​​
​​

"ಇರುವ ಭಾಗ್ಯವ ನೆನೆದು ಬಾರೆನೆಂಬುದನು ಬಿಡು. ಹರುಷಕ್ಕಿದೆ ದಾರಿ."

- DVG

ಇದನ್ನು ಬೇಕು ಬೇಕಾದವರು ಬೇಕಾದಂತೆ ಓದಿಕೊಳ್ಳಬಹುದು. ನಾನೂ ಅಷ್ಟೇ!!, ನನಗೆ ಬೇಕಾದಂತೆ ಅರ್ಥ ಮಾಡಿಕೊಂಡಿದ್ದೇನೆ.
' ಸಧ್ಯಕ್ಕೆ ಇರೋ ಕೆಲಸ ಮಸ್ತಾಗಿದೆ. ಸೈಕಲ್ ಗ್ಯಾಪಲ್ಲಿ ಮತ್ತೊಂದು ಹೊಸ ಅವಕಾಶ ಸಿಕ್ಕಿದೆ. ಈಗಿರೋ ಕಂಫರ್ಟ್ ಜೋನ್ ಬಿಟ್ಟು ಹೋಗ್ಲಾ..? ಬೇಡ್ವಾ..? ' ಅಂದ್ರೆ,
"ಹೂಂ ಹೋಗು.. ಅಲ್ಲಿ ಮತ್ತೇನೋ ಇರಬಹುದು. ಇರುವ ಭಾಗ್ಯವ ನೆನೆದು ಬಾರೆನೆಂಬುದನು ಬಿಡು. ಹರುಷಕ್ಕಿದೆ ದಾರಿ!! ಅಲ್ಲವೇ.."

ಬೆಳಗ್ಗೆ ಎದ್ದು, ತಟ್ಟೆ ಇಡ್ಲಿ ತಿಂದು, ಟೀ ಕುಡಿದು ಪಾರ್ಕೊಳಗೆ ಒಂದು ಸುತ್ತು ಹಾಕಿ ಬಂದೆ. ಮತ್ತೆ, ಏನ್ ಮಾಡೋದು ತೋಚಲಿಲ್ಲ. 'ಸಾಕು ನಮ್ಮನ್ನ ಉದ್ಧಾರ ಮಾಡಿದ್ದು' ಅಂತ ಕಂಪನಿಯವರು ನೆನ್ನೆ ಇನ್ನು ಸೆಂಡಾಫ್ ಕೊಟ್ಟಿದಾರೆ. ರಜಾ ದಿನಗಳ ಕಥೆಯೇ ಬೇರೆ. ಆದರೆ ಈ ದಿನದ ಅನುಭವವೇ ವಿಭಿನ್ನ. ಬಿಲ್-ಕುಲ್ ಜಾಬ್-ಲೆಸ್ ದಿನ. ರಿಟೈರ್ಡ್!! ರಿಲಾಕ್ಸುಡು!!

ಕೆಲಸ ಬಿಟ್ಟಿದ್ದರ ಬಗ್ಗೆ ಯೋಚ್ನೆ ಬರ್ತಿದೆ.

ಪರ್ಫೆಕ್ಟ್ ಡಿಸಿಷನ್ ಅಂದ್ರೆ ಏನು..? ತಾಳೆ ಹಾಕಿದಷ್ಟು, ತಾಳ ತಪ್ಪುತ್ತದೆ. ಅಮ್ಮಮ್ಮಾ ಅಂದ್ರೆ ಏನಾಗಬಹುದು..? ಏನೂ ಇಲ್ಲ. ಆದರೆ ನನ್ನ ಎಡವಟ್ಟುಗಳಿಗೆ ಯಾರನ್ನೂ ದೂಷಿಸಬಾರದು.
ನನಗೆ ನಾನೊಬ್ಬನೇ ಹೊಣೆ.


