ದೇವರಿಗೆ ಪೂಜೆ ಮಾಡಲೆಂದು ಪೂಜಾಗೃಹದ ಬಾಗಿಲು ತೆಗೆದೆ. ಆಹಾ ಆ ರಣಾಂಗಣವನ್ನು ಏನೆಂದು
ಬಣ್ಣಿಸಲಿ. ? ಗಣೇಶನ ಮೂರ್ತಿ ಮಕಾಡೆ ಮಲಗಿತ್ತು. ಮನೆ ಬೆಳಗಬೇಕಾದ ಜೋಡಿ ದೀಪಗಳು ನೆಲ
ನೋಡುತ್ತಿದ್ದವು. ಕಾದಾಟಕ್ಕೆ ನಿಂತಂತೆ ಎದಿರು ಬದಿರಾಗಿರುವ ದೇವರ ಫೋಟೋಗಳು.
ನೈವೇದ್ಯಕ್ಕೆಂದು ಇಟ್ಟಿದ್ದ ಹಣ್ಣು-ಕಾಯಿಗಾಗಿ, ದೇವರ ಮನೆಗೇ ಅತಿಕ್ರಮಣ ನಡೆಸಿದ್ದ
ಮೂಷಕ ಸೈನ್ಯದ ಸರ್ವನಾಶದ ಗುರುತುಗಳಿವು. ಇವುಗಳನ್ನೆಲ್ಲಾ ಅಸಾಹಯಕತೆಯಿಂದ ನೋಡುತ್ತಿದ್ದ
ಎಂಟು ಪ್ಲಸ್ ಒಂದು ಒಂಭತ್ತು ದೇವರುಗಳು.

ಅಸ್ತವ್ಯಸ್ತಗೊಂಡಿದ್ದ ದೇವರ ಮನೆಯನ್ನು, ಅಮ್ಮನಿಗೆ ತೋರಿಸುತ್ತಾ ಹೇಳಿದೆ. 'ನೋಡು ಒಂದು
ಇಲಿಯಿಂದ ದೇವರು, ತನ್ನನ್ನು ತಾನು ರಕ್ಷಿಸಿಕೊಳ್ಳಲಾಗಿಲ್ಲ. ಹಿಂಗಿರುವಾಗ ಯಾಕೆ
ಇಷ್ಟುದ್ದ ಕಾಂಪ್ಲಿಕೇಟೆಡ್ ಪೂಜೆಗಳು.'

'ಎತ್ತದೋ ನಿಂದು ಬೆಳ್ಗೆ ಬೆಳ್ಗೆ ಸುಮ್ಮನೆ ಪೂಜೆ ಮಾಡು. ಇಲಿ ವಿನಾಯಕನ ವಾಹನ.
ಅವುಗಳಿಗೆ ದೇವರ ಗರ್ಭಗುಡಿಗೂ ಹೋಗುವ ಅಧಿಕಾರ ಇದೆ. ಅವುನ್ನ ಕಂಡ್ರೆ ದೇವರುಗಳಿಗೂ
ಸ್ವಲ್ಪ ಮೄದು ಧೋರಣೆ ಆಷ್ಟೆ. ' ಎಂದಳು ಇನ್ನೋಸೆಂಟ್ ಮದರ್.

ಎಲ್ಲದಕ್ಕೂ ಇವಳ ಬಳಿ ಒಂದು ರೆಡಿಮೇಡ್ ಕಥೆಗಳಿರುತ್ತವೆ. ದೇವರಿಗೆ ಇಲಿಗಳನ್ನು ಕಂಡರೆ
ಮೃದು ಧೋರಣೆ ಅಥವಾ ಸಾಫ್ಟ್ ಕಾರ್ನರ್ ಇರಬಹುದು. ಆದರೆ ಇವುಗಳ ಕಿರುಕುಳಗಳನ್ನೆಲ್ಲಾ
ಸಹಿಸಿಕೊಂಡು ಸುಮ್ಮನಿರಲು ಮನುಷ್ಯನಿಗೆ ಸಾಧ್ಯವೆ. ? ಇವುಗಳ ಬ್ಯಾಡ್ ಹ್ಯಾಬಿಟ್
ಅಂದ್ರೆ, ತಿನ್ನೋದನ್ನ ಅಚ್ಚುಕಟ್ಟಾಗಿ ತಿನ್ನಲು ಬಾರದೆ ಇರುವುದು. ಅಡುಗೆ ಮನೆಯಿಂದ
ಎರಡು ಟಮೋಟ ಎಗರಿಸಿಕೊಂಡು ಹೋದರೆ ಯಾರಿಗೇನು ನಷ್ಟ. ಆದರೆ ಬುಟ್ಟಿಯಲ್ಲಿರುವುದನ್ನೆಲ್ಲಾ
ಕಚ್ಚಿ-ಕಚ್ಚಿ ಹೆಲ್ತ್-ಇನ್ಸ್-ಪೆಕ್ಟರ್ ರೀತಿ ಪರೀಕ್ಷಿಸಿ ಹೋಗಿರುತ್ತವೆ. ಇವುಗಳು
ತಿನ್ನುವ ಹಿಡಿ ಭತ್ತಕ್ಕಾಗಿ, ಭತ್ತದ ನಿಟ್ಟಿನಲ್ಲಿರುವ ಚೀಲಗಳೆನ್ನೆಲ್ಲಾ ಹರಿದು ಸೂರೆ
ಮಾಡಿ, ಅದರ ಮೇಲೆ ಹಿಕ್ಕೆ ಹಾಕಿಹೋಗಿರುತ್ತವೆ. ಮನುಷ್ಯನ ನಾಲಗೆಯಂತೆ, ಇಲಿಗಳಿಗೆ
ಹಲ್ಲುಗಳು ಸದಾ ಕ್ರಿಯಾಶೀಲವಾಗಿರುತ್ತವೆ. ಸದಾಕಾಲ ಬೆಳೆಯುತ್ತಲೇ ಹೋಗುವ ಹಲ್ಲುಗಳು ಅದರ
ದೌರ್ಬಲ್ಯವೂ ಹೌದು.

