ಸೆಕೆಂಡ್ ಹ್ಯಾಂಡ್ ಕಾರು ಕೊಂಡುಕೊಂಡ ಮೇಲೆ ಡ್ರೈವಿಂಗ್ ಸ್ಕೂಲಿಗೆ ಸೇರಿದೆ.   
ಡ್ರೈವಿಂಗ್ ಹೇಳಿಕೊಡುವವನು ಕೊಂಚ ವಯಸ್ಸಾದ ವ್ಯಕ್ತಿ.
ಡ್ರೈವಿಂಗ್ ಜೊತೆಗೆ ತನ್ನ ಡ್ರೈವಿಂಗ್ ಜೀವನದ ಸಾಹಸಗಥೆಗಳನ್ನೆಲ್ಲಾ
ಹೇಳುತ್ತಿದ್ದರು.
ಆ ಸಾಹಸಗಾಥೆಗಳ ಸಾಲಿನಲ್ಲಿ ..
' ನೈಜವಾಗಿ ಕಂಡಂತಹಾ ಅಪಘಾತಗಳ ಭಯಾನಕ ವರ್ಣನೆಗಳೂ' ಸೇರಿರುತ್ತಿದ್ದವು.

"ಹೈವೇನಲ್ಲಿ ನೂರ್ ಕಿಲೋಮೀಟರು ಸ್ಪೀಡಲ್ಲಿ ಗಾಡಿ ಬರ್ತಾ ಇದೆ.
ಇದಕ್ಕಿದ್ದಂಗೆ ಫ್ರೆಂಟ್ ದು ರೈಟ್ ಟೈರು ಬರ್ಸ್ಟ್ ಆಗಿದೆ.
ಸ್ಟೇರಿಂಗು ಅದೇ ಫೋರ್ಸಲ್ಲಿ  ಕ್ಲಾಕ್ ವೈಸ್ ತಿರುಗಿ ಬಿಟೈತೆ.
ಸ್ಟೇರಿಂಗ್ ಒಳಗೆ ಕೈ ಜಾರಿದ್ದರಿಂದ, ಕೈ ಲಟಕ್ ಅಂತ ಪೀಸಾಗಿದೆ.
ಗಾಡಿ ಸೀದಾ ಹೋಗಿ ಡಿವೈಡರ್ ಗೆ ಬಡಿದ ತಕ್ಷಣ...,
ಮಂಡಿ ಕೆಳಗೆ ಕಾಲು ಇದಿಯಲ್ಲಾ.. ಅವು ಹಂಗೇ ಪೀಸ್ ಪೀಸ್ "
ಎಲ್ಲದಕ್ಕೂ ಹೂ ಗುಡುತ್ತಿದ್ದವನು ...

" ಏನ್ ಸಾರ್ ಬರಿ ಕೈ - ಕಾಲು ಮುರ್ದೋದ ಕಥೆಗಳೇ ಹೇಳ್ತೀರಾ .. " ಅಂದ್ರೆ

ನನ್ನ ಪ್ರಶ್ನೆಯನ್ನು ಸಂಪೂರ್ಣವಾಗಿ ಬೇರೆಯದೇ ರೀತಿಯಲ್ಲಿ ಅರ್ಥೈಸಿಕೊಂಡು...

" ಬರಿ ಕೈ ಕಾಲು ಮುರ್ದಿರೋದಲ್ಲಾ,
 ನನ್ನ ಸರ್ವೀಸ್ ನಲ್ಲಿ,  ತಲೆಗಳೇ ಜಜ್ಜಿ ಹೋಗಿರೋ ಘಟನೆಗಳನ್ನ ನೋಡಿದ್ದೇನೆ.
ಹೋಗ್ತಾ ಹೋಗ್ತಾ.. ಸ್ಟೇರಿಂಗ್ ರಾಡು ಕಟ್ಟಾಗಿ..,
ಕಂಟ್ರೋಲ್ ಸಿಗದೇ ಪಲ್ಟಿ ಹೊಡೆದದ್ದೂ ಇವೆ, ಗಾಡಿಗಳು." ಎಂದು ಶುರುವಚ್ಚಿಕೊಂಡರು.

