ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಬಹಳ ದಿನಗಳ ನಂತರವೂ, ಸೊಹೈಲಾ ಅದರ ಬಗ್ಗೆ
ನೆನೆಯುತ್ತಾ ಈ ರೀತಿ ಬರೆಯುತ್ತಾಳೆ. (ಸೊಹೈಲ ಮತ್ತು ಅವಳ ಗೆಳತಿಯನ್ನು ಬೆಟ್ಟದ ಮೇಲೆ
ಹೊತ್ತು ಹೋಗಿ ಅತ್ಯಾಚಾರ ನಡೆಸಿರಲಾಗುತ್ತದೆ.)

‘ ಅಭದ್ರತೆ; ಅಸಹಾಯಕತೆ; ದೌರ್ಬಲ್ಯ; ಭಯ ಮತ್ತು ಕೋಪ, ಇವುಗಳ ಜೊತೆ ನಾನು ಯಾವಾಗ್ಲೂ
ಹೋರಾಡ್ತಾನೆ ಇರ್ತೇನೆ. ಕೆಲವು ಸಾರಿ ಒಬ್ಬಳೇ ನಡ್ಕೊಂಡ್ ಹೋಗುವಾಗ, ಹಿಂದೆ ಇಂದ ಬಂದ
ಯಾವುದೋ ಹೆಜ್ಜೆ ಸಪ್ಪಳದ ಸದ್ದು ನನ್ನಲ್ಲಿ ಭಯ ಮೂಡಿಸತ್ತೆ. ಅದೆಲ್ಲಿ, ಕಿರುಚಿ
ಬಿಡುತ್ತೇನೊ ಅಂತ ಹೆದರಿ ನನ್ನ ತುಟಿಗಳನ್ನ ಬಿಗಿದು ಬಿಡುತ್ತೇನೆ. ಕುತ್ತಿಗೆ ಸುತ್ತುವ
ಸ್ಕಾರ್ವ್ಸ್ ಹಾಕೋದಕ್ಕೂ ಹಿಂಜರಿಯುತ್ತೇನೆ. ಯಾಕಂದ್ರೆ ಅದ್ಯಾರೋ ನನ್ನ ಕುತ್ತಿಗೆ
ಹಿಸುಕುತ್ತಿರುವಂತೆ ಭಾಸವಾಗತ್ತೆ. ಸೌಹಾರ್ದ ಸ್ಪರ್ಷಗಳಲ್ಲೂ ಕಾಮದ ವಾಸನೆ ಬರತ್ತೆ. ’

ಎರಡು ಕ್ಷಣದ ಕಾಮ ತೃಷೆ, ಒಬ್ಬರ ಜೀವನವನ್ನೇ ಹೇಗೆ ಪ್ರಭಾವಿಸಬಲ್ಲದು. ಅದರಲ್ಲೂ ಆಗತಾನೆ
ಪ್ರಪಂಚಕ್ಕೆ ಪರಿಚಿತಗೊಳ್ಳುತ್ತಿರುವ ಯುವ ಮನಸ್ಸು, ಮತ್ತೆಂದೂ
ಚೇತರಿಸಿಕ್ಕೊಳ್ಳಲಾಗದಂತೆ ವಿಕಾರಗೊಂಡುಬಿಡುತ್ತದೆ. ರೇಪ್ ಅಂದ್ರೆ ಕೇವಲ ಒಬ್ಬಳ
ಒಪ್ಪಿಗೆ ಇಲ್ಲದೆ, ಆ ದೇಹದ ಮೇಲೆ ನಡೆಯುವ ಸೆಕ್ಸು ಮಾತ್ರ ಅಲ್ಲ. ಸಿಕ್ಕ ಅವಕಾಶದಲ್ಲಿ
ಶೋಷಿಸಿಬಿಡಬೇಕು, ಅನ್ನುವ ವಿಕೃತ ಮನಸ್ಥಿತಿ. ಅದು ನಮ್ಮಂತುಹುದೇ ಒಂದು ಮನುಷ್ಯ
ಜೀವಿಯನ್ನ ಮಾನಸಿಕವಾಗಿ ಹೊಸಕಿ ಹಾಕುವ ಪ್ರಕ್ರಿಯೆ.

