ಚಕ್ಕಳಂಬಕ್ಕಳ ಹಾಕಿ ಕುಳಿತಿದ್ದ ಸೀನನ ಮಂಡಿಯು, ಬಲಭಾಗದಲ್ಲಿ ಕುಳಿತಿದ್ದ ಗೌತಮನ
ಮಂಡಿಗೆ ತಗುಲುತ್ತಿತ್ತು. ತನ್ನ ಅಸಮಾಧಾನವನ್ನು ತೋರಿಸಲು ಗೌತಮನು, ಆಗಾಗ ಮಂಡಿಯನ್ನು
ಮೇಲಕ್ಕೆತ್ತಿ ಸೀನನ ತೊಡೆಯ ಮೇಲೆ ಹಾಕುತ್ತಿದ್ದ. ಸೀನನ ಎಡಭಾಗದಲ್ಲಿ ಕುಳಿತಿದ್ದ
ಪುತ್ತು, ಇವರ ತಿಕ್ಕಾಟದ ಪರಿವಿಯೇ ಇಲ್ಲದೆ ಕಲಾವತಿ ಟೀಚರ್ ಹೇಳುತ್ತಿದ್ದ ಭಾರತ
ಸಂವಿಧಾನದ ಕಥೆಯನ್ನು ಕೇಳುತ್ತಿದ್ದ.

‘ಭೀಮ್ ರಾವ್ ಅಂಬೇಡ್ಕರ್ ಅವರು ಭಾರತ ಸಂವಿಧಾನದ ಕರಡು ನಕ್ಷೆಯನ್ನು ಬರೆದರು.
ಅಸ್ಪ್ರಷ್ಯತೆಯನ್ನು ಅವರು ಬಲವಾಗಿ ಖಂಡಿಸಿದರು. ಮಕ್ಕಳಾ ಅವರು ನಿಮ್ಮ ಹಾಗೆ ಸ್ಕೂಲಲ್ಲಿ
ಓದುವಾಗ ಅವರೊಬ್ಬರನ್ನೇ ಸಪರೆಟಾಗಿ ಬೇರೆ ಕಡೆ ಚೀಲದ ಮೇಲೆ ಕೂರಿಸುತ್ತಿದ್ದರು. ’

‘ಸೀನ!! ’ ಪುತ್ತು ಮೆಲ್ಲಗೆ ಮುಲುಗಿದ.

‘ಏನೋ. ?’

‘ ಅಸ್ ಪ್ರು ಶ್ ತೆ ಅಂದ್ರೆ ಏನು. ?’ ‘ಗೊತ್ತಿಲ್ಲ ಪುತ್ತು. ’

‘ ಹಾ ಅಂಬೇಡ್ಕರ್ ಅವರನ್ನ ಯಾಕೆ. ? ಬೇರೆ ಕಡೆ ಒಬ್ಬರನ್ನೇ ಕೂರಿಸ್ತಾ ಇದ್ದರು. ’ ತನ್ನ
ಎಂದಿನ ಪೆದ್ದು ಮಾತುಗಳಲ್ಲಿ ಮೆಲ್ಲಗೆ ಕೇಳಿದ ಪುತ್ತು.

‘ಹೌದೇನೋ. ? ನಿಜವಾಗ್ಲು. ಹಂಗಾದ್ರೆ ಅವರು ಪುಣ್ಯ್ ಮಾಡಿದ್ದರು ಬಿಡು’
ಎನ್ನುವಷ್ಟರಲ್ಲಿ ಗೌತಮ ತನ್ನ ಮಂಡಿಯನ್ನು ಎತ್ತಿ ಸೀನನ ಮೇಲೆ ಹಾಕಿದ.

ಸೀನ ಗುಟುರು ಹಾಕಿದ ‘ಲೇ ಗೌತಮ ಬುದ್ಧ ಬ್ಯಾಡ ನೋಡು. ಆವಾಗ್ಲಿಂದ ನೀನೆ ಮೇಲೆ ಹಾಕಿದ್ದೆ
’. ‘ಹಿಂದೆ ಮಹಾ ಪುರುಷರುಗಳೆಲ್ಲಾ ಬೀದಿ ದೀಪದಲ್ಲಿ ಓದಿ ಮುಂದೆ ಬಂದರು. ಅವರೆಲ್ಲಾ
ನಮಗೆ ಆದರ್ಶವಾಗಬೇಕು. ’ ಕಲಾವತಿ ಟೀಚರಿನ ಪಾಠ ಮುಂದುವರೆದಿತ್ತು.

‘ಪುತ್ತು ಅದು ಬೀದಿ ದೀಪ ಅಲ್ಲ ಕಣೋ. ಬುಡ್ಡಿ ದೀಪ ಅಂತಿರಬೇಕು. ಟೀಚರು ತಪ್ ತಪ್ಪು
ಓದ್ತಾ ಇದಾರೆ. ’ ಸೀನ ಹೇಳಿದಕ್ಕೆ ‘ಹೌದಾ ಹೆಂಗೆ. ’ ಅಂತ ವಿಚಾರಿಸಿದ ಪುತ್ತು.

‘ ನಾನು ರಾತ್ರಿ ಸೀಮೆ ಎಣ್ಣೆ ಬುಡ್ಡಿ ಕೆಳಗೆ ಸಮಾಜ ವಿಜ್ಞಾನ ಓದ್ತಾ ಇದ್ದೆ. ಹಂಗೇ
ನಿದ್ದೆ ಬಂದು ತೂಕಡಿಸಿದೆ. ಮುಂದೆ ತಲೆಗೂದಲು ದೀಪಕ್ಕೆ ತಾಗಿ ಚರ್ ಅಂದಾಗಲೇ ಎಚ್ಚರ
ಆಗಿದ್ದು. ನೋಡು ಇಲ್ಲಿ ಕೂದಲು ಹೆಂಗ್ ಅರ್ಧಂಬರ್ದ ಸುಟ್ಟು ಹೋಗಿದೆ.’ ಗೌತಮ ಬುದ್ಧ
ನಕ್ಕ. ಅರ್ಧ ಸುಟ್ಟು ಹೋಗಿದ್ದ ಕೂದಲು ಅದುವರೆಗೂ ಗಮನಿಸಿಯೇ ಇರಲಿಲ್ಲವೆಂಬಂತೆ ‘ಸಸ್ ’
ಎನ್ನುತ್ತಾ ನೋಡಿ ‘ಆಮೇಲೆ. ? ’ ಎಂದು ಪುತ್ತು ಪ್ರಶ್ನೆ ಮಾಡಿದ.