" ಡ್ರೈವಿಂಗ್ ತುಂಬಾ ಕೆಟ್ಟ ಪ್ರೊಫೆಷನ್
ನಾವು ಎಷ್ಟೇ ಹುಷಾರಾಗಿದ್ರು,
ಹಣೆಬರಹ ನೆಟ್ಟಗಿಲ್ಲ ಅಂದ್ರೆ ಏನೂ ಮಾಡಕ್ಕಾಗಲ್ಲ." ಎಂಬ ಎಂಡಿಂಗ್ ಕೋಟುಗಳೂ
ಇರುತ್ತಿದ್ದವು.
ಈವಯ್ಯಂಗೆ ವಯಸ್ಸು ಬೇರೆ ಜಾಸ್ತಿ ಆಗದೆ. ಕೆಟ್ಟ-ಕೊಳ್ಕ ಬಯ್ಯಂಗೂ ಇಲ್ಲ.
ಹೊಸದಾಗಿ ಸ್ಟೇರಿಂಗ್ ಹಿಡಿದು ಕುಳಿತವನಿಗೆ,
ದಬಾರ್
ಡಬಾರ್
ಡಿಶ್ಕ್ಯೋ  ಇನ್ಸಿಡೆಂಟುಗಳನ್ನು ಹೇಳ್ತಿದಾರೆ.
ಲೈಫು  ಟಾಮ್ ಅಂಡ್ ಜೆರ್ರಿ ರೀತಿ ಕಾಮೆಡಿ ಚೇಸಿಂಗಾ ..?

ದಾರಿಯಲ್ಲಿ, ತಮ್ಮ ಬಳಿ ಡ್ರೈವಿಂಗ್ ಕಲಿತ ಮನೆಗಳನ್ನು ತೋರಿಸಿ..
ಒಬ್ಬೊಬ್ಬರ ಬಗ್ಗೆಯೂ ಸವಿವರವಾಗಿ ವಿವರಿಸುತ್ತಿದ್ದರು.
"ಈ ಮನೇಲಿ ಅಣ್ಣ, ತಮ್ಮ ಇದಾರೆ.
ಇಬ್ಬರೂ ನನ್ನ ಹತ್ರಾನೆ ಡ್ರೈವಿಂಗ್ ಕಲ್ತಿದ್ದು.
ಒಂದ್ಸಾರಿ ಏನಾಯ್ತಂದ್ರೆ...
ಅಣ್ಣ ಮನೆ ಬಳಿ ಕಾರ್ ಪಾರ್ಕ್ ಮಾಡ್ತಾ ಇದಾನೆ.
ತಮ್ಮ ಕಾರ್ ಮುಂದೆ ನಿಂತ್ಕೊಂಡು
'ಆ ಬರ್ಲಿ ಬರತ್ತೆ ಬರಲಿ ಎಳ್ಕೋ ಇನ್ನೊಂಚೂರು
ಆ ಬರ್ಲಿ..
ಆ ಬರ್ಲಿ,
ಆ ಬರ್ಲಿ ' ಅಂತ ಕೈ ಬೀಸಿ ಕರೆಯುತ್ತಾ ಇದಾನೆ.
ಅಣ್ಣನೂ ಮೆಲ್ಲಕ್ಕೆ ಕಾರ್ ಬಿಡ್ತಾ ಇದಾನೆ.
ತಮ್ಮ ಒಂದೇ ಸಾರ್ತಿಗೆ  'ಸ್ಟಾಪ್'  ಎಂದು ಕೂಗಿ.. ಕೈ ಅಡ್ಡ ತೋರಿಸಿದ್ದಾನೆ.
ಅಣ್ಣ ಗಾಬರಿಯಲ್ಲಿ,  ಬ್ರೇಕ್ ಬದಲು ಅಕ್ಸಿಲರೇಟರ್ ಜೋರಾಗಿ ಒತ್ತಿದ.
ಕಾರು ಚಂಗನೆ ನೆಗೆದು.. ಆ ಎದುರಿಗಿರೋ ಕಂಬಕ್ಕೆ ಗುದ್ದಿದೆ.
ಅಕಸ್ಮಾತ್  ಕಂಬ ಇಲ್ಲ ಅಂದಿದ್ರೆ ಅಥವಾ
ತಮ್ಮನಾದವನು ಕಾರು ಮತ್ತು ಕಂಬದ ಮಧ್ಯೆ ನಿಂತಿದ್ದರೆ ಛಿದ್ರ ಛಿದ್ರ ಆಗಿ ಬಿಡ್ತಿದ್ದ.
ತಮ್ಮನ ಲಕ್ಕು ಚೆನ್ನಾಗಿತ್ತು. ಏನೂ ಆಗ್ಲಿಲ್ಲ.
ಅಣ್ಣನಿಗೂ ಅಂತಾ ಪೆಟ್ಟಾಗಲಿಲ್ಲ.
ಕಾರು ಮಾತ್ರ ರೇಡಿಯೇಟರ್ ಸಮೇತ... ಫ್ರೆಂಟ್ ಎಲ್ಲಾ ಪುಡಿ ಪುಡಿ ಆಗೋಯ್ತು" ಅಂದರು.

