ಶಿವಮೊಗ್ಗ ನಗರದಿಂದ ಕೂಗಳತೆಯ ದೂರದಲ್ಲಿ ಒಂದು ಹಳ್ಳಿ. ಹೆಸರು ಹೂನವಿಲೆ. ಈ ಹೆಸರಿಗೆ
ಒಂದು ಪೌರಾಣಿಕ ಹಿನ್ನಲೆ ಇದೆ. ದೇವಾನು ದೇವತೆಗಳ ಕಾಲದಲ್ಲಿ, ಒಂದು ದಿನ ಹೀಗಾಯ್ತು.
ಶ್ರೀಲಕ್ಷ್ಮಿಯವರು(ಗಾಡೆಸ್) ತಮ್ಮ ಸೀರೆ ನೆರಿಗೆಯನ್ನು ಸರಿಪಡಿಸಿಕೊಳ್ಳುತ್ತಿರುವಾಗ,
ಕೈಲಿದ್ದ ಕಮಲದ ಹೂವಿನಿಂದ ದಳವೊಂದು ಜಾರಿ ಬಿದ್ದಿತು. ಲೋಕ ಲೋಕ ಗಳನ್ನು ದಾಟಿ
ಬರುತ್ತಿರುವಾಗ, ಕಮಲದ ದಳವು, ಜೀವ ಪಡೆದು ನವಿಲಿನ ರೂಪ ತಾಳಿ ಭೂಸ್ಪರ್ಷ ಮಾಡಿತು. ಹೀಗೆ
ಕಮಲದ ದಳದಿಂದ ನವಿಲು ಸೄಷ್ಟಿಗೊಂಡ ಈ ಪವಿತ್ರ ಸ್ಥಳವನ್ನು ಹೂನವಿಲೆ ಎಂದು ಕರೆಯಲು
ಪ್ರಾರಂಭಿಸಿದರು. ಈಗಲು ಲಕ್ಷ್ಮಿಯ ಕೈಲಿರುವ ಕಮಲದ ಹೂವಿನಲ್ಲಿ ದಳಗಳನ್ನು ಎಣಿಸಿ ನೋಡಿ.
ಒಂದು ಕಮ್ಮಿ ಇರುತ್ತದೆ.

ಐತಿಹಾಸಿಕ ಮನ್ನಣೆ ಇರುವ ಈ ಪುಣ್ಯಸ್ಥಳದಲ್ಲಿ ಒಂದು ಕ್ರಾಂತಿಕಾರಕ ಮಠ ವಿದೆ. ಮಠದ
ಹೆಸರು ಗೋಸುಂಬೆ ಮಠ. ಗೋಸುಂಬೆ ಬಣ್ಣ ಬದಲಿಸುತ್ತದೆ. ಆದರೆ ಗೋಸುಂಬೆ ಮಠ ಕಾಲದ ಬೆನ್ನ
ಮೇಲೆ ಕುಳಿತು, ಬದಲಾಗುವ ಸನ್ನಿವೇಶಗಳಿಗೆ ತಕ್ಕಂತೆ, ತನ್ನ ಚಾರಿತ್ರ್ಯದ ಬಣ್ಣವನ್ನೂ,
ಕಾರ್ಯಸೂಚಿ ಗಳನ್ನೂ ಬದಲಿಸಿ ಕೊಳ್ಳುತ್ತಾ ಮುನ್ನಡೆಯುತ್ತಿದೆ. ಸರಳ ಸಜ್ಜನಿಕೆಯ
ಕ್ರಾಂತಿ ಮಠ. ಸಂಪ್ರದಾಯಸ್ಥ ಮೂಲಭೂತವಾದಿಗಳ ಭಾರೀ ವಿರೋಧದ ನಡುವೆಯು ಅಸ್ತಿತ್ವ
ಉಳಿಸಿಕೊಂಡಿರುವುದು ಮಠದ ಹೆಗ್ಗಳಿಕೆ.