ಬಹುಷಃ ಹಳೇ ಸಿನಿಮಾಗಳಲ್ಲಿ ನೋಡಿರಬಹುದು. ಅತ್ಯಾಚಾರಕ್ಕೆ ಒಳಗಾದ ಒಂದು ಹೆಣ್ಣಿನ
ಪಾತ್ರಕ್ಕೆ ಸಿನಿಮಾದ ಮಧ್ಯದಲ್ಲಿಯೇ ಒಂದು ಗತಿ ಕಾಣಿಸಿ ಬಿಡ್ತಾರೆ. ಯಾಕಂದ್ರೆ ಕಥೆ
ಹೇಳುವವನಿಗೆ ಆ ‘ಪಾತ್ರ’ ತುಂಬಾ ಅಸಹ್ಯ ಹುಟ್ಟಿಸುತ್ತಾ ಇರಬಹುದು. ಅದಕ್ಕೆ ಕಥೆಯೊಳಗೆ,
ದ್ವೇಷ ತೀರಿಸಿಕೊಳ್ಳುವ ಹೆಸರಲ್ಲೋ. ? ಏನೋ. ? ಒಟ್ಟಾರೆ ಆ ಪಾತ್ರಕ್ಕೆ ಮುಕ್ತಿ ಸಿಗೋದು
ಸಾವಿನ ಜೊತೆಗೆ. ಇದು ಕಥೆ ಹೇಳುವವನ ಮೈಂಡ್ ಸೆಟ್ ಅಲ್ಲಾ. ? ಕುಳಿತು ನೋಡುವ ಪ್ರೇಕ್ಷಕನ
ವಿಚಾರಧಾರೆಯ ಪ್ರತಿಬಿಂಬ.

ರೇಪ್ ಆಯ್ತು ಅಂದ್ರೆ, ಅದಕ್ಕೊಂದು ಹ್ಯಾಪಿ ಎಂಡಿಂಗ್ ಅನ್ನೋದನ್ನ, ಈ ಮನಸ್ಸುಗಳು
ಒಪ್ಪೋದಿಲ್ವಲ್ಲಾ..? ಅವಳು ಕಳಂಕಿತಳು. ಅಲ್ಲಿಗೆ ಅವಳ ಜೀವನ ಮುಗಿದಂತೆಯೇ. ಈ ವಿಕೃತಿಯ
ಬಗ್ಗೆ ಸೋಹೈಲಾ ಈ ರೀತಿ ಬರೆಯುತ್ತಾಳೆ.

‘ ನಾನು ಜೀವಂತವಾಗಿರುವುದೇ ನನ್ನ ಪಾಲಿಗೆ ಅತ್ಯಂತ ಸಂತಸದಾಯಕ ಸುದ್ದಿ. ಹೌದು ರೇಪ್
ಅನ್ನೋದು ಕ್ರೌರ್ಯದ ಪರಮಾವಧಿ. ಆದರೆ ಬದುಕು ಕೂಡ ಅಷ್ಟೇ ಮುಖ್ಯ ವಾದದ್ದು. ನನ್ನಂತಹ
ಹೆಣ್ಣಿಗೆ ಬದುಕಿನ ಹಕ್ಕನ್ನು ನಿರಾಕರಿಸೋದೆ ಆದಲ್ಲಿ, ನಮ್ಮಲ್ಲೇ ಏನೋ ಕೊರತೆ ಇದೆ.
ನಮ್ಮ ಮೌಲ್ಯಗಳಲ್ಲೇ ಅದೇನೊ ದೋಷ ಇದೆ. ’