ನನಗೂ ಕೆಟ್ಟ ಕೋಪ ಬಂತು.
ಭಯಾನು ಆಯ್ತು.
"ಹಂಗೂ ಆಗತ್ತಾ... ಬ್ರೇಕ್ ಬದಲು ಆಕ್ಸಿಲೇಟರ್ ಕೂಡ ಒತ್ತುತೀವಾ ...? " ಅಂದೆ.

"ಆಗಬಹುದು. ಯಾಕಿಲ್ಲ. ತಲೆ ನೆಟ್ಟಗೆ ಇಟ್ಕೊಳ್ಳದೆ.., ಕಾರ್ ಓಡಿಸಿದ್ರೆ, ಹಿಂಗೂ
ಆಗತ್ತೆ, ಮತ್ತೂ ಆಗತ್ತೆ." ಅಂದರು ನಿರ್ಭಾವುಕರಾಗಿ.

' ಉಸಿರಿದ್ರೆ ಉಪ್ಪು ಮಾರಿಕೊಂಡು ಜೀವ್ನ ಮಾಡ್ಬೋದು. ಈ ಕಾರು-ಗೀರು ಶೋಕಿ ಎಲ್ಲಾ
ಯಾಕಪ್ಪಾ ನಮಗೆ ..? ' ಅನ್ನೋ ಹತಾಶೆಯೂ ಮೂಡಿದಾಗ... 
" ಹೇ ಅರವತ್ತು-ಎಪ್ಪತ್ತು ದಾಟಿರೋರೆ ಹೊಸದಾಗಿ ಕಲಿತು, ಕಾರ್ ಬಿಡ್ತಾರೆ.
ನೀವಿನ್ನು ಯಂಗು ನಿಮ್ಮ ಕೈಲಿ ಆಗಲ್ವಾ...? " ಎಂಬುದಾಗಿ ಹೇಳಿ
ಹುರಿದುಂಬಿಸುತ್ತಿದ್ದರು.

ಕಾರು ಬಿಡುವಾಗ ನಾನು ಕೇಳುತ್ತಿದ್ದ ಸ್ಟುಪಿಡ್ ಪ್ರಶ್ನೆಗಳಿಂದ
ಕೋಪಗೊಳ್ಳುತ್ತಿದ್ದರಷ್ಟೇ ಅಲ್ಲದೆ,
ಹೀನಾಮಾನವಾಗಿ ಬಯ್ಯುತ್ತಿದ್ದರು.
" ಟಾಪ್ ಗೇರ್ ನಿಂದ, ವಾಪಾಸು ನಾಲ್ಕನೇ ಗೇರಿಗೆ ಎಳೆಯುವಾಗ ..
ತಪ್ಪಿ ರಿವರ್ಸ್ ಗೇರಿಗೆ ಬಿದ್ದರೆ.. ಕಾರು ಹಿಂದಕ್ಕೆ ಹೋಗುವುದಿಲ್ಲವೇ..?" ಎಂದು
ಕೇಳಿದಾಗ..

