ಇಂಜಿನಿಯರಿಂಗ್ ಕಾಲೇಜಿನ ಪ್ರಾರಂಭದ ದಿನಗಳು. ಸಾರಿಕ ಅನ್ನೋ ಮೇಡಮ್ಮು  ಪ್ರೇಮಲೋಕದ
ಶಶಿಕಲಾ ಶೈಲಿಯಲ್ಲಿ, ಫುಲ್ಲು ಚಿಲ್ ಚಿಲ್ಲಾಗಿ 'ಹಲೋ. Guys ' ಎನ್ನುತ್ತಾ ತರಗತಿಯ
ಒಳಗೆ ಬಂದರು. ಈ 'ಹಲೋ. Guys ' ಗೆ ಪ್ರತಿಯಾಗಿ 'No!. we are gays' ಎಂಬ ಕೌಂಟರ್
ಕಾಮೆಂಟು ಹಿಂದಿನ ಸಾಲಿನ ಪೋಲಿ ಹುಡುಗನಿಂದ, ಗದ್ದಲದ ನಡುವೆ ಪ್ರತಿಧ್ವನಿಸಿತು.

ಕ್ಲಾಸ್ ರೂಮು ರಪ್ಪನೆ ನಿಶ್ಯಬ್ಧ. ಕೆಲವರು ತಲೆ ತಗ್ಗಿಸಿದರು. ನಾನು ಮಾಮೂಲಿಯಾಗಿ
ಹಲ್ಲು ಬಿಡುತ್ತಾ ಮೇಡಮ್ಮನ್ನ ನೋಡ್ತಿದ್ದೆ. ಭಯಾನಕ ಸಿಟ್ಟಿಗೆದ್ದ ಸಾರಿಕ ಮೇಡಮ್ಮು
ನಾನೇ 'ಅಪರಾಧಿ' ಎಂದು ವಿಚಾರಣೆಯಿಲ್ಲದೆ ನಿರ್ಧರಿಸಿ, ನಿಲ್ಲುವಂತೆ ಸೂಚಿಸಿ
ಯಕ್ಕಾ-ಚಿಕ್ಕಿ ನಿಂದಿಸಲು ಆರಂಭಿಸಿದರು.

ದುರಂತ ಏನಪ್ಪಾ ಅಂದ್ರೆ, ಆವಮ್ಮ ಬೈಯುತ್ತಿರುವುದರ ಸಕಾರಣದ ಕನಿಷ್ಟ ಕಲ್ಪನೆಯೂ
ನನಗಿರಲಿಲ್ಲ. ಕೊನೆಗೆ 'gays' ಪದಕ್ಕೆ ಪುರುಷ ಸಲಿಂಗಕಾಮಿಗಳು ಎಂಬ ದುರಾರ್ಥವಿದೆಯೆಂದು
ತಿಳಿದ ಮೇಲೆ,ನಾಚಿಕೆಯಾಗಿ, ಹೇಸಿಗೆಯಾಗಿ, ಅಸಹ್ಯವಾಗಿ, ಬೇಜಾರು ಆಗಿ,  ಮಾಡದ
ತಪ್ಪಿಗೆ(ಆಡದ ತಪ್ಪಿಗೆ) ಸಾರಿಕ ಮೇಡಮ್ಮಿನ ಮುಂದೆ 'ಅಂಬೋ' ಎಂದು ಶರಣಾಗಬೇಕಾಯಿತು.

' ಪ್ರಾಂಶುಪಾಲರು, ಹೆಚ್ ಓಡಿ' ಮುಂತಾದ ಭಯಂಕರ ಶಬ್ದಗಳನ್ನು ಪ್ರಯೋಗಿಸಿ ಅವರು ನನ್ನ
ಮೇಲೆ ಬಯ್ಗಳದ ಮಳೆಗರೆದರು. ನನ್ನ ಶಬ್ಧ ಭಂಡಾರವಿರಲಿ ಜ್ಞಾನಭಂಡಾರದ 'ಮಿತಿ'ಯನ್ನೂ.
ಅವರಿಗೆ ತಿಳಿಸಿ ಹೇಳುವ ಪ್ರಯತ್ನ ಸಫಲವಾಗಲಿಲ್ಲ.


