ಹೊತ್ತು ರಾತ್ರಿ ಹತ್ತು.
ಮೆಜೆಸ್ಟಿಕ್ ರೈಲು ನಿಲ್-ದಾಣದ ಮುಖ್ಯದ್ವಾರದ ಕಡೆಗೆ, ಅತ್ತಿತ್ತ ನೋಡುತ್ತಾ
ನಡೆಯುತ್ತಿದ್ದೆ .
ದೊಡ್ಡ ಫುಟ್-ಪಾತ್ ಗೆ ಅಂಟಿಕೊಂಡ ಸಣ್ಣ ರಸ್ತೆಯಲ್ಲಿ, ಮಧ್ಯವಯಸ್ಕ ಗಂಡಸೊಬ್ಬ
ಒಬ್ಬರಿಂದೊಬ್ಬರಿಗೆ ಸಂಚರಿಸುತ್ತಾ..
‘ಸಾರ್ ಆಪ್-ಕೋ ಹಿಂದಿ ಆತಾ ಹೈ’
‘ ಸಾರ್ ಆಪ್-ಕೊ ಹಿಂದಿ ಆತಾ’ ಅಂದುಕೊಂಡು ತಿರುಗುತ್ತಿದ್ದ.
ಯಾರೂ ಸ್ಪಂಧಿಸುತ್ತಿರಲಿಲ್ಲ.

ಜನಗಳು ರೈಲು ತಪ್ಪಿ  ಬಿಡುತ್ತದೆ ಅನ್ನೋ ಧಾವಂತದಲ್ಲಿದ್ದರು. ಆದರೆ ನನ್ನ ರೈಲಿಗೆ
ಇನ್ನೂ ೧ ಘಂಟೆಗಳ ಕಾಲಾವಕಾಶವಿದೆ.

ಭಾಷೆ ಪ್ರಾಬ್ಲಮ್ಮು ಪಾಪ ಏನ್ information ಬೇಕಿತ್ತೋ ಏನೋ ಎಂದು, ಅವನ ಬಳಿ ಹೋಗಿ
ನಿಂತು -
‘ ಬೋಲಿಯೆ ಮುಜೆ ತೋಡ ತೋಡ ಹಿಂದಿ ಆತಾ ಹೈ ಕ್ಯಾ  information ಚಾಹಿಯೇ ..? ‘
ಕೇಳಿದೆ.

‘ ಸರ್ ವೋ ಕ್ಯಾ ಹೈನಾ ….’ ಎನ್ನುತ್ತಾ ಶುರುಮಾಡಿದ.
ತಾನು ಕೂಲಿ ಕೆಲಸಕ್ಕಾಗಿ ಹೆಂಡತಿ ಮಕ್ಕಳ ಜೊತೆಯಾಗಿ ಮಹಾರಾಷ್ಟ್ರದ ನಾಂಡೆದ್ ನಿಂದ
ಬೆಂಗಳೂರಿಗೆ ಬಂದಿದ್ದಾಗಿಯೂ,
ಇಲ್ಲಿ ತನ್ನ ಎಲ್ಲಾ ಸಾಮಾನು ಸರಂಜಾಮುಗಳು ಕಳ್ಳತನವಾಗಿ…,
ದುಡ್ಡೂ ಇಲ್ಲವಾಗಿ..,
ವಾಪಾಸ್ ಮನೆ ಸೇರಿಕೊಳ್ಳಲೂ ಆಗದೆ ಎರಡು ದಿನಗಳಿಂದ ಪರದಾಡುತ್ತಿರುವುದಾಗಿಯೂ ಹೇಳಿದ.
ಇರಲಾರದವನು ಹುಡುಕ್ಕೊಂಡ್ ಬಂದು ಇರುವೆ ಬಿಟ್ಟುಕಂಡ್ ಹಂಗಾಯ್ತು ನನ್ನ ಕಥೆ.
ಆದರೆ ಇವನ ಬಳಿಯೂ ಕಳ್ಳತನ ಮಾಡಬೇಕಾದಲ್ಲಿ , ಆ ಕಳ್ಳ ಇನ್ನೆಷ್ಟು  ಬರಗೆಟ್ಟವನಿರಬೇಕು
ಅನ್ನಿಸಿತು.