"ಇಲ್ಲ ಅದು ರಿವರ್ಸ್ ಗೇರಿಗೆ ಬೀಳಲ್ಲ "ಅಂದರು.

ನಾನು ಬಿಡಲಿಲ್ಲ. "ಅಕಸ್ಮಾತ್ ಬಿತ್ತು ಅಂತಾನೆ ಇಟ್ಕೋಳಿ. ಆಗ ಏನಾಗತ್ತೆ..?"

"ಇಲ್ಲ ಬೀಳೋ.. ಛಾನ್ಸೇ ಇಲ್ಲ"ಅಂದರು.

"ವರ್ಸ್ಟ್ ಕೇಸ್ ರಿವರ್ಸ್ ಗೇರಿಗೆ ಬಿತ್ತು ಅಂದ್ರೆ..?"
ಆತ ರೆಸ್ಟ್ ಲೆಸ್ ಆದ, ಮತ್ತು ಸ್ಟಾರ್ಟೆಡ್ಡು  ಶೌಟಿಂಗು...

"ಹೇಳ್ತಾ ಇದೀನಿ ತಾನೆ... ಬೀಳಲ್ಲ.. ಬೀಳಲ್ಲ ಅಂತ.. ಹಂಗೇನಾದ್ರು ಬಿದ್ರೆ.. ಗೇರ್
ಬಾಕ್ಸು ಪುಡಿ ಪುಡಿ ಆಗತ್ತೆ.." ಹಾ ಹೂ ಎಂದು ಕುಣಿದಾಡಿದ.
ಹಿಂಗೇ ಸಾಗಿತ್ತು ನಮ್ಮ ಕಲಿಕೆ.

ಡ್ರೈವಿಂಗ್ ಶುರು ಮಾಡಿದ ಮೇಲೆ, ಹಾಲಿವುಡ್ ಸಿನಿಮಾಗಳು ರುಚಿಸಲು ಪ್ರಾರಂಭಿಸಿತು.
ಕಾರಿನ ಚೇಸಿಂಗುಗಳಲ್ಲಿ, ಅವರು ತೋರಿಸುವ ಸಣ್ಣ ಸಣ್ಣ ಟೆಕ್ನಿಕಲ್ ಮೂವ್-ಗಳು
ಹೆಚ್ಚು ಅರ್ಥವಾಗಿ ಮುದ ನೀಡುತ್ತಿತ್ತು.  
ಹ್ಯಾಂಡ್ ಬ್ರೇಕ್ ಎತ್ತಿ, ಕಾರನ್ನು ರೊಯ್ಯನೆ ಸ್ಲೈಡ್ ಮಾಡುತ್ತಿದ್ದುದು... ಇನ್ನು
ಮುಂತಾದವು.