‘ಆಮೇಲೆ ಏನು. ಅಷ್ಟೆ. ಈವಾಗಲೇ ನಮ್ಮೂರಲ್ಲಿ ಬೀದಿ ದೀಪ ಇಲ್ಲ. ಇನ್ನು ಗಾಂಧೀಜಿ
ಕಾಲದಲ್ಲಿ ಬೀದಿ ದೀಪ ಇತ್ತಾ.’ ಸೀನನ ವರಸೆಗೆ ಪುತ್ತು ತಲೆ ಕೆರೆದುಕೊಂಡ. ಇವರ
ಗುಸುಗುಸು ಪಿಸಿಪಿಸು ಮಾತು ನಡೆದೇ ಇತ್ತು.


‘ ಪುತ್ತು. ಎದ್ದೇಳು ಮೇಲೆ. ’ ಟೀಚರು ಕೂಗಿದರು. ಗಾಬರಿಯಲ್ಲಿ ಪುತ್ತು ಎದ್ದು ನಿಂತ.
ಅಕಸ್ಮಾತ್ ವೆಂಕಟೇಶಪ್ಪ ಮಾಸ್ತರು ನಿಲ್ಲಲು ಹೇಳಿದ್ದರೆ, ಎದ್ದು ನಿಲ್ಲುವ ಮೊದಲೇ ‘ಸಾರ್
ನಾನಲ್ಲ ಸಾರ್ ಸೀನ ಮಾತಾಡಿದ್ದು. ’ ಎಂದು ಗೋಳಿಟ್ಟು ಬಿಡುತ್ತಿದ್ದ. ಆದರೆ ಕಲಾವತಿ
ಟೀಚರ್ ಆಗಿದ್ದರಿಂದ ಧೈರ್ಯವಾಗಿಯೇ ನಿಂತ. ಅವರು ಕ್ಲಾಸಿಗೆ ಬರುವಾಗ ಪ್ರತಿ ಸಾರಿಯೂ
ಕೋಲು ಮರೆತು ಬರುತ್ತಿದ್ದರು ಎಂದೇ ಎಲ್ಲಾ ಹುಡುಗರು ಭಾವಿಸಿದ್ದರು.

‘ಹೇ ಪುತ್ತು!! ನೀನು ಸೀನ ಅಕ್ಕ ಪಕ್ಕ ಕೂರಬೇಡಿ ಅಂತ ಎಷ್ಟು ಸಾರಿ ಹೇಳಿದ್ದೀನಿ.
ಆಕಳ್ಳ-ಮಾಕಳ್ಳ ಜೊತೆ ಜೊತೆ ಇದ್ರೆ ಊರನ್ನೇ ಹಾಳುಮಾಡಿ ಬಿಡ್ತೀರ. ’ ಪುತ್ತು ತಲೆ
ತಗ್ಗಿಸಿಕೊಂಡು ‘ಹಿ ಹಿ ಹಿ’ ನಗುತ್ತಾ ತಲೆ ಕೆರೆದುಕೊಂಡ. ಸೀನ ತನಗೂ ಅದಕ್ಕೂ ಸಂಬಂಧವೇ
ಇಲ್ಲವೆಂಬಂತೆ ಎತ್ತಲೋ ನೋಡುತ್ತಿದ್ದ.

‘ಪುತ್ತು ಈ ಸಾರಿ ಸ್ಕೂಲ್-ಡೇ ಗೆ ನೀನು ಗುರು-ಶಿಷ್ಯ ಅನ್ನೋ ಏಕಪಾತ್ರಾಭಿನಯ ಮಾಡಬೇಕು.
ಆಮೇಲೆ ಸ್ಟಾಫ್ ರೂಮಿಗೆ ಬಂದು ಡೈಲಾಗ್ ಹಾಳೆಗಳನ್ನು ತಗೋಂಡು ಹೋಗು. ’ ಟೀಚರ್ ಹೇಳಿದರು.

