ಅಪ್ಪಂಗೆ ಅಂಜಿಯೊ ಪ್ಲಾಸ್ಟಿ ಮಾಡಿಸೋದಿತ್ತು. ಹೃದಯಕ್ಕೆ ರಕ್ತ ಪೂರೈಸುವ ನಾಳದ ಒಳಭಾಗದಲ್ಲಿ ಕೊಬ್ಬು ಅಂಟಿಕೊಳ್ಳುತ್ತಾ ಹೋಗಿ, ಹೆಚ್ಚಾಗಿ, ರಕ್ತ ಸರಾಗವಾಗಿ ಸರಿದಾಡಲು ಸಹಕರಿಸದೇ ಇರುವ ಸ್ಥಿತಿ. ರಕ್ತ ನಾಳವನ್ನು ಬ್ಲಾಕ್ ಆಗಿರುವ ಜಾಗದಲ್ಲಿ ಹಿಂಜಿಸಿ, ಒಂದು ಸಣ್ಣ ಮೆಶ್ ತರದ ಪೈಪು ಕೂರಿಸುವ ಕೆಲಸ. ಇದನ್ನ ಸ್ಟೆಂಟ್ ಹಾಕೋದು, ಅಂಜಿಯೋಪ್ಲಾಷ್ಟಿ, ptc ಅಂತಾರಂತೆ.

ಜಯದೇವ ಆಸ್ಪತ್ರೆ. ಅಪ್ಪನ ಬೆಡ್ ಪಕ್ಕದಲ್ಲಿ ಒಬ್ಬರು ಅಜ್ಜ ಇದ್ದರು. ಹಣ್ಣಣ್ಣು ಮುದುಕ.
ಅವರಿಗೆ ಹೃದಯ ಬಡಿತ ಕಡಿಮೆ ಇದ್ದು, ಕೆಲಸ ಮಾಡ್ತಿಲ್ವಂತೆ. ಹೃದಯದ ಬದಲಿ ಕೆಲಸಕ್ಕೆ ಮತ್ತು ಅದಕ್ಕೆ ಬೆಂಬಲವಾಗಿ ಮಿಷನ್ ಇದೆ.
ಆ ಮಿಷನ್ ಕೆಲಸ ಮಾಡೋದಕ್ಕೆ ಅದಕ್ಕೊಂದು ಬ್ಯಾಟರಿಯೂ ಇದೆ. ಬ್ಯಾಟರಿ ರೀಚಾರ್ಜ್ ಮಾಡಿಸಿಕೊಳ್ಳುವುದಕ್ಕೆ ಅಜ್ಜ ಅಡ್ಮಿಟ್ ಆಗಿರುವುದು.
ಅವಾಗಾವಾಗ ರೀಚಾರ್ಜ್ ಮಾಡಿಸಬೇಕಾಗಿರುವುದಾಗಿಯೂ, ಅದಕ್ಕೆ ಎರಡುವರೆ ಲಕ್ಷವೆಂದೂ ಹೇಳಿದರು.

ಲಕ್ಷಕ್ಕಿಂತ ಹೆಚ್ಚಾಗಿ, ಅಲಕ್ಷವೆನಿಸಿದ್ದು 'ಸಂಪೂರ್ಣ ಹೃದಯದ ಸೆಟಪ್ಪು' . ಸಾಲ್ಡರಿಂಗು!! ವೆಲ್ಡಿಂಗು!! ಪಂಕ್ಚರು!! ರೀಚಾರ್ಜು!! ಏನಪ್ಪಾ ಇದು ಹಾಲ್ಟಿನ ಕಥೆ ..?
ಮನ್ಸ ಬದುಕಿರೋದಕ್ಕೆ ಏನೇನ್ ಮಾಡ್ತಾನೋ..

