ಗೋಪಿ ಸರ್ಕಲ್ ನ ಪಂಚತಾರ ಐಸ್ ಕ್ರೀಮ್ ಪಾರ್ಲರ್ ಮುಂದೆ ನಿಂತಾಗ, ಗಡ್-ಬಡ್
ತಿನ್ನುವಾಸೆಯಾಗಿ ಗೆಳೆಯ ಕಾರ್ತಿಕನಿಗೆ ಫೋನಾಯಿಸಿದೆ. ' ಎಲ್ಲಿದಿಯಾ.? ಎಂತ ಕಥೆ.? ' ಎಂದೆಲ್ಲಾ ಕೇಳಿದವನು, ತಾನೂ ಬರುವುದಾಗಿ ಹೇಳಿ, ಹತ್ತು ನಿಮಿಷದಲ್ಲಿ ಕೂಡಿಕೊಂಡ.

ಬೈಕಲ್ಲಿ ಬಂದವನು, ಹೆಲ್ಮೆಟ್ ಕೈಲಿ ಹಿಡಿದು ಬಂದ.
' ಶಿವಮೊಗ್ಗ ದಲ್ಲಿ ಹೆಲ್ಮೆಟ್ ಕಡ್ಡಾಯ ಮಾಡಿದ್ದು ಯಾವಾಗೋ..? ' ಅಂತ ಕೇಳಿದ್ದಕ್ಕೆ
' ಬೈಕಿಂದ ಬಿದ್ದು ಎದ್ದು, ನಾನೇ ಹುಷಾರಾಗಿದೀನಿ ' ಅಂದ.

ತಿನ್ನುವ ಪದಾರ್ಥವು ಮೊದಲೇ ನಿಗದಿಯಾದ್ದರಿಂದ, ಮೆನು ನೋಡಿ ಮತ್ತೆ ಗೊಂದಲಗೊಳ್ಳುವ ಸಾಹಸ ಮಾಡಲಿಲ್ಲ.
ಕಾರ್ತಿಕನೂ ಗಡ್-ಬಡ್ ಗೆ ಸೈ ಅಂದ.

ವೆನಿಲಾ, ಸ್ಟ್ರಾಬೆರಿ ತಿಂದು ಮುಗಿಸಿ, ಅಡಿಯಲ್ಲಿರುವ ಜೆಲ್ಲಿ ಮತ್ತು ಕೊಳೆತ ಅನಾನಸ್ ಹಣ್ಣುಗಳಿಗೆ
ಚಮಚೆ ದೂಕುವ ಹೊತ್ತಿಗೆ, ನಮ್ಮ ಮಾತುಕಥೆಯು ತೀವ್ರ ತರವಾದ ವೈಯಕ್ತಿಕ ಪರಿಮಿತಿ, ಪೋಲಿ ಜೊಕುಗಳೆಲ್ಲವನ್ನು ದಾಟಿ,
ಪ್ರೊಫೆಷನ್ ಮತ್ತು ದೇಶೀಯ ಸಮಸ್ಯೆಗಳ ಕಡೆಗೆ ತಿರುಗಿತ್ತು.
ಊರೋರಿಗೆಲ್ಲಾ ಉಗಿದು, ನಾವು ಮಾತ್ರ ಒಳ್ಳೆಯವರು ಅಂತ ಪುನಃ ಪುನಃ ಸಾಧಿಸಬೇಕಿತ್ತು.


'ನಿದಿಗೆ ಹಳ್ಳಿ ಹತ್ರ ಧರ್ಮಸ್ಥಳ KSRTC ಬಸ್ಸು ಡಿವೈಡರ್ ಗೆ ಒತ್ತಿಕೊಂಡು ನಿಂತಿತ್ತು.
ಯಾವುದೋ TVS ಗೆ ಗುದ್ದಿತ್ತಂತೆ. ಸ್ಪಾಟ್ ಔಟು ಅಂತಿದ್ರು ಜನ
ಏನಾಗಿತ್ತು. ? ' ಎಂದು, ದಾರಿಯಲ್ಲಿ ಬರುವಾಗ ನಾನು ನೋಡಿದ್ದ ಅಪಘಾತವೊಂದರ ಬಗ್ಗೆ ಕೇಳಿದೆ.

