ಲ್ಯಾಂಡ್ ಲೈನ್ ಫೋನು ಒಂದೇ ಸಮನೆ ರಿಂಗಿಸುತ್ತಿತ್ತು. ನಿದ್ದೆಗಣ್ಣಿನಲ್ಲಿಯೇ ಫೋನು ಇರೋ
ಕಡೆಗೆ ಹೋದೆ. ರಿಸೀವರ್ ಮೇಲಕ್ಕೆತ್ತುವ ಮುಂಚೆ ಸ್ವಲ್ಪ ಅಳುಕು ಮೂಡಿತು. ಗಡಿಯಾರದ
ಕಡೆಗೆ ನೋಡಿದೆ. ಸರಿಯಾಗಿ ನಾಲಕ್ಕು ಘಂಟೆ. ಬೆಳಗಿನ ಜಾವ ಇಷ್ಟು ಹೊತ್ತಿನಲ್ಲಿ ಬರುವ
ಕರೆಗಳೆಲ್ಲಾ ಸಾಮಾನ್ಯವಾಗಿ ಏನಾದರೊಂದು ದುರಂತದ ಸಮಾಚಾರವನ್ನು ಹೊತ್ತು ತಂದಿರುತ್ತವೆ.
ಮೈ ಹಿಡಿದು ಜಗ್ಗುತ್ತಿದ್ದ ನಿದ್ದೆಯೂ ಒಂದು ಕ್ಷಣ ಹಾರಿ ಹೋಯ್ತು. ನಿಧಾನವಾಗಿ ರಿಸಿವರ್
ಮೆಲಕ್ಕೆತ್ತಿ, ಆತಂಕದ ಸ್ವರದಲ್ಲಿ ‘ಹಲೋ.. ’ ಎಂದೆ. ಅತ್ತ ಕಡೆಯಿಂದ ಯಾವುದೇ ಸದ್ದು
ಬರಲಿಲ್ಲ. ಕರೆ ಕತ್ತರಿಸಿ ಹೋಯ್ತು. ರೀ-ಡಯಲ್ ಮಾಡಿದೆ. ‘ಬ್ಯುಸಿ’ ರಿಂಗ್- ಟೋನು
ಕೇಳಿಸಿತು. ಸ್ವಲ್ಪ ಹೊತ್ತಿನ ನಂತರ ‘ನೀವು ಕರೆ ಮಾಡಿರುವ ಚಂದಾದಾರರು ವ್ಯಾಪ್ತಿ
ಪ್ರದೇಶದ ಹೊರಗಿದ್ದಾರೆ’ ರೆಕಾರ್ಡೆಡ್ ಮೆಸೇಜು ಹೆಣ್ಣಿನ ರಾಗದಲ್ಲಿ ಕೇಳಿಸಿತು. ಸ್ವಲ್ಪ
ಹೊತ್ತು ಕಾದೆ. ಯಾವುದೇ ಕರೆ ಬರಲಿಲ್ಲ.

‘ ಎಲ್ಲೋ. ? ಲೈನ್ ಪ್ರಾಬ್ಲಂ ಇರಬೇಕು. ’ ಎಂದುಕೊಂಡು, ಮಂಚದಿಂದ ಕೆಳಗೆ ಬಿದ್ದಿದ್ದ
ಹೊದಿಕೆಯನ್ನು ಮೇಲಕ್ಕೆ ಹಾಕಿ ಮಲಗಿದೆ. ಅತ್ತಿತ್ತ ಹೊರಳಾಡಿದರು ನಿದ್ದೆ ಬರಲಿಲ್ಲ.
ಯಾರಾಗಿರಬಹುದು ಎಂಬ ಆತಂಕ. ಮೇಲಕ್ಕೆದ್ದವನೇ, ಲ್ಯಾಂಡ್ ಲೈನ್ ಫೋನಿನ ಡಿಸ್-ಪ್ಲೇ ನಲ್ಲಿ
ತೋರಿಸುತ್ತಿದ್ದ ನಂಬರ್ ಅನ್ನು ಮೊಬೈಲು ಫೋನಿನಲ್ಲಿ ಒತ್ತಿ ರಿಂಗಿಸಿದೆ. ‘Calling.
sina’ ಮೊಬೈಲಿನ ಡಿಸ್-ಪ್ಲೇ ಮೇಲೆ ತೋರಿಸಿತು. ಬೆಚ್ಚಿ ಬಿದ್ದೆ.


