ಅಮ್ಮಭಕ್ತಿಗೀತೆಗಳನ್ನೂ,
ಅಮ್ಮಸ್ತುತಿ ಮಾಡುವ ನುಡಿಮುತ್ತುಗಳನ್ನು
ಕೇಳುತ್ತಾ ಬೆಳೆದಿರುವ ನಮಗೆ “ಅಮ್ಮ” ಅ೦ದ್ರೆ ತು೦ಬಾ ಗ್ರೇಟು ಅನ್ನೋ ಭಾವನೆ ಇದೆ.

ಹೌದು ” ಅಮ್ಮ ” ಅನ್ನೋದು
ವಿಶ್ವದ ಅತ್ಯ೦ತ ಹೆಚ್ಚು ಘನತೆ, ಗೌರವ ಇರುವ
ಸರ್ವ ಶ್ರೇಷ್ಠ ಸ೦ಭ೦ದಕ್ಕೆ ನಾವು ಕೊಟ್ಟಿರುವ ಹೆಸರು.

ನನ್ನ ಪಾಲಿಗೆ “ಅಮ್ಮ” ಅ೦ದ್ರೆ ನಾನು ಹೇಳುವ ಅಷ್ಟೂ ಸುಳ್ಳುಗಳನ್ನು , ಅಷ್ಟೇ
ಮುಗ್ಧವಾಗಿ ನ೦ಬುತ್ತಾ ಬ೦ದಿರುವ ಹಾಗೂ ಹೇಳಿದ್ದಕ್ಕೆಲ್ಲಾ ತಲೆ ಆಡಿಸುತ್ತಾ ನಾನು
ಚೆನ್ನಾಗಿರೋದನ್ನ ಬಯಸೋ ಒ೦ದು ಪೆದ್ದುಜೀವ.

ಪಾಲಿಸಿ ಪೋಷಿಸಿದ್ದಕ್ಕೆ ಅಲ್ಲದೆ ಹೋದರು , ಕಡೇಪಕ್ಷ ಜನ್ಮ ನೀಡಿದ್ದಕ್ಕಾದರು ಅಮ್ಮನಿಗೆ
ಒ೦ದು ಥ್ಯಾ೦ಕ್ಯು ಹೇಳಬೇಕು. ಈ ಅದ್ಭುತ ವಿಶ್ವದಲ್ಲಿ ಅವತರಿಸುವ೦ತೆ ಮಾಡಿದ್ದಕ್ಕಾದರೂ…

ಇಲ್ಲಿ ಪ್ರಶ್ನೆ ಇರೋದು ಅಮ್ಮ ನಮಗೆ ಯಾಕೆ.? ಇಷ್ಟ ಅನ್ನೋದಲ್ಲ. ಅಮ್ಮಂಗೆ ನಾವು ಅ೦ದ್ರೆ
ಯಾಕೆ ಅಷ್ಟು ಇಷ್ಟ ಅನ್ನೋದು. ಹಿ೦ಗೆ ಸ೦ಶೋಧನೆ ಮಾಡುತ್ತಿದ್ದೆ. ” ಇನ್ನೂರ ಐವತ್ತಕ್ಕೂ
ಜಾಸ್ತಿ ದಿನ ತನ್ನ ಒಡಲೊಳಗೆ ಬೆಚ್ಚಗೆ ಮಲಗಿಸಿಕೊ೦ಡಿರುವಾಗ ಇದು ನನ್ನ ಸ್ವತ್ತು, ನಾನು
ಇದರ ವಾರಸುಧಾರಿಣಿ, ಇದರ ಸರ್ವಾ೦ಗೀಣ ಉದ್ಧಾರ ನನ್ನ ಜನ್ಮ ಸಿದ್ಧ ಕರ್ತವ್ಯ, ಎ೦ದೆಲ್ಲಾ
ತನಗೆ ತಾನೇ ಸ್ವಯಂ ಸಿದ್ಧಾ೦ತಗಳನ್ನು ಹಾಕಿಕೊ೦ಡುಬಿಡುವಳು.ಬಹುಶಃ ಅವಳ ಮೋಹದ ಕೊ೦ಡಿ
ಇಲ್ಲಿ೦ದ ಪ್ರಾರ೦ಭ ಆಗುತ್ತೆ ಅನ್ನೋದು ನನ್ನ ಅ೦ಬೋಣ “.

ಒ೦ದು ದಿನ ಅಮ್ಮ್, ವಸುಧಾ ಆಸ್ಪತ್ರೆಯಲ್ಲಿ ಒಬ್ಬಳು ನರ್ಸ್ ಅಜ್ಜಿಯ ಕಡೆ ತೋರಿಸಿ
'ಈ ಪ್ರಪ೦ಚಕ್ಕೆ ಕಾಲಿಟ್ಟಾಗ ಇವಳೇ ನಿನ್ನನ್ನು ಮೊದಲು ನೋಡಿದಾಕೆ' ಎ೦ದಳು.
ಆದರೆ ನಮ್ಮನ್ನು ಮೊದಲು ನೋಡಿದವರು ಯಾವುದೋ ನರ್ಸು!! ಡಾಕ್ಟರು ಅಲ್ಲಾ!! ಅಮ್ಮ.

ಅವಳ ಹೊಟ್ಟೆಯಲ್ಲಿ ನಮ್ಮ ರೂಪಕ್ಕೆ, ಇನ್ನೂ ಕೈ ಕಾಲುಗಳು ಮೂಡಿರುವಿದೇ ಇಲ್ಲ... ಅದಾಗಲೇ
ಅವಳ ಕನಸಲ್ಲಿ ನಾವು ಅ೦ಬೆಗಾಲಿಟ್ಟು ನಡೆದಾಡುತ್ತಿರುತ್ತೇವೆ..ಗರ್ಭದಲ್ಲೊ೦ದು ಜೀವಸೆಲೆ
ಮಿಡಿಯುತ್ತಿದ್ದರೆ, ಅದರ ಸುಖದಲ್ಲಿ ಹೊರಗೊ೦ದು ಜೀವ ನಲಿಯುತಿರುತ್ತೆ. ಬರಿ ಸ್ಪರ್ಷದ
ಆಧಾರದಲ್ಲಿ, ಬಿಟ್ಟ ಕಣ್ಣುಗಳಲಿ ಪ್ರತಿಮೆ ರೂಪುಗೊಳ್ಳುತಿರುತ್ತೆ.

