' ನಾಯಿಗಳು ಬೂದಿ ಮೇಲೆ ಮಲಗಿರುವಾಗ, ಹಿಂದಿನ ಜನುಮ ನೆನಪಾಗುತ್ತೆ. ಅದಕ್ಕೆ ಮಂಕಾಗಿ ಕಾಣುತ್ತವೆ.' ದೆವ್ವ ಭೂತದ ಕಥೆ ಸಾಕೆನಿಸಿ, ಪುವರ್ಜನ್ಮದ ಎಳೆಯೊಂದನ್ನು ಬಿಡಿಸಿಟ್ಟಳು ಅಜ್ಜಿ. ಬೆಂಬಿಡದೆ ಬಾರಿಸುತ್ತಿದ್ದ ಮಳೆಯ ಕಾರಣದಿಂದ ಸ್ಕೂಲಿಗೂ ರಜೆ ಕೊಟ್ಟಿದ್ದರು. ಸರಿ ಹಾಗಾದರೆ, ನೋಡಿಯೇ ಬಿಡುವ ಎಂದು, ನನ್ನ ಕಿಲಾಡಿ ಕಂತ್ರಿ ನಾಯಿ ಜಿಮ್ಮಿಯನ್ನು ಹಿಡಿದು ತಂದೆ. ಅಡಿಕೆ ಒಲೆಯ ಜಾಲರಿಯನ್ನು ಎತ್ತಿ; ಬೂದಿ ಹೊರ ಎಳೆದು; ಬೂದಿಯ ಮೇಲೆ ಜಿಮ್ಮಿಯನ್ನು ಮಲಗುವಂತೆ ಸೂಚಿಸಿದೆ. ಅಡಿಕೆ ಬೇಯಿಸುವ ಬೃಹತ್ ಒಲೆಯ ಗೂಡಿನಲ್ಲಿ ಮೂರು ಸುತ್ತು ಹಾಕಿದವನೆ ಬಿದ್ದುಕೊಂಡ. ಮಲಗುವ ವಿಷಯದಲ್ಲಿ ಎಂದಿಗೂ ಮೀನ-ಮೇಷ ಎಣಿಸುವನಲ್ಲ ನನ್ನ ಜಿಮ್ಮಿ. ಸ್ವಲ್ಪ ಹೊತ್ತಿನಲ್ಲಿಯೇ ಗಾಢ ನಿದ್ರೆಗೆ ಜಾರಿದ.

ನಾಯಿಗಳಿಗೂ ಕನಸು ಬೀಳುತ್ತದಾ. ? ಹಿಂದಿನ ಜನುಮ ನೆನಪಾಗುತ್ತದಾ. ? ನೆನಪಾದರೂ ಜಿಮ್ಮಿ ನನ್ನ ಬಳಿ ಹೇಳಿಕೊಳ್ಳುವನಾ. ಹತ್ತಿರದಲ್ಲಿಯೇ ಪರಿಶೀಲಿಸುತ್ತಾ ಕುಳಿತಿದ್ದೆ. ಮೈ ಸೆಟೆದುಕೊಂಡು, ತನ್ನ ನಾಲ್ಕೂ ಕಾಲುಗಳನ್ನು ಮೇಲೆತ್ತಿ, ಮೂತಿ ಸೊಟ್ಟ ಮಾಡಿಕೊಂಡು, ಇಹ-ಪರದ ಪರಿವೆಯೇ ಇಲ್ಲದಂತೆ ಮಲಗಿದ್ದ ಜಿಮ್ಮಿಯ ಭಂಗಿಯು, ಏನನ್ನೋ ಕಂಡು ಹಿಡಿಯಲು ಕುಳಿತಿದ್ದ ನನ್ನನ್ನು ಅಣಕಿಸಿದಂತಾಯಿತು. ' ಥೂ. ಥ್ ಬಡ್ದಿ-ಮಗಂದು. ಯಾವ ಜನುಮದ ರಹಸ್ಯಾನೂ ಇಲ್ಲ, ಮಲೆನಾಡಿನ ಚಳಿಗೆ ಬೂದಿ ಮೇಲೆ ಬಿಸಿ-ಬಿಸಿ ನಿದ್ದೆ ಹೊಡಿತಿದೆ ಅಷ್ಟೆ!! ' ಬಯ್ದುಕೊಂಡು ಆ ಸಂಶೊಧನೆಯನ್ನು ಅಲ್ಲಿಗೇ ನಿಲ್ಲಿಸಿದೆ. ನಾಯಿಗಳಿಗೆ ಮಾತು ಬರುವುದಿಲ್ಲ ಎನ್ನುವ ಒಂದೇ ಕಾರಣಕ್ಕೆ, ಇಲ್ಲ-ಸಲ್ಲದ ಅತೀಂದ್ರಿಯ ಶಕ್ತಿಗಳನ್ನು ತಲೆಗೆ ಕಟ್ಟಿ, ಅವುಗಳ ಪ್ರತಿಷ್ಠೆ ಹೆಚ್ಚಿಸುವರಲ್ಲ. ನನ್ನ ಜಿಮ್ಮಿಗೆ ಭೂಕಂಪನ ತಿಳಿಯುತ್ತಾ; ಅಥವಾ ಭೂತ ಕಾಣಿಸುತ್ತಾ, ನನ್ನಜ್ಜಿಗೆ ತಲೆ ಇಲ್ಲ.

