ಈಜಲು ಹೋದ ಸೀನ, ಗುಳ್ಳು ಮತ್ತು ಕೋಳಿಕಾಲು

ಹತ್ತನೇ ಕ್ಲಾಸ್ ಪರೀಕ್ಷೆ ಮುಗಿದು, ಬೇಸಿಗೆ ರಜೆ ಪ್ರಾರಂಭವಾಗಿತ್ತು.ಗುಳ್ಳ ಮತ್ತು ಕೋಳಿ ಹರಳಿಮರದ ಕಟ್ಟೆಮೇಲೆ ಕುಳಿತು, ಚೌಕಾಬರ ಆಡುತ್ತಿದ್ದರು.

ಕೋಳಿಯ ಮೂಲನಾಮಧೇಯ ಚಿದಾನಂದ.ಆದರೆ ತುರ್ತು ಪರಿಸ್ಥಿತಿಗಳಲ್ಲಿ ಚಿದು ಧೈರ್ಯಗೆಟ್ಟು ಕಾಲು ನಡುಗಿಸುವನು.ಗಂಡಸರು ಕೋಳಿ ಕಾಲು ತಿಂದರೇ ಹಿಂಗಾಗುತ್ತೆ ಅಂತ ಪ್ರತೀತಿ ಇದೆ. ಆದ್ದರಿಂದಲೇ ಚಿದಾನಂದನಿಗೆ ಕೋಳಿಕಾಲು ಎಂಬ ಅನ್ವರ್ಥನಾಮ ಅಂಟಿಕೊಂಡಿತ್ತು. ಕೋಳಿ, “ ಗುಳ್ಳಾ ಅಂತೂ ಹತ್ತನೆ-ಕ್ಲಾಸು ಮುಗಿದೇ ಹೋಯ್ತಲ್ಲೋ..?. ಮುಂದೆ ಕಾಮರ್ಸ್ ತಗೋಬೇಕು ಅಂತಿದ್ದೀನಿ.” ಅಂದ ಕಾಲೇಜ್ ಕ್ಯಾಂಟಿನುಗಳಲ್ಲಿ, ಪಾರ್ಕುಗಳಲ್ಲಿ ಹುಡುಗ-ಹುಡುಗಿಯರ ಸಲುಗೆಯ ನಡೆ-ನುಡಿಗಳು ಅವನ ಮನದಲ್ಲಿ ಹುಚ್ಚು ಫ್ಯಾಂಟಸಿಯನ್ನು ಸ್ರುಷ್ಟಿಸಿದ್ದವು. ಕಾಲೇಜು ಸೇರಿದಾಕ್ಷಣ ಸರಸ-ಸಲ್ಲಾಪಗಳು ಕಾಂಪ್ಲಿಮೆಂಟರಿಯಂತೆ ಮತ್ತು ಹಚ್ ನಾಯಿಯಂತೆ ಹಿಂಬಾಲಿಸುತ್ತವೆಂದು ಭಾವಿಸಿದ್ದ.

“ನೀ ಪಾಸಾದ್ರೆ ಅಲ್ವೇನೋ..ಕಾಲೇಜು-ಕಾಮ-ಕಾಮರ್ಸು ಇತ್ಯಾದಿ,ಇತ್ಯಾದಿ! ಈ ಊರಲ್ಲಿ ಒಂದೇ ಸಾರ್ತಿಗೆ ಹತ್ತನೆ ಕ್ಲಾಸು ಪಾಸಾದ ಮೇಧಾವಿಗಳು ಎಷ್ಟಿದ್ದಾರೆ..? ಸ್ಕೂಲಿಗಿಂತ ಹೆಚ್ಚಾಗಿ ವೀರಭದ್ರೇಶ್ವರ ಟಾಕೀಸು, ಗಾಂಧಿ-ಪಾರ್ಕು ಪ್ರದಕ್ಷಿಣೆ ಹಾಕಿದ್ದೀರ. ತನ್ನ ಮನೆಯಿಂದಲೇ ಅಡಿಕೆ ಕದ್ದು, ಶೆಟ್ಟಿ ಅಂಗಡಿಗೆ ಮಾರಿ, ದುಡ್ಡು ತೀರುವವರೆಗೂ ಪೇಟೆ ಸುತ್ತಿದ್ದೀರ. ಅಷ್ಟಕ್ಕೂ ನಿಂಗ್ಯಾಕೆ ಕಾಲೇಜು..? ಹೆಂಗೂ ನಿಮ್ಮಪ್ಪ ಇನ್ನೆರಡು ಎಕರೆ ಭತ್ತದ ಗದ್ದೆಗೆ, ಅಡಿಕೆ ಸಸಿ ನೆಟ್ಟು ತೋಟ ಮಾಡ್ತಿದ್ದಾರಂತೆ. ತೋಟ ಗೇಯ್ಕೋಂಡು ಇಲ್ಲೇ ಇದ್ದುಬಿಡು.” ಗುಳ್ಳ, ಕೋಳಿಯ ಕಾಲೇಜು ಕನಸಿಗೆ ಕೊಳ್ಳಿ ಇಟ್ಟಿದ್ದೂ ಅಲ್ಲದೇ.., ಆದರ್ಶ ರೈತನಾಗುವ ಬಿಟ್ಟಿ ಸಲಹೆಯನ್ನೂ ನೀಡಿದ.