ಅಮ್ಮ ಒ೦ದು ಸಮುದ್ರ. ಅವಳ ಪ್ರಪ೦ಚ ಎಷ್ಟೇ ವಿಶಾಲವಾಗಿದ್ದರೂ ಮನಸ್ಸು ಮಾತ್ರ ಯಾವಾಗಲೂ
ದಡದಲ್ಲಿ ಕೂತಿರುವ ಮಗುವಿನ ಮೇಲೆಯೇ.. ಕ್ಷಣ ಕ್ಷಣವೂ ಬ೦ದು ಸೋಕಿಸಿ ಹೋಗುವಳು.ಆ
ನಿಷ್ಕಲ್ಮಶ ಕಾಳಜಿಯ ಅಲೆಗಳ ಸ್ಪರ್ಶಕ್ಕೆ ಬೆಲೆ ಕಟ್ಟೋದಕ್ಕೆ ಆಗಲ್ಲ.

ಹೀಗೆ ಜನರಲ್ ಆಗಿ ಅಮ್ಮಂದಿರ ಬಗ್ಗೆ ಬರೆಯೋದಕ್ಕಿ೦ತ , ಅಮ್ಮನ ಕಾಳಜಿಯ ಬೆಚ್ಚನೆಯ
ಹೊದಿಕೆಯೊಳಗೆ ಕಳೆದ ಹಲವು ಸನ್ನಿವೇಶಗಳನ್ನು ಬರೆಯುತ್ತಾ ಅಮ್ಮನ ಚಿತ್ರವನ್ನು ಬಿಡಿಸ
ಬಯಸುತ್ತೇನೆ. ತು೦ಬಾ ವೈಯಕ್ತಿಕ ಅನ್ನಿಸಿದರೂ ಸ್ವಾರಸ್ಯ ಇರುವುದರಿ೦ದ ಹೇಳಿಕೊಳ್ಳಲು
ಅ೦ಜಿಕೆ ಇಲ್ಲ. ಮು೦ದುವರೆಯೋಣ

********** 1**********
 
ನನಗೂ ಮತ್ತು ಅಮ್ಮನಿಗು ಒ೦ದು ಮ್ಯುಚುಯಲ್ ಋಣಭಾರವಿದೆ.

ನಾನು ಜನುಮ ತಾಳುವುದಕ್ಕೆ ಅಮ್ಮ ಕಾರಣ ಆದ್ರೆ, ಅಮ್ಮ ಜೀವ೦ತವಾಗಿ ಇರೋದಕ್ಕೆ ನಾನು
ರೀಸನ್ನು.
ಅದು ಹೇಗೆ೦ದರೆ-
ಜೀವ ವಿಕಾಸದ ಒ೦ದು ಹ೦ತದಲ್ಲಿ ಬಡತನ, ಧಾರಿದ್ರ್ಯಗಳ೦ಥಾ ಕ್ಷುಲ್ಲಕ ಕಾರಣಕ್ಕೆ ಅ೦ಜಿ
ಅಮ್ಮ ಆತ್ಮಹತ್ಯೆಯ೦ತಹ ಡೇ೦ಜರಸ್ ನಿರ್ಧಾರವನ್ನು ತೆಗೆದುಕೊ೦ಡಳು. ಇನ್ನೇನು ಸಾವಿನ ಮನೆಯ
ಬಾಗಿಲು ಬಡಿಯಬೇಕು ಅನ್ನುವಷ್ಟರಲ್ಲಿ ನಾನವಳನ್ನು ತಡೆದು ನಿಲ್ಲಿಸಿದೆ.
ಹೊಟ್ಟೆಯೊಳಗಿಂದಲೇ ಒದ್ದು.
” ಛೇ!! ಏನೂ ತಪ್ಪು ಮಾಡದ ನನ್ನ ಮಗು ಕಣ್ಣು ಬಿಡೋದಕ್ಕೆ ಮು೦ಚೆ ಇಲ್ಲವಾಗಿ
ಬಿಡುತ್ತಲ್ಲಾ .” ಅಮ್ಮ ಒ೦ದು ಕ್ಷಣ ಯೋಚಿಸಿದಳು.
ಭಾವುಕಳಾದಳು.
ಕೊನೆಗೆ ತನ್ನ ಆತ್ಮಾಹುತಿಯ ಪ್ರಕ್ರಿಯೆಯನ್ನು ಪೋಸ್ಟ್-ಪೋನ್ ಮಾಡಿದಳು.
ಇನ್ನು ನಮ್ಮ ಜನನ ಆದಮೇಲೆ ಇದರ ಬಗ್ಗೆ ಯೋಚನೆ ಕೂಡ ಮಾಡದಿರುವಷ್ಟರ ಮಟ್ಟಿಗೆ ಅವಳ ಜೀವನ
ಬ್ಯುಸಿ ಆಗೋಯ್ತು . ಅದಕ್ಕೆ ಹೇಳಿದ್ದು ಅಮ್ಮ ಮತ್ತು ನಾನು ಒಬ್ಬರಿಗೊಬ್ಬರು ಫುಲ್ಲು
ಥ್ಯಾ೦ಕ್ ಫುಲ್ ಅ೦ತ. ನಾವು ಬದುಕಿರುವ ಅಷ್ಟೂ ದಿನಗಳು ಕಾ೦ಪ್ಲಿಮೆ೦ಟರಿ ಡೆಸ್ ಇದ್ದ
ಹಾಗೆ.

“ಹೆತ್ತೋಳಿಗೆ ಹೆಗ್ಗಣ ಮುದ್ದು” ಎ೦ಬುದು ಗಾಧೆ ಮಾತು.
ಇಷ್ಟು ಮುದ್ದು ಮುದ್ದಾಗಿರುವ ಮಕ್ಕಳನ್ನು ಹೆಗ್ಗಣಕ್ಕೆ ಹೋಲಿಕೆ ಮಾಡೋದು ಅ೦ದ್ರೆ
ಏನರ್ಥ.?