ಅತಿಯಾಗಿದ್ದ ಇವುಗಳ ಸದ್ದು ಅಡಗಿಸಲು, ಶಾಶ್ವತ ಪರಿಹಾರಕ್ಕಾಗಿ ಪೇಟೆಯಿಂದ ಪಾಷಾಣ ತರಲು
ನಿರ್ಧರಿಸಿದೆ. ಕಾಲೇಜು ಮುಗಿಸಿಕೊಂಡು, ಪಾಷಾಣವನ್ನು ಹುಡುಕುತ್ತಾ ಶಿವಮೊಗ್ಗದ
ಕಮರ್ಷಿಯಲ್ ಸ್ಟ್ರೀಟ್ 'ಗಾಂಧಿ-ಬಜಾರಿಗೆ' ನಡೆದೆ. ಅಲ್ಲಿ 'ಪಾಷಾಣ' ಎಂದು ಉದ್ದದ
ಬೋರ್ಡು ತಗುಲಿಸಿಕೊಂಡು, ತನ್ನ ಬೇರಿಂಗ್ ಗಾಲಿಯನ್ನು ಉರುಳಿಸುತ್ತಾ ವಿಷ ಹಂಚುವವನ ಬಳಿ
ಇಲಿ ಪಾಷಾಣವನ್ನೂ ಖರೀಧಿಸಿದೆ. ' ನಿಜವಾಗ್ಲು ಇಲಿ ಸಾಯ್ತವೇನ್ರಿ. ? ' ಎಂದು
ಕೇಳಿದ್ದಕ್ಕೆ ' ಫುಲ್ ವಾಷೌಟ್ ಆಗ್ತವೆ ತಗಳಿ. ಹುಡುಕುದ್ರು ನಿಮ್ಮನೇಲಿ ಒಂದ್ ಇಲಿ
ಸಿಗೋದಿಲ್ಲ. ' ಎಂದು ಆಶ್ವಾಸನೆ ನೀಡಿದ.

ಬಿಸಿಬಿಸಿ ಈರುಳ್ಳಿ ಬೋಂಡ, ಈರೇಕಾಯಿ ಬೋಂಡ ಮಾಡಿಸಿ, ಅವುಗಳಿಗೆ ಪಾಷಾಣ ಬೆರೆಸಿದೆ.
ಇಲಿಗಳಿಗೆ ರುಚಿಕರವಾದ ಕುರುಕು ತಿಂಡಿಗಳನ್ನೇ ಮಾಡಿಸಬೇಕಾಯಿತು. ತಮ್ಮನ ಜೊತೆ
ಸೇರಿಕೊಂಡು, ಪದೆಪದೆ ಇಲಿಗಳು ವಿಸಿಟ್ ಕೊಡುವ ಜಾಗಗಳಲ್ಲೆಲ್ಲಾ ಪಾಯ್-ಸನ್ ಮಿಶ್ರಿತ
ಬೋಂಡವನ್ನು ಇರಿಸಿದೆ. ಮಾರನೆಯ ದಿನವೇ ಇಟ್ಟಿದ್ದ ಬೋಂಡಗಳೆಲ್ಲವೂ ಖಾಲಿಯಾಗಿ
ಹೋಗಿದ್ದವು. ನಮ್ಮ ಕುತಂತ್ರ ಕಾರ್ಯಗತಗೊಂಡಿತ್ತು. ಆದರೆ ಮನೆಯೆಲ್ಲಾ ಮುಸಿದರೂ,
ದುರ್ನಾತದ ಸುಳಿವಿಲ್ಲ. ' ಎಲ್ಲೆಲ್ಲಿ ಸತ್ತು ಬಿದ್ದಿದಾವೋ ಏನೊ ಒಂದೆರೆಡು ದಿನ ಕಾಯೋಣ.
ವಾಸನೆ ಬಂದರೂ ಬರಬಹುದು. ' ಎಂದಳು ಅಮ್ಮ. ಎರಡು ದಿನ ಬಿಟ್ಟು ಪುನಃ ಬೋಂಡದ ಸಮಾರಾಧನೆ
ನಡೆಯಿತು. ಆಗಲೂ ಬೋಂಡಗಳು ಖಾಲಿಯಾದವೇ ಹೊರತು, ವಾಸನೆಯ ಸುಳಿವಿಲ್ಲ. ವಿಜ್ನಾನಿಗಳು
ಪಾಯ್-ಸನ್ನುಗಳಿಗಾಗಿ, ಬರೆದ ರಾಶಿರಾಶಿ ರಾಸಾಯನಿಕ ಸಮೀಕರಣಗಳಿರುವ
ಪೇಪರ್-ಗಳೆಲ್ಲವನ್ನೂ, ಇಲಿಗಳು ತಿಂದು ಹಾಳು ಮಾಡಿದಂತೆ, ಕನಸುಗಳು ಬೀಳತೊಡಗಿದವು.