ಮಿಸ್ ಮಾಡ್ಕೋತೀನಿ. ಆಫೀಸು ಅಂದ್ರೆ ಪುಟ್ಟದಾಗಿ ಒಂದು ಪ್ಯಾಮಿಲಿ ಥರಾನೇ ಆಗೋಗಿತ್ತು. ಕೆಲಸ ಅನ್ನೋದು, ಸೈಡ್ ಬಿಜಿನೆಸ್ ಇದ್ದಂಗೆ!! ಅದು ಆಗಿದ್ದು, ಹೋಗಿದ್ದು ತಿಳಿತ್ಲೇ ಇರಲಿಲ್ಲ.

ಬೆಳಿಗ್ಗೆ ಎದ್ದಾಗಲೇ ಆಫೀಸು, ಮಾಡಿದಾಗಲೇ ಕೆಲಸ!! ಬರ್ಮೋಡ ಚಡ್ಡಿ ಹಾಕಿ ಬಂದು ಕೆಲಸ ಮಾಡಿದ್ದಿದೆ. ಅಮ್ಮ ಅಂತು, ಒಂದು ದಿನಾ ಆದರೂ ಟಿಪ್-ಟಾಪಾಗಿ ಕೆಲಸಕ್ಕೆ ಹೋಗು ಅಂತ ಗೋಳಿಡುತ್ತಿದ್ದಳು.

ಇರೋ ನಾಲಕ್ಕು ಜನದಲ್ಲಿ, ಆ ಕ್ಷಣಕ್ಕೆ ಯಾರಿರಲ್ವೋ ಅವರ ಮೇಲೆ ಇಲ್ಲಸಲ್ಲದ ಗಾಸಿಪ್ ಮಾಡ್ತಿದ್ವಿ. ಗಾಸಿಪ್ಪಿಂಗ್ ಅನ್ನೋದು ರೌಂಡ್ ರಾಬಿನ್ ಥರ, ಬಲಿ-ಕ-ಬಕ್ರ ಮಾತ್ರ ಶಿಫ್ಟ್ ಆಗಿರುತ್ತಿದ್ದರು. ಮಧ್ಯಾಹ್ನ ಊಟಕ್ಕೆ ಕುಳಿತಾಗ, ಮ್ಯೂಸಿಕಲ್ ಚೇರ್ ರೀತಿ.. ಕುರ್ಚಿಗಳನ್ನ ಹುಡುಕುತ್ತಿದ್ದುದೂ ಮಜವಿರುತ್ತುತ್ತು.

ಪಾಡು ಬಿದ್ದು, ಕೆಲಸಕ್ಕೆ ಹೋದ ದಿನ, ಎಲ್ರೂ 'ವರ್ಕ್ ಫ್ರಂ ಹೋಮ್' ಅಂತ ಮೆಸೇಜ್ ಮಾಡುವಾಗ ಸಖತ್ ಉರ್ಕೋತಿದ್ದೆ. ಒಬ್ಬರು ಲೀವ್ ಹಾಕುದ್ರೆ, ಕಾಂಪಿಟೇಷನ್ ಮೇಲೆ ಉಳಿದೋರು ಹಾಕೋರು. ಸ್ವಾತಿ ಹೋಟೆಲಲ್ಲಿ, ವೆಯ್ಟರ್ ನಮ್ಮನ್ನ ಹೊರಗಾಕೋದೊಂದು ಬಾಕಿ ಇತ್ತಷ್ಟೆ. ಟೀಮ್ ಲಂಚ್ ಅಂದ್ರೆ, ಅಷ್ಟು ಗಲಾಟೆ ನಮ್ಮದು. ಈ ಎಲ್ಲವನ್ನೂ ಸಿಕ್ಕಾಪಟ್ಟೆ ಮಿಸ್ ಮಾಡ್ಕೋತೀನಿ.