ನಾಯಿ-ಬೆಕ್ಕುಗಳನ್ನು ವಿಷಜಂತುಗಳಂತೆ ಕಾಣುತ್ತಿದ್ದ, ಮನೆಯವರ ವಿರೋಧ ಕಟ್ಟಿಕೊಂಡು, ಕಂತ್ರಿ ಕುತಂತ್ರಿ ಗಂಡು ನಾಯಿ ಜಿಮ್ಮಿಯನ್ನು ತಂದು ಸಾಕಿದೆ. ಜಿಮ್ಮಿಯ ಮೊದಲ ನಾಮಧೇಯ ಹನುಮಂತ. ಅದೇಕೊ ಕುರ್ರೋ.. , ಕುರ್ರೋ.. , ಎನ್ನುವ ಶ್ವಾನ ಸಹಜ ಪುರಾತನ ಸಂಭೋಧನೆಯ ರಾಗಕ್ಕೆ 'ಹನುಮಂತ' ಹೊಂದಿಕೆಯಾಗಲಿಲ್ಲ. ಹೆಸರನ್ನು 'ಜಿಮ್ಮಿ' ಎಂದು ಬದಲಿಸಿದ ಮೇಲೆ ಆ ದ್ವಿರುಕ್ತಿ ಸಮಸ್ಯೆ ಬಗೆಹರಿಯಿತು.

ಗಂಡು ನಾಯಿ ಜಿಮ್ಮಿಯನ್ನೇ, ಹುಡುಕಿ ತಂದದ್ದಕ್ಕೂ ಒಂದು ಮುಖ್ಯ ಕಾರಣವಿದೆ. ಪದೆಪದೆ ಬಸುರಾಗುವ ಹೆಣ್ಣು ನಾಯಿಗಳ ಬಾಣಂತನದ ಜವಾಬ್ದಾರಿಯನ್ನು ಹೊರಲು ಸಾಧ್ಯವೇ .? ಒಂದೇ ಬಾರಿಗೆ ಏಳೆಂಟು ಮರಿಗಳಿಗೆ ಜನುಮ ನೀಡಿ ತಾನು 'ಮಹಾತಾಯಿ' ಆಗುವುದರ ಜೊತೆಗೆ, ಆ ಸಂತ್ರಸ್ತ ಮರಿಗಳ ಹೊಣೆಯನ್ನು ನಮ್ಮ ತಲೆಗೆ ಕಟ್ಟಿ ಬಿಡುವವು. ಒಂದು ನಾಯಿ ಸಾಕುವುದಕ್ಕೇ ಎನ್ ಒ ಸಿ ಪಡೆದುಕೊಳ್ಳಲು ಪರದಾಡಿದ್ದಾಗಿತ್ತು.