-> 2 <-

ಸಹಜವಾದ ಮಾತುಕಥೆಗಳ ನಡುವೆಯೂ 'ಸಾರಿ', 'ಪರ್ಡನ್ನು' ಗಳನ್ನು ಧಾರಾ-'ಖಾರ'ವಾಗಿ
ಬಳಸುವುದರಲ್ಲಿ ನನ್ನ ಆಕ್ಷೇಪವಿದೆ. ಕೇಳ್ಸಿಲ್ಲ ಅಂದಾಗ, ಕೇಳಿಸಲಿಲ್ಲ ಅಂದ್ರೆ ಆಯ್ತು.
ಅರ್ಥ ಆಗಿಲ್ಲ ಅಂದಾಗ 'ಅರ್ಥ ಆಗಿಲ್ಲ' ಅಂದರೆ ಆಗೇ ಹೋಯ್ತು. ಇದು ಇಂಗ್ಲಿಷನ್ನು
ದ್ವೇಷಿಸಲೋಸುಗ ಮಾಡುತ್ತಿರುವ ಮೊಂಡುವಾದವಲ್ಲ. ಇಷ್ಟಾದರೂ ಶಿಷ್ಟಾಚಾರಗಳನ್ನು ಮೀರಿ
ನಮ್ಮ ಮಾತುಕತೆಗಳಲ್ಲಿ ಸಹಜತೆ ಸರಳತೆ ಬರಲಿಲ್ಲ ಅಂದರೆ . ವೆರಿ ವೆರಿ ಬ್ಯಾಡ್

ಸರಿ, ಸಾರಿದು ಒಂದ್ ಕಥೆ ಐತೆ. ಕಂಪನಿಗೆ ಸಂಬಂಧಿಸಿದ ವಿದೇಶಿ ಗ್ರಾಹಕರೊಂದಿಗೆ.
ದೂರವಾಣಿಯಲ್ಲಿ conference ಕಾಲು(ಸಮೂಹ ಕರೆ. ?) ಚಾಲ್ತಿಯಲ್ಲಿತ್ತು. ' ಚೀತನ್ ಚೀತನ್
' ಎನ್ನುತ್ತಾ ಒಂದೇ ಸಮ ಪುಂಖಾನುಪುಂಖವಾಗಿ ಇಂಗ್ಲೀಷು ಬಿಡಲು ಪ್ರಾರಂಭಿಸಿದರು,
ಆಂಗ್ಲರು. ಯಾವ 'Context ' ನಲ್ಲಿ ಇದ್ದಾರೆ ಎಂಬುದು ತಿಳಿಯದಿದ್ದರೆ, ಅವರ ಒಟ್ಟು
ಮಾತಿನ ಒಂದಕ್ಷರವನ್ನು ಗ್ರಹಿಸುವುದೂ ಕೂಡ ಕಷ್ಟವೆನಿಸುತ್ತಿತ್ತು.

ಬಕ್-ಬಕ್-ಬಕ್-ಬಕ್ ಎಂದು ಹೇಳಿ ಮುಗಿಸಿ ಪ್ರತಿಕ್ರಿಯೆಗಾಗಿ ಕಾಯುತ್ತಲಿದ್ದರು.
ಎದುರಿಗಿದ್ದ ಸಹೋದ್ಯೋಗಿ ಮಿತ್ರನಿಗೆ ಹುಬ್ಬೇರಿಸಿ 'ಏನೆಂದು. ?' ಕೇಳಿದ್ದಕ್ಕೆ. ' ಸೇ
ಸಾರಿ ಸೇ ಸಾರಿ ' ಅಂದ ಮೆಲ್ಲನೆ. ಹೋ ಹೋ ಹಂಗಾದ್ರೆ ಇಷ್ಟೋತ್ ನೆಕ್ಕಳಂಗೆ ಉಗ್ದಿದ್ದಾರೆ
ಅಂತಾಯ್ತು. ಐಚ್ಛಿಕ ಪ್ರಯತ್ನವಿಲ್ಲದೆಯೂ, ಎಲ್ಲಿಯಾದರೂ ತನ್ನಿಂದ ತೊಂದರೆ ದುಃಖ
ಇತ್ಯಾದಿಗಳು ಸಂಭವಿಸಿರಲೂ ಬಹುದೆಂದು ಊಹಿಸಿ ' ಐ ಯಾಮ್ ವೆರಿ ವೆರಿ ಸಾರಿ ' ಅಂದು
ಬಿಟ್ಟೆ. ಎರಡೆರಡು ಬಾರಿ.