ಪಕ್ಕದ ಮನೆಯ ಗೆಳೆಯ ಶ್ರೀಧರ, ಇಲಿಗಳು ತನ್ನ ಮೇಲೆ ನಡೆಸಿದ್ದ ಅನಾಚಾರವನ್ನು ಹೇಳಿದ.
ಅದೇನೆಂದರೆ, ರಾತ್ರಿ ಮಲಗಿದ್ದಾಗ, ಅವನ ಹಿಮ್ಮಡಿಯ ದಪ್ಪ-ದಪ್ಪ ಚರ್ಮವನ್ನು
ಕೆರೆದು-ಕೆರೆದು ತಿಂದು ಹಾಕಿದ್ದವು. 
'ಅಲ್ಲೋ ಮುಟ್ಠಾಳ. ಇಲಿ ಅಷ್ಟು ಹೊತ್ತು ಕಾಲ್ ಕೆರೆದು ತಿನ್ನೋವರ್ಗೂ ನೀ ಎಂತ
ಮಾಡ್ತಿದ್ದೋ? ಎಚ್ಚರ ಆಗ್ಲೆ ಇಲ್ವ. ?' ಎಂದು ಕೇಳಿದ್ದಕ್ಕೆ ' ಅದೇನೊ. ? ಗೊತ್ತಿಲ್ಲ
ಮಾರಾಯ. ರಾತ್ರಿ ಕನ್ಸಲ್ಲಿ ಯಾರೋ ಪಾದಕ್ಕೆ ಕಚಗುಳಿ ಕೊಟ್ಟಂಗಾತು. ಅಷ್ಟೆ ನೆನಪಿರೋದು.
ಬೆಳ್ಗೆ ಎದ್ದಾಗ್ಲೆ ಗೊತ್ತಾಗಿದ್ದು ' ಎಂದ. ಕಿತ್ತು ಹೋಗಿದ್ದ ಪಾದಕ್ಕೆ ಅಯ್ಯೋ-ಪಾಪ
ಎಂದು ಸಂತಾಪ ಸೂಚಿಸುವ ಬದಲು, ಅವನ ಕುಂಭಕರಣ ನಿದ್ದೆಯನ್ನು ಎಲ್ಲರೂ ವ್ಯಂಗ್ಯ
ಮಾಡಿದರು.

ಮನೆಯಲ್ಲಿ ಪಾಷಣ ತಿಂದರೂ ಇಲಿಗಳು ಸಾಯದ್ದನ್ನು ಕಂಡ ತಂದೆಯವರು, ಪಾಷಾಣವನ್ನು
ಎಲ್ಲಿಂದ,? ತಂದದ್ದು ಎಂದು ಪ್ರಶ್ನಿಸಿದರು. ಕೇಳಿದ ಮೇಲೆ, ನನ್ನ ವ್ಯವಹಾರ ಜ್ನಾನವನ್ನು
ಹೀಗಳೆದರು. 'ಕಮ್ಮಿ ದುಡ್ಡಿಗೆ ಸಿಗ್ತು ಅಂತ, ರಸ್ತೆ ಮೇಲೆ ಮಾರುವರ ಹತ್ರ ವಿಷ
ತಂದೀಯೇನೊ. ಮನ್ಷಾನೆ ಸಾಯಲ್ಲ ಅದನ್ನ ತಿಂದ್ರೆ, ಇಲಿ ಸಾಯ್ತವ. ಗೊಬ್ಬರದ ಅಂಗಡಿಯಲ್ಲಿ,
ಒಳ್ಳೆ ಕ್ವಾಲೀಟಿದು ಕೇಳಿ ತಗಂಡ್ ಬಾ. ' ಎಂದರು. ಆಲಾಹಲದಲ್ಲಿಯು ವೆರೈಟಿಗಳಿರುತ್ತವೆ
ಎಂದು ತಿಳಿದಿರಲಿಲ್ಲ. ಗೊಬ್ಬರದ ಅಂಗಡಿಯಿಂದ ರಾಟ್-ಕಿಲ್ಲರ್ ತಂದು ಉಣಬಡಿಸಿದ ಮೇಲೆ,
ನಮ್ಮ ಮನೆಯಲ್ಲಿಯು ಅಂತ್ಯಸಂಸ್ಕಾರವಾಗದ ಇಲಿಗಳ ಪರಿಮಳ ಪಸರಿಸಿತು. ಇಲಿ ಪಾಷಾಣ ಅಂದ್ರೆ,
ಸೈನೈಡ್ ರೀತಿ ತಿಂದ ತಕ್ಷಣ ಪ್ರಾಣ ಹೋಗಿಬಿಡಬೇಕು. ಹಂಗಾದ್ರೆ ಮೃತ ಇಲಿಗಳ ಶವ ವಿಲೇವಾರಿ
ಮಾಡುವ ಕೆಲಸ ಸುಲಭವಾಗುತ್ತದೆ. ಅದು ಬಿಟ್ಟು ಅಡುಗೆ ಮನೆಯಲ್ಲಿ ತಿಂದವು, ಅಟ್ಟದ ಮೇಲೋ,
ಮಂಚದ ಕೆಳಗೋ, ಸೂರಿನ ಸಂದಿಮೂಲೆಯಲ್ಲಿ ಸತ್ತು ಬಿದ್ದರೆ ಹೇಗೆ. ? ಜಾಹಿರಾತುಗಳಲ್ಲಿ
ತೋರಿಸುವಂತೆ, ಪಾಷಾಣವನ್ನು ತಿಂದ ಇಲಿಗಳು ಮನೆಯಿಂದ ಬಹುದೂರ ಹೋಗಿ ಪ್ರಾಣ
ಬಿಡುವುದಿಲ್ಲ.