ಹೌದು ಆಲ್ವಾ. ನಮ್ಮ ಮೌಲ್ಯ ವ್ಯವಸ್ಥೆ ನಲ್ಲೇ ದೋಷ ಇದೆ. ಅದು ಯಾರೇ ಆಗಿರಲಿ.
ತಮ್ಮದಲ್ಲದ ತಪ್ಪಿಗೆ ‘ಕಳಂಕಿತರು’ ಅಂತ ಪಟ್ಟ ಕಟ್ಟುವವರಿಗೆ ಧಿಕ್ಕಾರವಿರಲಿ. ಧರ್ಮ,
ಜಾತಿ, ದೇಶ, ಸಂಸ್ಕೃತಿಗಳ ಇತಿಹಾಸ ಮತ್ತು ಸೂಕ್ಷ್ಮತೆಗಳು ಏನೇ ಇರಲಿ. ಆದರೆ ತಪ್ಪೇ
ಮಾಡದವರಿಗೆ ಮೈಲಿಗೆಯ ಸೋಂಕು ತಗುಲಿಸುವುದು ಯಾವ ನ್ಯಾಯ. ? ಎಲ್ಲಕ್ಕಿಂತ ಮಿಗಿಲಾದ
ಮಾನವೀಯತೆ ಅನ್ನೋದು ಒಂದು ಇರಬೇಕಲ್ಲವೆ. ?

ನಮಗಳಿಗೆ ‘ಫನ್’ ಇಲ್ಲದಿದ್ದರೂ ಸಾಕು, ಅಂತವರನ್ನ ಸಾಧ್ಯ ಆದಷ್ಟು ಅಲಕ್ಷಿಸುತ್ತೇವೆ.
ಅಂತಹದರಲ್ಲಿ ಕೆಲವರಿಂದಾಗಿ ನಮಗೆ ಮುಜುಗರ ಆಗತ್ತೆ ಅನ್ನುವ ಸಂದರ್ಭ ಬಂದರೆ ನಮ್ಮ
reaction ಹ್ಯಾಗಿರತ್ತೆ. ? ನಾವು ತುಂಬಾ ಇಂಟೆಲಿಜೆಂಟುಗಳು ಅಂತಹ ಪರಿಸ್ತಿತಿ ಬಂದಾಗ,
ಸ್ವಲ್ಪವೂ ಇರಿಸು-ಮುರಿಸಾಗದಂತೆ, ಯಾರ ಗಮನಕ್ಕೂ ಬಾರದಂತೆ ಅಂತವರನ್ನು avoid ಮಾಡಿ
ಪಾರಾಗಿ ಬರುತ್ತೇವೆ. ಇಂತಹ ಪೂರ್ವಾಗ್ರಹ ಪೀಡಿತ ನಿಲುವುಗಳು ನಿಲ್ಲಬೇಕು. ಅತ್ಯಾಚಾರದ
ಸಮಯದಲ್ಲಿ ಸೊಹೈಲ್ ತನ್ನನ್ನು ಜೀವಂತವಾಗಿ ಇರಿಸಿಕೊಳ್ಳಲು ಏನೆಲ್ಲಾ ಮಾಡಿದಳು ಅನ್ನೋದರ
ಬಗ್ಗೆ ಬರೆಯುವಳು.