ಈ ಹಿಂದೆ ಇದ್ದ ಗುರುಗಳು ಮದುವೆಯಾದ ನಂತರ, ಹೆಚ್ಚಿನ ಜವಾಬ್ದಾರಿಗಳನ್ನು
ನಿರ್ವಹಿಸಲಾರದೆ, ಸ್ವಯಂ ನಿವೄತ್ತಿ ಘೋಷಿಸಿದರು. ಟ್ಯಾಲೆಂಟ್ ಆಧಾರದ ಮೇಲೆ ನಲವತ್ತು
ವರ್ಷದ ಚಂದ್ರಕಾಂತ ಎಂಬುವರಿಗೆ ಹಂಗಾಮಿಯಾಗಿ ಗುರುವಿನ ಸ್ಥಾನವನ್ನು ನೀಡಲಾಯಿತು.
ಅಂದಿನಿಂದ ಮಠದಲ್ಲಿ ಕ್ರಾಂತಿಯ ಮೇಲೆ ಕ್ರಾಂತಿ ನಡೆಯುತ್ತಿದೆ.

‘ ನಾನು, ಇಲ್ಲಿ ಬರುವ ಯಾವುದೇ ಭಕ್ತರಿಗಾಗಲಿ, ಅಥವಾ ಶಿಷ್ಯಂದಿರಿಗಾಗಲೀ
ಬ್ರಹ್ಮಚರ್ಯವನ್ನು ಭೋಧಿಸಲಾರೆ. ಎಲ್ಲರು ಬ್ರಹ್ಮಚರ್ಯ ಪಾಲಿಸಿದರೆ, ಮಕ್ಳಾಗುವುದು
ಹೇಗೆ..? ಲೋಕ ಬೆಳೆದು ಕಲ್ಯಾಣವಾಗುವುದು ಹೇಗೆ ? ಪಾದಪೂಜೆಯನ್ನು ನಾವು
ನಿಷೇಧಿಸಿದ್ದೇವೆ. ಎಲ್ಲರೂ ಸಮಾನರು. ನಿಮ್ಮಲ್ಲೂ ಬ್ರಹ್ಮನಿದ್ದಾನೆ, ನನ್ನಲ್ಲೂ
ಬ್ರಹ್ಮನಿದ್ದಾನೆ. ಅದೂ ಅಲ್ಲದೆ, ಹೆಣ್ಣುಮಕ್ಕಳು ಪಾದ ಸೋಕಿಸುವುದರಿಂದ ಆಗುತ್ತಿರುವ
ತಾಂತ್ರಿಕ ದೋಷಗಳ ನಿವಾರಣೆಗಾಗಿ ಈ ದಿಟ್ಟ ಹೆಜ್ಜೆಯನ್ನು. ’

‘ಆದ್ಯಾತ್ಮ ಎಂಬುದೇ ಇಲ್ಲ. ಕಣ್ಣ ಮುಂದಿರುವ ಲೌಕಿಕ ಲೋಕವೇ ಅಂತಿಮ. ನಿಮಗೆ ಒಳಗಣ್ಣು
ಎಂಬುದೊಂದು ಸಪರೇಟಾದ ಕಣ್ಣಾಗಲೀ, ಅಲ್ಲಿ ಬೆಳಕಾಗಲೀ ಇಲ್ಲ. ನಿಮ್ಮೊಳಗೆ ಇರುವುದು
ಹಾರ್ಟು, ಕಿಡ್ನಿ, ಬ್ರೇನು, ಲಿವರ್ರು ಮುಂತಾದ ಮಾಂಸ ಮುಳೆಗಳು. ಬೆಳಕಿರುವುದು ಹೊರಗೆ.
ನೀವದನ್ನು ನೋಡಬೇಕೆಂದರೆ ಸುಮ್ನೆ ಕಣ್ಣು ತೆರೆದರಾಯಿತು. ಸುಂದರ ಜಗತ್ತು
ಅನಾವರಣವಾಗುತ್ತದೆ. ನೀವು ಜೀವಿಸಬೇಕಿರುವುದು ಅಲ್ಲಿ.’