ಟ್ರಾಫಿಕ್ಕಲ್ಲಿ ಕಾರು ಬಿಡುವುದನ್ನು ಕಲಿಸಲು, ಒಮ್ಮೆ ಬಿ ಇ ಎಲ್ ಸರ್ಕಲ್ ಕಡೆಗೆ
ಕರೆದುಕೊಂಡು ಹೋದರು.
ಅದು ತುಂಬಾ ಟ್ರಾಫಿಕ್ಕಿನ ಏರಿಯಾ.
ವೇಗವಾಗಿ ಬಂದ ಸ್ಕೂಟಿಯವನು ... ಸ್ಕಿಡ್ ಆಗಿ.. ಕಾರಿನ ಮುಂದೆ ದಬಾರನೆ ಬಿದ್ದ.
ಪಕ್ಕದಲ್ಲಿ ಕುಳಿತಿದ್ದ ಟೀಚರ್ ಕಾಲಡಿಯಲ್ಲೂ..  ಇದ್ದ ಕ್ಲಚ್ಚು,  ಬ್ರೇಕುಗಳನು ಅವರು
ಸಮಯೋಚಿತವಾಗಿ ಒತ್ತಿದ್ದರಿಂದ ಕಾರು ನಿಂತಿತು.
ಮೊದಲೇ ಟ್ರಾಫಿಕ್ಕಲ್ಲಿ ಅಂಡ್ ಬಾಯಿಗೆ ಬಂದದೆ..,
ಇಂತದ್ರಲ್ಲಿ ಇನ್ಯಾವನೋ ಅವನಾಗವನೇ ಬಂದು ಕಾರಿನ ಮುಂದೆ ಬಿದ್ದಿದ್ದ.
ಬಿದ್ದವನು ಎದ್ದ.
ಡ್ರೈವಿಂಗ್ ಸ್ಕೂಲಿನ ಕಾರು, ಬೇಕಾದಂತೆ ಬಯ್ಯಬಹುದು ಎಂದೆನಿಸಿ,
" ಕಲಿಯೋರು ಇಲ್ಲಲ್ಲ ರೀ ಬಂದು ಕಲಿಯೋದು. ಯಾವ್ದಾದ್ರು ಖಾಲಿ ಜಾಗಕ್ಕೆ  ಹೋಗಿ
ಕಲೀರಿ.." ಎಂದ.
ನಮ್ಮ ಟೀಚರು ಮುಂಗೋಪಿ.
ಅದುವರೆಗೂ ಸುಮ್ಮನಿದ್ದವನು ಇದ್ದಕ್ಕಿದ್ದಂತೆ ... ರೇಜಾಗಿ
"ಯಾವ್ದೋ ಬಯಲಲ್ಲಿ ಕಲ್ತಿರೋದಕ್ಕೆ ಈ ರೀತಿ ಸಮ ದಾರೀಲು ಅಂಡು ಮ್ಯಾಲೆ ಮಾಡ್ಕೋಂಡು
ಮಕಾಡೆ ಬಿದ್ದಿದ್ದು. ನಮಗೆ ಹೇಳಕ್ ಬರ್ತೀಯ. ಹೋಗೋ ಬೋ.. ಮಗನೆ, ಸೂ..ಮಗನೆ."   ಜಗಳ
ಆರಂಭವಾಯಿತು. 
ಲಿಟರಲಿ ಐ ವಾಸ್ ಶಿವರಿಂಗ್.
" ನೋಡುದ್ರಾ ಅವನಿಗೆ ನೆಣ ಎಷ್ಟಿದೆ..? 
ಅವನಾಗವನೇ ಬಂದು, ಬಿದ್ದು, ನಿಗರಾಡ್ತಾನೆ.
 ಬರಿ ಡ್ರೈವಿಂಗ್ ಕಲಿತರೆ ಸಾಲದು, ಬಾಯಿ ಮಾಡೋದೂ ಕಲೀಬೇಕು.
ಇಲ್ಲಾ ಅಂದ್ರೆ ತಪ್ಪು ಯಾರದ್ದೇ ಇದ್ದರೂ.., ನಾವು ಹರಕೆ ಕುರಿಗಳಾಗಿ ಬಿಡ್ತೀವಿ.
ಹೆದರ ಬಾರ್ದು. ಧೈರ್ಯವಾಗಿ ಕೆಟ್ಟ, ಕೆಟ್ಟದಾಗಿ ಬಯ್ಯೋದನ್ನೂ ಕಲೀಬೇಕು. " ಯುದ್ಧೋತ್ತರ
ವಿಮರ್ಶೆಗಳೂ ನಡೆದವು.

ಹಂಗಾದ್ರೆ ಒಂದು ಕಾರಿನ ಜೊತೆಗೆ ಲೈಫು ಇಷ್ಟು ಕಾಂಪ್ಲಿಕೇಟ್ ಆಗ್ತಾನು ಹೋಗುತ್ತಾ..?