ಏಡವಟ್ಟಾಯ್ತು! ತಲೆಕೆಟ್ ಹೋಯ್ತು

" ಅವನ ಕಣ್ಣುಗಳು ತುಂಬಿ ಬಂದವು. ಗೊಡ್ಡು ಮುದುಕನ ಮುಂದೆ ನಿಂತು ಆನಂದಬಾಷ್ಪ ಹರಿಸುತ್ತಿದ್ದಾನೆ. ದಶಕಗಳಿಂದಲೂ ಈ ಮುದುಕನ ಮುಖ ನೋಡಿರಲಿಲ್ಲ.ಯಾರೋ ಹೇಳಿದ್ದರು ಈತ ಸತ್ತು ಹೋಗಿದ್ದಾನೆಂದು.ಆದರೆ ಈ ಮುದುಕ ರಿನ್-ಪಾಸ್ ಆಸ್ಪತ್ರೆಯಲ್ಲಿ ಅಷ್ಟು ವರುಷಗಳಿಂದಲೂ ಬದುಕೇ ಇದ್ದಾನೆ. ಯಾರೋ ಹೇಳಿದ ಸುಳ್ಳಿನಲ್ಲಿ ಸತ್ಯವೂ ಇತ್ತೆನ್ನಿ.ಯಾಕಂದ್ರೆ ಹುಚ್ಚು ವಾಸಿಯಾದ ಮೇಲೂ , ರೋಗಿಯೊಬ್ಬ ದಶಕಗಳ ಕಾಲ ಹುಚ್ಚಾಸ್ಪತ್ರೆಯಲ್ಲಿಯೇ ಜೀವಂತ ಕೊರಡಾಗಿ ಉಳಿದಿದ್ದಾನೆಂದರೆ... ಯಾವ ಆಧಾರದ ಮೇಲೆ ಬದುಕಿದ್ದಾನೆ ಎನ್ನುವುದು.ಅಲ್ಲವೇ..? "

ಮುದುಕನ ಹೆಸರು ಗುಲಾಮ್ ಕಬಾರಿಯ . ಮುಂದೆ ನಿಂತು ಅಳುತ್ತಿದ್ದವನು ಇವನ ಮೊಮ್ಮಗ. ಸತ್ತು ಹೋಗಿದ್ದಾನೆಂದು ಸುಳ್ಳು ಹೇಳಿದ ಮಹಾನುಭಾವ , ಮೊಮ್ಮಗನ ತಂದೆ! ಆಲಿಯಾಸ್ ಹುಚ್ಚು-ಮುದುಕ ಗುಲಾಮ್ ಕಬಾರಿಯಾನ ಪುತ್ರ!. ಇದು ನಡೆದದ್ದು ರಾಂಚಿ ಇನ್ಸ್-ಟ್ಯೂಟ್ ಆಫ್ ನ್ಯೂರೋ ಸೈಕಿಯಾಟ್ರಿಕ್ ಅಲ್ಲೈಡ್ ಸೈನ್ಸ್ , ಜಾರ್ಖಂಡ್ ನಲ್ಲಿ.ಹುಚ್ಚು ಹಿಡಿದಾಗ ಆಸ್ಪತ್ರೆ ಸೇರಿಸಿ ಕೈ ತೊಳೆದುಕೊಂಡರು.ವಾಸಿಯಾಗಿ ದಶಕಗಳೇ ಆಗಿವೆ. ಒಪ್ಪಿಕೊಳ್ಳದ ಮಕ್ಕಳು ತಲೆಮರೆಸಿಕೊಂಡರು. ಗುಲಾಮ್ ತಾತಪ್ಪ  ಸ್ವಂತ ಮಕ್ಕಳ ನೆನಪಿನಿಂದ ಹಾರಿ ಹೋದರೂ , ಇದೀಗ ಮೊಮ್ಮಗನ ಕ್ರುಪೆಯಿಂದ ದಶಕಳ ಅಜ್ನಾತವಾಸವನ್ನು ಮುಗಿಸಿ ಮನೆಗೆ ಹೊರಡುತ್ತಿದ್ದಾನೆ. ಈ ಅದ್ಭುತ ಸಮಾಗಮಕ್ಕೆ ರಿನ್-ಪಾಸ್ ಆಸ್ಪತ್ರೆಯ ಸರ್ವರೂ ಸಾಕ್ಷಿಗಳಾದರು.