‘ಟೀಚರ್ ನನ್ನ ಜೊತೆ ಮತ್ಯಾರು ಪಾಲ್ಟು ಮಾಡ್ತಾರೆ ’ ಕೇಳಿದ. ಎಲ್ಲರೂ ಗೊಳ್ಳೆಂದು
ನಕ್ಕರು. ‘ದಡ್ಡಾ ಏಕಪಾತ್ರಾಭಿನಯ ಅಂದ್ರೆ ಒಬ್ಬರೇ ಮಾಡೋದು. ಗುರು ಮತ್ತೆ ಶಿಷ್ಯ
ಇರ್ತಾರೆ. ಇಬ್ಬರ ಪಾತ್ರವನ್ನು ನೀನೆ ಮಾಡಬೇಕು. ಮೊದಲು ನಾನು ಕೊಡೊ ಡೈಲಾಗ್ ಶೀಟು
ಬಯಾಟ್ ಹೊಡ್ಕೊಂಡು ಬಾ. ಆಮೇಲೆ ಅದನ್ನ ಹೆಂಗ್ ಮಾಡಬೇಕು ಅನ್ನೋದನ್ನ ನಾನು
ಹೇಳಿಕೊಡ್ತೀನಿ. ’ ಅಂದರು. ನಾಲ್ಕನೇ ತರಗತಿಯಲ್ಲಿದ್ದ್ ನಲವತ್ತೆರಡು ಜನರಲ್ಲಿ
ತನ್ನನ್ನೇ ಹುಡುಕಿ, ನಾಟಕ ಮಾಡಲು ಹೇಳಿದ್ದಕ್ಕೆ ಪುತ್ತುವಿಗೆ ಅತೀವ ಖುಷಿಯಾಯಿತು.
ಸಂಜೆಯಾದ ಮೇಲೆ ಕ್ಲಾಸ್-ರೂಮಿನಲ್ಲಿ ಟೇಪ್-ರಿಕಾರ್ಡು ಹಾಕಿಕೊಂಡು, ಹುಡುಗ
ಹುಡುಗಿಯರೊಂದಿಗೆ ಡ್ಯಾನ್ಸ್ ಪ್ರಾಕ್ಟೀಸು ಮಾಡುತ್ತಿದ್ದ ಗೌತಮ, ನೋಡಲು
ಬಂದವರೆನ್ನೆಲ್ಲಾ ಹೊರದಬ್ಬಿ ಬಾಗಿಲು ಹಾಕಿಕೊಂಡಿದ್ದ. ಸಾಲದೆಂಬಂತೆ ಕಿಟಕಿಯ ಬಳಿ ಇಣುಕಿ
ನೋಡುತ್ತಿದ್ದ ಪುತ್ತು ಮತ್ತು ಸೀನರಿಬ್ಬರಿಗೂ ಕಪಾಳಕ್ಕೆ ಹೊಡೆದ ಮಾದರಿಯಲ್ಲಿ
ಕಿಟಕಿಯನ್ನು ಮುಚ್ಚಿದ್ದ. ಪುತ್ತು ಎದೆಯುಬ್ಬಿಸಿಕೊಂಡು ಸೀನನ ಕಡೆ ನೋಡಿದ. ಸೀನ
ಹೆಮ್ಮೆಯಿಂದ ಗೌತಮನ ಕಡೆಗೆ ನೋಡಿದ. ಗೌತಮ ಕಣ್ಣಗಲಿಸಿಕೊಂಡು ಪುತ್ತುವಿನ ಕಡೆಗೆ
ನೋಡುತ್ತಿದ್ದ ‘ಎಲಾ ಬಡ್ಡಿಮಗನೆ. ನೀನು ನಾಟ್ಕ ಮಾಡ್ತಿಯ. ? ’ ಎಂಬ ಪ್ರಶ್ನೆಯೊಂದು ಆ
ಮುಖದ ಮೇಲಿತ್ತು.

ಹಿಂದಿನ ವರ್ಷದ ಶಾಲಾ ವಾರ್ಷಿಕೋತ್ಸವದಲ್ಲಿ ಸೀನ ಮತ್ತು ಪುತ್ತು ಇಬ್ಬರನ್ನು ನೃತ್ಯ
ಒಂದಕ್ಕೆ ಸೇರಿಸಿಕೊಂಡಿದ್ದ ಗೌತಮ. ಇಡೀ ಹಾಡಿನಲ್ಲಿ ಕನ್ನಡ ಬಾವುಟ ಅಲ್ಲಾಡಿಸುವ ಸ್ಟೆಪ್
ಬಿಟ್ಟು ಬೇರೆ ಸ್ಟೆಪ್ ಇರಲಿಲ್ಲ. ಗೌತಮ ಮಾತ್ರ, ತಲೆಗೆ ಪಟ್ಟಿ ಕಟ್ಟಿಕೊಂಡು ಹುಡುಗ
ಹುಡುಗಿಯರೊಂದಿಗೆ ‘ ಕನ್ನಡದ ನೆಲ ಚೆನ್ನ, ಕನ್ನಡದ ಜಲ ಚೆನ್ನ, ಕನ್ನಡಿಗರಾ ಮನಸು
ಚಿನ್ನಾ ಹೇ ಹೇ ’ ಎಂದು ಕುಣಿದಾಡಿದ. ಸೀನ ಮತ್ತು ಪುತ್ತು ಹಾಡು ಮುಗಿಯುವವರೆಗೂ
ವೇದಿಕೆಯ ಎರಡು ಬದಿಯಲ್ಲಿ ಬಾವುಟ ಅಲ್ಲಾಡಿಸುತ್ತಾ ನಿಂತಿದ್ದರು.


ಮೂರು ಘಂಟೆಯಾಗುತ್ತಲೇ ಪುತ್ತು, ಸೀನ ಇಬ್ಬರೂ ಸ್ಟಾಫ್ ರೂಮಿನ ಕಡೆ ನಡೆದರು. ಒಂದು
ಪಾರ್ಶ್ವದಲ್ಲಿ ಕುಳಿತಿದ್ದ ಒಂದನೇ ತರಗತಿಯ ಮಕ್ಕಳು ಆಟವಾಡಲು ಹೊರಗೆ ಹೋಗಿದ್ದರಿಂದ
ಸ್ಟಾಫ್ ರೂಮು ಸ್ವಲ್ಪ ನಿಶ್ಯಬ್ಧವಾಗಿತ್ತು. ಕಲಾವತಿ ಟೀಚರು ಶಿಲ್ಪ ಮೇಡಂ ಜೊತೆ
ಮಾತನಾಡುತ್ತಾ ಕುಳಿತಿದ್ದರು. ಕಳ್ಳ ಹೆಜ್ಜೆ ಹಾಕಿಕೊಂಡು ಮೆತ್ತಗೆ ಒಳಬಂದವರನ್ನು ಕಂಡ
ವೆಂಕಟೇಶಪ್ಪ ಮಾಸ್ತರು ‘ಏನ್ರೋ. ?’ಎಂಬಂತೆ ಹುಬ್ಬೇರಿಸಿದರು. ಕಲಾವತಿ ಮೇಡಂ ತಮ್ಮ
ಬೀರುವಿನಿಂದ ಎರಡು ಹಾಳೆ ತೆಗೆದು ಪುತ್ತು ವಿಗೆ ಕೊಡುತ್ತಾ ಹೇಳಿದರು- ‘ಚೆನ್ನಾಗಿ
ಬಯಾಟ್ ಹೊಡೆದುಕೊಂಡು ಬಾ. ಗುರು ಮತ್ತೆ ಶಿಷ್ಯ ನಾಟಕ. ಸೀನ ಇವನಿಗೆ ಸ್ವಲ್ಪ ಸಹಾಯ
ಮಾಡೋ. ’