ನಾನು ಸಾಕುತ್ತಿದ್ದ ಕಂತ್ರಿ ನಾಯಿ 'ಜಿಮ್ಮಿ'ಯನ್ನು ಪೋಲೀಸು ನಾಯಿಯಂತೆ ಚೂಟಿಯನ್ನಾಗಿ ಮಾಡಲು ಹರಸಾಹಸ ಪಟ್ಟೆ. ಎತ್ತರಕ್ಕೆ ನೆಗೆಯುವುದನ್ನು ಕಲಿಸಲು ಆಳವಾದ ಗುಂಡಿಯಲ್ಲಿ ಹಾಕಿ ಪ್ರಚೋಧಿಸಿದೆ. ತಿನ್ನುವಾಗ ಇರುತ್ತಿದ್ದ ಉತ್ಸಾಹ ನೆಗೆಯುವಾಗ ಇರುತ್ತಿರಲಿಲ್ಲ. ನಾಯಿಯನ್ನು ಕಟ್ಟಿ ಬೆಳೆಸಿದರೆ, ಹೆಚ್ಚು-ಹೆಚ್ಚು ರೋಷ ಬರುತ್ತದೆಂದು ಗೆಳೆಯ ಸೀನ ಐಡಿಯಾ ಕೊಟ್ಟ. ಆದರೆ ಜಿಮ್ಮಿಯನ್ನು ಕಟ್ಟಿ ಹಾಕುತ್ತಲೇ.. ಅದು ಕುಯ್ಯೋ, ಅಯ್ಯಯ್ಯೋ, ಎಂದು ಊಳಿಡಲು ಶುರುವಿಟ್ಟಿತು. ಹಂದಿಗಳ ಆರ್ತನಾದಕ್ಕಿಂತ ಕರ್ಕಶವಾಗಿದ್ದ ಧ್ವನಿಯಿಂದಾಗಿ, ಅಕ್ಕ-ಪಕ್ಕದ ಮನೆಯವರು ಬಂದು ಛೀ-ಥೂ ಎಂದು ಉಗಿದರು. ಅಮ್ಮನಿಗೂ ರೇಜಿಗೆಯಾಗಿ ಹಗ್ಗ ಬಿಚ್ಚಿ ಓಡಿಸಿ ಬಿಡುತ್ತಿದ್ದಳು.

ಬಿದಿರಿನ ದಬ್ಬೆಯನ್ನು ಅಡ್ಡಲಾಗಿ ಕಟ್ಟಿ. , ಅದರಾಚೆಗೆ ಒಂದು ಬನ್ ಇಟ್ಟು 'ಜಿಮ್ಮಿ ಛೂ.. ' ಎಂದರೆ, ಹೈ ಜಂಪ್ ಮಾಡುವ ಬದಲು, ದಬ್ಬೆಯ ಅಡಿಯಲ್ಲಿ ನುಸುಳಿಕೊಂಡು ಹೋಗಿ 'ಬನ್' ಹಿಡಿಯುತ್ತಿತ್ತು. ಸ್ಪರ್ಧಾ ಮನೋಭಾವ ಹೋಗಲಿ, ಶ್ವಾನ ಕುಲದ ಕನಿಷ್ಠ ಯೋಗ್ಯತೆಗಳಾದರೂ ಇರಲಿಲ್ಲ.

ನನ್ನ ಸರ್ವ-ಪ್ರಯತ್ನಗಳನ್ನೂ ಅಣಕಿಸುತಿದ್ದ ಜಿಮ್ಮಿ ಉಡಾಳನಂತೆ ಬೆಳೆದನು. ಈ ವಿದ್ಯೆಗಳನ್ನು ಮುಂದೆ ಬೇಲಿ ಸಂಧಿಗಳಲ್ಲಿ ನುಗ್ಗಿ, ಮನೆ-ಮನೆಯ ಅಡುಗೆ-ಕೊಬ್ಬರಿಗಳನ್ನು ಲೂಟಿ ಮಾಡಲು ಬಳಸಿಕೊಂಡಿದ್ದು ದುರಂತ ಎಂದೇ ಹೇಳಬೇಕು.
ಯಕಃಶ್ಚಿತ್ ಒಂದು ಬನ್ ಗಾಗಿ, ನನ್ನ ಹಿಂದೆ ಮುಂದೆ ಬಾಲ ಅಲ್ಲಾಡಿಸಿಕೊಂಡು ತಿರುಗುತ್ತಿದ್ದ ಜಿಮ್ಮಿ, ಮುಂದೊಂದು ದಿನ ಊರೆಂಬ ಊರಿಗೇ, ಢಾಕುವಿನಂತೆ ಕಾಡಿದನು ಎಂದರೆ, ಆಶ್ಚರ್ಯವಾಗಬಹುದು. ಅಡ್ಡ ದಾರಿಯಲ್ಲಿ ಸ್ವಂತಂತ್ರನಾಗಿ-ಅತಂತ್ರನಾಗಿ, ಬೆಳೆಯುತ್ತಾ ಸಾಗಿದ ಜಿಮ್ಮಿಯ ಪ್ರತಾಪ ದಿನೆ-ದಿನೆ ಹೆಚ್ಚುತ್ತಾ ಸಾಗಿತು. 'ಆಡು ಮುಟ್ಟದ ಸೊಪ್ಪಿಲ್ಲ, ಜಿಮ್ಮಿ ನುಗ್ಗಲಾಗದ ಮನೆಯಿಲ್ಲ' ಎಂಬಂತಾಯಿತು.