‘ಎಲ್ಲಿಗೆ ಹೋದರೂ Experience ಕೇಳ್ತಾರೆ. ಎರಡು ವರ್ಷ ಗ್ಯಾಪ್ ಯಾಕಾಯ್ತು. ? ಅಂತ
ಕೇಳ್ತಾರೆ. ಕೆಲಸ ಹುಡುಕಿ ಹುಡುಕಿ ಸಾಕು-ಬೇಕಾಗಿ ಹೋಗಿದೆ ’. ರೂಮಿನ ಮಂಚದ ಮೇಲೆ ಅಂಗಾತ
ಮಲಿಗಿಕೊಂಡು ತನ್ನ ಕಷ್ಟ ಗಳನ್ನು ಹೇಳಿಕೊಳ್ಳುತ್ತಿದ್ದ ಸೀನ. ನಾನು ಮಾತನಾಡಲಿಲ್ಲ.
ಅವನೇ ಪುನಃ ಶುರು ಮಾಡಿದ. ‘ಇಂಜಿನಿಯರಿಂಗ್ ಓದಿ ನಮ್ಮ ದೋಸ್ತಿಗಳೆಲ್ಲಾ ಎಂಥೆಂಥಾ ಕೆಲಸ
ಮಾಡ್ತಿದಾರೆ ಗೊತ್ತಾ. ? ಸತೀಶ ಪೋಸ್ಟ್ ಮ್ಯಾನ್ ಕೆಲಸ ಮಾಡ್ತಾ ಇದಾನೆ. ಸೈಕಲ್
ಹೊಡ್ಕೊಂಡು ಮನೆ ಮನೆ ಸುತ್ತುತಾ ಇರ್ತಾನೆ. ಆ ಸುರೇಂದ್ರ ಅದೇನೋ ಡೊಮೆಸ್ಟಿಕ್ ಕಾಲ್
ಸೆಂಟರ್ ನಲ್ಲಿ ಕೆಲಸ ಮಾಡ್ತಿದಾನಂತೆ. ಅವನಿಗೆ ನಾವು ಫೋನ್ ಮಾಡಿದ್ರು ‘ಗುಡ್
ಮಾರ್ನಿಂಗ್. ಹೌ ಮೇ ಐ ಹೆಲ್ಪ್ ಯು’ ಅಂತಾನೆ. ಇನ್ನು ರವಿ, ದೂರಸಂಪರ್ಕ ಇಲಾಖೆಯಲ್ಲಿ
ಜೂನಿಯರ್ ಇಂಜಿನಿಯರು. ಓದಿರೊ ಕೆಲಸ ಮಾಡ್ತಿದಾನೆ. ನೀನು ಬಹುರಾಷ್ಟ್ರೀಯ ಕಂಪನಿಯಲ್ಲಿ
ಸಾಫ್ಟ್ ವೇರು ಇಂಜಿನಿಯರು. ಎಲ್ಲರ ಹತ್ತಿರ ಹೇಳಿಕೊಳ್ಳಲು ಕೆಲಸ ಅಂತನಾದ್ರು ಇದೆ. ನನ್ನ
ಹತ್ರ ಅದು ಕೂಡ ಇಲ್ಲ. ‘ ತುಂಬಾ ಬೇಜಾರು ಮಾಡಿಕೊಂಡು ಹೇಳಿದ.