ವೆಂಕಟೇಷಪ್ಪಾ ಮಾಸ್ತರು ಕನ್ನಡಕ ತೆಗೆದು ಕಣ್ಣು ತಿಕ್ಕಿಕೊಳ್ಳುತ್ತಾ. ‘ ಏನ್ರೀ
ಮೇಡಮ್ಮರೇ ನಾಟ್ಕ-ಗೀಟ್ಕ ಎಲ್ಲಾ ಯಾಕ್ ಮಾಡಿಸ್ತೀರ. ಸುಮ್ಮನೆ ರಿಸ್ಕು. ಈ ಹುಡುಗ್ರು
ಮೇಷ್ಟ್ರು ಮುಂದೆ ನಿಲ್ಲಕ್ಕೆ ಹೆದರ್ತವೆ. ಅಂಥಾದ್ರಲ್ಲಿ ಸ್ಟೇಜ್ ಮೇಲೆ ಅದೇನು ಮಾಡ್ತವೆ
ಅಂಥಾ ಸುಮ್ಮನೆ ಒಂದೊಂದು ಹಾಡು ಹಾಕಿ ಅವರಿಗೆ ಕುಣಿತ ಕಲಿತುಕೊಂಡು ಬಂದು ಮಾಡೋದಕ್ಕೆ
ಹೇಳಿದ್ರೆ ಆಯ್ತು. ಅದು ಬಿಟ್ಟು ನೀವು ನಾಟ್ಕ, ರಂಗೋಲಿ, ಚಿತ್ರಕಲೆ, ಹಾಡು, ಏನೇನೋ
ಮಾಡ್ತಿಸ್ತಾ ಇದ್ದೀರ ’ ಎಂದರು.

‘ ಬಡ್ಡಿಮಗ ಏನೂ ಕಾರಣ ಸಿಗಲಿಲ್ಲ ಅಂದ್ರೆ, ತಲೆ ಸರ್ಯಾಗಿ ಬಾಚಿಲ್ಲ ಅಂತ ಹೊಡಿತಾನೆ.
ಇಲ್ಲಿ ಮೇಡಮ್ ಮುಂದೆ, ನಮಗೇ ಬಯ್ತಾ ಇದಾನೆ. ’ ಸೀನ ಹಲ್ಲು ಮಸೆದ. ತಮ್ಮ ಫೆವರಿಟ್ ಮೇಡಂ
ಗೆ ಮತ್ತು ತಮಗೂ ಬಯ್ಯುತ್ತಿದ್ದುದು ಅಸಮಧಾನದ ಸಂಗತಿಯಾಗಿತ್ತು.

‘ಸುಮ್ಕಿರಲೇ ಸೀನ. ಹೆಂಗೂ ಹಬ್ಬಕ್ಕೆಲ್ಲಾ ಅವರ ಮನೆಗೆ ಬಾಳೆ ಕಂದು ಬೇಕು, ಒಂಬಾಳೆ ಬೇಕು
ಅಂತ ನಿನ್ನ ಹತ್ರ ಬರ್ತಾರಲ್ಲ. ’ ಎಂದ ಪುತ್ತು.

‘ಸಾರ್ ನಾವೇ ಹಿಂಗದ್ರೆ ಹೆಂಗೆ ಸಾರ್. ಇದು ನಮ್ಮ ಶಾಲೆ ಕಾರ್ಯಕ್ರಮ. ಎಲ್ಲಾ ಮಕ್ಕಳನ್ನು
ಒಂದಲ್ಲಾ ಒಂದು ರೀತಿಯಲ್ಲಿ ಭಾಗಿಯಾಗಿಸಿಕೊಂಡು ಅವರ ಭವಿಷ್ಯ ರೂಪಿಸಬೇಕು. ಕೆಲವರು
ಓದಿನಲ್ಲಿ ಇದ್ರೆ, ಇನ್ನು ಕೆಲವರು ಆಟದಲ್ಲಿ ಇರ್ತಾರೆ, ಇನ್ನ ಕೆಲವರು ಚಿತ್ರಕಲೆ,
ಸಾಹಿತ್ಯ, ನೃತ್ಯ, ನಾಟಕ. ಅವರವರಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನ ಅಭಿವ್ಯಕ್ತ
ಗೊಳಿಸಬೇಕು. ’ ಎಂದ್ರು. ಈವಮ್ಮಂಗೆ ಮಾತು ಕೊಡೋದಕ್ಕಾಗಲ್ಲ ಅಂದುಕೊಂಡು ಮಾಸ್ತರು
ಸುಮ್ಮನಾದರು. ಸೀನಿಯರ್ ಮಾಸ್ಟರರ ವಿರೋಧದ ನಡುವೆಯೂ ಪುತ್ತುವಿನ ಏಕಪಾತ್ರಾಭಿನಯ ತಯಾರಿ
ಸಾಂಗವಾಗಿ ನಡೆಯಿತು.