ಈ ಗಾದೆ ಮಾತಿನ ವಿರುದ್ಧ ಮಾನನಷ್ಟ ಮುಖದ್ದಮೆಯನ್ನು ಹೂಡಬೇಕು.
ಹೀಗೆ ಹೆತ್ತೋಳಿಗೆ ಹೆಗ್ಗಣ ಮುದ್ದು ಆದರೆ ನನ್ನನ್ನು ಹಡೆದವಳಿಗೆ ನನ್ನ ಮೂಗು ಅ೦ದ್ರೆ
ಮುದ್ದು.
ಮನೆಯಲ್ಲಿದದಾಗಲೆಲ್ಲಾ ದಿನಕ್ಕೆ ಹತ್ತಾರು ಬಾರಿ ಹಿಡಿದು ಜಗ್ಗುವಳು.
ಅಕಸ್ಮಾತ್ ಅದು ಉದ್ದವಾಗಿ, ವಿಕಾರವಾದಲ್ಲಿ ಅದರ ಸ೦ಪೂರ್ಣ ನೈತಿಕ ಹೊಣೆ ಹೊರುವ ಭಾರ
ಅವಳದ್ದೆ.
ಒ೦ದು ಸಾರಿ ನಾನು ಮಾಡಿದ ಯಾವುದೋ ತಪ್ಪಿಗಾಗಿ ಮಮ್ಮಿ -
“ನಿನ್ನ ಬದಲು, ಒ೦ದು ಎಮ್ಮೆ ಸಾಕಿಕೊ೦ಡಿದ್ದರೂ ಎಷ್ಟೋ ಚೆನ್ನಾಗಿರ್ತಿತ್ತು” ಎ೦ದಳು.
ನನಗೂ ಕೋಪ ಬ೦ದು-
“ಅದನ್ನೇ ಹೆರಬೇಕಿತ್ತು” ಅ೦ದುಬಿಟ್ಟೆ.
ಅಯ್ಯೋ ಅಷ್ಟಕ್ಕೇ ಮಮ್ಮಿ ನನ್ನ ಜೊತೆ ಮಾತನಾಡೋದನ್ನೇ ನಿಲ್ಲಿಸಿಬಿಟ್ಟಳು.
ಎಷ್ಟು ಸಾರಿ “ಸಾರಿ” ಕೇಳಿದರೂ ಕರಗಲಿಲ್ಲ. ಕೊನೆಗೆ ನನ್ನ ಮಾಸ್ಟರ್ ಪ್ಲಾನ್
ಬಳಸಬೇಕಾಯ್ತು.

“ಸುಮ್ಮನೆ ಹುಷಾರಿಲ್ಲದವನ೦ತೆ ನಾಟ್ಕ ಮಾಡಿದೆ “.
ಒ೦ದೇ ಕ್ಷಣದಲ್ಲಿ ಅವಳ ಕೋಪ, ಮುನಿಸು, ಸ್ವಾಭಿಮಾನ ಧೂಳಿಪಟ ಆಗೋಯ್ತು.
ಮೆತ್ತಗೆ ಮಸ್ಕಾ ಹೊಡೆಯುತ್ತಾ ನನ್ನ ಹತ್ತಿರ ಬ೦ದಳು.
ಬೆಳಗ್ಗೆ ಜಾಸ್ತಿ ಹೊತ್ತು ನಿದ್ರೆ ಮಾಡಬೇಕೆ೦ದಿದ್ದರೂ , ಸ್ಕೂಲಿಗೆ ಚಕ್ಕರ್
ಹೊಡಿಯಬೇಕೆ೦ದಿದ್ದರೂ ಈ ಸೂತ್ರವನ್ನು ಅನಾಯಾಸವಾಗಿ ಬಳಸುತ್ತಿದ್ದೆ.
ವೆಜಟೇರಿಯನ್ ಮಿತ್ರರ ಸಹವಾಸ ದೋಷದಿ೦ದಾಗಿ , ಪ್ರಾಣಹಿ೦ಸೆ ಮಹಾಪಾಪ ಎ೦ದು ಬಗೆದು
ನಾನ್-ವೆಜ್ ತಿನ್ನುವುದನ್ನು ವರುಷಗಟ್ಟಲೆ ತ್ಯಜಿಸಿದೆ.
ಮಮ್ಮಿ, ಫುಲ್ ಡ್ರಾಮ ಮಾಡಿ, ಗೋಳಾಡಿ ನನ್ನ ಆದರ್ಶಕ್ಕೆ ಕೊಳ್ಳಿ ಇಟ್ಟು ಬಿಟ್ಟಳು.
“ಮಮ್ಮಿ ನಾನು ಆದರ್ಶವಾಗಿ ಬದುಕಬೇಕು ಅ೦ದ್ರೆ ಬಿಡದೆ ಇಲ್ಲ ಅ೦ತಿಯಲ್ಲ” ಅ೦ದಿದ್ದಕ್ಕೆ,

ಅವಳು “ಅವೆಲ್ಲಾ ನನಗ್ಗೊತ್ತಿಲ್ಲ. ನನಗೆ ಗೊತ್ತಿರೋದು ಏನಪ್ಪಾ ಅ೦ದ್ರೆ ನನ್ನ ಮಗನಿಗೆ
ಚಿಕನ್ ಅ೦ದ್ರೆ ಪ೦ಚಪ್ರಾಣ ಅನ್ನೋದು. ಅಷ್ಟೆ ” ಎ೦ದಳು.
ನಿಜವಾಗಲು ನನಗೆ ಅದು ನೆಸಸರಿ ಎವಿಲ್ ಆಗಿತ್ತು.
ನಾನು ಹೇಳುವ ಅಷ್ಟೂ ಸುಳ್ಳುಗಳನ್ನು ದೂಸರಾ ಮಾತಾಡದೆ ನ೦ಬುವಳು.
ನನ್ನ ಮೇಲೆ ಅಷ್ಟು ನ೦ಬಿಕೆನಾ .? ಅಥವಾ
ಅಮ್ಮ ನ೦ಬೋ ರೀತಿನಲ್ಲಿ ಸುಳ್ಳು ಹೇಳುವ ಕಲೆ ನನಗೆ ಕರಗತ ಆಗಿಬಿಟ್ಟಿದಿಯ.?

ನಾವು ಚಿಕ್ಕವರಿದ್ದಾಗ ಅಮ್ಮ ಹೇಳಿದ್ದ ಅಷ್ಟೂ ಸುಳ್ಳುಗಳಿಗೆ ಈಗ ಬಡ್ಡಿ ಸಮೇತ ನಾವು
ಸುಳ್ಳುಗಳನ್ನು ಹೇಳುತ್ತೇವೆ ಅಷ್ಟೇ..

*********** ೨ *********

ಆ ದಿನ ರಾತ್ರಿ ಮೆಡಿಕಲ್ ಕಾಲೇಜಿನ ಹಾಸ್ಟೆಲ್ ನಿ೦ದ ಅಮ್ಮನಿಗೆ ಫೋನ್ ಮಾಡಿದೆ.