ಚಂದ್ರಕಾಂತ ಗುರುಗಳು, ತಮ್ಮ ಮಾಗಿದ ಮೂಗಿನ ನೇರದ ತತ್ವಶಾಸ್ತ್ರವನ್ನು
ಪುಂಖಾನುಪುಂಖವಾಗಿ ಹೊರಹಾಕುವ, ಸುಸಂಧರ್ಭದಲ್ಲಿ ಸುವಿಕಾಂತ, ಜೋಲು ಮೋರೆ ಹಾಕಿಕೊಂಡು
ಕುಳಿತಿದ್ದ. ಸುವಿಕಾಂತ ಡಿಗ್ರಿ ಓದುತ್ತಿದ್ದ ವಿದ್ಯಾರ್ಥಿ. ಚಂದ್ರಕಾಂತ ಗುರುಗಳ
ಮೆಚ್ಚಿನ ಶಿಷ್ಯ. ಇವನ ಮನಸ್ಸು ಹಾಳಾಗಲು ಇಂತಹುದೇ ಎಂಬ ಗಟ್ಟಿ ಕಾರಣಗಳು ಬೇಕಿರಲಿಲ್ಲ.
ದಾರಿಯಲ್ಲಿ ಕೈ ಕಾಲು ಊನಗೊಂಡು ಬಿಕ್ಷೆ ಬೇಡುವವರನ್ನು ಕಂಡರೂ ಸಾಕು, ಏನನ್ನೋ ಕಳೇದು
ಕೊಂಡವನಂತೆ ಚಡಪಡಿಸುವನು. ಇಂತಹ ದುರ್ಬಲ ಮನಸ್ಸಿನ ಸುವಿಗೆ ತನ್ನ ಬಾಲ್ಯದ ಗೆಳತಿ
ಹರಿಣಿಯೊಂದಿಗೆ ಪ್ರೇಮಾಂಕುರವಾಗಿಬಿಟ್ಟಿದೆ.

ಆತ್ಮೀಯ ಗೆಳತಿಯೊಂದಿಗಿನ ಆತ್ಮೀಯತೆ ಅಲರ್ಜಿಯಾಗುವಷ್ಟು ಅಧಿಕವಾಗಿ ಅನುರಾಗ ಅರಳಿದೆ.

ಚಂದ್ರಕಾಂತ ಗುರುಗಳು ಸುವಿಕಾಂತನನ್ನು ಹತ್ತಿರ ಕರೆದು ಕೇಳಿದರು ‘ ಏನಾಯಿತು ಸುವಿ.
ಪ್ರಪಂಚದ ಸಮಸ್ಯೆಗಳನ್ನೆಲ್ಲಾ ನಿನ್ನವೇ ಎಂಬಂತೆ ತೊಳಲಾಡುವೆ. ಯಾಕಿಷ್ಟು ಮೃದು ಸ್ವಭಾವ.
ನಿನ್ನ ಇಂದಿನ ಅನಾಥ ಮೌನಕ್ಕೆ ಕಾರಣವಾದರೂ ಏನು.’ ತುಂಬಾ ದಿನಗಳಿಂದ ಹೇಳಿಕೊಳ್ಳಲಾಗದೇ
ನರಳುತ್ತಿದ್ದವನು, ಎಲ್ಲವನ್ನೂ ಒಮ್ಮೆಲೆ ಹೊರಹಾಕಿದ. ಹರಿಣಿಯೊಂದಿಗಿನ ತನ್ನ ಅಫೇರು
ಮತ್ತು ಪ್ರೀತಿಯನ್ನು ನಿವೇದಿಸಲಾಗದೇ ಇರುವ ಸ್ಥಿತಿ.. ಮುಂತಾದವನ್ನೆಲ್ಲಾ.

ಗುರುಗಳು. ಸುರುವಚ್ಚಿಕೊಂಡರು ‘ಪ್ರೀತಿ ಪ್ರತಿ ಜೀವರಾಶಿಗಳಲ್ಲೂ ಹಬ್ಬಿರುವ ಒಂದು
ಮಧುರವಾದ ಅನುಭವ. ಅದು ಅವಳಲ್ಲಿ ತಾನಾಗಿಯೇ ಹುಟ್ಟುವಂತೆ ಮಾಡಬೇಕೆ ಹೊರತು ’ ಡೀಯರ್
ಡಾಲಿಂಗ್, ನನ್ನ ಪ್ರೀತಿಸ್ತೀಯಾ. ? ಯಾಕಂದ್ರೆ ನಾನು ನಿನ್ನ ಪ್ರೀತಿಸ್ತೇನೆ`
ಅಂತೆಲ್ಲಾ ಕೇಳಬಾರದು. ಅಂಗಲಾಚಿ, ಪ್ರಲೋಭನೆ ತೋರಿಸಿ ಗಿಟ್ಟಿಸುವ ಪ್ರೀತಿಯಲ್ಲಿ
ಅರ್ಥವಿರುವುದಿಲ್ಲ. ಅದೊಂದು ಅವಕಾಶವಾದಿತನ.’