ಕಚ್ಚೆ ಪಂಜೆ ಮತ್ತು ಬಿಳಿ ಬನಿಯಾನಿನಲ್ಲಿ ಕೆಸರಿನ ಮೇಲೆ ನಿಂತವನಂತೆ ಒದ್ದಾಡುತ್ತಿದ್ದ
ಪುತ್ತು, ಸೀಮೆಸುಣ್ಣದಲ್ಲಿ ಬರೆದಿದ್ದ ತನ್ನ ಮೀಸೆ ಅಳಿಸಿ ಹೋಗಿದ್ದಕ್ಕೆ ಗಾಬರಿ
ಮಾಡಿಕೊಂಡು ಸೀನನಿಗಾಗಿ ಕಾಯುತ್ತಿದ್ದ. ನಾಟಕಕ್ಕೆ ಬೇಕಾಗಿದ್ದ ಮೂರು ಬಾಳೆಹಣ್ಣುಗಳನ್ನು
ತರಲು ಹೋಗಿದ್ದ ಸೀನ ಅದುವರೆವಿಗೂ ಪತ್ತೆ ಇರಲಿಲ್ಲ. ಸುನೀತ ಮತ್ತು ಮಮತಾ ‘ ಶಾಲಾ
ವಾರ್ಷಿಕೋತ್ಸವ ಕಾರ್ಯಕ್ರಮ ೧೯೯೬-೯೭ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆ.
ಕನಸೂರು. ಸರ್ವರಿಗೂ ಆದರದ ಸ್ವಾಗತ. ’ ಎಂದು ಬಣ್ಣ ಬಣ್ಣದ ಸೀಮೆ ಸುಣ್ಣದಲ್ಲಿ ಬೋರ್ಡಿನ
ಮೇಲೆ ದಪ್ಪ ದಪ್ಪ ಅಕ್ಷರಗಳಲ್ಲಿ ಬರೆದು ಅದರ ಕೆಳಗೆ ಹೂವಿನ ಚಿತ್ರಗಳನ್ನು ಬಿಡಿಸಿದರು.

ವೆಂಕಟೇಷಪ್ಪ ಮತ್ತು ಇತರ ಮಾಸ್ತರುಗಳು ಕನಸೂರಿನ ಶ್ಯಾನುಭೋಗರನ್ನು, ಚೇರ್ಮನ್ ಗಳನ್ನೂ
ಕಾರ್ಯಕ್ರಮಕ್ಕೆ ಆಹ್ವಾನಿಸಿ ಅವರನ್ನು ವೇದಿಕೆಯ ಮೇಲೆ ಕರೆದುಕೊಂಡು ಹೋದರು. ಶಿಲ್ಪಾ
ಮೇಡಂ ಸ್ವಾಗತ ಭಾಷಣದಲ್ಲಿದ್ದ ಸಾಲುಗಳನ್ನು ಹೇಗೆಲ್ಲಾ ಹೇಳಬೇಕೆಂದು ಶಾಲಿನಿಗೆ ಕೊನೆ
ಹಂತದ ಸಲಹೆ ನೀಡುತ್ತಿದ್ದರು. ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿಯನ್ನು ಹೊತ್ತಿದ್ದ
ಕಲಾವತಿ ಮೇಡಂ ವೇದಿಕೆಯಿಂದ, ಡ್ರೆಸ್ಸಿಂಗ್ ರೂಮಿಗೂ. ಅಲ್ಲಿಂದ ಇಲ್ಲಿಗೂ ಪಾದರಸದಂತೆ
ಓಡಾಡುತ್ತಾ ಎಲ್ಲದರ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದರು. ಇನ್ನು ಗೌತಮ ಬುದ್ಧ ಈ
ಬಾರಿ ಪ್ರೇಮಲೋಕ ಸಿನಿಮಾದ ‘ಬಂದ್ಲು ಸಾರ್ ಹೋ ಹೋ ಶಕುಂತಲಾ ಹೋ ಹೋ ’ ಹಾಡಿಗೆ, ಏಳನೇ
ತರಗತಿಯ ಸೂಪರ್ ಸಿನಿಯರ್ ಅಂಜಿನಿಯ ಜೊತೆ ಸೇರಿಕೊಂಡು ತಯಾರಿ ನಡೆಸಿದ್ದ. ಅವರೆಲ್ಲರೂ
ಬಣ್ಣ ಬಣ್ಣದ ಬಟ್ಟೆಗಳಲ್ಲಿ, ಟೋಪಿ ಬೂಟ್ಸು ಗಳಲ್ಲಿ ಮಿಂಚುತ್ತಿದ್ದರು.

ಅಂತೂ ಸೀನ ಶೆಟ್ಟರ ಅಂಗಡಿಯಿಂದ ಮೂರು ಪಚ್-ಬಾಳೆಹಣ್ಣು ತಂದವನೇ ಪುತ್ತುವಿನ ಕೈಗೆ
ಕೊಟ್ಟನು. ‘ಲೋ ಸೀನ. ನಾಟಕದಲ್ಲಿ ಈ ಮೂರೂ ಬಾಳೆ ಹಣ್ಣು ಗಳನ್ನೂ ನಾನೇ ತಿನ್ನಬೇಕು.
ಇಷ್ಟು ದೊಡ್ಡ ದೊಡ್ಡ ಬಾಳೆ ಹಣ್ಣು ತಂದಿದ್ದಿಯಲ್ಲ. ಹೆಂಗೋ ತಿನ್ನೋದು. ? ’ ಎಂದ. ಸೀನ
ಶೆಟ್ಟರ ಅಂಗಡಿಯಲ್ಲಿ ದುಡ್ಡು ಮತ್ತು ಪ್ರಮಾಣ ಎರಡನ್ನೂ ಸಮೀಕರಿಸಿ ತಾಳೆ ನೋಡಿ, ಚೌಕಾಸಿ
ಮಾಡಿ ಈ ಬಾಳೆ ಹಣ್ಣು ಗಳನ್ನು ತಂದಿದ್ದ. ಪುತ್ತುವಿನ ಮಾತಿಗೆ ಕ್ಯಾರೆ ಎನ್ನದೆ ಅಳಿಸಿ
ಹೋಗಿದ್ದ ಮೀಸೆ ಬರೆಯಲು ಸೀಮೆಸುಣ್ಣ ಹುಡುಕಿ ತಂದು ಜರಿ ಮೀಸೆಯನ್ನು ಬಿಡಿಸಿದ.
ಪ್ರಾರ್ಥನೆ, ಸ್ವಾಗತ ಭಾಷಣ, ಮುಖ್ಯೋಪಾಧ್ಯಾಯರ ಭಾಷಣ, ಊರಿನ ಮುಖ್ಯಸ್ಥರ ಭಾಷಣ, ಶಾಲಾ
ವರದಿ ೯೬-೯೭. ಇವುಗಳ ಸತತ ದಾಳಿಯ ನಂತರ ಅಧಿಕೃತವಾಗಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ
ಚಾಲನೆ ದೊರೆಯಿತು.