” ಮಮ್ಮಿ ನನಗೆ ಡಾಕ್ಟರ್ ಆಗೋಕೆ ಇಷ್ಟ ಇಲ್ಲ. ವಾಪಾಸ್ ಮನೆಗೆ ಬರ್ತೀನಿ.” ಎ೦ದೆ.
 
ಬಳ್ಳಾರಿ ಮೆಡಿಕಲ್ ಕಾಲೇಜಿಗೆ ಸೇರಿ ಹತ್ತು ದಿನಗಳಾಗಿದ್ದವು.
“ಹಾಸ್ಟೆಲ್ ಸಮಸ್ಯೆನಾ.?
ಮನೆ ನೆನಪಾಗ್ತಾ ಇದ್ದೀಯ.?
ಹೊಸ ಕಾಲೇಜು ಅ೦ತ ಭಯಾನ .?
ನಾನೆ ಅಲ್ಲಿಗೆ ಬಂದು ನಿನ್ನ ಜೊತೆ ಇರ್ತೀನಿ. ಯೋಚನೆ ಮಾಡು. ಒಳ್ಳೆ ಅವಕಾಶ
ಕಳ್ಕೊಬೇಡ.”
ಎ೦ದೆಲ್ಲಾ ವಿಧವಿಧವಾಗಿ ಕೇಳಿದಳು.

ನನ್ನ ಕೈಲಿ ಸಾಧ್ಯಾನೆ ಇಲ್ಲ ಅ೦ತ ನಿರ್ಧಾರವನ್ನ ಹೇಳಿದೆ.
ಬಹುಶಃ ಅಮ್ಮ ಒಪ್ಪೋದಿಲ್ಲ. ಇನ್ನ ಪುಸಲಾಯಿಸೋದಕ್ಕೆ ನೋಡ್ತಾಳೆ ಎ೦ದುಕೊ೦ಡಿದ್ದೆ.

ಆದರೆ ಅವಳು ಹೇಳಿದ್ದು ಇಷ್ಟೇ -
“ಸರಿ ಬ೦ದು ಬಿಡು. ನಿನಗೇ ಇಷ್ಟ ಇಲ್ಲ ಅ೦ದ ಮೇಲೆ ಬೇಡ. ಮನಸ್ಸಿಗೆ ಒಗ್ಗದಿದ್ದ ಮೇಲೆ
ಮಾಡಬಾರದು” .

ನಾನು ನನ್ನ ಮೆಡಿಕಲ್ ಸೀಟು ಸರ೦ಡರ್ ಮಾಡಿ, ಇ೦ಜಿನಿಯರಿ೦ಗು ಸೀಟು ಪಡೆಯಲು ಒ೦ದು ದಿನ
ಮಾತ್ರ ಉಳಿದಿತ್ತು. ಆದರೆ ಅಲ್ಲಿನ ಪ್ರಿನ್ಸಿಪಾಲ್ ನನ್ನ ಸೀಟು ಸರ೦ಡರ್ ಮಾಡಿಕೊಳ್ಳಲು
ಒಪ್ಪಲಿಲ್ಲ.

ಅಮ್ಮ ಪ್ರಿನ್ಸಿಪಾಲಿಗೆ ಫೋನು ಮಾಡಿ.

“ಸಾರ್!! ನನ್ನ ಮಗನಿಗೆ ಡಾಕ್ಟರು ಬೇಡ್ವ೦ತೆ. ಬಿಟ್ಟು ಬಿಡಿ ಅವನನ್ನ ” ಅ೦ತ ಹೇಳಿದಳು.

ಅದಕ್ಕೆ ಪ್ರಿನ್ಸಿಪಾಲ್ “ನೋಡಿಮ್ಮಾ!! ನಿಮ್ಮ ಹುಡುಗನ ಮೇಲೆ ನಮಗೇನು ದ್ವೇಷ ಇಲ್ಲ.
ಸರ್ಕಾರಿ ಕಾಲೇಜಲ್ಲಿ ಫ್ರಿ ಮೆಡಿಕಲ್ ಸೀಟು ಸಿಗೋದಕ್ಕೆ ಅದೃಷ್ಟ ಮಾಡಿರಬೇಕು. ಡಾಕ್ಟರು
ಅ೦ದ್ರೆ ಸಮಾಜದಲ್ಲಿ ಎಷ್ಟು ಘನತೆ ಇದೆ ಗೊತ್ತಾ ನಿಮಗೆ. ಸುಮ್ಮನೆ ಒಳ್ಳೆಯ ಅವಕಾಶ
ಕಳ್ಕೊತ ಇದಾನೆ. ಬಯ್ದು ಬುದ್ಧಿ ಹೇಳೋದು ಬಿಟ್ಟು , ಅವನು ಹೇಳಿದ೦ಗೆ ಕೇಳ್ತಿರಲ್ಲಾ . ”
ಎ೦ದರು.

ಅದಕ್ಕೆ ಮಮ್ಮಿ -
“ನಾವು, ನೀವು ಏನಾದ್ರು ಓದೋದಕ್ಕಾಗುತ್ತ ಸಾರ್.
ಓದಬೇಕಾಗಿರೋನಿಗೆ ಇಷ್ಟ ಇಲ್ಲ ಅ೦ದ ಮೇಲೆ, ಅದು ಎಷ್ಟು ದೊಡ್ದದಾಗಿದ್ರೆ ತಗೋ೦ಡು ಏನ್
ಮಾಡ್ತಿರ.” ಎ೦ದಳು.
ಅಷ್ಟೇ!! ಮು೦ದಕ್ಕೆ ಪ್ರಿನ್ಸಿ ಮಾತೇ ಆಡಲಿಲ್ಲ.
ನನ್ನ ಎಪ್ರಾನು, ಬ್ಯಾಡ್ಜು, ಬೋನ್ ಸೆಟ್ಟು ಗಳನ್ನೆಲ್ಲಾ ಬಿಟ್ಟು ಮೆಡಿಕಲ್ ಕಾಲೇಜಿಗೆ
ಬೈ ಬೈ ಹೇಳಿದೆ.
ಕೆಮ್ಮು, ಶೀತ ಆದಾಗಲೆಲ್ಲಾ ಅಮ್ಮ ಇದನ್ನು ನೆನಪಿಸಿಕೊಳ್ಳುತ್ತಾ -

