ಏಕಾಪಾತ್ರಾಭಿನಯ

ಕಾಲೇಜಿನಲ್ಲಿ ಏಕಾಪಾತ್ರಾಭಿನಯ ಸ್ಪರ್ಧೆ ಇತ್ತು. ಹೆಂಗಾದ್ರು, ಸ್ವಲ್ಪ ಪೇಮಸ್ ಆಗೋಣ
ಅಂತ ಡಿಸೈಡು ಮಾಡಿದೆ. ಚಿಕ್ಕ ವಯಸ್ಸಿನಲ್ಲಿ ಗುರು-ಶಿಷ್ಯರು ಅನ್ನೋ ಏಕಪಾತ್ರಾಭಿನಯ
ಮಾಡಿದ್ದೆ.

ಕುವೆಂಪು ಅವರು ಬರೆದ ಅಂಗುಲಿಮಾಲ-ಮಹಾತ್ಮ ಬುದ್ಧ ನಾಟಕವನ್ನು, ಏಕಪಾತ್ರಾಭಿನಯ
ರೂಪದಲ್ಲಿ ಮಾಡಬೇಕೆಂದು ನನ್ನ ಸ್ಕೀಮು. ಬಹುಷಃ 'ಏಕಪಾತ್ರಾಭಿನಯ' ಅನ್ನೋದು ಅಷ್ಟು
ಬೋರಿಂಗ್ ಇರುವುದಕ್ಕೆ ಸಾಧ್ಯವೇ ಇಲ್ಲ, ಅನ್ನುವಷ್ಟು ಕೆಟ್ಟದಾಗಿ ನಿರೂಪಿಸಿದೆ.

ಮಹಾತ್ಮ ಬುದ್ಧ, ಅಂಗುಲಿಮಾಲನನ್ನು ಅಪ್ಪಿಕೊಳ್ಳುವ ಸನ್ನಿವೇಶದಲ್ಲಿ, ಅತ್ತ ಬುದ್ಧನಾಗಿ,
ನಾನೇ ಅಪ್ಪಿಕೊಳ್ಳಬೇಕು. ಮತ್ತು ಇತ್ತ ಅಪ್ಪಿಕೊಂಡಾಗ ಆಗುವ, ಜ್ಞಾನೋದಯದ ರೋಮಾಂಚನವನ್ನು
ಅಂಗುಲಿಮಾಲನಾಗಿ, ನಾನೇ ವ್ಯಕ್ತಪಡಿಸಬೇಕು. ಈ ಸನ್ನಿವೇಶವನ್ನು ಕಣ್ಣಾರೆ ಕಂಡ ಗೆಳೆಯ
ಲೋಹಿತ  'ಏನೋ ಮಾಡ್ತಾ ಇದ್ದೆ ಸ್ಟೇಜ್ ಮೇಲೆ. ಬುದ್ಧ ತಪ್ಪಿಕೊಂಡರೆ, ಐಟಮ್ ಗರ್ಲ್
ತಪ್ಪಿಕೊಂಡ ರೀತಿ ಆಡ್ತಿದ್ಯಲ್ಲೋ.'ಅಂತ ಉಗಿದ. ಆದ್ರೆ ಏಕಾಪಾತ್ರಾಭಿನಯಕ್ಕೆ ನನಗೆ
ಮೂರನೇ ಬಹುಮಾನವಾಗಿ ಟಿಪಿನ್-ಕ್ಯಾರಿಯರ್ ಸಿಕ್ತು.

ಇದಾಗಿ ಒಂದು ವಾರದ ನಂತರ ಫಿಸಿಕ್ಸು ಲ್ಯಾಬಲ್ಲಿ, ದಿವ್ಯ ಮೇಡಮ್-ಗೆ ರೆಕಾರ್ಡ್ ತೋರಿಸೋಣ
ಅಂತ ಹೋದೆ. 'ನೀನೆ ಆಲ್ವೇನೋ..?  ಬುದ್ಧ-ಅಂಗುಲಿಮಾಲ ಮಾಡಿದ್ದು' ಅಂತ ಕೇಳಿದ್ರು. ಹೋ
ಪರವಾಗಿಲ್ಲ ನಮ್ಮ ಹವಾ ಎಲ್ಲಾ ಕಡೆ ಪಸರಿಸಿಬಿಟ್ಟಿದೆ ಅನ್ನೋ ಗತ್ತಿನಿಂದ 'ಹೌದು ಮೇಡಮ್
ನಾನೇ ಮಾಡಿದ್ದು. ' ಅಂದೆ.