ಕೆಲಸ ಅರ್ಥ ಆದ್ರೆ, ​ಕೆಲಸ. ಇಲಾಂದ್ರೆ ಒಂದಷ್ಟು ಮಿಸ್ಟೀಕುಗಳನ್ನ ಮಾಡಿದ್ದನ್ನೇ ಪಿ-ಓ-ಸಿ ಅಂದು ತೋರಿಸಿ ಬಿಡುತ್ತಿದ್ದೆವು. ಕ್ರಿಯೇಟೀವ್ ಲಿಬರ್ಟಿ ಅನ್ನೋದು ಸಿಕ್ಕಾಪಟ್ಟೆ ಇತ್ತು. ಪ್ರಾಬ್ಲಂ ಸ್ಟೇಟ್-ಮೆಂಟ್ ಮಾತ್ರ ಇರ್ತಿತ್ತು. ಅದನ್ನ ಹಂಗೇ ಮಾಡು.. ಹಿಂಗೇ ಮಾಡು.. ಅಂತ ಯಾರೂ ಹೇಳುವರಿರಲಿಲ್ಲ. ಕೆಲಸವನ್ನ ಪ್ರೀತಿಸುತ್ತಿದ್ದರಿಂದಲೋ ಏನೋ.. ತಾಂತ್ರಿಕ ಸಮಸ್ಯೆಗೆ ಪರಿಹಾರ ಹುಡುಕೋದಕ್ಕೆ, ಜೀವನದ ಧ್ಯೇಯ ಸಾಧಿಸುವಷ್ಟು ತನ್ಮಯತೆಯಿಂದ ತೊಡಗಿಸಿಕೊಳ್ತಿದ್ದೆವು. ಅಷ್ಟರ ಮಟ್ಟಿಗೆ, ಬದ್ಧತೆ ಎಲ್ಲರಲ್ಲೂ ಇತ್ತು. ಯಾರಿಗೂ ಬೆಣ್ಣೆ ಹಚ್ಚುವಂತದ್ದಿಲ್ಲ, ಬಕೇಟು ಹಿಡಿಯುವಂತದ್ದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ, ಇಂಚಿಂಚೂ ಕೆಲಸಗಳ ರಿಪೋರ್ಟುಗಳನ್ನ ಯಾರಿಗೂ ಕೊಡಬೇಕಂತಿಲ್ಲ. ಕೆಲಸದ ದಣಿವಿಗಿಂತ, ಆ 'ಸ್ವಾತಂತ್ರ್ಯ' ವನ್ನ ಸೆಲೆಬ್ರೇಟ್ ಮಾಡೋದರಲ್ಲಿ ಒಂದು ಮಜವಿದೆ.

ಸೆಂಡಾಫ್ ಕೊಡೋವಾಗ ಒಬ್ಬೊಬ್ಬರ ಪ್ರೀತಿಯ ಮಾತುಗಳೂ, ಎಂದಿನದ್ದಕ್ಕಿಂತ ಹೆಚ್ಚೇ ಆತ್ಮೀಯ ಅನಿಸಿದವು. ಇಷ್ಟೊಂದು ಪ್ರೀತಿ(ಅಷ್ಟೊಂದು ಗಿಫ್ಟುಗಳು) ಸಿಗುತ್ತೆ ಅಂತಾದ್ರೆ, ಕೆಲಸ ಬಿಡೋ ಕೆಲಸಾನ ಸ್ವಲ್ಪ ಜಾಸ್ತಿ ಫ್ರೀಕ್ವೆಂಟ್ ಆಗೀನೆ ಮಾಡಬೇಕು.

ಐ ಟಿ ಅಂದ್ರೆ, ಹಾಗೆ-ಹೀಗೆ ಅಂತಾರೆ. ಎಲ್ಲಿಗ್ ಹೋದ್ರೂ!! ಆತ್ಮೀಯರು ಅನ್ನೋರು ಸಿಕ್ಕೇ ಇದ್ದಾರೆ. ಬೆರಳೆಣಿಕೆಯಷ್ಟು ಮಂದಿಯು ಗುಂಪಾಗಿ ಗುಂಪುಗಾರಿಕೆ ನಡೆಸಿಯೇ ತೀರುತ್ತೇವೆ.