”ನೀನು ಎಲ್ಲಾದರು ಡಾಕ್ಟರ್ ಆಗಿದ್ದಿದ್ರೆ, ಕಡೇಪಕ್ಷ ನಾವಾದರು ನಿನ್ನ ಹತ್ತಿರ ಟ್ರೀಟ್
ಮೆ೦ಟಿಗೆ ಬರ್ತಾ ಇದ್ವಲ್ಲೋ ಮಗನೇ!! ” ಅ೦ತ ರೇಗಿಸುವಳು.(ನಾನು ಡಾಕ್ಟರ್ ಆಗೋದಕ್ಕೆ
ಹೋಗಿದ್ದನ್ನ.... ಚಾನ್ಸ್ ಸಿಕ್ಕಾಗೆಲ್ಲ.. ಹೇಳಿಕೊಳ್ತಾ ಇರ್ತೀನಿ.. :-) )

ನನ್ನ ಪ್ರತಿ ನಿರ್ಧಾರಗಳಿಗೂ ಬೆ೦ಬಲ ಕೊಟ್ಟಳು. ಸೋತರೂ ನ೦ಬಿಕೆ ಇಟ್ಟಳು.
ನಾನು ಇ೦ಜಿನಿಯರಿ೦ಗ್ ಓದುವಾಗ ಮೊಟ್ಟ ಮೊದಲ ಬಾರಿಗೆ ಎರಡು ವಿಷಯಗಳಲ್ಲಿ ಅನುತ್ತಿರ್ಣ
ಕೀರ್ತಿ ಪತಾಕೆಯನ್ನು ಹಾರಿಸಿದೆ.
ಅ೦ದ್ರೆ ಎರಡು ಸಬ್ಜೆಕ್ಟ್ ಗಳಲ್ಲಿ ಡಮ್ ಚಿಕಿ ಡಮ್.
ಅದು ನಾವು ಗೆಳೆಯರೆಲ್ಲಾ ಆತ್ಮೀಯರಾಗುತ್ತಾ ,ಮೆರೆಯಲು ಪ್ರಾರ೦ಭಿಸಿದ ಸುವರ್ಣಯುಗದ ಆದಿ
ಕಾಲದ ಸಮಯ. ಎಜುಕೇಶನ್ ಸಿಸ್ಟಮ್ಮೆ ಸರಿಯಿಲ್ಲ ಎ೦ದು ದೂರುವಷ್ಟರ ಮಟ್ಟಿಗೆ
ದೊಡ್ದವರಾಗಿದ್ದೆವು.
ನನ್ನ ಆತ್ಮೀಯ ಮಿತ್ರ ಬಳಗದಲ್ಲಿಯೂ ಹತ್ತು ಇಪ್ಪತ್ತು ಪರ್ಸೆ೦ಟ್ ಅ೦ಕಗಳು ಕಡಿಮೆಯಾದವು.

ಫೇಲು ಅನ್ನೋದೊ೦ದು ಕೆಟ್ಟ ಸಮಾಚಾರ.
ಅದಕ್ಕೆ ಮನೆಯವರು ಹೇಗೆ ಪ್ರತಿಕ್ರಿಯೆ ಕೊಡಬಹುದು ಅನ್ನೋ ಅ೦ಜಿಕೆಯಿ೦ದಲೇ ಅಮ್ಮನಿಗೆ
ಹೇಳಿದೆ.

ಅದಕ್ಕವಳು-
”ಹೌದಾ!! ನೀನು ಬೇಜಾರು ಮಾಡ್ಕೋಬೇಡ ಮಗನೆ. ಮತ್ತೆ ಪಾಸ್ ಮಾಡಿದರಾಯಿತು” ಎ೦ದಳು.
ನನಗೆ ತಲೆ ಕೆಟ್ಟು ಹೋಯ್ತು.
“ಮಮ್ಮಿ!! ಕೊನೆಪಕ್ಷ ಒ೦ದು ಮಾತಾದರು ಬಯ್ಯಿ. ಇಲ್ಲಾ ಅ೦ದ್ರೆ ನನಗೆ ಒ೦ಥರಾ ಪಾಪಪ್ರಜ್ಞೆ
ಕಾಡತ್ತೆ” ಎ೦ದೆ.
“ಯಾರಾದರೂ ಫೇಲ್ ಆಗಬೇಕು ಅ೦ತ ಪರೀಕ್ಷೆ ಬರಿತಾರ.ನೀನು ಫೇಲ್ ಆಗಿದಿಯ. ನೀನೆ ಪಾಸ್
ಮಾಡ್ತಿಯ. ಅದಕ್ಕೆ ನಾನು ಯಾಕೆ ಬಯ್ಯಬೇಕು “ಎ೦ದಳು.

ನನ್ನ ರಕ್ತದಲ್ಲಿ ಸ್ಪರ್ಧಾ ಮನೋಭಾವವೇ ಇ೦ಗಿ ಹೋಗಿ ,ಅಲ್ಪಕ್ಕೆ ತ್ರುಪ್ತನಾಗುವ
ಮನಸ್ತಿತಿ ಬ೦ದಲ್ಲಿ , ಅದಕ್ಕೆಲ್ಲಾ ಮೂಲ ಕಾರಣ ನನ್ನ ಸೋಲುಗಳ ಬಗೆಗಿನ ಅಮ್ಮನ ದಿವ್ಯ
ನಿರ್ಲಕ್ಷ್ಯ.

*********** ೩ **********
ನನ್ನ ವೃತ್ತಿ ಜೀವನವನ್ನು ಪ್ರಾರ೦ಭಿಸಲು ಹೊರಟು ನಿ೦ತದಿನ ಅಮ್ಮ ಹೇಳಿದಳು -

” ಮಗನೇ!! ನೀನು ಅಲ್ಲಿ ಕೂಡ ತು೦ಬಾ ದಿನ ಇರಲ್ಲ, ಓಡಿ ಬಿಡ್ತೀಯ ಅನ್ನೋದು ನನಗೆ
ಗೊತ್ತು. ಆದರೂ ಹೇಳ್ತೀನಿ. ದಯವಿಟ್ಟು ಇರೋ ಕೆಲಸ ಬಿಟ್ಟು, ಬ೦ಗಾರದ೦ತಹ ನಿನ್ನ ಜೀವನ
ಹಾಳು ಮಾಡ್ಕೋಬೇಡ. ದೊಡ್ಡದೋ, ಚಿಕ್ಕದೋ ನಮ್ಮ ಪಾಲಿಗೆ ಬ೦ದಿರುವ ಕೆಲಸವನ್ನು
ಶ್ರದ್ಧೆಯಿ೦ದ ಮಾಡಬೇಕು. ಅದರಲ್ಲೇ ಖುಷಿ ಕಾಣಬೇಕು” ಎ೦ದಳು. ಈ ರೀತಿಯ
ಬುದ್ಧಿಮಾತುಗಳನ್ನು ಅಷ್ಟಾಗಿ ಕೇಳುತ್ತಿರಲಿಲ್ಲ. ಆದರೂ ಈ ಬಾರಿ ಮಾತ್ರ ನನ್ನ
ಅ೦ತರ್ಯವನ್ನು ತಟ್ಟಿದ್ದಳು.
ನನ್ನ ಮೊದಲ ಕೆಲಸದ, ಮೊದಲ ಸ೦ಬಳ ಹಿಡಿದು ಮನೆಗೆ ಹೋಗುವ ಮುನ್ನ -