“ ನಿನ್ ಬಾಯಲ್ಲಿ ಒಳ್ಳೆ ಮಾತೆ ಬಾರದ.ಮೂವತ್ತೈದಕ್ಕೆ ಮೋಸ ಇಲ್ಲಮ್ಮ. ನಮ್ಮ ಎಗ್-ಜಾಮ್ ರೂಮಲ್ಲಿ ಕಾನ್ವೆಂಟ್ ಹುಡುಗರು ಬಿದ್ದಿದ್ರು.ಅವರ ಕೈ-ಕಾಲು ಹಿಡಿದು ಕಾಪಿ ಹೊಡೆದಿದ್ದೇನೆ. ನಾ ಕಾಲೇಜಿಗೆ ಹೋಗುವವನೆ. ಅಲ್ಲವೋ ಗುಳ್ಳ ನಮ್ಮಪ್ಪನ ದುಡ್ಡು, ನಾವ್ ಕೊಳ್ಳೇ ಹೊಡೆದ್ರೆ ಪಾಪ ಹೆಂಗಾಗುತ್ತೋ..?. ಈ ಹಳ್ಳಿ ಗಮ್ಮಾರ್-ಗಳಿಗೆ ಪಾಕೆಟ್-ಮನಿ ಅಂದ್ರೇನೆ ಅಂತ್ಲೇ ಗೊತ್ತಿಲ್ಲ. ಕಾಸು ಕೇಳಿದರೂ ಸಾಕು ‘ ಉಣ್ಣೋದು ಮಲ್ಗೋದು ಮನೆಯಲ್ಲೇ ಇನ್ನು ನಿಂಗ್ಯಾಕೊ ದುಡ್ಡು ’ ದುಡ್ಡು ಬರಿ ಉಣ್ಣಾಕೆ ಮಲ್ಗಾಕೆ ಅಶ್ಟೇ ಅಂದುಕೊಂಡಿದಾರೆ. ಕೈ-ಖರ್ಚಿಗೆ ದಾರಿ ಮಾಡಿಕೊಳ್ತೀವಪ್ಪ.” ತಾನು ಮಾಡಿರುವ ಅನಾಚಾರವು ಕಾನೂನು ಬಾಹಿರವಲ್ಲವೆಂದು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದ.

ಸೈಕಲ್ ಬೆಲ್ ಬಾರಿಸಿಕೊಂಡು ಗೂಳಿಯಂತೆ ಬರುತ್ತಿದ್ದ ಸೀನನನ್ನು ನೋಡಿ ಇಬ್ಬರೂ ನಿಂತರು.ಸೀನ ಬಂದವನೇ ಇಬ್ಬರನ್ನೂ ನೋಡಿ ‘ ಏನ್ರೋ ನಾಯಿ-ನರಿಗಳೆಲ್ಲಾ ಒಟ್ಟಿಗೆ ತಿರುಗೋದಕ್ಕೆ ಪ್ರಾರಂಭಿಸಿವೆ..? ’ ಅಂದ. ಇಬ್ಬರಿಗೂ ಅಷ್ಟಾಗಿ ಬೇಸರ ಅನಿಸಲಿಲ್ಲ. ‘ ನಾ. .ಚಾನಲ್ ಕಡೆ ಹೋಗ್ತಾ ಇದೇನೆ. ಒಳ್ಳೆ ಬಿಸಿಲಿದೆ. ಸ್ವಲ್ಪ ಹೊತ್ತು ನೀರಿಗೆ ಹಾರಿ ಬರುವ ಬನ್ರಿ ’ ಎಂದ.

‘ ನೇರಳೆ ಮರದ್ ಮೇಲಿಂದ, ತಲೆ ಅಡಿಕ್ ಮಾಡ್ಕೊಂಡ್ ಬಿದ್ರು, ಇವನಿಗೆ ಬುದ್ಧಿ ಬರಲಿಲ್ಲ. ಇವತ್ತು ಮಂಗಳವಾರ ಸಿಕ್ಕಾಪಟ್ಟೇ ನೀರು ಬಿಟ್ಟಿರ್ತಾರೆ. ನಮ್ಮಂತ ಎಳಸು ನಿಂಬೆಗಳಿಗೆ ನೀರು ಸರಿ-ಬರೊಲ್ಲ.ನೀ ಹೋಗು “ .. ಗುಳ್ಳ ಸೀನನ ಆಫರ್ ತಿರಸ್ಕರಿಸಿದ.

“ ಲೋ ಗುಳ್ಳ .. ನಮಗೆ ಜಾಸ್ತಿ ನೀರಲ್ಲಿ .. ಈಜಕ್ಕೆ ಬರಲ್ಲ.ಆದರೂ ಈ ಹೊತ್ತಿನಲ್ಲಿ ನಮ್ಮೂರು ಹುಡುಗರೆಲ್ಲಾ ಐನಾರು-ಗುಂಡಿ ಹತ್ರ ಸೇರಿರ್ತಾರೆ.ಜಾತ್ರೆಇರತ್ತೆ. ಬಾ ಹೋಗುವಾ” ಕೋಳಿ, ಗುಳ್ಳನನ್ನು ಪುಸಲಾಯಿಸಿದ.ಮೂವರೂ ಐನಾರು-ಗುಂಡಿಯ ಕಡೆ ಹೊರಟರು.


ಕಾಲುವೆ ಒಂದು-ವರೆ ಆಳು ಎತ್ತರಕ್ಕೆ ಹರಿಯುತ್ತಿತ್ತು. ಈ ಸೆಳೆತದಲ್ಲಿ ಈಜುವುದಿರಲಿ.. ನೀರಿಗೆ ಇಳಿಯುವುದೂ ಮಹಾಪರಾಧವಾದ್ದರಿಂದ ಗುಳ್ಳ ಮತ್ತು ಕೋಳಿ ದಡದಲ್ಲಿಯೇ ಕುಳಿತರು. ಇಲ್ಲಿ ಕಾಲುವೆ, ದಡದ ಮಣ್ಣು-ಕೊರೆದು ಸ್ವಲ್ಪ ಅಗಲವಾಗಿಯೂ ಇದ್ದರಿಂದ, ಐನಾರು-ಗುಂಡಿ ಈಜಲು ಪ್ರಶಸ್ತವಾದ ಸ್ಥಳ. ಕನಸೂರಿನ ಚಿಳ್ಳೆ-ಪಿಳ್ಳೆಗಳೆಲ್ಲಾ ಜಲಕ್ರೀಡೆಯ ಮಹಾಯಜ್ನದಲ್ಲಿ ತಲ್ಲೀನರಾಗಿದ್ದರು.

ಸೀನ ಅಂಗಿ-ಪ್ಯಾಂಟು ತೆಗೆದು ಎಸೆದವನೇ ನೀರಿಗೆ ಹಾರಿದ. ಒಂದೇ ಜಂಪಿನಲ್ಲಿ ಡೈ ಹೊಡೆದವನು, ಮುಳುಗಿಕೊಂಡೇ ಸಾಗಿ, ಕಾಲುವೆಯ ಆಚೆ ದಡವನ್ನು ಮುಟ್ಟಿದ.