‘ಹೇ  ಮೈ ಕೈಸೆ ಟ್ರಸ್ಟ್ ಕರೂ… ತುಮ್ ಝೂಟ್ ಬೋಲ್ ರಹೆ ಹೂ … ‘ ಅಂತಂದೆ.

ಅಕಸ್ಮಾತ್ ಅದು ಸತ್ಯ ಆಗಿದ್ರು , ನಾನೇನು ಅವನಿಗೆ ದುಡ್ದು ಕೊಡಬೇಕು ಅಂತ ನಿರ್ಧಾರ
ಮಾಡಿರಲಿಲ್ಲ.
ಸಮಸ್ಯೆಗಳು ಎಲ್ಲರಿಗೂ ಇರುತ್ವೆ,  ‘ಇದೆಲ್ಲಾ ಅವರವರ ಪ್ರಾರಬ್ಧ ಕರ್ಮ’ ಅನ್ನೋ
ಮಾತು,
ಇಂಥಾ ಸಂಧರ್ಭದಲ್ಲಿ ದುಡ್ಡು ಕಳೆದುಕೊಳ್ಳಲು ಇಚ್ಚಿಸದೇ ಇರುವುದರ ನನ್ನ ನಿಲುವಿಗೆ
ಶಾಸ್ತ್ರೀಯ ಬೆಂಬಲವನ್ನು ಒದಗಿಸಿತು.
ಅಷ್ಟರಲ್ಲಿ ಹತ್ತಿರದಲ್ಲೇ ಫುಟ್-ಪಾತ್ ಕಟ್ಟೆಯ ಮೇಲೆ ಕುಳಿತಿದ್ದ ಹೆಂಗಸೊಂದು,
ತನ್ನ ತೊಡೆಯ ಮೇಲೆ ಮಲಗಿದ್ದ ಮಗುವನ್ನು , ಕಂಕುಳಿಗೆ ಸೇರಿಸಿಕೊಳ್ಳುತ್ತಾ ಬಂತು.

‘ಹೆಂಡತಿ-ಮಗು ಇಟ್ಟುಕೊಂಡು, ನಾನ್ ಯಾಕ್ ಸುಳ್ಳು ಹೇಳಲಿ..,
ಒಂದೇ ಒಂದು ಸಾರಿ ನಮ್ಮ ಊರು ಸೇರಿಕೊಳ್ಳೋದಕ್ಕೆ ಸಹಾಯ ಮಾಡಿ.., ‘ ಅನ್ನೋ ಅರ್ಥ
ಬರುವಂತೆ ಹೇಳುತ್ತಾ, ಮಲಗಿದ್ದ ಮಗುವನ್ನು  ತೋರಿಸಿದ.

ಅವನು ಹೇಳುತ್ತಿದ್ದುದು ಸಂಪೂರ್ಣ ಸುಳ್ಳೂ ಆಗಿರಬಹುದು ಅಥವಾ ಸತ್ಯ ಕೂಡ ಇರಬಹುದು.
ಆದರೂ ವ್ಯಾಲೆಟ್ಟಿನಿಂದ ನೂರು ರೂಪಾಯಿ ತೆಗೆದು ಕೊಡಬೇಕಾಯಿತು .
ಯಾಕಂದ್ರೆ ಒಬ್ಬ ಮನುಷ್ಯ ಇಷ್ಟು ಧಾರಿದ್ರ್ಯ ದ ಹಂತಕ್ಕೆ ಇಳಿಬೇಕು ಅಂದ್ರೆ,
 ನಮ್ಮನಮ್ಮೊಳಗೇ ಏನೋ ಸಮಸ್ಯೆ ಇದೆ ಅಂತ ಅನ್ನಿಸ್ತು.
ಕರುಣೆ ಹುಟ್ಟಿಸುವಂತಿದ್ದ ಅವರ ಗೆಶ್ಚರ್ಗಳನ್ನು  ಮತ್ತೊಮ್ಮೆ  ನೋಡಿ, ಕರ್ಮ..
ಅಂದುಕೊಂಡು ಅಲ್ಲಿಂದ ಹೊರಡಲು ಶುರುಮಾಡಿದೆ.
ಆತ ಮತ್ತೆ ಅಡ್ಡ ಹಾಕಿದ.

