ಅಜ್ಜಿ ಮತ್ತು ಸಿವಿಲ್ ಇಂಜಿನಿಯರು

“ ನಿನ್ನ ‘ಇಂಜಿನಿಯರು ಓದು’ ಮುಗಿದ ಮೇಲೆ ಮನೆ-ಡ್ಯಾಮು ಕಟ್ಟುವ ಕೆಲಸ ಸಿಗುತ್ತದೇನಪ್ಪ ”.

ಎಂಬುದಾಗಿ ಅಜ್ಜಿ ಕೇಳಿದಾಗ ಏನು ಹೇಳಬೇಕೊ.. ತಿಳಿಯಲಿಲ್ಲ.

“ಅಯ್ಯೊ. ನಾನು ಮನೆ-ಕಟ್ಟುವ ಇಂಜಿನಿಯರು ಅಲ್ಲ, ’ಎಲೆಕ್ಟ್ರಾನಿಕ್ಸು ಇಂಜಿನಿಯರು’ ಓದ್ತಾ ಇರೋದು.” ಎಂದು ಸ್ವಲ್ಪ ಗತ್ತಿನಿಂದಲೇ ಹೇಳಿದೆ.

“ಹೌದಾ. ಅದೇ. ನರಸಿಂಹ ಮಾಡ್ತಾನಲ್ಲ ಎಲೆಕ್ಟ್ರಾನಿಕ್ಸು ಅದು-ಇದು ಅಂತ ಟಿವಿ-ಮಿಕ್ಸಿ ರಿಪೇರಿ ಮಾಡೋದು. ಆ ತರಹ ಕೆಲಸನ. ? ” ಎಂದು ಮುಗ್ಧವಾಗಿ ಕೇಳಿದಳು ಅಜ್ಜಿ.

ಇಂಜಿನಿಯರು ಹುಡುಗನಿಗೆ ಟಿವಿ ರಿಪೇರಿ ಮಾಡೋನು ಅಂತ ಹೇಳುತ್ತದಲ್ಲ. ನಮ್ಮೂರಿನಲ್ಲಿ ಇಂಜಿನಿಯರು ಅಂದ್ರೆ ಮನೆ ಕಟ್ಟುವ ಸಿವಿಲ್ ಇಂಜಿನಿಯರು ಮಾತ್ರ. , ಉಳಿದವರೆಲ್ಲಾ ಅವರ ಪಾಲಿಗೆ ’ಇಂಜಿನಿಯರು’ ಎಂದು ಕರೆಸಿಕೊಳ್ಳುವುದಕ್ಕೆ ‘ನಾಲಾಯಕ್ಕು’.

“ಟಿವಿ ರಿಪೇರಿ-ಮಾಡೊ ಕೆಲಸ ಅಲ್ಲ. , ನಾನೂ ಕೂಡ ಇಂಜಿನಿಯರು ಅಜ್ಜಿ ” ಎಂದೆ.

“ಸರಿ ಹಾಗಾದರೆ. ನಿನ್ನ ಕೆಲಸ ಏನು ಹೇಳು. ? ” ಎಂದು ಕೇಳಿದಾಗ ಒಂದು-ಕ್ಷಣ ಮಾತೇ ಹೊರಡಲಿಲ್ಲ. ರಾಂಗ್ ಟೈಮ್ ನಲ್ಲಿ ಈ ಮುದುಕಿ ಎಂತೆಂತದೋ ಡೌಟು ಕೇಳಿ ನನ್ನ ಮರ್ಯಾದೆ ಹರಾಜು ಹಾಕುತ್ತಿದೆಯಲ್ಲ. ಟಿವಿ ರಿಪೇರಿಯವರು ಎಂದು ಅನ್ವರ್ಥನಾಮ ಪಡೆದ ನಮ್ಮ ಎಲೆಕ್ಟ್ರಾನಿಕ್ಸು-ಸಮುದಾಯದ ಮಾನ ಉಳಿಸಲು ಮುಂದಾದೆ.

“ಟಿವಿ ರಿಪೇರಿ ಮಾಡೋದು ಅಲ್ಲಾ. ಟಿವಿಯನ್ನೇ ಡಿಜೈನು ಮಾಡುವವರು ನಾವು ”. ಅಜ್ಜಿಗೆ ಅರ್ಥವಾಗುವ ಭಾಷೆಯಲ್ಲಿ ಹೇಳಿದೆ.