“ ಕಾಡ್-ಹಂದಿ ಮಾಂಸ ತಿಂದು ಹಿಂಗಾಗಿದಾನೆ ಕಣೋ ಇವ್ನು. ಅಲ್ಲಾ ನಾವುಇಷ್ಟು ವರುಷದಿಂದ ಪ್ರಯತ್ನ ಪಡ್ತಾನೆ ಇದ್ದೇವೆ. ಅದರೆ ಸ್ವಿಮ್ಮಿಂಗು ನಮಗೆ ಸಿದ್ಧಿಸುತ್ತಿಲ್ಲ ನೋಡು. ದಡದ ಮೇಲೆ ಕೂತು ಹೊಟ್ಟೆ ಉರಿದುಕೊಳ್ಳಬೇಕಷ್ಟೆ. ನೀರು ಕಡಿಮೆ ಇದ್ದಿದ್ದರೆ ನಾವೂ ಈಜಾಡಬಹುದಿತ್ತು”.. ಕೋಳಿಕಾಲು ಸಂಕಟ ತೋಡಿಕೊಂಡ.

ಗುಳ್ಳ ಸುಮ್ಮನೇ ಇದ್ದ. ಒಂದಷ್ಟು ಸಣ್ಣ ಹುಡುಗರು ಚಡ್ಡಿ ನೆನೆದು ಬಿಟ್ಟರೆ ಮನೆಯಲ್ಲಿ ಒದ್ದೆಯ ರಹಸ್ಯ ಬಯಲಾಗಿಬಿಡುತ್ತದೆಂದು, ದಿಗಂಬರರಾಗಿ ದೇಹಸಿರಿ ಪ್ರದರ್ಶಿಸುತ್ತಾ ಈಜುತ್ತಿದ್ದರು.

ಕಲ್ಲು ನೀರಿಗೆ ಎಸೆದು, ಹುಡುಕಿ ತರುವರು. ಕಾಲುವೆ ಬದಿಯಲ್ಲಿಯೇ ಬಾಗಿಕೊಂಡಿದ್ದ, ಮರದ ಮೇಲೇರಿ ಹತ್ತು-ಇಪ್ಪತ್ತು ಅಡಿ ಎತ್ತರದಿಂದ ವಿಧ-ವಿಧವಾಗಿ ನೀರಿಗೆ ಹಾರುವರು.ಒಬ್ಬನನ್ನು ಹೆಗಲ ಮೇಲೆ ಹೊತ್ತೊಯ್ದು, ನೀರಿನ ಮಧ್ಯದದಲ್ಲಿ ದಬಾರನೆ ಮುಳುಗಿಸುವರು. ಹಾರುವುದು, ಪಲ್ಟಿ ಹೊಡೆಯುವುದು, ರಿವರ್ಸ್ ಪಲ್ಟಿ ಹೊಡೆಯುವುದು, ಡೈ ಹೊಡೆಯುವುದು, ತೇಲುವುದು, ನೀರಿನಲ್ಲಿ ಮುಳುಗಿ ಉಸಿರುಕಟ್ಟಿ ಕೂರುವುದು, ಹರಿಯುವ ನೀರಿಗೆ ವಿರುದ್ಧವಾಗಿ ಈಜುವುದು, ಜೂಟಾಟ ಆಡುವುದು, .. ಹೀಗೆ ತರತರದ ಕಸರತ್ತುಗಳು, ಜಲಕ್ರೀಡೆಗಳು ನಿರಾಯಸವಾಗಿ ಸಾಗಿದ್ದವು. ತರಬೇತುದಾರನಿಲ್ಲದೇ ಪ್ರಕ್ರುತಿಯ ಮಡಿಲಿಲ್ಲಿ ಮೆರೆಯುತ್ತಿದ್ದರು.ಇಷ್ಟೆಲ್ಲಾ ರಿಸ್ಕಿ-ಕಸರತ್ತುಗಳಿದ್ದರೂ ಇದುವರೆವಿಗೂ ಯಾರೊಬ್ಬರೂ ತುಂಗೆಯ ಪಾಲಾಗಿರಲಿಲ್ಲ.

ಐನಾರು-ಗುಂಡಿಯಿಂದ ಸ್ವಲ್ಪ ಮುಂದೆ ಕಲ್ಲುಗಳ ಮೇಲೆ ಹೆಂಗಸರ ರಾಜ್ಯಭಾರ ನಡೆಯುವುದು. ಬಟ್ಟೆ ತೊಳೆಯಲೆಂದು ಕಾಲುವೆಯ ಕಡೆಗೆ ಬರುತ್ತಿದ್ದ ಹೆಂಗಸರ ಧ್ವನಿ ಕೇಳಿಸುತ್ತಿದ್ದಂತೆ, ಬೆತ್ತಲೆಯಾಗಿ ಈಜಾಡುತ್ತಿದ್ದ ಕನಸೂರಿನ ಮರಿ-ಪುಡಾರಿಗಳು, ತಮ್ಮ ಚೋಟುದ್ದ ಮಾನಕ್ಕೆ ಅಂಜಿ ನೀರಿನಲ್ಲಿ ಮುಳುಗಿದರು. ಮುಳುಗಿಕೊಂಡೇ ಮಾನ ಕಾಪಾಡಿಕೊಂಡು, ಬಟ್ಟೆಯನ್ನು ಹೊತ್ತು ಪರಾರಿಯಾದರು.

ಹೆಂಗಸರೆಲ್ಲಾ, ಈಜುತ್ತಿರುವ ಹುಡುಗರ ಮೇಲೆ ವಕ್ರದ್ರುಷ್ಠಿ ಬೀರಿ ‘ನಿಮ್ಮಮ್ಮಂಗೆ ಹೇಳ್ತೇನೆ; ನಿಮ್ಮಪ್ಪಂಗೆ ಹೇಳ್ತೇನೆ;“ ಕೆಲವರನ್ನು ಎದುರಿಸಿದರು.

‘ಶನಿಮುಂಡೇವು ನೀರನ್ನೆಲ್ಲಾ ಗಬಡ ಮಾಡಿ ಹಾಳು ಮಾಡ್ತವೆ. ಬೇಸಿಗೆ ಬಂದ್ರೆ ಇವರದ್ದೊಂದು ಕಾಟ ’ ಎನ್ನುತ್ತಾ ಬೋಳಮ್ಮ ಹುಡುಗರ ಕಡೆ ಶಾಪ ಹಾಕಿದಳು.