‘ ನಮ್ಮನ್ನು ಕೊಲ್ಲಬೇಕೊ, ಬೇಡವೋ ಅನ್ನೋದನ್ನ ಅವರಿನ್ನೂ ನಿರ್ಧಾರ ಮಾಡಿರಲಿಲ್ಲ. ನಾವು
ಬದುಕಿ ಉಳಿಯುವುದಕ್ಕೋಸ್ಕರ ಏನೆಲ್ಲಾ ಮಾಡಬಹುದೋ ಅದನ್ನೆಲ್ಲಾ ಮಾಡಿದೆವು. ನನ್ನ ಗುರಿ
ಇದ್ದದ್ದು ಒಂದೆ. ನಾನು ಬದುಕಬೇಕು. ಅದರ ಮುಂದೆ ಮತ್ಯಾವುದೂ ನನಗೆ ಮುಖ್ಯ ಅಂತ
ಅನಿಸಲಿಲ್ಲ. ಮೊದಲು ಅವರ ಜೊತೆಗೆ ದೈಹಿಕವಾಗಿ ಹೋರಾಡಿದೆ. ಕೋಪ, ಆಕ್ರೋಶ, ಅರಚಾಟಗಳು
ಉಪಯೋಗಕ್ಕೆ ಬರಲ್ಲ ಅಂತ ಗೊತ್ತಾದ ಮೇಲೆ ನಾನು ಸುಮ್ಮನಾಗಿ ಬಿಟ್ಟೆ. ಪ್ರೀತಿ, ಅನುಕಂಪಗಳ
ಬಗ್ಗೆ ತಿಳಿಸಿ ಹೇಳಿದೆ. ಮಾನವೀಯತೆ ಬಗ್ಗೆ, ನಾನೂ ಕೂಡ ನಿಮ್ಮಂತೆ ಒಬ್ಬಳು ಮನುಷ್ಯ
ಜೀವಿ, ನಿಮ್ಮ ಒಳಗೆ ಕೂಡ ನನ್ನಂತಹುದೇ ಜೀವ ಇದೆ, ಅನ್ನೋದನ್ನ ಅವರಿಗೆ ಅರ್ಥ
ಮಾಡಿಸೋದಕ್ಕೆ ಪ್ರಯತ್ನ ಪಟ್ಟೆ. ಇದಾದ ಮೇಲೆ ಯಾರೆಲ್ಲಾ ನನ್ನನ್ನ ರೇಪ್ ಮಾಡ್ತಾ
ಇರಲಿಲ್ಲವೋ ಅವರಾದರೂ ನನ್ನ ಬಗ್ಗೆ ಸ್ವಲ್ಪ ಸೌಮ್ಯವಾಗಿ ವರ್ತಿಸೋದಕ್ಕೆ
ಪ್ರಾರಂಭಿಸಿದರು. ’

ಒಂದು ಇಂಗ್ಲೀಷ್ ನಿಯತಕಾಲಿಕದಲ್ಲಿ, ಅತ್ಯಾಚಾರದ ಸಂದರ್ಭದಲ್ಲಿ ತಮ್ಮನ್ನು ತಾವು
ಎದುರಾಳಿಯಿಂದ ರಕ್ಷಿಸಿಕೊಳ್ಳುವುದಕ್ಕೆ ಏನೆಲ್ಲಾ ಮಾಡಬಹುದು ಅನ್ನುವುದರ ಬಗ್ಗೆ
ಬರೆದಿದ್ದನ್ನ ಓದಿದ್ದೆ. ಸಹಜ ಕುತೂಹಲದಿಂದಲೇ ಅದನ್ನು ಓದಿದ್ದೆ.

‘ ಮೊದಲನೆಯದಾಗಿ ಕೋ ಆಪರೇಟ್ ಮಾಡಬೇಕು’ ಅಂತ ಬರೆದಿದ್ದರು. ಮಾನಸಿಕವಾಗಿ ಅವರ ಮೇಲೆ
ಪ್ರಭಾವ ಬೀರಬೇಕು. ‘ ನಾನು ನಿನ್ನ ತಂಗಿಯೋ, ತಾಯಿಯೋ ಅಥವಾ ಗೆಳತಿಯೋ ಆಗಿದ್ದಿದ್ದರೆ,
ನನ್ನ ಬಳಿ ನೀನು ಇಷ್ಟು ಕ್ರೂರವಾಗಿ, ಅಸಭ್ಯವಾಗಿ ವರ್ತಿಸುತ್ತಿದ್ದೆಯಾ. ? ಯೋಚಿಸು.
ನಾನು ಕೂಡ ನಿನ್ನಂತೆಯೇ ಒಬ್ಬಳು ಮನುಷ್ಯ ಜೀವಿ. ದಯವಿಟ್ಟು ನನಗೆ ಬದುಕೋದಕ್ಕೆ ಅವಕಾಶ
ಮಾಡಿಕೊಡು’. ಅಂತೆಲ್ಲಾ ಗೋಗರಿಯಬೇಕಾಗಿ ಬರೆದಿದ್ದರು.