' ನಾಟಕ ಮಾಡೋಕೆ ಮುಂಚೆ. ಸ್ವಲ್ಪ ಪ್ರಿಪೇರ್ ಮಾಡಿ ಬರಬೇಕು ಅನ್ನೋದು ಗೊತ್ತಾಗಲ್ವಾ
ನಿಂಗೆ ' ಅಂದ್ರು. ' ಪ್ರಿಪರೇಷನ್ ಮಾಡಿದ್ರೆ ಸಹಜವಾಗಿ ಬರಲ್ಲ, ಅದಕ್ಕೆ ನ್ಯಾಚುರಲ್
ಆಗಿ ಬರಲಿ ಅಂತ ಡೈರೆಕ್ಟಾಗಿ ಮಾಡಿದ್ದು. 'ಅಂದೆ.

' ಅಂತಹಾ ನಾಟಕ ನೋಡೋದಕ್ಕೆ ನನ್ನನ್ನೇ ಜಡ್ಜು ಮಾಡಿದ್ರು. ನಾಟಕ ಮಾಡಿದವರು ಮೂರೇ ಜನ.
ವಿಧಿ ಇಲ್ಲದೇ ನಿನಗೆ ಮೂರನೆ ಬಹುಮಾನ ಕೊಟ್ಟಿದ್ದು. ನಾನು ಮೂರನೇ ಬಹುಮಾನ ಇಡೋದೇ ಬೇಡ
ಅಂತಿದ್ದೆ. ' ಅಂದ್ರು. ಮೇಡಮ್ ಕಣ್ಣಲ್ಲಿ ಕ್ರೋಧ ಉಕ್ಕಿ ಹರಿಯುತ್ತಿತ್ತು. ಯಾವತ್ತೋ
ಮಾಡಿದ ನಾಟಕದ ಎಫೆಕ್ಟು, ಇವರ ಇವತ್ತಿನ ಕ್ರೋಧಕ್ಕೆ ಇನ್ನೂ ಕಾರಣ ಆಗಿದೆ ಅಂದ್ರೆ, ನನ್ನ
performance ಎಷ್ಟು ಅದ್ಭುತ ವಾಗಿರಬಹುದು.

Co Education

ಕನ್ನಡ ಚರ್ಚಾ ಸ್ಪರ್ಧೆ ನಡೆಯುತ್ತಿತ್ತು. ಒಟ್ಟು ಮೂರು ಟೀಮ್-ಗಳಿದ್ದವು. ಪ್ರತಿಯೊಂದು
ಟೀಮ್ ಕೂಡ, ಒಂದು ವಿಷಯದ ಬಗ್ಗೆ ಪರ ಮತ್ತು ವಿರೋಧ ಮಾತನಾಡಬೇಕು. ನಮ್ಮ ಟೀಮಿನಲ್ಲಿ,
ನನ್ನ ಜೊತೆ ಅನುಷಾ ಎಂಬ ಜೂನಿಯರ್ ಹುಡುಗಿ ಇದ್ದಳು.

ನಮಗೆ 'co education' ಎಂಬ ವಿಷಯ ಬಂತು. ನಾನು 'co education' ಬೇಕು; ಒಳ್ಳೆಯದು;
ಎಂದೂ ಮತ್ತು ಅನುಷ; ಬೇಡ ಕೆಟ್ಟದ್ದು ಎಂದು ಮಾತನಾಡುವಂತೆ ನಿರ್ಧರಿಸಿದೆವು.ಫುಲ್ಲು
ಜೋರಾಗಿ ಸುರುವಚ್ಚಿಕೊಂಡೆ.