ಸೀನ, “ ಅಲ್ಲಾ ಬೋಳಮ್ಮಂಗೆ ಎಷ್ಟು..? ಗಾಂಚಲಿ ಅಂತೀನಿ. ಅವಳ ಬಕೇಟು, ಸೀರೆ ನೀರಲ್ಲಿ ಕೊಚ್ಚಿಕೊಂಡು ಹೋದಾಗ, ಅದರ ಬೆನ್ನಟ್ಟಿ ಹಿಡಿದು ತಂದಿದ್ದೆ. ಈಗ ನಮ್ಮ ಮೇಲೆಯೇ ಚಾಡಿ ಹೇಳಕ್ ನೋಡ್ತಾಳಲ್ಲಾ. ” ಎಂದ.

“ ಆಹ್ಹಾ ಮನ್ಮಥ, ಆ ದಿನ ಬೋಳಮ್ಮ ನ ಮಗ್ಳು ಚಂದ್ರಿ ಬಟ್ಟೆ ಜಾಲಿಸುವುದಕ್ಕೆ ಬಂದಿದ್ದಳು. ಅವಳನ್ನು ಮೆಚ್ಚಿಸೋದಕ್ಕೆ ತಾವು ಏನೇನೊ ಮಾಡಿದ್ರಿ. ಈಗ ನೋಡಿದ್ರೆ, ಯಾವುದೋ ಘನಕಾರ್ಯ ಮಾಡಿ, ಮೋಸ ಹೋದವನ ರೀತಿ ಪೋಸು ಕೊಡ್ತೀಯಾ. ಹೋಗೋಲೆ ಹೋಗು ” ಗುಳ್ಳ ಮೂದಲಿಸಿದ.

“ ಅಲ್ಲಲೇ ಸೀನ. ನೀ ಚಂದ್ರೀ ಮನೆ ಮುಂದೆ, ಸೈಕಲ್ ಬೆಲ್ ಬಾರಿಸಿಕೊಂಡು ನೂರಾರು ಸಾರಿ ತಿರುಗಾಡ್ತಾ ಇರು. ಅಲ್ಲವ್ಳು ಗರತಿ ದಡಮ್-ಗಟ್ಟೆ ಜಲೀಲ್ ಸಾಬಿ ಜೊತೆ ಅಬ್ಬೇಸು ಆಗೋಕೆ ತುದಿಗಾಲಲ್ಲಿ ನಿಂತವ್ಳೆ ” ಎನ್ನುತ್ತಾ ಕೋಳಿ-ಕಾಲು ಚಂದ್ರಿಯ ಶೀಲಕ್ಕೇ ಕೈ ಹಾಕಿದ.

“ಹಡಬೆ ಮುಂಡೇವ ಹೆಣ್-ಮಕ್ಳು ಬಗ್ಗೆ ಮಾತಾಡುವಾಗ ನಾಲಗೆ ಬಿಗಿ ಹಿಡ್ಕಳ್ರೋ. ಪಾಪದ ಹುಡುಗಿ ಬಗ್ಗೆ, ಹಂಗೆಲ್ಲಾ ಮಾತಾಡುದ್ರೆ ಸರಿ ಬರೊಲ್ಲ ನೋಡು.” ಏರು ದನಿಯಲ್ಲಿ ಹೇಳಿದ ಸೀನ.

“ ಏನೋ ಕಟ್ಟಿಕೊಂಡ ಹೆಂಡ್ತಿ ತರ ಅವಳ ಪರ ವಹಿಸ್ಕೊಂಡು ಬರ್ತಾನೆ ಇವ್ನು.ಲೋ ಸೀನ ಅವಳ ಕಥೆ ಗೊತ್ತೇನೊ ನಿಂಗೆ. ಜಲೀಲ್ ಸಾಬಿ ಹಸು ವ್ಯಾಪಾರಕ್ಕೆ ಅಂತ ಬೋಳಮ್ಮ ನ ಮನೆಗೆ ಬಂದಿದ್ದನಂತೆ. ಹಸು ಮುದಿಯಾಗಿದೆ ಕಟುಕರಿಗೆ ಮಾರಿ ಬಿಡುವ ಅಂತ ಕರೆಸಿದ್ದಳು.ಆದರೆ ಆ ಹಸು ಬಡ್ಡಿಮಗಂದು ಪ್ರಗ್ನೆಂಟ್ ಆಗಿತ್ತಂತಪ್ಪ. ಹೊಟ್ಟೆ ಒಳಗೆ ಕರು ಇರೋದರಿಂದ ಇದನ್ನ ಕಸಾಯಿಖಾನೆಗೆ ತಗೋಂಡು ಹೋಗೋದು ತಪ್ಪಾಗುತ್ತೆ. ನನ್ನ ಮನಸ್ಸಾಕ್ಷಿ ಒಪ್ಪುತ್ತಿಲ್ಲ ಅಂತ ಜಲೀಲ ಕ್ಯಾತೆ ತೆಗೆದ.ಅತ್ತ ಬೋಳಮ್ಮ ಒಂದು ಚೆರಿಗೆ ಹಾಲು ಕೊಡುವ ಈ ಗೊಡ್ಡಿಗೆ ಬಾಣಂತನ ಮಾಡಿಸಿ, ಕುತ್ತಿಗೆಗೆ ಕಟ್ಟಿಕೊಂಡು ಸಾಕಬೇಕಲ್ಲ ಅಂತ ಚಿಂತೆಯಾಯ್ತು.

ಇತ್ತ ಚಂದ್ರಿ ಆ ಹಸೂನ ಪೂರ್ತ ಮನಸ್ಸಿಗೆ ಹಚ್ಚಿಕೊಂಡು ಬಿಟ್ಟಿದ್ದಳಂತೆ. ಜಲೀಲನ ಮಾತು ಕೇಳಿ ಅವಳಿಗೆ ಅವನಲ್ಲಿ ಮಹಾತ್ಮ ಬುದ್ದನ ದರುಶನವಾಯಿತೇನೋ. ಅವನ ದೊಡ್ಡ ಗುಣ ಮೆಚ್ಚುಗೆಯಾಗಿ, ಸಲುಗೆ ಬೆಳೆದು ಲವ್ ಆಗಿಬಿಡ್ತಂತೆ.“ ಊರಿನ ಮಸಾಲೆ ವಿಷಯಗಳಿಗೆ ಮೂರು ಕಿವಿ ಮಾಡಿಕೊಂಡು ಹೋಗುತ್ತಿದ್ದ ಕೋಳಿ-ಕಾಲು, ಒಂದಕ್ಕೊಂದು ಸೇರಿಸಿ, ಎಲ್ಲರೂ ಒಪ್ಪುವಂತಹ ಕಥೆ ಮಾಡಿ, ಸತ್ಯದ ತಲೆಗೆ ಹೊಡೆದಂತೆ ಹೇಳಿದ.