ಇವನು ಪದವಿಯ ನಂತರದ ಎರಡು ವರ್ಷಗಳನು ಹಾಳು ಮಾಡಿಕೊಂಡದ್ದು ವಿಚಿತ್ರ ಕಾರಣಗಳಿಗಾಗಿ.
ಇಂಜಿನಿಯರಿಂಗ್ ಪದವಿ ಮುಗಿಯುತ್ತಿದ್ದಂತೆಯೇ IAS (UPSC) ಪರೀಕ್ಷೆಗೆ ತಯಾರಿ ನಡೆಸಲು
ದೆಹಲಿಗೆ ತೆರಳಿದ. ಮೊದಲಿನಿಂದಲು ಅವನಿಗೆ administration ಬಗ್ಗೆ ಹೆಚ್ಚು ಒಲವಿತ್ತು.
ದೆಹಲಿಯಲ್ಲಿ ಒಂದು ವರ್ಷ ಸತತ ತರಬೇತಿ, ಅಭ್ಯಾಸದ ಹೊರತಾಗಿಯೂ ಮೊದಲ ಹಂತದ
ಪರಿಕ್ಷೆಯಲ್ಲಿ ಉತ್ತಿರ್ಣನಾಗುವಲ್ಲಿ ವಿಫಲನಾದ. ಈ ರೀತಿ ಮೊದಲ ಪ್ರಯತ್ನದಲ್ಲಿ
ಅನುತ್ತೀರ್ಣರಾಗುವುದು ಸಹಜ. ಆದರೆ ಇದರಿಂದ ಸಂಪೂರ್ಣ ವಿಚಲಿತನಾದ. ಅವನ ಆತ್ಮವಿಶ್ವಾಸವೇ
ಹುದುಗಿ ಹೋಯಿತು. ದೆಹಲಿಗೆ ಬೆನ್ನು ಮಾಡಿದ. ಪುನಃ ತನ್ನ ಹಳ್ಳಿಸೇರಿದ. ಅಲ್ಲಿ
ನೋಡಿಕೊಳ್ಳುವವರಿಲ್ಲದೆ ಬರಡು ಬಿಟ್ಟಿದ್ದ ಜಮೀನನ್ನು ಸುಪರ್ದಿಗೆ ವಹಿಸಿಕೊಂಡು, ಹಸಿರು
ಕ್ರಾಂತಿ ಮಾಡಲು ಶುರು ಮಾಡಿದ. ಒಂದು ವರ್ಷ ವ್ಯವಸಾಯ ಅಂತ ಮಾಡಿ, ಲಾಭ ಮಾಡಲಾಗದೇ,
ಹಾಕಿದ ಅಸಲೂ ಮಣ್ಣಾದ ಮೇಲೆ, ಹಳೆ ಹೆಂಡ್ತಿ ಪಾದವೇ ಗತಿ ಅಂತ ಬೆಂಗಳೂರು ಸೇರಿಕೊಂಡು
ಕೆಲಸಕ್ಕಾಗಿ ಅಲೆದಾಡಿದ. ತಾನೇ ಉದ್ಯೋಗವನ್ನು ಸ್ವಂತವಾಗಿ ಸೃಷ್ಟಿ ಮಾಡಬಲ್ಲ
ಚೈತನ್ಯ-ಕೌಶಲ್ಯ ಇದ್ದರೂ, ಅದೃಷ್ಟ-ಪರಿಸ್ಥಿತಿ ಅಡ್ಡಿಯಾಗಿದ್ದವು. ಕೈಲೊಂದು ಅಧಿಕೃತ
ನೌಕರಿ ಇರಲಿಲ್ಲ. ಸಮಾಜದ pseudo - ಸ್ಥಾನಮಾನಗಳು ಹತಾಶೆಯ ಅಂಚಿಗೆ ದಬ್ಬಿದವು.
ಸಾಮಾಜಿಕ ಜೀವನದಿಂದ ಸಂಪೂರ್ಣ ಅಜ್ಞಾತವಾಸಕ್ಕೆ ಜಾರಿದ.

