ಇದು ನಾನು ಅಭಿ ಜಾನಪದ ಲೋಕಕ್ಕೆ ಹೋದಾಗ ತೆಗೆದ ಫೋಟೊ.
ಜಾನಪದ ಲೋಕ, ಬೆಂಗಳೂರಿನಿಂದ ಮೈಸೂರಿಗೆ ಹೋಗುವ ದಾರಿಯಲ್ಲಿ ರಾಮನಗರದ ಹತ್ತಿರ ಇದೆ.
ಇವರು ಮಡಕೆ ಮಾಡೋದನ್ನೇ ಫೋಟೋ ತೆಗೆಯುತ್ತಾ ಇದ್ದೆ.
ಬಾಯಿ ಸುಮ್ಕೆ ಇರಬೇಕಲ್ಲ. ಅದಕ್ಕೆ ತಾತನ ಬಗ್ಗೆ ವಿಚಾರಿಸಿದೆ.
ಇವರು ರಾಮನಗರದಿಂದ ಪ್ರತಿದಿನ ಮಡಕೆ ಮಾಡುವ ಸಲುವಾಗಿ ಜಾನಪದ ಲೋಕಕ್ಕೆ ಬರುವುದಾಗಿಯೂ,
ಬೆಳಗ್ಗೆ ಯಿಂದ ಸಂಜೆ ವರೆಗೂ ಮಡಕೆ ಮಾಡೋದನ್ನ ಬರುವ ಪ್ರವಾಸಿಗರೂ ಅಚ್ಚರಿಯಿಂದ
ನೋಡುತ್ತಾ ನಿಲ್ಲುವುದಾಗಿಯು,
ಮಾಡಿರುವ ಮಡಕೆಯ ಮೇಲೆ ಕುಸುರಿ ಕೆತ್ತನೆ ಮಾಡಿ, ಇಲ್ಲೇ ಮಾರಾಟವನ್ನೂ ಮಾಡುವುದಾಗಿಯೂ
ತಿಳಿಸಿದರು.

ಬಂಡವಾಳ ಹಾಕಿ, ಮಡಕೆ ಮಾರಾಟ ಮಾಡಿ ನಿರ್ವಹಿಸುತ್ತಿರುವ ಮಾಲೀಕರು, ತಾತನಿಗೆ ತಿಂಗಳ
ಸಂಬಳ ಕೊಡುವುದಾಗಿಯೂ ತಿಳಿಸಿದರು.
ಇಷ್ಟೇ ಆಗಿದ್ದರೆ ಏನೂ ಆಗ್ತಾ ಇರ್ಲಿಲ್ಲ.
ಆದರೆ ನನ್ನೊಳಗಿರುವ ತಥಾಕಥಿತ ಕ್ರಾಂತಿಕಾರಿಯೊಬ್ಬ ಪ್ರಶ್ನೆ ಮಾಡಿದ.
" ತಾತ, ಮಡಿಕೆ ಮಾಡುವ ಸಂಸ್ಕೃತಿ ನಿಮ್ಮ ಜೊತೆಗೇನೆ ಮುಗಿದು ಹೋಗಿ ಬಿಡತ್ತೇನೊ.
ಯಾರಾದ್ರು ಆಸಕ್ತಿ ಇರುವವರು ನಿಮ್ಮ ಹತ್ರ ಕಲಿಯೋದಕ್ಕೆ ಅಂತ ಬಂದ್ರೆ ಹೇಳಿಕೊಡಬಹುದು
ಆಲ್ವಾ ...? " ಅಂದೆ.
" ನಾವು ಹೇಳಿಕೊಡ್ತಾ ಕುಂತ್ರೆ ಜಾಸ್ತಿ ಮಡಕೆ ಮಾಡೋದಕ್ಕೆ ಆಗುತ್ತಾ..? ಮಾಲೀಕರು
ಬಿಡಬೇಕಲ್ಲಾ...? " ಹಾಗೆ .. ಹೀಗೆ ಎನ್ನುತ್ತಾ ತಾತಪ್ಪ ... ಶ್ರಮಿಕ ವರ್ಗದ
ಪ್ರತಿನಿಧಿಯಂತೆ , ಮಾಲೀಕನ ಮೇಲೆ ಹರಿಹಾಯ್ದ.
ಇದನ್ನು ಕೇಳಿಸಿಕೊಂಡ, ಒಳಗೆ ಕುಳಿತಿದ್ದ ಮಾಲೀಕ ಹೆಂಗಸು ಬಯ್ಯುತ್ತಾ ಹೊರ ಬಂದರು.
ಇಬ್ಬರ ನಡುವೆ ಘೋರ ಮಾತಿನ ಚಕಮಕಿ ಶುರುವಾಯ್ತು. ಲಿಟರಲಿ ಬೀದಿ ಜಗಳ. ನಾನು, ಅಭಿ
ಮೆತ್ತಗೆ ಅಲ್ಲಿಂದ ಜಾಗ ಖಾಲಿ ಮಾಡಿದೆವು.