ವಾಸನೆಯ ಜಾಡು ಹಿಡಿದು, ಮನೆಯ ಕೋನೆ-ಕೋನೆಗಳನ್ನು ಜಾಲಾಡಿ ಸತ್ತ ಇಲಿಗಳ ಶವಸಂಸ್ಕಾರ
ಮಾಡುವಷ್ಟರಲ್ಲಿ ಸಾಕುಬೇಕಾಗಿ ಹೋಯಿತು. ಇಲಿಗಳ ಕಾಟ ಸಹಿಸಬಹುದು ಆದರೆ ಈ ಫಜೀತಿ ಬೇಡ.
ದುರಾದೃಷ್ಟವೆಂದರೆ ಎಷ್ಟೋ ದಿನಗಳ ನಂತರ, ಯಾರದ್ದೋ ಮನೆಯಲ್ಲಿ ಇಟ್ಟ ಪಾಷಾಣವನ್ನು ತಿಂದ
ಇಲಿಗಳು, ನಮ್ಮ ಮನೆಯಲ್ಲಿ ಬಂದು ಸಾಯುತ್ತಿದ್ದುದು. ಇಲಿಗಳ ಕಾಟ ಕಡಿಮೆಯಾಯಿತಾದರೂ,
ಅವುಗಳ ಸಂತತಿ ಅವಾಸನಗೊಳ್ಳಲಿಲ್ಲ. ಅದೆಲ್ಲಿ ಸಂತಾನಾಭಿವೃದ್ಧಿ ನಡೆಸಿ, ಮರಿ ಹಾಕಿ,
ಮಕ್ಕಳ ಲಾಲನೆ-ಪಾಲನೆ ಮಾಡಿ ಬದುಕತ್ತವೆಯೋ? ಇಲಿ ಬೋನು ತಂದು, ದಿನಕ್ಕೊಂದರಂತೆ ಹಿಡಿದು,
ಗಡಿ ದಾಟಿಸುವ ಯೋಜನೆ ಚೆನ್ನಾಗಿತ್ತಾದರೂ, ಆ ಯೋಜನೆಗೆ ಬೇಕಾಗಿದ್ದ ತಾಳ್ಮೆ ಸಹನೆಗಳೆಂಬ
ಅಘೋರ ಗುಣಗಳು ಇರಲಿಲ್ಲ.

'ಬೆಕ್ಕಿನ ಮಿಯಾವ್-ಮಿಯಾವ್ ಸದ್ದು ಕೇಳಿದರೂ ಸಾಕು, ಇಲಿಗಳು ಹೆದರಿ ನಡುಗುತ್ತವೆ. '
ಎನ್ನುತ್ತಾ, ಬೆಕ್ಕನ್ನು ಸಾಕಬೇಕೆಂಬುದಾಗಿ ಪುಗಸಟ್ಟೆ ಸಲಹೆಯನ್ನು ನೀಡಿದಳು ಅಜ್ಜಿ.
ಅದು ನಮಗೂ ತಿಳಿದಿದ್ದ ವಿಷಯವೆ. ಆದರೆ ತಂದೆಯವರಿಗೆ ಬೆಕ್ಕನ್ನು ಕಂಡರೆ ಆಗದು. ಮನೆಯ
ಪರಿಧಿಯೊಳಗೆ ಬೆಕ್ಕಿನ ಚಲನವಲನಗಳ ಮೇಲೆ ಸಂಪೂರ್ಣ ನಿರ್ಬಂಧ ಹೇರಲಾಗಿತ್ತು.
ಅಪರೂಪಕ್ಕೆಂಬಂತೆ ಹಾಲಿನ ಪಾತ್ರೆಯನ್ನು ಬೀಳಿಸಿ ಹೋಗಲು ಬರುತ್ತಿದ್ದ ಆಗಂತುಕ
ಬೆಕ್ಕನ್ನೇ ಅವರು ಓಡಾಡಿಸಿಕೊಂಡು ಬಡಿಯುತ್ತಿದ್ದರು. ಅಂತಹದರಲ್ಲಿ ಮನೆಯಲ್ಲಿಯೇ
ಬೆಕ್ಕನ್ನು ಸಾಕುವುದು ಬಹುದೂರದ ಮಾತು. ಅದೇನೊ ಅವರ ವಂಶಕ್ಕೆ ಬೆಕ್ಕು ಆಗಿ
ಬರೊಲ್ಲವಂತೆ. ಬೆಕ್ಕುಗಳು ಹಾವು ಉಳ-ಉಪ್ಪಟೆಗಳನ್ನೆಲ್ಲಾ ಕಚ್ಚಿಕೊಂಡು ಮನೆಯೊಳಗೆ
ಬರುತ್ತದೆಂಬುದು ಅವರ ಸಿಟ್ಟಿಗೆ ಒಂದು ಕಾರಣ. ' ಇಲಿಗಳ ಜೊತೆ ಗುದ್ದಾಟವಾದರೂ ಸರಿ,
ಬೆಕ್ಕಿನ ಜೊತೆ ಸರಸ ಬೇಡ 'ಎಂಬುದಾಗಿ ಹೇಳಿದರು.

