ಫೋರ್ ಟ್ವೆಂಟಿ pm,
ಶಿವಮೊಗ್ಗ ಇಂಟರ್-ಸಿಟಿ ರೈಲು ಹೊರಡಲು, ಇನ್ನೂ ಹತ್ತು ನಿಮಿಷ ಬಾಕಿ ಇತ್ತು.
ಈ ವಿರಾಮದಲ್ಲಿ, ಬಾಂಬಿನ ವಿಯರ್ಡ್ ಕಲ್ಪನೆಯೊಂದು ತಲೆಯಲ್ಲಿ ಮೂಡಿತು. ಪ್ರಾಣ ಭಯ
ಅಂತಲ್ಲ. ಆದರೂ ನನ್ನ ಕರ್ಮಕ್ಕೆ,  ನಮ್ಮದೇ ರೈಲು ಡಮ್ ಅಂದು,
ಹೃದಯ ವಿದ್ರಾವಕವಾಗಿ, ಟಿವಿಯಲ್ಲಿ ಜೂಮ್ ಇನ್ ಆಗುವ ಸುದೈವ, ಒದಗಿ ಬಿಟ್ಟರೆ...?,
ರೈಲಿನಿಂದ ಇಳಿದೆ.

ಉದ್ದಕ್ಕೂ ಹಳಿಗಳ ಮೇಲೆ ಏನಾದರೂ, ಅನಾಮಧೇಯ, ಅವಿಧೇಯ, ಚೀಲದ ಗಂಟುಗಳು ಕಾಣಬಹುದೇನೋ
ಎಂದು ಹುಡುಕುತ್ತಾ ಹೋದೆ.
ಅಂತಹದ್ದೇನು ಕಾಣಲಿಲ್ಲ.
ಅಕಸ್ಮಾತ್ ಕಂಡರೆ ಏನು ಮಾಡುವುದು...?
ಏನಿಲ್ಲ, ಸುತ್ತಮುತ್ತ ಇದ್ದವರೆನ್ನೆಲ್ಲಾ ರೈಲಿನೊಳಗೆ ಹತ್ತಿಸಿಕೊಂಡು, ರೈಲು
ಸ್ಟಾರ್ಟ್ ಮಾಡಿಸಿ, ಹೊರಟುಬಿಡೋದು.
ಖಾಲಿ ಜಾಗದಲ್ಲಿ,  ಬಾಂಬು ಸಿಡಿದರೆಷ್ಟು, ಡಿಫ್ಯೂಸ್ ಮಾಡಿದರೆಷ್ಟು..ಜನಗಳ ಜೀವಕ್ಕೆ
ಆಪತ್ತಂತು ಇಲ್ಲ.
' ಆದರೂ ಎಲ್ಲಾ ಬಿಟ್ಟು, ನಮ್ಮ ಶಿಮೊಗ್ಗ ರೈಲನ್ನೇಕೆ ಟಾರ್ಗೆಟ್ ಮಾಡ್ತಾರೆ..? '
ಅಂದುಕೊಳ್ಳುವಾಗಲೇ ರೈಲಿನ ಆರ್ತನಾದ ಕೇಳಿತು.
ಮೆಲ್ಲಗೆ ಮೈ ನಲುಗಿಸುತ್ತಾ ಮುಂದಕ್ಕೆ ಹೊರಟದ್ದು ಕಂಡ ಮೇಲೆ, ಅದು ನಮ್ಮದೇ ರೈಲಿನ
ಹಾರನ್, ಅಂತೆಣಿಸಿ  ಸಿಕ್ಕ ಭೋಗಿಯೊಂದರೊಳಗೆ ತೂರಿದೆ.
ಬಿಸಿಲಿಗೆ ವಿರುದ್ಧದ, ಡೋರ್-ನಲ್ಲಿ, ಕಾಲು ಇಳಿಬಿಟ್ಟು ಕುಳಿತೆ.

ನಮ್ಮ ರೈಲು ಸಾಗುತ್ತಿತ್ತು.
ಅಂಡಿನ ಕೆಳಗೆ ರೈಲಿನ 'ದಡಕ್ ಬಡಕ್' 'ದಬಡಕ್ ದಡಕ್' ಸದ್ದು.   
ಆಗತಾನೆ, ಸ್ಕೂಲು ಬಿಟ್ಟ ಹೊತ್ತು.
ಬಿಳಿಯ ಯೂನಿಫಾರಂಗಳನ್ನು ಗಬ್ಬು ಮಾಡಿಕೊಂಡು, ಕ್ರಾಸಿಂಗುಗಳಲ್ಲಿ ನಿಂತು, ಕೈ
ಬೀಸುತ್ತಿದ್ದ ಮಕ್ಕಳು.
ರೈಲು ಹಳಿಗೇ ಹೊಂದಿ ಕೊಂಡಂತಿದ್ದ, ಕಲಾತ್ಮಕ ಧೈನ್ಯ ಸ್ಲಮ್ಮುಗಳು.
ಅಲ್ಲೊಬ್ಬ ಮೇಕೆಗೆ ತಲೆಗುದ್ದುವ, ತಾಲೀಮು ನಡೆಸುವ.
ಮತ್ತೆ ನಾಲ್ಕು ಜನರ, ಬಯಲು ಕಟ್ಟೆ ಕೇರಂ ಟೂರ್ನಮೆಂಟು.
ಬೀಳ್ವ ಸೂರುಗಳಿಗೂ, ಬುಟ್ಟಿಯಾಕಾರದ  ಡಿ ಟಿ ಹೆಚ್ಚು ಡಿಷ್ ಆಂಟೆನಾಗಳ ಮೆರಗು.
ಮುರಿದ ಬಾಗಿಲುಗಳ ಮೇಲೂ ಬರೆದ "ನಾಳೆ ಬಾ" ನೇಮ್ ಪ್ಲೇಟುಗಳು.   
ಉರಿ ಬಿಸಿಲಲ್ಲಿ ಸಂಡಾಸಿಗೆ ಕುಳಿತವನೊಬ್ಬ , ಅರ್ಧಕ್ಕೆ ಎದ್ದು ನಿಂತು ರೈಲು
ಹೋಗುವುದನ್ನೇ , ಕಷ್ಟ ಪಟ್ಟು ಕಾಯುತ್ತ ನಿಲ್ಲುವ.
ಹಳಿ ಬದಿಯಲ್ಲಿ, ಏತಕ್ಕೋ ಸ್ಕೆಚ್ಚು ಹಾಕುತ್ತಿದ್ದ ಪುಂಡ ಹುಡುಗನೊಬ್ಬ ಅರ್ಧ ಸೇದಿದ್ದ
ಬೀಡಿಯನ್ನು, ನನ್ನ ಕಡೆಗೆ ತೋರಿಸುವ.
ನಗುತ್ತಾ ಬೇಡವೆಂದು ತಲೆಯಾಡಿಸಿದರೆ, ತಾನೂ ನಗುವ.