‘ ಹಂಗಾದ್ರೆ ನನ್ನನ್ನು ಏನ್ ಮಾಡು ಅಂತೀರ ಗುರುವರ್ಯ.’ ಎಂದು ಪುನೀತನಾಗಿ ಕೇಳಿದ
ಸುವಿಗೆ ‘ ಮೊದಲು ಆ ಸುಕೋಮಲೆ ಹೆಣ್ಣಲ್ಲಿ ಪ್ರೀತಿ ಹುಟ್ಟುವಂತೆ ಮಾಡಬೇಕು. ಆಮೇಲೆ ಆ
ಭಾವನೆಗಳು ಅವಳಿಗೇ ತಿಳಿಯುವಂತೆ ಮಾಡಬೇಕು. ಕೋರಿಕೆಯ ಮೇರೆಗೆ ಹುಟ್ಟಿದ ಪ್ರೀತಿಯಲ್ಲಿ
ನಾನಾ ಲೆಕ್ಕಾಚಾರಗಳಿರುತ್ತವೆ. ’ ಗುರುಗಳು ಹೇಳಿದ ಮಾತುಗಳು ಸರಿಯೆಂದು ಕಂಡಿತು. ‘ನಂಗೆ
ನೂರಾ ಒಂದು ಪರ್ಸೆಂಟ್ ಗ್ಯಾರೆಂಟಿ ಇದೆ ಗುರುಗಳೇ. ಅವಳಿಗೆ ನಾನು ಅಂದ್ರೆ ತುಂಬಾ ಇಷ್ಟ.

‘ ಸರಿ ಹಂಗಾದ್ರೆ, ಅದೇ ಆ ಇಷ್ಟವನ್ನು ಪ್ರೀತಿಯಾಗಿ ಕನ್-ವರ್ಟ್ ಮಾಡು. ಅದಕ್ಕಾಗಿ
ಅವಳನ್ನು ಸ್ವಲ್ಪ ದಿನ ಇಗ್ನೋರ್ ಮಾಡು. ಎಲ್ಲೆಲ್ಲಿಯು ಕಾಣಿಸಿಕೊಳ್ಳಬೇಡ. ನೀನಾಗಿಯೇ
ಅವಳನ್ನು ಸಂಧಿಸಬೇಡ. ಪ್ರೀತಿಯ ಅರಿವು ಅವಳಲ್ಲಿ ಮೂಡುತ್ತದೆ ’ ಗುರುವಿನ ಕೊನೆಯ ಮಾತಿಗೆ
ಸುವಿಯ ಸಂಪೂರ್ಣ ಸಮ್ಮತಿ ಇರಲಿಲ್ಲ. ಆದರೂ ಇದನ್ನು ಒಂದು ಟ್ರಿಕ್ ಎಂಬುದಾಗಿ ತಿಳಿದು,
ಉಪಯೋಗಿಸಲು ನಿರ್ಧರಿಸಿದ.

ಒಂದು ವಾರದ ತರುವಾಯ ಪುನಃ ಗುರುಗಳನ್ನು ನೋಡಲು ಆಶ್ರಮಕ್ಕೆ ಬಂದ. ಚಂದ್ರಕಾಂತ ಗುರುಗಳು
ಮುಕ್ತಿ ಮೋಕ್ಷ ಸಂತೋಷಗಳ ಬಗ್ಗೆ ಭಕ್ತರನ್ನು ಸೇರಿಸಿಕೊಂಡು ಹೇಳುತ್ತಿದ್ದರು.

 • ‘ಬ್ಯಾಗ್-ರೌಂಡ್ ಮ್ಯೂಸಿಕ್ ಹಾಕಿ, ಕಣ್ಣು ಮುಚ್ಚಿ ತೂಕಡಿಸಲು ಹೇಳಿ, ಸುಖದ
  ಭ್ರಮೆಯನ್ನು ಹುಟ್ಟಿಸಲು ಇಷ್ಟ ಪಡುವುದಿಲ್ಲ. ನನ್ನ ಮುಂದೆ ಕಣ್ಮುಚ್ಚಿ ಕುಳಿತರೆ
  ನೆಮ್ಮದಿ-ಸುಖ-ಸಂತೋಷಗಳು ಕಾಣಸಿಗುವುದಿಲ್ಲ. ನಿಮ್ಮ ಮಡದಿಯ ಮಗ್ಗುಲಲ್ಲಿ
  ಮಲಗಿದ್ದಾಗಲೂ ಆಗದ ಸ್ವರ್ಗದ ಅನುಭವವನ್ನು, ನಾನು ನಿಮಗೆ ಮ್ಯಾಜಿಕ್ ಗಿಮಿಕ್ ಮಾಡಿ
  ತೋರಿಸುವ ಭರವಸೆ ನೀಡಲಾರೆ. ಸ್ವರ್ಗ ಅಲ್ಲಿದೆ. ’