ನನಗೂ ಬೆಕ್ಕು ಎಂದರೆ ಅಷ್ಟಕ್ಕ ಶ್ಟೇ. ಕತ್ತಲಲ್ಲೂ ಮಿನುಗುವ ಅದರ ತೀಕ್ಷಣವಾದ ಬೆಕ್ಕಿನ
ಕಣ್ಗಳು, ಸದಾ ಗಂಟಿಕ್ಕಿದಂತೆ ಕಾಣುವ ಮುಖ, ಸರಿ ರಾತ್ರಿಯಲ್ಲಿ ಮಗುವಿನಂತೆ ಅಳುವ ಅದರ
ವಿಕಾರತೆ. ಟೂ ಮಚ್.

ನನ್ನ ತಮ್ಮ ಮತ್ತು ಅಮ್ಮನಿಗೆ ಮಾತ್ರ ಬೆಕ್ಕು ಎಂದರೆ ಬಹಳ ಪ್ರೀತಿ. ಬಹಳ ದಿನಗಳಿಂದ
ಮನೆಯಲ್ಲೊಂದು ಬೆಕ್ಕನ್ನು ಸಾಕಬೇಕೆಂದು ಕೇಳಿಕೊಳ್ಳುತ್ತಿದ್ದರಾದರೂ, ತಂದೆಯವರಿಂದ
ಅನುಮತಿ ಸಿಕ್ಕಿರಲಿಲ್ಲ. ಇಲಿಗಳ ಅತಿಯಾದ ಉಪಟಳವನ್ನೇ ಅಸ್ತ್ರವಾಗಿ ಬಳಸಿ ಇಬ್ಬರೂ,
ತಂದೆಯ ಬಳಿ ಅಂಗಲಾಚಿದರು. ಕೆಲವು ಷರತ್ತುಗಳ ಮೇಲೆ ಒಪ್ಪಿಗೆಯನ್ನೂ ಪಡೆದುಬಿಟ್ಟರು.


-> 2 <-

ತಮ್ಮ ಅದೆಲ್ಲಿಂದಲೋ ಬೆಕ್ಕಿನ ಮರಿಯನ್ನು ಹಿಡಿದು ತಂದ. ಅದರ ಕಿವಿಯಲ್ಲಿ ಸುಬ್ಬಿ ಎಂದು
ಊದಿ ನಾಮಕರಣವನ್ನೂ ಮಾಡಿದ. ಬಹಳ ಮುತುವರ್ಜಿ ವಹಿಸಿ ನೋಡಿಕೊಳ್ಳುತ್ತಿದ್ದ. ಸುಬ್ಬಿ
ಮಿಯಾವ್ ಎನ್ನುವುದು ಹಸಿವಾದಾಗ ಮಾತ್ರ ಎಂದು ತಿಳಿದು, ಮಿಯಾವ್ ಎಂದಾಗಲೆಲ್ಲಾ ಅದರ
ಬಟ್ಟಲಿಗೆ ಹಾಲು ಸುರಿದು, ಅನ್ನ ಕಲಸುತ್ತಿದ್ದ. ಸುಬ್ಬಿ ಬಟ್ಟಲಲ್ಲಿ ಇರುತ್ತಿದ್ದ
ಹಾಲನ್ನು ಮಾತ್ರ ಹೀರಿ, ಅನ್ನವನ್ನು ಹಂಗೆ ಬಿಡುತ್ತಿದ್ದಳು. ಹೀಗೆ ಅಮ್ಮ-ಮಗ ಇಬ್ಬರೂ
ಸೇರಿ, ಲೀಟರುಗಟ್ಟಲೆ ಹಾಲಿನ ನೈವೇದ್ಯ ಮಾಡಿಸಿತ್ತಾ, ಸುಬ್ಬಿಯನ್ನು ಸೊಂಪಾಗಿ
ಬೆಳೆಸಿದರು.

ಮನೆಯಲ್ಲಿ ಬೆಕ್ಕಿನ ಜೊತೆ ಪಳಗಿದ ಮೆಲೆ, ನನಗೂ ಅದರ ಮೇಲಿದ್ದ ವಿಕಾರ ಕಲ್ಪನೆಗಳು
ಕಡಿಮೆಯಾಗಿ ಸುಬ್ಬಿ ಸುಂದರವಾಗಿ ಕಾಣಲಾರಂಭಿಸಿದಳು. ಹಾಲಿನಷ್ಟು ಬೆಳ್ಳಗೆ,
ಬಿಗಿಹಿಡಿದರೆ ಜಾರಿಕೊಂಡು ಹೋಗುವಂತಹ ಅದರ ಮೈ ಸೊಗಸಾಗಿತ್ತು. ಸುಬ್ಬಿಯನ್ನು ತಂದ ಆರಂಭದ
ದಿನಗಳಲ್ಲಿ ಇಲಿಗಳ ಓಡಾಟವೂ ಕಡಿಮೆಯಾಯಿತು. ' ಸುಬ್ಬಿಯ ದೆಸೆಯಿಂದ ಇಲಿಗಳು
ಬರುತ್ತಿಲ್ಲಾ 'ಎಂದು ಅಮ್ಮ-ಮಗ ಅಭಿಮಾನದಿಂದ ಹೇಳಿಕೊಳ್ಳುವರು. ನಾನಂತೂ ಸುಬ್ಬಿ ಇಲಿ
ಹಿಡಿದದ್ದನ್ನು, ತಿಂದದ್ದನ್ನು ಒಮ್ಮೆಯು ಕಣ್ಣಿಂದ ನೋಡಿರಲಿಲ್ಲ. ಕೂತಲ್ಲಿ-ನಿಂತಲ್ಲಿ
ಕಣ್ಣು-ಮುಚ್ಚಿ ತೂಕಡಿಸುವ ಮಂದ-ಮನಸ್ಸಿನ ಸುಬ್ಬಿ, ಇಲಿಯೊಂದನ್ನು ಭೇಟೆಯಾಡುವುದು
ಆಶ್ಚರ್ಯವೇ ಸರಿ.