"ಸರಿ!! ನಿನಗ್ಯಾವನಪ್ಪಾ.. ಕೆಲಸ ಬಿಡು ಅಂದವನು..? "

ಮತ್ತದೇ ಪ್ರಶ್ನೆ.

ಒಂದು ಬದಲಾವಣೆ ಬೇಕು. ಯಾವುದರ ಬಗ್ಗೆಯೂ ಅತಿಯಾಗಿ ನಿರೀಕ್ಷೆಗಳನ್ನ ಇಟ್ಕೋಬಾರ್ದು. ಆದರೆ, ಗೊಂದಲಗಳಿದ್ದಾಗ ನ್ಯೂಟ್ರಲ್(ಸಮಾಧಿಸ್ಥ) ಆಗಿರೋದೂನು ಅಷ್ಟು ಸುಲಭ ಅಲ್ಲ. ಬಾಲವಿಧವೆ ತರಹ ರೋಧಿಸುವ ಬದಲು, ಬಿಟ್ಟು ನಡೆಯೋದು ಒಳ್ಳೆಯದು. ಕೆಲಸಕ್ಕಷ್ಟೇ ನಮ್ಮ ನಿಷ್ಠೆ. ಭಾವನಾತ್ಮಕವಾಗಿ ಕಂಪನಿಗೆ ಅಂಟಿಕೊಂಡರೆ, ಮತ್ತದೇ 'ನಿರೀಕ್ಷೆಗಳ ಸುಳಿಯಲ್ಲಿ' ಸಿಕ್ಕಿ ಬೀಳೋ ಭಯ.

ರಾತ್ರೋ-ರಾತ್ರಿ ಆಂಟ್ರಪ್ರೂನರ್ ಆಗಿಬಿಟ್ಟೆ ಅಂದುಕೊಂಡಿದ್ದೆ. ಇಷ್ಟು ವರುಷಗಳ ಭ್ರಮೆಯಿಂದ, ಇವತ್ತಿಗೆ ಮುಕ್ತಿ ಸಿಕ್ತು. ಆರ್ಡಿನರಿ ಆಗಿ ಫೀಲ್ ಮಾಡ್ಕೋಳದ್ರಲ್ಲೂ ಒಂದು ರೀತಿ ಸುಖ ಇದೆ.

"ಸಕ್ಸಸ್ ಗೋಸ್ಕರ ನನ್ನ ಖುಷಿಗಳ ಜೊತೆ ಕಾಂಪ್ರಮೈಸ್ ಮಾಡಿಕೊಂಡಿದ್ದಾಗ, ನನಗೆ ಆ ಎರಡೂ ಸಿಗಲಿಲ್ಲ."

ಗೀತ್ ಸೇಟಿ ಅನ್ನೋ ಸಾಧಕನ ಮಾತಿದು. ನನಗಿದು ನಿತ್ಯಸತ್ಯ. ಖುಷಿಯಾಗಿರದು ಮುಖ್ಯ!! ಸಕ್ಸಸ್ ಅನ್ನೋದು, ಅದರ ಬೈ ಪ್ರಾಡಕ್ಟ್ ಆಗಿರಬೇಕು.

ನನ್ನ ಮುಂದಿನ ದಿನಗಳನ್ನ ಎದುರು ನೋಡುತ್ತಿದ್ದೇನೆ. ಅವುಗಳನ್ನ, ಇವತ್ತಿನಂತೆಯೇ ಸುಂದರವಾಗಿಸಬೇಕು. ಕಷ್ಟ ಪಡದೆ, ಯಾರೂ ಸಾಯಲ್ಲ. ಆದ್ರೆ, ಆ ಕಷ್ಟಗಳನ್ನೂ ಮನಃಸ್ಪೂರಕವಾಗಿ ಪಡೋಣ.