ಒಂದು ದಿನ ಅವನ ಸಾವಿನ ಸುದ್ದಿ ಬಂತು. ನಾವುಗಳು ಅವನ ಅಂತಿಮ ಸಂಸ್ಕಾರಕ್ಕೆ ಹೋದೆವು.
ಇದ್ದಕ್ಕಿದ್ದಂತೆ ಸ್ಟ್ರೋಕ್ ಬಡಿಯಿತಂತೆ. ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯದಲ್ಲಿಯೇ
ಕೊನೆ ಉಸಿರೆಳೆದನಂತೆ. ಇಪ್ಪತ್ತ ನಾಲ್ಕನೆಯ ವಯಸ್ಸಿಗೆ ಬ್ರೇನ್-ಸ್ಟ್ರೋಕ್
ತಗುಲುತ್ತದೆಯೇ ಎಂದು ಡಾಕ್ಟರನ್ನು ಕೇಳಿದ್ದಕ್ಕೆ, ಇತ್ತೀಚಿಗೆ ಯುವಕರಲ್ಲಿ ಈ ರೀತಿಯ
ಕೇಸುಗಳು ಬರುತ್ತಿವೆ ಎಂದು ಹೇಳಿದರು. ಅಂತೂ ನಮ್ಮ ಪ್ರೀತಿಯ ತುಘಲಕ್, ಸ್ಟ್ರೋಕ್
ಬಡಿಯುವ ಹಂತಕ್ಕೆ ತಲೆ ಉಪಯೋಗಿಸಿದ್ದ.


‘Calling. sina’ ಎಂಬುದನ್ನು ನೋಡುತ್ತಿದ್ದಂತೆಯೇ ನನ್ನ ಕೈಗಳು ನಡುಗಿ ಹೋದವು. ಬಹುಶಃ
ಕನಸು ಕಂಡಿರಬೇಕು ಎಂದು ಎರೆಡೆರಡು ಬಾರಿ ಕೈ ಚಿವುಟಿಕೊಂಡೆ. ನೋವೇನೋ ಆಯ್ತು ಆದರೂ
ನಂಬಿಕೆ ಬರಲಿಲ್ಲ. ಈ ಕನಸುಗಳು ಕೂಡ ಒಮ್ಮೊಮ್ಮೆ ನಾಟ್ಕ ಆಡ್ತವೆ. ಸೈರಣೆಯನ್ನು
ಕಳೆದುಕೊಳ್ಳದೆ ಬೆಳಗಾಗುವವರೆಗೂ ಕಾದೆ. ಸೀದಾ ಗೆಳೆಯ ರವಿ ಕೆಲಸ ಮಾಡುತ್ತಿದ್ದ
ಟೆಲಿಫೋನ್ exchange ಗೆ ಹೋದೆ.

ನಡೆದದ್ದನ್ನೆಲ್ಲಾ ಅವನಿಗೆ ಹೇಳಿದೆ. ನನ್ನ ಲ್ಯಾಂಡ್ ಲೈನ್ ಗೆ ಬಂದಿರಬಹುದಾದ ಎಲ್ಲಾ
ಇನ್-ಕಮಿಂಗ್ ಕಾಲ್ ವಿವರಗಳನ್ನು ತೆಗೆದ. ಸೀನನ ಮೊಬೈಲಿನಿಂದ ಎರಡು ಕರೆಗಳು
ದಾಖಲಾಗಿದ್ದವು. ಮೊದಲನೆಯದು 3 : 44 am ಗೆ. ಎರಡನೆಯದು 4 : 02 am ಗೆ. ತಲೆ ತಿರುಗಿ
ಹೋಯ್ತು. ಮೊದಲು ಬಂದಿದ್ದ ಕರೆಯನ್ನು ರಿಸೀವ್ ಮಾಡಿದ ನೆನಪು ಇರಲಿಲ್ಲ. ಆದರೆ ಎರಡನೆ
ಬಾರಿ ಬಂದ ಕರೆಯನ್ನು ನನ್ನ ಕೈಯಾರೆ ರಿಸೀವ್ ಮಾಡಿದ್ದೆ. ಮೈ ಬೆವೆಯುತ್ತಿತ್ತು.