'co education ನಿಂದಾಗಿ ನಮ್ಮ ಮಕ್ಕಳಿಗೆ ಪುಸ್ತಕದ ಹೊರೆ ಕಡಿಮೆ ಆಗತ್ತೆ. ಮೂರು ಮೂರು
ತಿಂಗಳಿಗೆ ಒಮ್ಮೆ, ಮಕ್ಕಳು ಹಿಂದೆ ಓದಿದ್ದನ್ನೆಲ್ಲಾ ಮರೆತು ಮುಂದಕ್ಕೆ ಹೋಗಬಹುದು.
ಒಂದೇ ಪಾಠವನ್ನು, ಮಂಥ್ಲಿ ಟೆಸ್ಟಿಗೆ, ವಾರ್ಷಿಕ ಅರ್ಧವಾರ್ಷಿಕ ಪರೀಕ್ಷೆಗಳಿಗೆಲ್ಲಾ,
ಪದೆ ಪದೆ ಓದುವುದರಿಂದ ಮಕ್ಕಳ ಮೆದುಳಿನ ಮೇಲೆ ಬರ್ಡನ್ ಆಗತ್ತೆ. ನಮ್ಮ ಮಕ್ಕಳಿಗೆ ಹೊರೆ
ಕಮ್ಮಿ ಆಗತ್ತೆ. ' ಹೀಗೆ ಹೇಳುತ್ತಲೇ ಹೋದೆ. ಸುತ್ತ ಕುಳಿತವರೆಲ್ಲಾ ಕಕ್ಕಾ ಬಿಕ್ಕಿಯಾಗಿ
ಹೋದರು.

' ಏನ್ ಮಾತಾಡ್ತಾ ಇದ್ದೀರ, ನೀವು. ನಂಗೇನು ಗೊತ್ತಾಗ್ತಾ ಇಲ್ಲ ' ಪಕ್ಕದಲ್ಲಿ
ಕುಳಿತಿದ್ದ ಅನುಷಾ ಮೆತ್ತಗೆ ಕೇಳಿದಳು. ನಾನು ಫುಲ್ ಜೋಷ್ ನಲ್ಲಿ ಮಾತು
ಮಾತಿಗೊಮ್ಮೊಮ್ಮೆ 'ನಮ್ಮ ಮಕ್ಕಳು' ಎಂದು ಬಳಸುತ್ತಾ ವಾದ ಮಂಡಿಸಿದೆ. ವಾದ ಮಾಡ
ಬೇಕೆಂದಿದ್ದ ಅನುಷಾ, ತಲೆ ಕೆರೆದುಕೊಂಡು ಸುಮ್ಮನೆ ಕುಳಿತಳು.

ಆನಂತರವೇ ನನಗೆ ತಿಳಿದದ್ದು ' co education' ಪದ್ಧತಿ ಅಂದರೆ 'ಗಂಡು ಹೆಣ್ಣು
ಒಟ್ಟಿಗೆ, ಒಂದೇ ಶಾಲೆಯಲ್ಲಿ ಓದುವ ಪದ್ಧತಿ' ಎಂದು.

ಅಯ್ಯಯ್ಯೋ ನನ್ನ ಮಾನ ಹಾರಾಜು ಆಗಿ ಹೋಗಿತ್ತು. ನಿಜವಾಗಲೂ 'co education' ಅಂದರೆ
ಪ್ರೈಮರಿ ಹಂತದಲ್ಲಿ ಆಗತಾನೆ ಜಾರಿಗೆ ತಂದಿದ್ದ 'ಟ್ರೈ ಸೆಮಿಸ್ಟರ್' ಪದ್ಧತಿ ಎಂದು
ಬಗೆದು. ಆ ವಿಷಯವಾಗಿ ಅಷ್ಟು ಮಾತನಾಡಿದ್ದೆ. 'co education' ಮೂಲ ಪದದ ಕಲ್ಪನೆಯಲ್ಲಿ,
ನಾನು ಹೇಳಿದ ಅಷ್ಟೂ ಮಾತುಗಳು, ಭಯಂಕರವಾದ ಅರ್ಥವನ್ನು ಹೊರ ಹಾಕಿದ್ದವು.