ನನ್ನದೇ ಆಲೋಚನೆಗಳಲ್ಲಿ ಮುಳುಗಿದ್ದೆ.
"ಏಕ್ಸು - ಕ್ಯೂಸ್ - ಮಿ " ಅಂದುಕೊಂಡು, ಪಕ್ಕದಲ್ಲೊಬ್ಬ ಜಾಗ ಮಾಡಿಕೊಂಡು ಕುಳಿತ.
' ಯಾವುದಪ್ಪ ಇದು ಪ್ರಾಣಿ' ಅಂತ, ಸೈಡ್ ವೀವ್ ನಲ್ಲೇ ನಖಶಿಕಾಂತ ಗುರಾಯಿಸಿದೆ.
ನೀಲಿ ಜೀನ್ಸು, ಟೀ-ಷರ್ಟು, ಸ್ವೆಟರು, ಅದರ ಮೇಲೊಂದು ದಪ್ಪನೆ ಜಾಕೆಟ್ಟು. ರೇಬನ್
ಗ್ಲಾಸು, ಕಿವಿ ತುಂಬಿಕೊಂಡಿದ್ದ ಕಾಲ್-ಸೆಂಟರ್ ನವರ ಹೆಡ್ ಫೋನು.
ಸಂಜೆಬಿಸಿಲ ಝಳಕ್ಕೆ ..ನಾ ತೊಟ್ಟಿದ್ದ ಒಂದು ಅಂಗಿಯೇ, ಬೆನ್ನಿನ ಮೇಲೆ ಮೂಡಿದ್ದ...
ಬೆವರ ಹನಿಗಳೊಂದಿಗೆ ಲೀನವಾಗಿ, ಬಿಚ್ಚೆಸೆಯುಂತೆ ರೋಧಿಸುತ್ತಿದೆ.
ಹೀಗಿರುವಾಗ, ಹಣ್ಣಿಗಿಟ್ಟಿರೋ ಬಾಳೆಕಾಯಿ ತರಹ, ದೇಹ ಸುತ್ತಿವರೆದಿದ್ದ, ಆಗಂತುಕನ
ವಸ್ತ್ರಗಳು, ಸಹಜವಾಗಿ ಗಾಬರಿ ಹುಟ್ಟಿಸಿದವು.
ನಕ್ಕು ಸುಮ್ಮನಾದೆ .
ಯಾರೊಂದಿಗೂ ಮಾತನಾಡುವ ಮೂಡ್ ಇರಲಿಲ್ಲ.
ಮುಖಾಮುಖಿಯಾಗುವ ಎರಡು ಕ್ಷಣಗಳಲ್ಲಿ, ಆಪ್ತವೆನಿಸುವ ನುಣ್ಣನೆಯ ದೂರದ ಬೆಟ್ಟದ ಕಡೆಗೆ
ತನ್ಮಯನಾಗಿ ನೋಡುತ್ತಿದ್ದೆ.

" ಎಲ್ಲಿಗ್ ಹೋಗ್-ಬೇಕು " ಹೆಡ್-ಫೋನು ಕೆಳಗಿಳಿಸುತ್ತಾ ಕೇಳಿದ.
"ಶಿಮೊಗ್ಗ.. " ಅಂತಷ್ಟೇ ಹೇಳಿದೆ.
"ಹಂಗಾದ್ರೆ, ಭದ್ರಾವತಿವರೆಗೂ ಒಳ್ಳೆ ಕಂಪನಿ ಸಿಕ್ಕಿದ ಹಂಗಾಯ್ತು." ಎನ್ನುತ್ತಾ ತನ್ನ
ಮೊಬೈಲು ಹೊರಗೆಳೆದು, ಹಾಡು ನಿಲ್ಲಿಸಿದ.
ಇದೊಳ್ಳೆ ಕರ್ಮ ಆಯ್ತಲ್ಲ ಅನ್ನಿಸ್ತು.
ಮಾತಿಗೆ ಕುಳಿತರೆ, ಮುತ್ತಿನಂಥ ಮಾತುಗಳಿಗಷ್ಟೇ ಕಾಯದೆ, ಸಪ್ಪೆ ಮಾತು
ಮುಪ್ಪಾಗುವವರೆಗೂ ಹರಟಬಹುದು.
ಆದರೆ ಒಂಟಿಯಾಗಿದ್ದಾಗ, ಒಂಟಿಯಾಗಿರಬೇಕು ಅಂದುಕೊಂಡಿದ್ದಾಗ, ಮಾತು
ಬೇಡಿದರೆ..  ಗಂಟಲೊಳಗೆ ಬಲಾತ್ಕಾರವಾಗಿ ಕೈ ಹಾಕಿದಂತೆ.
"ಏನ್ ಓದ್ತಾ ಇದೀರ..? "   ಕೇಳಿದ.
"ಓದೋದೆಲ್ಲಾ ಮುಗಿದಿದೆ. ಸಾಫ್ಟು ವೇರ್ ಇಂಜಿನಿಯರ್ ಆಗಿ, ಕೆಲಸ ಮಾಡ್ತಾ ಇದ್ದೀನಿ"
ಅಂದೆ.  
ಹಾಗಂದ ತಕ್ಷಣ ಮತ್ತೊಮ್ಮೆ ನೋಡಿದ. ಛಾನ್ಸೇ ಇಲ್ಲ ಎನ್ನುವವನಂತೆ ಮುಖ ಮಾಡುತ್ತಾ
"ಹೌದಾ, ನಿಮ್ಮನ್ನ ನೋಡುದ್ರೆ ಹಂಗನ್ಸೋದೆ ಇಲ್ವಲ್ಲಾ .. " ಅಂದ.
ನನಗೂ ಕೆಟ್ಟ ಕೋಪ ಬಂತು. ಕೆಟ್ಟ ಕೆಟ್ಟದಾಗಿ ಬಯ್ದು ಬಿಡುವಷ್ಟು ಕೋಪ.
ಆದರೂ ..
ಕೆದರಿದ ಕೂದಲು,
ಕೆರೆಯದ ಗಡ್ಡ,
ಕಂಗೆಟ್ಟ ಕಂಗಳು,
ಕಿತ್ತೋದ ಕಂಠ..
ಇಷ್ಟಾದ ಮೇಲೂ, ನನ್ನ ಬಗ್ಗೆ ಇದಕ್ಕಿಂತ ಹೆಚ್ಚಿನದನ್ನು ನಿರೀಕ್ಷಿಸಲಾರೆ
ಅಂದುಕೊಳ್ಳುವಾಗಲೇ, ಅವನೇ ಮುಂದುವರೆದು ಹೇಳಿದ. -
"ನಿಮ್ಮನ್ನ ನೋಡಿ, ಇನ್ನ ಕಾಲೇಜಿಗೆ ಹೋಗ್ತಾ ಇದ್ದೀರೇನೊ ಅಂದುಕೊಂಡೆ." ಅಂದ.
" ಹೋ ಹಂಗಾ, ಛೇ, ಛೆ, ಸ್ವಲ್ಪ ಮುಂಚೆ ನನ್ನ ಬಗ್ಗೆ ನಾನೇ, ಅಪಾರ್ಥ ಮಾಡಿಕೊಂಡು
ಬಿಟ್ಟೆ" ಅಂದೆ.    
ಅದೇನು..? ಅನ್ನೋದು, ಅವನಿಗೆ ಅರ್ಥ ಆಗಲಿಲ್ಲ.
ಕರ್ಟೆಸಿಗಾದರು ನೀವೂ, ಏನ್ ಮಾಡ್ತಿದಿರ..?   ಅನ್ನೋದನ್ನ ಕೇಳಬೇಕಿತ್ತು.
ಮಾತು ಬೆಳೆಸಲು ಆಸಕ್ತಿ ಇರಲಿಲ್ಲ.
ರೈಲು ಅದರ ಪಾಡಿಗದು 'ಲಬ್ಬೋ ಲಬ್ಬೋ' ಅಂದುಕೊಂಡು ಹೋಗುತ್ತಲೇ ಇತ್ತು.
ಬುರ್ಕಾ ತೊಟ್ಟಿದ್ದ ವಯಸ್ಕ ಹೆಂಗಸೊಂದು ಹಿಂದಿನಿಂದ ಬಂದು, ಪಕ್ಕದಲ್ಲಿ ಕುಳಿತಿದ್ದವನ
ಜರ್ಕೀನು ಹಿಡಿದು ಎಳೆಯಿತು.
" ನಾನು, ಇಲ್ಲಿ ಆರಾಮಾಗಿ ಕೂತಿದ್ದೇನೆ.. ನೀನು ಹೋಗು " ಅಂತ ಹಿಂದಿಯಲ್ಲಿ ಹೇಳಿದ.
ಆದರೂ ಆವಮ್ಮ ಕೇಳಲಿಲ್ಲ.
"ಆವೋ, ಬೇಟೆ. "    ಎನ್ನುತ್ತಾ ಗೋಗರೆದರು.
ಇವನು ಎದ್ದು ಹೋಗಲೇ ಇಲ್ಲ.