' ನನ್ನ ಡ್ಯೂಟಿ ಟೇಮಲ್ಲಿ. ಅಂತ ಕೇಸ್ ಯಾವುದೂ ಬರ್ಲಿಲ್ವಲ್ಲಾ. ' ಅಂದ ಸಹಜವಾಗಿ.
ಅವನಿಗೆ ಅದರ ಬಗ್ಗೆ ವಿಶೇಷವಾದ ಆಸಕ್ತಿಯು, ಕೌತುಕವು ಕಂಡಂತೆ ಅನಿಸಲಿಲ್ಲ.

ಕಾರ್ತಿಕ ದೊಡ್ಡಾಸ್ಪತ್ರೆಯಲ್ಲಿ ಕ್ಯಾಷುಯಲಿಟಿ ಮೆಡಿಕಲ್ ಆಫೀಸರ್(CMO) ಯಾನೆ ಡಾಕ್ಟರು.
ದೊಡ್ಡಾಸ್ಪತ್ರೆ ಅಂದರೆ, ' ಶಿವಮೊಗ್ಗ ಜಿಲ್ಲಾ ಸರ್ಕಾರಿ ಆಸ್ಪತ್ರೆ '. ಗಾತ್ರ ಮತ್ತು
ಗುಣವಿಶೇಷಣಗಳ ಸಲುವಾಗಿ ಸ್ಥಳೀಯ ಗ್ರಾಮಸ್ಥರುಗಳಿಂದ ಈ ರೀತಿಯಾದ ಅನ್ವರ್ಥ ನಾಮವನ್ನು
ಪಡೆದಿದೆ.

ಅವನು ಹೇಳಿಕೊಳ್ಳುವ ಮಟ್ಟಿಗೆ CMO ಅಂದ್ರೆ, ಸುತ್ತ-ಮುತ್ತ ಎಲ್ಲೇ ಅಪಘಾತ,
ಹೊಡೆದಾಟಗಳು ನಡೆದು ಎಮರ್ಜೆನ್ಸಿ ಆಡ್ಮಿಟ್ ಆಗುವ ಪೇಷೆಂಟುಗಳಿಗೆ ಮೊದಲ ಸ್ಪರ್ಷ ನೀಡುವವರು.

ಜೀವ ಹೋಗಿಲ್ಲ ಅಂದ್ರೆ, ಪ್ರಾಥಮಿಕ ಶುಶ್ರೂಷೆ ನಡೆಸಿ ಸಂಬಂಧಪಟ್ಟ ದೊಡ್ಡ ಡಾಕ್ಟರುಗಳಿಗೆ ಬಾಡಿಯನ್ನು ರವಾನಿಸಿ, ವರದಿಯನ್ನು ಪೋಲೀಸರಿಗೆ ಕೊಡುವುದು.

ಅಕಸ್ಮಾತ್ ಜೀವ ಹೋಗಿತ್ತು ಅಂದ್ರೆ, ದೇಹದ ಮೇಲಾಗಿರುವ ಅಡ್ಡ ಪರಿಣಾಮಗಳನ್ನು ಅಭ್ಯಸಿಸಿ, ಸಾವಿನ ಕಾರಣವನ್ನು
ಬರೆಯುವುದು.


ಶಿವಮೊಗ್ಗ ಮತ್ತು ಭದ್ರಾವತಿ ನಡುವೆ, ಸುಮಾರು 18-20 ಕಿಲೋಮೀಟರ್ ಉದ್ದಕ್ಕೆ ಚತುಷ್ಪತ
ರಸ್ತೆಯನ್ನು ನಿರ್ಮಿಸಲಾಗಿದೆ. ತೀರ ಇತ್ತೀಚೆಗೆ, ಅಂದರೆ ಮೂರು ನಾಲ್ಕು
ತಿಂಗಳುಗಳಿಂದ ಈಚೆಗೆ ಈ ಚತುಷ್ಪತ ರಸ್ತೆಯ ಉತ್ಖನನ ಕೆಲಸ ನಡೆದು, ನುಣ್ಣನೆಯ
ಡಾಂಬರಿನಿಂದಾಗಿ, ವಾಹನಗಳು ರಸ್ತೆಯ ಮೇಲೆ ಓಡುವ ಬದಲಾಗಿ, ಹಾರುವ ಹಂತಕ್ಕೆ
ಚಲಿಸುತ್ತಿವೆ. ವಾರಕ್ಕೆ ಮೂರು-ನಾಲ್ಕು ಇದರ ಫಲಾನುಭವಿಗಳು ಹೆಣವಾಗಿ ಬೀಳುತ್ತಿದ್ದಾರೆ.