“ಇಷ್ಟೆಲ್ಲಾ ಇದಿಯಾ ಕಥೆ. ಅದಕ್ಕೇನೋ..? ಚಂದ್ರಿಗೆ ಮದುವೆ ಮಾಡಲು ದೂರದ ಸಂಬಂಧ ಹುಡುಕ್ಕುತ್ತಿರೋದು. ಹಾಸನದ ಕಡೆಯಿಂದ ಯಾವನೋ ಇಂಜಿನಿಯರು ಗಂಡು ಬಂದು ಹೋಗಿದ್ದಾನಂತೆ.ಕುರಿ ಕುರಿ ಉಪಾಯ ಮಾಡಿ ಹಂಗೇ ಅಮುಕಿ ಬಿಡ್ತಾರೆ ನೋಡು.” ಗುಳ್ಳ, ಕೋಳಿಯ ತಾಳಕ್ಕೆ ಪಕ್ಕಾವಾದ್ಯ ಸೇರಿಸಿದ.

ಈ ಬಾರಿ ಸೀನ ಪ್ರತಿಕ್ರಿಯಿಸಲು ಹೋಗಲಿಲ್ಲ. “ ಜಾಸ್ತಿ ಸಮರ್ಥಿಸಿಕೊಂಡಷ್ಟು, ಹೊಸ ಹೊಸ ಕಥೆ ಹೇಳಿ ನನ್ನ ರೇಗಿಸ್ತಾರೆ.ಹರಕು ಬಾಯಿ ನನ್ನ ಮಕ್ಳು. ಟೈಮ್ ಬರಲಿ, ಇಬ್ಬರಿಗೂ ಚಳಿ ಬಿಡಿಸುತ್ತೇನೆ.”ಎಂದು ಮನದಲ್ಲಿಯೇ ಪಿಲಾನು ಹಾಕಿದ.

“ ತಾವು ಲೋಕಾಭಿರಾಮವಾಗಿ ಮಾತನಾಡುತ್ತಿರುವುದು, ಬಟ್ಟೆ ಜಾಲಿಸುತ್ತಿರುವ ಬೋಳಮ್ಮ ನ ಕಿವಿಮೇಲೆ ಬಿದ್ದರೆ ಮೂವರನ್ನೂ ಹೊಸಕಿ ಹಾಕಿ ಬಿಡುವಳು ” ಎಂದು ಹೆದರಿ ತಮ್ಮ ಲೋಕಕಲ್ಯಾಣದ ಮಾತುಗಳನ್ನು ಅಲ್ಲಿಗೇ ನಿಲ್ಲಿಸಿದರು.


ನೀರನ್ನು ನೋಡಿ ಕೋಳಿ ಚಡಪಡಿಸುತ್ತಿದ್ದ.ಮೈಸೂರು-ಪಾಕಿನ ಮುಂದೆ ಕೈ-ಕಾಲು ಕಟ್ಟಿ ಕೂರಿಸಿದಂತಾಗಿತ್ತು ಅವನ ಸ್ಥಿತಿ.

“ ನೀರಿಗೆ ಬೀಳೊವರೆಗು ಈಜು ಬರಲ್ಲ,ಈಜು ಬರೋವರೆಗೂ ನೀರಿಗೆ ಬೀಳಂಗಿಲ್ಲ, ಗಾದೆ ಕೇಳಿದ್ದೀಯೇನೋ. ಬಾ ಧೈರ್ಯ ಮಾಡಿ ನೀರಿಗೆ ಹಾರಿ ಬಿಡುವ ”, ಗುಳ್ಳ ಕೋಳಿಯನ್ನು ಹುರಿದುಂಬಿಸಲು ಪ್ರಯತ್ನಿಸಿದ.

“ಹೋಗೋಲೆ, ಮುಠ್ಠಾಳ ಯಾವನೋ ಹೇಳಿದ ಗಾದೆ ಟೆಸ್ಟ್ ಮಾಡಕ್ಕೆ, ನಾವು ಜೀವ ಒತ್ತೆ ಇಡಬೇಕ..? ನೀರಿನ ಸೆಳೆತ ಜಾಸ್ತಿ ಇದೆ. ಮುಳುಗಿ ಸತ್-ಹೋದ್ರು, ಡೆಡ್ ಬಾಡಿ ಸಿಗದೇ ಅಂತ್ಯ ಸಂಸ್ಕಾರ ಆಗದ ಅನಾಥ ಹೆಣಗಳಾಗಿ ಬಿಡ್ತೇವೆ. ಪೆಡಲ್ ತುಳಿಯೋದಕ್ಕೆ ಬಂದ್ರೆ, ಎಷ್ಟೇ ಆಳದ ನೀರಿಗೆ ಇಳಿದರೂ ಕೊನೆ-ಪಕ್ಷ ತೇಲಬಹುದು. ನಮಗೆ ಅದೇ ಸರಿಯಾಗಿ ಬರಲ್ಲ.” ಗುಳ್ಳ ವಸ್ತುಸ್ಥಿತಿಯನ್ನು ವಿವರಿಸಿದ.