ತೆಂಗಿನಕಾಯಿ ಇಂದಾ ಹಿಡಿದು 'ಮಾಡಿದ ಅಡುಗೆ' ಯನ್ನು ಪಾತ್ರೆ-ಸೌಟು ಸಮೇತ ಹೊತ್ತು ಓಡುತ್ತಿದ್ದನು. ಮರುದಿನ ಮನೆಯ ಹಿಂದಿನ ತಿಪ್ಪೆಗಳಲ್ಲಿ ಪಾತ್ರೆಯ ಅವಶೇಷಗಳು ಅನಾಥವಾಗಿ ಬಿದ್ದಿರುತ್ತಿದ್ದವು. 'ಅಂಗಳದ-ಕೋಳಿ' ಗಳನ್ನು ಹಾಡಹಗಲಲ್ಲೇ, ಮನೆಯಜಮಾನನ ಕಣ್ಮುಂದೆಯೆ ಬೇಟೆಯಾಡುತ್ತಿತ್ತು. ಯಾರದರೂ ಹೊಡೆಯಲು ಅಟ್ಟಿಸಿಕೊಂಡು ಬಂದರೆ, ಹತ್ತಿರ ಬರುವವರೆಗೂ ಸುಮ್ಮನಿದ್ದು ನಂತರ ಛಂಗನೆ ನೆಗೆದು ಓಡುತ್ತಿತ್ತು. ನಾಯಿಯ ಈ 'ವಿಲಕ್ಷಣ ಅತಿರೇಕದಿಂದ ' ಬರೀ ಹೊಡೆಯಲು ಬರುತ್ತಿದ್ದವರು, ಕೊಲ್ಲಲೇಬೇಕೆಂದು ನಿರ್ಧರಿಸಿ ಬಿಡುತ್ತಿದ್ದರು. ಬಹಳಷ್ಟು ಬಾರಿ ಮಾರಣಾಂತಿಕ ಹಲ್ಲೆಗಳು ನಡೆದಿದ್ದರೂ ಬದುಕಿ-ಉಳಿದದ್ದು ಮಾತ್ರ ಸೋಜಿಗ.