ರಜಕ್ಕೆ ಅಂತ ಊರಿಗೆ ಬಂದಾಗೆಲ್ಲಾ, ಬರಿ ಆಕ್ಸಿಡೆಂಟುಗಳನ್ನೇ ನೋಡುತ್ತಿದ್ದೇನೆ.
ಹೋದ ಸಾರಿ ಬಂದಾಗ, ಇನ್ನೂ ಊರ ಕಡೆಗೆ ಟಾಕ್ಸಿನಲ್ಲಿ ಬರುತ್ತಿರುವಾಗಲೇ ಒಂದು
ಆಕ್ಸಿಡೆಂಟ್ ನೋಡಿದ್ದೆ. ಟಾಕ್ಸಿಯಲ್ಲಿ ಮುಂದಿನ ಸೀಟಲ್ಲೇ ಕುಳಿತಿದ್ದುದು ಬೇರೆ.
ಒಂದು ಬಾಡಿ ರಸ್ತೆ ಮಧ್ಯದಲ್ಲಿ ಬಿದ್ದಿದೆ. ಜನ ಸೇರಿದ್ದಾರೆ.
ಹೆದರಿ ' ನಮ್ಮ ಮನೆಯವರಾಗದಿದ್ದರೆ ಸಾಕು ' ,
' ನಮ್ಮ ಊರಿನೋರು, ಗೊತ್ತಿರೋರು ಯಾರೂ ಆಗದಿದ್ದರೆ ಸಾಕು' ಅಂತ ಧ್ಯಾನಿಸುತ್ತಾ ನೋಡಿದ್ದಾಯ್ತು.
ಟ್ಯಾಕ್ಸಿ ಡೈವರನಂತೂ. ನಿಟ್ಟುಸಿರು ಬಿಡುತ್ತಾ. ' ಈ ವಾರದಲ್ಲಿ ಐದನೆ ಹೆಣ ' ಅಂದ.'

' ಏನ್ ಗುರು ಹಿಂಗ್ ಸಾಯ್ತಾರೆ ಈ ರೋಡಲ್ಲಿ '
ಅಂತ ಟಾಕ್ಸಿಯವನನ್ನು ಲೋಕರೂಢಿಯಲ್ಲಿ ಕೇಳಿದೆ .

' ರೋಡ್ ಏನೋ. ನುಣ್ಗೆ ಮಾಡಿದಾರೆ. ಆದರೆ ಪೇಂಟ್ ಹೊಡೆದಿಲ್ಲ,
ಡಿವೈಡರ್ ಗೆ ಪೇಂಟ್ ಹೊಡೆದಿಲ್ಲ. ರಸ್ತೆ ಮಧ್ಯೆ ಲೇನ್ ಗೆ ಪೇಂಟ್ ಮಾಡಿಲ್ಲ.
ಹೋಗೋ ಗಾಡಿಗಳು, ಎಲ್ಲಾದ್ರೂ ಯಾವ ಲೇನ್ ನಲ್ಲಿ ಹೋಗ್ತಾ ಇದಾವೆ ಅಂತ ಕಾಣ್ಸತದಾ ನಿಮಗೆ. '
ಎನ್ನುತ್ತಾ ಕತ್ತಲಲ್ಲಿ ಡಿಮ್-ಅಂಡ್ ಡಿಪ್ ಮಾಡಿ ತೋರಿಸಿದ.

'ಊರಗಲ ರೋಡಲ್ಲಿ ಎಲ್ಲಿದೀವಿ ಅನ್ನೋದೂ ಗೊತ್ತಾಗದೇ ಸ್ಪೀಡಾಗಿ ಹೋದ್ರೆ ಹಿಂಗಾಗುತ್ತೆ. ' ಅಂದ.

'ರಸ್ತೆ ಮಾಡಿದ ತತ್ತಕ್ಷಣ ಅದಕ್ಕೆ ಸಂಬಂಧಪಟ್ಟ ಲೇನ್ ಮಾರ್ಕಿಂಗ್ ಗಳನ್ನು ಮಾಡಬೇಕಾಗಿಯೂ, ಇಲ್ಲವಾದಲ್ಲಿ ಈ ಗ್ಯಾಪಲ್ಲೇ ಸುಮಾರು ಹೆಣ ಬೀಳುವುದಾಗಿಯೂ. ' ಅವನ ಅನುಭವದ ಮಾತು.