ಸ್ವಲ್ಪ ಹೊತ್ತು ಮೌನವಾದರು. ಕೋಳಿ ಏನನ್ನೋ ಕಂಡುಹಿಡಿದವನಂತೆ “ಕಾಲು ನೆಲಕ್ಕೆ ತಾಗದೆ ಇರುವಷ್ಟು ಆಳವಾದ ನೀರಿಗೆ ಹಾರಿದ್ರೆ, ನಾವು ಮೇಲೆ ಬರಬೇಕಾದದ್ದು ಅನಿವಾರ್ಯ.ಆಗ ನಮಗೇ ಗೊತ್ತಾಗದಂತೆ ಪೆಡಲ್ ತುಳಿದು ನೀರಿನ ಮೇಲ್ಮೈಗೆ ಬಂದು ಬಿಡ್ತೇವೆ. ಬೇರೆ ದಾರಿಯಿಲ್ಲ ಅಂತ ಆದಾಗ ಆಟೋಮೆಟಿಕ್ ಆಗಿ ಈಜಿಬಿಡ್ತೇವೆ.” ಎಂದು ಯಾವುದೋ ಲಾಜಿಕ್ ಹೇಳಿದ.

ಹೈಬ್ರಿಡ್-ತಳಿ ತರ ಇರೋ ಈ ಕೋಳಿ-ಕಾಲು ಇಷ್ಟು ಧೈರ್ಯ ಮಾಡುತ್ತಿರುವಾಗ ತಾನೇಕೆ ಹಿಂದೇಟು ಹಾಕುವುದು. ಒಂದು ಕೈ ನೋಡೇ ಬಿಡುವ ಎಂದುಕೊಳ್ಳುತ್ತಾ ಬಟ್ಟೆ ಬಿಚ್ಚಿ ರೆಡಿಯಾದ. ಇತ್ತ ಕೋಳಿ ತಾನೊಬ್ಬನೇ ನೀರಿಗೆ ಹಾರಿ ಹೆಚ್ಚು-ಕಮ್ಮಿಯಾದರೆಂದು ಹೆದರಿ, ಮಾರಲ್ ಸಪೋರ್ಟಿಗಾಗಿ, ಗುಳ್ಳನಿಗೆ ರೈಲು ಹತ್ತಿಸಿ ನೀರಿಗಿಳಿಯುವಂತೆ ಮಾಡಿದ್ದ. ಅತ್ತ ಗುಳ್ಳ ಏನಾದರೂ ಇಬ್ಬರಿದ್ದೇವೆ.ನಾ ಸತ್ತರೂ ಅವನಂತೂ ಬದುಕುವಂತಿಲ್ಲ. ಏನೇ ಕೇಡಾದರೂ ಇಬ್ಬರಿಗೂ ಆಗುತ್ತದಲ್ಲ ಎಂದು ಏನೇನೋ ಅಂದುಕೊಂಡು ಹುಚ್ಚು ಧೈರ್ಯ ಮಾಡಿದ.

ಸೀನ ಆಚೆ ದಡದ ಮೇಲೆ. ಬರಿ-ಮೈಯಲ್ಲಿ ಅಂಗಾತ ಮಲಗಿ ಬಿಸುಲು ಕಾಯಿಸುತ್ತಿದ್ದವನು, ಬಟ್ಟೆ ಕಳಚಿ ನಿಂತ, ಮಿತ್ರರನ್ನು ನೋಡಿ..“ ಓಳಗಿರುವ ಹುಲಿ ಎದ್ದು ಬಂದಿರುವಂತಿದೆ. ಹಡಬೆ ನನ್ನ ಮಕ್ಳು”ಎಂದು ಗೊಣಗಿದ.

“ಗುಳ್ಳಾ! ಒಂದೊಂದೇ ಹೆಜ್ಜೆ ಇಟ್ಟು ನೀರಿಗೆ ಇಳಿಯೋದು ಬೇಡ. ಭಯ ಆಗುತ್ತೆ.ನಾ ಒನ್,ಟೂ,ಥ್ರೀ ಅಂತ ಹೇಳ್ತೇನೆ.ಇಬ್ಬರೂ ಒಟ್ಟಿಗೆ ಹಾರಿಬಿಡುವ.” ಕೋಳಿ ತಮ್ಮ ಪುಕ್ಕಲುತನದ ನಿವಾರಣೆಗೆ ಒಂದು ಸಲಹೆ ನೀಡಿದ. ಗುಳ್ಳನೂ ಸಮ್ಮತಿಸಿ, ಕುರಿಯಂತೆ ತಲೆ ಆಡಿಸಿದ. ಇಬ್ಬರೂ ದಡದಿಂದ ಸ್ವಲ್ಪ ದೂರ ಹೋದರು. ಕೋಳಿ ಮಾತಿನಂತೆ “ ಓನ್! ಟೂ.. ಥ್ರೀ…. ! ” ಎಂದು ಅಬ್ಬರಿಸಿದ . ಇಬ್ಬರೂ ನೀರಿನ ಕಡೆ ಓಡಿದರು.

ನೀರಿನಲ್ಲಿ ಬಿದ್ದೊಡನೆಯೇ ಗುಳ್ಳ ತಳಕ್ಕೆ ಸಾಗಿದ.ನೆಲಕ್ಕೆ ಕಾಲಿನಿಂದ ಒದ್ದು ಮೇಲಕ್ಕೆ ಚಿಮ್ಮಿದ.ಕೈ-ಕಾಲುಗಳನ್ನು ಸೈಕಲ್ ತುಳಿಯುವಂತೆ ಗರ-ಗರ-ಗರ ತಿರುಗಿಸುತ್ತಾ ತಲೆ ನೀರಿನ ಮೇಲ್ಮೈನಲ್ಲಿ ತೇಲುವಂತೆ ನೋಡಿಕೊಂಡು, ನೀರನ್ನು ಬಾಯಿಂದ ಪಿಚಕ್ಕನೆ ಉಗಿದು ಉಸಿರು ಬಿಟ್ಟ. ಸುತ್ತಲೂ ನೋಡಿದರೆ ಕೋಳಿ ಸುಳಿವಿಲ್ಲ.ಗಾಬರಿಯಾಗಿ “ ಕೋಳಿ-ಕಾಲು ಲೇ ಕೋಳಿ-ಕಾಲು ” ಎಂದು ಕೂಗಿದ.ದಡದ ಮೇಲೆ ಕುಳಿತಿದ್ದ ಕೋಳಿ “ಹೋ” ಎಂದು ಪ್ರತಿಕ್ರಿಯಿಸಿದ.