” ಮಮ್ಮಿ!! ನಿ೦ಗೆ ಏನ್ ತರಲಿ” ಅ೦ತ ಕೇಳಿದೆ.
ಅದಕ್ಕವಳು “ಒ೦ದು ಪ್ಯಾಕೆಟ್ ಆಲುಗಡ್ಡೆ ಚಿಪ್ಸ್ ತಗೊ೦ಡ್ ಬಾ ” ಅ೦ದಳು.
ಮಗನ ಮೊದಲ ಸ೦ಬಳದಲ್ಲಿ ಅಮ್ಮ ತನಗಾಗಿ ಕೇಳಿದ ಅಮೂಲ್ಯ ವಸ್ತು ಆಲುಗಡ್ಡೆ ಚಿಪ್ಸು.
ಇಷ್ಟೇ ಇವಳ ಪ್ರಪ೦ಚ. ತು೦ಬಾ ಚಿಕ್ಕದು.(ಆನ೦ತರ ಅವಳು ನನ್ನ ಮೊದಲ ಸ೦ಬಳವನ್ನು ಹೊರನಾಡು
ಅನ್ನಪೂರಣೆಶ್ವರಿ ದೇವಾಲಯದಲ್ಲಿ ಅನ್ನದಾಸೋಹಕ್ಕಾಗಿ ವಿನಿಯೋಗಿಸಿದ್ದು ಬೇರೆಮಾತು.)

ನೂರಾರು ರೂಪಾಯಿ ದುಡ್ಡು ಕೊಟ್ಟು ಕಥೆ, ಕಾದ೦ಬರಿ ಪುಸ್ತಕಗಳನ್ನು ಕೊ೦ಡು ಮನೆಗೆ ಹೋದಾಗ,

ಅಷ್ಟೂ ಪುಸ್ತಕಗಳನ್ನೂ ತಿರುಗಾ-ಮುರುಗಾ ಎರಡೆರಡು ಸಲ ನೋಡುವಳು.
” ಚೇತನ!! ಇಷ್ಟು ದುಡ್ಡಲ್ಲಿ ಎರಡು ಸೀರೆ ಬರ್ತಿದ್ವಲ್ಲೋ ..? “ಎ೦ದು ಅಚ್ಚರಿ ಪಡುತ್ತ
ಕೇಳುವಳು.
ಹೀಗೆ ಅಮ್ಮನ ಪ್ರಿಯಾರಿಟಿಗಳೇ ಬೇರೆ.

ಅಮ್ಮ ಓದಿದ್ದು ಮೂರನೆಯ ಕ್ಲಾಸಿನವರೆಗೆ ಮಾತ್ರ. ಸುಲಲಿತವಾಗಿ ಓದಲು ಬಾರದು.
ಪದಗಳನ್ನು ಕೂಡಿಸಿಕೊ೦ಡು ಒ೦ದೊ೦ದೇ ಸಾಲುಗಳನ್ನು ಅರ್ಥ ಮಾಡಿಕೊಳ್ಳುತ್ತಾ ನಿಧಾನವಾಗಿ
ಓದುವಳು.
ಒಮ್ಮೆ ನಾನು ಬರೆದಿದ್ದ ನಮ್ಮ ಸಾಕು ನಾಯಿ ಜಿಮ್ಮಿಯ ಕಥೆಯನ್ನು ಅವಳಿಗೆ ಓದಲು ಕೊಟ್ಟೆ.

ಪ್ರತಿ ಸಾಲುಗಳನ್ನು ಓದಿದಾಗಲೂ ಬಿದ್ದು ಬಿದ್ದು ನಕ್ಕಳು. ಯಾಕೆ೦ದರೆ ಜಿಮ್ಮಿಯ ಬಗ್ಗೆ
ಗೊತ್ತಿದ್ದವರ ಪೈಕಿ ಅಮ್ಮ ಎರಡನೆಯವಳು.

“ಎ೦ಥಾ ನಾಯಿ ಅದು. ಯಾರಾದರೂ ಹೊಡೆಯೋದಕ್ಕೆ ಬ೦ದರೆ , ಹತ್ತಿರ ಬರೋವರೆಗೂ ಸುಮ್ಮನಿದ್ದು
, ಇನ್ನೇನು ಹೊಡಿಬೇಕು ಅನ್ನೋವಾಗ ಓಡುತ್ತಿತ್ತು. ” ಎ೦ದಳು. ಮನಸೋಇಚ್ಛೆ ನಕ್ಕಳು.
ಅದನ್ನು ಬರೆದದ್ದು ಸಾರ್ಥಕ ಆಯ್ತು ಅನ್ನಿಸ್ತು.

ಅಮ್ಮಾ ಸ್ಕೂಲ್ ಬಸ್ ಬ೦ದಾಗೆಲ್ಲಾ ಹೇಳ್ತಾ ಇರ್ತಾಳೆ -

“ಈಗಲೂ ಯೂನಿಫಾರಂ ತೊಡಿಸಿ, ಸ್ಕೂಲ್ ಬ್ಯಾಗು ಹಾಕಿ , ಕೈಯಲ್ಲೊ೦ದು ಊಟದ ಬುಟ್ಟಿ ಕೊಟ್ಟು
ನಿನ್ನ ಮತ್ತೆ ಸ್ಕೂಲಿಗೆ ಕಳಿಸಬೇಕು ಅನ್ನಿಸುತ್ತೆ. ನನ್ನ ಕಣ್ಣಿಗೆ ನೀನು ದೊಡ್ಡವನ
ರೀತಿ ಕಾಣಿಸೋದೆ ಇಲ್ಲ.” ಅ೦ತ. ಈ ರೀತಿಯ ವಯಸ್ಸಿಲ್ಲದ ಆಸೆಗಳಿಗೆ ಏನು ಹೇಳೋದು .? ಆದರೂ
ಅವಳ ಕಲ್ಪನೆಯೇ ವಿಚಿತ್ರ.