ಕಾಮದ ಉತ್ತುಂಗದಲ್ಲಿ ಇರುವವರಿಗೆ, ಅದರಲ್ಲೂ ಈ ಅವಕಾಶ ಮತ್ತೆ ಸಿಗಲ್ಲ ಅಂತ ಮುಗಿ
ಬಿದ್ದಿರುವವರಿಗೆ ಇವೆಲ್ಲಾ ಅರ್ಥವಾಗಿ, ವರ್ಕೌಟು ಆಗುವ ಪ್ರಾಬಬಿಲಿಟಿ ತುಂಬಾ ಕಡಿಮೆ.
ಆದರೂ ಬದುಕುವ, ಬಚಾವಾಗುವ ಯಾವ ಆಪ್ಷನ್ ಗಳನ್ನೂ ಕೈ ಬಿಡುವಂತಿಲ್ಲ. ಕಟುಕನೊಳಗೂ ಒಬ್ಬ
ಮನುಷ್ಯನಿದ್ದಾನೆ ಅಂತ ಫಿಲಾಸಫಿ ಹೇಳೋದಿಲ್ಲ. ಅಕಸ್ಮಾತ್ ಲಕ್ ಚೆನ್ನಾಗಿದ್ದು,
ಕಟುಕನಲ್ಲಿಯೂ ಒಬ್ಬ ಮೂಢನಿರಬಹುದು. ಅದು ವರದಾನವಾಗಬಹುದು. ಎದುರಾಳಿ ಯೋಚಿಸೋದಕ್ಕೆ ಅಂತ
ಕೆಲವೇ ಸೆಕೆಂಡುಗಳು ಪಾಜ್ ಕೊಟ್ಟರೂ, ನಿಮ್ಮ ಕಾರ್ಯ ಸಾಧಿಸಿ ಪಾರಾಗಬಹುದು.

ಅತ್ಯಾಚಾರದ ನಂತರದ ಕಾನೂನು ಕರ್ಮ ಗಳಿಗೆ ಹೊರಳಿದರೆ ಅದು ಅತ್ಯಾಚಾರಕ್ಕಿಂತಲು ಹೇಸಿಗೆ
ಹುಟ್ಟಿಸುವಂತಿದೆ. ಬಲಿಪಶು ಆಗಿರುವವರು ಹತಾಶರಾಗಿ ತಮ್ಮ ಹೋರಾಟದಿಂದ ಹಿಂದೆ ಸರಿಯುವ
ಎಲ್ಲಾ ಗಂಡು ಪ್ರಯತ್ನಗಳೂ ಈ ಹಂತದಲ್ಲಿ ನಡೆಯುತ್ತವೆ. ತನ್ನ ಪೋಲೀಸ್ ವಿಚಾರಣೆಯ
ಅನುಭವವನ್ನು ಸೊಹೈಲ್ ಬರೆಯುವಳು.

‘ ಪೋಲೀಸರು ಸಂವೇದನಾರಹಿತರಾಗಿದ್ದರು. ನನ್ನ ಪರಿಸ್ಥಿತಿಯ ಅವಹೇಳನ ಮಾಡಿದರು. ನನ್ನನ್ನೇ
ತಪ್ಪಿತಸ್ಥಳನ್ನಾಗಿ ಮಾಡಲು ಪ್ರಯತ್ನಿಸಿದರು. ಅವರು ಕೇಳಿದಾಗ ನಾನು ಎಲ್ಲವನ್ನೂ
ನೇರವಾಗಿ ಹೇಳ್ದೆ. ನಾನೊಬ್ಬಳು ನಾಚಿಕೆ ಇಲ್ಲದವಳು, ಸಂಕೋಚ ಅರಿಯದವಳು ಅಂತ ಪುಕಾರು
ಎಬ್ಬಿಸಿದರು. ’