" ನಾನು ಐ ಟಿ ಆಫೀಸರ್ " ಅಂದ.
ನನ್ನ ಮುಖದ ಮೇಲಿದ್ದ ಪ್ರಶ್ನೆಯನ್ನು ಅರ್ಥ ಮಾಡಿಕೊಂಡವನಂತೆ, ಪುನಃ ಹೇಳಿದ
" ಇನ್-ಕಮ್ ಟ್ಯಾಕ್ಸು ಆಫೀಸರ್."
"ಹಂಗನ್ಸೋದೆ ಇಲ್ವಲ್ಲಾ..? ತುಂಬಾನೆ ಸಿಂಪಲ್ ಆಗಿ ಕಾಣಿಸ್ತೀರಿ.. " ಅಂತ
ಸುಮ್ಮನೆ ಜಾಕ್ ಎತ್ತಬೇಕು ಅನ್ನಿಸಿದರೂ,
ಅದರಿಂದ ಸುತ್ತಿಕೊಳ್ವ, ಸಮಜಾಯಿಷಿಗಳಿಗೆ ಕಿವಿಗಳನ್ನು ಧಾನ ಮಾಡುವ ಮನಸ್ಸಾಗಲಿಲ್ಲ.
ಒಂದು ಮಂದಹಾಸ ಬೀರಿದೆ.     
ಫಿಲ್ಲರ್ ಗಳು, ಸುಧೀರ್ಘ ಸಂಭಾಷಣೆಯನ್ನು ಎತ್ತಿಕೊಡಬೇಕು ಅಷ್ಟೇ, ಹೊರತು,
ಮಾತಿಗೆ ಮಾತುಗಳೇ ಫಿಲ್ ಅಪ್ ದಿ ಬ್ಲಾಂಕ್ಸು ಆದರೆ, ನಾಟಕೀಯ ನುಡಿಗಳಿಗೆ ಅಸ್ತಿತ್ವವೇ
ಇರುವುದಿಲ್ಲ.  
ಸಿಗರೇಟೊಂದನ್ನು ಬಾಯಿಗಿಡುತ್ತಾ, ಸಿಗರೇಟ್ ಪ್ಯಾಕು ನನ್ನೆಡೆಗೆ ಚಾಚಿ,
ತೆಗೆದುಕೊಳ್ಳುವಂತೆ ಆಫರ್ ಮಾಡಿದ.
" ಪರವಾಗಿಲ್ಲ, ಬೇಡ " ಅಂದೆ.
" ಹೆದರಿಕೋಬೇಡಿ, ತಗೋಳಿ." ಅಂದ ಮತ್ತೆ.
ನನಗೂ ಉರಿ ಬಿತ್ತು. "ನನ್ನ ಬ್ರಾಂಡ್ ಬೇರೆ" ಅಂದೆ.
ಬಡ್ಡಿಮಗ, ಅಧಿಕಾರದ ಗತ್ತು.
ಸಿಗರೇಟಿಗೆ ಬೆಂಕಿ ಹಚ್ಚುತ್ತಾ, ಕಮಾಂಡಿಂಗ್ ಧನಿಯಲ್ಲಿ ಕೇಳಿದ
" ನಾನ್ ಸಿಗರೇಟ್ ಸೇದೋದ್ರಿಂದ, ನಿಮಗೇನಾದ್ರು ಸಮಸ್ಯೇ,..? "
" ಅಯ್ಯೋ, ನನಗೇನ್ ಸಮಸ್ಯೆ..? ಊದೋರು ನೀವೇ ಆದ್ರು, ಮುಂದೆ ಬಾರಿಸೋರು ಬೇರೆ
ಇರ್ತಾರೆ. ಊದಿ, ಊದಿ, " ಅಂದೆ. 
"ಬಡ್ಡಿಮಗನೆ, ನನ್ನ ಸಮಸ್ಯೆ ಅಂದ್ರೆ, ಅದು ನೀನೆ. ಹಾಗಂದ ಮಾತ್ರಕ್ಕೆ ರೈಲಿನಿಂದ
ಜಿಗಿದು ಆತ್ಮಹತ್ಯೆ ಮಾಡ್ಕೋತೀಯ .." ಅಂತ ಕೇಳಬೇಕಿತ್ತು.