"ಲೋ ಕೆ ಸಿ, ಸುಮ್ಕೆ ಇರೋದ್ ಬಿಟ್ಟು, ಅವರಿಬ್ಬರಿಗೂ ತಂದಿಟ್ಟು ಬಿಟ್ಟ್ಯಲ್ಲೋ...?
ದೊಡ್ಡ ಸಮಾಜ ಸುಧಾರಕನ ತರ ಕಾಳಜಿ ತೋರಿಸಿ, ಡೌ ಮಾಡ್ತೀಯ ? " ಅಂದ ಅಭಿ.

" ಬಾಡಿಗೆ ಕಟ್ಟಿ, ಬಂಡವಾಳ ಹಾಕಿ ಅದನ್ನ ಮಾರಾಟ ಮಾಡೋ ಅಷ್ಟರಲ್ಲಿ ನಮಗೆ ಸಾಕು ಬೇಕಾಗಿ
ಹೋಗತ್ತೆ.
ಅಂತಹದರಲ್ಲಿ ಬಂದಿರೋ ಪ್ರವಾಸಿಗರ ಮುಂದೆಲ್ಲಾ ನಮ್ಮ ಬಗ್ಗೆ ಚಾಡಿ ಹೇಳ್ತೀಯಾ ..? "
ಇದು ಬಂಡವಾಳಷಾಹಿಯ ವಾದ.
ತಾತನದ್ದು ಶ್ರಮಿಕ ವರ್ಗದ ಹತಾಶೆ.
ಭಾರತ ದರ್ಶನ ವಾಗಿ ಹೋಯ್ತು.

ಅದೇ ದಿನ ಜಾನಪದ ಲೋಕದಲ್ಲಿ, ಜನಪದ ಸಂಗೀತದ ಮಿನುಗು ತಾರೆ, ಅದ್ಭುತ ಗಾಯಕ " ಕೆ.
ಯುವರಾಜ್ " ಅವರನ್ನು ಭೇಟಿ ಮಾಡಲು ಅವಕಾಶ ಸಿಕ್ಕಿದ್ದು ನನ್ನ ಸುಯೋಗವೇ ಸರಿ. ಸ್ಪಾಟ್
ನಲ್ಲೇ, ಹಾಡು ಹೇಳೋದಕ್ಕೆ ಶುರು ಮಾಡಿದರು. ಕಲೆ ಜೊತೆ ಬೆಸೆದಿರುವವರೊಂದಿಗೆ ಹರಟೋದೆ
ಒಂದು ಮಜಾ,

ನನ್ನದೂ ಶಿವಮೊಗ್ಗ ಅಂತ ಕೇಳಿದ ಮೇಲೆ.
" ಅಲ್ಲೇ, ವಿನೋಬನಗರದ ಹತ್ರ ಮನೆ ಇರೋದು. ಒಂದ್ಸಾರಿ ಮನೆ ಕಡೆ ಬಾ, ಇದೇ ಮಲೆನಾಡಿನ
ವಾತಾವರಣವನ್ನು ನನ್ನ ಮನೆ ಸುತ್ತ ನಿರ್ಮಿಸಿದ್ದೇನೆ." ಅಂದರು.
ಅವರ ವಿಶ್ವಾಸದ ನುಡಿಯಿಂದ ಖುಷಿಯಾಯ್ತು.