‘ ಮೊದಲನೆಯದಾಗಿ ಕನ್ನಡಮ್ಮನಿಗೆ ನುಡಿ ನಮನವನ್ನು ಸಲ್ಲಿಸುತ್ತಾ, ಅಂಧಕಾರಾದ ಮಡುವಿನಿಂದ
ಜ್ಞಾನದ ದಿಕ್ಕಿಗೆ ನಮ್ಮನ್ನು ಕೊಂಡು ಹೋಗುವಂತೆ ಪ್ರಾರ್ಥಿಸಲು ಏಳನೆಯ ತರಗತಿಯ ಮಕ್ಕಳು
ನಿಮ್ಮ ಮುಂದೆ ಬರುತ್ತಿದ್ದಾರೆ. ’ ಕಲಾವತಿ ಮೇಡಂರ ಲವಲವಿಕೆಯ ಮಾತುಗಳು ಧ್ವನಿವರ್ಧಕಗಳ
ದೊಗಲೆ ಬಾಯಿಯಿಂದ ಹೊರಬಂದವು. ‘ಹಚ್ಚೇವು ಕನ್ನಡ ದೀಪ, ಹಚ್ಚೇವು ಕನ್ನಡದ ದೀಪ ’
ಹಿನ್ನಲೆಯಲ್ಲಿ ಹಾಡು ಮೊಳಗಿತು. ವೇದಿಕೆಯ ಬಲಭಾಗದಲ್ಲಿ ಐದು ಜನ ಹುಡುಗಿಯರು, ಎಡ
ಭಾಗದಲ್ಲಿ ಐದು ಜನ ಹುಡುಗಿಯರು ಒರಿಜಿನಲ್ ದೀಪಗಳನ್ನು ಹಿಡಿದುಕೊಂಡು ಸಾಲಾಗಿ ಬಂದರು.
ವೇದಿಕೆಯ ಮೇಲೆ ಬರುತ್ತಿದ್ದಂತೆ ಪ್ರತಿಯೊಬ್ಬರ ಕೈಯಲಿದ್ದ ದೀಪವು ತಮ್ಮ ಮುಂದಿದ್ದವರ
ಜಡೆಗೆ ತಗುಲಿ, ಏಕಕಾಲದಲ್ಲಿ ಎಲ್ಲರ ಜಡೆಗಳಿಗೂ ಬೆಂಕಿ ಹತ್ತಿತು. ದಿಪಗಳನ್ನು ಎಸೆದವರೇ
ಕಿಟಾರನೆ ಕಿರುಚಿಕೊಂಡು ವೇದಿಕೆಯಿಂದ ಓಡಿ ಹೋದರು. ಶುರುವಿನಲ್ಲೇ ಸ್ವಲ್ಪ ಕಾಲ ಗೊಂದಲಮಯ
ವಾತಾವರಣ ಸೃಷ್ಟಿಯಾಯಿತು. ಏನೂ ಆಗಿಯೇ ಇಲ್ಲವೆಂಬಂತೆ, ಎಲ್ಲರನ್ನೂ ಸಮಾಧಾನ ಪಡಿಸಿ
ಅವರಿಂದಲೇ ಕಾರ್ಯಕ್ರಮ ಶುರುವಾಗುವಂತೆ ನೋಡಿಕೊಂಡವರು ಕಲಾವತಿ ಮೇಡಂ. ಒಂದಾದ ಮೇಲೆ
ಒಂದರಂತೆ ಕಾರ್ಯಕ್ರಮಗಳು ಸಾಂಗವಾಗಿ ನಡೆಯುತ್ತಿದ್ದವು.

ಕಲಾವತಿ ಟೀಚರ್ ಪುತ್ತುವಿನ ಬಳಿ ಬಂದು ‘ ಪುತ್ತು ರೆಡಿ ತಾನೆ. ಹೆದರ್ಕೋ ಬೇಡ. ಮುಂದಿನ
ಕಾರ್ಯಕ್ರಮ ನಿಂದು. ಯಾವುದಕ್ಕೂ ಭಯ ಪಡಬೇಡ. ವೇದಿಕೆ ಸೈಡಲ್ಲಿ ನಾನು ನಿಂತಿರ್ತೇನೆ.
ಏನಾದ್ರೂ ಭಯ ಆದ್ರೆ, ಮರೆತು ಹೋದ ಹಂಗಾದ್ರೆ ನನ್ನ ಕಡೆ ನೋಡು. ಗೊತ್ತಾಯ್ತ. ಆಲ್ ದಿ
ಬೇಸ್ಟ್. ’ ಎಂದರು.

ಸೀನ - ‘ನಾನು ಸ್ಟೇಜ್ ಹತ್ರ ಕೂತಿರ್ತೀನಿ. ನೀನು ನಾಟಕದಲ್ಲಿ ಬಾಳೆ ಹಣ್ಣು ತರೋದಕ್ಕೆ
ಬರ್ತಿಯಲ್ಲ, ಆಗ ನಾನು ಅಂಗಡಿಯವನ ತರಹಾ ಬಾಳೆ ಹಣ್ಣುಗಳನ್ನು ಕೆಳಗಿನಿಂದ್ಲೆ ಕೊಡ್ತೇನೆ.
’ ಎಂದ.