ತನಗೆ ದುಡ್ಡು ಬೇಡವಾಗಿಯೂ…, ರಾತ್ರಿ ಹನ್ನೊಂದು ಮೂವತ್ತಕ್ಕೆ ಇದ್ದ ರೈಲಿಗೆ ಎರಡು
ಟಿಕೇಟು ತೆಗೆಸಿಕೊಡಬೇಕಾಗಿಯೂ ಕೇಳಿಕೊಂಡ.
ಅದರ ಒಟ್ಟು ಮೊತ್ತ ಐದುನೂರು ರೂಪಾಯಿಗಳು.
ನನಗೂ ತಲೆ ಕೆಟ್ಟು ಹೋಯ್ತು. ಫುಲ್ ಲಾಕ್ ಆಗಿಬಿಟ್ಟಿದ್ದೆ.

‘ಗುರು ನಾನು ಒಬ್ಬನೇ ನೂರು ರೂಪಾಯಿ ಕೊಟ್ಟಿದ್ದೇನೆ ತಾನೆ
ಹಿಂಗೆ ಇನ್ನ ನಾಲ್ಕು ಜನ ಕೊಟ್ರೆ, ಐನೂರೂಪಾಯಿ ಆಗುತ್ತೆ ತಾನೆ ನೀವು ನಿಮ್ಮೂರಿಗೆ
ಹೋಗಬಹುದು ತಾನೆ ‘ ಅಂದೆ .
ಅದಾಗಲೇ ಆತ ಜೆನೂನ್ ಅನ್ನೋ ಭಾವನೆ ಒಳಸೇರಿಬಿಟ್ಟಿತ್ತು. ಯಾಕೆ ಅಂತ ಗೊತ್ತ್ತಾಗಲಿಲ್ಲ.
ಗಂಡ-ಹೆಂಡಿರು ಕೋರಸ್ ನಲ್ಲಿ ಗೋಗರೆಯುತ್ತಿದ್ದರು.
ಆ ಗೋಗರೆತದಲ್ಲೂ  ದುಡ್ಡು ಕೇಳುವುದರಲ್ಲಿದ್ದ ಅವರ ಮುಜುಗರವೂ ಕಾಣುತ್ತಿತ್ತು.
ಒಂದು ಕ್ಷಣ ಇದು ಹ್ಯಾರಸ್-ಮೆಂಟ್ ಅಂಥನಿಸಿದರೂ ಬ್ಲೈಂಡಾಗಿ  ‘ಆಯ್ತು ಕೊಡ್ತೇನೆ’  ಅಂತ
ಕಮಿಟ್ ಆಗಿಬಿಟ್ಟೆ.
‘ಬಡತನ ತುಂಬಾನೆ ಕೆಟ್ಟದ್ದು ‘ ಅಂತ ಹೇಳುತ್ತಿದ್ದ ಅಮ್ಮನ ಮಾತೂ ಬೇಡದ ಹೊತ್ತಲ್ಲಿ
ನೆನಪಾಯ್ತು.
ನನ್ನ ಹತ್ತಿರವಿದ್ದದ್ದು , ಸಾವಿರ ರೂಪಾಯಿಯ ಒಂದೇ ನೋಟು ಮತ್ತು ನೂರು ರೂಪಾಯಿಯದ್ದು
ಇನ್ನೊಂದು ನೋಟು.
ನೂರು ರೂಪಾಯಿಯದ್ದನ್ನು ಅದಾಗಲೇ ಅವನಿಗೆ ಕೊಟ್ಟು ಬಿಟ್ಟಿದ್ದೆ.