ನಮ್ಮ ಊರಿನ ಏಕೈಕ ಸಾರಿಗೆ, ವೆಂಕಟೇಶ್ವರ ಬಸ್ ಡ್ರೈವರನ್ನು, ಕಾಡಿಸಿದ್ದು ದಾರುಣವೆಂದೇ ಹೇಳಬೇಕು. ಡಕೋಟ ಬಸ್ಸಿನ ಸೂತ್ರ ಹಿಡಿದವನು, ಪ್ರಯಾಸ ಪಟ್ಟುಕೊಂಡು ಊರಿನ ಗಡಿ ಪ್ರವೇಶ ಮಾಡುವಾಗ, ರಸ್ತೆ ಮಧ್ಯದಲ್ಲಿ ಸ್ವೇಚ್ಚೆಯಾಗಿ ಮಲಗಿರುತ್ತಿದ್ದ ಜಿಮ್ಮಿಯನ್ನು ಕಂಡು, ಅದರ ಮೇಲೆ ಹತ್ತಿಸಿಕೊಂಡು ಹೋಗದೇ ಇದ್ದುದು ಡ್ರೈವರು ಜನಾಂಗದ ತಾಳ್ಮೆಯ ಮಿತಿಯನ್ನು ತೋರಿಸುವಂತದು. ಜಿಮ್ಮಿಯ ರುಂಡದವರೆಗೂ ಟೈರು ಉರುಳಿಸಿ, ಉಭಯಸಂಕಟದಿಂದ ನರಳಿ ಬ್ರೇಕು ಹಾಕುವನು. ಕಿವಿ-ಬಿದ್ದು ಹೋಗುವಂತೆ ಹಾರನ್ನು ಬಾರಿಸಿದ ಮೇಲೆ, ಮಲಗಿದ್ದ ಜಿಮ್ಮಿ ಮೆಲ್ಲಗೆ ಎದ್ದು, ತಲೆ ಕೊಡವಿ, ಮೈ ಮುರಿಯುತ್ತಾ ಒಂದೊಂದೆ ಹೆಜ್ಜೆ ಇಟ್ಟುಕೊಂಡು ನಡೆಯುವನು. ಎಷ್ಟೋ ಬಾರಿ!! ರೊಚ್ಚಿಗೆದ್ದು, ತಾನೇ ಬಸ್ಸಿನಿಂದ ಇಳಿದು, ನಾಯಿಯನ್ನು ಹೊಡೆಯಲೋಸುಗ ಅಟ್ಟಿಸಿಕೊಂಡು ಹೋದದ್ದೂ ಇದೆ.

ಶ್ವಾನಪ್ರಪಂಚದ ವಿವಿಧ ಗಡಿಗಳನ್ನು ಉಪಾಯವಾಗಿ ದಾಟಿಕೊಂಡು ನಮ್ಮೂರಿನ ಸರ್ವಂತರ್ಯಾಮಿ ಜೀವಿಯಾಗಿ ಹೋದ. ಒಮ್ಮೊಮ್ಮೆ ಗಡಿದಾಟುವ ಪ್ರಯತ್ನಗಳಲ್ಲಿ, ಅನ್ಯಾಯವಾಗಿ ನನ್ನನ್ನು ಬಲಿಪಶು ಮಾಡುತ್ತಿದ್ದುದೂ ಇದೆ. ನನ್ನ ಸೈಕಲ್ ನೆರಳಿನಲ್ಲೇ ಕಳ್ಳನಂತೆ ಓಡಿ ಬರುವನು. ದಾರಿಯುದ್ದಕ್ಕೂ ಜಿಮ್ಮಿಯ ಮೇಲೆ ಮುಗಿಬೀಳುವ ನಾಯಿಪಡೆಗಳಿಂದ ತಪ್ಪಿಸಿಕೊಳ್ಳಲು ರೇಸಿಗೆ ಬಿದ್ದವನಂತೆ ಸೈಕಲ್ ಓಡಿಸಬೇಕಾಗುತ್ತಿತ್ತು. ಒಂದು ದಿನ ಅಂಗಡಿ-ಲಕ್ಕಮ್ಮ ಊರಿನ ಹಬ್ಬಕ್ಕೆಂದು ಎಳೆ ಕುರಿಯನ್ನು ತಂದು ಹಿತ್ತಲಲ್ಲಿ ಕಟ್ಟಿದ್ದಳು. ಉರುಳಿ ಹೊತ್ತು ತರುವುದರೊಳಗಾಗಿ ಜಿಮ್ಮಿ ಮತ್ತು ಸಹಚರರು ಹಗ್ಗದ ಸಮೇತ ಕುರಿಯನ್ನು ಹೈಜಾಕ್ ಮಾಡಿ ದಾರುಣವಾಗಿ ಕೊಂದು ತಿಂದಿದ್ದರು. ಮಾಂಸವು ಬೀದಿನಾಯಿಗಳ ಪಾಲಾಗಿದ್ದನ್ನು ಕಂಡು ಕುಪಿತಗೊಂಡ ಲಕ್ಕಮ್ಮ, ಜಿಮ್ಮಿಯ ಬೇಟೆಗಾಗಿ ಹಂಬಲಿಸುತ್ತಿದ್ದಳು.