 • ‘ ದಿನದ ದುಡಿಮೆಯಲ್ಲಿ ಸ್ವಲ್ಪವನ್ನು ಮಿಕ್ಕಿಸಿ, ಅದರಲ್ಲಿ ನಿಮ್ಮ ಪುಟ್ಟ
  ಮಗಳಿಗೊಂದು ಅಂದದ ಗೊಂಬೆ ಕೊಂಡು ತಂದಾಗ,ಅವಳಿಗಾಗುವ ಸಂತಸದ ನೆರಳಿನಲ್ಲಿ, ನಿಮ್ಮ
  ದಣಿವು ಕರಗುವ ವಿಚಿತ್ರ ತಿರುವು, ನಲಿವಿನ ಉತ್ತುಂಗವನ್ನು ನಾನಿಲ್ಲಿ ಮರು
  ಸೄಷ್ಟಿಸಲಾರೆ. ಅದು ವಿಸ್ಮಯ.’

 • ‘ ಮಾದಕ ಮೈಮಾಟವಿರುವ ಸ್ವಾಮಿಗಳ ಮುಂದೆ ಹಲ್ಲುಗಿಂಜುತ್ತಾ ನಿಂತು, ಭಗವಂತನನ್ನು
  ತೋರಿಸೆಂದು ಪೀಡಿಸುವ, ಹೆಡ್ಡರಿಗೆಲ್ಲಾ ಅವರ ವೃದ್ಧ ತಂದೆ-ತಾಯಿಯರೊಂದಿಗೆ ಆಡುವ
  ಪ್ರೀತಿ-ವಾತ್ಸಲ್ಯದ ಮಾತುಗಳಲ್ಲಿ ಭಗವಂತನಿರುವನೆಂದು ಹೇಳುವ ವ್ಯರ್ಥ ಪ್ರಯತ್ನ
  ಮಾಡಲಾರೆ. ’

 • ‘ ಮಾತು; ಕಥೆ; ಪುರಾಣ; ಸೂತ್ರಗಳಲ್ಲಿ ಇರುವುದು ಬರಿ ಸೊನ್ನೆ. ಕೄತಿಯೊಂದೇ ಸತ್ಯ.
  ನಿಮ್ಮ ಮುಂದೆ ಮೈ-ಚಾಚಿ ಹಬ್ಬಿರುವ ವಿಶ್ವದಲ್ಲಿ ಜೀವಿಸಿ.’

 • ‘ ನಿಷ್ಕ್ರಿಯರಾದ ಜಡ-ಸೌಮ್ಯ-ಸಂಪನ್ನ-ಕರುಣಾಮೂರ್ತಿಗಳಿಂದ ಈ ಜಗತ್ತಿಗೆ ಏನೂ
  ಪ್ರಯೋಜನವಿಲ್ಲ. ಕಾರ್ಯೋನ್ಮುಖರಾಗಿ. ಬದುಕಲು ಕಲಿಯುವ ಪಾಠಶಾಲೆಗಳಲ್ಲಿ ಬದುಕು
  ವ್ಯರ್ಥವಾಗದಿರಲಿ. ’

ತಮ್ಮ ಪ್ರವಚನ ಮುಗಿಯುತ್ತಿದ್ದಂತೆ ಶ್ರಮಾಧಾನ ಮಾಡಲು ಭಕ್ತರನ್ನು ಕರೆದುಕೊಂಡು ಹೋಗಿ,
ಘಂಟೆಗಳ ಕಾಲ ತೋಟದಲ್ಲಿ ಕೆಲಸ ಮಾಡಿದರು. ತಾವು ಬರಿ ಮಾತಿನಲ್ಲಿ ನಂಬಿಕೆ ಇರಿಸಿರಲಿಲ್ಲ.