ಇದನ್ನು ಅದ್ಭುತ ಎಂದು ಬಣಿಸಲು ಇರುವ ಮತ್ತೊಂದು ಕಾರಣವೆಂದರೆ , ಇಂತದ್ದು ನಡೆಯೋದು ಬಹಳ ವಿರಳ ರೀ. ಇನ್ನೂ ೯೧ ಹುಚ್ಚು-ವಾಸಿಯಾದ , ಪರಿಪೂರ್ಣ ಮನುಷ್ಯ-ಜೀವಿಗಳು ದಶಕಳಿಂದಲೂ ಇಲ್ಲಿ ಕೊಳೆಯುತ್ತಿದ್ದಾರೆ.ಅದೇನೋ ಇವರು ಹುಟ್ಟಿಸಿದವರಿಗೂ , ಇವರನ್ನು ಹುಟ್ಟಿಸಿದವರಿಗೂ ಇವರು ಬ್ಯಾಡವಂತೆ.ತಮ್ಮವರಿಂದಲೇ ತಿರಸ್ಕ್ರುತರಾದವರು.ಹೋಗುವುದಾದರೂ ಎಲ್ಲಿಗೆ..?

ಬುದ್ಧಿ-ಭ್ರಮಣೆಯ ಕುರುಹುಗಳು ಅದಾಗಲೇ ಮಾಯವಾಗಿವೆ. ಆದರೆ ತಿರಸ್ಕ್ರುತನಾಗಿ ಪರಿಪೂರ್ಣನಾಗಿರುವುದು , ಹುಚ್ಚಿಗಿಂತಲೂ ಕ್ರೂರ. ಪ್ರೀತಿ-ಭರವಸೆ ಕೊಡಬೇಕಾದವರು ತಲೆಮರೆಸಿಕೊಂಡಿದ್ದಾರೆ. 

ಬದುಕನ್ನು ಸುಮ್ಮನೇ ತೇಯುತ್ತಿದ್ದಾರೆ. ಬಂದುಗಳು-ಮಿತ್ರರು ಕಳೆದುಹೋಗಿದ್ದಾರೆ. ಭವಿಷ್ಯ ಅದರ ಪಾಡಿಗದು ಡೋಲಾಯಮಾನವಾಗಿದೆ. ಡಾ|| ಅಮುಲ್ ರಂಜನ್ ಹೇಳುತ್ತಾರೆ " ಯಾವ ಸಮಯದಲ್ಲಿ ಕುಟುಂಬದವರ ಸಹಕಾರ ಹೆಚ್ಚು ಬೇಕಾಗಿರುತ್ತೋ .., ಅಷ್ಟರೊಳಗಾಗಲೇ ಭರವಸೆ ಕಳೆದುಕೊಂಡು , ತಮ್ಮ ಫ್ಯಾಮಿಲಿ ಫೋಟೋದಿಂದ ಇವರನ್ನ ಕಿತ್ತಾಕಿಬಿಟ್ಟಿರುತ್ತಾರೆ."

ಶಿವಾನಿ ಘೋಷ್ ಅಂತ ಒಬ್ಬಳಿದ್ದಾಳೆ. 13 ವರುಷದವಳಿದ್ದಾಗ ಆಸ್ಪತ್ರೆ ಸೇರಿದ್ದಳು.ಸ್ಕೀಜೋಪ್ರೀನಿಯ ಎಂಬ ಭಯಾನಕ ಖಾಯಿಲೆಯನ್ನು ಜಯಿಸಿ ಬಂದಿದ್ದಾಳೆ. ಅವಳನ್ನ ಡಿಸ್ಚಾರ್ಜ್ ಮಾಡಿ ಮನೆಗೆ ಬಿಟ್ಟರೆ.." ಇವಳು ಯಾರು ಅಂತ ನಮಗೆ ಗೊತ್ತೇ ಇಲ್ಲ ..?" ಎಂದು ಹೇಳಿ ಮನೆಯವರು ಇವಳನ್ನು ತಿರಸ್ಕಿರಿಸಿಬಿಟ್ಟಿದ್ದರು. ಈಗ ಅಷ್ಟು ವರುಷದಿಂದಲೂ ಇಲ್ಲೇ ಇದಾಳೆ.