ನಿಜವಾಗಿಯೂ ನಡೆದದ್ದು ಏನೆಂದರೆ . ಥ್ರೀ ಎನ್ನುತ್ತಿದ್ದಂತೆ ಇಬ್ಬರೂ ನೀರಿನ ಕಡೆಗೆ ಓಡಿದರು.ಕೊನೆ ಕ್ಷಣದಲ್ಲಿ ಕೋಳಿ ತನ್ನ ನಿರ್ಧಾರದಿಂದ ಹಿಂದೆ ಸರಿದುಬಿಟ್ಟ.ನೀರನ್ನು ಹತ್ತಿರದಿಂದ ನೋಡಿದಾಕ್ಷಣ ಅವನ ಎದೆ ನಡುಗಿತು.ತಟ್ಟನೆ ನಿಂತು ಬಿಟ್ಟ. ಕೋಡಂಗಿ ಗುಳ್ಳ ಅವನ ಉತ್ಪ್ರೇಕ್ಷೆಯ ಮಾತುಗಳಿಂದ ಮೋಹಿತನಾಗಿ ನೀರಿಗೆ ಹಾರಿದ್ದ.ಸತಿ ಸಹಾಗಮನ ಪದ್ಧತಿಯಲ್ಲಿ ಗಂಡನನ್ನು ಚೆತೆಯಲ್ಲಿ ಬೇಯಿಸುತ್ತಿರುವಾಗ, ಚಿತೆಗೆ ಹಾರಲು ಬಂದ ಹೆಂಡತಿ ವಾಪಾಸು ಓಡಿ ಹೋದಂತಾಗಿತ್ತು.

ಗುಳ್ಳನಿಗೆ ಸಿಕ್ಕಾಪಟ್ಟೆ ಕೋಪ ಬಂತು.ಕೈ-ಕಾಲುಗಳಿಗೆ ಬಿಡುವು ಕೊಡದೆ ತಿರುಗಿಸುತ್ತಾ ಆಚೆ ದಡದ ಕಡೆ ಮುನ್ನುಗ್ಗಲು ನೋಡಿದ. ನೀರಿನ ಸೆಳೆತ ಜೋರಾಗಿತ್ತು. ಕಾಲುವೆ ನೀರಿನ ಮಧ್ಯದಿಂದಲೇ ತಾನು ಹರಿಯುವ ದಿಕ್ಕಿಗೆ ಅವನನ್ನು ಸೆಳೆದೊಯ್ದಿತು. ಗಾಬರಿಯಾದ ಗುಳ್ಳ ಹೆಚ್ಚು-ಹೆಚ್ಚು ಕೈ-ಕಾಲು ತಿರುಗಿಸಲು ಪ್ರಯತ್ನಿಸಿದ. ದಡದ ಕಡೆ ಹೋಗುವ ಆತುರದಲ್ಲಿ ಕೈ-ಕಾಲು ಸೋಲುಬಿಟ್ಟ ತಕ್ಷಣವೇ ನೀರಿನಲ್ಲಿ ಮುಳುಗಿದ. ಉಸಿರಾಡುವ ಸಲುವಾಗಿ ಬಾಯಿ ತೆಗೆದದ್ದರಿಂದ ಹೊಟ್ಟೆಯಲ್ಲಿ ನೀರು ತುಂಬಿಕೊಂಡಿತು.ಪುನಃ ನೀರಿನ ಮೇಲ್ಮೈಗೆ ಬಂದು ಏದುಸಿರು ಬಿಡುತ್ತಾ ತೇಲಲು ಪ್ರಯತ್ನಿಸಿದ.ಸೈರಣೆ ಕಳೆದುಕೊಂಡು ಕೈ-ಕಾಲುಗಳನ್ನು ನೀರಿಗೆ ರಪ-ರಪ ಬಾರಿಸಲು ಹೋಗಿ, ಸಂಪೂರ್ಣವಾಗಿ ಮುಳುಗಿ ಹೋದ. ಕಣ್ಣು ಕತ್ತಲೆಗಟ್ಟಿತು.ಯಾವುದೋ ಮಂಗನಾಟ ಮಾಡುತ್ತಿರುವನು ಎಂದು ಬಯ್ಯುತ್ತಾ, ಬಟ್ಟೆ ತೊಳೆಯುತ್ತಿದ್ದ ಹೆಂಗಸರು ಅವನನ್ನು ಅಲಕ್ಷಿಸಿದರು.

ಕೋಳಿ “ ಸೀನ ” ಎಂದು ಅಬ್ಬರಿಸಿದ.ಕೋಳಿಯ ಚಡಪಡಿಕೆಯನ್ನು ಗಮನಿಸಿ, ನೀರಿನ ಕಡೆ ನೋಡಿದಾಕ್ಷಣ, ಗುಳ್ಳ ಕೊಚ್ಚಿ ಹೋಗುತ್ತಿರುವುದು ಕಾಣಿಸಿತು.

ಸ್ವಲ್ಪವೂ ಹಿಂದೆ-ಮುಂದೆ ನೋಡದೆ ದಡದ ಮೇಲಿಂದಲೇ ಓಡಿ ಹೋಗಿ, ಗುಳ್ಳನ ಕಡೆಗೆ ಹಾರಿದ ಸೀನ.