‘ಸುಮ್ಕಿರಪ್ಪ ಏನೇನೋ ಕಲ್ಪಿಸಿಕೊಳ್ಳಬೇಡ. ಸೀನನ ನಂಬರ್ ಇನ್ನೂ ಅವನ ಹೆಸರಿನಲ್ಲಿಯೇ
ಇದೆ. ಅಂದ್ರೆ ಬಹುಶಃ ಆ ನಂಬರ್ ಅನ್ನ, ಅವನ ಮನೆಯವರು ಯಾರಾದ್ರು ಬಳಸುತ್ತಿರಬಹುದು’
ಎಂದ.

ಸೀನನ ತಾಯಿಗೆ ಕರೆ ಮಾಡಿದೆವು. ಸೀನನ ತಮ್ಮ, ಫೋನು ಬಳಸುತ್ತಿರುವುದಾಗಿ ಹೇಳಿದರು. ಸೀನನ
ತಮ್ಮನನ್ನು ಕೇಳಿದ್ದಕ್ಕೆ ಹಳೆಯ ಸಿಂ-ಕಾರ್ಡ್ ಎಸೆದಿರುವುದಾಗಿಯು, ಕೇವಲ ಫೋನ್ ಮಾತ್ರ
ಬಳಸುತ್ತಿರುವುದಾಗಿಯು ಹೇಳಿದ. ಮತ್ತಷ್ಟು ತಲೆ ಕೆಟ್ಟು ಹೋಯ್ತು. ಹಂಗಾದ್ರೆ ಫೋನು
ಮಾಡಿದವರಾರು. ?

ಸೀನನ ನಂಬರಿಗೆ ಇದುವರೆಗೂ ಒಳ-ಹೊರ ಹೋಗಿ ಬಂದಿರುವ ಸಂಪೂರ್ಣ ಕರೆಗಳ ಮಾಹಿತಿಯನ್ನು
ಪ್ರಿಂಟ್ ತೆಗೆದ. ಅಲ್ಲಿ ಮತ್ತೊಂದು ಅಚ್ಚರಿ ಕಾದಿತ್ತು. ಸೀನ ಇಲ್ಲವಾದ ನಂತರ ಕಳೆದ
ಎರಡು ತಿಂಗಳು ಗಳಿಂದ ಯಾವೊಂದು ಕರೆಗಳು ಆ ನಂಬರಿನ ಹೆಸರಲ್ಲಿ ದಾಖಲಾಗಿರಲಿಲ್ಲ. ಕೊನೆಯ
ಎರಡು ಕರೆಗಳ ಹೊರತಾಗಿ. ನನಗಂತು ಸ್ವಲ್ಪ ಮಟ್ಟಿಗೆ ಗಾಬರಿಯಾಯಿತು.

‘ ಲೇ ಸೀನ ಏನು, ಆಕಾಶದಿಂದ ಇಳಿದು ಬಂದು ನಿಂಗೆ ಫೋನ್ ಮಾಡ್ತಾನೇನೋ. ? ಸುಮ್ಮನೆ
ಟೆನ್ಶನ್ ಮಾಡ್ಕೋ ಬೇಡ. ಎಲ್ಲೋ ಏನೋ ಮಿಸ್ ಆಗಿದೆ. ’ ರವಿ ಗದರಿಸಿದ. ಅವನು ಸುಮಾರು
ಹೊತ್ತು ಸಂಶೋಧನೆ ನಡೆಸಿ, ಸಂಬಂಧಪಟ್ಟವರನ್ನು ಸಂಪರ್ಕಿಸಿ ಒಂದಷ್ಟು ತಂತ್ರಜ್ಞಾನದ
ಮಾಹಿತಿಗಳನ್ನು ಹಿಡಿದು ಬಂದ.