ಕೆಲವೇ ದಿನಗಳಲ್ಲಿ ಇಲಿಗಳ ತಂಟೆ ಪುನಃ ಪ್ರಾರಂಭವಾಯಿತು. ತಮ್ಮನ ಮಗ್ಗುಲಲ್ಲಿ ಮೆತ್ತನೆ
ಹಾಸಿಗೆ ಮೇಲೆ ಮಲಗುತ್ತಿದ್ದ ಸುಬ್ಬಿಯನ್ನು, ಬಲಾತ್ಕಾರವಾಗಿ ಅಡುಗೆ ಮನೆಗೆ ತಂದು
ಕೂಡಿದರು. ಕಾರಣ, ರಾತ್ರಿ ಅಡುಗೆ ಮನೆಗೆ ಬರುವ ಇಲಿಗಳ ಭೇಟೆಗೆ. ಏನೂ
ಪ್ರಯೋಜನವಾಗಲಿಲ್ಲ. ಒಂದು ದಿನ ಸುಬ್ಬಿಯ ಬಣ್ಣವೂ ಬಯಲಾಗಿ ಹೋಯಿತು. ಭೇಟೆ ದೂರದ ಮಾತು,
ತನ್ನ ಕಣ್ಣ ಮುಂದೆಯೇ ಇಲಿ ಓಡಾಡುತ್ತಿದ್ದರೂ, ಕಡೆ ಪಕ್ಷ ಅದರ ಕಡೆಗೆ ಆಸಕ್ತಿಯಿಂದ
ಕಣ್ಣೆತ್ತಿಯು ನೋಡುತ್ತಿರಲಿಲ್ಲ. ಸುಬ್ಬಿಯ ಈ ದೌರ್ಬಲ್ಯವನ್ನು ಅರಿತಿದ್ದ ಇಲಿಗಳು,
ಬೆಕ್ಕಿನ ಕುಲಕ್ಕೆ ಸಲ್ಲಬೇಕಿದ್ದ ಕನಿಷ್ಟ ಗೌರವವನ್ನೂ ನೀಡದೆ,ಅದರ ಮುಂದೆಯೇ
ರಾಜಾರೋಷವಾಗಿ ಹರಿದಾಡುತ್ತಿದ್ದವು. ಇಲಿಯನ್ನು ಕಂಡಾಕ್ಷಣ ಬೆಕ್ಕು ಅಟ್ಟಿಸಿಕೊಂಡು
ಹೋಗುವುದು ಟಾಮ್-ಅಂಡ್ ಜೆರ್ರಿ ಕಾಲದಿಂದಲೂ ನಡೆದುಕೊಂಡು ಬಂದ ನಿತ್ಯಸತ್ಯ. ಅದು
ಪ್ರಕೄತಿ ಧರ್ಮವೂ ಹೌದು. ಆದರೆ ನಮ್ಮ ಮನೆಗೆ ಬರುತ್ತಿದ್ದ ಸಾಕು ಪ್ರಾಣಿಗಳ
ವಿಶೇಷತೆಯೆಂದರೆ, ಜೀವಕುಲದ ನೀತಿ ನಿಯಮಕ್ಕೇ ವಿರುದ್ಧವಾಗಿ ವರ್ತಿಸುವುದು.

ಹೊತ್ತಿಗೆ ಮೊದಲೇ ಹಾಲು ಅನ್ನದ ಪ್ರೋಕ್ಷಣೆ ನಡೆಯುವಾಗ, ಬೇರೆಯದರ ಅವಶ್ಯಕತೆಯೇ
ಬೀಳುವುದಿಲ್ಲವಲ್ಲ. ಅನ್ಯಾಯವಾಗಿ ಒಂದು ಜೀವಿಯನ್ನು ಪರಾವಲಂಬಿಯನ್ನಾಗಿ ಮಾಡಿದ್ದರು.
ಹೇಗೋ ಈ ವಿಷಯ ತಂದೆಯವರಿಗೂ ತಿಳಿಯಿತು. ಸುಬ್ಬಿಯನ್ನು ಮನೆಯಲ್ಲಿಯೇ ಉಳಿಸಿಕೊಳ್ಳಲು
ಇರುವ ಒಂದೇ ಪರಿಹಾರ ಎಂದರೆ, ಅದಕ್ಕೆ ಭೇಟೆಯನ್ನು ಕಲಿಸುವುದು. ಇಲಿ ತನ್ನ ವೈರಿ ಎಂದು
ಸುಬ್ಬಿಗೆ ಮನದಟ್ಟು ಮಾಡಿಸಿಕೊಡುವುದು. ಅಮ್ಮ ಮತ್ತು ನನ್ನ ತಮ್ಮ ಸರಿರಾತ್ರಿಯಲ್ಲಿ
ಇಲಿಯ ಸದ್ದು ಕೇಳಿದೊಡನೆ ಸುಬ್ಬಿಯ ಜೊತೆಗೆ ಅಡುಗೆ ಮನೆಗೆ ದೌಡಾಯಿಸಿದರು. ಇಲಿಯನ್ನು
ಗಾಬರಿಗೊಳಿಸಿ ಎರಡು ಮೂಲೆಗಳಿಂದಲೂ ಇಲಿಯನ್ನು ಅಡ್ಡ ಹಾಕಿಕೊಂಡು ಸುಬ್ಬಿಯನ್ನು
ಪ್ರಚೋಧಿಸುವರು. ಸುಬ್ಬಿಯು ಅವರ ಆಜ್ನೆಯಂತೆ ಇಲಿಯ ಮೇಲೆ ಎರಗುವಳು, ಆದರೆ ಹೆದರಿ ಹಿಂದೆ
ಸರಿಯುವಳು. ಕೊನೆಗೆ ತನಗೂ ಅದಕ್ಕೂ ಸಂಬಂಧವೇ ಇಲ್ಲವೆಂಬಂತೆ ಸುಬ್ಬಿ, ಕಣ್-ಕಣ್
ಬಿಡುತ್ತಾ ಕುಳಿತಳು. ಇದು ನನಗೂ ಮತ್ತು ತಂದೆಯವರಿಗೂ ಬಲು ಹಾಸ್ಯಾಸ್ಪದವಾದ ದೄಶ್ಯ.