ಸಾವಿನ ಕೊನೇ ಕ್ಷಣಗಳನ್ನು ಎಣಿಸುತ್ತಿದ್ದವನು, ಸೀನನ ಬಿಗಿ-ಹಿಡಿತ ಸಿಗುತ್ತಲೇ, ಅವನನ್ನು ನೀರೊಳಗೆ ಅದುಮಿ, ಉಸಿರು ತೆಗೆದುಕೊಳ್ಳಲು ನೀರಿನ ಮೇಲ್ಮೈಗೆ ಬಂದ.ಗಾಬರಿಯಲ್ಲಿ ಗುಳ್ಳನ ಕಾಲುಗಳು, ಸೀನನ ಕುತ್ತಿಗೆಯನ್ನು ಬಿಗಿದಿದ್ದವು. ಅವನ ಕಾಲುಗಳ ಬಂಧನದಿಂದ ಬಿಡಿಸಿಕೊಳ್ಳಲಾಗದೇ ನೀರಿನ ತಳದಲ್ಲಿ ಸೀನ ತತ್ತರಿಸಿ ಹೋದ.ಇದು ಓಳ್ಳೆ ಕರ್ಮ ಆಯ್ತಲ್ಲ ಎಂದು ತನ್ನ ಪರೋಪಕಾರದ ನಿರ್ಧಾರವನ್ನು ಪುನರ್-ವಿಮರ್ಶಿಸಿಕೊಂಡ.ನೆಲವನ್ನು ಒದ್ದು ನೀರಿನಿಂದ ಹೊರಗೆ ಚಿಮ್ಮಿದ್ದರಿಂದ, ಮೇಲಿದ್ದ ಗುಳ್ಳ ಹಿಂದಕ್ಕೆ ಪಲ್ಟಿ ಹೋಡೆದ.ಮತ್ತಷ್ಟು ಗಾಬರಿಯಾಗಿ ಸೀನನ ಕುತ್ತಿಗೆಯ ಸುತ್ತಲೂ ಕೈ ಬಿಗಿದು, ಅವನ ಬೆನ್ನಿನ ಮೇಲೆ ಕುಳಿತ. ಗುಳ್ಳನ ಬಲವಾದ ಹಿಡಿತಕ್ಕೆ, ಸೀನನ ಕುತ್ತಿಗೆ ಹಿಸುಕಿದಂತಾಗಿ ಉಸಿರು ಕಟ್ಟಿತು.“ ಅಯ್ಯಯ್ಯೋ! ಹುಚ್-ಸೌಳೇಮಗನೆ ಕುತ್ತಿಗೆ ಬಿಡೋ..?. ನೀ ಸಾಯೋದು ಅಲ್ಲದೇ! ನನ್ನನ್ನೂ ಸಾಯಿಸ್ತಿಯೇನೋ. ” ಎಂದು ಕಿರುಚಿದ.

ಗುಳ್ಳ ಕೇಳುವ ಸ್ಥಿತಿಯಲ್ಲಿರಲಿಲ್ಲ.ಇಬ್ಬರೂ ಒಬ್ಬರಿಗೊಬ್ಬರು ಜಾಡಿಸುತ್ತಾ, ನಡುನೀರಿನಲ್ಲಿ ಸಾವಿನ ಜೊತೆ ಕಣ್ಣಾ-ಮುಚ್ಚಾಲೆ ಆಡಿದರು. ಸೀನ ಜಲವಿದ್ಯೆಯ ಸಂಪೂರ್ಣ ತಂತ್ರಗಳನ್ನು ಬಳಸಿ, ಅವನ ಕೂದಲುಗಳನ್ನು ಬಿಗಿಯಾಗಿ ಹಿಡಿದು ಎಳೆದ. ಯಾವುದೇ ಕಾರಣಕ್ಕೂ ತನ್ನನ್ನು ಅಮರಿಕೊಳ್ಳದಂತೆ ಎಚ್ಚರ-ವಹಿಸಿ ಪ್ರಾಣಿಗಳನ್ನು ಎಳೆದು ತರುವಂತೆ, ತಲೆಗೂದಲನ್ನು ಹಿಡಿದೆಳೆಯುತ್ತಾ ದಡದ ಕಡೆ ಈಜಿದ.ದಡದ ಮೇಲೆ ಎತ್ತಿ ಬಿಸಾಡಿ ಸಿಟ್ಟು ತಾಳಲಾಗದೇ ಅವನ ಅಂಡಿನ ಮೇಲೆ ಜಾಡಿಸಿ-ಒದ್ದು “ಅಮ್ಮೋ ಸಾಕಪ್ಪಾ, ಈ ಹಡಬೆಗಳ ಸಹವಾಸ.ಯಾವ ನನ್ನ ಮಕ್ಳು ನೀರಿಗೆ ಬಿದ್ರು, ಇನ್ನು ನಾ ಹಿಡ್ಕಂಡ್ ಬರೋಕೆ ಹೋಗಲ್ಲ ” ಎಂದು ನಿಟ್ಟುಸಿರು ಬಿಡುತ್ತಾ ಕುಳಿತ.

ಕೋಳಿ , ಬಂದವನೇ ಹೊಟ್ಟೆ ಹಿಸುಕಿ ನೀರು ತೆಗೆದ. ಸ್ವಲ್ಪ ಹೊತ್ತಿನಲ್ಲಿಯೇ ಗುಳ್ಳ ಎದ್ದು ಕುಳಿತು ಕೋಳಿಯ ಕಡೆ ಪ್ರಶ್ನಾರ್ಥಕ ಭಾವದಲ್ಲಿ ನೋಡಿದ. ಸೀನನಿಗೂ ಮುಂದೇನು ಮಾಡಬೇಕು ಎಂದು ಅರ್ಥವಾಯಿತು. ಇಬ್ಬರೂ ಸೇರಿ ಕೋಳಿಯನ್ನು ಮನಸೋ-ಇಚ್ಚೆ ಥಳಿಸಿದರು

ತಾನು ಮರುಜನ್ಮ ಪಡೆದೆನೆಂಬ ಸಂತೋಷ ಒಂದೆಡೆಯಾದರೆ, ಸೂಪರ್-ಹೆಣ್ಣುಮಕ್ಕಳ ತಾಯಂದಿರ ಮುಂದೆ ಮಾನ ಹೋದದ್ದು, ಗುಳ್ಳನನ್ನು ಚಿಂತೆಗೆ ಈಡು ಮಾಡಿತು.

Read more posts on village, childhood, fun, friends
ಕನಸೂರು, ನನ್ನೆಲ್ಲಾ ಕೌತುಕಗಳ ಜೋಳಿಗೆ, ಬರಹಗಳಿಗೆ ದೀವಿಗೆ. ಕಥೆ, ಕವನ ಅಥವಾ ಯಕಃಶ್ಚಿತ್ ಅನ್ನಿಸುವ ಬರವಣಿಗೆಗಳಿರಬಹುದು. ತೋಚಿದ್ದು; ಗೀಚಿದ್ದು;

ಓದುಗನ ಸಹಾನುಭೂತಿ ಮತ್ತು ಪ್ರೀತಿ ಇಲ್ಲದಿದ್ದರೆ, ಬರೆದದ್ದನ್ನು ಹಂಚಿಕೊಳ್ಳೋದಕ್ಕೂ ಭಯ ಆಗತ್ತೆ. ನಿಮ್ಮ ಈ ಓದಿನ ಆಯ್ಕೆಯನ್ನು ಗೌರವಿಸುತ್ತೇನೆ. Thank you :)