BH ರೋಡ್ ಅಜ್ಜಿ

B-H ರೋಡ್ ಪಕ್ಕದಲ್ಲಿಯೇ ಒಂದು ದೇವಸ್ಥಾನ ಇದೆ. BH ರೋಡ್ ಅಂದರೆ Bangalore to Honnavar ರೋಡ್ ಅಂತ. ತುಂಬಾ ಉದ್ದನೆಯ ಮತ್ತು ಪೇಮಸ್ ರೋಡು. ಈ ರಸ್ತೆಯಲ್ಲಿ, ಶಿವಮೊಗ್ಗದಿಂದ ಬೆಂಗ್ಳೂರ್ ಕಡೆಗೆ ಪಯಣಿಸುವಾಗ, ಭದ್ರಾವತಿ ಊರು ದಾಟಿದ ಮೇಲೆ, ಸುಮಾರು ಕಾಲ್ ಗಂಟೆಗೆ ಈ ಒಂದು ದೇವಸ್ಥಾನ ಕಾಣ್ಸತ್ತೆ. ದೇವಸ್ಥಾನದ ಸುತ್ತ ಮುತ್ತ ದೂರದವರೆಗೂ ಯಾವ ಮನೆ-ಮಹಲು-ಮಠ-ಮನುಷ್ಯರುಗಳಿರುವ ಕುರುಹುಗಳಿಲ್ಲ. ರಸ್ತೆ ಪಕ್ಕದಲ್ಲಿದೆ ಅನ್ನೋದೊಂದು ಬಿಟ್ಟರೆ, ದೇವಸ್ಥಾನವು ನಿರ್ಜನ ಪ್ರದೇಶದಲ್ಲಿಯೇ ಮರ-ಗಿಡ-ಬಟಾ ಬಯಲುಗಳ ನಡುವಿದೆ.

ದೇವಸ್ಥಾನದ ಕಾಂಪೌಂಡ್ ಹೊರಭಾಗದಲ್ಲಿ ಒಂದು ಅಜ್ಜಿ ಕುಳಿತಿರುತ್ತದೆ. ' ಎಲ್ಲಾ ದೇವಸ್ಥಾನಗಳ ಹೊರಗೂ ಅಂಟಿಕ್ ಪೀಸ್ ಗಳ ಥರ ಬಿಕ್ಷುಕರು ಕುಳಿತಿರ್ತಾರೆ; ಅದ್ರಲ್ಲಿ ವಿಶೇಷತೆ ಏನಿದೆ ' ಅನ್ನಬಹುದು. ಹೌದು ಅದ್ರಲ್ಲಿ ಏನೂ ವಿಶೇಷತೆ ಇಲ್ಲ. ಹಾಗೇನೆ ಇದ್ರಲ್ಲೂ ಏನು ವಿಶೇಷತೆ ಇಲ್ಲ.

ನಾನು ಅತ್ಯಂತ ಚಿಕ್ಕ ವಯಸ್ಸಿನವನು ಇದ್ದಾಗಿನಿಂದಲೂ ಈ ಅಜ್ಜಿಯನ್ನು ನೋಡುತ್ತಲೇ ಬಂದಿದ್ದೇನೆ. ನಾ ದೊಡ್ಡವನಾಗ್ತಾ ಬಂದ್ರು; ಅಜ್ಜಿ ಮಾತ್ರ ಅಜ್ಜಿಯಾಗಿಯೇ ಇದ್ರು.

ಕಾಲ ಹೋಗ್ತಾ...; ಹೋಗ್ತಾ...; ಅಜ್ಜಿ ಕುಳಿತಿರುತ್ತಿದ್ದ ಖಾಲಿ ಜಾಗದಲ್ಲಿ ಒಂದು ಶೆಟರ್ ಸೃಷ್ಟಿಯಾಯ್ತು. ಅಜ್ಜಿ ಕುಳಿತಿರುತ್ತಿದ್ದ ಉದ್ದಗಲಕ್ಕೆ ಸರಿ ಹೊಂದುವಂತೆ; ನಾಯಿ ಗೂಡಿನಂತಹ ಪುಟ್ಟ ಶೆಡ್ಡು ಅದು. ಮಳೆ ಇರಲಿ; ಬಿಸಲಿರಲಿ; ಅದೇನು ಆಶ್ಚರ್ಯವೋ ಎಂಬಂತೆ ಅಜ್ಜಿಯ ದರ್ಶನ ಒಂದು ಸಾರಿಯೂ ತಪ್ಪುತ್ತಿರಲಿಲ್ಲ. ಅದು ಅಲ್ಲೇ ಪಿಕ್ಸು. ಹತ್ತಾರು ವರ್ಷಗಳ ದೂರದ ಸಂಬಂಧ ಇದು. ತರೀಕೆರೆಯಲ್ಲಿದ್ದ ನನ್ನ ಅಮ್ಮಮ್ಮ(ಅಜ್ಜಿ) ಮನೆಗೆ ಹೋಗುವಾಗೆಲ್ಲಾ ದಾರಿಯಲ್ಲಿ ಈ ಅಜ್ಜಿಯನ್ನು ನೋಡುತ್ತಿದ್ದೆ. ಕೆಂಪು ಬಸ್ಸಿನ ಕಿಟಕಿ ಗಾಜಿನ ಒಳಗೆ ನಾನು; ಶೆಡ್ ಒಳಗೆ ಅಜ್ಜಿ.