" ಬೈ ದ ವೆ, ನನ್ನ ಹೆಸರು 'ಅಬ್ದುಲ್ ಖದಿರ್' ." ಕೈ ಮುಂದೆ  ಮಾಡಿದ.
ಹಲ್ಲು ಕಿರಿಯುತ್ತಾ, ಕೈ ಕೊಟ್ಟೆನಾದರೂ,
ಆತನೂ ಕೂಡ...  ನನ್ನ ಹೆಸರನ್ನು ನಿರೀಕ್ಷಿಸುತ್ತಿರುವನು, ಎಂಬುದು ಅರ್ಥವಾಗಲು ಸ್ವಲ್ಪ
ಹೊತ್ತೇ ಹಿಡಿಯಿತು.  
ಅವನಿನ್ನೂ ಕೈ ಹಿಡಿದುಕೊಂಡೇ ಇದ್ದ.
"ಹೋ, ನನ್ನ ಹೆಸರು ಚೇತನ್," ಅಂದೆ.
ಪುನಃ... "ಹಾಯ್ ಚೇತನ್" ಎನ್ನುತ್ತಾ .. ಜೋರಾಗಿ ಕೈ ಕುಲುಕಿದ.
ನಾನೂ "ಹಲೋ, ಖದಿರ್."   ಎಂದೆ.
ಮಾತುಗಳ ಜೊತೆಗೇ, ಅನಾಮಧೇಯರಾಗಿ ದೂರ ಸಾಗಿದ ಮೇಲೆ,
ಇದ್ದಕ್ಕಿದ್ದಂತೆ ಏನೋ,  ಕಳೆದುಕೊಂಡದ್ದು, ನೆನಪಿಸಿಕೊಂಡಂತೆ  'ಹೆಸರು' ಹೇಳಿ ಕೈ
ಕುಲುಕುವುದು, ವಿಚಿತ್ರ ಅನಿಸುತ್ತದೆ.
ಹೆಸರಲ್ಲೇನೈತೆ ಬದನೇಕಾಯಿ.     
"ಚೇತನ್, ನನ್ನ ಮಾತು ಕೇಳು, ನೀನು ದುಬೈ ಗೆ ಹೋಗಿಬಿಡು.
ಅಲ್ಲಿ ಒಳ್ಳೆ ಫ್ಯೂಚರ್ ಐತೆ. " ಉಸಿರು ಒಳಗೆ ಎಳೆದುಕೊಂಡು, ಅಷ್ಟೂ ಹೊಗೆಯನ್ನು
ವೃತ್ತಾಕಾರವಾಗಿ ಬಿಡುತ್ತಾ ಹೇಳಿದ.
ಸುಮ್ಮನೇ ಒಂದು ಸ್ಮೈಲ್ ಕೊಟ್ಟೆ..  ಅಷ್ಟೇ.
'ನೀವು,' ಅನ್ನೋದು 'ನೀನು' ಆಗಿ ಬದಲಾದದ್ದು ಹೆಸರು ಹಂಚಿಕೊಂಡಿದ್ದರ ಪ್ರಭಾವ
ಅನ್ನಿಸಿತು.

"ನಾನು, ತಮಾಷೆಗೆ ಮಾಡ್ತಿಲ್ಲ. ದುಬೈಗೆ ಹೋಗಿ ಬಿಡು.
ಜಸ್ಟು, ಒಂದೈದು ವರ್ಷದ ಮಟ್ಗೆ ಹೋಗಿ, ದುಡ್ಡು ಮಾಡಿಕೊಂಡು ಬಾ.
ಆಗ ನೋಡು, ಪ್ರಪಂಚ ಹೆಂಗ್ ನಿನ್ನ ಬೆನ್ನ ಹಿಂದೆ ಬರತ್ತೆ, ಅಂತ "

ಹಿಂದಕ್ಕೆ ತಿರುಗಿದೆ.ಖದಿರ್ ಹೇಳಿದ ಆ ಪ್ರಪಂಚ, ಯಾವುದಿರಬಹುದೆಂದು ಕಲ್ಪಿಸಿಕೊಳ್ಳಲು
ಪ್ರಯತ್ನಿಸಿದೆ.
ನನ್ನ ಇಮ್ಯಾಜಿನೇಷನ್ ಗೆ ಯಾವುದೂ ಸಿಗಲಿಲ್ಲ.
" ಪರವಾಗಿಲ್ಲ, ಇಲ್ಲೇ ನಾನು ಈಗ ಹ್ಯಾಪಿಯಾಗಿದ್ದೇನೆ. "

" ನೀನು ಈವತ್ತಿಂದು ಯೋಚ್ನೆ ಮಾಡಬೇಡ. ಫ್ಯೂಚರ್ ಬಗ್ಗೆ ಯೋಚ್ನೆ ಮಾಡು.
ನಿಮ್ಮ ಕೆಲಸಗಳೆಲ್ಲಾ ಎಷ್ಟು ದಿನ ಇರತ್ತೆ. ರಿಸಿಷನ್ ಬಂತು ಅಂದ್ರೆ, ರಸ್ತೆಗೆ ಬಂದು
ಬೀಳ್ತೀರ.
ಆದಷ್ಟು ಬೇಗ, ಚನ್ನಾಗ್ ದುಡ್ಡು ಮಾಡಿ, ನಮ್ಮ ಲೈಫನ್ನ ನಾವು,  ಸೆಟಲ್ ಮಾಡಿ
ಬಿಡಬೇಕು. "

ಎಲ್ಲಿ ತಗಲಾಕ್ಕೋಂಡನಪ್ಪ ಇವನು,  ಸುಮ್ ಸುಮ್ನೆ, ಟೆನ್ಷನ್ ಕೊಡ್ತಾನೆ.
'ಲೈಫು  ಸೆಟಲ್'  ಅನ್ನೋದು ಅಧ್ಯಾತ್ಮವನ್ನೂ ಮೀರಿದ ಒಂದು ಜೋಡಿ ಪದ.
ಅದನ್ನ ನಾವು ಕೆಣಕಬಾರದು. ಅದು ನಮ್ಮನ್ನ ಕೆಣಕೊದಕ್ಕೆ ಬಿಡಬಾರದು.