51 ವರುಷದ ಬೇಲಾ ಸಿನ್ಹಾ ಅಂತೊಬ್ಬಳು. 2000 ನೇ ಇಸವಿಯಲ್ಲಿ ಸ್ಕಿಜೋಪ್ರೀನಿಯ ಎಂದು
ಅಡ್ಮಿಟ್ಟಾದವಳು ತಕ್ಷಣ ವಾಸಿಯಾದಳು. ಆಸ್ಪತ್ರೆಗೆ ಸೇರಿಸಿದ ಅವಳಣ್ಣ ವಾಪಾಸ್ ಬಿಟ್ಟುಕೊಳ್ಳಲಿಲ್ಲ.  ಸಿನ್ಹಾಳ ಗಂಡ ಲಾಯರಿ-ಬಡ್ಡಿಮಗ " ಅವಳನ್ನು ಸೇರಿಸಿದವನು ನಾನಲ್ಲ , ಸೋ ಯಾವುದೇ ಕಾರಣಕ್ಕೂ ನನ್ನ ಹತ್ರ ಕರ್ಕೊಂಡು ಬರಂಗಿಲ್ಲ " ಅಂತ ಆಸ್ಪತ್ರೆಗೇ ನೋಟೀಸ್ ಕಳಿಸಿದ್ದಾನೆ.ಪಾಪ 13 ವರುಷದಿಂದಲೂ , ಹುಚ್ಚು-ವಾಸಿಯಾದ್ರು ಇಲ್ಲೇ ಇದಾಳೆ.

ಮಾಯಾಳಂತಹ  ಕೆಲವು ಅಮ್ಮಂದಿರದಂತೂ ಕರುಣಾಜನಕ ಸ್ಥಿತಿ. ತನ್ನ ಮಗನನ್ನು ೭ ವರುಷದವನಿದ್ದಾಗ ಕೊನೆಯ ಬಾರಿ ನೋಡಿದ್ದಳಂತೆ. " ಈಗ ಅವನಿಗೆ ೨೨ ವರುಷ ಆಗಿರುತ್ತೆ. ಅಮ್ಮನ ನೆನಪು ಒಂದು ದಿನವೂ ಆಗಿರಲ್ವ. ನನ್ನನ್ನು ನೋಡಬೇಕು ಅಂತ ಅನ್ಸೋದೆ ಇಲ್ವಾ " ಎಂದು ಅಳುತ್ತಾಳೆ. ಎಲ್ಲರೂ ಇದ್ದರೂ , ಬೇವರ್ಸಿ ಜೀವನ ಸಾಗಿಸುತ್ತಿದ್ದಾಳೆ.

ತಲೆಕೆಟ್ಟವರನ್ನು ಆಸ್ಪತ್ರೆಗೆ ಸೇರಿಸುವಾಗ ಬೇಕಂತಲೇ ತಪ್ಪು ವಿಳಾಸ ಬರೆಸುವರು.ಪೀಡೆ ತೊಲಗಿದರೆ ಸಾಕು ಎಂಬುದು  ಅವರ ಉದ್ದೇಶ. ಇದು ಹೆಣ್ಣುಮಕ್ಕಳಲ್ಲಿ ಹೆಚ್ಚು ಸಾಮಾನ್ಯ. " ಮತಿಭ್ರಮಣೆಯಾದ ಮಗಳು ಮನೆಗೆ ಕಳಂಕದಂತೆ , ಸಮಾಜದಲ್ಲಿ ಘನತೆಗೆ ಕುಂದು ಬರುತ್ತದೆ " ಎಂದು ನಿರ್ಧರಿಸಿ ಮನೆಯಿಂದ ಸಾಗಿಸಿ ಬಿಡುತ್ತಾರೆ. ಖಾಯಿಲೆ ಗುಣವಾದ ಮೇಲೂ ಒಪ್ಪಿಕೊಳ್ಳಲಾಗದಂತಹ ಸಾಮಾಜಿಕ ಪಿಡುಗಿನ ದಾಸರು.