‘ಎಲ್ಲಾದರು ಹೋಗಿ ಬಿಟ್ಟಿಯೋ ಸೀನ. ಬಾಳೆ ಹಣ್ಣು ಹುಡುಕಿಕೊಂಡು ಈ ಪೆದ್ದ ಸ್ಟೇಜ್
ಬಿಟ್ಟು, ಇಳಿದು ಬಂದುಬಿಡ್ತಾನೆ. ’ ಎಂದರು ಟೀಚರ್.

ಸೀನ ವೇದಿಕೆಯ ಮುಂಬಾಗದಲ್ಲಿ ಹೋಗಿ ಕುಳಿತ. ಪುತ್ತು ವೇದಿಕೆಯ ಮೆಟ್ಟಿಲಿನ ಬಳಿ ಬಂದು
ತನ್ನ ಸರತಿಗಾಗಿ ಕಾಯುತ್ತಾ ನಿಂತ. ಗೌತಮ ಮತ್ತು ಅವನ ಸೀನಿಯರ್ ಮಿತ್ರರು ತಮ್ಮ -
‘ಬಂದ್ಲು ಸಾರ್ ಹೋ ಹೋ ಶಂಕುಂತಲಾ ಹೋ ಹೋ ’ ಹಾಡಿಗಾಗಿ ಕಾಯುತ್ತಿದ್ದರು. ಸೀನಿಯರ್
ಶಾಲಿನಿ ಶಂಕುಂತಲ ಕೂಡ ಅವರ ಜೊತೆಯಲ್ಲಿದ್ದಳು. ಗೌತಮ, ಪುತ್ತುವಿನ ಕಡೆಗೆ ನೋಡುತ್ತಾ
ಜೋಕು ಮಾಡಿದ. ಎಲ್ಲರೂ ನಕ್ಕರು.

‘ಈಗ ನಮ್ಮೆಲ್ಲರನ್ನು ಏಕಪಾತ್ರಾಭಿನಯದ ಮೂಲಕ ರಂಜಿಸಲು ನಾಲ್ಕನೆಯ ತರಗತಿಯ ಪುಟ್ಟರಾಜು
ವೇದಿಕೆಯ ಮೇಲೆ ಬರುತ್ತಿದ್ದಾನೆ. ಎಲ್ಲರೂ ಚಪ್ಪಾಳೆಯ ಮೂಲಕ ಸ್ವಾಗತಿಸಬೇಕು. ’ ಕಲಾವತಿ
ಮೇಡಂ ಘೋಷಿಸಿದರು. ಪುತ್ತು ಇನ್ನೇನು ವೇದಿಕೆ ಮೇಲೆ ಹತ್ತಬೇಕು ಎನ್ನುವಷ್ಟರಲ್ಲಿ,
ಅಂಜಿನಿ ಹಿಂದಿನಿಂದ ಪುತ್ತುವಿನ ಹಿಂದಕ್ಕೆ ಸಿಗಿಸಿದ್ದ ಕಚ್ಚೆ ಪಂಜೆಯ ಮಾಸ್ಟರ್ ಲಾಕ್
ಅನ್ನು ಎಳೆದ. ಪಂಜೆಯು ಬಿಚ್ಚಿಕೊಂಡು ನೆಲದ ಮೇಲೆ ಸೂರೆಯಾಯಿತು. ಎಲ್ಲರೂ ಗೊಳ್ಳೆಂದು
ನಕ್ಕರು. ಪುತ್ತು ಹರಡಿದ್ದ ಪಂಜೆಯಷ್ಟನ್ನೂ ಬಾಚಿಕೊಂಡು ವೇದಿಕೆಯಿಂದ ಓಡಿ ಹೋದ. ಮುಂದಿನ
ಕಾರ್ಯಕ್ರಮ ಮುಂದುವರೆಯಿತು.

ಪುತ್ತು ಸ್ಕೂಲಿನ ಕಟ್ಟೆಯ ಬಳಿ ಒಬ್ಬನೇ ಅಳುತ್ತಾ ಕುಳಿತ. ಕಲಾವತಿ ಟೀಚರ್
ಪುತ್ತುವಿಗಾಗಿ ಹುಡುಕಿದರು. ‘ ಕಲಾವತಿ ಟೀಚರ್ ನಿನ್ನ ಹುಡುಕ್ತಾ ಇದಾರೆ ಬಾರೋ ಪುತ್ತು
’ ಎಂದು ಸೀನ ಪುತ್ತುವನ್ನು ಹಿಡಿದು ವೇದಿಕೆಯ ಬಳಿ ಬಂದ. ಟೀಚರು ಪುತ್ತುವಿಗೆ ಸಮಾಧಾನ
ಮಾಡಿ ವೇದಿಕೆಯ ಮೇಲೆ ದಬ್ಬಿದರು. ಪುತ್ತು ವೇದಿಕೆಯ ಮೇಲೆ ಬರುತ್ತಿದ್ದಂತೆಯೇ ಪುನಃ
ಪ್ರೇಕ್ಷಕ ಸಮೂಹ ನಗೆಗಡಲಿನಲ್ಲಿ ತೇಲಿ ಹೋಯಿತು.