‘ ಸರಿ ನೀವು ಇಲ್ಲೇ ಇರಿ. ನಾನು ನಿಮಗೆ ದುಡ್ಡು ತಂದು ಕೊಡ್ತೇನೆ.’ ಅಂತ  ಹೇಳಿ
ಹೊರಟೆ…
ಇಬ್ಬರೂ ಹಿಂದೆಯೇ ಬಂದರೂ…

‘ ನೀವು ಇಲ್ಲೇ ಇರಿ ..’ ಅಂದರೆ  ‘ಸಾ… ರ್ ಸಾ…. ರ್ ‘ ಅಂತೆ.

‘ ಎರಡು ನಿಮಿಷದ performance ಗೆ ನೂರು ರೂಪಾಯಿ ಕೊಟ್ಟಿದ್ದೇನೆ .
ಉಳಿದದ್ದನ್ನೂ ತಂದು ಕೊಡ್ತೇನೆ ರಿ ಇಲ್ಲೇ ಇರಿ.ಎಲ್ಲೂ ಓಡಿ ಹೋಗೋದಿಲ್ಲ ‘ ಅಂದೆ.
ಪಾರ್ಟಿಗಳು ನಂಬುವಂತಿಲ್ಲ.

ಹೋದ ಕಡೆಗೆಲ್ಲಾ ಹಿಂದ್ – ಹಿಂದೆ ಬರೋವಾಗ,,, ಪುಲ್ಲು   ಎಂಬಾರೆಸಿಂಗು.
ಆವಮ್ಮನ್ನ ಒಂದು ಕಡೆಗೆ ಕೂರಲು ಹೇಳಿ , ದಾಂಡಿಗ ಗಂಡಸನ್ನು  ಜೊತೆಯಲ್ಲಿ  ಕರ್ಕೊಂಡ್
ಹೋದೆ.
ನಮ್ಮ ಹಣೆ ಬರಹಕ್ಕೆ , ಹೋದ ನಾಲ್ಕು ಎಟಿಎಮ್ ಗಳಲ್ಲಿ ಎರಡು ಔಟ್ ಆಫ್ ಆರ್ಡರ್ ಇತ್ತು.
ಇನ್ನೆರಡು  ದುಡ್ಡು ಕೊಡುವಂತೆ ಡೌ ಮಾಡಿ , ಎಲ್ಲವನ್ನೂ ತುಂಬಿಸಿಕೊಂಡು ಖಾಲಿ ಚೀಟಿ
ಮಾತ್ರ ಕೊಡ್ತು.

‘ ಸರಿ ಬನ್ನಿ ಇರೋ ಸಾವಿರ ರೂಪಾಯಿಗೆ ಚೇಂಜ್ ಮಾಡ್ಸಾನ ‘ ಅಂತ  ಅಲ್ಲೇ ಇದ್ದ
ಬಾಲಾಜಿ ರೆಸ್ಟೋರೆಂಟ್ ಗೆ ಹೋದೆ.

ಅದು ನಾನು ಊರಿಗೆ ಹೋಗುವಾಗೆಲ್ಲಾ… ಊಟ ಮಾಡಿ ರೈಲು ಹತ್ತುವ ಹೋಟ್ಲು
‘ ಒಂದ್ ಊಟ ಕೊಡಿ ‘ ಅಂತ ಸಾವಿರ ರೂಪಾಯಿ ನೋಟು ಟೇಬಲ್ ಮೇಲೆ ಇಟ್ಟರೆ, ಕ್ಯಾಷಿಯರ್ ಕಮ್
ಓನರ್ ಚೇಂಜ್ ಇಲ್ಲವೆಂಬಂತೆ ತಲೆ ಕೊಡವಿದ.