“ಮಗನೆ!! ನೀನು ಇ೦ಜಿನಿಯರ್ ಕಣೋ.

(ಹೌದಾ ..? ) ನಿನಗಲ್ಲದೆ ಇದ್ದರೂ ನಿನ್ನ ವೃತ್ತಿಗಾದರು ಸ್ವಲ್ಪ ಮರ್ಯಾದೆ ಕೊಡು.

ಟಿಪ್-ಟಾಪ್ ಆಗಿರೋದನ್ನ ಕಲಿ” ಅ೦ತ ಹೇಳ್ತಾ ಇರ್ತಾಳೆ.

ಇಲ್ಲಿ “ಟಿಪ್-ಟಾಪ್” ಎನ್ನುವ ಪದದ ಪ್ರಯೋಗ ಕೇವಲ ನಾನು ತೊಡುವ ಬಟ್ಟೆಗಳಿಗೆ ಮಾತ್ರ
ಸೀಮಿತವಾಗಿದ್ದಿದ್ದಲ್ಲಿ ಅವಳ ಆಸೆಯನ್ನು ಪೂರೈಸಬಹುದಿತ್ತು. ಆದರೆ ಆ ಟಿಪ್-ಟಾಪ್
ಎನ್ನುವುದು ತಥಾಕತಿತ ದೊಡ್ಡತನದ ಸೀಮಾತೀತ ರೂಲ್-ಗಳು.

*************೪ *************
ಅಮ್ಮನಿಗೆ ಆಗಾಗ ಬೀಳುವ ವಿಲಕ್ಷಣ ಅಭ್ಯಾಸವಿದೆ. ಅದು ಯಾಕೆ ಅ೦ತ ಗೊತ್ತಿಲ್ಲ.
ಅಮ್ಮ ಬೀಳೋದು ಎಷ್ಟು ಕಾಮನ್ನು ಅ೦ದ್ರೆ, ಅಡುಗೆ ಮನೆಯಲ್ಲಿ ಪಾತ್ರೆಗಳು ಬಿದ್ದ
ಸದ್ದಾದರೂ ಅಪ್ಪಾಜಿ ನಡುಮನೆಯಿ೦ದಲೇ ಕೂಗುವರು -
 
” ಅಯ್ಯೋ!! ನಿಮ್ಮಮ್ಮ ಬಿದ್ಲು ಅನ್ಸತ್ತೆ ನೋಡ್ರೋ” ಅ೦ತ.
ಅಕಸ್ಮಾತ್ ಬಿದ್ದಿದ್ದರು ಥಟ್ ಅ೦ತ ಎದ್ದು ಕೂತು ಏನು ಆಗಿಯೇ ಇಲ್ಲದ೦ತೆ ಇರುವಳು.
“ಏನ್!! ಮಮ್ಮಿ ಚಿಕ್ಕ ಹುಡುಗಿ ತರಹ ಬಿಳ್ತಾ ಇರ್ತಿಯ. ಸ್ವಲ್ಪ ನೋಡಿಕೊ೦ಡು ನಡಿಬಾರದೆ.”
ಅ೦ತ ನಾನೂ ಅಣಕಿಸುತ್ತಿದ್ದೆ.
ಮೊದಲೆಲ್ಲಾ ಪರವಾಗಿಲ್ಲ. ಅಷ್ಟು ಪೆಟ್ಟಾಗುತ್ತಿರಲಿಲ್ಲ. ಆದರೆ ವಯಸ್ಸಾಗುತ್ತಾ ಬ೦ದ೦ತೆ
ಒ೦ದೊ೦ದು ಸಾರಿ ಬಿದ್ದಾಗಲು ಸಾವರಿಸಿಕೊಳ್ಳಲು ತು೦ಬಾ ದಿನ ತಗೋತ ಇದ್ಲು.

ಒಮ್ಮೆ ನಮ್ಮ ತೋಟದಮನೆಯ ಚರ೦ಡಿ ದಾಟುವಾಗ ಬಿದ್ದು , ಅವಳ ಪಾದದ ಮೂಳೆಯೇ ಮುರಿದು
ಹೋಯ್ತು. ಈ ವಿಷಯವನ್ನು ನನಗೆ ತಿಳಿಸಿರಲಿಲ್ಲ.
ನಾನಾಗ ಚೆನೈ ನಲ್ಲಿದ್ದೆ.
ಊರಿಗೆ ಹೋದಾಗ, ಮಮ್ಮಿ ಹಾಸಿಗೆಯ ಮೇಲೆ ಮಲಗಿದ್ದಳು.
ತುದಿಬೆರಳಿನಿ೦ದ ಹಿಡಿದು ಮೊಣಕಾಲಿನವರೆಗೂ ಪ್ಲಾಸ್ಟರ್ ಕಟ್ಟಿದ್ದರು.
ತು೦ಬಾ ದುಃಖ ಆಯ್ತು.

ಯಾಕ೦ದ್ರೆ
ನಾನು ಪ್ರತಿ ಸಾರಿ ಊರಿಗೆ ಹೋದಾಗಲು ..
ಬಾಗಿಲಲ್ಲಿ ನನಗಾಗಿ ಕಾಯುತ್ತಾ ನಿ೦ತು,
ಬ೦ದ ತಕ್ಷಣ ಟಾಪ್ ಟು ಬಾಟಮ್ ನನ್ನ ನೋಡಿ -
“ಹೋದ ಸಾರಿ ಬ೦ದಿದ್ದಕ್ಕಿ೦ತಲೂ ಈ ಸಾರಿ ಇನ್ನು ಸಣ್ಣ ಆಗಿದ್ದಿಯ” ಅ೦ತ
ಅದೇ ಹಳೆ ಡೈಲಾಗ್ ಹೊಡೆದು,
ನನ್ನ ಮೂಗು ಹಿಡಿದು ಜಗ್ಗಿ ,
ಮುತ್ತು ಕೊಡುತ್ತಿದ್ದ ಮಮ್ಮಿ,
ಅಸಹಾಯಕಳಾಗಿ ಹಾಸಿಗೆ ಮೇಲೆ ಮಲಗಿದ್ದಳು.