" ಖದಿರ್, ನೀವು ಬೆಂಗಳೂರಲ್ಲಿ ಎಲ್ಲಿರೋದು ..?"
ಆಗದ-ಹೋಗದ ಸಂಗತಿಗಳಿಗೆ ಹಗ್ಗ ಜಗ್ಗಾಟ ಸಲ್ಲದು..  ಎಂದು ನಿರ್ಧರಿಸಿ, ಖದಿರ್ ನನ್ನು
ದುಬೈನಿಂದ ಬೆಂಗಳೂರಿಗೆ ಕರೆ ತಂದೆ.  
" ಶ್ರೀರಾಂಪುರದಲ್ಲಿ ,"

"ಹೋ, ಓಕಳೀಪುರಂ ನಿಂದ ಜಸ್ಟು ವಾಕಬಲ್. ಸಖತ್ ಟ್ರಾಫಿಕ್ ಆಲ್ವಾ ಆ ಏರಿಯಾ ."

" ಹಾ, ಅಯ್ಯೋ ಯಾಕ್ ಕೇಳ್ತೀರ. ಸಿಕ್ಕಾಪಟ್ಟೆ ಟ್ರಾಫಿಕ್ಕು."

"ಹೌದೌದು .. " ರಾಗ ತೆಗೆದೆ.
ಅಯ್ಯೋ ಗಮಾಡ್,  ಬೆಂಗ್ಳೂರಲ್ಲಿ ಯಾವ ಏರಿಯಾದಲ್ಲಿ ತಾನೆ, ಟ್ರಾಫಿಕ್ ಕಮ್ಮಿ
ಇರತ್ತೆ.  
ಲಾಂಗ್ ಸೈಲೆಂಟು, ಸೈಲೆಂಟು. 
ಈ ಗ್ಯಾಪಲ್ಲಿ, ಆ ಹೆಂಗಸು ಪುನಃ ಬಂದು ಖದಿರ್ ನ ಜರ್ಕೀನು ಹಿಡಿದು ಎಳೆಯುತ್ತಾ,
ಗೋಗರೆಯಿತು.
ಇವನು ಎದ್ದು ಹೋಗಲೇ ಇಲ್ಲ.
ಅಪರೂಪಕ್ಕೆಂದು ರೈಲಲ್ಲಿ ಬಂದಿರುವುದೆಂದೂ, ಈ ಮಜ, ಕಳೆದು ಕೊಳ್ಳಲು ಇಷ್ಟವಿಲ್ಲ
ವೆಂದೂ...  ಮತ್ತೊಮ್ಮೆ ಬಂದು ಕರೆಯಬಾರದೆಂದೂ  ಹೇಳಿ ಓಡಿಸಿಬಿಟ್ಟ.

ನನಗಂತೂ  ನನ್ನ ಅಜ್ಜಿ ನೆನಪಾದಳು.
ಡೋರ್ ಬಳಿ ಹೋಗುತ್ತಿದ್ದಂತೆ, ಹಿಡಿದು ಕೊಂಡು ಬರುತ್ತಿದ್ದಳು.
ಕಣ್ ತಪ್ಪಿಸಿ ಡೋರ್ ಬಳಿ ಕುಳಿತು ಬಿಟ್ಟರೆ, ಅರ್ಧ ಭೋಗಿಗೆ ಕೇಳಿಸುವಂತೆ
ಕೂತಲ್ಲಿಂದಲೇ "ಚೇತನ, ಬಾರಪ್ಪ. ಅಲ್ಲಿ ಕೂರಬಾರದು." ಎಂದು ಕೂಗುವಳು.
ಮುಜುಗರ, ತಾಳಲಾರದೆ, 'ಆ ಚೇತನ ನಾನಲ್ಲ' ಎಂಬಂತೆ ಮೆತ್ತಗೆ ಎದ್ದು ಹೋಗಿ, ಅಜ್ಜಿಯ
ಬಾಯಿ ಅದುಮುತ್ತಿದ್ದೆ.

" ನಿನ್ನ ನೋಡುದ್ರೆ ಹೊಟ್ಟೆ ಉರಿಯತ್ತೆ ನನಗೆ, " ಎತ್ಲಾಗೋ ನೋಡಿಕೊಂಡು, ಇನ್ನೊಂದು
ಸಿಗರೇಟು ಹೊತ್ತಿಸುತ್ತಾ ಕೇಳಿದ.  
ಬರಿ ಇಂತವೇ ಶಾಕಿಂಗ್ ಸ್ಟೇಟ್-ಮೆಂಟುಗಳು.
"ಅಯ್ಯಯ್ಯೋ, ನನ್ನ ನೋಡಿದ ಮೇಲೂ, ಯಾರೋ ಹೊಟ್ಟೆ ಉರ್ಕೋತಾರೆ ಅಂದ್ರೆ, ಸಖತ್ ಆಶ್ಚರ್ಯ
ಆಗತ್ತೆ. ಯಾಕೆ ಹೇಳಿ..? "
ಅಂದೆ .
" ನಿನ್ನ ಮಾತ್ರ ಅಲ್ಲ, ಯಾವುದೇ ಡಾಕ್ಟರ್ - ಇಂಜಿನಿಯರು ನೋಡುದ್ರು ಒಂತರಾ ಜಲಸ್,
ಬರ್ತದೆ. "

"ನಿಮ್ಮನ್ನ ನೋಡಿ, ನಾವುಗಳು ಭಯ ಪಡೋದ್ರಲ್ಲಿ, ಅರ್ಥ ಇದೆ.  ಆದರೆ ನಮ್ಮನ್ನ ನೋಡಿ
ನೀವು ಜಲಸ್ಸು ಅಂದ್ರೆ ಏನರ್ಥ..? "
" ಅದೊಂದು ದೊಡ್ಡ ಕಥೆ,"

"ಹಾ..  ಶುರು ಮಾಡಿ...  " ಯಾಕಿಷ್ಟು ಪೀಠಿಕೆ ಎಂಬರ್ಥದಲ್ಲಿ ಹೇಳಿದೆ.

" ನಮ್ಮ ತಂದೆಯವರಿಗೆ, ಡಾಕ್ಟರ್, ಆಗಬೇಕು ಅಂತ ತುಂಬಾ ಆಸೆ ಇತ್ತು."