ಸುಬ್ಬಿಗೆ ಸ್ವಾಭಾವಿಕವಾಗಿ ಬರಬೇಕಾಗಿದ್ದ ಸಮರ-ಕಲೆಗಳಿಂದ ವಂಚಿತಳನ್ನಾಗಿ ಮಾಡಿದ್ದರು.
ಇನ್ನು ಸುಬ್ಬಿಯನ್ನು ನೆಚ್ಚಿಕೊಂಡು ಪ್ರಯೋಜನವಿಲ್ಲವೆಂದು ತಿಳಿದ ತಂದೆಯವರು ಹೊಸದಾಗಿ
ಒಂದು ರೆಫ್ರಿಜರೇಟರನ್ನು ತಂದರು. ಪೌಷ್ಠಿಕ ಆಹಾರ ಪದಾರ್ಥಗಳಾದ ಕ್ಯಾರೇಟು-ಬೀನ್ಸು-ಟಮೋಟ
ಮುಂತಾದವುಗಳ ಮೇಲೆ ಆಗುತ್ತಿದ್ದ ಸತತ ದೌರ್ಜನ್ಯವನ್ನು ತಡೆಯಲು ಈ ದಿಟ್ಟ ಹೆಜ್ಜೆ
ಅನಿವಾರ್ಯವಾಗಿತ್ತು. ಫ್ರಿಜ್ಜಿನಲ್ಲಿ ಇಡುತ್ತಿದ್ದ ತರಕಾರಿಗಳು ತಂಪಾಗಿ-ಶುಭ್ರವಾಗಿ
ಇರುತ್ತಿದ್ದವು ಎನ್ನುವುದಕ್ಕಿಂತ ಹೆಚ್ಚಾಗಿ ಸೇಫಾಗಿ ಇರುತ್ತಿದ್ದವು.

ಹೊಸದಾಗಿ ತಂದಿದ್ದ ಗೋದ್ರೇಜ್ ರೆಫ್ರಿಜರೇಟರು ಕೆಲವೇ ದಿನಗಳಲ್ಲಿ ಕೆಟ್ಟು ನಿಂತಿತು.
ಅಂಗಡಿಯವನನ್ನು ಕರೆಸಿ ಬಿಚ್ಚಿಸಿ ನೋಡಿದಾಗ ತಿಳಿದದ್ದೇನೆಂದರೆ, ' ಹಿಂಬದಿಯಲ್ಲಿ ನೀರು
ಹೋಗಲು ಇದ್ದ ಯಾವುದೋ ಹೋಸ್ ಪೈಪನ್ನು ಇಲಿಗಳು ತಿಂದು ಹಾಕಿದ್ದವು'. ತಮ್ಮ ಅಸಹನೆಯನ್ನು
ಈ ರೀತಿ ವ್ಯಕ್ತಪಡಿಸಿದ್ದವು. ತದನಂತರ ಫ್ರಿಜ್ಜಿಗೆ ಹಿಂಬದಿಯಲ್ಲಿ ರಕ್ಷಾತ್ಮಕ ಕಬ್ಬಿಣದ
ಜಾಲರಿಯನ್ನೇ ಜೋಡಿಸಬೇಕಾಯಿತು. ಇಷ್ಟೆಲ್ಲಾ ಆದಮೇಲೆ ಇಲಿಗಳ ತಂಟೆಯು ಕಡಿಮೆಯಾಯಿತು.

ಆದರೆ ಇಲಿ ಕಥೆ ಮುಗಿದ ಮೇಲೆ ಬೆಕ್ಕಿನ ದುರಂತವನ್ನೂ ಹೇಳಿ ಬಿಡುತ್ತೇನೆ. ಸುಬ್ಬಿ
ಮನೆಯಲ್ಲಿ ಫ್ಯಾಮಿಲಿ ಮೆಂಬರ್ ಆಗಿ ಹೋಗಿದ್ದಳು. ಬರಿ ಹಾಲು-ಅನ್ನ ತಿನ್ನುತ್ತಾ, ತಮ್ಮನ
ಜೊತೆ ಚಿನ್ನಾಟವಾಡುತ್ತಾ ಮನೆ ತುಂಬಾ ಲವಲವಿಕೆಯಿಂದ ಓಡಾಡುವಳು. ದುರಾದೄಷ್ಟವಶಾತ್,
ಎಲ್ಲರ ಮುದ್ದಿನ ಕೂಸಾಗಿ ಹೋಗಿದ್ದ, ನಲ್ಮೆಯ ಸುಬ್ಬಿ ಮೊದಲ ದೀಪಾವಳಿಗೇ ಬಲಿಯಾಗಿ
ಬಿಟ್ಟಳು.