ಗಬ್ಬಿಗೆ ಬಂದಿದ್ದ ಹಸುಗಳು, ಕರು ಹಾಕುವ ಸಂದರ್ಭದಲ್ಲಿ ಸರ್ಪಗಾವಲಿನಂತೆ ಸುತ್ತುವರೆದು ಕಾಯುವರು. ಏಳಲು ತ್ರಾಣವೇ ಇರದ ಎಳೆಯ ಕರುಗಳ ಗೋಣು, ನಾಯಿಗಳ ಬರ್ಚಿಯಂತಹ ಹಲ್ಲುಗಳಿಗೆ ಸಿಕ್ಕರೆ, ಪ್ರಾಣಪಕ್ಷಿ ಹಾರಿಹೋಗಲು ನಿಮಿಷಮಾತ್ರ ಸಾಕು. ಇಂತಹ ಕ್ರೌರ್ಯಗಳಲ್ಲಿ ಜಿಮ್ಮಿಯ ಪಾಲು ಇರುತ್ತಿತ್ತು.

' ನಿನ್ನ ಸಹವಾಸ ಮಾಡಿಯೇ. , ಆ ನಾಯಿ ಹಾಳಾ.. ಗಿ ಹೋಗಿರುವುದು' ಎಂದು ಅಮ್ಮ ಹೆಳುತ್ತಿದುದು, ಅದರ ಪಾಪಕಾರ್ಯಗಳಲ್ಲಿ ಯಾವ ವಿಧದಲ್ಲೂ ಭಾಗಿಯಾಗಲಾಗದವನನ್ನು ಇರಿದಂತಿರುತ್ತಿತ್ತು. ಒಳ್ಳೆ ಹುಡುಗ ಎಂದು ಬೇರೆಯವರಿಂದ ಅನಿಸಿಕೊಳ್ಳುತ್ತಿದ್ದವನ ಸಂಘದಲ್ಲಿ ಬೆಳೆದು, ಚಾರಿತ್ರ ಹಾಳುಮಾಡಿಕೊಂಡಿದ್ದು ಮಾತ್ರ ವಿಪರ್ಯಾಸವೆ ಸರಿ.

' ಎಂಥಾ ಕ್ರಿಮಿನಲ್ ನಾಯಿ!! ಅದಕ್ಕೆಷ್ಟು ಗಾಂಚಲಿ ಅಂದ್ರೆ!! ಮುಂದಿನ ಬಾಗಿಲಿನಿಂದಲೇ ಅಡುಗೆ-ಮನೆವರೆಗೂ ಒಳ-ನುಗ್ಗಿ, ಮತ್ತದೇ ಬಾಗಿಲಿಂದ ಬೇಕಿದ್ದನ್ನು ಕಚ್ಚಿಕೊಂಡು ಬಂದು .. ಮೇನ್ ರೋಡಲ್ಲೇ ಓಡಾಡುತ್ತೆ ... ' ಹರಟೆ-ಕಟ್ಟೆಯಲ್ಲಿ ತೊಂದರೆಗೀಡಾದವರು ನಾಯಿಯ ಅವಗುಣಗಾನ ಮಾಡುವರು. 'ಕಂಡಲ್ಲಿ ಗುಂಡು' ಕಾಯಿದೆಯನ್ನು ಜಿಮ್ಮಿಯ ಮೇಲೆ ಅಘೋಷಿತವಾಗಿ ಜಾರಿಗೆ ತರಲಾಗಿತ್ತು. ಒಂದುಕಾಲದಲ್ಲಿ ಸೈಕಲ್ ಮುಂದಿನ ಕ್ಯಾರಿಯರ್ ಮೇಲೆ ಅಮ್ಮಣ್ಣಿ-ಪಾಪುವಿನಂತೆ ಕೂತು ನನ್ನೊಂದಿಗೆ ಊರು ಸುತ್ತುದ್ದಿದ್ದ ಪುಟಾಣಿ ಜಿಮ್ಮಿ , ಈಗ ಎಲ್ಲರಿಗೂ ಬೇಕಾದ ವಾಂಟೆಡ್ ಪಶು.


ಬಹಳಷ್ಟು ದಿನಗಳಾದರೂ. ಊರಿನಲ್ಲಿ ಜಿಮ್ಮಿಯ ಸುಳಿವು ಇರಲಿಲ್ಲ. ಅದರಿಂದ ತೊಂದರೆಗೀಡಾದ ಮನೆಯವರ ಟಪಾಲುಗಳೂ ಸಂಪೂರ್ಣವಾಗಿ ನಿಂತು ಹೋಗಿದ್ದವು.

