾ ಒಂದಿನ ನನ್ನ ಕವಿತೆ appreciate ಮಾಡ್ತಿಯ ' ಅಂದ್ರೆ ' ಓದುದ್ರೆ
ಆಲ್ವಾ ಅದನ್ನ ಹೊಗಳೋದು. ನೀನು ಸಾವಿರ ಪೇಜ್ ಗದ್ಯ ಬರಿ. ಓದ್ತೀನಿ. ಆದರೆ ಪದ್ಯ ಬರೆದು ಮಾತ್ರ ತೋರಿಸಬೇಡ. ಈ ಕವಿಗಳಿಗೂ ಮಾಡಕ್ಕೆ ಕೆಲಸ ಇಲ್ಲ. ಪ್ರೀತಿ ಇಲ್ಲದ ಮೇಲೆ. ಹೂವು ಅರಳಿತು ಹೇಗೆ. ? ಮೋಡ ಕಟ್ಟಿ ಮಳೆ ಬಂತು ಹೇಗೆ. ? ಅಂತೆಲ್ಲಾ ಬರೀತಾರೆ. ಹೂವು ಅರಳಕ್ಕೂ, ಮಳೆ ಬರಕ್ಕೂ. ಈ ಪ್ರೀತಿಗೂ ಏನಪ್ಪಾ ಸಂಬಂಧ. ಬರುದ್ರೆ ನಮ್ಮ ದುಂಡಿರಾಜ್ ಬರೀತಾರಲ್ಲ ಹಂಗ್ ಬರೀಬೇಕು. 'ನಾವಿಬ್ಬರು ನಮಗಿಬ್ಬರು ಸಾಕಂತ ಮಧ್ಯ ರಬ್ಬರು. ` ಅಬ್ಬಾ , ಅದ್ಭುತ ಹಿಂಗ್ ಇರ್ಬೇಕು ಕವಿತೆ ಅಂದ್ರೆ. ಅದನ್ನ ಬಿಟ್ಟು 'ಅವಳು ಬಂದಳು ಗೆಜ್ಜೆ ಕಟ್ಟಿ ಕುಣಿದಳು ನಾನೊಬ್ಬ ನಾಲಾಯಕ್ ನಿಂತಿದ್ದೆ' ಅದು ಕವಿತೆ, ಅದು ಅರ್ಥ ಆಗ್ಲಿ, ಆಗದೆ ಇರ್ಲಿ, ಅದನ್ನ ಹೊಗಳೋದಕ್ಕೆ ಇನ್ನೊಂದಿಬ್ರು ಜೊತೆನಲ್ಲಿ.' 

' ಲೋ ಅದು ಕವಿಸಮಯ. ನಿನ್ನಂತ ರುಚಿ ಹೀನನ ಜೊತೆ ಇದ್ದುಕೊಂಡು, ನನ್ನ ಸಾಹಿತ್ಯ ಕೃಷಿಗೆ
ಹಿನ್ನಡೆ ಆಗ್ತಾ ಇದೆ. ಅಪ್ಪಿತಪ್ಪಿ ನಾನೇನಾದ್ರು ಬುಕ್ ಬರುದ್ರೆ ಮುನ್ನುಡಿನಲ್ಲಿ ನಿನ್ನ ಬಗ್ಗೆ ಬರಿತೇನೆ. 

' ಈ ಪುಸ್ತಕ ಇಷ್ಟು ತಡವಾಗಿ ಬರ್ತಾ ಇದೆ ಅಂದ್ರೆ, ಅದುಕ್ಕೆಲ್ಲಾ ರವಿನೆ ಕಾರಣ. ಒಂದು
ಪ್ರತಿಭೆಯನ್ನ ಬೆಳೆಯುವ ಹಂತದಲ್ಲಿ ಚಿವುಟಿ ಹಾಕುತ್ತಿದ್ದ.'  ಆಗ ಅಭಿಮಾನಿಗಳು ಸರಿಯಾಗಿ ಮಾಡ್ತಾರೆ ' ಅಂದೆ. ಅದಕ್ಕವನು 'ಆ ಪುಸ್ತಕ ಓದಿದವರೆಲ್ಲಾ ನನಗೆ ಥ್ಯಾಂಕ್ಸು ಹೇಳ್ತಾರೆ ಬಿಡು. ಇವನ ಕವಿತೆಗಳ ಟಾರ್ಚರ್ ಅನ್ನ, ಇಷ್ಟು ದಿನ ಹೆಂಗ್ ತಡೆದು ಕೊಂಡ್ರಿ ಅಂತ ಮರುಕ ಪಡ್ತಾರೆ. ಇಷ್ಟು ದಿನ ಬುಕ್ ಬರೆಯದೇ ಇರೋ ಹಂಗೆ ತಡೆದು ಹಿಡಿದದ್ದಕ್ಕೆ. ದೊಡ್ಡದೊಂದು ಬೊಕೆನು ಕಳಿಸ್ತಾರೆ ' ಅನ್ನುವನು. ಇದು ಪದ್ಯ ದ್ವೇಷಿಯ ಕಥೆಯಾದರೆ, ಗದ್ಯ ದ್ವೇಷಿ ಗೆಳೆಯ ಶ್ರೀಶೈಲ್ ನ ಮಾತು ಇಂತಿದೆ. 