‘ ಯಾರಿಗೋ ಕೊಡಬೇಕು ಸಾರ್. ಎರಡು ಐನೂರು ರೂಪಾಯಿ ಕೊಡಿ. ಊಟಕ್ಕೆ ನಾನು ಸಪರೇಟಾಗಿ
ದುಡ್ಡು ಕೊಡ್ತೇನೆ ‘ ಅಂದೆ.
ಅವನು ಕೊಡಬೇಕು ಅಂದುಕೊಂಡು ಗಲ್ಲಕ್ಕೆ  ಕೈ ಹಾಕಿದ.

ಅದೇ ಹೊತ್ತಿಗೆ ಒಂದು ಜೋರು ಗಲಾಟೆ ಶುರು ಆಯ್ತು. ಒಬ್ಬ ಹಳ್ಳಿಯವನಿಗೂ ಮತ್ತು
ಸಪ್ಲೈಯರಿಗೂ ಹತ್ತಿಕೊಂತು.
ಊಟದ ಜೊತೆ  ಹೆಚ್ಚಾಗಿ ಪಡೆದ ಒಂದು ಹಪ್ಪಳಕ್ಕೆ ,  ನಾಲ್ಕು ರೂಪಾಯಿ ಅಡಿಷನಲ್ ಚಾರ್ಜ್
ಮಾಡಿದ್ದನ್ನೇ ಮಹಾಪರಾಧವೆಂಬಂತೆ ಸಪ್ಲೈಯರಿಗೆ ಬಯ್ಯುತ್ತಿದ್ದ.
‘ಯಾವ್ ಬೋಳಿಮಗ ಕೊಡ್ತಾನೆ ನಾಲಕ್ಕು ರೂಪಾಯಿ. ಜಾಸ್ತಿ ದುಡ್ಡಾಗತ್ತೆ ಅಂತ
ಹೇಳಬೇಕಿತ್ತು ಕಣ್ರೀ . ನಮ್ಮೂರಲ್ಲೆಲ್ಲ ಹಪ್ಪಳ ಕೇಳುದ್ರೆ ಫ್ರೀಯಾಗೇ ಕೊಡ್ತಾರೆ ..,

ಒಂದು ಹಪ್ಪಳಕ್ಕಾಗಿ ಶುರುವಾದ ಗಲಾಟೆ ತಾರಕಕ್ಕೇರಿತು. ಗಲ್ಲದ ಬಳಿ ಕುಳಿತಿದ್ದ ಓನರೇ
ಮಧ್ಯ ಪ್ರವೇಶಿಸಿ, ಸಂಧಿ ಮಾಡಿ, ದುಡ್ಡು ವಸೂಲಿ ಮಾಡಿದ.

ಆತ ಪುನಃ ಬಂದಾಗ ಚೇಂಜ್ ಕೇಳುವ ಧೈರ್ಯ ಬರಲಿಲ್ಲ.
ನೆನಪು ಮಾಡಿಕೊಂಡು ಆತನೇ ಎರಡು ಐನೂರು ರೂಪಾಯಿ ಕೊಟ್ಟು ಸಾವಿರ ರೂಪಾಯಿಯ ನೋಟು ಪಡೆದ.
ಹೊಟೆಲಿನ ಹೊರಗೆ ನಿಂತಿದ್ದವನ ಬಳಿಗೆ ಹೋಗಿ, ಮೊದಲು ನೂರು ರೂಪಾಯಿ ವಾಪಾಸು ಪಡೆದು,
ಐನೂರು ರೂಪಾಯಿ ಕೊಟ್ಟು  ಹೊಟಲಿನ ಒಳ ಹೋಗಲು ಅನುವಾದೆ.