ಅಕಸ್ಮಾತ್ ಅಪ್ಪನ ಜೊತೆ ಬೈಕಲ್ಲಿ ಹೋಗುತ್ತಿದ್ದಾಗ , ಇಲ್ಲಿ ನಿಂತು ಅಜ್ಜಿಗೆ ಏನನ್ನಾದರು ಕೊಡುತ್ತಿದ್ದೆವು. ಹತ್ನೇ ಕ್ಲಾಸು ರಿಸಲ್ಟ್ ಬಂದ ದಿನ, ಸ್ವೀಟು ಕಟ್ಟಿಸಿಕೊಂಡು; ಅಜ್ಜಿ ಮನೆಗೆ ಹೋಗುವಾಗ ಆಂಟಿಕ್ ಪೀಸಿನಂತಿದ್ದ ಈ ಅಜ್ಜಿಗೂ ಕೊಟ್ಟಿದ್ದ ನೆನಪು.

ಬಸ್ಸಲ್ಲಿ ಸಂಚರಿಸುವಾಗೆಲ್ಲಾ ... ಆ ಒಂದು ಜಾಗ ಬರುವ ಸೂಚನೆ ಸಿಗುತ್ತಿದ್ದಂತೆಯೇ; ಹಾ ಬಂತು-ಬಂತು-ಬಂತು; ಎನ್ನುವ ಹುಡುಗಾಟಿಕೆಯ ಸಹಜ ಕುತೂಹಲವು ನಾನು ದೊಡ್ಡವನಾಗುತ್ತಲೂ ಹಾಗೆಯೇ ಉಳಿದುಕೊಂತು. ನನ್ನ ಮತ್ತು ಅಜ್ಜಿಯ ಭಾವನಾತ್ಮಕ ಸಂವಹನ ಇಷ್ಟಕ್ಕೇ ಮೀಸಲು.

ಹೀಗೆ ಬಸ್ಸೊಳಗೆ ನಾನು; ಗೂಡೊಳಗೆ ಅಜ್ಜಿ.

ಹೀಗೆ ಕೆಲವು ವರುಷಗಳು ಕಳೆದವು. ಒಂದ್ ಸಾರಿ; ಗೂಡೊಳಗಿಂದ ಅಜ್ಜಿ ಮಾಯ ಆಯ್ತು, ಕಾಣಿಸಲಿಲ್ಲ. ಇನ್ನೂ ಸ್ವಲ್ಪ ದಿನ ಆದ ಮೇಲೆ, ಶೆಡ್ ಕೂಡ ಮಾಯ ಆಯ್ತು. ವಿಚಾರಿಸಿದಾಗ; ಅಜ್ಜಿ ಇಲ್ಲ ಅಂದ್ರು.

ಅಲ್ಲೊಂದು ಅಜ್ಜಿ ಇತ್ತು ಎನ್ನುವ ಯಾವ ಕುರುಹುಗಳಿಲ್ಲದ ಮಟ್ಟಿಗೆ, ಅಲ್ಲಿ ಏನೂ ಇಲ್ಲವಾಯ್ತು. ಆದ್ರೂ, ಪ್ರತಿ ಸಾರಿ ಆ ರಸ್ತೆಯಲ್ಲಿ ಸಾಗುವಾಗ; ಆ ಜಾಗ ಅಯಸ್ಕಾಂತದಂತೆ ಸೆಳೆಯುತ್ತದೆ. ಏನೋ ಇದೆ ಅನ್ನಿಸತ್ತೆ. ಅಪ್ರಯತ್ನವಾಗಿ ಮಾಮೂಲಿನಂತೆ ಕೈಗಳು ಎದೆ ಮುಟ್ಟಿಕೊಂಡು ನಮಸ್ಕರಿಸುತ್ತವೆ. ಎನೂ ಇಲ್ಲವಾಗಿಯೂ; ಅಪರೂಪದ್ದೇನೋ ಕಾಣುವ ವಿಚಿತ್ರ ಅನುಭವ.

Read more posts on childhood
ಕನಸೂರು, ನನ್ನೆಲ್ಲಾ ಕೌತುಕಗಳ ಜೋಳಿಗೆ, ಬರಹಗಳಿಗೆ ದೀವಿಗೆ. ಕಥೆ, ಕವನ ಅಥವಾ ಯಕಃಶ್ಚಿತ್ ಅನ್ನಿಸುವ ಬರವಣಿಗೆಗಳಿರಬಹುದು. ತೋಚಿದ್ದು; ಗೀಚಿದ್ದು;

ಓದುಗನ ಸಹಾನುಭೂತಿ ಮತ್ತು ಪ್ರೀತಿ ಇಲ್ಲದಿದ್ದರೆ, ಬರೆದದ್ದನ್ನು ಹಂಚಿಕೊಳ್ಳೋದಕ್ಕೂ ಭಯ ಆಗತ್ತೆ. ನಿಮ್ಮ ಈ ಓದಿನ ಆಯ್ಕೆಯನ್ನು ಗೌರವಿಸುತ್ತೇನೆ. Thank you :)