ವಿಶ್ರಾಂತಿ ತೆಗೆದುಕೊಳ್ಳುವ ಹೊತ್ತಿಗೆ ಸುವಿ ಗುರುಗಳ ಹತ್ತಿರ ಬಂದನು. ‘ ಗುರುಗಳೆ
ಒಂದು ವಾರದವರೆಗೂ ನಾನು ಹರಿಣಿಯನ್ನು ಮಾತನಾಡಿಸಲಿಲ್ಲ. ಅವಳ ಕಣ್ಣಿಗೂ ಬೀಳದಂತೆ
ಓಡಾಡಿದೆ. ಆದರೆ ಯಾಕೋ..? ಏನೂ ವರ್ಕೌಟ್ ಆದಂಗೆ ಕಾಣಲಿಲ್ಲ. ಮರೆತು ಗಿರಿತು ಬಿಟ್ಟಾಳು
ಅನ್ನೋ ಭಯ ಆಯ್ತು. ಹೋಗಿ ಮಾತನಾಡಿಸಿಕೊಂಡು ಬಂದು ಬಿಟ್ಟೆ.’

‘ ಛೇ ಛೆಛೆಛೆ ಪ್ರೀತಿ ಅಂದರೆ ತಪಸ್ಸು ಸುವಿ. ಆ ವಿರಹದಲ್ಲೂ ಒಂದು ತೆರನಾದ ಖುಷಿ
ಇರುತ್ತದೆ. ನೀನು ಅದನ್ನು ಅನುಭವಿಸು. ಗರ್ಭದಲ್ಲಿ ಪ್ರೀತಿಯ ಕೂಸು ಆವರ್ಭವಿಸುವ
ಮುನ್ನವೆ ಅಬಾರ್ಷನ್ ಮಾಡಲು ಹೊರಟಿರುವೆಯಾ. ? ಕಾಯಬೇಕು ಸುವಿ. ಕಾಯಬೇಕು. ತಾಳಿದವನು
ಬಾಳಿಯನು. ಅವಳ ಮನಸ್ಸು ಗೊಂದಲದ ಗೂಡಾಗಬೇಕು. ನಿನ್ನ ಮೇಲೆ ಅವಳಿಗಿರಬಹುದಾದ ಅನಾಮಧೇಯ
ಭಾವನೆಗಳು ಮೊಸರನ್ನು ಕಡೆದಂತೆ ಕಡೆದು-ಕಡೆದು, ಮಿಕ್ಸ್ ಆಗಿ, ಕೊನೆಗೆ ಪವಿತ್ರ
ಪ್ರೀತಿಯು ಸ್ಪಷ್ಟವಾಗಿ ಬೆಣ್ಣೆಯಂತೆ ಅವಳ ಮನದ ಮಜ್ಜಿಗೆಯಲ್ಲಿ ತೇಲುವುದು. ಆ ಕ್ಷಣ
ಅವಳು ನೀನಿರುವೆಡೆಗೆ ಬರುವಳು.’

ವಾರಗಳು ಕಳೆದವು. ತಿಂಗಳುಗಳು ಕಳೆದವು. ಸುವಿ, ಹರಿಣಿಯೊಂದಿಗಿನ ಸಂಪರ್ಕವನ್ನು
ಸಂಪೂರ್ಣವಾಗಿ ಕಡಿದುಕೊಂಡ. ಮೊದಮೊದಲು ವಿರಹದ ಬೇಗೆ ದಗದಗಿಸಿದರೂ, ಪವಿತ್ರ
ಪ್ರೀತಿಯೊಂದು ಜನಿಸುತ್ತಿರುವ ಕನಸಿನಲ್ಲಿ ದಿನ ದೂಡಿದ. ಪದೆ ಪದೆ ಗುರುಗಳ ಬಳಿ ಬಂದು
‘ಗುರುಗಳೇ ಇಷ್ಟು ಹೊತ್ತಿಗಾಗಲೇ ನನ್ನ ಪ್ರೀತಿಗೆ ಕೈಕಾಲುಗಳು ಮೂಡಿರುತ್ತದೆಯಲ್ಲವೆ. ?
ರೂಪ ತಾಳಿರುತ್ತದೆಯಲ್ಲವೇ. ? ’ ಬೇಕೂಫನಂತೆ ಕೇಳುವನು.