ಇದು ಕಟು ವಾಸ್ತವ. ಸೈನ್ಯಕ್ಕೆ ಸಂಬಂಧ ಪಟ್ಟ ಸಪರೇಟ್ ವಿಭಾಗ ‘ಕೋರ್ಟ್ ಮಾರ್ಷಲ್’
ಇರುವಂತೆ, ಅತ್ಯಾಚಾರ ಮತ್ತಿತರ ಸೆನ್ಸಿಟೀವ್ ಕ್ರೈಮ್ ಗಳನ್ನು ನಿಭಾಯಿಸಲು ಸೂಕ್ಷ್ಮಾತಿ
ಸೂಕ್ಷ್ಮ ಯುನಿಟ್ ಒಂದು ಇರಬೇಕೆಂಬುದು ನನ್ನ ಅಭಿಪ್ರಾಯ. ಯಾಕಂದ್ರೆ ‘ರೇಪ್’ ಅನ್ನು
ಕಾನೂನಿನ ವ್ಯಾಕರಣದಲ್ಲಿ ಒಂದೇ ಸಾಲಿನಲ್ಲಿ ನಿರೂಪಿಸಿ, ಸಾಧಿಸಲು ಸಾಧ್ಯವಿಲ್ಲ. ಸೆಕ್ಸು
ಒಪ್ಪಿಗೆ ಇದ್ದು ನಡೆದಿರುವಂತದ್ದೋ ಅಥವಾ ಅತ್ಯಾಚಾರವೋ ಎಂದು ನಿರ್ಧಾರಕ್ಕೆ ಬರಲು
ಕಾನೂನಿಗೆ ಅದರದ್ದೇ ಆದ ತೊಡಕುಗಳಿವೆ. ಒಟ್ಟಿನಲ್ಲಿ ಅತ್ಯಾಚಾರಕ್ಕೆ ಒಳಗಾದವರು ಮತ್ತು
ಸಂಬಂಧಪಟ್ಟವರು ಧೈರ್ಯವಾಗಿ ಕೇಸ್ ಫೈಲ್ ಮಾಡುವಂತಾದರೆ, ಮತ್ತು ಅಷ್ಟೂ ಜನರ
ಪ್ರೈವೇಸಿಯನ್ನು ಗೌರವಿಸಿ, ವೈಜ್ಞಾನಿಕವಾಗಿ ವಿಚಾರಣೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ
ಆಗುವಂತಾದರೆ, ಈ ದಿಟ್ಟಿನಲ್ಲಿ ಅರ್ಧ ದೂರ ನಡೆದು ಬಂದಂತೆ.

ಸಿಕ್ಕಿ ಬೀಳುತ್ತೇನೆ, ಸಿಕ್ಕಿ ಬಿದ್ದಾಗ ಘೋರ ಶಿಕ್ಷೆ ಆಗುತ್ತೆ ಅನ್ನುವ ಭರವಸೆಯನ್ನು,
ತಪ್ಪು ಮಾಡುವವನಿಗೆ ನಮ್ಮ ಕಾನೂನು ವ್ಯವಸ್ಥೆ ಕೊಟ್ರೆ, ತಪ್ಪು ಮಾಡುತ್ತಿರುವವನು,
ತಪ್ಪು ಮಾಡುವ ಮುನ್ನ, ಮತ್ತೊಮ್ಮೆ ಆಲೋಚಿಸುವಂತಾಗಬಹುದೇನೋ. ? ಅದಕ್ಕೆ ಅತ್ಯಂತ ಕಠಿಣ
ಶಿಕ್ಷೆ ಮತ್ತು ಪ್ರಾಯೋಗಿಕವಾಗಿ ಅದು ಜರೂರತ್ತಿನ ಸಮಯದಲ್ಲಿ ಜಾರಿಗೆ ಬರಬೇಕು.