ಪುನಃ ‘ಭಾಯೀ… ಸಾ…ರ್ ‘ ಅಂತ ಗೋಗರೆಯಲು ಶುರು ಮಾಡಿದ.
‘ಮತ್ತೆ ಏನಪ್ಪಾ ನಿನ್ನ ರೋಧನೆ …? ‘ ಅಂದದ್ದಕ್ಕೆ ..
ಎರಡು ದಿನಗಳ ಸುಧೀರ್ಘ ರೈಲು ಪ್ರಯಾಣ ಇರುವುದಾಗಿಯು…,
ಅದಾಗಲೇ ಊಟ ಮಾಡಿ ಒಂದು ದಿನ ಆಗಿರುವುದಾಗಿಯೂ ,
ಆ ನೂರು ರೂಪಾಯಿಯನ್ನೂ ಕೊಟ್ಟರೆ ಊಟದ ಖರ್ಚಿಗೆ ಆಗುತ್ತದೆ ಎಂದೂ ಹೇಳಿದ.

ನನಗೂ ಕೆಟ್ಟ ಕೋಪ ಬಂತು.
‘ ಗುರು ಅದನ್ನೂ ನಾನೇ ಕೊಡಬೇಕ ..? ‘ ಅಂದೆ.
‘ಬೆಳಗ್ಗೆಯಿಂದ ಕೇಳಿ ಕೇಳಿ ಗಂಟಲು ಒಣಗಿ ಹೋಗಿದೆ. ಯಾರೂ ಕೊಟ್ಟಿಲ್ಲ. ಅದನ್ನೂ
ಕೊಟ್ಟರೆ ಸಹಾಯ ಆಗುತ್ತೆ. ‘ ಅಂದ.
ಆ ನೂರು ರೂಪಾಯಿಯನ್ನೂ ಅವನ ಕೈಗೆ ಇಟ್ಟೆ.
ಅಕೌಂಟ್ ನಂಬರ್ ಕೊಟ್ರೆ ಊರಿಗೆ ಹೋದ ತಕ್ಷಣ ದುಡ್ಡು ವಾಪಾಸ್ ಕಳಿಸುವುದಾಗಿ
ಹೇಳಿಕೊಂಡನಾದರೂ ,
ನಾನು ಕೊಟ್ಟ ಫೋನ್ ನಂಬರಿಗೆ ಆ ತರದ ಸರ್-ಪ್ರೈಜ್ ಕಾಲ್ ಬರಬಹುದು ಎಂಬ ಆಶಾಭಾವನೆ ಖಂಡಿತ
ಇರಲಿಲ್ಲ.
ಅವನ ಮಾತಿನ ಸತ್ಯಾಸತ್ಯತೆಗಳನ್ನು ಪುನಃ ವಿಮರ್ಶಿಸಲು ಹೋಗಲಿಲ್ಲ.
ಯಾಕಂದ್ರೆ, ತನಗೆ ಸಿಕ್ಕ ಆ ಎರಡು ಪಾತ್ರಗಳು ಜೆನ್ಯೂನ್ ಎಂಬಂತೆಯೇ
ಸಮರ್ಥಿಸಿಕೊಳ್ಳಬೇಕಾದ ಅನಿವಾರ್ಯತೆ ಈ ಲೇಖಕನಿಗಿದೆ.
ಇಲ್ಲಾ ಅಂದ್ರೆ ಪಾತ್ರ ಪೋಷಣೆ ತಬ್ಬಿಬ್ಬಾಗಿ, ನಿರೂಪಕ ಗುಬಾಲ್ ಅಂತಾಗಬೇಕಾಗುತ್ತದೆ.

ಪುನಃ ಅದೇ ಹೋಟೆಲಿನ ಕ್ಯಾಷಿಯರ್ ಮುಂದೆ ನಿಂತು ‘ಒಂದು ಊಟ ಕೊಡಿ’ ಅಂತ ಐನೂರು ರೂಪಾಯಿ
ಮುಂದಿಟ್ಟೆ.
ಆತ ಪುನಃ ಮುಖ ನೋಡಿದ.