ಒಟ್ಟಾರೆಯಾಗಿ ಈ ಅಪಘಾತಗಳಲ್ಲಿ ಹಸುನೀಗುತ್ತಿರುವವರು, ಹೈವೆಗೆ ಅಂಟಿಕೊಂಡಂತಿರುವ ಹಳ್ಳಿಗಳ ದ್ವಿಚಕ್ರ ವಾಹನ ಸವಾರರು. ಅದರಲ್ಲೂ ಹೆಚ್ಚಾಗಿ, ಹೈವೇಯಿಂದ ತಮ್-ತಮ್ಮ ಹಳ್ಳಿಯ ಕಡೆಗೆ ತಿರುಗುವ ಸಂದರ್ಭದಲ್ಲಿ ಹೆಚ್ಚಿನ ಅಪಘಾತಗಳಾಗುತ್ತಿವೆ.

ತಪ್ಪು, ಅತಿ-ಅತಿಯಾದ ವೇಗವಾಗಿ ಸಾಗುವ ದೊಡ್ಡ ವಾಹನ ಚಾಲಕರುಗಳದ್ದೋ
ಅಥವಾ ಸುಂದರವಾಗಿ ರಸ್ತೆ ನಿರ್ಮಿಸಲಾಗಿರುವ ಸರಕಾರದ್ದೋ ಅಥವಾ ಹೈವೆ ಕಾನ್ಷಿಯಸ್
ಇಲ್ಲದೇ, ದಪ್ಪು-ದಪ್ಪು ಅಂತ ಬಿದ್ದು ಸಾಯುತ್ತಿರುವ ಮುಗ್ದ ಹಳ್ಳಿ ಜನಗಳದ್ದೋ. ?
ತಿಳಿಯದಾಗಿದೆ.

ಇಂತಹ ಹೈವೇ ಗಳನ್ನು ನಿರ್ಮಿಸುವಾಗ, ಅದಕ್ಕೆ ಹೊಂದಿಕೊಂಡಂತಿರುವ ಹಳ್ಳಿಗಳಿಗೆ.
ಸೂಕ್ತವಾದ ಸರ್ವೀಸ್ ರಸ್ತೆಗಳನ್ನೋ ಅಥವಾ ಅಂಡರ್ ಪಾಸ್ ಗಳನ್ನೋ ಅಥವಾ ರಸ್ತೆಯ ಉದ್ದಕ್ಕೂ
ಇಕ್ಕೆಲಗಳಲ್ಲಿ ತಡೆ ಗೋಡೆಗಳನ್ನು ನಿರ್ಮಿಸಿ ಒಂದೊಂದು ಹಳ್ಳಿಯೂ ಕೇವಲ ಒಂದು ಕಡೆ
ಹೈವೆಗೆ ಕೂಡಿಕೊಳ್ಳುವಂತಾಗಬೇಕು. ಅಂತಹಾ ಸ್ಥಳಗಳಲ್ಲಿ ಮಾತ್ರ ದೊಡ್ಡ ವಾಹನ ಚಾಲಕರು
ಸ್ವಲ್ಪ ವೇಗ ತಗ್ಗಿಸಿಕೊಂಡು ಹುಷಾರಾಗಬಹುದು.

ಆದರೂ ಇದಕ್ಕೆ ತಾತ್ಕಾಲಿಕವಾಗಿ ಇರುವ ಸಲ್ಯೂಷನ್ ಅಂದರೆ, ಹೈವೆಗೆ ಸೇರಿಕೊಳ್ಳುವಾಗ
ಮೈಯೆಲ್ಲಾ ಕಣ್ಣಾಗಿಸಿಕೊಂಡು ಎಚ್ಚರವಾಗಿರೋದು. ಅದಕ್ಕೂ ಮೀರಿ ಏನಾದರೂ ಆದರೆ, ಹೆಚ್ಚಿಗೆ ಆತಂಕ ಪಡುವಂತಾದ್ದೇನಿಲ್ಲ. ಇಲ್ಲಿ ಕೇವಲ ಕೈ-ಕಾಲು ಮುರಿದುಕೊಂಡು ಮೂಲೆಗೆ ಸೇರಿಸುವಷ್ಟು ಕಡಿಮೆ ತೀವ್ರತೆಯಲ್ಲಿ ಗುದ್ದುವವರು ಕಡಿಮೆ.