ಪ್ರತಿಯುತ್ತರವಾಗಿ ಚಂದ್ರಕಾಂತ ಗುರುಗಳು. ‘ ಅಲ್ಲಿ ನೋಡು ಸುವಿ ಮೋಡಗಳು. ನಿನ್ನ
ಹುಡುಗಿ ನಿನಗಾಗಿ ಹಂಬಲಿಸುತ್ತಿರುವ ವಿಧ ವಿಧವಾದ ಪ್ಯಾಟರ್ನ್ ಗಳು. ಪ್ರಕೃತಿಯನ್ನು
ಕಣ್ತೆರೆದು ನೋಡು; ಸವಿ. ನಿನ್ನ ಪ್ರೀತಿಯ ಉಸಿರಿನ ಸದ್ದು ಕೇಳುತ್ತದೆ. ಶ್ವಾಸದ
ಏರಿಳಿತಗಳು,ಎದೆಬಡಿತಗಳು ಅನುಭವಕ್ಕೆ ಬರುತ್ತದೆ. ನೋಡುವ ಕಣ್ಣು ಬೇಕು. ಅನುಭವಿಸುವ
ಮನಸ್ಸು ಬೇಕು.’ ಗುರುಗಳ ಮಾತು ಕೇಳುತ್ತಲೇ ಸುವಿಗೆ ಬೆನ್ನಿನ ಮೇಲೆ ಕಚಗುಳಿ
ಇಟ್ಟಂತಾಯಿತು. ಅವರು ಹೇಳಿದ್ದನ್ನೆಲ್ಲಾ ಕಲ್ಪಿಸಿಕೊಂಡು ನಲಿದಾಡಿದ. ಗುರು ಶಿಷ್ಯರು
ಪ್ರೀತಿಗೆ ಹೊಸ ಆಯಾಮವನ್ನು ತೋರಿಸಿ, ಅಮರವಾಗಿಸಲು ಟೊಂಕ ಕಟ್ಟಿ ನಿಂತರು.

ಆರು ತಿಂಗಳುಗಳು ಕಳೆದವು. ಕೋಪೋದ್ರಿಕ್ತನಾದ ಸುವಿಕಾಂತ, ಗುರುಗಳ ಕಡೆಗೆ ದಡ-ದಡ-ದಡನೆ
ನಡೆದು ಬಂದ. ನೋವು ದುಃಖವನ್ನು ಯಾರ ಮೇಲೆ, ಹೇಗೆ ತೀರಿಸಿಕೊಳ್ಳಬೇಕೆಂದು ಅರಿಯದ
ಗುಬಾಲ್ಡು , ಗುರುಗಳ ಮುಂದೆ ಕಣ್ಣೀರಿಡುತ್ತಾ ಕುಳಿತ. ಶಿಷ್ಯನ ದಾರುಣ ಮುಖಚರ್ಯೆಯನ್ನು
ನೋಡಿದ ಗುರುಗಳು, ಅವನಷ್ಟೇ ನೋವು ತುಂಬಿದ ಧ್ವನಿಯಲ್ಲಿ ಕೇಳಿದರು ‘ಏನಾಯಿತು ಸುವಿ,
ನಿನ್ನ ಸೌಮ್ಯವಾದ ಮುಖದಲ್ಲಿಂದು, ದುರಂತದ ಗೆರೆಗಳು ಕಾಣಿಸುತ್ತಿವೆಯಲ್ಲ. ? ”

ಈಗ ಸುವಿಗೆ ಕ್ವಾಪ ನೆತ್ತಿಗೇರ್ತು. ‘ ಯೋ!! ಗುರುಗಳೆ ಎಲ್ಲವೂ ಮುಗಿದು ಹೋಯಿತು. ನಿಮ್ಮ
ಮಾತು ಕೇಳಿ ಹಾಳಾದೆ. ಸ್ವಂತ ಬುದ್ಧಿಗೆ ಮೋಸ ಮಾಡಿ ನಿಮ್ಮ ಮಾತಿನ ಮೋಡಿಗೆ ಮರುಳಾಗಿ
ನನ್ನ ಜೀವನವನ್ನೆ ಹಾಳುಮಾಡಿಕೊಂಡೆ. ನೀವು ನಂಗೆ ಹಿಂಗ್ ಮಾಡಬಾರದಿತ್ತು.’

‘ ಸಂದರ್ಭ ಸಹಿತ ವಿವರಿಸಬಾರದೇ. ?’