‘ನೋಡಿ ಇಲ್ಲಿ ನಿಂತುಕೊಂಡ್ರೆ ಗುರು ’ ಎರಡು ಹೆಜ್ಜೆ ಪಕ್ಕಕೆ ಇಟ್ಟು ‘ಇಲ್ಲಿ
ನಿಂತುಕೊಂಡ್ರೆ ಶಿಷ್ಯ’ ಎಂದು ಹೇಳಿದ. ಬಲಭಾಗದಲ್ಲಿ ನಿಂತು ‘ಶಿಷ್ಯಾ ಶಿಷ್ಯಾ ’ ಎಂದ.
ಎಡಭಾಗಕ್ಕೆ ಓಡಿ ಹೋಗಿ ನಿಂತು ಏನನ್ನೋ ಓದುವುದರಲ್ಲಿ ಮಗ್ನನಾಗಿರುವಂತೆ ಪೋಸು ನೀಡಿದ.
ಪುನಃ ಬಲಭಾಗಕ್ಕೆ ಬಂದು ‘ಶಿಷ್ಯಾ ಶಿಷ್ಯಾ ’ ಎಂದ. ಈ ರೀತಿ ಮೂರು ಬಾರಿ ಆಚೆ ಈಚೆ ಮಾಡಿದ
ಮೇಲೆ ಶಿಷ್ಯನಿಗೆ ಎಚ್ಚರವಾಯಿತು.

ಒಂದಷ್ಟು ಕುಶಲೋಪರಿಯ ನಂತರ. ಬಲಭಾಗದಲ್ಲಿ ನಿಂತು ಗುರುವಿನಂತೆ : ‘ ಶಿಷ್ಯಾ ಅಂಗಡಿಗೆ
ಹೋಗಿ ಮೂರು ಬಾಳೆ ಹಣ್ಣು ತಗೋಂಡ್ ಬಾ. ’ ಎಂದ. ಎಡಭಾಗಕ್ಕೆ ಓಡಿಹೋಗಿ ಶಿಷ್ಯನಂತೆ :‘
ಸರಿ ಗುರುಗಳೇ ’ ಎಂದು ಹೇಳಿ ದುಡ್ಡು ಕೊಟ್ಟವನಂತೆ ಮಾಡಿ, ದುಡ್ಡು ಪಡೆದವನಂತೆ ಮಾಡಿ
ಅಂಗಡಿಗೆ ಹೊರಟ. ವೇದಿಕೆಯ ಅಂಚಿನಲ್ಲಿದ್ದ ಸೀನನ ಕೈಯಿಂದ ಬಾಳೆ ಹಣ್ಣು ಪಡೆದು ವಾಪಾಸು
ಬರುವಾಗ, ‘ಗುರುಗಳು ಮೂರು ಬಾಳೆ ಹಣ್ಣು ಯಾಕೆ ತರೋದಕ್ಕೆ ಹೇಳಿದ್ದಾರೆ. ? ಪೂಜೆಗೆ ಕೇವಲ
ಎರಡು ಬಾಳೆ ಹಣ್ಣುಗಳನ್ನು ಮಾತ್ರವಲ್ಲವೇ ಬಳಸುವುದು. ?’ ಎಂದು ತನಗೆ ತಾನೆ
ಪ್ರಶ್ನಿಸಿಕೊಂಡ. ‘ ಹಂಗಾದ್ರೆ ಉಳಿದ ಒಂದು ಬಾಳೆ ಹಣ್ಣನ್ನು ತಿಂದು ಬಿಡಬಹುದಲ್ಲವೇ ’
ಎಂದು ನಿರ್ಧರಿಸಿದ. ಸಂಜೆಯಿಂದಲೂ ಬಾಳೆ ಹಣ್ಣುಗಳನ್ನು ಕೈಯಲ್ಲೇ ಹಿಡಿದು ಕೊಂಡಿದ್ದರಿಂದ
ಅವುಗಳು ಸಂಪೂರ್ಣವಾಗಿ ಮೆತ್ತಗಾಗಿ ಹೋಗಿದ್ದವು. ಸರಿ ಒಂದು ಬಾಳೆ ಹಣ್ಣಿನ ಸಿಪ್ಪೆಯನ್ನು
ಸಂಪೂರ್ಣವಾಗಿ ಸುಲಿದು ಗುಳುಂ ಗುಳುಂ ಎಂದು ನಟಿಸುತ್ತಾ ತಿಂದ.

ತಿನ್ನುವ ಶೈಲಿಯಿಂದಲೇ ಪ್ರೇಕ್ಷಕರು ನಕ್ಕರು. ಸರಿ ಬಾಳೆಹಣ್ಣು ತಿಂದಾಯಿತು.
ಸಿಪ್ಪೆಯನ್ನು ಏನು ಮಾಡುವುದು. ? ಸ್ಟೇಜ್ ಮೇಲೆ ಹಾಕಲಿಲ್ಲ. ವೇದಿಕೆಯ ಬಳಿ ನಿಂತಿದ್ದ
ಕಲಾವತಿ ಮೇಡಂ ಕಡೆಗೆ ನೋಡಿದ. ಅವರು ಏನಾಯಿತು. ? ಎಂಬಂತೆ ಪ್ರಶ್ನಿಸಿದರು. ಪುತ್ತು
ಸೀದಾ ಮೈಕಿನ ಹತ್ತಿರ ಹೋದವನೇ

‘ಟೀಚರ್ ಸಿಪ್ಪೆ ಎಲ್ಲಿ ಹಾಕಲಿ. ? ’ ಎಂದ.

ಅಷ್ಟೇ ಪ್ರೇಕ್ಷಕ ಸಮೂಹ ಬಿದ್ದು ಬಿದ್ದು ನಗಲು ಪ್ರಾರಂಭಿಸಿತು. ಬಾಳೆ ಹಣ್ಣಿನ
ಸಿಪ್ಪೆಯನ್ನು ಕೈಯಲ್ಲಿ ಹಿಡಿದು ಟೀಚರ್ ಕಡೆಗೆ ನೋಡುತ್ತಾ ಪುನಃ ಮೈಕಿನಲ್ಲಿ ಕೇಳಿದ
‘ಟೀಚರ್ ಸಿಪ್ಪೆ ಎಲ್ಲಿ ಹಾಕಲಿ. ?’ ಎಲ್ಲರೂ ಗೊಳ್ಳೆಂದು ನಕ್ಕರು. ಕಲಾವತಿ ಟೀಚರು, ಸೀನ
ತಲೆ ತಲೆ ಚಚ್ಚಿಕೊಂಡರು.