ಈ ರಸ್ತೆ ಅಪಘಾತಗಳಲ್ಲಿ ಸಾಯುವ, ಪೇಷೆಂಟುಗಳ ವರದಿಯನ್ನು ದಿನವೂ ಬರೆಯುವ ಕಾರ್ತಿಕ ಹೇಳುವುದಿಷ್ಟೇ.

ಹೆಲ್ಮೆಟ್ ಹೆಲ್ಮೆಟ್ ಮತ್ತು ಹೆಲ್ಮೆಟ್

'ಎಷ್ಟೋ ಆಕ್ಸಿಡೆಂಟ್ ಗಳು ತುಂಬಾ ಮೈನರ್ ಇರ್ತಾವೆ. ದೇಹದ ಮೇಲೆ, ತರಚಿದ ಗಾಯಗಳ ಹೋರತಾಗಿ ಏನೂ ಆಗಿರಲ್ಲ. ಆದರೆ ಜೀವ ಹೋಗಿರತ್ತೆ. ಕಣ್ಣು ಮುಚ್ಚಿಕೊಂಡು ರಿಪೋರ್ಟ್ ಬರೀತಿವಿ.

ತಲೆಗೆ ಪೆಟ್ಟು ಬಿದ್ದಿದೆ. ಮಿದುಳಿನಲ್ಲಿ ರಕ್ತಸ್ರಾವ ಆಗಿದೆ. ಜೀವ ಹೋಗಿದೆ.

ಅಕಸ್ಮಾತ್ ಹೆಲ್ಮೆಟ್ ಹಾಕಿದ್ದಲ್ಲಿ, ಅಡ್ಮಿಟ್ ಕೂಡ ಮಾಡಿಕೊಳ್ಳದ ಹಾಗೆ, ಟ್ರೀಟ್ ಮೆಂಟ್ ಕೊಟ್ಟು ಮನೆಗೆ ಕಳಿಸಬಹುದು.

ಕೈ - ಕಾಲು ಮುರಿದಿದ್ರೂ, ನಡಿ ಅತ್ಲಾಗೆ ಅಂತ ಮುರಿದು ಎಸೆಯಬಹುದು.
ಏನೇ ಆಗಿದ್ರೂ ಮಾಂಸನೆಲ್ಲ ಒಳಗೆ ಹಾಕಿ, ಹೊಲಿದು ಜೀವ ಉಳಿಸಿಕೊಳ್ಳುವತ್ತ ಹೋರಾಡಬಹುದು.
ಆದರೆ, ಟು ವೀಲರ್-ದು ಒಂದು ದೊಡ್ಡ ದುರಂತ ಅಂದ್ರೆ,
ಹೆಂಗೇ ಬಿದ್ದರೂ ಸರಿ, ತಲೆ ಹೋಗಿ ನೆಲಕ್ಕೋ, ಡಿವೈಡರ್ ಗೋ, ಅಥವಾ ಎದುರಿನ ವಾಹನಕ್ಕೋ
ಹೊಡೆದಿರತ್ತೆ. ಜೀವ ಹೋಗಿರತ್ತೆ.

ಟು ವೀಲರ್ ಅಂದ್ರೆ ಅದೊಂದು ಶವದ ವಾಹನ.
ಹತ್ತಿದ ಮೇಲೆ ಇಳಿಯುವ ವರೆಗೂ ನೂರಾರು ಅನ್-ಸರ್ಟನಿಟಿಗಳ ಮಧ್ಯೆ ಅದು ತಿರುಗುತ್ತಿರುತ್ತದೆ.

ಮೊದಲು, ಟು-ವೀಲರ್ ಓಡಿಸುವವನು ತಪ್ಪು ಮಾಡಬಾರದು.

ಎರಡನೆಯದು, ಬೇರೆ ಯಾರದ್ದೋ ತಪ್ಪಿಗೆ ತಾನು ಬಲಿಯಾಗದಂತೆ ಎಚ್ಚರವಹಿಸಿಕೊಂಡು ಇರಬೇಕು.

ಎಲ್ಲಕ್ಕಿಂತ ಮುಖ್ಯವಾಗಿ 'ಹೆಲ್ಮೆಟ್' ಹಾಕಿಕೊಳ್ಳಲೇಬೇಕು.

ಇವು ಅಧಿಕೃತವಾಗಿ ಶಂಖದಿಂದಲೇ ಬಂದ ತೀರ್ಥ. ನೋಡ್ರಪ್ಪ ಏನ್ ಮಾಡ್ತೀರ ..?