‘ ಹರಿಣಿ ಏಕಾಏಕಿ ಮಾತನಾಡಿಸುವುದಕ್ಕೆಂದು ಹುಡುಕಿಕೊಂಡು ಬಂದಿದ್ದಳು. ಇಷ್ಟು ದಿವಸ
ಎಲ್ಲಿ ಹಾಳಾಗಿ ಹೋಗಿದ್ದಿ ಅಂತ ಉಗಿದಳು. ಹೋದ ತಿಂಗಳು ಇಪ್ಪತ್ತೊಂದಕ್ಕೆ ಅವಳ ಮದುವೆ
ಆಗಿಹೋಯಿತಂತೆ. ಮನೆಯವರೇ ಹುಡುಕಿ ತಂದಿರುವ ಹುಡುಗ. ಮೊದಲೇ ನನ್ನ ಪ್ರೀತಿಯನ್ನು
ನಿವೇದಿಸಿಕೊಂಡಿದ್ದರೆ ಬಹುಷಃ ಸಿಗುತ್ತುದ್ದಳೇನೊ. ಏನೋ ಮಾಡಲು ಹೋಗಿ, ಇನ್ನೇನೋ
ಆದಂತಾಯಿತು ನನ್ನ ಸ್ಥಿತಿ. ಎಲ್ಲವೂ ನಿಮ್ಮಿಂದಲೇ, ನಿಮ್ಮಿಂದಲೇ ’
ಸುವಿ ಕೋಪದ ಉತ್ತುಂಗವನ್ನು ತನ್ನ ಏರು ಧ್ವನಿಯಿಂದ ಮಾತ್ರ ತೋರಿಸುವವನಾಗಿದ್ದ.
ಚಂದ್ರಕಾಂತ ಗುರುಗಳು ತಮ್ಮ ಮೌಢ್ಯದ ಮತ್ತೊಂದು ಬಲಿಪಶುವನ್ನು ಕಂಡು,

“ಅಯ್ಯಾ!! ಇಗ್ನೋರ್ ಮಾಡು ಅಂದ್ರೆ ಕಂಪ್ಲೀ.. ಟಾಗಿ ಇಗ್ನೋರ್ ಮಾಡೊದೇನಯ್ಯಾ. ? ನೀನು
ಇಗ್ನೋರ್ ಮಾಡ್ತಾ ಇರೋದು ಅವಳ ಗಮನಕ್ಕಾದರೂ ಬರಬೇಕಲ್ಲವೇ..?” ಎನ್ನುತ್ತಾ
ನಿಟ್ಟುಸಿರು ಬಿಟ್ಟರು.

ಸುವಿ ಒಂದು ಕ್ಷಣ ಬೆಪ್ಪಾದ. ಗುರುಗಳು ಉಲ್ಟಾ ಹೊಡೆಯುತ್ತಿರುವರಲ್ಲಾ. ಮನಸ್ಸಿನ
ಆಳದಲ್ಲಿ ಹುದುಗಿರುವ ಪ್ರೀತಿಯನ್ನು ಹೊರ ಹಾಕುವಂತೆ ಪ್ರೇರೇಪಿಸಿ, ಇನ್ನೆಂತದೋ ಹೊಸ ರಾಗ
ತೆಗೆದರಲ್ಲ. ಹೌದಲ್ಲವೇ? ನಾನು ಅವಳನ್ನು ಇಗ್ನೋರ ಮಾಡುತ್ತಿದ್ದೇನೆ ಎಂಬ ವಿಷಯವಾದರು
ಅವಳಿಗೆ ಗೊತ್ತಾಗಿರಬೇಕಿತ್ತಲ್ಲವೇ. ? ಮೂಖ ವಿಸ್ಮಿತನಾದವನು ಸಾವರಿಸಿಕೊಂಡು ಕೇಳಿದ.

‘ ಹಂಗಾದ್ರೆ ಹುಡುಗಿಯರಿಗೆ ಗೊತ್ತಾಗುವ ರೀತಿಯಲ್ಲಿ ಅವರನ್ನ ಇಗ್ನೋರ್ ಮಾಡುವುದು ಹೇಗೆ.
ಗುರುಗಳೇ. ?’

‘ ಅಯ್ಯೋ ಮುಟ್ಟಾಳ. ಆ ಟೆಕ್ನಿಕ್ ನನಗೆ ಗೊತ್ತಿದ್ದಿದ್ದರೆ, ನಾನ್ಯಾಕೆ ಈವತ್ತು
ಸ್ವಾಮೀಜಿ ಆಗಿರ್ತಿದ್ದೆ. ನನ್ನದೂ ನಿನಗಿಂತ ದೊಡ್ಡ ಫ್ಲಾಷ್ ಬ್ಯಾಕಿದೆ..!!“
ಗುರುಗಳಿಂದ ಬಂದ ಎರಡನೇ ಪಂಚ್, ಸುವಿಯನ್ನು ಉಸಿಕಿನ ಕೆಸರಿನಲ್ಲಿ ತಂದು
ನಿಲ್ಲಿಸಿದಂತಾಯಿತು.