ಏನೇ ಮಾಡಿದರೂ ಈ ದುರಂತವನ್ನು ನಿಯಂತ್ರಣಕ್ಕೆ ತರಬಹುದೇ ಹೊರತು ನಿರ್ಮೂಲನೆ ಆಗದ ಮಾತು.
ಅದರಲ್ಲೂ ನಮ್ಮ ಲೈಫ್ ಟೈಮ್ ನಲ್ಲಂತೂ ಕಷ್ಟಸಾಧ್ಯ. ಅದಕ್ಕೆ ಸಮಾನತೆಗಾಗಿ, ನ್ಯಾಯಕ್ಕಾಗಿ
ಹೋರಾಡಿ ಅಥವಾ ಸುಮ್ಮನಿರಿ, ಆದರೆ ‘ನಿಮ್ಮ ಹುಷಾರಲ್ಲಿ ನೀವು ಯವಾಗಲೂ ಇರುವುದು
ಒಳ್ಳೆಯದು ’ ಅನ್ನೋದು ನನ್ನ ಆತ್ಮೀಯ ನುಡಿ. ಕಟ್ಟ ಕಡೆಯದಾಗಿ ಸೊಹೈಲ ಬರೆಯುವಳು

‘ ಎಲ್ಲಿವರೆಗೂ ಈ ಪ್ರಪಂಚದಲ್ಲಿ ಸಂಬಂಧಗಳ ಬುನಾದಿ ಬದಲಾಗೋದಿಲ್ವೋ. ? ಎಲ್ಲಿವರೆಗೂ
ಒಂದು ಹೆಣ್ಣನ್ನ ಗಂಡಿನ ಸ್ವತ್ತು ಅನ್ನುವಂತೆ ಕಾಣುವ ಪದ್ಧತಿ ಬದಲಾಗೋದಿಲ್ವೋ. ?
ಅಲ್ಲಿವರೆಗೂ ನಾವು ಒಂದು ನಿರಂತರವಾದ ಭಯದಲ್ಲಿ ಬದುಕಬೇಕಾಗುತ್ತೆ. ’ ಅಂತಹದ್ದೊಂದು ಭಯ
ಬೇಕು ಅನ್ಸತ್ತೆ.

ಯಾಕಂದ್ರೆ ಹೆಣ್ಣನ್ನ ಕಾಡುತ್ತಿರುವುದು ಕೇವಲ ‘ರೇಪು’ ಮಾತ್ರ ಅಲ್ಲ. ಇದಕ್ಕೆ
ಹೊಂದಿಕೊಂಡಿರುವ ಮಿನಿ ಸೋಷಿಯಲ್ ಈವಿಲ್ ಗಳು ಬಹಳಷ್ಟು ಇವೆ. ಆಸಿಡ್ ದಾಳಿಗಳು,
ವೇಶ್ಯಾವಾಟಿಕೆ, ಮೊಲೆಸ್ಟೇಷನ್ನುಗಳು, ವರದಕ್ಷಿಣೆ, ಕೌಟುಂಬಿಕ ಹಲ್ಲೆಗಳು, ಮೊಬೈಲ್
ಟಾರ್ಚರ್ ಇತ್ಯಾದಿ ಇತ್ಯಾದಿ. ಸಮಸ್ಯೆಗಳಿಗೆ ಪರಿಹಾರ ಇರೋದು ಒಂದು ದಿನದ ಆವೇಶ,
ಆಕ್ರೋಶದಲ್ಲಿ ಅಲ್ಲ. ನಮ್ಮ ಆಲೋಚನೆಯ ರೀತಿಯನ್ನ ಪ್ರಭಾವಿಸುತ್ತಿರುವ ಮೂಲಗಳು
ಸುತ್ತ-ಮುತ್ತಾ ಬಹಳಷ್ಟಿವೆ.