"ಅವರಿಗೆ ಡಾಕ್ಟರ್ ಆಗಬೇಕಿತ್ತು ಅಂತಾನ..? ಅಥವಾ ನೀವು ಡಾಕ್ಟರ್ ಆಗಬೇಕು ಅಂತ ಅವರಿಗೆ
ಆಸೆ ಇತ್ತಾ..? "
"ಮೊದಲು ಅವರಿಗೆ ಆಗಬೇಕು ಅಂತ ಆಸೆ ಇತ್ತು. ಅವರದ್ದು ಮಿಸ್ ಆದಮೇಲೆ .. ನಾನು ಡಾಕ್ಟರ್
ಆಗಬೇಕು ಅಂತ ಆಸೆ ಪಟ್ಟರು. "
" ಮುಂದೆ.. "

"ಕಷ್ಟ ಪಟ್ಟು ಓದಿದೆ. ಪಿ ಯು ಸಿ ನಲ್ಲಿ ನೈಂಟಿ ಫೋರ್ ಪರ್ಸೆಂಟು. ಒಳ್ಳೆ ರಾಂಕು,
ಕಾಲೇಜು ಸೀಟ್ ಆರಿಸಿಕೊಳ್ಳೋದಕ್ಕೆ, ಕೌನ್ಸೆಲಿಂಗ್-ಗೆ ಅಂತ ಬೆಂಗಳೂರಿಗೆ ಬಂದೆ.
ಮೊದಲನೇ ಸಾರಿ ಭದ್ರಾವತಿ ಬಿಟ್ಟು ಇಷ್ಟು ದೂರ ಬಂದದ್ದು.
ಮೆಜೆಸ್ಟಿಕ್ ಹತ್ತಿರ ಇಂಡಿಯಾನ ಹೋಟೆಲ್ ನಲ್ಲಿ, ರಾತ್ರಿ  ಉಳಿದುಕೊಳ್ಳೋದಕ್ಕೆ ಅಂತ
ಹೋದೆ.
ರೂಮ್ ಇದೆ ಅಂತ ಹೇಳಿದ್ರು.  ರೂಮಿನ ಕೀ, ತೆಗೆದು ಟೇಬಲ್ ಮೇಲೂ ಇಟ್ಟರು.
ನನ್ನ ಹೆಸರು, ಅಡ್ರೆಸ್ಸು ಕೇಳ್ತಾ ಇದ್ದಂಗೆ, ಆ ಕೀ ಯನ್ನ ವಾಪಾಸ್ ಎಳೆದುಕೊಂಡು
ಬಿಟ್ರು.  
"
" ಯಾಕೆ ..? " ಸತ್ಯವಾಗಲೂ ನನಗೆ ಯಾಕದು..? ಅನ್ನೋದು ಅರ್ಥ ಆಗಲಿಲ್ಲ.  ' ಯಾಕೆ..? '
ಅನ್ನೋದನ್ನ ಅಷ್ಟೇ  ಆಸ್ಥೆ ವಹಿಸಿ ಕೇಳಿದೆ.

"ಯಾಕೆ ಅಂದ್ರೆ..? ನನಗೇನ್ ಗೊತ್ತು.
ಆ ತರಹದ್ದೊಂದು ಹ್ಯುಮಿಲಿಯೇಷನ್ ಗೆ, ನಾನೂ ಕೂಡ ಮೊದಲನೆ ಸಾರಿ ಓಪನ್ ಆಗಿದ್ದು.
ಅದೇನೋ ಭದ್ರಾವತಿ, ಅಂದ್ರೆ ಭಯ ಪಡ್ತಾರಂತೆ. ರೌಡಿಸಂ ಜಾಸ್ತಿ ಅಂತೆ. ಆದರೆ, ನಾನ್
ಏನು ಮಾಡಿದ್ದೆ..? "

"ರೂಮ್ ಕೊಟ್ರಾ ..? ಇಲ್ವಾ ..? " ಅವನು ಹೇಳಿದ ಕಾರಣದ, ಸತ್ಯಸಂಧತೆಯನ್ನು
ಅರಿಯುವುದಕ್ಕಿಂತ, ರೂಮ್ ಸಿಕ್ತಾ..? ಇಲ್ವಾ..? ಅನ್ನೋದನ್ನ ತಿಳಿದುಕೊಳ್ಳುವ ಕುತೂಹಲ
ಇತ್ತು.

" ಕೊಡ್ಲಿಲ್ಲ.
'ನಾನೊಬ್ಬ ಕಾಲೇಜ್ ಸ್ಟೂಡೆಂಟ್, ಸಿ ಇ ಟಿ, ಕೌನ್ಸೆಲಿಂಗ್ ಗೆ ಬಂದಿದ್ದೇನೆ '
ಅಂತ ಕೇಳಿಕೊಂಡೆ. 
ಊಹುಂ, ಅದಕ್ಕೆ ವಾಪಾಸ್ ಸೀ..ದಾ ಊರಿಗೆ ಹೋಗ್ ಬಿಟ್ಟೆ.  "
" ಯೋಪ್ಪಾ, ಊ...ರಿಗಾ...? ರೀ,  ಇನ್ನೊಂದು, ಲಾಡ್ಜು ಹುಡುಕೋದಕ್ಕೆ ಹೋಗದಲ್ವಾ ..?
" ನಾನಂದುಕೊಂಡಿದ್ದಕ್ಕಿಂತ ದೊಡ್ಡ ಗುಬಾಲ್, ಇವನು ಅನ್ನಿಸ್ತು.

" ಕಮಾ..ನ್, ಚೇತನ್, ಇನ್ನೊಂದು ಲಾಡ್ಜು ಹುಡುಕಲಾ..? ಕಳೆದು ಹೋಗಿರೋ self
respect ಹುಡುಕಲಾ..? "

ಆ ತರದ್ದೆಲ್ಲ ಇದಿಯ ..?  ಒಂದೊಂದು ಸಾರಿ, ಕೀ ಸರಿಯಾಗಿ ಹಾಕಿದರೂ, ನಮ್ಮದೇ ಮನೆಯ
ಬಾಗಿಲು.. ನಮಗೇ ತೆರೆದುಕೊಳ್ಳೋದಿಲ್ಲ.
ಅದಕ್ಕೆ ಸಿಟ್ಟು ಮಾಡಿಕೊಂಡು, ಬಾಗಿಲು ಮುರಿಯೋದಕ್ಕಾಗುತ್ತಾ.. ? ಅಥವಾ ನನಗೆ ನಮ್ಮ
ಮನೇನೆ ಬೇಡ ಅಂತ, ಬಿಟ್ಟು ಹೋಗೋದಕ್ಕಾಗುತ್ತಾ..?
ಪ್ರಪಂಚದಲ್ಲಿ ಕರಿಕುರಿಗಳಿಗೆ ದೇಶ, ಭಾಷೆ, ಮತಗಳ ಹಂಗಿಲ್ಲ.
ಇಂತವರ ಭಯ, ಅಭದ್ರತೆ, ದ್ವೇಷ, ಹತಾಶೆ, ಅಂಧತೆ  ಗಳು ಕಲಸುಮೇಲೋಗರವಾಗಿ ಅಲ್ಲಲ್ಲಿ,
ಸಿಡಿಯುವುದನ್ನು ನೋಡುತ್ತಲೇ ಇದ್ದೇವೆ.
ಇದನ್ನೆಲ್ಲಾ ಅವನಿಗೆ, ಹೇಳಬೇಕೆನಿಸಿದರೂ... ಮುಂದಿನದ್ದನ್ನು ತಿಳಿದುಕೊಳ್ಳುವ
ಕುತೂಹಲದಿಂದ ಕೇಳಿದೆ. -