' ಯಾರೋ. ಅದರ ರಂಡಿ ಮುರಿದು ಕಾಲುವೆಗೆ ಎಸೆದಿರಬೇಕು. ಬಿಡ್ತಾರ..? ಅದನ್ನ. ಅದೇನು ನಾಯಿನೋ, ದೆವ್ವನೋ, ನೆಮ್ಮದಿಯಾಗಿ ರಸ್ತೆಯಲ್ಲಿ ತಿರುಗಾಡುವಂತಿರಲಿಲ್ಲ ಅದರ ದೆಸೆಯಿಂದ ' ಎಂಬುದಾಗಿ ಎಣ್ಣೆ-ರಂಗಣ್ಣ ಹೇಳುತ್ತಿದುದರಲ್ಲಿ ಅತಿಶಯೋಕ್ತಿ ಇಲ್ಲದಿಲ್ಲ. ಒಮ್ಮೆ ಸರಿ ರಾತ್ರಿಯಲ್ಲಿ ಕುಡಿದು ತೇಲುತ್ತಾ ರಸ್ತೆ-ಯೆಂಬೋ ರಸ್ತೆಯಲ್ಲಿ, ಅತ್ತಿತ್ತ-ತೂರಾಡುತ್ತ, ಉಟ್ಟ ಪಂಜೆಯಲ್ಲಿ ನೆಲಗುಡಿಸುತ್ತಾ ಬರುತ್ತಿದ್ದವನಿಗೆ.. ಊರ-ಬಾಗಿಲಿನವರೆಗೂ ಅಟ್ಟಿಸಿಕೊಂಡು ಹೋಗಿ ಬೆದರಿಸಿತ್ತು. ಕುಡಿದ-ನಷೆ ಇಳಿದು, ಜೀವ ಬಾಯಿಗೆ ಬಂದಂತಾಗಿದ್ದ ರಂಗಣ್ಣ, ಅಂದಿನಿಂದ ಸರಿ-ರಾತ್ರಿಯಲ್ಲಿ ಬಂದರೂ ಜಿಮ್ಮಿಗೆ ಹೆದರಿ ಶಿಸ್ತಿನ ಸಿಪಾಯಿಯಂತೆ ನಡೆದು ಮನೆ ಸೇರುತ್ತಿದ್ದ. ಅವನಿಗೂ ಜಿಮ್ಮಿಯ ಮೇಲೊಂದು ಕಣ್ಣಿತ್ತು. ಯಾರೋ ಅಲ್ಲದಿದ್ದರೂ. ಇವನೇ ಅದನ್ನು ಕೊಂದು ಮುಗಿಸಿ ಬಿಡುತ್ತಿದ್ದ.
ದನಕಾಯುವ ಬಸಿಯಣ್ಣ ಜಿಮ್ಮಿಯನ್ನು ಒಂದಷ್ಟು ಬಾರಿ, ಊರಾಚೆಯ ಪೊದೆಗಳಲ್ಲಿ ನೋಡಿರುವುದಾಗಿ ಹೇಳಿದನಾದರೂ, ಬದುಕಿದ್ದಿದ್ದರೆ ಕಣ್ಣಿಗೆ ಕಾಣಿಸದೆ ಇರುತ್ತಿತ್ತೆ. ? 'ಅದ್ಯಾರ ಕೋಪಾಗ್ನಿಗೆ ಬಲಿಯಾಗಿ. , ರಣಹದ್ದುಗಳಿಗೆ ಆಹಾರವಾಗಿದೆಯೋ ' ಎಂದುಕೊಂಡು ಸುಮ್ಮನಾದೆ.