ವ್ಯವಸ್ಥೆಯಲ್ಲಿ ಬದಲಾವಣೆಯ ಭರವಸೆಗಳು ಬರೋವರೆಗೂ. ಹರಕೆಯ ಕುರಿ ಆಗದೆ, ನಿಮ್ಮ
ಹುಷಾರಲ್ಲಿ ನೀವು ಇರೋದು ಒಳ್ಳೇದು. ‘ ಮೆಟ್ಟಿ ನಿಲ್ಲುವ ಧೈರ್ಯ ಇದ್ದವರಿಗೆ ಉಗೆ ಉಗೆ
ಆದರೆ ಹೋರಾಟದ ಬದುಕು ಬೇಡ ಅನ್ನುವವರು, ಇಂತಹ ಶೋಷಿಸುವವರ ಹಿಡಿತಕ್ಕೆ ಸಿಗದಂತೆ
ಬದುಕುವುದು ಜಾಣತನ. ’ ಅನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ ಅಷ್ಟೆ.

ಈ ಲೇಖನ ಬರೆದು ಮುಗಿಸಿ, ಗೆಳೆಯ ರವಿ-ರೂಪಿಗೆ ಕಳಿಸಿದ್ದೆ. ‘ ಅರ್ಜೆಂಟ್ ಊರಿಗೆ
ಹೊರಟುಬಿಟ್ಟೆ , ಮಾರಾಯ ಬ್ಲಾಗಿಗೆ ಹಾಕಕ್ಕಾಗಲಿಲ್ಲ’ ಅಂದೆ. ಅದಕ್ಕೆ ರವಿ ‘ನೀನು
ಬ್ಲಾಗಿಗೆ ಹಾಕುದ್ರು ಹಾಕದೇ ಇದ್ರೂ ಅಂತಹಾ ವ್ಯತ್ಯಾಸ ಏನಾಗಲ್ಲ ಬಿಡು. ’ ಅಂದ. ನನಗೂ
ಹೌದು ಅನ್ನಿಸ್ತು. ಮನೇಲಿ ಟಿವಿ ನೋಡ್ತಾ ಇರೋವಾಗ ‘ ಹದಿನಾರು ವರ್ಷದ ಬಾಲಕಿ ಮೇಲೆ
ಸಾಮೂಹಿಕ ಅತ್ಯಾಚಾರ’ ಅಂತ ಬ್ರೇಕಿಂಗ್ ನ್ಯೂಸ್ ಬಂತು. ಆದರೆ ಗಾಬರಿ ಹುಟ್ಟಿಸಿದ ವಿಚಾರ
ಅಂದ್ರೆ, ಅತ್ಯಾಚಾರ ನಡೆದದ್ದು ಭದ್ರಾವತಿಯಲ್ಲಿ. ನಮ್ಮೂರಿಂದ ಸ್ವಲ್ಪವೇ ದೂರದ ಜಾಗ.
ಅತ್ಯಾಚಾರ ಅನ್ನೋದು ಯಾವುದೋ ಇಮ್ಯಾಜಿನರಿ ಪದ ಅಲ್ಲ. ನಮ್ಮ ಮಧ್ಯೆ, ನಮ್ಮೊಳಗೆ, ನಮ್ಮ
ಸುತ್ತಾಮುತ್ತಾನೆ ಇದೆ ಅನ್ನಿಸ್ತು.

ಗೆಳೆಯನೊಬ್ಬನಿಗೆ ‘ಅತ್ಯಾಚಾರಿಗಳನ್ನ ಗುರುತಿಸೋದು ಹೇಗೆ. ?’ ಅಂತ ಕೇಳ್ದೆ. ‘ತುಂಬಾ
ಸಿಂಪಲ್ ಹುಡುಗಾನೊ ಹುಡುಗಿನೋ ಅಂತ ಗುರುತಿಸದರಾಯ್ತು. ’ ಅಂದ ಯಾಕೋ. ಅವನು ಹೇಳಿದ ಜೋಕು
ಮಾತ್ರ, ಜೋಕು ಅನಿಸಲಿಲ್ಲ.