ಅಲ್ಲಿದ್ದವರಿಗೆ ಗೊಂದಲವಾಯಿತು. ಎದುರಿದ್ದವನಿಗೆ ಗಾಬರಿಯಾಯಿತು. ವಿಷಯ ಏನಪ್ಪಾ ಅಂದರೆ.
ಅವರು ಹೇಳಿದ ಮಾತು ನನ್ನ ಸಹೋದ್ಯೋಗಿ ಮಿತ್ರನಿಗೂ ಅರ್ಥವಾಗದೆ, ಪುನರುಚ್ಛಾರಣೆಯ
ಕೋರಿಕೆಯ ಸಲುವಾಗಿ 'ಸಾರಿ' ಪದವನ್ನು ಬಳಸಲು ನಿರ್ದೇಶಿಸಿದ್ದನು. ಆದರೆ ಅದು ಹೀಗಾಯ್ತು
ಐ ಹೇಟ್ ದಿಸ್ 'ಸಾರಿ' ಯಾ.

ಈ ರೀತಿ ವಿಶೇಷಾರ್ಥಗಳನ್ನು ಕೊಡುವ ಇಂಗ್ಲೀಷು ಫ್ರೇಸಸ್(ಸಣ್ಣ ವಾಕ್ಯವಾ. ?) ಗಳನ್ನ
ಬೇಕಾಬಿಟ್ಟಿಯಾಗಿ ಬಿಡ್ತಾನೆ ಇರ್ತಾರಪ್ಪ. ಹೋಟೆಲಿಗೆ ಹೋದಾಗ ಪುಳಿಹೊಗರೆ ಆರ್ಡರ್
ಮಾಡ್ಲಾ ಅಂತ ಗೆಳೆಯನೊಬ್ಬನನ್ನು ಕೇಳುವಾಗ, ಅವನು ಹೇಳುವನು - ' I am not a very big
fan of ಪುಳಿಹೊಗರೆ. '

ಇಷ್ಟ ಇಲ್ಲದೇ ಇರೋದನ್ನ ಇಷ್ಟು ಲೆವೆಲ್ಲಾಗಿ ಹೇಳೋದಾ. ? ಇದನ್ನ ಕೇಳುದ್ರೆ ಎಲ್ಲೆಲ್ಲೋ
ಉರಿ ಬೀಳತ್ತಪ್ಪ. ಕೆಲವರು. ಜೋಕ್ ಮಾಡುದ್ರೆ ನಗೋದರ ಬದಲು 'ಹೇಯ್ ದಟ್ ಈಸ್ ಅ ಗುಡ್
ವನ್. ' ಅಂತ ಕಾಂಪ್ಲಿಮೆಂಟಿಸುವರು. ನಗೋದನ್ನ ಮರೆತ ಅಳುಮುಂಜಿ ಶಿಷ್ಟಾಚಾರದ ಆಳುಗಳು.


-> 3 <-

ಬೆಂಗಳೂರಿನ ಸಂಜೆ ಮಳೆಗೆ ಶ್ಯಾನೆ ನೆನ್ದು ಬಂದಿದ್ದ ದೋಸ್ತಿಗೆ ಕೇಳಿದೆ : ' ಏನಾ
ಮಾದೇಸ, ಒಂದ್ ವಳ್ಳೆ ಜಾಕೆಟ್ ತಗಳದಲ್ವೇನೋ. ? '

' ನಮ್ಮ ಕಂಪನಿಯಲ್ಲಿ ಜಾಕೆಟ್ ಫ್ರೀ ಆಗಿ ಕೊಡ್ತಾರಂತೆ. ಸೀನಿಯರ್ ಹೇಳಿದ್ದು. ಹಂಗಂತ
ಅಡ್ಮಿನ್ ಹತ್ರ ಹೋಗಿ ಕೇಳಿದ್ದಕ್ಕೆ. ಅವಮ್ಮ ಬೋದು ಕಳಿಸ್ ಬುಟ್ರು. '

'ಯಾಕ, ಏನಾ ಆಯ್ತು. ? ' ಅಂದದ್ದಕ್ಕೆ ಶುರುವಚ್ಚಿಕೊಂಡ. '