ಪಾಪ ತನ್ನ ಜೀವನ ಪರ್ಯಂತ ಯಾರಿಗೂ ಕೆಡುಕನ್ನು ಬಯಸದೆ, ಸಣ್ಣ ಕ್ರಿಮಿಕೀಟಗಳಿಗೂ ತೊಂದರೆ
ಕೊಡದೆ, ಸಮೄದ್ಧ ಜೀವನವನ್ನು ನಡೆಸಿದ ಸುಬ್ಬಿ ಇಹಲೋಕ ತ್ಯಜಿಸಿದಳು. ಅಸಹಾಯಕಳಾದ ಅಮ್ಮ
ಸಾಯುತ್ತಿದ್ದ ಬೆಕ್ಕಿನ ಬಾಯಿಗೆ ನೀರು ಬಿಡುತ್ತಾ ಕಂಬನಿಗರೆದಳು. ಸ್ವಲ್ಪ ದೂರದಲ್ಲಿಯೇ
ಸ್ತಬ್ದನಾಗಿ ನಿಂತಿದ್ದ ತಮ್ಮ. ತಾನು ಅತಿಯಾಗಿ ಹಚ್ಚಿಕೊಂಡಿದ್ದ ಸುಬ್ಬಿಯ
ನಿರ್ಗಮನವನ್ನು ಒಪ್ಪಿಕೊಳ್ಳಲು ಅವನ ಮನಸ್ಸು ಸಿದ್ಧವಿರಲಿಲ್ಲ. ತನ್ನ ಕಾಲುಗಳನ್ನು
ಸೆಟೆದುಕೊಂಡು, ಬಾಯಿ ಕಳೆದು ಜೊಲ್ಲು ಸುರಿಸುತ್ತಾ ಎಲ್ಲರ ಕಡೆಗೂ ಕೃತಜ್ನತೆಯಿಂದ
ನೋಡಿದಳು ಸುಬ್ಬಿ. ಮನೆಯ ಚಿಕ್ಕ ಮಗುವೊಂದು ದೂರವಾಗುತ್ತಿರುವ ಸನ್ನಿವೇಶ. ಮುರ್ನಾಲ್ಕು
ಬಾರಿ ಕಾಲುಗಳನ್ನು ಜೋರಾಗಿ ಕೊಡವಿದವಳೆ, ಸುಮ್ಮನಾಗಿಬಿಟ್ಟಳು. ತೆಗೆದ ಬಾಯಿ
ತೆಗೆದಂತಿತ್ತು. ಮುಟ್ಟಿದರೆ ಜಾರಿ ಹೋಗುವಷ್ಟು ಮೆತ್ತಗೆ ಇದ್ದ ಅವಳ ಕೋಮಲ ದೇಹ
ಕಲ್ಲಿನಂತಾಯಿತು. ಬೆಕ್ಕು ಅಂದರೆ ತನ್ನ ವಂಶದ ವೈರಿ ಎಂದು ಹೀಗಳೆಯುತ್ತಿದ್ದ ತಂದೆಯವರ
ಕಣ್ಣುಗಳೂ ತೇವವಾದವು. ಸಕಲ ಸಂಸಾರಿ ಗೌರವಗಳೊಂದಿಗೆ ಹಿತ್ತಲ ದಾಸವಾಳ ಗಿಡದ ಬುಡದಲ್ಲಿ
ಮಣ್ಣು ಮಾಡಲಾಯಿತು.

ನಾನೂ ಪುಸ್ತಕಗಳಲ್ಲಿ ಓದಿದ್ದೆ 'ಪಟಾಕಿಯ ಸದ್ದು, ಸಾಕು ಪ್ರಾಣಿಗಳ ಮೆದುಳಿನ ಮೇಲೆ
ಕೆಟ್ಟ ಪರಿಣಾಮ ಬೀರುತ್ತದೆ. ' ಎಂದು. ಅದರ ಲೈವ್ ಡೆಮೊ ನೋಡುವ ದೌರ್ಭಾಗ್ಯ ಸಿಗುತ್ತದೆ
ಎಂದು ತಿಳಿದಿರಲಿಲ್ಲ. ತಮ್ಮನಿಗೆ ಇದರ ನೋವಿನಿಂದ ಚೇತರಿಸಿಕೊಳ್ಳಲು ಆಗಲೇ ಇಲ್ಲ.
ಕೂತಲ್ಲಿ-ನಿಂತಲ್ಲಿ ಸುಬ್ಬಿಯ ಜೊತೆಗಿದ್ದ ಒಡನಾಟಗಳನ್ನು ಹೇಳಿಕೊಳ್ಳುತ್ತಾ
ಭಾವುಕನಾಗುವನು. ಕೊನೆಗೆ ಅಂತಹದ್ದೇ ಬೆಕ್ಕನ್ನು ಹಿಡಿದು ತಂದು ಅದಕ್ಕೆ ಸುಬ್ಬಿ ಎಂದು
ಹೆಸರಿಟ್ಟು, ಮುಗಿದು ಹೋದ ಅಧ್ಯಾಯದ ಪಾರ್ಟ್-ಟು ಶುರುಮಾಡಬೇಕಾಯಿತು