ಒಂದಷ್ಟು ತಿಂಗಳುಗಳ ನಂತರ ಊರಿನ ರಸ್ತೆಯಲ್ಲಿ ಏಕಾ ಏಕಿ ಜಿಮ್ಮಿ ಪ್ರತ್ಯಕ್ಷನಾಗಿಬಿಟ್ಟ. ಮೈಕೈ ಭಾರಿಯಾಗಿ ತುಂಬಿಕೊಂಡು ಬೆಳ್ಳಗೆ ಮಿಂಚುತ್ತಿದ್ದ ಜಿಮ್ಮಿ. ನನ್ನನ್ನು ನೋಡುತ್ತಲೇ, ಅತಿ ವಿನಯದಿಂದಲೋ!! ಅಚ್ಚರಿಯಿಂದಲೋ!! ನುಲಿಯತೊಡಗಿದ. ' ಏನ್ ಗುರುಗಳೇ ಹೆಂಗಿದೀರಿ. ನನ್ನನ್ನು ನೋಡಿ!, ಸೂಪರ್ ಆಗಿದ್ದೀನಿ. ಈ ಊರಿನ ಜನ ನನ್ನನ್ನು ಏನೂ ಮಾಡ್ಕೊಳಕ್ಕಾಗ್ಲಿಲ್ಲ" ಜಿಮ್ಮಿ ರೇಗಿಸಿದಂತಾಯ್ತು.

' ಜಿಮ್ಮಿ ನೋಡೋ!!. ನಿನಗಿಂತ ದಪ್ಪ ಆಗಿ ಬಿಟ್ಟಿದ್ದಾನೆ ' ಎಂದು ಅಮ್ಮ ಹೆಳಿದ್ದರಲ್ಲಿ ಅಚ್ಚರಿ ಇರಲಿಲ್ಲ. ಇನ್ನು ಇಷ್ಟು ದಿನ ಭೂಗತನಾಗಿದ್ದ ಜಿಮ್ಮಿ, ಇದ್ದಕ್ಕಿದ್ದಂತೆ ಆನೆ ಮರಿಯಂತಾಗಿ ಬಂದಿದ್ದರ ರಹಸ್ಯ ಭೇದಿಸಲು ಹೆಚ್ಚು ಸಮಯ ಹಿಡಿಯಲಿಲ್ಲ. ಶಿವಮೊಗ್ಗ ಬೆಂಗಳೂರು ರೈಲು ಹಳಿಯು ಊರಿನ ದ್ವಾರದಲ್ಲಿಯೇ ಹಾದು ಹೋಗುತ್ತದೆ. ಗೇಟು ಇಲ್ಲದ ಈ ರೈಲು ಹಳಿಯನ್ನು ದಾಟಿಯೇ ಊರಿನ ಪ್ರವೇಶ ಮಾಡಬೇಕು. ಕೇಕೆ ಹಾಕಿಕೊಂಡು ಓಡಾಡುವ ರೈಲುಗಾಡಿಗಳಿಗೆ ಸಿಕ್ಕಿ, ಹಸು-ಎಮ್ಮೆ-ಮನುಷ್ಯಾದಿ ಜೀವಿಗಳು ಆಕಸ್ಮಿಕವಾಗಿ ಆತ್ಮಾಹುತಿ ಮಾಡಿಕೊಳ್ಳುತ್ತಿದ್ದವು. ಹೀಗೆ ಸಾಯುವ ಜೀವಿಗಳ ತೊಗಲು ತಿಂದೇ ಜಿಮ್ಮಿ ದಷ್ಟ-ಪುಷ್ಟನಾಗಿದ್ದ.

ಸಸ್ಯಾಹಾರವನ್ನು ಸಂಪಾರ್ಣವಾಗಿ ತ್ಯಜಿಸಿದ್ದ ಜಿಮ್ಮಿ, ಚಿಕ್ಕಪುಟ್ಟ ಡೀಲು ಗಳಿಗೆಲ್ಲಾ ಊರಿನೊಳಗೆ ಬರುವುದನ್ನು ನಿಲ್ಲಿಸಿದ. ಅಕಸ್ಮಾತ್ ಆಹಾರದ ಕೊರತೆಯಾದಗ ಊರಿಗೆ ಬಂದು ತನ್ನ ಹಳೆ ಶೈಲಿಯಂತೆ ಕೋಳಿ ಹಿಡಿದು ಭೂಗತನಾಗುವನು. ಏನೆಲ್ಲಾ ಮಾಡಲು ಹೊಂಚು ಹಾಕಿದವರ ಎದುರೇ.. ಕೊಬ್ಬಿನಿಂದ ಬೆಳೆಯುತ್ತಿದ್ದನು ಜಿಮ್ಮಿ.