'ಇಷ್ಟು ಕಷ್ಟ ಪಡೋ ಬದಲು, ಒಂದ್ ನಿಮಿಷ ಬ್ಯಾಟರಿ ಆಫ್ ಮಾಡಿದರೆ ಆಯ್ತಪ್ಪ' ಅಂದೆ, ಮೆಲ್ಲಗೆ.
ಅಮ್ಮ ನಕ್ಕಳು. 'ಹಂಗೆಲ್ಲಾ ತಮಾಷೆ ಮಾಡಬಾರದು.. ' ಅಂತಲೂ ಅಂದಳು.
ನಾನು ಸೀರಿಯಸ್ ಆಗಿಯೇ ಹೇಳಿದ್ದು. ಇದೆಂಥಕ್ಕೆ ಇಷ್ಟೆಲ್ಲಾ ಹರಸಾಹಸ ಪಟ್ಟು ಬದುಕಿಸೋದಾ.. ?

'ಮಿಷನ್ ಎಲ್ಲಿದೆ..?' ಅಂತ ಅಮ್ಮ ಕೇಳಿದ್ದಕ್ಕೆ ಎದೆಯ ಭಾಗವನ್ನು ತೋರಿಸಿತು ಅಜ್ಜ.
ಅಷ್ಟಕ್ಕೇ ನಿಲ್ಲದೆ, ಅಮ್ಮನ ಕೈ ಹಿಡಿದು, ತನ್ನ ಎದೆಯ ಭಾಗವನ್ನು ಒತ್ತುವಂತೆ ಹಿಡಿಯಿತು.
ಅಮ್ಮ ಕರೆಂಟ್ ಹೊಡೆದವಳಂತೆ ಕೈ ಹಿಂದೆ ತೆಗೆದಳು. ದೇಹದೊಳಗೆ ಮಿಷನ್ ಇರುವುದೇ ಒಂದು ರೋಮಾಂಚನದ ಸಂಗತಿಯಾಗಿತ್ತು.
ಹಲ್ಲಿಲ್ಲದ ಅಜ್ಜ ನಾಲಗೆ ಹೊರ ಹಾಕುತ್ತಾ ನಕ್ಕಿತು.

'ಅಜ್ಜ ವಯಸ್ಸೆಷ್ಟು.?' ಅಂದರೆ 'ಎಂಬತ್ತೆರಡು, ಮತ್ತೆ ಮೂರು ತಿಂಗಳು' ಅಂತೆ.

ಎಂಬತ್ತೆರಡರ ಯಂಗ್ ಮೆನ್, ತನ್ನ ಚುರುಕಾದ ಮಾತುಗಳಿಂದ ನರ್ಸುಗಳನ್ನೂ ಮತ್ತು ಫೆಲೋ ಪೇಷೆಂಟುಗಳನ್ನೂ ಗೋಳು ಹೊಯ್ದುಕೊಳ್ಳುತ್ತಿದ್ದದ್ದು ಮಜವಾಗಿತ್ತು.
ಎಂಬತ್ತು ದಾಟಿದ ಅಜ್ಜನ ಜೀವನ ಪ್ರೀತಿ ಮತ್ತು ಲವಲವಿಕೆ ಅಮ್ಮನಿಗೆ ಬಹುವಾಗಿ ಹಿಡಿಸಿತು.
ಇತ್ತಕಡೆ ಐವತ್ತರ ಅಪ್ಪ 'ನಾಳೆ ನಂದು ಆಪರೇಷನ್' ಎಂಬುದನ್ನು ನೆನೆದು ಮಂಕಾಗಿ ಕುಳಿತಿದ್ದರು.
ಅವರಾಗಲೇ ನಮ್ಮ ತೋಟದ ಉದ್ದಗಲಗಳು, ಸರಹದ್ದಿನ ಗುರುತಿನ ಕಲ್ಲುಗಳನ್ನೂ ನನಗೆ ತೋರಿಸಿ ಬಂದಿದ್ದರು.
ಎಂಬತ್ತೆರಡರ ಅಜ್ಜನ ಧೈರ್ಯವನ್ನು, ಅಪ್ಪನ ದುಗುಡದ ಜೊತೆ ಹೋಲಿಸಿಕೊಂಡು ಅಮ್ಮ ರೇಗಿಸುತ್ತಿದ್ದುದು ತಮಾಷೆಯಾಗಿತ್ತು.