" ಸರಿ, ಮುಂದೆ ಏನಾಯ್ತು.  ನಿಮ್ಮ ಮನೆಯಲ್ಲಿ ಒಪ್ಪಿಕೊಂಡರಾ... "

" ಅಪ್ಪ, ತುಂಬಾ ಕೋಪ ಮಾಡ್ಕೊಂಡು ಬೈದರು.
 ನಾನೂ ಕೇಳ್ದೆ . - ' ನನಗೆ ಯಾವುದರಲ್ಲೂ ಸಮ, ಇಲ್ಲದೇ ಇರೋ ಒಬ್ಬ ಲಾಡ್ಜಿನವನು,
ಈ ರೀತಿ ಅವಮಾನಿಸುತ್ತಿರೋವಾಗ, ನಾನು, ಡಾಕ್ಟರು, ಆಗಿ ಏನ್ ಮಾಡಲಿ..?
ಆ ತರಹದ್ದೊಂದು ಭಂಡ ಜೀವನ ನನಗೆ ಬೇಡ. ' ಅಂದೆ ".

ಇಷ್ಟು ಸಮರ್ಥಿಸಿಕೊಂಡರೂ , ನಾನು ಕನ್ವೀನ್ಸು ಆಗಲಿಲ್ಲ.
ಇದರ ಮೇಲೂ ಕೂಡ, ಆತ ನನ್ನ ಕಣ್ಣಿಗೆ ಸ್ಟುಪಿಡ್ ಅನ್ನಿಸುತ್ತಿದ್ದ.
 ಇಗೋ ಹರ್ಟ್ ಆದರೆ, ಇಷ್ಟೆಲ್ಲಾ ಆಗತ್ತಾ, ಅಂತ ಆಶ್ಚರ್ಯಾನು ಆಯ್ತು.

" ನಾನು ನಿರ್ಧಾರ ಮಾಡಿದೆ. ಒಳ್ಳೆಯವರಾಗಿದ್ದು, ಗೌರವದಿಂದ ಬದುಕಬೇಕು ಅಂದ್ರೆ,
 ದುಡ್ಡು, ಮತ್ತೆ ಅದರ ಜೊತೆಗೆ ಪವರ್, ಬೇಕು. 
ಓದಿದೆ. ದುಬೈಗೆ ಹೋಗಿ ದುಡ್ಡು ಮಾಡಿದೆ. ನಲವತ್ತು ಲಕ್ಷ ಲಂಚ ಕೊಟ್ಟು, ಕೆಲಸ
ಗಿಟ್ಟಿಸಿದೆ.    
ಟುಡೆ, ನನ್ನ ಹತ್ರ ಬೇಕಾದಷ್ಟು ದುಡ್ಡಿದೆ. ಪವರ್ ಇದೆ.
ಬೇಕ್ - ಬೇಕಾದ  ಕಡೆಗೆ  ಆಕ್ಸೆಸ್ ಇದೆ.
ನನ್ನ ಕಾರ್ಡು ತೋರಿಸಿದರೂ ಸಾಕು, ಕಾರಣ ಇಲ್ಲದೇ ಜನ ಹೆದರಿಕೊಳ್ತಾರೆ. "

" ಸೋ, ರಿವೇಂಜ್ ತಗೋಬೇಕು ಅಂತ, ಫುಲ್ ಪ್ರಿಪೇರ್ ಆಗಿ ಬಂದು ಬಿಟ್ರಿ."

"ಹಹಹ  ಹಂಗೆಲ್ಲಾ, ರಿವೇಂಜ್ ತಗೋಬೇಕು ಅಂತಿದ್ರೆ, ಬೇಕಾದಷ್ಟು ದಾರಿಗಳಿದ್ದವು. "
ವ್ಯಂಗ್ಯವಾಗಿ ನಕ್ಕ.
ಮತ್ತದೇ ಟೋನ್ ನಲ್ಲಿ ಹೇಳುತ್ತಾ ಹೋದ
" ನನಗೆ, ಅಪ್ಪ ಅಮ್ಮನ್ನ ಖುಷಿಯಾಗಿ ಇಟ್ಟುಕೊಳ್ಳೋ ಆಸೆ,
 ಎಲ್ಲರೂ ಖುಷ್ ಖುಷಿಯಾಗಿ ಬದುಕಬೇಕು.
' ಆ ದಿನ ದುಡಿದರೆ, ಆ ದಿನದ ಊಟ ' ಅನ್ನೋ ಪರಿಸ್ತಿತಿ ಎಷ್ಟೋ ಕಡೆ ಇದೆ.
ಒಂದು ದಿನ ಭಾರತ್ ಬಂದ್ ಇದ್ದದ್ದಕ್ಕೆ,  ಕೇವಲ ಬೆಂಗಳೂರಲ್ಲೇ ಎಪ್ಪತ್ತಕ್ಕಿಂತ ಜಾಸ್ತಿ
ಜನ ಹಸಿವಿನಿಂದ ಸತ್ತೋದ್ರು.
ಪ್ರಪಂಚದಲ್ಲಿ ತುಂಬಾ ಕಷ್ಟ ಇದೆ.
ನಾನು ಅರ್ನ್,  ಮಾಡೋ ದುಡ್ಡಲ್ಲಿ ಹೆಚ್ಚಿನ ಪಾಲನ್ನ, ಸಲ್ಮಾನ್ ಫೌಂಡೇಷನ್ ಗೆ ಡೊನೇಟ್
ಮಾಡ್ತೇನೆ. "

ಒಂದಕ್ಕೊಂದು ಲಿಂಕಿಲ್ಲದ ಸಾಲುಗಳನ್ನು, ಲಂಬವಾಗಿ ಹೇಳುತ್ತಾ ಹೋದನಾದರೂ,
ಆ ಮಾತುಗಳಲ್ಲಿ ನೋವಿಗೆ ಮರುಗುವ, ಕಷ್ಟಕ್ಕೆ ರಿಯಾಕ್ಟು ಮಾಡುವ ಗುಣ ಕಾಣಿಸುತ್ತಿತ್ತು.
ಖುಷಿಯಾಯ್ತು.
ಇನ್ನು ಈ ವಿಷಯವಾಗಿ ಜಾಸ್ತಿ ಕೆದಕಬಾರದು ಎಂದು ನಿರ್ಧರಿಸಿದೆ.