' ಇರುವೆ ಸಕ್ಕರೆ ತಿನ್ನೋದರ ಬಗ್ಗೆ ಬರಿ ಅಂದ್ರೆ ಏನಪ್ಪಾ ಬರೀತಿರ. ? ಇರುವೆ ಇತ್ತು;
ಬಂತು; ಸಕ್ಕರೆ ತಿಂತು. ಫಿನೀಷ್. ಆದ್ರೆ ಈ ಕೆಸಿ ಬಡ್ಡಿಮಗ ಇರುವೆ ಸಕ್ಕರೆ ತಿನ್ನೋದನ್ನೆ, ನಾಕೈದು ಪೇಜು ಉದ್ದ ಬರೀತಾನೆ. ' ಅಂತಾನೆ. 

ಇನ್ನೊಬ್ಬ ಅಭಿಮಾನಿ ಮಿತ್ರ ಶಫಿಯ ಕಥೆ ಇಂತಿದೆ. ನಾನು ಬರೆದಿದ್ದ ಹೂನವಿಲೆಯ ಹಂತಕ ಕಥೆಯ ದೊಡ್ಡ ಅಭಿಮಾನಿ. ಮೊದಮೊದಲು ಅವನು ಹೊಗಳುವಾಗ ಖುಷಿ ಆಗ್ತಾ ಇತ್ತು. ಆನಂತರ ಇದುವರೆಗೂ, ನಾನು ಏನೇ ಬರೆದರೂ 'ಹೂನವಿಲೆಯ ಹಂತಕ ರೇಂಜಿಗೆ ಇಲ್ಲಮ್ಮಾ ಇದು. ' ಅಂತಾನೆ. ಇವನದ್ದು ಒಳ್ಳೆ ಕಥೆ ಆಯ್ತಲ್ಲ ಅನ್ನಿಸ್ತಾ ಇರತ್ತೆ. 

ಮನೆಗೆ ಯಾರಾದ್ರು ಅವನ ಸ್ನೇಹಿತರು ಬಂದ್ರೆ ಸಾಕು 'ಕವಿಗಳು ಹೂನವಿಲೆಯ ಹಂತಕ ಬರೆದಿರೋರು ' ಅಂತ ಪರಿಚಯ ಮಾಡಿಸ್ತಾನೆ. ಅವರನ್ನ ಇಂಟರ್ನೆಟ್ ಮುಂದೆ ಕೂರಿಸಿ 'ನೀವು ಈ ಕಥೆಯನ್ನ
ಓದಲೇಬೇಕು ' ಅಂತ ಹೇಳಿ ಬ್ಲಾಗ್ ಓಪನ್ ಮಾಡ್ತಾನೆ. ಪಾಪ, ಗೆಳೆತನದ ಮರ್ಜಿಗೆ ಸಿಕ್ಕಿಕೊಂಡು ಅವರು ಕಷ್ಟ ಪಟ್ಟು ಓದುವರು. 

'ಲೋ ಶಫಿ ಬಿಟ್ಟು ಬಿಡ್ಲಾ ಅವರನ್ನ ಯಾಕೆ ಹಿಂಸೆ ಮಾಡ್ತೀಯ. ? ನಿನ್ನ ಫ್ರೆಂಡ್ ಆಗಿರೋ
ಕರ್ಮಕ್ಕೆ ಅವರು ಏನೇನನ್ನೆಲ್ಲಾ ಅನುಭವಿಸಬೇಕು. ' ಅಂದ್ರೆ'ಸುಮ್ನೆ ಇರೋಮ್ಮಾ ನೀನು ಹೂನವಿಲೆಯ ಹಂತಕನನ್ನ ವರ್ಡ್ ಫೇಮಸ್ ಮಾಡ್ಬೇಕು. 'ಅಂತಾನೆ. ಒಳಗೊಳಗೆ ಖುಷಿ ಆಗತ್ತೆ ಆದರೆ ಅವನ ಗೆಳೆಯರ ಮೇಲೆ ಮರುಕಾನು ಉಂಟಾಗುತ್ತೆ. 