“ ಅದು ಯಾವ ಸೀಮೆ ಕೆಲಸಾನೊ. ಓದಿದರೆ ರೋಡು ಮಾಡುವ ಇಂಜಿನಿಯರು ಓದ್ಬೇಕು. ಡ್ಯಾಮು-ಮನೆ ಇಂಥವೆಲ್ಲಾ ಕಟ್ಟುವುದು ಹುಡುಗಾಟದ ಕೆಲಸವೇ. ?” ನಮ್ಮನ್ನೆಲ್ಲಾ ತೃಣವಾಗಿ ಕಾಣುವಂತಿತ್ತು ಮತ್ತವಳ ವಾದ.

ಅಜ್ಜಿಯ ಪೂರ್ವಾಗ್ರಹ ಪೀಡಿತ ತಲೆಯಿಂದ ಸಿವಿಲ್ ನವರನ್ನು ಹೊರ ಹಾಕಲೇಬೇಕೆಂದು ನಿರ್ಧರಿಸಿದೆ. ಇನ್ನೂ ವಿಧ-ವಿಧವಾದ ಇಂಜಿನಿಯರುಗಳ ಅಸ್ತಿತ್ವವನ್ನು ಅಜ್ಜಿಯ ಲೋಕಲ್ ಭಾಷೆಯಲ್ಲಿಯೇ ವಿವರಿಸಿದೆ. ’ ಎಲೆಕ್-ಟ್ರಿಕಲ್ಲು’ ಎನ್ನುವ ಲೈಟು-ಕಂಬ ಹತ್ತುವ ಇಂಜಿನಿಯರುಗಳು, ’ಮೆಕ್ಯಾನಿಕಲ್ಲು’ ಎಂಬ ವೆಲ್ಡಿಂಗ್ ಕೆಲಸದವರು, ’ ಎನ್ವಿರಾನ್ಮೆಂಟು ಇಂಜಿನಿಯರು’ ಎಂಬ ಕಸ-ಕಡ್ಡಿ ಆಯುವವರು, ’ಆಟೊಮೊಬೈಲು’ ಎಂಬ ಗ್ಯಾರೇಜು ಕೆಲಸದವರು, ಬಸ್-ಟೈರು ಮಾಡುವ ’ಪಾಲಿಮರು’ ಎಂಜಿನಿಯರುಗಳು ಎಂಬುದಾಗಿ ಎಲ್ಲಾ ಜಾತಿಯವರ ಕುಲಕಸುಬುಗಳ ವಿವರವನ್ನು ಮಂಡಿಸಿದೆ. ಕಂಪ್ಯೂಟರು ಇಂಜಿನಿಯರುಗಳು ಅದ್ಯಾವ ಕೆಲಸಕ್ಕೆ ಉಪಯೋಗವಾಗುತ್ತಾರೆ ಎಂಬುದು ನನಗೂ ತಿಳಿಯದಿದ್ದ ಕಾರಣ, ಅವರ ಬಗ್ಗೆ ಏನೂ ಹೇಳಲಾಗಲಿಲ್ಲ.

ಇಷ್ಟೆಲ್ಲಾ ’ಹರಿ-ಕಥೆ’ ಕೇಳಿದ ಮೇಲೆ ಅಜ್ಜಿಯ ನಿಲುವು ಬದಲಾಗಿರುತ್ತದೆ ಎಂದು ತಿಳಿದೆ. ಆದರೂ ವಯಸ್ಸಾದವರ ಮೊಂಡುತನದ ಪರಮಾವಧಿಯೇನೊ ಎಂಬಂತೆ ’ರೋಡು-ಮಾಡುವವರ’ ಮುಖಸ್ತುತಿಯನ್ನು ಬಿಡಲಿಲ್ಲ.

ಕನಸೂರು, ನನ್ನೆಲ್ಲಾ ಕೌತುಕಗಳ ಜೋಳಿಗೆ, ಬರಹಗಳಿಗೆ ದೀವಿಗೆ. ಕಥೆ, ಕವನ ಅಥವಾ ಯಕಃಶ್ಚಿತ್ ಅನ್ನಿಸುವ ಬರವಣಿಗೆಗಳಿರಬಹುದು. ತೋಚಿದ್ದು; ಗೀಚಿದ್ದು;

ಓದುಗನ ಸಹಾನುಭೂತಿ ಮತ್ತು ಪ್ರೀತಿ ಇಲ್ಲದಿದ್ದರೆ, ಬರೆದದ್ದನ್ನು ಹಂಚಿಕೊಳ್ಳೋದಕ್ಕೂ ಭಯ ಆಗತ್ತೆ. ನಿಮ್ಮ ಈ ಓದಿನ ಆಯ್ಕೆಯನ್ನು ಗೌರವಿಸುತ್ತೇನೆ. Thank you :)