" ಖದಿರ್,  ಇನ್-ಕಮ್ ಟ್ಯಾಕ್ಸು ರೈಡ್ ಅನ್ನೋದು ನನಗೊಂದು ಫ್ಯಾಂಟಸಿ, ತರಹ
ಕಾಣ್ಸತ್ತೆ.
ದುಡ್ಡು, ಬಂಗಾರದ ವಡವೆಗಳು, ಪತ್ರಗಳನ್ನ ರಾಶಿ ರಾಶಿ ಹಾಕಿ, ಅದರ ಮುಂದೆ ಕೂತಿರ್ತೀರ.

ನೀವು ರಿಕವರಿ, ಮಾಡುವಂತ ಸಂಪತ್ತಿನಲ್ಲಿ, ಮೆಜಾರಿಟಿ ಅನ್-ಅಕೌಂಟಬಲ್ ಮನಿ. ಅಂದ್ರೆ
ಲೆಕ್ಕ-ಬುಕ್ಕ ಇಲ್ಲದೆ ಇರೋ ದುಡ್ಡು.
ಅಂತಹಾ ಹೊತ್ತಲ್ಲಿ, ನಿಮ್ಮನ್ನ ರೆಗ್ಯುಲೇಟ್ ಮಾಡೋದಕ್ಕೆ, ಯಾವುದಾದ್ರು ರೆಗ್ಯುಲೇಟರಿ
ಬಾಡಿ ಇದಿಯಾ ..?
 ಯಾಕಂದ್ರೆ ಒಂದಷ್ಟು ದುಡ್ಡನ್ನ ಹಂಗೆ ಇರಿದುಕೊಂಡು ಜೇಬಿಗೆ ಸೇರಿಸಬಹುದು ಆಲ್ವಾ...?
"

"  ನಾವು ಕೊಡೋ ಲೆಕ್ಕ ಒಂದಿರತ್ತೆ. ನಿಜವಾದ ಲೆಕ್ಕ ಬೇರೆನೆ ಇರತ್ತೆ.
ಎಲ್ಲರಿಗೂ ಗೊತ್ತು. ದಿಸ್ ಈಸ್ ಇಂಡಿಯಾ,. ನತಿಂಗ್ ಈಸ್ ಸೀಕ್ರೇಟ್ ಹಿಯರ್,  "  
ಅಂದ.
ಆದರೂ "ದಿಸ್ ಈಸ್ ಇಂಡಿಯ," ಅನ್ನೋದನ್ನ, ಪ್ರತಿಯೊಬ್ಬರು ಗ್ರಾಂಟೆಡ್ ಆಗಿ
ಬಳಸಿಕೊಳ್ಳೋದು, ಹರ್ಟ್ ಆಗತ್ತೆ.

ಅಷ್ಟರಲ್ಲಿ, ಮಹಾತಾಯಿ, ಮಗನ ಜಾಕೆಟ್ ಹಿಡಿದು ಪುನಃ ಜಗ್ಗಿದಳು.
" ಬರಲ್ಲ ಅಂದ್ರೆ, ದಬ್ಬಿ ಬಿಡಿ ಆಂಟಿ." ಅಂತ ಅವರಿಗೆ  ಉಚಿತ ಸಲಹೆ ನೀಡಿದೆ.
"ಹಂಗೆ ಮಾಡ್ತೀನಿ ಈಗ . " ಅಂದ್ರು ಅವರು.
ಸರಿ, ಎನ್ನುತ್ತಾ ಖದಿರ್ ಎದ್ದು ಹೊರಟ.
ಹೋಗುವ ಮುನ್ನ
" ನೀನು, ದುಬೈ ಹೋಗು. ಮಿಸ್ ಮಾಡಬೇಡ.
 ಅಲ್ಲಿ ದುಡ್ಡಿದೆ. ಆದ್ರೆ
ಜನಗಳು ಜಾಸ್ತಿ ಓದಿಕೊಂಡಿರೋದಿಲ್ಲ.
 infact ಖುರಾನ್ ಬಿಟ್ಟು ಬೇರೆಯದನ್ನ ಅವರು ಓದೋದಿಲ್ಲ.
ನಮಗಾದ್ರೆ ರೆಸ್ಟಿಕ್ಷನ್ಸು ಜಾಸ್ತಿ ಇರುತ್ವೆ.
ನಿಮಗೆ ಅಷ್ಟಾಗಿ ಇರೋದಿಲ್ಲ. ಹೋಗು, " ಎನ್ನುತ್ತಲೇ ಹೋದ.

ನಗುತ್ತಾ..   ತಲೆಯಾಡಿಸಿದೆ.

ಮುಂದಿನ ಸ್ಟಾಪಲ್ಲಿ,  ಭೋಗಿಯಿಂದ ಇಳಿದು.. ಒಂದಷ್ಟು ದೂರ ನಡೆದುಕೊಂಡು ಹೋದೆ.
ಅಲ್ಲೊಂದು ಕಡೆ ವಯಸ್ಸಾದ ಅನಾರೋಗ್ಯ ಪೀಡಿತ ಹೆಂಗಸೊಂದನ್ನು, ಐದು ಜನ ಸೇರಿ
ಹೊತ್ತುಕೊಂಡು, ರೈಲಿನಿಂದ ಕೆಳಗಿಳಿಸುತ್ತಿದ್ದರು.
ರೈಲು  ಉದ್ದ ಇರತ್ತೆ.
ಆದರೆ ಅಷ್ಟು ಉದ್ದದ ರೈಲಿಗೆ, ಅಷ್ಟೇ ಉದ್ದದ ಪ್ಲಾಟ್ ಫಾರಂ ಎಲ್ಲಾ ಕಡೆ ಇರಲ್ಲ.
ಹೆಂಗಸನ್ನು ಹೊತ್ತು, ರೈಲ್ವೇ ಕ್ರಾಸಿಂಗು ದಾಟಿಸುವಷ್ಟರಲ್ಲಿ, ನಮ್ಮ ರೈಲಿನ ಆರ್ತನಾದ
ಕೇಳಿಸಿತು.
ಆ ಐದು ಜನರು ಓಡಿ ಬಂದು ರೈಲನ್ನೇರಿದರು.
ಅವರಲ್ಲಿ ಒಬ್ಬ, ಜಾಗ ಮಾಡಿಕೊಂಡು ನನ್ನ ಪಕ್ಕದಲ್ಲಿ ಕುಳಿತ.