'ನಾಳೆ ನಮ್ಮದೆಲ್ಲಾ ಮತ್ತೆ ಹುಟ್ಟು ಐತೆ. ಒಂಥರ ಸತ್ತು ಹುಟ್ಟಿದಂಗೆ. ಉಳಿದಿರೋ ಜೀವನವನ್ನ ಚನ್ನಾಗ್ ಬದುಕಬೇಕು.' ಅನ್ನೋ ಪಂಚ್ ಗಳೂ ಬಂದವು.
ಪೇಷೆಂಟು ಗಳೆಲ್ಲಾ ಒಬ್ಬರಿಗೊಬ್ಬರು ಗುಡ್ ಲಕ್!! ಬೆಸ್ಟ್ ಆಫ್ ಲಕ್ ಹೇಳಿಕೊಂಡು ಮಲಗಿದರು.

ಅಜ್ಜನ ಪಕ್ಕದಲ್ಲಿಯೇ ಕುಳಿತಿದ್ದ ಅವರ ಮಗ ತಲೆ ಸವರುತ್ತಾ..,
'ದನದ ದಲ್ಲಾಳಿ ವ್ಯಾಪಾರ ಮಾಡ್ಕಂಡು ಸಾಕಿದಾನೆ ನಮ್ಮಪ್ಪ!! ನಾವು ಇವತ್ತು ಹಿಂಗಿದಿವಿ ಅಂದ್ರೆ ಅದಕ್ಕೆ ನಮ್ಮಪ್ಪನೇ ಕಾರಣ.
ಏಳು ಮಕ್ಳನ್ನ ಸಾಕದು ಅಂದ್ರೆ ಸುಲಭವಾ..?
ಎಲ್ರನ್ನೂ ಓದ್ಸಿದಾನೆ. ಹೆಣ್ಣು ಮಕ್ಕಳನ್ನ ಒಳ್ಳೊಳ್ಳೆ ಕಡೆ ಕೊಟ್ಟು ಮದ್ವೆ ಮಾಡಿದಾನೆ.
ಏನೂ ಇಲ್ಲದರಿಂದ ಜೀವನ ಶುರು ಮಾಡಿ, ಒಂದೊಂದಾಗಿ ಜೋಡಿಸಿದ್ದಾನೆ.
ಈಗ್ಲು ಬನ್ರಿ ಊರ ಕಡೆ. ಐದು ಎಕರೆ ತೋಟ, ಐವತ್ತು ಕುರಿ, ನಾಲಕ್ಕು ಹುಂಜ, ಹತ್ತು ಹಸ-ಕರ ಎಲ್ಲಾ ಹೆಂಗಿಟ್ಟಿದಾನೆ ಅಂದ್ರೆ, ನಮಗೆ ನಾಚಿಕೆ ಆಗುತ್ತೆ.
ಅವನು ಗಟ್ಟಿಗ!! ಕಲ್ಲಿನಂತೋನು.' ತನ್ನ ಅಪ್ಪನ ಬಗ್ಗೆ ಅತೀವವಾದ ಹೆಮ್ಮೆ.

' ಸುಮ್ನೆ ನಮ್ಮ ಜೊತೆ ಉಸಿರಾಡಿಕೊಂಡು ಇದ್ದರೂ ಸಾಕು, ಎಲ್ರೂ ಖುಷಿಯಾಗಿರ್ತೇವೆ. ' ಅಂತಲೂ ಹೇಳುವುದನ್ನು ಮರೆಯಲಿಲ್ಲ.

ಆಪರೇಷನ್ ದಿನ. ಅಪ್ಪನ ಜೊತೆ ಅಜ್ಜನೂ ರೆಡಿ. ಅಖಂಡ ವಸ್ತ್ರಧಾರಿಗಳಾದ ನೂರಾರು ಹೀನ ಹೃದಯಿಗಳು ಪಂಕ್ಚರ್ ಗಾಗಿಯೂ, ರಿ ಬೋರ್ ಗಾಗಿಯೂ, ಬೈಪಾಸ್ ಗಳಿಗಾಗಿಯೂ ಸಿದ್ಧರಾದರು.
ಅದೇನು, ವಿಪರ್ಯಾಸವೋ ಎಂಬಂತೆ ಅಜ್ಜ!! ಯಮಯಾತನೆಯಿಂದ ನರಳಲಾರಂಭಿಸಿತು.
ಸಿಸ್ಟರ್, ಡಾಕ್ಟರ್ ಎಲ್ಲರೂ ಒಮ್ಮೆಗೆ ದೌಡಾಯಿಸಿದರು. ಎದೆ ಗುದ್ದುವರು, ಮುಖದ ಮೇಲೆ ಗಾಳಿಯ ಯಂತ್ರ ಇಡುವರು. ಮಗ, 'ಅಣ್ಣಾ!! ' ಎಂಬುದಾಗಿ ಘೀಳಿಡುವನು.
ಮಗಳು, ಒಂದೇ ಸಮನೆ ರೋಧಿಸಲು ಪ್ರಾರಂಭಿಸುವರು.