ಇಂಡಿಯನ್ ಲುನೇಸಿ ಕಾಯಿದೆ ೧೯೯೩ ಪ್ರಕಾರ ಹುಚ್ಚು ವಾಸಿಯಾದವರನ್ನು , ಅವರ ಪಾಡಿಗೆ ಹಂಗೇ ಡಿಸ್ಚಾರ್ಜ್ ಮಾಡಂಗಿಲ್ಲ. ಗೌರ್ಮೆಂಟು ಅಥವಾ ಅವರನ್ನ ಸೇರಿಸಿದ ಪೋಷಕರು ಯಾರದರು ರಿಸೀವ್ ಮಾಡದ ಹೊರತು ಇವರನ್ನು ಹೊರಗಿನ ಪ್ರಪಂಚಕ್ಕೆ ಬಿಡುವಂತಿಲ್ಲ. ಹುಚ್ಚು ವಾಸಿಯಾದವರ ಸ್ವಾಗತಕ್ಕೆ , ಸಂಬಂಧಿಕರು ಬರ್ತಾರ..? ಅನಿಶ್ಚಿತಾವಧಿಯ ವರೆಗೂ ಈ ಹುಚ್ಚರಲ್ಲದ ಹುಚ್ಚರು ಆಸ್ಪತ್ರೆಯಲ್ಲಿಯೇ ಠಿಕಾಣಿ ಹೂಡುವರು. ಕಾನೂನು-ಕಾಯಿದೆ ಮಾಡಿದವರು ಹುಚ್ಚು-ವಾಸಿಯಾದವರಿಗೆ ಆಸ್ಪತ್ರೆಯ ಹೊರತಾಗಿ ,ಬೇರೆ ಪುನರ್ವಸತಿ ಕಲ್ಪಿಸುವ ಬಗ್ಗೆ ಮೂಖವಾಗಿದ್ದಾರೆ. ಹಿಂಗೇ ಮನೆಯಿಂದ ತಿರಸ್ಕಾರಗೊಂಡವನೊಬ್ಬ , ತಿಕ್ಕಲು ಜಾಸ್ತಿಯಾಗಿ ಇನ್ನೊಬ್ಬನನ್ನು ಹಿಡಿದು ಸಾಯಿಸಿ ಬಿಟ್ಟನಂತೆ. ಈಗವನಿಗೆ ಹುಚ್ಚು ಮರುಕಳಿಸಿದೆ.ಒಂಟಿಯಾಗಿ ತನಗೆತಾನೆ ಗೊಣಗುತ್ತಾ ಕೂತಿರುತ್ತಾನೆ.

ಡಾಕ್ಟರು ಹೇಳ್ತಾರೆ .." ಪೇಷೆಂಟು ರಿಕವರಿಯಾಗುವಾಗ ಮಾತ್ರೆಗಳಿಗಿಂತ ಹೆಚ್ಚಾಗಿ , ಮನೆಯವರ ಪ್ರೀತಿ ಆರೈಕೆ ಬೇಕಿರುತ್ತದೆ.ಅದು ಸಿಗದಿದ್ದಾಗ ಸಾಮಾನ್ಯವಾಗಿ ಡಿಪ್ರೆಷನ್ ಗೆ ಹೋಗಿಬಿಡುತ್ತಾನೆ .ಎಲ್ಲಿಯವರೆಗೂ ಬುದ್ಧಿ-ಭ್ರಮಣೆ ಒಂದು ಶಾಪ ಅಂತ ತಿಳಿದಿರ್ತಾರೋ ಅಲ್ಲೀವರೆಗು ನಮ್ಮ ವೈದ್ಯಕೀಯ ಫಲಿತಾಂಶಗಳಲ್ಲಿ ಯಾವುದೇ ಅಶಾವಾದವನ್ನು ಕಾಣಲಾಗುವುದಿಲ್ಲ. ಮನೆಯವರ-ಸ್ನೇಹಿತರ ಸಹಕಾರದಿಂದ ಮಾತ್ರ ಹುಚ್ಚಿನ ವಿರುದ್ಧ ಹೋರಾಡಬಹುದು." " ಸಾಮಾಜಿಕ ಮೌಲ್ಯಗಳು ಕುಸಿಯುತ್ತಿರುವುದರಿಂದ ಇತ್ತೀಚೆಗೆ ಮತಿಭ್ರಮಣೆ ಕೇಸು ಸಿಕ್ಕಾಪಟ್ಟೆ ರೈಸ್ ಆಗುತ್ತಿವೆ "ಎಂದರು.

ಹುಚ್ಚರ ಕಥೆ ಇಲ್ಲಿಗೆ ಮುಗಿಯಿತು.

Read more posts on article
ಕನಸೂರು, ನನ್ನೆಲ್ಲಾ ಕೌತುಕಗಳ ಜೋಳಿಗೆ, ಬರಹಗಳಿಗೆ ದೀವಿಗೆ. ಕಥೆ, ಕವನ ಅಥವಾ ಯಕಃಶ್ಚಿತ್ ಅನ್ನಿಸುವ ಬರವಣಿಗೆಗಳಿರಬಹುದು. ತೋಚಿದ್ದು; ಗೀಚಿದ್ದು;

ಓದುಗನ ಸಹಾನುಭೂತಿ ಮತ್ತು ಪ್ರೀತಿ ಇಲ್ಲದಿದ್ದರೆ, ಬರೆದದ್ದನ್ನು ಹಂಚಿಕೊಳ್ಳೋದಕ್ಕೂ ಭಯ ಆಗತ್ತೆ. ನಿಮ್ಮ ಈ ಓದಿನ ಆಯ್ಕೆಯನ್ನು ಗೌರವಿಸುತ್ತೇನೆ. Thank you :)