‘ ಮೊಬೈಲಿನಿಂದ ಕಾಲ್ ಮಾಡಿದಾಗ ಅದು ಮೊದಲು ಹತ್ತಿರದ BTS (ಬೇಸ್ ಟ್ರನ್ಸಿವರ್
ಸ್ಟೇಷನ್) ತಲುಪುತ್ತದೆ. ಅಲ್ಲಿಂದ ಹತ್ತಿರದ ಟೆಲಿಫೋನ್ Exchange; ಅಲ್ಲಿಂದ ಜಿಲ್ಲಾ
TAX Exchange ರೀಚ್ ಆಗತ್ತೆ. ಜಿಲ್ಲಾ TAX Exchange ನಿಂದ ಬೆಂಗಳೂರಿನ HLR (ಹೋಂ
ಲೊಕೇಷನ್ ರಿಜಿಸ್ಟರ್) ಗೆ ರೂಟ್ ಆಗತ್ತೆ. ಇಲ್ಲಿಂದ ಪುನಃ ಇದೇ ಮಾದರಿಯಲ್ಲಿ ಕರೆ
ಮಾಡಿರುವ ನಂಬರ್ ಹುಡುಕಿಕೊಂಡು ಹೋಗಿ ಕನೆಕ್ಷನ್ ಫಾರ್ಮ್ ಆಗತ್ತೆ. ಮೊಬೈಲಿನಿಂದ ಸಂಪರ್ಕ
ಉಂಟಾದಾಗ ಅದರ ಸಿಂ ಕಾರ್ಡ್ ನಿಂದ LAI ( ಲೋಕೇಶನ್ ಏರಿಯಾ ಐಡೆಂಟಿಫಿಕೇಷನ್ ಕೋಡ್ )
ಅನ್ನೋ ಸಂಖ್ಯೆ, HLR ಗೆ ಟ್ರಾನ್ಸ್-ಮಿಟ್ ಆಗ್ತಾ ಇರುತ್ತೆ. ಹದಿನೈದು ಸೆಕೆಂಡುಗಳ ಕಾಲ
ಕನೆಕ್ಷನ್ ಜೀವಂತವಾಗಿದ್ದಲ್ಲಿ, LAI ಸಹಾಯದಿಂದ ಕರೆ ಮಾಡಿದವನ ವಿಳಾಸವನ್ನು ಕಂಡು
ಹಿಡಿಯಬಹುದು.

ನಿನಗೆ ಬಂದಿರುವ ಕರೆ ಕೂಡ ಬೆಂಗಳೂರಿನ HLR ನಿಂದಲೇ ರೂಟ್ ಆಗಿದೆ. ಆದರೆ ಲೊಕೇಷನ್
ಸರಿಯಾಗಿ ಟ್ರೇಸ್ ಮಾಡೋದಕ್ಕಾಗಲ್ಲ. ಅದರಿಂದ ಆಗುವ ಪ್ರಯೋಜನ ಕೂಡ ಏನಿಲ್ಲ. ಯಾವುದೋ
ಕನಸು ಕಂಡಿದ್ದೇನೆ ಅಂದುಕೊಂಡು ಇಲ್ಲಿಗೆ ಮರೆತುಬಿಡು. ಪುನಃ ಇದೇ ರೀತಿ ಆದರೆ ಯೋಚನೆ
ಮಾಡೋಣ. ಮೊದಲು ಆ ನಂಬರ್ ಕಿತ್ತು ಹಾಕೋದಕ್ಕೆ ಒಂದು ವ್ಯವಸ್ತೆ ಮಾಡಬೇಕು. ‘ ರವಿ ತನ್ನ
ಕೈಲಾದ ಸಹಾಯವನ್ನೂ, ಉಪದೇಶವನ್ನೂ ಮಾಡಿದ. ಅನಾಮಧೇಯ ಕರೆಗಳಿಗೂ ಹೆದರುವಂತಹ ಸ್ಥಿತಿ
ನನ್ನದಾಯಿತು. ಮತ್ತದೇ ನಂಬರ್ ಡಯಲ್ ಮಾಡಿದೆ.’ ಚಂದಾದಾರರು ವ್ಯಾಪ್ತಿ ಪ್ರದೇಶದ
ಹೊರಗಿದ್ದಾರೆ ‘ ಎಂಬ ಅದೇ ಹೆಣ್ಣಿನ ರಾಗ. ಈ ಮಾತುಗಳ ನಿಗೂಢತೆ ಮಾತ್ರ ತಿಳಿಯದಾದೆನು.