ಆಪರೇಷನ್ ಮಾಡುವ ಬದಲಾಗಿ, ಅವರನ್ನ ತೀವ್ರ ನಿಗಾ ಘಟಕಕ್ಕೂ, ಅಲ್ಲಿಂದ ಅದಕ್ಕೂ ಮೇಲಿನ ಎಮರ್ಜೆನ್ಸಿ ರೂಮಿಗೂ ವರ್ಗಾಯಿಸಲಾಯಿತು.
ಮೈ ತುಂಬಾ ಚುಚ್ಚಿದಾರೆ!! ಪಲ್ಸ್ ಇಲ್ಲ!! ಇವತ್ತಿನ ಆಪರೇಷನ್ ಕ್ಯಾನ್ಸಲ್!! ಬದುಕದು ತುಂಬಾ ಕಷ್ಟ ಅಂತೆ .. ಮುಂತಾದ ಮಾತುಗಳು, ಅವರ ಮನೆಯವರ ಮಾತುಗಳ ನಡುವೆ ನುಸುಳುತ್ತಿದ್ದವು. ದುರಾದೃಷ್ಟವೆಂಬಂತೆ ಅದೇ ದಿನ ಅಜ್ಜನ ಮಿಷನ್ ಬ್ಯಾಟರಿ ಡೆಡ್ ಆಯ್ತಂತೆ.

ಆಮೇಲೆ ಅಜ್ಜನಿಗೆ ಏನೇನಾಯ್ತೊ ಕಾಣೆ!!
ಕೊನೆಗೆ ಅಪ್ಪನ ಅಂಜಿಯೊಪ್ಲಾಸ್ಟಿ ಮುಗಿಸಿ, ಮನೆಗೆ ವಾಪಾಸಾಗುವ ದಾರಿಯಲ್ಲಿ 'ಅಣ್ಣ!! ನಿನ್ನ ಜೊತೆ ಮಾತಾಡಬೇಕಂತೆ, ಸನ್ನೆ ಮಾಡ್ತಿದಾನೆ. ' ಅಂತ ಅಜ್ಜನ ಮಗನು, ಮಗಳನ್ನು ಕರೆದದ್ದು ನೋಡಿದೆ. ಅವರು ಓಡಿದರು. ದುಃಖದಲ್ಲಿದ್ದರು. ಬದುಕುವ ಆಸೆ ಎಲ್ಲರಿಗೂ ಇದೆ. ಬದುಕಿಸಿಕೊಳ್ಳುವರ ಪ್ರೀತಿಯೂ, ಆರೈಕೆಯೂ ಅಷ್ಟೇ ಇದೆ. ಇವರಿಬ್ಬರನ್ನ ಬಿಟ್ಟು ನೋಡುವವರಿಗೆ 'ವಯಸ್ಸು' ಅನ್ನೋದು ಒಂದು ಒಗಟು.

' ಒಂದ್ ನಿಮಿಷ ಮಿಷನ್ ಆಫ್ ಮಾಡುದ್ರೆ ಸಾಕು ಅಂತ ಹೇಳ್ತಿದ್ದೆ. ಅಷ್ಟೇ ಮಾಡದಾಗಿದ್ರೆ, ಇಷ್ಟೆಲ್ಲಾ ಕಷ್ಟ ಪಡಬೇಕಿತ್ತಾ..? ' ಅಂದಳು ಅಮ್ಮ.