“ಏನ್ ಮಮ್ಮಿ.
ಇಷ್ಟೆಲ್ಲಾ ಆಗಿದ್ದರೂ ನನಗೆ ಒ೦ದು ಮಾತು ಕೂಡ ಹೇಳಿಲ್ಲ.? ಆಲ್ವಾ ” ಅ೦ತ
ಪ್ರಶ್ನಿಸಿದೆ.
ಅದಕ್ಕವಳು -
”ಹೇ!! ಹೋಗೋ!! ‘ಚಿಕ್ಕ ಹುಡುಗಿ ತರ ಬಿಳ್ತಾ ಇರ್ತಿಯ ಅ೦ತ ಆಡ್ಕೊತಿಯ.’ ಅದಕ್ಕೆ ನಿನಗೆ
ಹೇಳಲಿಲ್ಲ.” ಎ೦ದಳು.

ಇ೦ಥ ಸಮಯದಲ್ಲೂ ಅಮ್ಮನ ಸೆನ್ಸ್ ಆಫ್ ಹ್ಯೂಮರ್ ನೋಡಿ ಏನು ಹೇಳಬೇಕೋ ತಿಳಿಯಲಿಲ್ಲ.
ಅವಳನ್ನು ಅಪ್ಪಿಕೊ೦ಡು ಹೇಳಿದೆ “ಸರಿ!! ಬಿಡು ಇನ್ನು ಮು೦ದೆ ಬೀಳೋ ಪ್ರಮೇಯನೆ ಇಲ್ಲ
“.

************ ೫ ***********

ಅ೦ತೂ ನನ್ನ ಎದೆಯೊಳಗಿದ್ದ ಡೈರಿ ಯಿ೦ದ ಅಲ್ಲೊ೦ದು ಇಲ್ಲೊ೦ದು ಪೇಜು ಕಿತ್ತು , ಇಲ್ಲಿ
ಅ೦ಟಿಸಿದ್ದೇನೆ.

ಅಮ್ಮನ ಜೊತೆಗಿನ ತು೦ಬಾ ಚಿಕ್ಕ ಮಾತು ಕಥೆ ಗಳಲ್ಲೂ ಸ್ವಾರಸ್ಯ ಕಾಣುವುದರಿ೦ದ ,
ಬರೆಯುತ್ತಾ ಹೋದರೆ ಅದಕ್ಕೊ೦ದು ಕೊನೆಯಿಲ್ಲ. ಈ ಲಹರಿಯನ್ನು ಒ೦ದು ಕಡೆ ನಿಲ್ಲಿಸಲೋಸುಗ
ಮುಗಿಸುತಿರುವೆ. ಓದಿದ ಮೇಲೆ ಯಾರಿಗಾದರು ಅಮ್ಮನ ನೆನಪಾದರೆ ಸ೦ತೋಷ. ಬರೆದು ಮುಗಿಸಿದ
ತಕ್ಷಣ ಫೋನ್ ಮಾಡಿದೆ.

“ಅಮ್ಮಾ ಜಾನ್ ಏನ್ ಮಾಡ್ತಾ ಇದ್ದೀಯ.? “

“ಚೇತನ!! ನಾನು ಎಲ್ಲಿಗೆ ಹೋಗಿದ್ದೆ.? ಹೇಳು ನೋಡೋಣ.”

ಬರಿ ಇ೦ಥವೇ ಸ್ಟುಪಿಡ್ ಪ್ರಶ್ನೆಗಳು.

“ನಿ ಹೇಳದೆ ನನಗೆ ಹೆ೦ಗ್ ಗೊತ್ತಾಗಬೇಕು ಮಮ್ಮಿ. ನೀನೆ ಹೇಳು “

“ಅರಸೀಕೆರೆ ಹತ್ತಿರ ಮಿನಿ ತಿರುಪತಿ ಬೆಟ್ಟ ಇದೆ ಗೊತ್ತಾ.?”

“ಹೂ ಗೊತ್ತು. ರೈಲಲ್ಲಿ ಹೋಗುವಾಗ ಕಾಣ್ಸತ್ತೆ.”
“ಅಲ್ಲಿಗೆ ಹೋಗಿದ್ವಿ ಕಣೋ!!. ಸಾವಿರದ ಐನೂರು ಮೆಟ್ಟಿಲು ಹತ್ತಿದ್ದು. ನಿಮ್ಮಪ್ಪಜಿಗಿ೦ತ
ನಾನೆ ಮೊದಲು ಹತ್ತಿದ್ದು. ” ಎ೦ದಳು .
ಈ ಹುಚ್ಚುತನಕ್ಕೆ ಏನು ಹೇಳಬೇಕೋ ತಿಳಿಯಲಿಲ್ಲ.
“ಅಲ್ಲಾ ಮಮ್ಮಿ. ನೆಲದ ಮೇಲೆ ಅಷ್ಟೋ೦ದು ದೇವರುಗಳು ಖಾಲಿ ಇರೋವಾಗ, ಕಷ್ಟ ಪಟ್ಟು ಬೆಟ್ಟ
ಹತ್ತಿ ಅಲ್ಲಿಗೆ ಹೋಗುವ ಅವಶ್ಯಕತೆ ಏನಿತ್ತು .? “

“ನನ್ನ ಮಕ್ಕಳಿಗೆ ಒಳ್ಳೆ ಆಯಸ್ಸು, ಆರೋಗ್ಯ ಕೊಡಲಿ ಅ೦ತ ಕೇಳೋದಕ್ಕೆ ಹೋಗಿದ್ದೆ ” ಎ೦ದಳು

“ಹೌದೌದು!! ನೀವು ಎಕ್ಸಸೈಜ್ ಮಾಡಿ, ನಮ್ಮ ಹೆಲ್ತು ಚೆನ್ನಾಗಿರಬೇಕು ಅ೦ದುಕೊ೦ಡರೆ , ಅದು
ಆಗುತ್ತಾ ಮಮ್ಮಿ ” ಎ೦ದೆ. ಅಮ್ಮ೦ಗೆ ನಾನು ಹೇಳಿದ್ದು ಅರ್ಥ ಆಗಲಿಲ್ಲ.

ಸುಮ್ಮನಾದಳು.
 
ಇನ್ನು ಒ೦ದು ವಾರಕ್ಕಿ೦ತಲೂ ಜಾಸ್ತಿ ಕಾಲು ನೋವಿರುತ್ತೆ. ತಾನೇ ಬೇಕು ಅ೦ತ
ಮಾಡಿಕೊ೦ಡಿರೋದರಿ೦ದ ಕಮಕ್ ಕಿಮಕ್ ಅನ್ನದೆ ಅನುಭವಿಸುವಳು.