ಅಂತೂ ಸ್ನೇಹಿತರುಗಳೇ ಓದಿ ನನ್ನ ಬ್ಲಾಗು 22,000  ಹಿಟ್ಸು ಕ್ರಾಸ್ ಮಾಡಿದೆ. ಬರೆಯುವುದನ್ನೇ ಕಮ್ಮಿ ಮಾಡಿದ್ದಾಗ, ಮೆಚ್ಚುಗೆಯ ಮಾತುಗಳನ್ನಾಡಿ ಬ್ಲಾಗಿಗೆ ಹಾಕುವಂತೆ ಮಾಡಿದವನು ಗೆಳೆಯ 'ನಿರಂಜನ ಗೌಡ'. ಅವನಿಗೆ ಥ್ಯಾಂಕ್ ಯು. 

ಬರೆದದ್ದನ್ನು ಮೊದಲು ಓದಿ ಪ್ರತಿಕ್ರಿಯಿಸುವ ಮತ್ತು fb ಶೇರ್ ಮಾಡುವ ದೊಡ್ಡ ಮನಸ್ಸಿನ ಗೆಳೆಯರಾದ ರವಿ, ರೂಪಿ, ಅಭಿ ಗೂ ಥ್ಯಾಂಕ್ ಯು. 

ಹೆಸರುಗಳು ತುಂಬಾ ಏನಿಲ್ಲ. ಗೊತ್ತಿರುವ ಆತ್ಮೀಯ ಓದುಗರು ಅಂದ್ರೆ ಗಜು, ಶಶಿಕಿರಣ, ಶಶಾಂಕ, ಪ್ರವೀಣ್ ಕಶ್ಯಪ್,ಶಫಿ, ರಾಜೇಶ, ಅವಿನಾಶ್.. ಅಷ್ಟೇ ಅವರಿಗೂ ಥ್ಯಾಂಕ್ಸು. ಮೊದ್ಲು ಆರ್ಕುಟ್ ನಲ್ಲಿ ಶೇರ್ ಮಾಡ್ತಿದ್ದೆ. ಈಗ ಈ ಬ್ಲಾಗಿಗೆ ಮೀಡಿಯಾ ಲಿಂಕು ಅಂತಿರೋದು, ಫೇಸ್-ಬುಕ್. ನನ್ನ ಹಿಂಸೆಗಾದರೂ, ಇದನ್ನು ಓದುವ ಎಲ್ಲಾಮಿತ್ರರಿಗೂ ಮತ್ತು ಇಷ್ಟ ಪಟ್ಟು ಓದುವ ಅನಾಮಿಕ ಮಿತ್ರ ವೃಂದಕ್ಕೂ. ಕಷ್ಟ ಪಟ್ಟುಕೊಂಡು ಒಂದು ಥ್ಯಾಂಕ್ಸು ಮಾತ್ರಹೇಳಬಲ್ಲೆ. ಥ್ಯಾಂಕ್ ಯು ಸೋ ಸೋ ಮಚ್. 

Read more posts on friends
ಕನಸೂರು, ನನ್ನೆಲ್ಲಾ ಕೌತುಕಗಳ ಜೋಳಿಗೆ, ಬರಹಗಳಿಗೆ ದೀವಿಗೆ. ಕಥೆ, ಕವನ ಅಥವಾ ಯಕಃಶ್ಚಿತ್ ಅನ್ನಿಸುವ ಬರವಣಿಗೆಗಳಿರಬಹುದು. ತೋಚಿದ್ದು; ಗೀಚಿದ್ದು;

ಓದುಗನ ಸಹಾನುಭೂತಿ ಮತ್ತು ಪ್ರೀತಿ ಇಲ್ಲದಿದ್ದರೆ, ಬರೆದದ್ದನ್ನು ಹಂಚಿಕೊಳ್ಳೋದಕ್ಕೂ ಭಯ ಆಗತ್ತೆ. ನಿಮ್ಮ ಈ ಓದಿನ ಆಯ್ಕೆಯನ್ನು ಗೌರವಿಸುತ್ತೇನೆ. Thank you :)