'Madam I want jerkin' ಅಂದೆ 'ಸಾರಿ We don’t entertain that' ಅಂದ್ಲು. ನನಗೂ
ಅರ್ಥವಾಗದೇ ' No Entertainment I want ಜರ್ಕಿನ್ ಜರ್ಕಿನ್ ' ಅಂದದ್ದಕ್ಕೆ ಆವಮ್ಮ
ಮಕ-ಮೂತಿ ನೋಡ್ದೆ ಬೋದು ಕಳ್ಸಿಬಿಟ್ಲು. ಅಲ್ಲಾ ನಾನೇನ್ ಹಾಡ್ ಹೇಳು. ಡ್ಯಾನ್ಸ್ ಮಾಡು
ಅಂತಾನ ಅಂದಿದ್ದು. '. ಆ ಕ್ಷಣವನ್ನೂ ನೆನಪಿಸುಕೊಂಡು ಕ್ರೋಧಿತನಾದ.

'entertain ಮಾಡಲ್ಲ ಅಂದರೆ. ಆ ಥರದ ಕೊಡು ಕೊಳ್ಳುವಿಕೆಯನ್ನು ಪ್ರೋತ್ಸಾಹಿಸುವುದಿಲ್ಲ
ಎಂದರ್ಥ' ಎಂಬುದಾಗಿ ವಿವರಿಸಿದ ಮೇಲೆ ಕೊಂಚ ಪುಳಕಿತನಾದ.


-> 4 <-

ಸಿಕ್ಕಾಪಟ್ಟೆ ತಲೆ ನೋಯ್ತಾ ಇತ್ತು. ಮೆಡಿಕಲ್ ಶಾಪಿನ ಮುಂದೆ ಮಾತ್ರೆ ಕೊಳ್ಳಲೆಂದೇ
ನಿಂತಿದ್ದೆ. ಮುಂದೆ ನಿಂತಿದ್ದ ಇಬ್ಬರು ಪ್ರಾಯದ ಹೆಣ್ಣುಮಕ್ಕಳಲ್ಲಿ ಒಬ್ಬಳು

' ಒನ್ Horlicks' ಅಂದಳು. ಅಂಗಡಿಯವ ತಂದು ಕೊಟ್ಟ. ಗೊಂದಲಗೊಂಡ ಆ ಹೆಣ್ಣು ಜೀವ,
ಡಬ್ಬಿಯನ್ನೇ ಗಟ್ಟಿಯಾಗಿ ಹಿಡಿದು ನೋಡುತ್ತಾ- ' Not This one Big One Big One '
ಅಂತು. ಅಂಗಡಿಯವನಿಗೂ ತಲೆ ಕೆಟ್ಟಿರಬೇಕು. ಅವಳ ಕೈಯಿಂದ Horlicks ಡಬ್ಬಿಯನ್ನು
ಕಿತ್ತುಕೊಂಡು ಹೋದನು. (ಮತ್ತೊಂದನ್ನು ತರಲು)

ಈ ಪ್ರೋಸಸ್ ನಿಂದ ಅಸಾಧ್ಯ ಕುಪಿತಳಾದ ಹುಡುಗಿ ಮುಖ ಊದಿಸಿಕೊಂಡಳು. ಇನ್ನೊಬ್ಬಳು ಕಡ್ಡಿ
ಆಡಿಸಲು. 'Its funny!' ಅಂದಳು. 'No its not funny it is embarrassing. '

'No Its not embarrassing It is funny'

'Nooooaa It is really really embarrassing'

ತಲೆ ನೋವಿಗೆ ಮಾತ್ರೆ ಕೇಳಲು ಬಂದಿದ್ದವನು ಇವರ ಇಂಗ್ಲೀಷನ್ನು. , ಬಾಯಿ ಬಿಟ್ಟುಕೊಂಡು
ಕೇಳುತ್ತಿದ್ದೆ.

ಅಷ್ಟೆ ಬೆಂಗ್ಳೂರು ಸಾರ್ವಜನಿಕ ಸ್ಥಳಗಳಲ್ಲಿ ಈ ಥರ ಇಂಗ್ಲೀಷು ಕೇಳುವುದೇ ಒಂದು
ಮನರಂಜನೆ. ಆದರೂ. ಆ ಇಬ್ಬರು ಹೆಣ್ಣುಮಕ್ಕಳು ಕೊನೆಗೆ ಅದಾವ ನಿರ್ಧಾರಕ್ಕೆ ಬಂದರೋ
ತಿಳಿಯಲಿಲ್ಲ.